“ಶಾಲೆಯಲ್ಲಿ ಎರಡನೇ ಸಲ ಬಡಿಸುವಂತಿದ್ದರೆ ಚಂದವಿರುತ್ತಿತ್ತು.”

ಏಳು ವರ್ಷದ ಬಸವರಾಜು ತೆಲಂಗಾಣದ ಸೆರಿಲಿಂಗಂಪಲ್ಲಿ ಮಂಡಲದ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾನೆ. ರಂಗಾ ರೆಡ್ಡಿ ಜಿಲ್ಲೆಯಲ್ಲಿರುವ ಈ ಶಾಲೆಯು ದೇಶಾದ್ಯಂತ ಇರುವ 11.2 ಲಕ್ಷ ಶಾಲೆಗಳಲ್ಲಿ ಒಂದಾಗಿದೆ, ಅಲ್ಲಿ ಮಕ್ಕಳಿಗೆ ಬಿಸಿ ಬಿಸಿ ಬೇಯಿಸಿದ ಆಹಾರವನ್ನು ನೀಡಲಾಗುತ್ತದೆ. ಶಾಲೆಗೆ ಹೋಗುವ ಮೊದಲು ಕೇವಲ ಒಂದು ಲೋಟ ಗಂಜಿ  ಕುಡಿಯುವ ಬಸವರಾಜುವಿನ ಸಹಪಾಠಿ 10 ವರ್ಷದ ಅಂಬಿಕಾಳ ಪಾಲಿಗೆ ಇದು ದಿನದ ಮೊದಲ ಊಟವಾಗಿದೆ.

ಭಾರತದ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಸರ್ವ ಶಿಕ್ಷಣ ಅಭಿಯಾನದ ಬೆಂಬಲಿತ ಸರ್ಕಾರಿ ಕಲಿಕಾ ಕೇಂದ್ರಗಳಲ್ಲಿ ಓದುತ್ತಿರುವ 1ರಿಂದ 8ನೇ ತರಗತಿಯ ಸುಮಾರು 118 ಮಿಲಿಯನ್ ವಿದ್ಯಾರ್ಥಿಗಳಿಗೆ ಕೆಲಸದ ದಿನಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಆಹಾರವನ್ನು ನೀಡುತ್ತದೆ. ಪೂರ್ಣ ಹೊಟ್ಟೆಯು ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಮತ್ತು ಕಾಗುಣಿತಗಳೊಂದಿಗಿನ ಕುಸ್ತಿಯನ್ನು ಸುಲಭಗೊಳಿಸುತ್ತದೆ ಎಂದು ಯಾರೂ ವಾದಿಸಲು ಸಾಧ್ಯವಿಲ್ಲ, ಆದರೆ ಮಧ್ಯಾಹ್ನದ ಊಟವು ಪ್ರಾಥಮಿಕವಾಗಿ ಮಕ್ಕಳನ್ನು ಶಾಲೆಗೆ ಕರೆತರುತ್ತದೆ ಎಂದು ನಿರೀಕ್ಷಿಸಲಾಗಿದೆ. (ಭಾರತದಲ್ಲಿ ಕನಿಷ್ಠ 150 ಮಿಲಿಯನ್ ಮಕ್ಕಳು ಮತ್ತು ಯುವಕರು ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.)

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಜೋಧ್ಗಡ್ ಗ್ರಾಮದ ರಾಜ್ಕಿಯಾ ಪ್ರಥಮ್ ವಿದ್ಯಾಲಯ ಎಂಬ ಶಾಲೆಗೆ ಭೇಟಿ ನೀಡಿದಾಗ ಆ ಶಾಲೆಯ ಹತ್ತು ವರ್ಷದ ದಕ್ಷ್ ಭಟ್ ಶಾಲೆಗೆ ಬರುವ ಮೊದಲು ಕೆಲವು ಬಿಸ್ಕತ್ತುಗಳನ್ನು ಮಾತ್ರ ಸೇವಿಸಿದ್ದನು. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ, ಅಲಿಶಾ ಬೇಗಂ ಶಾಲೆಗೆ ಹೊರಡುವ ಮೊದಲು ರೊಟ್ಟಿ ತಿಂದು ಕಪ್ಪು ಚಹಾವನ್ನು ಕುಡಿದು ಬಂದಿರುವುದಾಗಿ ಹೇಳುತ್ತಾಳೆ, ಅವಳು ಸಂಖ್ಯೆ 858 ನಿಜ್ ಖಗಾಟಾ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾಳೆ. ಅವಳ ತಂದೆ ಬೀದಿಬದಿ ವ್ಯಾಪಾರಿ ಮತ್ತು ತಾಯಿ ಗೃಹಿಣಿ.

Basavaraju
PHOTO • Amrutha Kosuru
Ambica
PHOTO • Amrutha Kosuru
Daksh Bhatt

ಬಸವರಾಜು (ಎಡಕ್ಕೆ) ಮತ್ತು ಅಂಬಿಕಾ (ನಡುವೆ) ತಮ್ಮ ಶಾಲಾ ಊಟವನ್ನು ಆನಂದಿಸುತ್ತಾರೆ, ವಿಶೇಷವಾಗಿ ಅವರಿಗೆ ಮೊಟ್ಟೆಯನ್ನು ಬಡಿಸುವ ದಿನಗಳಂದು. ದಕ್ಷ ಭಟ್ (ಬಲಗಡೆ) ದಿನದ ಮೊದಲ ಊಟವನ್ನು ತಿನ್ನುತ್ತಿದ್ದಾನೆ; ಅವನ ಪಾಲಿಗೆ ಉಪಾಹಾರವೆಂದರೆ ಕೇವಲ ಕೆಲವು ಬಿಸ್ಕತ್ತುಗಳು ಮಾತ್ರ

ಪ್ರಾಥಮಿಕ ಶಾಲೆಗೆ (1-5 ನೇ ತರಗತಿ) 480 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಮತ್ತು ಹಿರಿಯ ಪ್ರಾಥಮಿಕ (6-8 ನೇ ತರಗತಿ)ಗೆ 720 ಕ್ಯಾಲೋರಿಗಳು ಮತ್ತು 20 ಗ್ರಾಂ ಪ್ರೋಟೀನ್ ಅಂಶವನ್ನು ಒಳಗೊಂಡಿರುವ ಶಾಲಾ ಊಟವು ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮಕ್ಕಳಿಗೆ ಅಗತ್ಯವಾಗಿದೆ.

