ಒಂದು ದಿನ ಬೆಳಗಿನ ಹೊತ್ತು ಅನು ಮರವೊಂದರ ಕೆಳಗೆ ಅರ್ಧ ಹರಿದ ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತಿದ್ದರು, ಅವರ ಕೂದಲುಗಳು ಹರಡಿಕೊಂಡು ಬಹಳ ಬಳಲಿದಂತೆ ಕಾಣುತ್ತಿದ್ದರು. ಹಾದುಹೋಗುವ ಜನರು ಅವರೊಂದಿಗೆ ದೂರದಿಂದಲೇ ಮಾತನಾಡಿ ಮುಂದಕ್ಕೆ ಹೋಗುತ್ತಿದ್ದರು. ಹತ್ತಿರದಲ್ಲಿದ್ದ ಜಾನುವಾರು ಕಟ್ಟುವ ಜಾಗ ಮತ್ತು ಮೇವಿನ ರಾಶಿಗಳು ಬಿಸಿಲಿನಲ್ಲಿ ಒಣಗುತ್ತಿದ್ದವು.

“ಮಳೆ ಬಂದಾಗಲೂ ನಾನು ಇದೇ ಮರದಡಿ ಕೊಡೆ ಹಿಡಿದುಕೊಂಡು ಕೂರುತ್ತೇನೆ, ಮತ್ತೆ ಮನೆಯೊಳಗೆ ಹೋಗುವುದಿಲ್ಲ. ನನ್ನ ನೆರಳು ಕೂಡ ಇನ್ನೊಬ್ಬರ ಮೇಲೆ ಬೀಳುವಂತಿಲ್ಲ. ನಮಗೆ ನಮ್ಮ ದೇವರ ಕೋಪವನ್ನು ಭರಿಸುವಷ್ಟು ಶಕ್ತಿಯಿಲ್ಲ.” ಎನ್ನುತ್ತಾರೆ ಅನು.

ಆ ಅವರ ಮನೆಯಿಂದ ಸುಮಾರು 100 ಮೀಟರ್‌ ದೂರದ ತೆರೆದ ಮೈದಾನವೊಂದರಲ್ಲಿತ್ತು. ಅವರು ಪ್ರತಿ ತಿಂಗಳು ಮುಟ್ಟಾದ ದಿನದಿಂದ ಮೂರು ದಿನಗಳ ಕಾಲ ಅವರಿಗೆ ಆ ಮರದ ಬುಡವೇ ಮನೆಯಾಗಿರುತ್ತದೆ.

“ನನ್ನ ಮಗಳು ತಟ್ಟೆಯಲ್ಲ ಊಟ ತಿಂಡಿಗಳನ್ನು ತಂದಿಟ್ಟು ಹೋಗುತ್ತಾಳೆ” ಎಂದು ಮುಂದುವರೆದು ಹೇಳುತ್ತಾರೆ ಅನು (ಹೆಸರು ಬದಲಾಯಿಸಲಾಗಿದೆ) ಅವರು ಬೇರೆ ಇರುವಷ್ಟು ದಿನವೂ ಪ್ರತ್ಯೇಕ ತಟ್ಟೆ-ಪಾತ್ರೆಗಳನ್ನು ಬಳಸುತ್ತಾರೆ. “ಇದರ ಅರ್ಥ ನನಗೆ ಇಲ್ಲಿ ವಿರಮಿಸುವುದೆಂದರೆ ಬಹಳ ಇಷ್ಟವೆಂದಲ್ಲ. ನನಗೆ ಮನೆಯಲ್ಲಿ ಕೆಲಸ ಮಾಡಬೇಕೆನ್ನಿಸುತ್ತದೆ, ಆದರೂ ನಮ್ಮ ಸಂಸ್ಕೃತಿಗೆ ಬೆಲೆ ಕೊಡುವ ಸಲುವಾಗಿ ಇಲ್ಲಿರುತ್ತೇನೆ. ಆದರೂ ನಮ್ಮ ಹೊಲದಲ್ಲಿ ಹೆಚ್ಚು ಕೆಲಸಗಳಿದ್ದಾಗ ಅಲ್ಲಿ ಕೆಲಸ ಮಾಡುತ್ತೇನೆ. ಸುಮ್ಮನೆ ಕೂರುವುದಿಲ್ಲ.” ಅನು ಅವರ ಕುಟುಂಬವು ತಮ್ಮ ಒಂದೂವರೆ ಎಕರೆ ಹೊಲದಲ್ಲಿ ರಾಗಿಯನ್ನು ಬೆಳೆಯುತ್ತದೆ.

ಆದರೂ ಒಟ್ಟಾರೆಯಾಗಿ ಅನು ಅವರ ಈ ಪ್ರತ್ಯೇಕ ವಾಸ ಅವರಿಗೆ ಮಾತ್ರ ಮೀಸಲಾಗಿಲ್ಲ. ಅವರ 19 ಮತ್ತು 17 ವರ್ಷದ ಹೆಣ್ಣು ಮಕ್ಕಳೂ ಈ ಆಚರಣೆಯನ್ನು ಪಾಲಿಸುತ್ತಾರೆ.  (21 ವರ್ಷದ ಇನ್ನೊಬ್ಬ ಮಗಳಿಗೆ ಮದುವೆಯಾಗಿದೆ). ಅವರ ಹಳ್ಳಿಯಲ್ಲಿನ ಎಲ್ಲಾ ಎಂದರೆ ಸುಮಾರು 25 ಕಾಡುಗೊಲ್ಲ ಕುಟುಂಬಗಳೂ ಇದೇ ರೀತಿಯಲ್ಲಿ ಪ್ರತ್ಯೇಕವಾಸವನ್ನು ಆಚರಿಸಲೇಬೇಕು.

ಆಗಷ್ಟೇ ಮಗುವನ್ನು ಹೆತ್ತಿರುವ ಹೆಂಗಸರೂ ಒಂದಿಷ್ಟು ನಿರ್ಬಂಧಗಳನ್ನು ಪಾಲಿಸಲೇಬೇಕು. ಅನು ಅವರು ಕುಳಿತಿದ್ದ ಮರದ ಬಳಿಯೇ ಸುಮಾರು ಆರು ಗುಡಿಸಲುಗಳಿದ್ದವು. ಎಲ್ಲವೂ ಒಂದರಿಂದ ಒಂದಕ್ಕೆ ಅಂತರದಲ್ಲಿದ್ದವು. ಆ ಗುಡಿಸಲುಗಳೇ ಬಾಣಂತಿ ಮತ್ತು ಮಗುವಿಗೆ ಇರಲು ಮನೆ. ಈ ಗುಡಿಸಲುಗಳು ಬೇರೆ ಸಮಯದಲ್ಲಿ ಖಾಲಿ ಇರುತ್ತವೆ. ಮುಟ್ಟಾದವರು ಮರದ ಕೆಳಗೇ ದಿನ ಕಳೆಯಬೇಕೆಂದು ನಿರೀಕ್ಷಿಸಲಾಗುತ್ತದೆ.

The tree and thatched hut in a secluded area in Aralalasandra where Anu stays during three days of her periods
PHOTO • Tamanna Naseer

ಅರಳಾಳಸಂದ್ರದ ಮರ ಮತ್ತು ಹುಲ್ಲಿನ ಬಣವೆ ಅನು ತನ್ನ ಮುಟ್ಟಿನ ಮೂರು ದಿನಗಳ ಅವಧಿಯನ್ನು ಇಲ್ಲಿ ಕಳೆಯುತ್ತಾರೆ

ಈ ಗುಡಿಸಲಿನ ಸಾಲುಗಳು ಹಳ್ಳಿಯ ಹಿತ್ತಲು ಎನ್ನಬಹುದಾದ ಆಳ್ಳಾಳಸಂದ್ರದ ಉತ್ತರಕ್ಕಿದೆ.1070 ಜನಸಂಖ್ಯೆಯಿರುವ (2011ರ ಜನಗಣತಿ) ಈ ಹಳ್ಳಿ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿದೆ.

ಹೀಗೆ ಕ್ವಾರಂಟೈನ್‌ ಆದ ಮಹಿಳೆಯರು ತಮ್ಮ ಖಾಸಗಿ ವೈಯಕ್ತಿಕ ಕೆಲಸಗಳಿಗೆ ಹತ್ತಿರದ ಪೊದೆ ಅಥವಾ ಖಾಲಿ ಗುಡಿಸಲುಗಳನ್ನು ಬಳಸಿಕೊಳ್ಳುತ್ತಾರೆ. ಕುಟುಂಬ ಸದಸ್ಯರು ಬಕೇಟ್‌ ಮತ್ತು ಚೊಂಬುಗಳಲ್ಲಿ ನೀರು ತಂದು ಕೊಡುತ್ತಾರೆ.

