ಗೋದಾವರಿ ತೀರದ ಪ್ರಾಚೀನ ಸ್ನಾನದ ಘಾಟ್ ಒಂದರಲ್ಲಿ, ರಾಮಕುಂದದ ಇರುವ ಜಾಗಗಳಲ್ಲೇ ಅತ್ಯಂತ ಪವಿತ್ರವಾದ ಜಾಗವೊಂದರಲ್ಲಿ ಆತ ಪ್ರಾರ್ಥನೆಯನ್ನು ಮಾಡುತ್ತಿರುವವನಂತೆ, ಧ್ಯಾನಸ್ಥ ಸ್ಥಿತಿಯಲ್ಲಿ ಶಾಂತವಾಗಿ ನಿಂತಿದ್ದ. ನಂತರ ಅಲ್ಲಿಂದ ಕೆಳಗಿಳಿದು ಹೋದ ಆತ ಮುದುಡಿ ಕುಳಿತುಕೊಂಡು ಟ್ಯಾಂಕರಿನ ಪವಿತ್ರ ನೀರನ್ನು ಮೈಮೇಲೆ ಸುರುವಿಕೊಂಡು ಸ್ನಾನ ಮಾಡಲು ಶುರುಹಚ್ಚಿದ್ದ.

ಪವಿತ್ರ ಗೋದಾವರಿಯ ಮೂಲಸ್ಥಾನದಲ್ಲೇ ಮಹಾರಾಷ್ಟ್ರದ ನೀರಿನ ಬಿಕ್ಕಟ್ಟಿನ ಲೋಕಕ್ಕೆ ನಿಮಗೆ ಸ್ವಾಗತವನ್ನು ಕೋರುತ್ತಿದ್ದೇನೆ.

ಕಳೆದ 139 ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಮಕುಂದದ ಚಾರಿತ್ರಿಕ ಸ್ನಾನದ ಘಾಟ್ ಈ ಬಾರಿಯ ಎಪ್ರಿಲ್ ನಲ್ಲಿ ಒಣಗಿಹೋಗಿದೆ. ಇನ್ನು ಎಪ್ರಿಲ್ ನಿಂದ ಎರಡು ತಿಂಗಳುಗಳ ಕಾಲ ಹೊರಗಿನಿಂದ ಟ್ಯಾಂಕರುಗಳನ್ನು ತರಿಸಿ, ನಿತ್ಯವೂ 60-90 ಲೀಟರುಗಳಷ್ಟು ನೀರನ್ನು ತುಂಬಿಸಿ ಕುಂಡಗಳನ್ನು ಜೀವಂತವಾಗಿಡುವ ಪ್ರಯತ್ನಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ ಹೇಳುವುದೆಂದರೆ ಮಹಾರಾಷ್ಟ್ರವು ನದಿಗಳಿಗೇ ಟ್ಯಾಂಕರ್ ನೀರನ್ನು ತಂದು ಸುರಿಯುತ್ತಿದೆ. ಗೋದಾವರಿಯು ನದಿಯು ಸ್ವತಃ ಸಂಕಷ್ಟದಲ್ಲಿದೆ. ಹಿಂದೆಂದೂ ಕಾಣದಿದ್ದ ಪ್ರಮಾಣದಲ್ಲಿ ಗೋದಾವರಿಯ ಕೆಲ ಭಾಗಗಳು ಸಂಪೂರ್ಣವಾಗಿ ಬರಡಾಗಿವೆ. ಮೇ ತಿಂಗಳಲ್ಲಂತೂ ನಾಸಿಕ್ ನ ತ್ರಿಂಬಕ್ ಪಟ್ಟಣದತ್ತ ಮೈಚಾಚಿರುವ ತನ್ನ ಮೂಲವೂ ಆಗಿರುವ ಬ್ರಹ್ಮಗಿರಿ ಪರ್ವತಗಳಲ್ಲಿ ನೀರಿನ ಒರತೆಯು ತೀರಾ ಕಮ್ಮಿಯಾಗಿಬಿಟ್ಟಿತ್ತು (ನದಿಯ ಮೂಲವಾದ ಈ ಸ್ಥಳವನ್ನು ಭಕ್ತಿಯಿಂದ ತ್ರಿಂಬಕೇಶ್ವರ್ ಎಂಬ ಹೆಸರಿನಿಂದಲೂ ಕರೆಯುವುದುಂಟು). ಇನ್ನೇನು ಬರಲಿರುವ ಮಳೆಗಾಲವಾದರೂ ಕೊಂಚ ನಿರಾಳತೆಯನ್ನು ತರಬಹುದು ಎಂಬ ನಿರೀಕ್ಷೆ ಸ್ಥಳೀಯರದ್ದು.

PHOTO • P. Sainath

ನದಿಯೆಂಬ ನದಿಗೇ ನೀರನ್ನು ಸುರಿಯುತ್ತಿರುವ ಒಂದು ಟ್ಯಾಂಕರ್. (ಬಲಭಾಗ) ಭಕ್ತಾದಿಯೊಬ್ಬ ನದಿಯ ನೀರಿನ ಬದಲು ಟ್ಯಾಂಕರಿನ ನೀರಿನಿಂದ ಸ್ನಾನ ಮಾಡುತ್ತಿದ್ದಾನೆ.

``ನದಿಯ ಮೂಲವೆಂದು ಹೇಳಲಾಗುವ ಪ್ರದೇಶವೇ ಬೇಸಿಗೆಯ ಕಾಲದಲ್ಲಿ ಮೂರು ದಿನಗಳಿಗೊಮ್ಮೆ ನೀರನ್ನು ಪಡೆಯುವಂಥಾ ದುಸ್ಥಿತಿಯನ್ನು ತಲುಪಿತ್ತು'', ಎಂದು ನಗುತ್ತಾ ಹೇಳುತ್ತಿದ್ದಾರೆ ಕಮಲಾಕರ್ ಅಕೋಲ್ಕರ್. ಕೆಲ ಮಾಧ್ಯಮಗಳಿಗೆ ಛಾಯಾಚಿತ್ರಗ್ರಾಹಕನಾಗಿರುವುದಲ್ಲದೆ ಧಾರ್ಮಿಕ ಪ್ರವಾಸೋದ್ಯಮದ ಆರ್ಥಿಕತೆಯಿಂದ ಪ್ರೇರಿತನಾಗಿ ಪುರೋಹಿತ ವೃತ್ತಿಯನ್ನೂ ಕೂಡ ಈತ ಮಾಡುತ್ತಿದ್ದಾನೆ. ``ಸತತ 20 ವರ್ಷಗಳ ಕಾಲ ಇಲ್ಲಿ ಅರಣ್ಯನಾಶವು ನಡೆದಿತ್ತು. ನಮ್ಮಲ್ಲಿಯ ಹಸಿರು ಪ್ರದೇಶಗಳು ಮಾಯವಾಗಿಬಿಟ್ಟಿವೆ. ರಸ್ತೆಗಳು, ಹೋಟೇಲುಗಳು, ವಸತಿಗೃಹಗಳು ಮಿತಿಮೀರಿಬಿಟ್ಟಿವೆ. ಎತ್ತ ನೋಡಿದರೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಸುಮಾರು 10,000 ದಷ್ಟು ಜನಸಂಖ್ಯೆಯಿರುವ ಪ್ರದೇಶವಿದು. ಆದರೆ ಇಲ್ಲಿಗೆ ನಿತ್ಯವೂ ಬಂದುಹೋಗುವವರ ಜನಸಂಖ್ಯೆಯನ್ನು ಪರಿಗಣಿಸಿದರೆ ಅದು 50000 ದಷ್ಟಾಗುತ್ತದೆ. ಅದರಲ್ಲಿ ಭಕ್ತಾದಿಗಳು, ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮದ ಪರಿಧಿಯಲ್ಲಿ ಬರುವ ಇತರರೂ ಬರುತ್ತಾರೆ. ಹೀಗೆ ನೀರಿನ ಅಭಾವದ ಸಮಸ್ಯೆಗೆ ಈ ಜನಸಮೂಹದ ಪಾಲೂ ಕೂಡ ಇದೆ. ಎರಡು ದಶಕಗಳ ಹಿಂದೆ ನಾಲ್ಕು ತಿಂಗಳುಗಳ ಕಾಲ ಇಲ್ಲಿ ಒಳ್ಳೆಯ ಮಳೆಯಾಗುತ್ತಿತ್ತು. ಆದರೆ ಸದ್ಯಕ್ಕೆ ಇದು ಒಂದೂವರೆ ತಿಂಗಳುಗಳಿಗೆ ಇಳಿದಿದೆ'', ಎನ್ನುತ್ತಾರೆ ಅಕೋಲ್ಕರ್.

ಇಲ್ಲಿಂದ ಕೆಲ ಕಿಲೋಮೀಟರುಗಳಷ್ಟು ಕೆಳಗಿಳಿದರೆ ಸಿಗುವ ರಾಮಕುಂಡದ ಪ್ರಧಾನ ಅರ್ಚಕರಾದ ಸತೀಶ್ ಶುಕ್ಲಾರವರು ಹೇಳುವ ಪ್ರಕಾರ ಸ್ಥಳೀಯರ ಜೀವನವನ್ನು ನಾಶಪಡಿಸಿದ್ದೇ ಪುರಸಭಾ ನಿಗಮವಂತೆ. ಕೆಲ ವರ್ಷಗಳ ಹಿಂದೆ ಭಾರತೀಯ ಜನತಾ ಪಾರ್ಟಿಯಿಂದ ಕಾರ್ಪೋರೇಟರ್ ಆಗಿದ್ದ ಶುಕ್ಲಾರವರು ಪ್ರಸ್ತುತ ಗೋದಾವರಿ ಪಂಚಕೋಟಿ ಪುರೋಹಿತ ಸಂಘದ ಅಧ್ಯಕ್ಷರು. ನದಿಯೊಂದಿಗೆ ಅವಿನಾಭಾವ ಸಂಬಂಧವನ್ನಿಟ್ಟುಕೊಂಡಿರುವ ಪುರೋಹಿತರ ಈ ಗುಂಪಿಗೆ ಸುಮಾರು ಎಪ್ಪತ್ತು ವರ್ಷಗಳ ಹಿನ್ನೆಲೆಯಿದೆ. ``ಇಲ್ಲಿಯ ಕಾರ್ಪೊರೇಷನ್ ಅದಷ್ಟೋ ವರ್ಷಗಳಿಂದ ಸ್ಥಿರವಾಗಿ ನಿಂತಿದ್ದ ಕಲ್ಲಿನ ಘಾಟ್ ಒಂದನ್ನು ಕೆಡವಿ ಆ ಜಾಗದಲ್ಲಿ ಕಾಂಕ್ರೀಟ್ ಘಾಟ್ ಒಂದನ್ನು ನಿರ್ಮಿಸಿತು. ಅವರು ಹಾಗೆ ಮಾಡಬಾರದಿತ್ತು. ಸುಮಾರು ನೂರು ವರ್ಷಗಳಲ್ಲಿ ಆಗಬಹುದಿದ್ದ ಪ್ರತಿಕೂಲ ಸಮಸ್ಯೆಗಳು ಎರಡೇ ವರ್ಷಗಳಲ್ಲಿ ತಲೆಯೆತ್ತಿಬಿಟ್ಟವು'', ಎನ್ನುತ್ತಾರೆ ಈತ. ``ಮಿತಿಮೀರಿದ ಕಾಂಕ್ರಿಟೀಕರಣವು ನದಿಯನ್ನು ಹಂತಹಂತವಾಗಿ ಕೊಲ್ಲುತ್ತಿದೆ. ಹಳೆಯ ನೀರು ಸಂಗ್ರಹಣಾ ವ್ಯವಸ್ಥೆಗಳು, ಕಾರಂಜಿಗಳು ಈಗ ಇಲ್ಲಿಲ್ಲ. ಇವೆಲ್ಲವನ್ನೂ ಬದಲಾಯಿಸುವಾಗ ನಮ್ಮಂತಹ ಪುರೋಹಿತರನ್ನು ಒಂದು ಮಾತೂ ಇವರುಗಳು ಕೇಳಲಿಲ್ಲ. ಎಲ್ಲವನ್ನೂ ತಮಗೆ ಬೇಕಿದ್ದಂತೆ ಬದಲಾಯಿಸಿಕೊಂಡರು. ಈಗ ನದಿಯ ನೈಸರ್ಗಿಕ ಹರಿವಿನ ರೀತಿಯು ಬದಲಾಗಿದೆ. ವರುಣದೇವ ನಮ್ಮಂತಹ ಪುರೋಹಿತರು ಮಾಡುವ ಪ್ರಾರ್ಥನೆಗಳನ್ನು ಆಲಿಸಿ ಮಳೆಯನ್ನು ಕರುಣಿಸುತ್ತಿದ್ದ. ಆ ದಿನಗಳೆಲ್ಲಾ ಮುಗಿದುಹೋದವು'', ಎಂದು ನಿಡುಸುಯ್ಯುತ್ತಿದ್ದಾರೆ ಶುಕ್ಲಾ.

PHOTO • P. Sainath

ರಾಮಕುಂಡದ ದಡದಲ್ಲಿ ಗುಂಪುಗಟ್ಟಿರುವ ಭಕ್ತಸಮೂಹ. (ಬಲಭಾಗ) ಗೋದಾವರಿ ಪುರೋಹಿತರ ಸಂಘದ ಅಧ್ಯಕ್ಷರಾಗಿರುವ ಸತೀಶ್ ಶುಕ್ಲಾ

ಪುರೋಹಿತರ ಪ್ರಾರ್ಥನೆಗಳಿಗೆ ಸದ್ಯ ವರುಣದೇವನು ಕಿವಿಕೊಡದಿರಬಹುದು. ಆದರೆ ಸರಕಾರವಂತೂ ವರುಣದೇವನನ್ನು ನಾಸಿಕ್ ನ ಕುಂಭಮೇಳಕ್ಕೆ ಕರೆತಂದು ಆಟವಾಡುತ್ತಿದೆ. ನೀರಾವರಿ ಇಲಾಖೆಯ ಕೆಲ ಅಧಿಕಾರಿಗಳು ಹೇಳುವ ಪ್ರಕಾರ 1.3 ಸಾವಿರ ಮಿಲಿಯನ್ ಘನ ಅಡಿ (ಟಿ.ಎಮ್.ಸಿ) ಯ ದೈತ್ಯ ಪ್ರಮಾಣದ ನೀರನ್ನು ಗಂಗಾಪುರದಿಂದ ಕುಂಭಮೇಳಕ್ಕಾಗಿಯೇ ಸರಬರಾಜು ಮಾಡಲಾಗಿತ್ತಂತೆ. ಗೋದಾವರಿಗೆ ಅಡ್ಡಲಾಗಿ ಕಟ್ಟಿರುವ ಮುಖ್ಯ ಅಣೆಕಟ್ಟೇ ಗಂಗಾಪುರ. ಗೌತಮಿ ಮತ್ತು ಕಶ್ಯಪಿ ಎಂಬ ಸಹೋದರಿಯರೂ ಈ ಗೋದಾವರಿಗಿದ್ದಾರೆ. ಆಗಸ್ಟ್-ಸೆಪ್ಟೆಂಬರ್ 2015 ರಲ್ಲಿ ಮೂರು ದಿನಗಳ `ಶಾನಿ ಸ್ನಾನ್' (ರಾಜೋಚಿತ ಸ್ನಾನ) ಗೆಂದು ಬಿಡುಗಡೆಗೊಳಿಸಿದ ನೀರು ಇದರದ್ದೊಂದು ಭಾಗವಷ್ಟೇ. ಇನ್ನು ಜನವರಿಯ ಸಮಾರೋಪ ಸಮಾರಂಭಕ್ಕೂ ಕೂಡ ಖರ್ಚಾದ ನೀರಿನ ಪ್ರಮಾಣ ಕಮ್ಮಿಯೇನಲ್ಲ. ಇನ್ನು ಪವಿತ್ರ ಸ್ನಾನಗಳಿಂದ ನದಿಯಲ್ಲಿ ಜಮೆಯಾದ ಕೊಳಚೆಯನ್ನು ತೆಗೆದು ಶುದ್ಧಗೊಳಿಸಲು ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರು ಪೋಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಕುಂಭಮೇಳ ಮತ್ತು ಇತರ ಸಂಬಂಧಿ ಕಾರ್ಯಕ್ರಮಗಳಿಗಾಗಿ ಕೆಲವು ತಿಂಗಳುಗಳ ಕಾಲ ನೀಡಲಾಗಿದ್ದ ನೀರಿನ ಒಟ್ಟು ಪ್ರಮಾಣ 1.3 ಟಿ.ಎಮ್.ಸಿ. ಅಂದರೆ ಈ ಪ್ರಮಾಣವು ನಾಸಿಕ್ ನಗರಕ್ಕೆ 2015-16 ರ ಸಂಪೂರ್ಣ ವರ್ಷದಲ್ಲಿ ಸರಬರಾಜಾಗಿದ್ದ 3.7 ಟಿ.ಎಮ್.ಸಿ ಯ ಅರ್ಧದಷ್ಟಾಗುತ್ತದೆ. ಈ ಬಗ್ಗೆ ಸಲ್ಲಿಸಲಾಗಿದ್ದ ದೂರುಗಳು ವಿವಿಧ ನ್ಯಾಯಾಲಯಗಳಲ್ಲಿವೆ. ಆದರೆ ದುರಾದೃಷ್ಟದ ವಿಚಾರವೆಂದರೆ ಕುಂಭಮೇಳದ ಭಕ್ತಾದಿಗಳ ಪ್ರಾರ್ಥನೆಯನ್ನು ಕೇಳಿದ್ದ ವ್ಯವಸ್ಥೆಯು ಸಾವಿರಾರು ರೈತರ ಸಮಸ್ಯೆಗಳಿಗೆ ಮಾತ್ರ ಕಿವಿಯಾಗಲಿಲ್ಲ. ಅಂದಹಾಗೆ ರೈತರು ಗಂಗಾಪುರ ಅಣೆಕಟ್ಟಿನಿಂದ ಕಾಲಕಾಲಕ್ಕೆ ಹೊರಬಿಡಲಾಗುವ ನೀರಿನ ಭರವಸೆಯನ್ನಿಟ್ಟುಕೊಂಡೇ ತಮ್ಮ ದಿನತಳ್ಳುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

PHOTO • P. Sainath

ಭಮೇಳದ ಅವಧಿಯಲ್ಲಿ ನೀರಿನ ದಿಕ್ಕನ್ನೇ ಬದಲಾಯಿಸಿದ ಪರಿಣಾಮವಾಗಿ ತನ್ನ ಬೆಳೆಗಾದ ನಷ್ಟವನ್ನು ವಿವರಿಸುತ್ತಿರುವ ಪ್ರಶಾಂತ್ ನಿಮ್ಸೆ

ಮೂರು ಸುತ್ತಿನ ನೀರು ಬರಬೇಕಾದಲ್ಲಿ ನಮಗೆ ಒಂದು ಸುತ್ತಿನ ನೀರಷ್ಟೇ ಸಿಕ್ಕಿದೆ. ಹೆಚ್ಚೆಂದರೆ ಒಂದೂವರೆ ಎಂದೇ ಹೇಳಿ. ಅದರಲ್ಲೂ ಮೊದಲ ಸುತ್ತಂತೂ ಬಹಳ ಬೇಗನೇ, ಯಾವುದೇ ಪೂರ್ವ ಸೂಚನೆಗಳಿಲ್ಲದೆ ಬೇರೆ ಬಿಡುಗಡೆಯಾಗಿತ್ತು'', ಎಂದು ಹೇಳುತ್ತಿದ್ದಾರೆ ಪ್ರಶಾಂತ್ ನಿಮ್ಸೆ. ನಿಮ್ಸೆ ಗಂಗಾಪುರ ಅಣೆಕಟ್ಟಿನ ಎಡಕಾಲುವೆಯಿಂದ ನೀರಿನ ನಿರ್ವಹಣೆಯನ್ನು ಮಾಡುತ್ತಿರುವ ನದುರ್ ಗಾಂವ್ ಪ್ರದೇಶದ ನಿವಾಸಿ. ದ್ರಾಕ್ಷಿ, ಅಂಜೂರ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ನಿಮ್ಸೆ ಈ ಬಾರಿ ತಕ್ಕಮಟ್ಟಿನ ಆದಾಯವು ಸಿಕ್ಕಿದ್ದು ತನ್ನ ಊರಿನಲ್ಲಿ ಕಟ್ಟಿರುವ ಕಲ್ಯಾಣ ಮಂಟಪದಿಂದಷ್ಟೇ ಎಂದು ಹೇಳುತ್ತಿದ್ದಾನೆ. ಈ ವಿವಾಹ ಮಂಟಪವು ನಾಸಿಕ್ ನಗರದ ವ್ಯಾಪ್ತಿಯಲ್ಲೇ ಬರುವುದರಿಂದ ನಿಮ್ಸೆಯ ದಂಧೆಯು ಚೆನ್ನಾಗಿಯೇ ನಡೆಯುತ್ತಿದೆ. ``ನಾನಂತೂ ಬಚಾವಾದೆ, ಆದರೆ ಕೃಷಿಯನ್ನೇ ಅವಲಂಬಿಸಿರುವ ರೈತ ಕುಟುಂಬಗಳಂತೂ ದೊಡ್ಡ ಸಂಕಷ್ಟಕ್ಕೀಡಾಗಿವೆ'', ಎನ್ನುವುದು ಆತನ ಅಭಿಪ್ರಾಯ.

``ದ್ರಾಕ್ಷಿ ಬೆಳೆಗಾಗುತ್ತಿರುವ ನಷ್ಟವು ದಿನಕಳೆದಂತೆ ಹೆಚ್ಚಾಗುತ್ತಿದೆ'', ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಮತ್ತೊಬ್ಬ ಕೃಷಿಕ ವಾಸುದೇವ್ ಖಟೆ. ``ಬರಗಾಲದಿಂದುಂಟಾಗಿರುವ ನೀರಿನ ತೀವ್ರ ಅಭಾವದ ಬಿಸಿಯು ದ್ರಾಕ್ಷಿಯ ಕಟಾವಿಗೂ ತಟ್ಟಿದೆ. ದ್ರಾಕ್ಷಿಯ ಒಳ್ಳೆಯ ಬೆಳೆ ಬಂದ ಹೊರತಾಗಿಯೂ ಗುಣಮಟ್ಟದಲ್ಲಿ ವ್ಯತ್ಯಾಸಗಳಾಗುತ್ತಿವೆ. ಪ್ರತೀವರ್ಷವೂ ಎಕರೆಯೊಂದಕ್ಕೆ 100 ಮ್ಯಾನ್ - ಡೇ ಗಳು ಬೇಕಾಗುತ್ತವೆ. ಹೀಗಿದ್ದಾಗ ಸಂಕಷ್ಟಕ್ಕೀಡಾಗಿರುವ 40,000 ಎಕರೆ ಬೆಳೆಯ ಭೂಮಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಗ್ಗೆ ಯೋಚಿಸಿ. 3 ಮಿಲಿಯನ್ ಉದ್ಯೋಗದಿನಗಳ ದೊಡ್ಡ ಪ್ರಮಾಣದ ನಷ್ಟ ಅವರಿಗೆ. ಇಲ್ಲಿಯ ಕೃಷಿ ಕಾರ್ಮಿಕರು ಮರಾಠಾವಾಡಾ, ಬೀದ್, ಲಾತೂರ್, ಔರಂಗಾಬಾದ್, ಒಸ್ಮಾನಾಬಾದ್ ಗಳಂತಹ ಹೊರಭಾಗಗಳಿಂದ ಬರುವವರು. ಈ ಕೃಷಿಕಾರ್ಮಿಕರ ಉದ್ಯೋಗಕ್ಕೆ ಬೀಳುತ್ತಿರುವ ನೇರ ಹೊಡೆತಗಳು ತಮ್ಮ ಪರಿಣಾಮವನ್ನು ಮರಳಿ ಮರಾಠಾವಾಡಾದಂತಹ ಪ್ರದೇಶಗಳಿಗೂ ಕೂಡ ಹರಡಿಸುತ್ತಿವೆ.

ಮಳೆಯು ರಾಜ್ಯಾದ್ಯಂತ ನಿಧಾನವಾಗಿ ಹಬ್ಬುತ್ತಿದೆ. ಇದರ ಹೊರತಾಗಿಯೂ ರೈತರಿಗೆ, ಕೃಷಿಕಾರ್ಮಿಕರಿಗೆ ಮತ್ತು ಇತರರಿಗೆ ಮಳೆಯ ಆಗಮನವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದರ ಬಗ್ಗೆ ಅರಿವಿದೆ. ಫೋಟೋಗ್ರಾಫರ್-ಪುರೋಹಿತ ಅಕೋಲ್ಕರ್ ಹೇಳುವಂತೆ ಮಳೆಯು ತಾತ್ಕಾಲಿಕವಾಗಿ ನಿರಾಳತೆಯನ್ನಂತೂ ತಂದಿದೆ. ಆದರೆ ದೀರ್ಘಕಾಲಿಕ ಸಮಸ್ಯೆಗಳು ಹೆಚ್ಚುತ್ತಲೇ ಇವೆ ಮತ್ತು ಅವುಗಳು ಅಷ್ಟು ಸುಲಭವಾಗಿ ಪರಿಹಾರವಾಗುವಂತೆ ಕಾಣುತ್ತಿಲ್ಲ.

ಇತ್ತ ನಾಸಿಕ್ ಜಿಲ್ಲೆಯ ನೀರಾವರಿ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪಿ. ಬಿ. ಮಿಸಲ್ ರವರಿಗೆ ಇವೆಲ್ಲದರ ಬಗ್ಗೆ ಭಿನ್ನವಾದ ಅಭಿಪ್ರಾಯವಿದೆ. ``ವರ್ಷವಿಡೀ ಹರಿಯುವ ಅಥವಾ ದೀರ್ಘಕಾಲದವರೆಗೆ ವ್ಯವಸಾಯ ಅಥವಾ ಇತರೆ ಬಳಕೆಗೆ ಸಿಗುವಂತಹ ನದಿಗಳನ್ನು ಮಹಾರಾಷ್ಟ್ರವು ಹೊಂದಿಲ್ಲ. ಕಳೆದ 20 ವರ್ಷಗಳಿಂದ ಅಂತರ್ಜಲದ ಮೂಲಗಳು ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿವೆ. ವ್ಯವಸಾಯ ಭೂಮಿಗಳಲ್ಲಿ ಮಿತಿಮೀರಿ ಪಂಪಿಂಗ್ ಮಾಡಲಾಗುತ್ತಿದೆ. ನಾಸಿಕ್ ನಗರದ ಜನಸಂಖ್ಯೆಯು 20 ಲಕ್ಷಕ್ಕೆ ಏರಿದ್ದಲ್ಲದೆ ಇತರೆ (ಫ್ಲೋಟಿಂಗ್ ಪಾಪ್ಯುಲೇಷನ್) ಜನಸಂಖ್ಯೆಯು 3 ಲಕ್ಷದವರೆಗೆ ಬಂದುಮುಟ್ಟಿದೆ. ಜಮೀನುಗಳ ಬಳಕೆಯ ವಿಧಾನದಲ್ಲೂ ಹಲವು ಬದಲಾವಣೆಗಳಾಗಿವೆ. ನಗರದ ಸುತ್ತಲೂ ಆವರಿಸಿದ್ದ ಹಸಿರು ಗದ್ದೆಗಳಲ್ಲಿ ಈಗ ಕಟ್ಟಡಗಳು ಎದ್ದು ನಿಂತಿವೆ'', ಎನ್ನುತ್ತಾರೆ ಮಿಸಲ್. ಮಳೆಯ ಅನಿಶ್ಚಿತತೆಯು ಹೆಚ್ಚಾಗಿರುವುದು ಹೌದಾದರೂ ಮಳೆಯ ಪ್ರಮಾಣವು ಕಮ್ಮಿಯೇನೂ ಆಗಿಲ್ಲ ಅನ್ನುವುದು ಇವರ ಅನಿಸಿಕೆ. ಆದರೆ ಮಿಸಲ್ ರವರ ಮಾತಿಗೆ ವ್ಯತಿರಿಕ್ತವಾಗಿ ಮಾಹಿತಿಗಳನ್ನು ಹಂಚಿಕೊಂಡ ಪರಿಸರ ತಜ್ಞರಾದ ಪ್ರೊ. ಮಾಧವ್ ಗಡ್ಗಿಲ್ ಮಹಾರಾಷ್ಟ್ರದಲ್ಲಿ ವರ್ಷವಿಡೀ ಹರಿಯುವ ನದಿಗಳೂ ಕೂಡ ಇತ್ತು ಎನ್ನುತ್ತಾರೆ. ನಂತರ ಇವುಗಳನ್ನು ಅರೆಕಾಲಿಕ ನದಿಗಳಾಗಿ ಪರಿವರ್ತಿಸಲಾಯಿತು ಎಂಬುದು ಇವರ ವಾದ.

ಇವೆಲ್ಲವುಗಳೂ ಕೂಡ ನಮ್ಮನ್ನು ಮತ್ತೆ ಕರೆತರುವುದು ನೀರಿನ ತೀವ್ರ ಬಿಕ್ಕಟ್ಟಿಗೆ ಮತ್ತಷ್ಟು ಇಂಬನ್ನು ನೀಡುತ್ತಿರುವ ಮಹಾರಾಷ್ಟ್ರದ ಏಜೆನ್ಸಿಗಳ ಬಳಿಗೆ. ತ್ರಿಂಬಕೇಶ್ವರದಲ್ಲಿರುವ ನೀರಿನ ಸಮಸ್ಯೆ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿರುವ ಸತಾರಾ ಜಿಲ್ಲೆಯ ಕೃಷ್ಣಾ ನದಿಯ ಮೂಲವಾದ ಹಳೇ ಮಹಾಬಲೇಶ್ವರದಲ್ಲಿರುವ ನೀರಿನ ಸಮಸ್ಯೆಗಳಲ್ಲಿ ಸಾಮ್ಯತೆಗಳನ್ನು ನಾವು ಕಂಡಿದ್ದೆವು (ನಾನು ಮತ್ತು ನನ್ನ ಸಹೋದ್ಯೋಗಿಗಳು ಮೇ ತಿಂಗಳಲ್ಲಿ ಈ ಜಾಗಕ್ಕೆ ಭೇಟಿಯನ್ನಿತ್ತಿದ್ದೆವು).

``ನಾಸಿಕ್ ಈಗ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆ ಎಂಬುದನ್ನು ಮರೆಯಬೇಡಿ. ಹೀಗಾಗಿ ನೀರಿನ ಹಂಚಿಕೆಯ ವ್ಯವಸ್ಥೆಯೂ ಕೂಡ ಇಲ್ಲಿ ಬದಲಾಗಿದೆ'', ಎನ್ನುತ್ತಾರೆ ಅಕೋಲ್ಕರ್. ಅಂತೆಯೇ ತನ್ನ ಮಾತನ್ನು ಮುಂದುವರಿಸುವ ಅಕೋಲ್ಕರ್, ``ಅನಿಯಂತ್ರಿತ ನೀರಿನ ಮಾರುಕಟ್ಟೆಯು ಈ ಪ್ರದೇಶದ ಎಲ್ಲಾ ಕಡೆ ತುಂಬಿಹೋಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರದೇಶದ ಪ್ರತಿಯೊಂದು ಅಡಿಗಳನ್ನೂ ಕಾಂಕ್ರಿಟೀಕರಣಗೊಳಿಸಲಾಗಿದೆ. ಈಗ ನೀರಿನ ಹರಿವಿಗಾಗಲೀ, ಕೊಂಚ ನೆಲೆಯೂರಲಾಗಲೀ ಜಾಗವೇ ಇಲ್ಲ'', ಎಂದೂ ಹೇಳುತ್ತಾರೆ.

PHOTO • P. Sainath

ಗೋದಾವರಿ ನದಿಯ ಮೊದಲ ಕುಂಡವಾದರೂ ತನ್ನ ಎಂದಿನ ನೀರಿನ ಮಟ್ಟಕ್ಕಿಂತ ಬಹಳಷ್ಟು ಇಳಿದುಹೋದ ತ್ರಿಂಬಕೇಶ್ವರ ದೇವಾಲಯದಲ್ಲಿರುವ ಗಂಗಾಸಾಗರ.

ಬ್ರಹ್ಮಗಿರಿಯಿಂದ ತ್ರಿಂಬಕೇಶ್ವರದಲ್ಲಿರುವ ಗಂಗಾಸಾಗರದ ಟ್ಯಾಂಕ್ ನತ್ತ ಹರಿಯುತ್ತಿದ್ದ ಚಿಕ್ಕ ಪುಟ್ಟ ತೊರೆಗಳೂ ಕೂಡ ಈಗ ಮಾಯವಾಗಿ ಪರ್ವತದ ಅಂಚಿನಲ್ಲಿ ಬಿಳಿ ಕಲೆಗಳನ್ನು ಉಳಿಸಿ ಬೋಳಾಗಿಬಿಟ್ಟಿವೆ. ನೀರಿನ ಮೂಲಗಳೆಲ್ಲವೂ ಒಣಗಿಹೋಗಿವೆ ಎಂಬುದನ್ನು ಮನಗಾಣಲು ಇದುವೇ ಸಾಕಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ತೊರೆಗಳು ಮತ್ತೆ ಜೀವತಳೆಯುವುದು ಸಾಧ್ಯವೇನೋ!

ಮಿತಿಮೀರಿದ ಅರಣ್ಯನಾಶ, ಹೆಚ್ಚಿದ ಅಣೆಕಟ್ಟುಗಳ ನಿರ್ಮಾಣ, ಕೈಗಾರಿಕೆ ಮತ್ತು ರೆಸಾರ್ಟುಗಳಂತಹ ವಿಲಾಸಿ ಸೌಲಭ್ಯಗಳಿಗಾಗಿ ನೀರಿನ ಹರಿವನ್ನು ದೈತ್ಯ ಪ್ರಮಾಣದಲ್ಲಿ ಬದಲಾಯಿಸುತ್ತಿರುವ ದೃಶ್ಯಗಳು ಮಹಾರಾಷ್ಟ್ರದಾದ್ಯಂತ ನಿತ್ಯದ ಮಾತಾಗಿಬಿಟ್ಟಿವೆ. ನದಿಮೂಲಗಳ ಕಾಂಕ್ರೀಟೀಕರಣ, ದೊಡ್ಡ ಮಟ್ಟದ ಮತ್ತು ಮಿತಿಮೀರಿದ ಅಂತರ್ಜಲದ ಬಳಕೆ, ನೀರಿನ ಹಂಚಿಕೆಯ ವಿಚಾರದಲ್ಲಿ ಬಡವ-ಸಿರಿವಂತರ ನಡುವೆ ತೋರಿಸಲಾಗುತ್ತಿರುವ ಅಸಮಾನತೆ... ಇತ್ಯಾದಿಗಳೂ ಕೂಡ ಇವೆಲ್ಲಾ ಸಮಸ್ಯೆಗಳ ಪ್ರಮುಖ ಕಾರಣಗಳು. ಮಹಾರಾಷ್ಟ್ರದ ನೀರಿನ ತೀವ್ರ ಬಿಕ್ಕಟ್ಟಿಗೆ ಇವೆಲ್ಲವುಗಳೂ ಕೂಡ ತಮ್ಮ ಕೊಡುಗೆಗಳನ್ನು ನೀಡುತ್ತಿವೆ. ಈ ಕಳಂಕವನ್ನು ಮಳೆಯು ಹಾಗಿರಲಿ, ಮಳೆಯ ಬಗೆಗಿನ ನಿರಂತರ ಮಾಧ್ಯಮ ವರದಿಗಳೂ ಕೂಡ ಅಳಿಸಿಹಾಕಲಾರವು.

ಚಿತ್ರಗಳು: ಪಿ. ಸಾಯಿನಾಥ್

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

کے ذریعہ دیگر اسٹوریز پرساد نائک