ಬೆಂಗಳೂರು ನಗರದ ಪಟ್ಟಣಗೆರೆ ಬಡಾವಣೆಯ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ಎನ್.ಸುಗುಣಾ ಅವರು, "ಒಬ್ಬರು ಅಥವಾ ಇಬ್ಬರು ಮಕ್ಕಳನ್ನು ಹೊರತುಪಡಿಸಿ, ಉಳಿದವರೆಲ್ಲರೂ ಶಾಲೆಯಲ್ಲಿ ಉಚಿತ ಊಟವನ್ನು ತಿನ್ನುತ್ತಾರೆ," ಎನ್ನುತ್ತಾರೆ. ಇವರು ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ವಲಸೆ ಕಾರ್ಮಿಕರ ಮಕ್ಕಳು, ಈ ಮಕ್ಕಳ ಪೋಷಕರು ಬೆಂಗಳೂರು ನಗರದ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ.

2021ರಲ್ಲಿ 'ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್' ಅಥವಾ 'ಪಿಎಂ ಪೋಷಣ್' ಎಂದು ಮರುನಾಮಕರಣ ಮಾಡಲಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯು "ದಾಖಲಾತಿ, ಧಾರಣೆ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು ಮತ್ತು ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಏಕಕಾಲದಲ್ಲಿ ಸುಧಾರಿಸುವ" ಗುರಿಯನ್ನು ಹೊಂದಿದೆ. 1995ರಿಂದ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಕಾರ್ಯಕ್ರಮವಾದ ಇದನ್ನು ಭಾರತದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಜಾರಿಗೆ ತರಲಾಗುತ್ತಿದೆ. ಛತ್ತೀಸಗಢದ ರಾಯ್ಪುರ ಜಿಲ್ಲೆಯ ಮಟಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಮುಖ್ಯೋಪಾಧ್ಯಾಯರಾದ ಪೂನಮ್ ಜಾಧವ್ ಅವರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮಧ್ಯಾಹ್ನದ ಊಟವನ್ನು ತಿನ್ನುವುದನ್ನು ನೋಡಿ ಖುಷಿಯಿಂದ ನಗುತ್ತಾರೆ. "ಕೆಲವೇ ಕೆಲವು ಪೋಷಕರು ತಮ್ಮ ಮಕ್ಕಳಿಗೆ ಈ ಊಟವನ್ನು ಭರಿಸಬಲ್ಲರು," ಎಂದು ಅವರು ಹೇಳುತ್ತಾರೆ. "ಈ ಮಧ್ಯಾಹ್ನದ ಊಟದ ಸೌಂದರ್ಯವೆಂದರೆ ಅವರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ, ಇದನ್ನು ಮಕ್ಕಳು ಹೆಚ್ಚು ಆನಂದಿಸುತ್ತಾರೆ."

ಊಟವನ್ನು ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ - ಎಣ್ಣೆ ಅಥವಾ ಕೊಬ್ಬು, ಉಪ್ಪು ಮತ್ತು ಮಸಾಲೆಗಳೊಂದಿಗೆ ಬೇಯಿಸಲಾಗುತ್ತದೆ - ಅನೇಕ ರಾಜ್ಯಗಳು ಪೂರಕ ಪೌಷ್ಠಿಕಾಂಶ ವಸ್ತುಗಳು ಸೇರಿದಂತೆ ಮೆನುವಿನಲ್ಲಿ ತಮ್ಮದೇ ಆದ ರುಚಿಗಳನ್ನು ಸೇರಿಸಿವೆ ಎಂದು ಶಿಕ್ಷಣ ಸಚಿವಾಲಯದ 2015ರ ವರದಿ ಹೇಳುತ್ತದೆ. ಜಾರ್ಖಂಡ್, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಮೊಟ್ಟೆಗಳು ಮತ್ತು ಬಾಳೆಹಣ್ಣುಗಳನ್ನು ಸೇರಿಸಿದ್ದರೆ, ಕರ್ನಾಟಕವು ಒಂದು ಲೋಟ ಹಾಲನ್ನು (ಮತ್ತು ಈ ವರ್ಷ ಮೊಟ್ಟೆಗಳನ್ನು) ನೀಡುತ್ತದೆ. ಛತ್ತೀಸ್ ಗಢ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳು ಅಡುಗೆಮನೆಯಲ್ಲಿ ತಯಾರಾಗುವ ಊಟಕ್ಕೆ ಸೇರಿಸಬಹುದಾದ ತರಕಾರಿಗಳನ್ನು ಕೈತೋಟಗಳಲ್ಲಿ ಬೆಳೆಯಲು ಪ್ರೋತ್ಸಾಹಿಸುತ್ತವೆ. ಗೋವಾದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಆಹಾರವನ್ನು ಪೂರೈಸುತ್ತಿದ್ದರೆ, ಮಣಿಪುರ ಮತ್ತು ಉತ್ತರಾಖಂಡ್ ಪೋಷಕರನ್ನು ಸಹಾಯ ಮಾಡಲು ಪ್ರೋತ್ಸಾಹಿಸುತ್ತವೆ. ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ, ಸ್ಥಳೀಯ ಸಮುದಾಯವು ಸ್ವಯಂಪ್ರೇರಿತವಾಗಿ ಊಟದೊಡನೆ ಸೇರಿಸಲು ಪೌಷ್ಟಿಕ ವಸ್ತುಗಳನ್ನು ಪೂರೈಸುತ್ತದೆ.