ಆಗ ತಾನೆ ಹೆರಿಗೆಯಾದ ಮಹಿಳೆಯರು ಕನಿಷ್ಟ ಒಂದು ತಿಂಗಳು ಗುಡಿಸಲಿನಲ್ಲಿ ಪ್ರತ್ಯೇಕ ವಾಸವಿರಬೇಕಾಗುತ್ತದೆ. ಅಂತಹ ಮಹಿಳೆಯರಲ್ಲಿ ಪೂಜಾ (ನಿಜವಾದ ಹೆಸರಲ್ಲ) ಕೂಡಾ ಒಬ್ಬರು. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಮದುವೆಯಾದ ಪ್ರಸ್ತುತ ಗೃಹಿಣಿಯಾಗಿರುವ ಪೂಜಾ ಬಿ.ಕಾಮ್‌ ಪದವೀಧರೆ. ಮದುವೆಯಾದ ನಂತರ ಡಿಗ್ರಿ ಪೂರ್ಣಗೊಳಿಸಿದರು. 2021ರ ಫೆಬ್ರವರಿಯಲ್ಲಿ ಇಲ್ಲಿಂದ 70 ಕಿಲೋಮೀಟರ್‌ ದೂರದ ಬೆಂಗಳೂರಿನಲ್ಲಿ ಅವರಿಗೆ ಹೆರಿಗೆಯಾಯಿತು. “ನನಗೆ ಒಂದು ಆಪರೇಷನ್‌ ಆಯಿತು[ಸಿ-ಸೆಕ್ಷನ್]‌ . ನನ್ನ ಅತ್ತೆ-ಮಾವ ಮತ್ತು ಗಂಡ ಆಸ್ಪತ್ರೆಗೆ ಬಂದಿದ್ದರು ಆದರೆ ನಮ್ಮ ಸಂಪ್ರದಾಯದ ಪ್ರಕಾರ ಒಂದು ತಿಂಗಳ ತನಕ ಮಗುವನ್ನು ಮುಟ್ಟುವಂತಿರಲಿಲ್ಲ.  ನಮ್ಮ ಹಳ್ಳಿಗೆ ಹೋದ ನಂತರ [ಅಳ್ಳಾಳಸಂದ್ರದ ಕಾಡುಗೊಲ್ಲರ ಹಟ್ಟಿ. ಅವರು ಮತ್ತು ಆಕೆಯ ಗಂಡ ಅದೇ ಜಿಲ್ಲೆಯ ಇನ್ನೊಂದು ಹಳ್ಳಿಯಲ್ಲಿ ವಾಸಿಸುತ್ತಾರೆ.] ನಾನು 15 ದಿನಗಳ ಕಾಲ ಗುಡಿಸಲಿನಲ್ಲಿದ್ದೆ. ನಂತರ ಈ ಗುಡಿಸಲಿಗೆ ಬಂದೆ,” ಎಂದು ತನ್ನ ತವರಿನ ಮನೆಯೆದುರು ಇದ್ದ ಗುಡಿಸಲು ತೋರಿಸಿ ಪೂಜಾ ಹೇಳುತ್ತಾರೆ. ಅವರು ಮೂವತ್ತು ದಿನಗಳನ್ನುಹೊರಗೆ  ಪೂರ್ಣಗೊಳಿಸಿದ ನಂತರವೇ ಮನೆಯೊಳಗೆ ಹೋದರು.

ಪೂಜಾ ಮಾತನಾಡುತ್ತಿರುವಾಗಲೇ ಮಗು ಅಳತೊಡಗಿತು. ಅವರು ಮಗುವನ್ನು ಎತ್ತಿಕೊಂಡು ಅವರ ಅಮ್ಮನ ಸೀರೆಯನ್ನು ಬಳಸಿ ಮಾಡಲಾಗಿದ್ದ ಜೋಲಿಯಲ್ಲಿ ಮಲಗಿಸಿ ತೂಗಲು ಪ್ರಾರಂಭಿಸಿದರು. “ಅವಳು ಒಂಟಿ ಗುಡಿಸಲಿನಲ್ಲಿ 15 ದಿನಗಳ ಕಾಲವಷ್ಟೇ ಇದ್ದಳು. ಈ ವಿಷಯದಲ್ಲಿ ನಾವೀಗ ಒಂದಿಷ್ಟು ಉದಾರಿಗಳಾಗಿದ್ದೇವೆ. ಪಕ್ಕದ [ಕಾಡು]ಗೊಲ್ಲ ಹಟ್ಟಿಗಳಲ್ಲಿ ಎರಡು ತಿಂಗಳ ಕಾಲ ಮಗುವಿನೊಡನೆ ಗುಡಿಸಲಿನಲ್ಲಿ ಪ್ರತ್ಯೇಕ ವಾಸವಿರಬೇಕಾಗುತ್ತದೆ.” ಎನ್ನುತ್ತಾರೆ ಪೂಜಾ ತಾಯಿ ಗಂಗಮ್ಮ(40). ಕುಟುಂಬವು ಒಂದು ಎಕರೆ ಕೃಷಿ ಭೂಮಿ ಹೊಂದಿದ್ದು ಅದರಲ್ಲಿ ರಾಗಿ ಮತ್ತು ಮಾವು ಬೆಳೆ ಬೆಳೆಯುತ್ತಾರೆ. ಜೊತೆಗೆ ಕುರಿ ಸಾಕಣೆಯೂ ಇದೆ.

ಪೂಜಾ ತನ್ನ ತಾಯಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ ಅತ್ತ ಅವರ ಮಗು ಜೋಲಿಯಲ್ಲಿ ನಿದ್ರೆಯ ಮಡಿಲು ಸೇರಿತ್ತು. “ನಾನು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ನನ್ನ ಅಮ್ಮ ನನೆಗ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತಿದ್ದರು. ಹೊರಗೆ ಸ್ವಲ್ಪ ಸೆಕೆ ಜಾಸ್ತಿಯಿತ್ತು, ಅಷ್ಟೇ.” ಪ್ರಸ್ತುತ 22 ವರ್ಷದವರಾದ ಪೂಜಾ. ಅವರಿಗೆ ಎಮ್.ಕಾಮ್‌ ಪದವಿ ಪಡೆಯುವ ಆಸೆಯಿದೆ. ಅವರ ಪತಿ ಬೆಂಗಳೂರಿನ ಕಾಲೇಜೊಂದರಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದಾರೆ. “ಅವರಿಗೂ ನಾನು ಈ ರೂಢಿಯನ್ನು ಪಾಲಿಸಬೇಕೆಂಬ ಆಸೆಯಿತ್ತು.” ಎನ್ನುತ್ತಾರವರು. “ಪ್ರತಿಯೊಬ್ಬರೂ ನಾನು ಇದನ್ನು ಪಾಲಿಸಲೇಬೇಕೆಂದು ಎದುರು ನೋಡುತ್ತಿದ್ದರು. ನನಗೆ ಇಲ್ಲಿ ಉಳಿದುಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಪ್ರತಿಭಟಿಸಲಿಲ್ಲ. ಇದನ್ನು ಎಲ್ಲರೂ ಪಾಲಿಸಲೇಬೇಕು.”

*****

ಈ ಆಚರಣೆ ಇತರ ಕಾಡುಗೊಲ್ಲರ ಹಳ್ಳಿಗಳಲ್ಲೂ ಕಾಣಸಿಗುತ್ತದೆ. ಈ ವಾಸಸ್ಥಳಗಳನ್ನು ಸ್ಥಳೀಯವಾಗಿ ಗೊಲ್ಲರ ದೊಡ್ಡಿ ಅಥವಾ ಗೊಲ್ಲರ ಹಟ್ಟಿ ಎಂದು ಕರೆಯಲಾಗುತ್ತದೆ. ಕಾಡುಗೊಲ್ಲರು, ಐತಿಹಾಸಿಕವಾಗಿ ಪಶುಪಾಲಕರು. ಕರ್ನಾಟಕದಲ್ಲಿ ಇವರನ್ನು ಇತರೇ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ. (ಅವರು ಪರಿಶಿಷ್ಟ ವರ್ಗದಡಿ ತಮ್ಮನ್ನು ಸೇರಿಸಬೇಕೆಂದು ಹೋರಾಡುತ್ತಿದ್ದಾರೆ.) . ಕರ್ನಾಟಕದಲ್ಲಿ ಅವರ ಸಂಖ್ಯೆ ಬಹುಶಃ 300,000ದಿಂದ (ರಾಮನಗರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಿ. ಬಿ. ಬಸವರಾಜು ಅಂದಾಜು ಮಾಡಿದಂತೆ) 1 ಮಿಲಿಯನ್‌ವರೆಗೆ ಇದೆ (ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರ ಪ್ರಕಾರ. ಅವರು ಹೆಸರು ತಿಳಿಸಲು ಇಚ್ಛಿಸಲಿಲ್ಲ). ಸಮುದಾಯವು ಮುಖ್ಯವಾಗಿ ರಾಜ್ಯದ ದಕ್ಷಿಣ ಮತ್ತು ಮಧ್ಯ ಭಾಗಗಳ 10 ಜಿಲ್ಲೆಗಳಲ್ಲಿ ವಾಸಿಸುತ್ತಿದೆಯೆಂದು ಬಸವರಾಜು ಹೇಳುತ್ತಾರೆ.

Left: This shack right in front of Pooja’s house is her home for 15 days along with her newborn baby. Right: Gangamma says, 'In our village, we have become lenient. In other [Kadugolla] villages, after delivery, a mother has to stay in a hut with the baby for more than two months'
PHOTO • Tamanna Naseer
Left: This shack right in front of Pooja’s house is her home for 15 days along with her newborn baby. Right: Gangamma says, 'In our village, we have become lenient. In other [Kadugolla] villages, after delivery, a mother has to stay in a hut with the baby for more than two months'
PHOTO • Tamanna Naseer

ಎಡ: ಇದೇ ಮುರುಕಲು ಮನೆಯಲ್ಲಿ ಹೆರಿಗೆಯ ನಂತರ ಪೂಜಾ ತನ್ನ ಮಗುವಿನೊಂದಿಗೆ 15 ದಿನಗಳ ಕಾಲ ವಾಸವಾಗಿದ್ದರು.  ಬಲ: ಗಂಗಮ್ಮ ಹೇಳುತ್ತಾರೆ, ʼ ಈ ವಿಷಯದಲ್ಲಿ ನಾವೀಗ ಒಂದಿಷ್ಟು ಉದಾರಿಗಳಾಗಿದ್ದೇವೆ. ಪಕ್ಕದ [ಕಾಡು]ಗೊಲ್ಲ ಹಟ್ಟಿಗಳಲ್ಲಿ ಎರಡು ತಿಂಗಳ ಕಾಲ ಮಗುವಿನೊಡನೆ ಗುಡಿಸಲಿನಲ್ಲಿ ಪ್ರತ್ಯೇಕ ವಾಸವಿರಬೇಕಾಗುತ್ತದೆʼ

ಪೂಜಾ ವಾಸವಿದ್ದ ಗುಡಿಸಲಿನಿಂದ ಸುಮಾರು 75 ಕಿಲೋಮೀಟರ್‌ ದೂರದ ತುಮಕೂರು ಜಿಲ್ಲೆಯ ಡಿ.ಹೊಸಹಳ್ಳಿಯ ಕಾಡುಗೊಲ್ಲ ಹಟ್ಟಿಯ ನಿವಾಸಿ ಜಯಮ್ಮ ಕೂಡ ತಮ್ಮ ಮನೆಯೆದುರಿನ ರಸ್ತೆಯ ಪಕ್ಕದಲ್ಲಿದ್ದ ಮರದ ಕೆಳಗೆ ಕುಳಿತಿದ್ದರು. ಇದು ಅವರ ಆ ತಿಂಗಳ ಮುಟ್ಟಿನ ಮೊದಲ ದಿನವಾಗಿತ್ತು. ಅವರ ಹಿಂದೆ ಒಂದು ಓರೆಯಾದ ತೆರೆದ ಚರಂಡಿ ಹರಿಯುತ್ತಿತ್ತು. ಅವರ ಪಕ್ಕದಲ್ಲಿ ಒಂದು ಸ್ಟೀಲಿನ ತಟ್ಟೆ ಮತ್ತು ಲೋಟವನ್ನು ಇರಿಸಲಾಗಿತ್ತು. ಅವರು ತಿಂಗಳ ಮೂರು ದಿನಗಳ ಕಾಲ ರಾತ್ರಿಯನ್ನೂ ಅಲ್ಲೇ ಕಳೆಯುತ್ತಾರೆ. ಮಳೆ ಬರುತ್ತಿರುವಾಗಲೂ ಎಂದು ಆಕೆ ಒತ್ತಿ ಹೇಳುತ್ತಾರೆ. ಅವರ ಅಡುಗೆ ಮನೆಯ ಕೆಲಸದಿಂದ ಬಿಡುವು ದೊರೆತಿರುತ್ತದೆಯಾದರೂ ಕುಟುಂಬಕ್ಕೆ ಸೇರಿದ ಕುರಿ ಹಿಂಡನ್ನು ಹತ್ತಿರದ ಸ್ಥಳಗಳಲ್ಲಿ ಮೇಯಿಸಲು ಹೋಗುತ್ತಾರೆ.

“ಹೀಗೆ ಹೊರಗೆ ಮಲಗಲು ಯಾರು ಬಯಸುತ್ತಾರೆ?” ಎಂದು ಅವರು ಕೇಳುತ್ತಾರೆ. “ಆದರೆ ಇದನ್ನು ಎಲ್ಲರೂ ಪಾಲಿಸುತ್ತಾರೆ ಯಾಕೆಂದರೆ ಇದನ್ನು ನಮ್ಮ ದೇವರು [ಕಾಡುಗೊಲ್ಲರು ಕೃಷ್ಣನ ಭಕ್ತರು] ಇದನ್ನು ನಾವು ಮಾಡಬೇಕೆಂದು ಬಯಸುತ್ತಾನೆ.” ಎನ್ನುತ್ತಾರೆ. “ನಾನು ಒಂದು ಕವರ್‌ ಹೊದ್ದುಕೊಂಡು ಇಲ್ಲಿ ನಿಂತಿದ್ದೆ. ಆ ಸಮಯದಲ್ಲಿ ಮಳೆ ಬರುತ್ತಿತ್ತು.”

ಜಯಮ್ಮ ಮತ್ತು ಅವರ ಗಂಡ ಇಬ್ಬರೂ ಕುರಿ ಮೇಯಿಸುತ್ತಾರೆ. 20ರ ಹರೆಯದಲ್ಲಿರುವ ಅವರ ಇಬ್ಬರು ಗಂಡು ಮಕ್ಕಳು ಬೆಂಗಳೂರಿನಲ್ಲಿ ಫ್ಯಾಕ್ಟರಿ ಕೆಲಸ ಮಾಡುತ್ತಾರೆ. “ನಾಳೆ ಅವರಿಬ್ಬರಿಗೆ ಮದುವೆಯಾದರೆ ಅವರ ಹೆಂಡತಿಯರೂ ಈ ಮರದ ಕೆಳಗೆ ಕುಳಿತುಕೊಳ್ಳಲೇಬೇಕು. ಈ ರೂಢಿಯನ್ನು ನಾವು ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿದ್ದೇವೆ.” ಎನ್ನುತ್ತಾರೆ. “ಇದು ನನಗೆ ಇಷ್ಟವಿಲ್ಲವೆನ್ನುವ ಒಂದೇ ಕಾರಣಕ್ಕೆ ಬದಲಾಗುವುದಿಲ್ಲ. ಒಂದು ವೇಳೆ ನನ್ನ ಗಂಡ ಮತ್ತು ಹಳ್ಳಿಯ ಇತರರು ಇದನ್ನು ನಿಲ್ಲಿಸಲು ಒಪ್ಪಿದರೆ ನಾನು ಈ ದಿನಗಳಲ್ಲೂ ಮನೆಯಲ್ಲೇ ಇರಲು ಪ್ರಾರಂಭಿಸುತ್ತೇನೆ.”

ಡಿ.ಹೊಸಹಳ್ಳಿಯ ಕಾಡುಗೊಲ್ಲರ ಹಟ್ಟಿಯಲ್ಲಿಯೂ ಇದನ್ನು ಎಲ್ಲರೂ ಪಾಲಿಸಲೇಬೇಕು. “ನಮ್ಮ ಹಳ್ಳಿಯಲ್ಲಿ ಮಹಿಳೆಯರು ಮೊದಲ ಮೂರು ರಾತ್ರಿ ಮುಟ್ಟಿನ ದಿನಗಳನ್ನು ಹೊರಗೆ ಕಳೆಯುತ್ತಾರೆ. ನಾಲ್ಕನೆಯ ದಿನ ಬೆಳಗಿಗೆ ಮನೆಗೆ ಮರಳಿ ಬರುತ್ತಾರೆ. “ ಎಂದು 35 ವರ್ಷದ ಲೀಲಾ ಎಮ್‌.ಎನ್.‌ (ನಿಜವಾದ ಹೆಸರಲ್ಲ)ಹೇಳುತ್ತಾರೆ. ಇವರು ಸ್ಥಳೀಯ ಅಂಗನಾವಡಿ ಕಾರ್ಯಕರ್ತೆ. ಇವರೂ ಮುಟ್ಟಿನ ದಿನಗಳಲ್ಲಿ ಹೊರಗೆ ಉಳಿಯುತ್ತಾರೆ. “ಇದೊಂದು ಅಭ್ಯಾಸ . ಇದನ್ನು ನಿಲ್ಲಿಸುವ ಬಯಕೆ ಯಾರಿಗೂ ಇಲ್ಲ. ಯಾಕೆಂದರೆ ಇದು ದೇವರಿಗೆ ಸಂಬಂಧಿಸಿದ್ದು. ದೇವರ ಭಯ ಅದನ್ನು ನಿಲ್ಲಿಸದ ಹಾಗೆ ತಡೆಯುತ್ತದೆ.” ಎನ್ನುತ್ತಾರೆ. “ರಾತ್ರಿ ಸಮಯದಲ್ಲಿ ಕುಟುಂಬದ ಯಾರಾದರೂ ಒಬ್ಬ ಎಂದರೆ ತಾತ, ಅಪ್ಪ ಅಥವಾ ಅಣ್ಣ ಅಥವಾ ಗಂಡ ನಾವು ಹೊರಗೆ ಮಲಗಿದ್ದಾಗ ನಮ್ಮತ್ತ ಒಳಗಿನಿಂದಲೇ ಒಂದು ಕಣ್ಣಿಟ್ಟಿರುತ್ತಾರೆ ಅಥವಾ ನಮ್ಮಿಂದ ಒಂದಷ್ಟು ದೂರದಲ್ಲಿ ಮಲಗುತ್ತಾರೆ.” ಎಂದು ಲೀಲಾ ಮುಂದುವರೆದು ಹೇಳುತ್ತಾರೆ. “ನಾಲ್ಕನೇ ದಿನವೂ ಸ್ರಾವ ಇದ್ದಲ್ಲಿ ಮನೆಯೊಳಗೆ ಕುಟುಂಬ ಸದಸ್ಯರಿಂದ ಅಂತರ ಕಾಪಾಡಿಕೊಳ್ಳುತ್ತಾರೆ ಮತ್ತು ಗಂಡನೊಂದಿಗೆ ಮಲಗುವುದಿಲ್ಲ. ಆದರೆ ಮನೆಯ ಕೆಲಸಗಳನ್ನು ಮಾಡುತ್ತೇವೆ.”

ಈ ಮತ್ತು ಇತರ ಕಾಡುಗೊಲ್ಲ ಹಳ್ಳಿಗಳಲ್ಲಿ ಪ್ರತಿ ತಿಂಗಳು ಹೊರಗುಳಿಯುವುದು ವಾಡಿಕೆಯ ಬಹಿಷ್ಕಾರವಾಗಿದ್ದರೂ, ಮುಟ್ಟಿನ ಅಥವಾ ಬಾಣಂತಿ ಮಹಿಳೆಯರನ್ನು ಪ್ರತ್ಯೇಕಿಸುವ ಅಭ್ಯಾಸವನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಕಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ, 2017  (ಜನವರಿ 4, 2020ರಂದು ಸರ್ಕಾರ  ಅಧಿಸೂಚನೆ ಹೊರಡಿಸಿದೆ), “ಪ್ರತ್ಯೇಕವಾಗಿರುವಂತೆ ಒತ್ತಾಯಿಸುವ ಮೂಲಕ ಮಹಿಳೆಯರ ವಿರುದ್ಧದ ದುಷ್ಟ ಆಚರಣೆಗಳು, ಹಳ್ಳಿಗೆ ಮರು ಪ್ರವೇಶವನ್ನು ನಿಷೇಧಿಸುವುದು ಅಥವಾ ಮಟ್ಟಾಗಿರುವ ಅಥವಾ ಬಾಣಂತಿ ಮಹಿಳೆಯರನ್ನು ಪ್ರತ್ಯೇಕಿಸಲು ಅನುಕೂಲ ಮಾಡಿಕೊಡುವುದು.” ಸೇರಿದಂತೆ ಒಟ್ಟು 16 ಅಭ್ಯಾಸಗಳನ್ನು ನಿಷೇಧಿಸಿದೆ. ಇದು 1ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಉಲ್ಲಂಘಿಸುವವರಿಗೆ ದಂಡವ್ನನೂ ವಿಧಿಸುತ್ತದೆ.

ಆದರೆ ಸಮುದಾಯ ಆರೋಗ್ಯ ರಕ್ಷಣೆಯನ್ನು ನಿರ್ವಹಿಸುವ ಕಾಡುಗೊಲ್ಲ ಸಮುದಾಯದ ಆಶಾ ಮತ್ತು ಅಂಗನವಾಡಿ ಕಾರ್ಮಿಕರನ್ನು ಸಹ ಈ ಪದ್ಧತಿಗಳನ್ನು ಅನುಸರಿಸದಂತೆ ತಡೆಯಲು ಕಾನೂನಿಗೂ ಸಾಧ್ಯವಾಗಿಲ್ಲ. ಡಿ. ಹೊಸಹಳ್ಳಿಯ ಆಶಾ ಕಾರ್ಯಕರ್ತೆಯಾಗಿರುವ ಡಿ. ಶಾರದಮ್ಮ (ಅವರ ನಿಜವಾದ ಹೆಸರಲ್ಲ) ತನ್ನ ಮುಟ್ಟಿನ ದಿನಗಳಲ್ಲಿ ಮನೆಯಿಂದ ಹೊರಗೆ ತೆರೆದ ಸ್ಥಳದಲ್ಲಿ ಉಳಿದುಕೊಳ್ಳುತ್ತಾರೆ.

Jayamma (left) sits and sleeps under this tree in the Kadugolla hamlet of D. Hosahalli during her periods.  Right: D. Hosahalli grama panchayat president Dhanalakshmi K. M. says, ' I’m shocked to see that women are reduced to such a level'
PHOTO • Tamanna Naseer
Jayamma (left) sits and sleeps under this tree in the Kadugolla hamlet of D. Hosahalli during her periods.  Right: D. Hosahalli grama panchayat president Dhanalakshmi K. M. says, ' I’m shocked to see that women are reduced to such a level'
PHOTO • Tamanna Naseer

ಡಿ.ಹೊಸಹಳ್ಳಿಯ ಕಾಡುಗೊಲ್ಲರ ಹಟ್ಟಿಯ ಜಯಮ್ಮ (ಎಡ ಚಿತ್ರ) ತಮ್ಮ ಮುಟ್ಟಿನ ದಿನಗಳಲ್ಲಿ ಮೂರು ದಿನಗಳನ್ನು ಈ ಮರದ ಕೆಳಗೆ ಕುಳಿತು, ಮಲಗಿ ಕಳೆಯುತ್ತಾರೆ. ಬಲ: ಡಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಧನಲಕ್ಷ್ಮಿ ಕೆ. ಎಂ., 'ಮಹಿಳೆಯರನ್ನು ಈ ಮಟ್ಟಕ್ಕೆ ಇಳಿಸಿರುವುದನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ'

“ನಮ್ಮ ಹಳ್ಳಿಯಲ್ಲಿ ಎಲ್ಲರೂ ಇದನ್ನು ಪಾಲಿಸುತ್ತಾರೆ. ನಾನು ಹುಟ್ಟಿ ಬೆಳೆದ ಚಿತ್ರದುರ್ಗದಲ್ಲಿ [ಪಕ್ಕದ ಜಿಲ್ಲೆ] ಈ ಆಚರಣೆಯನ್ನು ಮಹಿಳೆಯರ ಸುರಕ್ಷತೆಯ ಕಾರಣಕ್ಕಾಗಿ ಕೈಬಿಡಲಾಗಿದೆ. ಆದರೆ ಇಲ್ಲಿನ ಜನರು ಈ ಆಚರಣೆಯನ್ನು ಪಾಲಿಸದಿದ್ದಲ್ಲಿ ದೇವರು ತಮಗೆ ಶಾಪ ಕೊಡಬಹುದೆಂದು ಹೆದರುತ್ತಾರೆ. ಸಮುದಾಯದ ಭಾಗವಾಗಿ ನಾನೂ ಇದನ್ನು ಆಚರಿಸುತ್ತೇನೆ. ನಾನೊಬ್ಬಳೇ ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಮತ್ತು ಹೊರಗೆ ಉಳಿಯುವುದರಿಂದ ನಾನು ಯಾವುದೇ ಸಮಸ್ಯೆಯನ್ನೂ ಎದುರಿಸಿಲ್ಲ.” ಎನ್ನುತ್ತಾರೆ 40 ವರ್ಷದ ಶಾರದಮ್ಮ.

ಈ ಆಚರಣೆಗಳು ಕಾಡುಗೊಲ್ಲ ಸಮುದಾಯದ ಸರ್ಕಾರಿ ನೌಕರರ ಮನೆಯಲ್ಲಿಯೂ ಸಹ ಚಾಲ್ತಿಯಲ್ಲಿವೆ - ಡಿ. ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ 43 ವರ್ಷದ ಮೋಹನ್ ಎಸ್ (ಅವರ ನಿಜವಾದ ಹೆಸರಲ್ಲ) ಅವರ ಕುಟುಂಬದಲ್ಲಿರುವಂತೆ. ಎಮ್ಎ-ಬಿಡ್ ಪದವಿಗಳನ್ನು ಹೊಂದಿರುವ ಅವರ ಸಹೋದರನ ಹೆಂಡತಿ 2020ರ ಡಿಸೆಂಬರ್‌ನಲ್ಲಿ ಮಗುವನ್ನು ಹಡೆದಾಗ, ವಿಶೇಷವಾಗಿ ನಿರ್ಮಿಸಿದ ಗುಡಿಸಲಿನಲ್ಲಿ ಎರಡು ತಿಂಗಳ ಕಾಲ ಮಗುವಿನೊಂದಿಗೆ ಹೊರಗಡೆ ಇದ್ದರು. "ಅವರು ಕಡ್ಡಾಯ ಅವಧಿಯನ್ನು ಹೊರಗಡೆ ಪೂರ್ಣಗೊಳಿಸಿದ ನಂತರವೇ ಅವರು ನಮ್ಮ ಮನೆಗೆ ಪ್ರವೇಶಿಸಿದರು" ಎಂದು ಮೋಹನ್ ಹೇಳುತ್ತಾರೆ. ಅವರ 32 ವರ್ಷದ ಪತ್ನಿ ಭಾರತಿ (ಅವರ ನಿಜವಾದ ಹೆಸರಲ್ಲ) ಈ ಮಾತನ್ನು ಒಪ್ಪುತ್ತಾರೆ: "ಮುಟ್ಟಿನ ಸಮಯದಲ್ಲಿ ನಾನು ಕೂಡ ಏನನ್ನೂ ಮುಟ್ಟುವುದಿಲ್ಲ. ಸರ್ಕಾರವು ಈ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ನಾನು ಬಯಸುವುದಿಲ್ಲ. ಅವರು ಏನು ಮಾಡಬಹುದೆಂದರೆ, ಮರಗಳ ಕೆಳಗೆ ಮಲಗುವ ಬದಲು ನಾವು ಉಳಿಯಲು ಒಂದು ಕೋಣೆಯನ್ನು ನಿರ್ಮಿಸಿ ಕೊಟ್ಟರೆ ಒಳ್ಳೆಯದು.”

*****

ಕಾಲಾನಂತರದಲ್ಲಿ, ಅಂತಹ ಕೊಠಡಿಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದಿವೆ. ಜುಲೈ 10, 2009ರಂದು, ಮಾಧ್ಯಮ ವರದಿಗಳನ್ನು ಗಮನಿಸಿ, ಕರ್ನಾಟಕ ಸರ್ಕಾರವು ಪ್ರತಿ ಕಾಡುಗೊಲ್ಲ ಹಟ್ಟಿಯ ಹೊರಗೆ ಒಂದು ಮಹಿಳಾ ಭವನವನ್ನು ನಿರ್ಮಿಸುವ ಆದೇಶವನ್ನು ಅಂಗೀಕರಿಸಿತು.

ಈ ಆದೇಶವನ್ನು ಅಂಗೀಕರಿಸುವ ಮೊದಲು ಡಿ. ಹೊಸಹಳ್ಳಿ ಗ್ರಾಮದಲ್ಲಿರುವ ಜಯಮ್ಮನವರ ಹಳ್ಳಿಯಲ್ಲಿ ಸ್ಥಳೀಯ ಪಂಚಾಯತ್ ಒಂದು ಕೋಣೆಯ ಸಿಮೆಂಟ್ ಕೋಣೆಯನ್ನು ನಿರ್ಮಿಸಿತ್ತು. ಕುಣಿಗಲ್ ತಾಲ್ಲೂಕು ಪಂಚಾಯತ್ ಸದಸ್ಯ ಕೃಷ್ಣಪ್ಪ ಜಿ.ಟಿ. ಅವರು ತಾನು ಬಾಲ್ಯದಲ್ಲಿದ್ದಾಗ ಸುಮಾರು 50 ವರ್ಷಗಳ ಹಿಂದೆ ಈ ಕೊಠಡಿಯನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಹಳ್ಳಿಯ ಮಹಿಳೆಯರು ಮರಗಳ ಕೆಳಗೆ ಮಲಗುವ ಬದಲು ಕೆಲವು ವರ್ಷಗಳ ಕಾಲ ಇದನ್ನು ಬಳಸುತ್ತಿದ್ದರು. ಈಗ ಶಿಥಿಲಗೊಂಡಿರುವ ಕೋಣೆಯು ಕಳೆಗಳು ಮತ್ತು ಬಳ್ಳಿಗಳಿಂದ ಆವರಿಸಲ್ಪಟ್ಟಿದೆ.

ಅದೇ ರೀತಿ, ಅರಳಾಳಸಂದ್ರದ ಕಾಡುಗೊಲ್ಲರ ಹಟ್ಟಿಯಲ್ಲಿ ಈ ಉದ್ದೇಶಕ್ಕಾಗಿ ನಿರ್ಮಿಸಲಾದ ಅರ್ಧದಷ್ಟು ಜಖಂ ಆಗಿರುವ ಕೋಣೆ ಈಗ ಬಳಕೆಯಲ್ಲಿಲ್ಲ. "ಸುಮಾರು ನಾಲ್ಕೈದು ವರ್ಷಗಳ ಹಿಂದೆ, ಕೆಲವು ಜಿಲ್ಲೆಯ ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ನಮ್ಮ ಗ್ರಾಮಕ್ಕೆ ಭೇಟಿ ನೀಡಿದರು" ಎಂದು ಅನು ನೆನಪಿಸಿಕೊಳ್ಳುತ್ತಾರೆ. “ಅವರು ಹೊರಗೆ ಉಳಿಯುತ್ತಿರುವ [ಮುಟ್ಟಿನ] ಮಹಿಳೆಯರನ್ನು ಮನೆಗೆ ಹೋಗುವಂತೆ ಕೇಳಿದರು. ಹೊರಗಡೆ ಇರುವುದು ಒಳ್ಳೆಯದಲ್ಲ ಎಂದು ಅವರು ಹೇಳಿದರು. ನಾವು ಕೊಠಡಿಯನ್ನು ಖಾಲಿ ಮಾಡಿದ ನಂತರ ಅವರು ಹೊರಟುಹೋದರು. ನಂತರ ಎಲ್ಲರೂ ಕೋಣೆಗೆ ಮರಳಿದರು. ಕೆಲವು ತಿಂಗಳುಗಳ ನಂತರ, ಅವರು ಮತ್ತೆ ಬಂದು ನಮ್ಮ ಮುಟ್ಟಿನ ದಿನಗಳಲ್ಲಿ ನಮ್ಮ ಮನೆಗಳ ಒಳಗೆ ಇರಬೇಕೆಂದು ಹೇಳಿದರು ಮತ್ತು ಕೊಠಡಿಯನ್ನು ಒಡೆಯಲು ಪ್ರಾರಂಭಿಸಿದರು. ಆದರೆ ಕೊಠಡಿ ನಮಗೆ ನಿಜವಾಗಿಯೂ ಉಪಯುಕ್ತವಾಗಿತ್ತು. ಕನಿಷ್ಠ ನಾವು ಹೆಚ್ಚು ತೊಂದರೆಯಿಲ್ಲದೆ ಅಲ್ಲಿ ಶೌಚಾಲಯವನ್ನು ಬಳಸಬಹುದಾಗಿತ್ತು.”

20014ರಲ್ಲಿ, ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಕಾಡುಗೊಲ್ಲ ಸಮುದಾಯದ ಈ ನಂಬಿಕೆಗಳ ವಿರುದ್ಧ ಮಾತನಾಡಲು ಪ್ರಯತ್ನಿಸಿದರು. ಸಾಂಕೇತಿಕ ಕ್ರಿಯೆಯಲ್ಲಿ, ಡಿ. ಹೊಸಹಳ್ಳಿಯ ಕಾಡುಗೊಲ್ಲರ ಹಟ್ಟಿಯಲ್ಲಿ ಮುಟ್ಟಿನ ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದ ಕೋಣೆಯ ಭಾಗಗಳನ್ನು ಅವರು ಒಡೆದುಹಾಕಿದರು. “ಉಮಾಶ್ರೀ ಮೇಡಂ ನಮ್ಮ ಸಮುದಾಯದ ಮಹಿಳೆಯರನ್ನು ಮುಟ್ಟಿನ ಸಮಯದಲ್ಲಿ ತಮ್ಮ ಮನೆಗಳ ಒಳಗೆ ಇರಬೇಕೆಂದು ಕೇಳಿಕೊಂಡರು. ಅವರು ನಮ್ಮ ಹಳ್ಳಿಗೆ ಭೇಟಿ ನೀಡಿದ ಸಮಯದಲ್ಲಿ ಕೆಲವರು ಒಪ್ಪಿದರು, ಆದರೆ ಯಾರೂ ಅಭ್ಯಾಸವನ್ನು ನಿಲ್ಲಿಸಲಿಲ್ಲ. ಅವರು ಪೊಲೀಸ್ ರಕ್ಷಣೆ ಮತ್ತು ಗ್ರಾಮದ ಅಕೌಂಟೆಂಟ್‌ ಜೊತೆ ಬಂದು ಬಾಗಿಲು ಮತ್ತು ಆ ಕೋಣೆಯ ಕೆಲವು ಭಾಗಗಳನ್ನು ಒಡೆದರು. ಅವರು ನಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು, ಆದರೆ ನಿಜವಾಗಿಯೂ ಅಂತಹದ್ದೇನೂ ಆಗಲಿಲ್ಲ” ಎಂದು ತಾಲ್ಲೂಕು ಪಂಚಾಯತ್ ಸದಸ್ಯ ಕೃಷ್ಣಪ್ಪ ಜಿ. ಟಿ ಹೇಳಿದರು.

A now-dilapidated room constructed for menstruating women in D. Hosahalli. Right: A hut used by a postpartum Kadugolla woman in Sathanur village
PHOTO • Tamanna Naseer
A now-dilapidated room constructed for menstruating women in D. Hosahalli. Right: A hut used by a postpartum Kadugolla woman in Sathanur village
PHOTO • Tamanna Naseer

ಡಿ. ಹೊಸಹಳ್ಳಿಯಲ್ಲಿನ ಮುಟ್ಟಿನ ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದ, ಈಗ ಶಿಥಿಲಗೊಂಡಿರುವ ಕೋಣೆ. ಬಲ: ಸಾತನೂರು ಗ್ರಾಮದಲ್ಲಿ ಬಾಣಂತಿ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಗುಡಿಸಲು

ಆದರೂ, 2021ರ ಫೆಬ್ರವರಿಯಲ್ಲಿ ಡಿ. ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಧನಲಕ್ಷ್ಮಿ ಕೆ. ಎಂ. (ಅವರು ಕಾಡುಗೊಲ್ಲರ ಸಮುದಾಯಕ್ಕೆ ಸೇರಿದವರಲ್ಲ) ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸುವ ಸಲಹೆಯನ್ನು ಮರುಪರಿಶೀಲಿಸಿದ್ದಾರೆ. "ಬಾಣಂತನ ಮತ್ತು ಮುಟ್ಟಿನಂತಹ ನಿರ್ಣಾಯಕ ಸಮಯದಲ್ಲಿ ಮಹಿಳೆಯರು ತಮ್ಮ ಮನೆಗಳ ಹೊರಗೆ ವಾಸಿಸಬೇಕಾದ ಮಟ್ಟಕ್ಕೆ ಇಳಿದಿರುವುದನ್ನು ನೋಡಿ ನಾನು ಆಘಾತಗೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ. "ಅವರಿಗಾಗಿ ನಾನು ಕನಿಷ್ಠ ಪ್ರತ್ಯೇಕ ಮನೆಗಳನ್ನು ನಿರ್ಮಾಂ ಮಾಡುವ ಕುರಿತು ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ. ದುಃಖದ ಸಂಗತಿಯೆಂದರೆ ವಿದ್ಯಾವಂತ ಯುವತಿಯರು ಈ ಆಚರಣೆಯನ್ನು ನಿಲ್ಲಿಸಲು ಬಯಸುವುದಿಲ್ಲ. ಅವರು ತಮ್ಮನ್ನು ತಾವು ಬದಲಾಯಿಸುವುದನ್ನು ವಿರೋಧಿಸುತ್ತಿದ್ದರೆ ನಾನು ಹೇಗೆ ಹೆಚ್ಚಿನ ಬದಲಾವಣೆಯನ್ನು ತರಬಲ್ಲೆ?”

ಕೋಣೆಗಳ ಮೇಲಿನ ಚರ್ಚೆಯ ಹೊರತಾಗಿಯೂ, ಇತರರು ಈ ಆಚರಣೆಯನ್ನು ನಿಲ್ಲಿಸಬೇಕೆಂದು ಬಯಸುತ್ತಾರೆ. "ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿಗಳು ಸಹಾಯ ನೀಡಬಹುದಾದರೂ, ಅವರು ಅಭ್ಯಾಸವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ" ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿ. ಬಿ. ಬಸವರಾಜು ಹೇಳುತ್ತಾರೆ. "ನಾವು ಕಾಡುಗೊಲ್ಲ ಮಹಿಳೆಯರೊಂದಿಗೆ ಮಾತನಾಡುತ್ತೇವೆ ಮತ್ತು ಈ ಮೂಢನಂಬಿಕೆ ಪದ್ಧತಿಗಳನ್ನು ನಿಲ್ಲಿಸುವಂತೆ ಅವರಿಗೆ ಸಲಹೆ ನೀಡುತ್ತೇವೆ. ಹಿಂದೆ ನಾವು ಈ ಕುರಿತು ಜಾಗೃತಿ ಅಭಿಯಾನಗಳನ್ನು ಸಹ ನಡೆಸಿದ್ದೇವೆ."

ಮುಟ್ಟಿನ ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸುವುದು ಪರಿಹಾರವಲ್ಲವೆಂದು ಅರಳಾಳಸಂದ್ರದ ಸಮೀಪವಿರುವ ಹಳ್ಳಿಯ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಕೆ. ಅರ್ಕೇಶ್ ಒತ್ತಿಹೇಳುತ್ತಾರೆ. “ಕೃಷ್ಣ ಕುಟೀರಗಳು [ಆ ಕೊಠಡಿಗಳಿಗೆ ನೀಡಲಾಗಿದ್ದ ಹೆಸರು] ಈ ಆಚರಣೆಯನ್ನು ನ್ಯಾಯಸಮ್ಮತಗೊಳಿಸುತ್ತಿದ್ದವು. ಯಾವುದೇ ಸಮಯದಲ್ಲಿ ಮಹಿಳೆಯರು ಅಶುದ್ಧಗೊಳ್ಳುತ್ತಾರೆನ್ನುವ ಮೂಲ ಪರಿಕಲ್ಪನೆಯನ್ನೇ ತೊಡೆದು ಹಾಕಬೇಕು, ಮೌಲ್ಯೀಕರಿಸಬಾರದು,” ಎಂದು ಅವರು ಹೇಳುತ್ತಾರೆ.

"ಈ  ಧಾರ್ಮಿಕ ಪದ್ಧತಿಗಳು ಅತ್ಯಂತ ಕ್ರೂರವಾಗಿವೆ" ಎಂದು ಅವರು ಹೇಳುತ್ತಾರೆ. "ಆದರೆ ಸಾಮಾಜಿಕ ಒತ್ತಡವೆಂದರೆ ಮಹಿಳೆಯರು ಸಂಘಟಿತರಾಗಿ ಹೋರಾಡುವುದಿಲ್ಲ. ಸಾಮಾಜಿಕ ಕ್ರಾಂತಿಯ ನಂತರವೇ ಸತಿ ಪದ್ಧತಿಯನ್ನು ರದ್ದುಪಡಿಸಲಾಯಿತು. ಆಗೆಲ್ಲ ಬದಲಾವಣೆ ತರಲು ಇಚ್ಛಾಶಕ್ತಿಯಿತ್ತು. ಚುನಾವಣಾ ರಾಜಕೀಯದಿಂದಾಗಿ, ನಮ್ಮ ರಾಜಕಾರಣಿಗಳು ಈ ವಿಷಯಗಳನ್ನು ಮುಟ್ಟಲು ಸಹ ಸಿದ್ಧರಿಲ್ಲ. ರಾಜಕಾರಣಿಗಳು, ಈ ಕುರಿತು ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಜನರನ್ನು ಒಳಗೊಂಡ ಒಂದು ಸಂಯೋಜಿತ ಪ್ರಯತ್ನದ ಅಗತ್ಯವಿದೆ.”

*****

ಅಲ್ಲಿಯವರೆಗೂ, ದೇವರ ಶಾಪದ ಭಯ ಮತ್ತು ಸಾಮಾಜಿಕ ಕಳಂಕದ ಭಯವು ಆಳವಾಗಿ ಹರಿಯುತ್ತಿರುತ್ತದೆ ಮತ್ತು ಈ ಪದ್ಧತಿ ಮುಂದುವರೆಸುತ್ತದೆ.

"ನಾವು ಈ ಸಂಪ್ರದಾಯವನ್ನು ಅನುಸರಿಸದಿದ್ದರೆ, ನಮಗೆ ಕೆಟ್ಟದಾಗುತ್ತದೆ" ಎಂದು ಅರಳಾಳಸಂದ್ರದ ಕಾಡುಗೊಲ್ಲರ ಹಟ್ಟಿಯ ಅನು ಹೇಳುತ್ತಾರೆ. "ಹಲವು ವರ್ಷಗಳ ಹಿಂದೆ, ತುಮಕೂರಿನಲ್ಲಿ ಮಹಿಳೆಯೊಬ್ಬರು ಮುಟ್ಟಿನ ಸಮಯದಲ್ಲಿ ಮನೆಯಿಂದ ಹೊರಗಿರಲು ನಿರಾಕರಿಸಿದ ಕಾರಣ ಅವರ ಮನೆ ನಿಗೂಢ ರೀತಿಯಲ್ಲಿ ಸುಟ್ಟು ಹೋಯಿತೆನ್ನುವುದನ್ನು ನಾವು ಕೇಳಿದ್ದೇವೆ."

Anganwadi worker Ratnamma (name changed at her request; centre) with Girigamma (left) in Sathanur village, standing beside the village temple. Right: Geeta Yadav says, 'If I go to work in bigger cities in the future, I’ll make sure I follow this tradition'
PHOTO • Tamanna Naseer
Anganwadi worker Ratnamma (name changed at her request; centre) with Girigamma (left) in Sathanur village, standing beside the village temple. Right: Geeta Yadav says, 'If I go to work in bigger cities in the future, I’ll make sure I follow this tradition'
PHOTO • Tamanna Naseer

ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ (ಅವರ ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ; ನಡುವೆ ಇರುವವರು) ಸಾತನೂರು ಗ್ರಾಮದ ಗಿರಿಗಮ್ಮ (ಎಡ) ಜೊತೆ, ಗ್ರಾಮದ ದೇವಾಲಯದ ಪಕ್ಕದಲ್ಲಿ ನಿಂತಿರುವುದು. ಬಲ: ಗೀತಾ ಯಾದವ್, 'ನಾನು ಭವಿಷ್ಯದಲ್ಲಿ ದೊಡ್ಡ ನಗರಗಳಲ್ಲಿ ಕೆಲಸಕ್ಕೆಂದು ಹೋದರೂ, ಈ ಸಂಪ್ರದಾಯವನ್ನು ಅನುಸರಿಸುವುದು ಖಚಿತ'

“ನಮ್ಮ ದೇವರು ನಾವು ಹೀಗೇ ಬದುಕಬೇಕೆಂದು ಬಯಸುತ್ತಾನೆ. ಒಂದು ವೇಳೆ ನಾವು ಇದನ್ನು ತಿರಸ್ಕರಿಸಿದರೆ ಮುಂದೆ ಕೆಡುಕುಗಳನ್ನು ಎದುರಿಸಬೇಕಾಗುತ್ತದೆ,” ಎಂದು ಡಿ. ಹೊಸಹಳ್ಳಿ ಗ್ರಾಮ ಪಂಚಾಯತಿಯ ಮೋಹನ್‌.ಎಸ್‌ ಹೇಳುತ್ತಾರೆ. ಮುಂದುವರೆದು ಅವರು “ಕಾಯಿಲೆಗಳು ಹೆಚ್ಚುತ್ತವೆ, ನಮ್ಮ ಕುರಿ ಮತ್ತು ಮೇಕೆಗಳು ಸಾಯುತ್ತವೆ. ನಾವು ಹಲವು ತೊದರೆಗಳನ್ನು ಎದುರಿಸಬೇಕಾಗುತ್ತದೆ. ಈ ವ್ಯವಸ್ಥೆ ಬದಲಾಗಬಾರದು. ನಮಗೆ ಇವೆಲ್ಲ ಬದಲಾಗುವುದು ಬೇಕಿಲ್ಲ.

“ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮುಟ್ಟಿನ ಸಮಯದಲ್ಲಿ ಮನೆಯೊಳಗೆ ಮಲಗಿ ಆಕೆಗೆ ಹಾವು ಕಚ್ಚಿತ್ತು,” ಎಂದು ರಾಮನಗರ ಜಿಲ್ಲೆಯ ಸಾತನೂರು ಗ್ರಾಮದ ಕಾಡುಗೊಲ್ಲರಹಟ್ಟಿಯ ಗಿರಿಗಮ್ಮ ಹೇಳುತ್ತಾರೆ. ಇಲ್ಲಿ ಸರಕಾರ ಕಟ್ಟಿಸಿರುವ ಅಟ್ಯಾಚ್ಡ್ ಬಾತ್‌ರೂಮ್‌ ಇರುವ ಪಕ್ಕಾ ಮನೆಯೊಂದು ಇಲ್ಲಿನ ಮುಟ್ಟಿನ ಮಹಿಳೆಯರಿಗೆ ಆಶ್ರಯ ನೀಡುತ್ತಿದೆ. ‌ಹಳ್ಳಿಯ ಇಕ್ಕಟ್ಟಾದ ರಸ್ತೆಯೊಂದು ಈ ಕೋಣೆಗೆ ಕರೆದೊಯ್ಯುತ್ತದೆ.

ಗೀತಾ ಯಾದವ್ ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಮುಟ್ಟಾದಾಗ ಮೊದಲ ಬಾರಿಗೆ ಏಕಾಂಗಿಯಾಗಿ ಇರಬೇಕಾಗಿರುವುದಕ್ಕಾಗಿ ಹೆದರುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ನಾನು ಅಳುತ್ತಿದ್ದೆ ಮತ್ತು ನನ್ನನ್ನು ಕಳುಹಿಸಬಾರದೆಂದು ನನ್ನ ತಾಯಿಯನ್ನು ಕೇಳಿದೆ. ಆದರೆ ಅವಳು ಕೇಳಲಿಲ್ಲ. ಈಗ, ಜೊತೆಗೆ ಯಾವಾಗಲೂ ಕೆಲವು ಆಂಟಿಯರು [ಇತರ ಮುಟ್ಟಿನ ಮಹಿಳೆಯರು] ಇರುತ್ತಾರೆ, ಇದರಿಂದಾಗಿ ನಾನು ಭಯವಿಲ್ಲದೆ ಮಲಗಬಹುದಾಗಿದೆ. ಈ ದಿನಗಳಲ್ಲಿ ತರಗತಿಯಿಂದ ನೇರ ಈ ಕೋಣೆಗೆ ಬರುತ್ತೇನೆ. ನಾವು ಹಾಸಿಗೆಗಳನ್ನು ಹೊಂದಿದ್ದರೆ ನೆಲದ ಮೇಲೆ ಮಲಗಬೇಕಾಗಿರಲಿಲ್ಲ ಎಂದು ನನಗನ್ನಿಸುತ್ತದೆ ” ಎಂದು 11 ನೇ ತರಗತಿಯ ವಿದ್ಯಾರ್ಥಿನಿ 16 ವರ್ಷದ ಗೀತಾ ಹೇಳುತ್ತಾರೆ. “ನಾನು ಭವಿಷ್ಯದಲ್ಲಿ ದೊಡ್ಡ ನಗರಗಕ್ಕೆ ಕೆಲಸಕ್ಕೆಂದು ಹೋದರೆ, ನಾನು ಪ್ರತ್ಯೇಕ ಕೋಣೆಯಲ್ಲಿಯೇ ಇರುತ್ತೇನೆ ಮತ್ತು ಯಾವುದನ್ನೂ ಮುಟ್ಟುವುದಿಲ್ಲ. ನಾನು ಈ ಸಂಪ್ರದಾಯವನ್ನು ಅನುಸರಿಸುತ್ತೇನೆ. ಯಾವ ವಸ್ತುವನ್ನೂ ಮುಟ್ಟುವುದಿಲ್ಲ. ನಮ್ಮ ಹಳ್ಳಿಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ,” ಎಂದು ಅವರು ಹೇಳುತ್ತಾರೆ.

16 ವಯಸ್ಸಿನ ಗೀತಾ ತನ್ನ ಸಂಪ್ರದಾಯವನ್ನು ಮುಂದುವರೆಸುವ ಕುರಿತು ಖಚಿತವಾಗಿದ್ದರೆ, 65 ವರ್ಷದ ಗಿರಿಗಮ್ಮ ತಮ್ಮ ಸಮುದಾಯದ ಮಹಿಳೆಯರು ಕಡ್ಡಾಯ ಪ್ರತ್ಯೇಕತೆಯ ಕಾರಣ ವಿಶ್ರಾಂತಿ ಪಡೆಯುವುದರ ಕುರಿತು ದೂರಲು ಕಾರಣವಿಲ್ಲ ಎಂದು ಒತ್ತಿಹೇಳುತ್ತಾರೆ. “ಹಿಂದೆ ನಾವೂ ಬಿಸಿಲು ಮತ್ತು ಮಳೆಯಲ್ಲಿ ಹೊರಗೆ ಇರುತ್ತಿದ್ದೆವು. ನಮ್ಮ ಜಾತಿಯ ಯಾವುದೇ ಮನೆಗೆ ಪ್ರವೇಶಿಸಲು ನನಗೆ ಅವಕಾಶವಿಲ್ಲದ ಕಾರಣ ಗಾಳಿ-ಮಳೆಯ ಸಮಯದಲ್ಲಿ ನಾನು ಇತರ ಜಾತಿಯ ಜನರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಗಿ ಬಂದ ಸಂದರ್ಭಗಳಿದ್ದವು,” ಎಂದು ಅವರು ಹೇಳುತ್ತಾರೆ. “ಕೆಲವೊಮ್ಮೆ ನಾವು ನೆಲದ ಮೇಲೆ ಬಿದ್ದಿರುವ ಎಲೆಗಳ ಇಟ್ಟ ಆಹಾರವನ್ನು ತಿನ್ನುತ್ತಿದ್ದೆವು. ಈಗ ಮಹಿಳೆಯರಿಗೆ ಪ್ರತ್ಯೇಕ ಪಾತ್ರೆಗಳಿವೆ. ನಾವು ಕೃಷ್ಣ ಅನುಯಾಯಿಗಳು, ನಮ್ಮ ಸಮುದಾಯದ ಮಹಿಳೆಯರು ಈ ಆಚರಣೆಯ ಅನುಸರಿಸದಿರುವುದು ಹೇಗೆ? ”

"ಈ ಮೂರು-ನಾಲ್ಕು ದಿನಗಳಲ್ಲಿ ನಾವು ಕುಳಿತು, ಮಲಗಿ ಮತ್ತು ತಿನ್ನುತ್ತಾ ದಿನ ಕಳೆಯುತ್ತೇವೆ. ಇದು ಇಲ್ಲದಿದ್ದರೆ, ನಾವು ನಮ್ಮ ಆಡುಗಳ ಹಿಂದೆ ಓಡುವುದು ನಂತರ ಅಡುಗೆ, ಸ್ವಚ್ಛಗೊಳಿಸುವಿಕೆ ಇತ್ಯಾದಿ ಬಿಡುವಿಲ್ಲದ ಕೆಲಸ ಮಾಡಬೇಕಿರುತ್ತದೆ”ಎಂದು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿಯ (ಇದರೊಳಗೆ ಸಾತನೂರು ಗ್ರಾಮವಿದೆ) ಅಂಗನವಾಡಿ ಕಾರ್ಯಕರ್ತೆ 29 ವರ್ಷದ ರತ್ನಮ್ಮ (ಅವರ ನಿಜವಾದ ಹೆಸರಲ್ಲ) ಹೇಳುತ್ತಾರೆ.

A state-constructed room (left) for menstruating women in Sathanur: 'These Krishna Kuteers were legitimising this practice. The basic concept that women are impure at any point should be rubbished, not validated'. Right: Pallavi segregating with her newborn baby in a hut in D. Hosahalli
PHOTO • Tamanna Naseer
A state-constructed room (left) for menstruating women in Sathanur: 'These Krishna Kuteers were legitimising this practice. The basic concept that women are impure at any point should be rubbished, not validated'. Right: Pallavi segregating with her newborn baby in a hut in D. Hosahalli
PHOTO • Tamanna Naseer

ಸಾತನೂರಿನಲ್ಲಿ ಮುಟ್ಟಿನ ಮಹಿಳೆಯರಿಗಾಗಿ ಸರಕಾರ ನಿರ್ಮಿಸಿರುವ ಕೊಠಡಿ (ಎಡ): 'ಈ ಕೃಷ್ಣ ಕುಟೀರಗಳು ಈ ಪದ್ಧತಿಯನ್ನು ನ್ಯಾಯಸಮ್ಮತಗೊಳಿಸುತ್ತಿದ್ದವು. ಯಾವುದೇ ಹಂತದಲ್ಲಿ ಮಹಿಳೆಯರು ಅಶುದ್ಧರಾಗಿದ್ದಾರೆ ಎಂಬ ಮೂಲ ಪರಿಕಲ್ಪನೆಯನ್ನು ಅಳಿಸಿ ಹಾಕಬೇಕು, ಮೌಲ್ಯೀಕರಿಸಬಾರದು.' ಬಲ: ಪಲ್ಲವಿ ತನ್ನ ನವಜಾತ ಶಿಶುವಿನೊಂದಿಗೆ ಡಿ.ಹೊಸಹಳ್ಳಿಯ ಗುಡಿಸಲಿನಲ್ಲಿ ಪ್ರತ್ಯೇಕ ವಾಸದಲ್ಲಿರುವುದು

ಗಿರಿಗಮ್ಮ ಮತ್ತು ರತ್ನಮ್ಮ ಪ್ರತ್ಯೇಕತೆಯಲ್ಲಿ ಪ್ರಯೋಜನಗಳನ್ನು ಕಂಡರೂ, ಈ ಪದ್ಧತಿ ಅನೇಕ ಅಪಘಾತಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ತುಮಕೂರಿನಲ್ಲಿ ಮಳೆಯ ನಂತರ ಶೀತದಿಂದಾಗಿ ತಾಯಿಯೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದ ನವಜಾತ ಕಾಡುಗೊಲ್ಲ ಮಗು ಸಾವನ್ನಪ್ಪಿದೆಯೆಂದು ಡಿಸೆಂಬರ್ 2014ರ ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದು ವರದಿಯು 2010ರಲ್ಲಿ ಮಂಡ್ಯದ ಮದ್ದೂರು ತಾಲೂಕಿನ ಕಾಡುಗೊಲ್ಲರ ಹಟ್ಟಿಯಲ್ಲಿ ನಾಯಿಯೊಂದು 10 ದಿನಗಳ ಮಗುವನ್ನು ಎಳೆದೊಯ್ದಿತ್ತು.

ಈ ವರ್ಷದ ಫೆಬ್ರವರಿಯಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ಡಿ.ಹೊಸಹಳ್ಳಿ ಗ್ರಾಮದ ಕಾಡುಗೊಲ್ಲರ ಹಟ್ಟಿಯ 22 ವರ್ಷದ ಗೃಹಿಣಿ ಪಲ್ಲವಿ ಜಿ ಈ ಅಪಾಯಗಳನ್ನು ತಳ್ಳಿಹಾಕುತ್ತಾರೆ. “ಇಷ್ಟು ವರ್ಷಗಳಲ್ಲಿ ಎರಡು-ಮೂರು ಪ್ರಕರಣಗಳು ಸಂಭವಿಸಿದ್ದಲ್ಲಿ ಅದೇನು ದೊಡ್ಡ ವಿಷಯವಲ್ಲ. ವಾಸ್ತವವಾಗಿ ಈ ಗುಡಿಸಲು ಆರಾಮದಾಯಕವಾಗಿದೆ. ನಾನು ಮುಟ್ಟಿನ ಸಮಯದಲ್ಲಿ ಯಾವಾಗಲೂ ಕತ್ತಲೆಯಲ್ಲಿ ಇರುತ್ತಿದ್ದೆ. ಇದು ನನಗೆ ಹೊಸದಲ್ಲ,” ಎಂದು ಅವರು ಹೇಳುತ್ತಾರೆ.

ಪಲ್ಲವಿಯ ಪತಿ ತುಮಕೂರಿನ ಗ್ಯಾಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ, ಹತ್ತಿರದಲ್ಲಿಯೇ ತನ್ನ ತಾಯಿ ಅಥವಾ ಅಜ್ಜಿಗೆಂದು ಮಾಡಲಾಗಿರುವ  ಮತ್ತೊಂದು ಗುಡಿಸಲಿನಿಂದ ಕೆಲವು ಮೀಟರ್ ದೂರದಲ್ಲಿ ಮಗುವಿನೊಂದಿಗೆ ಮಲಗುತ್ತಾರೆ. ಗುಡಿಸಲಿನ ಒಳಗೆ ಒಂದು ಸ್ಟ್ಯಾಂಡಿಂಗ್‌ ಫ್ಯಾನ್‌ ಇದ್ದು ಪಕ್ಕದಲ್ಲಿ ಪಾತ್ರೆಗಳನ್ನು ಇರಿಸಲಾಗಿದೆ. ಹೊರೆಗೆ ಸೌದೆಯ ಒಲೆಯಿದ್ದು ಅಲ್ಲಿ ನೀರು ಕಾಯಿಸಿಕೊಳ್ಳಲಾಗುತ್ತದೆ. ಅವರ ಬಟ್ಟೆಗಳನ್ನು ಗುಡಿಸಲಿನ ಮೇಲೆ ಒಣಗಿಸಲಾಗುತ್ತದೆ. ಎರಡು ತಿಂಗಳು ಮತ್ತು ಮೂರು ದಿನಗಳ ನಂತರ, ತಾಯಿ ಮತ್ತು ಮಗುವನ್ನು  ಗುಡಿಸಲಿನಿಂದ 100 ಮೀಟರ್ ದೂರದಲ್ಲಿರುವ ಮನೆಯೊಳಗೆ ಕರೆದೊಯ್ಯಲಾಗುತ್ತದೆ.

ನವಜಾತ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವ ಮೊದಲು ಕೆಲವು ಕಾಡುಗೊಲ್ಲರ ಕುಟುಂಬಗಳು ದೇವರಿಗೆ ಕುರಿ ಬಲಿ ನೀಡುತ್ತಾರೆ. ಸಾಮಾನ್ಯವಾಗಿ, ‘ಶುದ್ಧೀಕರಣ’ ಆಚರಣೆಯನ್ನು ನಡೆಸಲಾಗುತ್ತದೆ, ಇದರಲ್ಲಿ ಗುಡಿಸಲು ಮತ್ತು ಎಲ್ಲಾ ಬಟ್ಟೆಗಳು ಮತ್ತು ತಾಯಿ ಮತ್ತು ಮಗುವಿಗೆ ಸೇರಿದ ವಸ್ತುಗಳನ್ನು ಶುದ್ಧೀಕರಿಸಲಾಗುತ್ತದೆ. ಹಳ್ಳಿಯ ಹಿರಿಯರು ದಂಪತಿಗೆ ದೂರದಿಂದ ಮಾರ್ಗದರ್ಶನ ನೀಡುತ್ತಾರೆ. ನಂತರ ಅವರನ್ನು ನಾಮಕರಣ ಸಮಾರಂಭಕ್ಕಾಗಿ ಸ್ಥಳೀಯ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ; ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿ ಊಟ ಮಾಡುತ್ತಾರೆ. ಇದೆಲ್ಲ ಮುಗಿದ ಮೇಲೆ ಅವರಿಗೆ ಮನೆಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.

*****

ಆದರೆ ಒಂದಿಷ್ಟು ಪ್ರತಿರೋಧದ ಹೆಜ್ಜೆಗಳೂ ಇವೆ.

ಅರಳಾಲಸಂದ್ರ ಗ್ರಾಮದ ಕಾಡುಗೊಲ್ಲರ ಹಟ್ಟಿಯಲ್ಲಿ ವಾಸಿಸುವ ಡಿ.ಜಯಲಕ್ಷ್ಮಮ್ಮ, ಮುಟ್ಟಿನ ಸಮಯದಲ್ಲಿ ತನ್ನ ಮನೆಯ ಹೊರಗೆ ಇರುವುದಿಲ್ಲ, ಆಕೆಯ ಸಮುದಾಯದ ಸದಸ್ಯರು ಈ ಪದ್ಧತಿಯನ್ನು ಅನುಸರಿಸಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದರೂ. ಅವರು 45 ವರ್ಷದ ಅಂಗನವಾಡಿ ಕಾರ್ಯಕರ್ತೆ ತನ್ನ ನಾಲ್ಕು ಹೆರಿಗೆಗಳಲ್ಲಿ ಪ್ರತಿ ಹೆರಿಗೆಯ ನಂತರ ನೇರವಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು, ಇದು ನೆರೆಹೊರೆಯ ಕುಟುಂಬಗಳಿಗೆ ಸಿಟ್ಟು ಬರಿಸಿತ್ತು.

Aralalasandra village's D. Jayalakshmma and her husband Kulla Kariyappa are among the few who have opposed this practice and stopped segeragating
PHOTO • Tamanna Naseer
Aralalasandra village's D. Jayalakshmma and her husband Kulla Kariyappa are among the few who have opposed this practice and stopped segeragating
PHOTO • Tamanna Naseer

ಈ ಪದ್ಧತಿಯನ್ನು ವಿರೋಧಿಸಿದ ಮತ್ತು ಪ್ರತ್ಯೇಕವಾಸವನ್ನು ನಿಲ್ಲಿಸಿದ ಕೆಲವರಲ್ಲಿ ಅರಳಾಳಸಂದ್ರ ಗ್ರಾಮದ ಡಿ.ಜಯಲಕ್ಷ್ಮಮ್ಮ ಮತ್ತು ಅವರ ಪತಿ ಕುಳ್ಳ ಕರಿಯಪ್ಪ ಕೂಡ ಸೇರಿದ್ದಾರೆ

“ನಾನು ಮದುವೆಯಾದ ಸಮಯದಲ್ಲಿ, ಇಲ್ಲಿನ ಎಲ್ಲ ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಹಳ್ಳಿಯ ಹೊರಗೆ ಹೋಗಿ ಸಣ್ಣ ಗುಡಿಸಲುಗಳಲ್ಲಿ ಅಥವಾ ಕೆಲವೊಮ್ಮೆ ಮರಗಳ ಕೆಳಗೆ ಇರುತ್ತಿದ್ದರು. ನನ್ನ ಪತಿ ಈ ಪದ್ಧತಿಯನ್ನು ಆಕ್ಷೇಪಿಸುತ್ತಿದ್ದರು. ನನ್ನ ಮದುವೆಗೆ ಹೆತ್ತವರ ಮನೆಯಲ್ಲೂ  ಮೊದಲು ಇದನ್ನು ಅನುಸರಿಸುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಅದನ್ನು ಮಾಡುವುದನ್ನು ನಿಲ್ಲಿಸಿದೆ. ಆದರೆ ನಾವು ಈ ಕಾರಣಕ್ಕಾಗಿ ಈಗಲೂ ಹಳ್ಳಿಗರಿಂದ ನಿಂದನೆಗಳನ್ನು ಕೇಳುತ್ತೇವೆ” ಎಂದು 10ನೇ ತರಗತಿವರೆಗೆ ಅಧ್ಯಯನ ಮಾಡಿರುವ ಜಯಲಕ್ಷ್ಮಮ್ಮ ಹೇಳುತ್ತಾರೆ. ಅವರ ಮೂವರು ಹೆಣ್ಣುಮಕ್ಕಳು - 19ರಿಂದ 23 ವರ್ಷದೊಳಗಿನವರು - ಮುಟ್ಟಿನ ಸಮಯದಲ್ಲಿ ಮನೆಯಿಂದ ಹೊರಗಿರುವುದಿಲ್ಲ.

“ಅವರು [ಗ್ರಾಮಸ್ಥರು] ನಮ್ಮನ್ನು ಕೆಣಕುತ್ತಿದ್ದರು ಮತ್ತು ಕಿರುಕುಳ ನೀಡುತ್ತಿದ್ದರು. ನಾವು ಯಾವುದೇ ತೊಂದರೆಗಳನ್ನು ಎದುರಿಸಿದರೂ, ಅವರು ನಾವು ಈ ಪದ್ಧತಿಗಳನ್ನು ಅನುಸರಿಸದ ಕಾರಣ ನಮಗೆ ಕೆಡುಕಾಗುತ್ತಿದೆಯೆಂದು ಹೇಳುತ್ತಿದ್ದರು. ಒಮ್ಮೊಮ್ಮೆ  ಅವರು ನಮ್ಮನ್ನು ದೂಋವಿಡುತ್ತಿದ್ದರು. ಕಳೆದ ಕೆಲವು ವರ್ಷಗಳ ಈಚೆಗೆ, ಕಾನೂನಿನ ಭಯದಿಂದಾಗಿ ಜನರು ನಮ್ಮನ್ನು ನಿರ್ಲಕ್ಷಿಸುವುದನ್ನು ನಿಲ್ಲಿಸಿದ್ದಾರೆ” ಎಂದು ಜಯಲಕ್ಷ್ಮಮ್ಮ ಹೇಳುತ್ತಾರೆ. ಅವರ ಪತಿ, 60 ವರ್ಷದ ಕುಳ್ಳ ಕರಿಯಪ್ಪ  ಅವರು ನಿವೃತ್ತ ಕಾಲೇಜು ಉಪನ್ಯಾಸಕರಾಗಿದ್ದು, ಎಂ.ಎ-ಬಿ.ಎಡ್ ಪದವಿಗಳನ್ನು ಪಡೆದಿದ್ದಾರೆ. “ಗ್ರಾಮಸ್ಥರು ನನ್ನನ್ನು ಪ್ರಶ್ನಿಸಿದಾಗ ಮತ್ತು ಸಂಪ್ರದಾಯವನ್ನು ಅನುಸರಿಸುವಂತೆ ಹೇಳಿದಾಗ, ನಾನು ಶಿಕ್ಷಕನಾಗಿರುವುದರಿಂದ ಈ ರೀತಿ ವರ್ತಿಸಲು ಸಾಧ್ಯವಿಲ್ಲವೆಂದು ಹೇಳಿದೆ. ನಮ್ಮ ಹೆಣ್ಣುಮಕ್ಕಳು ಯಾವಾಗಲೂ ತ್ಯಾಗ ಮಾಡಬೇಕು ಎಂದು ನಂಬುವುವಂತೆ ಅವರನ್ನು ತರಬೇತುಗೊಳಿಸಲಾಗಿದೆ,” ಎಂದು ಅವರು ಸಿಟ್ಟಿನಿಂದ ಹೇಳುತ್ತಾರೆ.

ಜಯಲಕ್ಷ್ಮಮ್ಮ ಅವರಂತೆಯೇ, ಅರಳಾಳಸಂದ್ರದ ಇಬ್ಬರು ಮಕ್ಕಳ ತಾಯಿ 30 ವರ್ಷದ ಅಮೃತ (ಅವರ ನಿಜವಾದ ಹೆಸರಲ್ಲ) ಕೂಡ ಈ ಬಲವಂತದ ಪ್ರತ್ಯೇಕ ವಾಸವನ್ನು ನಿಲ್ಲಿಸಲು ಬಯಸುತ್ತಾರೆ. “ಮೇಲಿನಿಂದ ಯಾರಾದರೂ (ಅಧಿಕಾರಿಗಳು ಅಥವಾ ರಾಜಕಾರಣಿಗಳು) ನಮ್ಮ ಗ್ರಾಮದ ಹಿರಿಯರಿಗೆ ತಿಳಿಸಿ ಹೇಳಬೇಕಿದೆ. ಅಲ್ಲಿಯವರೆಗೆ ನನ್ನ ಐದು ವರ್ಷದ ಮಗಳು ಇದನ್ನು ಅನುಸರಿಸುವಂತೆ [ಅವಳು ದೊಡ್ಡವಳಾದಾಗ] ಮಾಡಲಾಗುತ್ತದೆ. ಈ ಪದ್ಧತಿಯನ್ನು ಅನುಸರಿಸುವಂತೆ ಅವಳಿಗೇ ನಾನೇ ಹೇಳಬೇಕಾಗುತ್ತದೆ. ನನ್ನೊಬ್ಬಳಿಂದಲೇ ಈ ಆಚರಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.”

ಪರಿ ಮತ್ತು ಕೌಂಟರ್‌ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಈ ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.

ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು [email protected] ಗೆ ಇ-ಮೇಲ್‌ ಬರೆಯಿರಿ. ccಯನ್ನು [email protected] ruralindiaonline.orgಈ ವಿಳಾಸಕ್ಕೆ ಸೇರಿಸಿ

ಅನುವಾದ: ಶಂಕರ ಎನ್. ಕೆಂಚನೂರು

Tamanna Naseer

تمنا نصیر بنگلورو میں مقیم ایک آزاد صحافی ہیں۔

کے ذریعہ دیگر اسٹوریز Tamanna Naseer
Illustration : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Editor and Series Editor : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru