ಸಿಯದೆಹಿ ಹಳ್ಳಿಯ ಪ್ರವೇಶದ್ವಾರದಲ್ಲಿ ಬಿದಿರಿನಿಂದ ನಿರ್ಮಿಸಲ್ಪಟ್ಟ ತಡೆಗಟ್ಟಿನ ಫಲಕದಲ್ಲಿ, ‘ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ. ಛತ್ತೀಸ್‍ಗಡ್‍ನ ಧಮ್ತರಿ ಜಿಲ್ಲೆಯ ನಗ್ರಿ ವಲಯದ ಹಳ್ಳಿಗೆ ಈ ವರದಿಗಾರನು ಪ್ರವೇಶಿಸಿದಾಗ, ಅಲ್ಲೇ ಹತ್ತಿರದಲ್ಲಿ ಕುಳಿತಿದ್ದ ಅಲ್ಲಿನ ನಿವಾಸಿಗಳ ಗುಂಪೊಂದು ಮಾತನಾಡುವ ಸಲುವಾಗಿ ತಡೆಗಟ್ಟಿನ ಬಳಿಗೆ ಬಂದಿತಾದರೂ, ಪರಸ್ಪರ ದೂರವನ್ನು ಕಾಯ್ದುಕೊಂಡಿರುವುದು ಕಂಡುಬಂದಿತು.
"ಪಕ್ಕದ ಕಂಕೆರ್ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಭರತ್ ಧ್ರುವ್, ಹಳ್ಳಿಯಲ್ಲಿನ ನಾವೆಲ್ಲರೂ ಮಾರಣಾಂತಿಕ ಕೊರೊನಾ ವೈರಸ್‍ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ತಡೆಗಟ್ಟನ್ನು ಹಾಕಲು ಸರ್ವಾನುಮತದಿಂದ ನಿಶ್ಚಯಿಸಿದ್ದೇವೆ", ಎಂದು ತಿಳಿಸಿದರು. ಗೊಂಡ್ ಆದಿವಾಸಿಗಳ ಪ್ರಮುಖ ನೆಲೆಯಾದ ಸಿಯದೆಹಿ ಹಳ್ಳಿಯಲ್ಲಿ ಸುಮಾರು 900 ಜನರಿದ್ದು, ಛತ್ತೀಸ್‍ಗಡ್ ರಾಜಧಾನಿ ರಾಯ್‍ಪುರ್‍ನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ.
"ನಾವು ‘ಸಾಮಾಜಿಕ ದೂರವನ್ನು’ ಪಾಲಿಸಲು ಬಯಸುತ್ತೇವೆ. ಈ ಲಾಕ್‍ಡೌನ್ ಸಂದರ್ಭದಲ್ಲಿ ಹೊರಗಿನವರು ನಮ್ಮ ಹಳ್ಳಿಗೆ ಭೇಟಿ ನೀಡುವುದನ್ನಾಗಲಿ, ನಾವು ಹೊರಗೆ ತೆರಳಿ ನಿಯಮವನ್ನು ಉಲ್ಲಂಘಿಸುವುದನ್ನಾಗಲಿ ನಾವು ಬಯಸುವುದಿಲ್ಲ. ಆದ್ದರಿಂದ ಈ ತಡೆಗಟ್ಟನ್ನು ಹಾಕಲಾಗಿದೆ", ಎಂಬುದಾಗಿ ಇದೇ ಜಿಲ್ಲೆಯಲ್ಲಿನ ಕಾರ್ಮಿಕನೂ ಹಾಗೂ ಅಂಚಿನಲ್ಲಿರುವ ರೈತನೂ (marginal farmer) ಆದ ರಾಜೇಶ್ ಕುಮಾರ್ ನೇತಂ ತಿಳಿಸುತ್ತಾರೆ.
"ಯಾವುದೇ ಸಂಪರ್ಕವನ್ನು ತಡೆಗಟ್ಟುವ ಸಲುವಾಗಿ ಇಲ್ಲಿಗೆ ಬರುವ ಎಲ್ಲರನ್ನೂ ನಾವು ತಡೆಯುತ್ತಿದ್ದೇವೆ. ತಮ್ಮ ಸ್ವಂತ ಹಳ್ಳಿಗಳಿಗೆ ವಾಪಸ್ಸು ತೆರಳುವಂತೆ ಅವರನ್ನು ವಿನಂತಿಸುತ್ತಿದ್ದೇವೆ. ನಮ್ಮಲ್ಲಿನ ಕೆಲವು ಯುವಜನರು ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರಾದರೂ, ಅವರು ಹೋಳಿಗೆ ಮೊದಲೇ ವಾಪಸ್ಸಾಗಿದ್ದಾರೆ. ಆದಾಗ್ಯೂ ಆರೋಗ್ಯ ಇಲಾಖೆಯ ನೌಕರರು ಅವರ ವಿವರಗಳನ್ನು ತೆಗೆದುಕೊಂಡಿದ್ದಾರೆ", ಎಂಬುದಾಗಿ ತೋಟದ ಕಾರ್ಮಿಕರಾದ ಸಜ್ಜಿರಾಂ ಮಂಡವಿ ತಿಳಿಸಿದರು.
ಈಗ ವಾಪಸ್ಸಾಗುವ ಸಿಯದೆಹಿಯ ವಲಸೆಗಾರರನ್ನು ಒಳಗೆ ಬಿಡಲಾಗುತ್ತದೆಯೇ? "ಹೌದು, ಆದರೆ ಸರ್ಕಾರದ ಮಾರ್ಗದರ್ಶನಗಳ ಅನುಸಾರ ಅವರು ಸಂಪರ್ಕ ನಿಷೇಧಿತ ಅವಧಿಯನ್ನು (quarantine period) ಪಾಲಿಸತಕ್ಕದ್ದು", ಎಂದು ಪಂಚಾಯತ್ ನೌಕರರಾದ ಮನೋಜ್ ಮೆಶ್ರಾಂ ತಿಳಿಸಿದರು.
ಸಂಪರ್ಕ ನಿಷೇಧದ ನಿಯಮಗಳನ್ನು (quarantine) ಕುರಿತಂತೆ ಸರ್ಕಾರದ ವ್ಯಾಖ್ಯಾನದ ಬಗ್ಗೆ ದೇಶಾದ್ಯಂತ ಜಿಲ್ಲಾ ಆಡಳಿತ, ಸರ್ಕಾರಿ ನೌಕರರು ಹಾಗೂ ರಾಜ್ಯಗಳ ನಡುವೆ ಅತ್ಯಂತ ಗೊಂದಲ ಹಾಗೂ ಭಿನ್ನತೆಗಳಿವೆ.
ಕೊರೊನಾ ವೈರಸ್‍ನ ಅಪಾಯದ ಬಗ್ಗೆ ಸಿಯದೆಹಿಯ ಜನರು ಎಲ್ಲಿಂದ ಮಾಹಿತಿಯನ್ನು ಪಡೆದರು? ಮೆಶ್ರಾಂ ಅವರು ತಿಳಿಸಿದಂತೆ, "ಟಿ.ವಿ ಹಾಗೂ ದಿನಪತ್ರಿಕೆಗಳು, ನಂತರದಲ್ಲಿ ಆಡಳಿತಾಂಗದಿಂದ" ಇವರಿಗೆ ಮಾಹಿತಿಯು ದೊರೆಯಿತು. "ನಾವು ನಮ್ಮನ್ನು ರಕ್ಷಿಸಿಕೊಂಡಲ್ಲಿ, ನಮ್ಮ ಕುಟುಂಬ ಹಾಗೂ ಹಳ್ಳಿಯೂ ಸಂರಕ್ಷಿಸಲ್ಪಡುತ್ತದೆ", ಎಂದು ಸಹ ಅವರು ತಿಳಿಸಿದರು.
ಇವರ ಗಳಿಕೆಗೆ ತೀವ್ರ ಹೊಡೆತ ಬಿದ್ದಾಗ್ಯೂ, "ಮೊದಲು ವೈರಸ್‍ನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಅಗತ್ಯ. ಇದು ಮಹತ್ವದ ವಿಷಯವಾಗಿದ್ದು ನಂತರದಲ್ಲಿ ನಾವು ಕೂಲಿಯುನ್ನು ಗಳಿಸಬಹುದು", ಎಂದು ಅವರು ತಿಳಿಸುತ್ತಾರೆ.
ಕೇಂದ್ರ ಸರ್ಕಾರವು ಪ್ರಕಟಿಸಿದ ‘ಪ್ಯಾಕೇಜ್‍ಗಳ’ ಬಗ್ಗೆ ಇವರು ಕೇಳಿದ್ದಾರಾದರೂ, "ನಾವು ಅದನ್ನು ಪಡೆಯುವವರೆಗೂ ಆ ಬಗ್ಗೆ ನಾವೇನೂ ಹೇಳಲಾಗದು", ಎಂಬುದಾಗಿ ಎರಡು ಮೂರು ಜನರು ಏಕಕಾಲದಲ್ಲಿ ನುಡಿದರು.
ಗ್ರಾಮವಾಸಿಗಳಲ್ಲೊಬ್ಬರು ಮರವೊಂದನ್ನು ಹತ್ತಿ ವೈರುಗಳನ್ನು ಅಳವಡಿಸುತ್ತಿದ್ದರು. "ರಾತ್ರಿ ಒಂಭತ್ತರವರೆಗೂ ನಾವು ಈ ತಡೆಗೋಡೆಯನ್ನು ಕಾವಲು ಕಾಯುವ ಕಾರಣ, ಈ ಸ್ಥಳಕ್ಕೆ ಬೆಳಕಿನ ವ್ಯವಸ್ಥೆ ಮಾಡುತ್ತಿದ್ದೇವೆ", ಎಂಬುದಾಗಿ ಅವರು ವಿವರಿಸಿದರು.
ಸಿಯದೆಹಿಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ 500 ನಿವಾಸಿಗಳನ್ನು ಹೊಂದಿರುವ ಲಹ್‍ಸುನ್ವಹಿ ಗ್ರಾಮದಲ್ಲಿ ಇಂಥದೇ ತಡೆಗಟ್ಟುಗಳನ್ನು ನಾವು ನೋಡಿದೆವು. ಇದು ಪ್ರಧಾನವಾಗಿ ಗೊಂಡ್ ಆದಿವಾಸಿಗಳ ಗ್ರಾಮವೆನಿಸಿದೆ. ತಡೆಗಟ್ಟಿನ ಭಿತ್ತಿಪತ್ರದಲ್ಲಿ: ‘144ನೇ ಸೆಕ್ಷನ್ ಜಾರಿಯಲ್ಲಿದೆ - 21 ದಿನಗಳವರೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದ್ದು, ಮತ್ತೊಂದು ಭಿತ್ತಿಪತ್ರವು ‘ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದಷ್ಟೇ ತಿಳಿಸುತ್ತದೆ.
"ನಾವು ಹೊರಗಿನವರನ್ನು, ಅದರಲ್ಲೂ ವಿಶೇಷವಾಗಿ ನಗರದ ಜನರನ್ನು ತಡೆಯುತ್ತಿದ್ದೇವೆ", ಎಂಬುದಾಗಿ ತಡೆಗೋಡೆಯ ಬಳಿಯಲ್ಲಿದ್ದ ಕೃಷಿ ಕಾರ್ಮಿಕ ಘಾಸಿರಾಂ ಧೃವ್ ತಿಳಿಸಿದರು. ನಗರದ ಜನರೇ ಏಕೆ? ಏಕೆಂದರೆ, "ಹೊರದೇಶಗಳಿಗೆ ತೆರಳುವವರು ಅವರೇ. ಅವರಿಂದಾಗಿ ಈ ವೈರಸ್ ಪ್ರಸರಿಸುತ್ತಿದೆ".
ಬಸ್ತರ್‍ನ ಆದ್ಯಂತ ಅನೇಕ ಗ್ರಾಮಗಳಲ್ಲಿ ತಡೆಗಟ್ಟುಗಳು ತಲೆಯೆತ್ತುತ್ತಿವೆ.
ಧಮ್ತರಿ-ನಗರಿ ರಸ್ತೆಯಲ್ಲಿನ ಮತ್ತೊಂದು ಗ್ರಾಮವಾದ ಖಡದಹ್‍ನಲ್ಲಿ ತಡೆಗಟ್ಟುಗಳಿಲ್ಲ. ಇಲ್ಲಿ ನಾವು ಆರೋಗ್ಯ ಕಾರ್ಯಕರ್ತೆ ಮಿತನಿನ್ (ಇತರೆಡೆಗಳಲ್ಲಿ ಆಶಾ ಎಂದು ಕರೆಯಲ್ಪಡುವ), ಮೆಹ್ತರಿನ್ ಕೊರ್ರಂ ಅವರನ್ನು ಭೇಟಿಯಾದೆವು. ಮಲೇರಿಯಾಕ್ಕೆ ತುತ್ತಾಗಿರುವ ಅನುಪ ಬಾಯಿ ಮಂಡವಿ ಎಂಬ ಹೆಂಗಸಿನ ಮನೆಯಿಂದ ಆಕೆಯು ಆಗ ತಾನೆ ವಾಪಸ್ಸು ಬಂದಿದ್ದರು. ಮೆಹ್ತರಿನ್, ಅನುಪ ಅವರಿಗೆ ಇದಕ್ಕಾಗಿ ಔಷಧವನ್ನು ಒದಗಿಸಿದ್ದರು.
"ಕೊರೊನಾವೈರಸ್ ಸರ್ವವ್ಯಾಪಿ ವ್ಯಾಧಿಯ ಬಗ್ಗೆ ನಮಗೆ ಮಾಹಿತಿ ನೀಡಲಾಗಿದೆ. ನಾನು ಪ್ರತಿಯೊಂದು ಮನೆಗೂ ವೈಯಕ್ತಿಕವಾಗಿ ತೆರಳಿ, ಪ್ರತಿಯೊಬ್ಬರಿಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ವಿನಂತಿಸಿದೆ. ಅಲ್ಲದೆ ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವಂತೆ ಅವರಿಗೆ ತಿಳಿಸಿದೆ", ಎಂದು ಆಕೆ ತಿಳಿಸಿದರು. ಆಕೆಯು ಸಭೆಯೊಂದರಲ್ಲಿ ಅವರಿಗೆ ಈ ಬಗ್ಗೆ ತಿಳಿಸಿದರೆ? "ಇಲ್ಲ, ನಾವು ಸಭೆಯನ್ನು ಆಯೋಜಿಸಿದಲ್ಲಿ, ಜನರು ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳುತ್ತಾರೆ... ನಮ್ಮದು 31 ಮನೆಗಳ ಚಿಕ್ಕ ಗ್ರಾಮ. ಹೀಗಾಗಿ, ನಾನು ಪ್ರತಿಯೊಂದು ಮನೆಗೂ ಭೇಟಿ ನೀಡುವ ಮೂಲಕ ಇದನ್ನು ನಿರ್ವಹಿಸಿದೆ", ಎನ್ನುತ್ತಾರೆ ಆಕೆ.
ಆಕೆ ಹಾಗೂ ಆಕೆಯ ಸಹೋದ್ಯೋಗಿಯು ಸಾಮಾಜಿಕ ಅಂತರವನ್ನು ಕುರಿತಂತೆ ಕಾಳಜಿವಹಿಸುತ್ತಿದ್ದಾರೆ. ಒಂದು ಸಂದರ್ಭದಲ್ಲಿ, "ಕುಮ್ಹಡ ಗ್ರಾಮದ ಅಶೋಕ್ ಮಕ್ರಂ ಅವರ ಮನೆಯಲ್ಲಿ ತಿಥಿಯ ಕಾರ್ಯವನ್ನು ನಡೆಸಲಾಗುತ್ತಿತ್ತು. ನಾನು; ಬನ್ರೌಡ್, ಕುಮ್ಹಡ ಮತ್ತು ಮರ್ದಪೊಟಿಯಲ್ಲಿನ ಮಿತನಿನ್ ಜೊತೆಗೆ ಅಲ್ಲಿಗೆ ತೆರಳಿ, ಕುಟುಂಬದ ಸದಸ್ಯರು ಹಾಗೂ ನೆಂಟರಿಷ್ಟರು ಒಬ್ಬರಿಂದೊಬ್ಬರಿಗೆ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದೆವು. ಶ್ರದ್ಧಾಂಜಲಿ ಸಮಾರಂಭವು ಮುಗಿಯುವವರೆಗೂ ಇಡೀ ದಿನ ನಾವು ಅಲ್ಲಿಯೇ ಇದ್ದೆವು."
ಆಕೆಯು ಈ ಅವಧಿಯಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆ? "ನಾವು ರುಮಾಲು (ಸ್ಕಾರ್ಫ್) ಅಥವ ಟವೆಲ್ಲಿನಿಂದ ನಮ್ಮ ಮುಖವನ್ನು ಮುಚ್ಚಿಕೊಳ್ಳುತ್ತೇವೆ. ಕೈಗಳನ್ನು ಸಾಬೂನು ಅಥವ ಡೆಟಾಲ್ ದ್ರಾವಣದಿಂದ ತೊಳೆದುಕೊಳ್ಳುತ್ತೇವೆ".
ಅವರ ಬಳಿ ಮುಖಗವಸು ಇಲ್ಲವೆಂಬುದನ್ನು ಆಕೆ ದೃಢಪಡಿಸಿದರು.
ಗ್ರಾಮೀಣ ಹಂತದ ಆರೋಗ್ಯ ರಕ್ಷಣಾ ವ್ಯವಸ್ಥೆಯಡಿಯಲ್ಲಿನ ಮುಂಚೂಣಿ ಕಾರ್ಯಕರ್ತರೇ ಮಿತನಿನ್ ಅಥವ ಆಶಾ ಕಾರ್ಯಕರ್ತರು. ವೈದ್ಯರು ಅಥವ ಇತರೆ ವೈದ್ಯಕೀಯ ಕಾರ್ಯಕರ್ತರು ವಿರಳವಾಗಿ ಕಾಣಿಸಿಕೊಳ್ಳುವ ಗ್ರಾಮಗಳಲ್ಲಿ ಇವರ ಪ್ರಾಮುಖ್ಯತೆಯು ಅತ್ಯಂತ ಹೆಚ್ಚಿನದು. ಈ ಅವಧಿಯಲ್ಲಿ ಅವರಿಗೆ ಯಾವುದೇ ವೈಯಕ್ತಿಕ ಸಂರಕ್ಷಣಾ ಪರಿಕರಗಳಿಲ್ಲದಿರುವುದು ಅವರನ್ನು ಹೆಚ್ಚಿನ ಅಪಾಯಕ್ಕೀಡುಮಾಡಿದೆ.
ಆದರೂ ಮೆಹ್ತರಿನ್ ಕೊರ್ರಂ ಭಯಪಟ್ಟಿಲ್ಲ. "ನಾನೇ ಭಯಪಟ್ಟಲ್ಲಿ, ಕೆಲಸವನ್ನು ನಿರ್ವಹಿಸುವವರಾರು? ಯಾರಿಗಾದರೂ ಖಾಯಿಲೆಯಾದರೆ ನಾನು ಅವರಲ್ಲಿಗೆ ತೆರಳಲೇಬೇಕು", ಎನ್ನುತ್ತಾರೆ ಆಕೆ.
ಅನುವಾದ: ಶೈಲಜ ಜಿ. ಪಿ.