Children from Kamar community at the Government Primary School in Footahamuda village, Chhattisgarh.
PHOTO • Purusottam Thakur
Their mid-day meal of rice, dal and vegetable
PHOTO • Purusottam Thakur

ಎಡ: ಛತ್ತೀಸಗಡದ ಫೂತಹಮುದಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಮಾರ್ ಸಮುದಾಯದ ಮಕ್ಕಳು. ಬಲ: ಅವರ ಮಧ್ಯಾಹ್ನ ಊಟದ ಅನ್ನ, ಬೇಳೆ ಮತ್ತು ತರಕಾರಿ

Kirti (in the foreground) is a student of Class 3 at the government school in Footahamuda.
PHOTO • Purusottam Thakur
The school's kitchen garden is a source of vegetables
PHOTO • Purusottam Thakur

ಎಡ: ಕೀರ್ತಿ (ಮುಂಭಾಗದಲ್ಲಿ) ಫೂತಹಮುಡಾದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿ. ಬಲ: ಶಾಲೆಯ ಕಿಚನ್ ಗಾರ್ಡನ್ ತರಕಾರಿಗಳ ಮೂಲವಾಗಿದೆ

ಛತ್ತೀಸ್ಗಢದ ಫೂತಹಮುಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಎಲ್ಲಾ 10 ವಿದ್ಯಾರ್ಥಿಗಳು ಕಮಾರ್ ಸಮುದಾಯಕ್ಕೆ ಸೇರಿದವರಾಗಿದ್ದು, ರಾಜ್ಯದಲ್ಲಿ ಈ ಸಮುದಾಯವನ್ನು ಪಿವಿಟಿಜಿ (ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು) ಎಂದು ಪಟ್ಟಿ ಮಾಡಲಾಗಿದೆ. "ಕಮಾರರು ಪ್ರತಿದಿನ ಅರಣ್ಯ ಉತ್ಪನ್ನಗಳನ್ನು ಮತ್ತು ಇಂಧನಕ್ಕಾಗಿ ಕಟ್ಟಿಗೆಯನ್ನು ಸಂಗ್ರಹಿಸಲು ಕಾಡಿಗೆ ಹೋಗುತ್ತಾರೆ. ಅವರ ಮಕ್ಕಳು ಶಾಲೆಯಲ್ಲಿ ಆಹಾರವನ್ನು ಸೇವಿಸುತ್ತಾರೆ ಮತ್ತು ಓದುತ್ತಾರೆ ಎಂದು ಅವರಿಗೆ ಭರವಸೆ ನೀಡಲಾಗಿದೆ," ಎಂದು ಧಮ್ತಾರಿ ಜಿಲ್ಲೆಯ ನಗ್ರಿ ಬ್ಲಾಕ್ ಪ್ರದೇಶದಲ್ಲಿರುವ ಈ ಸಣ್ಣ ಶಾಲೆಯ ಉಸ್ತುವಾರಿ ನೋಡಿಕೊಳ್ಳುವ ಏಕೈಕ ಶಿಕ್ಷಕರಾದ ರುಬಿನಾ ಅಲಿ ಹೇಳುತ್ತಾರೆ.

ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳಯಂ ತಾಲ್ಲೂಕಿನ ತಲೈಮಲೈ ಗ್ರಾಮದ ಸರ್ಕಾರಿ ಸ್ವಾಮ್ಯದ ಬುಡಕಟ್ಟು ವಸತಿ ಶಾಲೆಯಲ್ಲಿ ತಮಿಳುನಾಡಿನ ಸತ್ಯಮಂಗಲಂ ಎಂಬ ಮತ್ತೊಂದು ಅರಣ್ಯ ಪ್ರದೇಶದಲ್ಲಿ, 160 ಮಕ್ಕಳು, ಹೆಚ್ಚಾಗಿ ಸೋಲಿಗ ಮತ್ತು ಇರುಳ ಸಮುದಾಯಗಳಿಗೆ (ಇಬ್ಬರೂ ಪರಿಶಿಷ್ಟ ಪಂಗಡದವರು) ಸೇರಿದವರು, ಇವರು ಅನ್ನ-ಸಾಂಬಾರ್‌ ಮತ್ತು ಆಗಾಗ ಸಿಗುವ ಮೊಟ್ಟೆ ಸಾರಿನ ರುಚಿಯನ್ನು ಆನಂದಿಸುತ್ತಾರೆ.

2021-22ರಿಂದ 2025-26ರವರೆಗೆ ಪಿಎಂ-ಪೋಷಣ್ಗಾಗಿ ಒಟ್ಟು 130,794 ಕೋಟಿ ರೂ.ಗಳ ವೆಚ್ಚವಾಗಲಿದೆ - ಕೇಂದ್ರ ಮತ್ತು ರಾಜ್ಯಗಳು ಈ ಖರ್ಚನ್ನು ಹಂಚಿಕೊಂಡಿವೆ. ನಿಧಿ ವಿತರಣೆ ಮತ್ತು ಆಹಾರ ಧಾನ್ಯಗಳ ವರ್ಗಾವಣೆ - ಆರು ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು - ಕೆಲವೊಮ್ಮೆ ದೋಷಗಳನ್ನೂ, ಇದರಿಂದಾಗಿ ಶಿಕ್ಷಕರು ಮತ್ತು ಅಡುಗೆಯವರು ಮಾರುಕಟ್ಟೆಯಿಂದ ಆಹಾರ ಧಾನ್ಯಗಳನ್ನು ಖರೀದಿಸುತ್ತಾರೆ. ಹರಿಯಾಣದ ಇಗ್ರಾ ಗ್ರಾಮದಲ್ಲಿ ಸರ್ಕಾರಿ ಸ್ವಾಮ್ಯದ ಶಹೀದ್ ಹವಾಲ್ದಾರ್ ರಾಜ್‌ಕುಮಾರ್ ಆರ್‌ವಿಎಂ ವಿದ್ಯಾಲಯದ ಶಿಕ್ಷಕರೊಬ್ಬರು ಪರಿಗೆ ಈ ವಿಷಯ ತಿಳಿಸಿದರು, "ಈ ರೀತಿಯಾದಾಗ, ಮಕ್ಕಳು ಹಸಿವಿನಿಂದ ಬಳಲದಂತೆ ನಾವು ಶಿಕ್ಷಕರು ಕೊಡುಗೆ ನೀಡುತ್ತೇವೆ," ಎಂದು ಹೇಳಿದರು. ಹರಿಯಾಣದ ಜಿಂದ್ ಜಿಲ್ಲೆಯ ಈ ಶಾಲೆಯು ಮರ ಕಡಿಯುವವರು, ದಿನಗೂಲಿ ಕಾರ್ಮಿಕರು, ಇಟ್ಟಿಗೆ ಗೂಡು ಕಾರ್ಮಿಕರು ಮತ್ತು ಇತರರ ಮಕ್ಕಳಿಗೆ ಪುಲಾವ್, ದಾಲ್ ಮತ್ತು ಅನ್ನ ಮತ್ತು ರಾಜ್ಮಾ ಅನ್ನವನ್ನು ಪೂರೈಸುತ್ತದೆ.

ಭಾರತದ ಬಡ ಮಕ್ಕಳಿಗೆ ಆಹಾರ ನೀಡುವ ಕಾರ್ಯಕ್ರಮವು ಮುಂಚಿತವಾಗಿಯೇನೂ ಬಂದಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್-5 ) ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 32ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಶೇಕಡಾ 69ರಷ್ಟು ಸಾವುಗಳಿಗೆ ಅಪೌಷ್ಟಿಕತೆ ಕಾರಣವಾಗಿದೆ ಎಂದು 2019ರ ಯುನಿಸೆಫ್ ವರದಿ ಹೇಳಿದೆ.

PHOTO • Ritayan Mukherjee
PHOTO • Ritayan Mukherjee

ದೀಪಾವಳಿ ರಜೆಯ ಸಮಯದಲ್ಲಿಯೂ, ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ 2ನೇ ಬ್ಲಾಕ್‌ ಪ್ರದೇಶದಲ್ಲಿರುವ ಧೋಪಬೆರಿಯಾ ಶಿಶು ಸ್ಕಿಖಾ ಕೇಂದ್ರಕ್ಕೆ ಅಂಧುಲ್ ಪೋಟಾ ಗ್ರಾಮದ (ಎಡ) ಮಕ್ಕಳು ತಮ್ಮ ಊಟವನ್ನು ತೆಗೆದುಕೊಳ್ಳಲು ಬರುತ್ತಿರುವುದು. ರೋನಿ ಸಿಂಘ (ಬಲಗಡೆ) ತನ್ನ ಪಾಲಿನ ಕಿಚಡಿ ಪಡೆಯಲು ಬಂದಿದ್ದನು

ರಜಾದಿನಗಳಲ್ಲಿಯೂ ಸಹ, ಎಂಟು ವರ್ಷದ ರೋನಿ ಸಿಂಘಾ ತನ್ನ ತಾಯಿಯೊಂದಿಗೆ ಪಶ್ಚಿಮ ಬಂಗಾಳದ ಅಂಡುಲ್ ಪೋಟಾ ಗ್ರಾಮದಲ್ಲಿರುವ ಧೋಪಬೇರಿಯಾ ಶಿಶು ಸ್ಕಿಖಾ ಕೇಂದ್ರಕ್ಕೆ ತನ್ನ ಪಾಲಿನ ಖಿಚಡಿಯನ್ನು ತೆಗೆದುಕೊಳ್ಳಲು ಏಕೆ ಬರುತ್ತಾನೆ ಎಂಬುದನ್ನು ಯೋಚಿಸಿದಾಗ ಹಸಿವೆನ್ನುವ ಭಯಾನಕ ಸಂಗತಿಯ ಆಳ ಅಗಲ ಅರ್ಥವಾಗುತ್ತದೆ. ಸ್ಥಳೀಯರು ಈ ಶಾಲೆಯನ್ನು 'ಕಿಚಡಿ ಶಾಲೆ' ಎಂದು ಕರೆಯುತ್ತಾರೆ, ಮತ್ತು ಸುಮಾರು 70 ಮಕ್ಕಳು ಇಲ್ಲಿನ ಹಾಜರಿ ಪಟ್ಟಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಈ ಶಾಲೆಗೆ ಪರಿ ಅಕ್ಟೋಬರ್ ಕೊನೆಯಲ್ಲಿ ಭೇಟಿ ನೀಡಿದಾಗ, ದೀಪಾವಳಿ ರಜಾದಿನಗಳಿಗಾಗಿ ಶಾಲೆಯನ್ನು ಮುಚ್ಚಲಾಗಿತ್ತು - ಆದರೆ ಮಕ್ಕಳು ಆಹಾರ ತಿನ್ನಲು ಅಥವಾ ತಮ್ಮ ದೈನಂದಿನ ಊಟವನ್ನು ತೆಗೆದುಕೊಳ್ಳಲು ಅಲ್ಲಿಗೆ ಬರುತ್ತಿದ್ದರು.

ಹೆಚ್ಚಿನ ಮಕ್ಕಳು ಸೌಲಭ್ಯವಂಚಿತ ಹಿನ್ನೆಲೆಯಿಂದ ಬಂದವರು ಮತ್ತು ಅವರ ಪೋಷಕರು ಸ್ಥಳೀಯ ಮೀನುಗಾರಿಕೆ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಾರೆ. ರೋನಿಯ ತಾಯಿ (ತನ್ನ ಹೆಸರನ್ನು ಹಂಚಿಕೊಳ್ಳಲು ಬಯಸದ) "ಸಾಂಕ್ರಾಮಿಕ ರೋಗದ ಸಮಯದಲ್ಲಿ [ಕೋವಿಡ್ -19] ಶಾಲೆ ನಮ್ಮ ಪಾಲಿಗೆ ಉತ್ತಮ ಬೆಂಬಲವಾಗಿತ್ತು, ಏಕೆಂದರೆ ಅವರು ನಿಯಮಿತವಾಗಿ ಬೇಯಿಸಿದ ಆಹಾರವನ್ನು ಪೂರೈಸುತ್ತಿದ್ದರು," ಎಂದು ಹೇಳಿದರು.

ಮಾರ್ಚ್ 2020ರಲ್ಲಿ ಕೋವಿಡ್ -19 ಅಪ್ಪಳಿಸಿದಾಗ, ಹಲವಾರು ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ನಿಲ್ಲಿಸಲಾಯಿತು. ಶಾಲೆಗಳನ್ನು ಮುಚ್ಚಿದ್ದರಿಂದ ಲಕ್ಷಾಂತರ ಮಕ್ಕಳು ಇದರಿಂದ ಬಾಧಿತರಾದರು; ಕರ್ನಾಟಕದಲ್ಲಿ, ಮಧ್ಯಾಹ್ನದ ಊಟವು ಶಿಕ್ಷಣದ ಮೂಲಭೂತ ಹಕ್ಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಉಚ್ಚ ನ್ಯಾಯಾಲಯವು ತೀರ್ಪು ನೀಡಿತು.

ಐಶ್ವರ್ಯಾ ತೆಲಂಗಾಣದ ಗಚಿಬೌಲಿ ಬಳಿಯ ಕಡಿಮೆ ಆದಾಯದ ವಸತಿ ಪ್ರದೇಶವಾದ ಪಿ.ಜನಾರ್ದನ ರೆಡ್ಡಿ ನಗರದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ. ಅವಳ ತಂದೆ ರಂಗಾ ರೆಡ್ಡಿ ಜಿಲ್ಲೆಯ ನಿರ್ಮಾಣ ಸ್ಥಳಗಳಲ್ಲಿ ದಿನಗೂಲಿ ಕಾರ್ಮಿಕ ಮತ್ತು ತಾಯಿ ಮನೆಗೆಲಸ ಮಾಡುತ್ತಾರೆ. ಹಸಿದ ಒಂಭತ್ತು ವರ್ಷದ ಮಗು ಹೇಳುತ್ತದೆ, "ಶಾಲೆಯಲ್ಲಿ ಪ್ರತಿದಿನ ಮೊಟ್ಟೆಗಳನ್ನು ಪೂರೈಸಿದರೆ ಚೆನ್ನಾಗಿರುತ್ತದೆ. ಅವರು ನಮಗೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ನೀಡಿದರೆ ಇನ್ನೂ ಚಂದ."

ಜನಸಾಮಾನ್ಯರಿಗೆ ಆಹಾರವನ್ನು ನೀಡುವಲ್ಲಿ ಅದರ ಪ್ರಮುಖ ಪಾತ್ರದ ಹೊರತಾಗಿಯೂ, ಮಧ್ಯಾಹ್ನದ ಬಿಸಿಯೂಟ ಯೋಜನೆಯು ಭ್ರಷ್ಟಾಚಾರ, ಕಲಬೆರಕೆ, ಕಳಪೆ ಗುಣಮಟ್ಟ ಮತ್ತು ವೈವಿಧ್ಯಮಯ ಆಹಾರ ಮತ್ತು ಜಾತಿ-ತಾರತಮ್ಯದಿಂದ ಬಳಲುತ್ತಿದೆ. ಗುಜರಾತ್ ಮತ್ತು ಉತ್ತರಾಖಂಡದಲ್ಲಿ, ದಲಿತ ಅಡುಗೆಯವರು ತಯಾರಿಸಿದ ಆಹಾರವನ್ನು ಕಳೆದ ವರ್ಷ ಮೇಲ್ಜಾತಿಯ ವಿದ್ಯಾರ್ಥಿಗಳು ಬಹಿಷ್ಕರಿಸಿದರು, ಇದು ಒಂದು ಸಂದರ್ಭದಲ್ಲಿ ದಲಿತ ಅಡುಗೆಯವರೊಬ್ಬರನ್ನು ಕೆಲಸದಿಂದ ತೆಗೆದುಹಾಕಲು ಕಾರಣವಾಯಿತು.

PHOTO • Amrutha Kosuru
PHOTO • M. Palani Kumar

ಎಡ: ಐಶ್ವರ್ಯಾ ತೆಲಂಗಾಣದ ಸೆರಿಲಿಂಗಂಪಲ್ಲಿ ಮಂಡಲದಲ್ಲಿರುವ ತನ್ನ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚು ಮೊಟ್ಟೆಗಳನ್ನು ನೀಡಬೇಕೆಂದು ಬಯಸುತ್ತಾಳೆ. ಬಲ: ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಪ್ರದೇಶದಲ್ಲಿರುವ ತಲೈಮಾಲಿ ಬುಡಕಟ್ಟು ವಸತಿ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ

ಕರ್ನಾಟಕದಲ್ಲಿ, 2015-16 ಮತ್ತು 2019-20ರ ನಡುವೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೌಷ್ಟಿಕಾಂಶ ಕೊರತೆಯುಳ್ಳ ಮಕ್ಕಳ ಸಂಖ್ಯೆ ಕೇವಲ ಒಂದು ಪ್ರತಿಶತದಷ್ಟು ಕಡಿಮೆಯಾಗಿದೆ - 36ರಿಂದ 35 ಪ್ರತಿಶತಕ್ಕೆ ( ಎನ್ಎಫ್ಎಚ್ಎಸ್ -5 ). ಇದಲ್ಲದೆ, 2020ರ ಸರ್ಕಾರಿ ವರದಿಯು ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆಯ ಬಗ್ಗೆ ಗಮನ ಸೆಳೆಯಿತು. ಆದರೆ ರಾಜಕೀಯ ಪಕ್ಷಗಳು ಮಧ್ಯಾಹ್ನದ ಮಕ್ಕಳ ಊಟದ ತಟ್ಟೆಯಲ್ಲಿರುವ ಮೊಟ್ಟೆಗಳು ಸಸ್ಯಾಹಾರಿಯೇ ಅಥವಾ ಅಲ್ಲವೇ ಎನ್ನುವ ಜಗಳದಲ್ಲಿ ತೊಡಗಿವೆ.

ದೇಶದಲ್ಲಿ ಪೌಷ್ಠಿಕಾಂಶದ ಬಿಕ್ಕಟ್ಟನ್ನು ಗಮನಿಸಿದರೆ, 6.16 ಲಕ್ಷ ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಶಾಲೆಗಳನ್ನು ಏಕೆ ಮುಚ್ಚಲಾಗುತ್ತಿದೆ ಎಂದು ಆಶ್ಚರ್ಯವಾಗುತ್ತದೆ. ಇದು ಭಾರತದ ಎಲ್ಲಾ ಅಪೌಷ್ಟಿಕ ಮಕ್ಕಳ ಸಂಖ್ಯೆಯ ಐದನೇ ಒಂದು ಭಾಗಕ್ಕಿಂತ ಸ್ವಲ್ಪ ಕಡಿಮೆ. ಅಹ್ಮದ್ ನಗರ ಜಿಲ್ಲೆಯ ಗುಂಡೇಗಾಂವ್ ಗ್ರಾಮದಲ್ಲಿರುವ ಅಂತಹ ಒಂದು ಶಾಲೆಯಲ್ಲಿ, ಹೆಚ್ಚಿನ ವಿದ್ಯಾರ್ಥಿಗಳು ಪಾರ್ಧಿ ಸಮುದಾಯಕ್ಕೆ ಸೇರಿದವರು. ಡಿನೋಟಿಫೈಡ್ ಬುಡಕಟ್ಟು ಜನಾಂಗವಾದ ಪಾರ್ಧಿ ಸಮುದಾಯವು ರಾಜ್ಯದ ಅತ್ಯಂತ ಕಡುಬಡವರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ.

"ಶಾಲೆ ಮುಚ್ಚಿದ ನಂತರ, ಈ ಮಕ್ಕಳು [ಶಾಲೆಯಿಂದ] ಹೊರಗುಳಿಯುವುದಲ್ಲದೆ, ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಾರೆ. ಇದು ಬುಡಕಟ್ಟು ಮತ್ತು ಸವಲತ್ತು ವಂಚಿತ ಸಮುದಾಯಗಳಲ್ಲಿ ಅಪೌಷ್ಟಿಕತೆ ಮತ್ತು ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುತ್ತದೆ," ಎಂದು ಪೌತ್ಕವಸ್ತಿ ಗುಂಡೇಗಾಂವ್ ಪ್ರಾಥಮಿಕ ಜಿಲ್ಲಾ ಪರಿಷತ್ ಶಾಲೆಯ ಪ್ರಾಂಶುಪಾಲ ಕುಸಾಲ್ಕರ್ ಜ್ಞಾನದೇವ್ ಗಂಗಾರಾಮ್ ಹೇಳುತ್ತಾರೆ.

ಇಲ್ಲಿನ 15 ಪಾರ್ಧಿ ವಿದ್ಯಾರ್ಥಿಗಳಲ್ಲಿ ಮಂಜುರ್ ಭೋಸಲೆ ಅವರ ಎಂಟು ವರ್ಷದ ಮಗಳು ಭಕ್ತಿ ಕೂಡ ಒಬ್ಬಳು. "ಶಾಲೆಯೂ ಇರಲಿಲ್ಲ, ಊಟವೂ ಇರಲಿಲ್ಲ. ಮೂರು ವರ್ಷಗಳ ಕೊರೊನಾ ಕಾಲ ತುಂಬಾ ಕೆಟ್ಟದಾಗಿತ್ತು," ಎಂದು ಮಂಜೂರ್ ಹೇಳುತ್ತಾರೆ. "ಶಾಲೆಗಳು ಮತ್ತೊಮ್ಮೆ ಮುಚ್ಚಿದರೆ, ನಮ್ಮ ಮಕ್ಕಳು ಹೇಗೆ ಮುಂದುವರಿಯುತ್ತಾರೆ?"

PHOTO • Jyoti
PHOTO • Jyoti

ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಇಗಾಂವ್ ಪ್ರಾಥಮಿಕ ಜಿಲ್ಲಾ ಪರಿಷತ್ ಶಾಲೆ. ಈ ಶಾಲೆಯನ್ನು ಮುಚ್ಚಲಾಗುತ್ತಿದೆ, ಮತ್ತು  ಇದರಿಂದಾಗಿ ಭಟ್ಕಿ ಮತ್ತು ಅವಳಂತಹ ಇತರರು ತಮ್ಮ ಶಾಲಾ ಊಟವನ್ನು ಕಳೆದುಕೊಳ್ಳುತ್ತಾರೆ


PHOTO • Jyoti

'ಶಾಲೆ ಮುಚ್ಚಿದ ನಂತರ, ಈ ಮಕ್ಕಳು ಶಾಲೆಯಿಂದ ಹೊರಗುಳಿಯುವುದಲ್ಲದೆ, ಪೌಷ್ಠಿಕ ಆಹಾರದಿಂದ ಲೂ ವಂಚಿತರಾಗುತ್ತಾರೆ ,' ಎಂದು ಗುಂಡೇಗಾಂವ್ ಶಾಲೆಯ ಪ್ರಾಂಶುಪಾಲ ಕುಸಾಲ್ಕರ್ ಜ್ಞಾನದೇವ್ ಗಂಗಾರಾಮ್ ಹೇಳುತ್ತಾರೆ


PHOTO • Amir Malik

ಹರಿಯಾಣದ ಜಿಂದ್ ಜಿಲ್ಲೆಯಲ್ಲಿ, ಶಾಲಾ ಊಟದ ಹಣ ಬರುವುದು ವಿಳಂಬವಾದಾಗ, ಇಗ್ರಾ ಗ್ರಾಮದ ಶಹೀದ್ ಹವಾಲ್ದಾರ್ ರಾಜ್ ಕುಮಾರ್ ಆ ರ್‌ವಿ ಎಂ ವಿದ್ಯಾಲಯದ ಶಿಕ್ಷಕರು ಮಕ್ಕಳು ಹಸಿವಿನಿಂದ ಬಳಲದಂತೆ ಆಹಾರ ತಯಾರಿಕೆಯ ಖರ್ಚುಗಳಿಗೆ ಕೊಡುಗೆ ನೀಡುತ್ತಾರೆ


PHOTO • Amir Malik

ಇಗ್ರಾದ ಶಹೀದ್ ಹವಾಲ್ದಾರ್ ರಾಜ್ ಕುಮಾರ್ ಆರ್‌ವಿಎಂ ವಿದ್ಯಾಲಯದ ವಿದ್ಯಾರ್ಥಿ ಶಿವಾನಿ ನಫ್ರಿಯಾ ತನ್ನ ಶಾಲಾ ಊಟವನ್ನು ತೋರಿಸುತ್ತಿ ರುವುದು


PHOTO • Amir Malik

ಶಹೀದ್ ಹವಾಲ್ದಾರ್ ರಾಜ್ ಕುಮಾರ್ ಆ ರ್‌ ವಿಎಂ.ವಿದ್ಯಾಲಯದ ಮಕ್ಕ ಳೊಡನೆ ಊಟ ಮಾಡುತ್ತಿದ್ದಾರೆ


PHOTO • Purusottam Thakur

ಛತ್ತೀಸ್ಗಢದ ಮಟಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಮುಗಿ ಸಿದ ಯಶ್, ಕುನಾಲ್ ಮತ್ತು ಜಗೇಶ್


PHOTO • Purusottam Thakur

ರಾಯ್ಪುರ ಜಿಲ್ಲೆಯ ಮಟಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಊಟದ ನಂತರ ತರಗತಿಗೆ ಹಿಂತಿರುಗುತ್ತಿ ರುವುದು


PHOTO • Purusottam Thakur

ಮಟಿಯಾದ ಶಾಲೆಯಲ್ಲಿ ಮಧ್ಯಾಹ್ನದ ಊಟ ಕ್ಕೆ ಅನ್ನ, ಬೇಳೆ ಮತ್ತು ತರಕಾರಿ ಗಳನ್ನು ಬಡಿಸಲಾಗುತ್ತದೆ


PHOTO • Purusottam Thakur

ಪಾಖಿ (ಕ್ಯಾಮೆರಾ ನೋ ಡುತ್ತಿರುವ ) ಮತ್ತು ಅವಳ ಸಹಪಾಠಿಗಳು ಛತ್ತೀಸ್ ಗಢದ ಮಟಿಯಾದಲ್ಲಿರುವ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ಊಟದ ನಂತರ ತಮ್ಮ ತಟ್ಟೆಗಳನ್ನು ತೊಳೆಯು ತ್ತಿರುವುದು

PHOTO • Purusottam Thakur

ಛತ್ತೀಸಗಡದ ಧಮ್ತಾರಿ ಜಿಲ್ಲೆಯ ಫೂತಹಮು ಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಕ್ಕಾಗಿ ಕಾಯುತ್ತಿರುವ ಮಕ್ಕಳು


PHOTO • Purusottam Thakur

ಫೂ ಹಮುಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸಲಾಗುತ್ತಿದೆ


PHOTO • Purusottam Thakur

ಫೂತಹಮುಡಾದ ಶಾಲೆಯಲ್ಲಿ ಮಕ್ಕಳು ಒಟ್ಟಿಗೆ ಊಟ ಮಾಡು ತ್ತಿರುವುದು


PHOTO • Amrutha Kosuru
PHOTO • Haji Mohammed

ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಸೆರಿಲಿಂಗಂಪಲ್ಲಿಯಲ್ಲಿರುವ ಮಂಡಲ್ ಪರಿಷದ್ ಪ್ರಾಥಮಿಕ ಶಾಲೆಯ ಮತ್ತು ಹರಿಯಾಣದ ಜಿಂದ್ ಜಿಲ್ಲೆಯ ರಾಜ್ಕಿಯಾ ಪ್ರಾ ಥಮಿಕ್ ವಿದ್ಯಾಲಯ (ಬಲ) ಗೋಡೆಯ ಮೇಲೆ ಮಧ್ಯಾಹ್ನದ ಊಟದ ಮೆನುವನ್ನು ಚಿತ್ರಿಸಲಾಗಿದೆ


PHOTO • Amrutha Kosuru

ಸೆರಿಲಿಂಗಂಪಲ್ಲಿಯ ಮಂಡಲ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ತಯಾರಿಸುವ ಅಡುಗೆಮನೆ


PHOTO • S. Senthalir

ಸಂಜನಾ ಎಸ್. ಬೆಂಗಳೂರಿನ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾ ಳೆ . ಅವ ಳಿಗೆ ಬಿಸಿ ಬೇಳೆ ಬಾತ್ ಎಂದರೆ ಇಷ್ಟ ಮತ್ತು ಯಾವಾಗಲೂ ಊಟವನ್ನು ಎರಡನೇ ಬಾರಿ ಹಾಕಿಸಿಕೊಳ್ಳುತ್ತಾಳೆ


PHOTO • S. Senthalir

ಐಶ್ವರ್ಯ ಚೆನ್ನಪ್ಪ ಮತ್ತು ಅಲಿಜಾ.ಎಸ್. ಬೆಂಗಳೂರಿನ ಪಟ್ಟಣಗೆರೆ ಪ್ರದೇಶದಲ್ಲಿರುವ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಗಳು ಮತ್ತು ಅಕ್ಕಪಕ್ಕದ ಮನೆಯವರು . ಅವರು ಯಾವಾಗಲೂ ಶಾಲೆಯಲ್ಲಿ ಒಟ್ಟಿಗೆ ಊಟ ಮಾಡುತ್ತಾರೆ


PHOTO • Pinku Kumar Das

ಎಡದಿಂದ ಬಲಕ್ಕೆ: ಅಸ್ಸಾಂನ ನಲ್ಬಾರಿ ಜಿಲ್ಲೆಯ 858ನೇ ಸಂಖ್ಯೆಯ ನಿಜ್ ಖಗಾಟಾ ಕಿರಿಯ ಪ್ರಾಥಮಿಕ ಶಾಲೆಯ ಅನಿಶಾ, ರೂಬಿ, ಆಯೇಷಾ ಮತ್ತು ಸಹನಾಜ್ ಮಧ್ಯಾಹ್ನದ ಊಟವನ್ನು ಸೇವಿ ಸುತ್ತಿರುವುದು


PHOTO • Haji Mohammed

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕರೇಡಾ ಬ್ಲಾ ಕಿನ ಲ್ಲಿರುವ ಜೋಧ್ಗಡ್ ಗ್ರಾಮದ ರಾಜ್ಕಿಯಾ ಪ್ರಾಥಮಿಕ ವಿದ್ಯಾಲ ದಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಊಟ ಮಾಡುತ್ತಿ ರುವುದು


PHOTO • M. Palani Kumar

ಈರೋಡ್ ಜಿಲ್ಲೆಯ ತಲೈಮಲೈನ ಬುಡಕಟ್ಟು ವಸತಿ ಶಾಲೆಯ 160 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸೋಲಿಗ ಮತ್ತು ಇರುಳ ಸಮುದಾಯಗಳಿಗೆ ಸೇರಿದವರಾಗಿದ್ದಾರೆ


ವರದಿಯನ್ನು ಛತ್ತೀಸ್ ಗಢದ ಪುರುಷೋತ್ತಮ್ ಠಾಕೂರ್ , ಕರ್ನಾಟಕದ ಸೆಂಥಲಿರ್ ಎಸ್. ತೆಲಂಗಾಣದ ಅಮೃತಾ ಕೋಸೂ ರು; ತಮಿಳುನಾಡಿನ ಎಂ.ಪಳನಿ ಕುಮಾರ್; ಹರ್ಯಾಣದ ಅಮೀರ್ ಮಲಿಕ್; ಅಸ್ಸಾಂನ ಪಿಂಕು ಕುಮಾರ್ ದಾಸ್; ಪಶ್ಚಿಮ ಬಂಗಾಳದ ರಿತಯನ್ ಮುಖರ್ಜಿ; ಮಹಾರಾಷ್ಟ್ರದ ಜ್ಯೋತಿ ಶಿನೋಲಿ; ರಾಜಸ್ಥಾನದ ಹಾಜಿ ಮೊಹಮ್ಮದ್ ವರದಿ ಮಾಡಿದ್ದಾರೆ. ಮತ್ತು ಸಾನ್ವಿತಿ ಅಯ್ಯರ್ ಅವರ ಸಂಪಾದಕೀಯ ಬೆಂಬಲದೊಂದಿಗೆ ಪ್ರೀತಿ ಡೇವಿಡ್ ಮತ್ತು ವಿನುತಾ ಮಲ್ಯ ಅವರು ಸಂಪಾದಿಸಿದ್ದಾರೆ. ಫೋಟೋ ಎಡಿಟಿಂಗ್ ; ಬಿ ನೈಫರ್ ಭ ರೂ ಚಾ.

ಮು ಖ್ಯ ಚಿತ್ರ: ಎಂ.ಪಳನಿ ಕುಮಾರ್

ಅನುವಾದ : ಶಂಕರ . ಎನ್ . ಕೆಂಚನೂರು

PARI Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru