2020ರ ಜನವರಿಯ ಒಂದು ಚಳಿಗಾಲದ ನವಿರು ಮಧ್ಯಾಹ್ನ ಘರಾಪುರಿಯ ತನ್ನ ಮನೆಯಿಂದ ಹತ್ತಿರದ ಕಾಡಿಗೆ ಸೌದೆ ತರಲೆಂದು ಹೋದ ಜಯಶ್ರೀ ಮ್ಹಾತ್ರೆಯವರ ಕಾಲಿಗೆ ಏನೋ ಕುಟುಕಿದ ಅನುಭವವಾಯಿತು. ಆ 43 ವರ್ಷದ ತಾಯಿ ತನ್ನ ಕಾಲಿಗೆ ಯಾವು ಕೊಂಬೆ ಗೀರಿರಬಹುದೆಂದುಕೊಂಡು ಅದನ್ನು ನಿರ್ಲಕ್ಷಿಸಿ, ತಾನು ಸಂಗ್ರಹಿಸಿದ್ದ ಸೌದೆಯನ್ನು ಹೊರೆ ಮಾಡಿ ಹೊತ್ತು ಮನೆಯ ಕಡೆ ಹೊರಟರು.

ಇದಾದ ಸ್ವಲ್ಪ ಹೊತ್ತಿನ ನಂತರ, ಬಾಗಿಲ ಬಳಿ ಸಂಬಂಧಿಕರೊಬ್ಬರೊಡನೆ ಮಾತನಾಡುತ್ತಿದ್ದ ಅವರು ಕುಸಿದು ಬಿದ್ದರು. ಅವರ ಅಕ್ಕ ಪಕ್ಕದಲ್ಲಿದ್ದವರು ಅಂದು ಆಕೆ ಉಪವಾಸವಿದ್ದ ಕಾರಣ ಸುಸ್ತಿನಿಂದ ತಲೆ ತಿರುಗಿ ಬಿದ್ದಿರಬಹುದು ಎಂದುಕೊಂಡರು.

“ಅಂದು ಅಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆಂದು ನನಗೆ ಹೇಳಲಾಗಿತ್ತು,” ಎಂದು ಜಯಶ್ರೀಯವರ ಹಿರಿಯ ಮಗಳು, 20 ವರ್ಷದ ಭವಿಕಾ. ಆಕೆಯಾಗಿ ಆಕೆಯ ಇನ್ನೊಬ್ಬ ತಂಗಿ 14 ವರ್ಷದ ಗೌರಿಯಾಗಿ ಈ ಘಟನೆ ನಡೆದಾಗ ಅಲ್ಲಿ ಇದ್ದಿರಲಿಲ್ಲ. ಅವರು ಆಗ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು. ತಾಯಿಯು ಕುಸಿದುಬಿದ್ದ ಮತ್ತು ಸ್ವಲ್ಪ ಹೊತ್ತಿನ ನಂತರ ಮರಳಿ ಪ್ರಜ್ಞೆ ಪಡೆದ ಕುರಿತು ಅಂದು ಆ ಘಟನೆ ನಡೆಯುವಾಗ ಅಲ್ಲೇ ಇದ್ದ ನೆರೆಹೊರೆಯವರು ಅಲ್ಲಿ ನಡೆದ ಘಟನೆಯನ್ನು ಅವರಿಗೆ ವಿವರಿಸಿದ್ದರು. ಅಂದು ಅವರ ಕೈ ಬಹಳವಾಗಿ ನಡುಗುತ್ತಿತ್ತೆಂದೂ ಹೇಳಿದ್ದರು. “ಆದರೆ, ಯಾರಿಗೂ ಅಂದು ಏನಾಯಿತು ಎಂದು ತಿಳಿದಿರಲಿಲ್ಲ,” ಎನ್ನುತ್ತಾರೆ ಭವಿಕಾ.

ನಡೆದ ಘಟನೆಯ ಕುರಿತು ಜಯಶ್ರೀಯವರ ಪತಿ, 53 ವರ್ಷದ ಮಧುಕರ ಮ್ಹಾತ್ರೆಯವರಿಗೆ ಸುದ್ದಿ ಮುಟ್ಟಿಸಲೆಂದು ಅಲ್ಲೇ ಇದ್ದ ಒಬ್ಬರು ಓಡಿದರು. ಮಧುಕರ್‌ ಅವರು ಘರಾಪುರದ ದ್ವೀಪದ ಆಹಾರ ಪದಾರ್ಥ ಮಾರುವ ಅಂಗಡಿಯೊಂದನ್ನು ನಡೆಸುತ್ತಾರೆ. ಅರಬ್ಬಿ ಸಮುದ್ರದ ನಡುವೆಯಿರುವ ಈ ದ್ವೀಪವು ಖ್ಯಾತ ಎಲಿಫೆಂಟಾ ಗುಹೆಗಳಿಗೆ ಹೆಸರುವಾಸಿ. ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿಕೊಂಡಿರುವ ಈ ಸ್ಥಳವು ಮುಂಬಯಿ ನಗರದ ಆಕರ್ಷಣೀಯ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿನ ಶಿಲಾ ವಾಸ್ತುಶಿಲ್ಪಗಳು ಕ್ರಿ.ಶ. 6 – 8 ನೇ ಶತಮಾನಗಳಿಂಗಿಂತಲೂ ಹಿಂದಿನವು. ಮತ್ತು ಪ್ರತಿ ವರ್ಷ ಇದು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಈ ಸ್ಥಳವನ್ನು ಸ್ಥಳೀಯ ನಿವಾಸಿಗಳು ಹೊಟ್ಟೆಪಾಡಿಗಾಗಿ ಅವಲಂಬಿಸಿದ್ದಾರೆ. ಇಲ್ಲಿ ಅವರು ಸನ್‌ ಗ್ಲಾಸ್‌ಗಳು, ಟೋಪಿಗಳು, ಸ್ಮರಣಿಕೆಗಳು, ಮತ್ತು ತಿನ್ನಬಹುದಾದ ವಸ್ತುಗಳನ್ನು ಮಾರುತ್ತಾರೆ. ಇನ್ನೂ ಕೆಲವು ನಿವಾಸಿಗಳು ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಾರೆ.

ಪ್ರವಾಸಿ ನಕ್ಷೆಗಳಲ್ಲಿ ಈ ಸ್ಥಳವು ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದ್ದರೂ, ಇದೇ ದ್ವೀಪದಲ್ಲಿನ ಘರಾಪುರಿ ಗ್ರಾಮ ಇಂದಿಗೂ ಮೂಲಭೂತ ಆರೋಗ್ಯ ಸೌಲಭ್ಯಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ವ್ಯವಸ್ಥೆಯ ಕೊರತೆ ಎದುರಿಸುತ್ತಿದೆ. ಎರಡು ವರ್ಷಗಳ ಕೆಳಗೆ ಒಂದು ಆರೋಗ್ಯ ಕೇಂದ್ರ ತೆರೆಯಲಾಗಿತ್ತಾದರೂ ಅಲ್ಲಿಗೆ ಯಾರೂ ಬರುತ್ತಿಲ್ಲ. ಗ್ರಾಮದ 1,100 ಜನರು ರಾಜ್ ಬಂದರ್, ಶೇಟ್ ಬಂದರ್ ಮತ್ತು ಮೊರಾಬಂದರ್ ಎಂಬ ಮೂರು ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಆರೋಗ್ಯ ಸೌಲಭ್ಯದ ಕೊರೆತೆಯಿಂದಾಗಿ ಜನರು ದೋಣಿಯೇರಿಕೊಂಡು ದ್ವೀಪದಿಂದ ಹೊರಗೆ ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಈಡಾಗಿದ್ದಾರೆ. ಈ ರೀತಿಯಾಗಿ ದೂರ ಹೋಗುವುದು ದುಬಾರಿ ಮಾತ್ರವಲ್ಲದೆ ಕೆಲವೊಮ್ಮೆ ಹೋಗುವುದು ತಡವಾದ ಕಾರಣ ಪ್ರಾಣ ಹೋಗುವುದೂ ಇರುತ್ತದೆ.

PHOTO • Aakanksha
PHOTO • Aakanksha

ಎಡ: 14 ವರ್ಷದ ಗೌರಿ ಮ್ಹಾತ್ರೆ, ತನ್ನ ದಿವಂಗತ ತಾಯಿ ಜಯಶ್ರೀಯವರ ಅಂಗಡಿಯಲ್ಲಿ ಆಭರಣಗಳನ್ನು ಮಾರುತ್ತಾ, ಬರುವ ಪ್ರವಾಸಿಗರನ್ನು ಕುತೂಹಲದಿಂದ ಗಮನಿಸುತ್ತಿರುವುದು. ಬಲ: ಬಲ: ಘರಾಪುರಿ ಗ್ರಾಮದಲ್ಲಿ ಆರೋಗ್ಯ ಕೇಂದ್ರವನ್ನು ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದೆ, ಆದರೆ ಅದು ಖಾಲಿಯಾಗಿದೆ ಮತ್ತು ಯಾವುದೇ ಸಿಬ್ಬಂದಿಗಳಿಲ್ಲ

ಓಡಿಬಂದ ಮಧುಕರ ಅವರು ಜಯಶ್ರೀಯವರನ್ನು ಓಡುತ್ತಾ ಉರಾನ್‌ ಟೌನಿಗೆ ದೋಣಿ ಹಿಡಿಯಲು ಜೆಟ್ಟಿಯ ಬಳಿ ಬಂದರು. ಆದರೆ ಅವರು ಅಲ್ಲಿಂದ ಹೊರಡುವ ಮೊದಲೇ ಜಯಶ್ರೀ ಕೊನೆಯಸಿರು ಎಳೆದಿದ್ದರು. ಅವರು ತಮ್ಮ ಕೊನೆಯ ಕ್ಷಣದಲ್ಲಿ ತಮ್ಮ ಬಾಯಿಯಿಂದ ನೊರೆಯುಗುಳುತ್ತಿದ್ದರು. ಇದರಿಂದಾಗಿ ಅವರಿಗೆ ಹಾವು ಕಚ್ಚಿರಬಹುದೆನ್ನುವ ಸುಳಿವು ಸಿಕ್ಕಿತು. ಅವರ ಸುತ್ತಲಿದ್ದವರು ಆಕೆಯ ನಡುಬೆರಳಿನಲ್ಲಿ ಹಾವಿನ ಕೋರೆಹಲ್ಲಿನ ಗುರುತನ್ನು ಕಂಡಿದ್ದರು.

ಹಾವಿನ ಕಡಿತ, ಚೇಳು ಕುಟುಕುವಿಕೆ ಮತ್ತು ಕೀಟಗಳ ಕಡಿತವು ಈ ಪ್ರದೇಶದಲ್ಲಿ ಸರ್ವೇಸಾಮಾನ್ಯವಾಗಿದೆ ಎಂದು ಭವಿಕಾ ಹೇಳುತ್ತಾರೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಉರಾನ್ ತಾಲ್ಲೂಕಿನಲ್ಲಿರುವ (ರಾಯಗಡ ಎಂದೂ ಸಹ ಹೇಳಲಾಗುತ್ತದೆ) ಗ್ರಾಮದಲ್ಲಿರುವ ಜನರು, ಪ್ರಥಮ ಚಿಕಿತ್ಸೆಯನ್ನು ಪಡೆಯದ ಇಂತಹ ಕಡಿತದಿಂದ ಉಂಟಾದ ಇತರ ಸಾವುಗಳನ್ನು ನೆನಪಿಸಿಕೊಂಡರು.

ಈ ದ್ವೀಪದಲ್ಲಿ ಆಸ್ಪತ್ರೆಯಿಲ್ಲದಿರುವುದರಿಂದಾಗಿ ಕಳೆದೊಂದು ದಶಕದಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ಹಲವು ಸಾವುಗಳು ಸಂಭವಿಸಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕಿದ್ದರೆ ಈ ಸಾವುಗಳನ್ನು ತಪ್ಪಿಸಬಹುದಿತ್ತು. ಈ ಊರಿನಲ್ಲಿ ಒಂದು ಮೆಡಿಕಲ್‌ ಶಾಪ್‌ ಕೂಡಾ ಇಲ್ಲ. ಜನರು ಔಷಧಿ ಅಗತ್ಯಗಳಿಗಾಗಿ ತಮ್ಮ ದ್ವೀಪದಿಂದ ಹೊರಕ್ಕೆ ಪ್ರಯಾಣಿಸಬೇಕಾಗುತ್ತದೆ. ಮತ್ತು ಘಾರಾಪುರಿಯಿಂದ ಪ್ರಯಾಣಿಸಲು ಇರುವ ಏಕೈಕ ಮಾರ್ಗವೆಂದರೆ ಉರಾನ್ ತಾಲ್ಲೂಕಿನ ಮೋರಾ ಬಂದರಿಗೆ ದಕ್ಷಿಣಕ್ಕೆ ಹೋಗುವ ದೋಣಿ ಅಥವಾ ನವಿ ಮುಂಬೈನ ನ್ಹವಾ ಗ್ರಾಮಕ್ಕೆ ಪೂರ್ವಕ್ಕೆ ಹೋಗುವ ದೋಣಿ. ಎರಡೂ ಪ್ರಯಾಣಗಳು ಸರಿಸುಮಾರು ಅರ್ಧ ಗಂಟೆಯನ್ನು ತೆಗೆದುಕೊಳ್ಳುತ್ತವೆ. ದ್ವೀಪದ ಪಶ್ಚಿಮಕ್ಕಿರುವ ದಕ್ಷಿಣ ಮುಂಬೈನ ಕೊಲಾಬಾಗೆ ದೋಣಿ ಪ್ರಯಾಣಕ್ಕೆ ಒಂದು ಗಂಟೆ ತೆಗೆದುಕೊಳ್ಳಬಹುದು.

"ನಮ್ಮ ಹಳ್ಳಿಯಲ್ಲಿ ವೈದ್ಯರನ್ನು ಅಥವಾ ದಾದಿಯನ್ನು ನೋಡುವ ಪ್ರಶ್ನೆಯೇ ಇಲ್ಲ. ನಾವು ಮನೆಮದ್ದುಗಳು ಅಥವಾ ಯಾವುದೇ [ಮನೆಯಲ್ಲಿರುವ] ಔಷಧಿಯನ್ನು ಬಳಸುತ್ತೇವೆ", ಎಂದು ಎಲಿಫೆಂಟಾ ಗುಹೆಗಳಲ್ಲಿ ಪ್ರವಾಸ ಮಾರ್ಗದರ್ಶಿಯಾಗಿರುವ 33 ವರ್ಷದ ದೈವತ್ ಪಾಟೀಲ್ ಹೇಳುತ್ತಾರೆ. ಅವರ ತಾಯಿ ವತ್ಸಲಾ ಪಾಟೀಲ್ ಸ್ಮಾರಕ ಪ್ರದೇಶದ ಬಳಿಯ ತಾತ್ಕಾಲಿಕ ಅಂಗಡಿ ಇಟ್ಟುಕೊಂಡು ಟೋಪಿಗಳನ್ನು ಮಾರಾಟ ಮಾಡುತ್ತಿದ್ದರು, ತಿಂಗಳಿಗೆ ಸುಮಾರು 6,000 ರೂ.ಗಳನ್ನು ಸಂಪಾದಿಸುತ್ತಿದ್ದರು. ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ, ಮೇ 2021ರಲ್ಲಿ, ಅವರಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗುವ ಲಕ್ಷಣಗಳು ಕಂಡುಬಂದಾಗ, ವತ್ಸಲಾ ನೋವಿನ ಔಷಧಿಗಳನ್ನು ತೆಗೆದುಕೊಂಡು ಗುಣಮುಖರಾಗುವ ನಿರೀಕ್ಷೆಯಲ್ಲದ್ದರು. ಕೆಲವು ದಿನಗಳ ನಂತರ, ಅವರ ದೇಹದ ನೋವು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ, ಅವರು ತನ್ನ ಮಗನೊಂದಿಗೆ ದೋಣಿ ಹತ್ತಿದರು. "ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಮಾತ್ರ ನಾವು ದ್ವೀಪದಿಂದ ಹೊರಗೆ ಹೊರಡುತ್ತೇವೆ" ಎಂದು ದೈವತ್ ಹೇಳುತ್ತಾರೆ.

PHOTO • Aakanksha
PHOTO • Aakanksha

ಎಡ: ಎಲಿಫೆಂಟಾ ಗುಹೆಗಳ ಬಳಿಯ ತಮ್ಮ ಆಹಾರ ಪದಾರ್ಥಗಳ ಅಂಗಡಿಯಲ್ಲಿ ಭವಿಕಾ ಮತ್ತು ಗೌರಿ ಮ್ಹಾತ್ರೆ. ಅವರ ಪೋಷಕರು 2021ರ ಆರಂಭದಲ್ಲಿ ನಿಧನರಾದಾಗಿನಿಂದ ಅವರು ಅದನ್ನು ನಿರ್ವಹಿಸುತ್ತಿದ್ದಾರೆ. ಬಲಗಡೆ: ಅವರಿಬ್ಬರ ತಂದೆ ತಾಯಿ ಮಧುಕರ್ (ಎಡಕ್ಕೆ) ಮತ್ತು ಜಯಶ್ರೀಯವರ ಫೋಟೋಗಳು

ಮನೆಯಿಂದ ಹೊರಟ ಒಂದು ಗಂಟೆಯ ನಂತರ, ಪಾಟೀಲ್ ದಂಪತಿಗಳು ರಾಯಗಢದ ಪನ್ವೇಲ್ ತಾಲ್ಲೂಕಿನ ಗವ್ಹಾನ್ ಗ್ರಾಮದ ಆರೋಗ್ಯ ಕೇಂದ್ರವನ್ನು ತಲುಪಿದರು, ಅಲ್ಲಿ ರಕ್ತ ಪರೀಕ್ಷೆಯಲ್ಲಿ ಅವರ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ. ವತ್ಸಲಾ ಮನೆಗೆ ಹಿಂದಿರುಗಿದರು, ಆದರೆ ಮರುದಿನ ಅವರ ಸ್ಥಿತಿ ಹದಗೆಟ್ಟಿತು ಮತ್ತು ವಾಂತಿ ಮಾಡಲಾಂಭಿಸಿದರು. ಈ ಬಾರಿ, ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ಸಾಗಿಸಬೇಕಾಯಿತು, ಮತ್ತು ಅಲ್ಲಿ ಆಮ್ಲಜನಕದ ಮಟ್ಟವು ಕುಸಿಯುತ್ತಿದೆ ಎಂದು ಟೆಸ್ಟ್‌ ಮಾಡಿದಾಗ ತಿಳಿಯಿತು; ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಕೆಯನ್ನು ಚಿಕಿತ್ಸೆಗಾಗಿ ಪನ್ವೇಲ್ ನಗರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅವರು 10 ದಿನಗಳ ನಂತರ ನಿಧನರಾದರು. "ಶ್ವಾಸಕೋಶದ ವೈಫಲ್ಯ ಎಂದು ವೈದ್ಯರು ಹೇಳಿದರು" ಎಂದು ದೈವತ್ ಹೇಳುತ್ತಾರೆ.

ಸ್ಥಳೀಯ ಆರೋಗ್ಯ ಸೌಲಭ್ಯ ಮತ್ತು ಔಷಧಿಗಳ ಸುಲಭ ಲಭ್ಯತೆಯಿದ್ದಿದ್ದರೆ ವತ್ಸಲಾ ಮತ್ತು ಜಯಶ್ರೀ ಇಬ್ಬರ ಆರೋಗ್ಯದ ಪರಿಸ್ಥಿತಿಯ ಫಲಿತಾಂಶವನ್ನು ಬದಲಾಯಿಸಬಹುದಿತ್ತು.

ಜಯಶ್ರೀಯವರು ಮರಣ ಹೊಂದಿದ ಒಂದು ತಿಂಗಳ ನಂತರ ಭವಿಕಾ ಮತ್ತು ಗೌರಿಯ ತಂದೆ ಮಧುಕರ ಅವರು ಕೂಡ ನಿಧನ ಹೊಂದಿದ್ದರಿಂದಾಗಿ ಮಕ್ಕಳಿಬ್ಬರೂ ಅನಾಥರಾದರು. ಹೃದಯಾಘಾತದಿಂದ ಸತ್ತರು ಎಂದು ಸಹೋದರಿಯರು ಹೇಳುತ್ತಾರೆ. ಮಧುಕರ ಅವರು ಮಧುಮೇಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಒಂದು ದಿನ ಬೆಳಗಿನ ಹೊತ್ತಿನಲ್ಲಿ ಅವವರು ರಕ್ತ ವಾಂತಿ ಮಾಡಿಕೊಳ್ಳುವುದನ್ನು ಭವಿಕಾ ನೋಡಿದರು. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲು ಕುಟುಂಬವು ಮರುದಿನ ಬೆಳೆಗ್ಗೆಯ ತನಕ ಕಾಯಬೇಕಾಯಿತು. ಅವರನ್ನು ನೆರೊಲ್‌ ಎನ್ನುವಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ದೋಣಿ ಮತ್ತು ರಸ್ತೆಯ ಮೂಲಕ ಅಲ್ಲಿಗೆ ಒಂದು ಗಂಟೆಯ ದಾರಿಯಾಗುತ್ತದೆ. ಮಧುಕರ 20 ದಿನಗಳ ನಂತರ, ಫೆಬ್ರವರಿ 11, 2020ರಂದು ನಿಧನರಾದರು.

ಮ್ಹಾತ್ರೆ ಕುಟುಂಬವು ಅಗ್ರಿ ಕೋಲಿ ಸಮುದಾಯಕ್ಕೆ ಸೇರಿದ್ದು, ಇದನ್ನು ಮಹಾರಾಷ್ಟ್ರದಲ್ಲಿ ಇತರ ಹಿಂದುಳಿದ ವರ್ಗ ಎಂದು ಪಟ್ಟಿ ಮಾಡಲಾಗಿದೆ. ಇಬ್ಬರು ಸಹೋದರಿಯರಾದ ಭವಿಕಾ ಮತ್ತು ಗೌರಿ, ಈಗ ಜೀವನ ಸಾಗಿಸುವ ಸಲುವಾಗಿ ತಮ್ಮ ಹೆತ್ತವರ ಅಂಗಡಿಯನ್ನು ನಡೆಸುತ್ತಿದ್ದಾರೆ.

*****

ಎಲಿಫೆಂಟಾ ಗುಹೆಗಳಿಗೆ ಭೇಟಿ ನೀಡಲು ಘರಾಪುರಿಯ ಜೆಟ್ಟಿಯಲ್ಲಿ ಇಳಿಯುವ ಪ್ರವಾಸಿಗರು ಪ್ರವಾಸಿ ಸ್ಮರಣಿಕೆಗಳು ಮತ್ತು ಆಹಾರವನ್ನು ಮಾರಾಟ ಮಾಡುವ ಮಳಿಗೆಗಳನ್ನು ಹಾದುಹೋಗುವ ಸಾಧ್ಯತೆಯಿದೆ. ಕತ್ತರಿಸಿದ ಮಾವಿನಕಾಯಿ, ಸೌತೆಕಾಯಿಗಳು ಮತ್ತು ಚಾಕೊಲೇಟುಳ ತಟ್ಟೆಗಳನ್ನು ಹೊಂದಿರುವವಂತಹ ಒಂದು ಸ್ಟಾಲ್ ಒಂದರಲ್ಲಿ 40 ವರ್ಷದ ಶೈಲೇಶ್ ಮ್ಹಾತ್ರೆ ಕೆಲಸ ಮಾಡುತ್ತಿದ್ದಾರೆ - ಅವರು ಪ್ರತಿಬಾರಿಯೂ ತನ್ನ ನಾಲ್ಕು ಜನರ ಕುಟುಂಬದಲ್ಲಿ ಯಾರಿಗಾದರೂ ವೈದ್ಯಕೀಯ ಆರೈಕೆಯ ಅಗತ್ಯವಿರುವಾಗ ಕೆಲಸಕ್ಕೆ ರಜೆ ಮಾಡಬೇಕಿರುತ್ತದೆ. ಇದರಿಂದಾಗಿ ಅವರು ಒಂದು ದಿನದ ಕೆಲಸ ಮತ್ತು ವೇತನವನ್ನು ಕಳೆದುಕೊಳ್ಳುತ್ತಾರೆ. 2021ರ ಸೆಪ್ಟೆಂಬರಿನಲ್ಲಿ, ಅವರ ತಾಯಿ 55 ವರ್ಷದ ಹೀರಾಬಾಯಿ ಮ್ಹಾತ್ರೆ ಒದ್ದೆ ಬಂಡೆಯ ಮೇಲೆ ಜಾರಿ ಕಾಲು ಮುರಿದುಕೊಂಡರು. ಅವರಿಗೆ ಯಾವುದೇ ನೋವಿನ ಔಷಧಿ ಪಡೆಯಲು ಸಾಧ್ಯವಿರಲಿಲ್ಲ ಮತ್ತು ರಾತ್ರಿಯಿಡೀ ನರಳುತ್ತಿದ್ದರು. ಶೈಲೇಶ್ ಮರುದಿನ ಅವರನ್ನು ಉರಾನ್‌ಗೆ ದೋಣಿ ಮೂಲಕ ಕರೆದೊಯ್ಯಬೇಕಾಯಿತು.

PHOTO • Aakanksha
PHOTO • Aakanksha

ಎಡ: ಶೈಲೇಶ್ ಮ್ಹಾತ್ರೆ ಅವರು ಕೆಲಸ ಮಾಡುವ ಎಲಿಫೆಂಟಾ ಗುಹೆಗಳಿಗೆ ಭೇಟಿ ನೀಡಲು ಪ್ರವಾಸಿಗರು ಬರುವ ಜೆಟ್ಟಿಯ ಬಳಿಯಿರುವ ಹಣ್ಣಿನ ಅಂಗಡಿಯಲ್ಲಿ. ಬಲ: ಶೈಲೇಶ್ ಅವರ ತಾಯಿ ಹೀರಾಬಾಯಿ ಮ್ಹಾತ್ರೆ ಒದ್ದೆ ಬಂಡೆಯ ಮೇಲೆ ಜಾರಿ ಬಿದ್ದ ನಂತರ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಮತ್ತು ಔಷಧಿಗಳಿಗಾಗಿ ನೀರನ್ನು ದಾಟಲು ಅವರು ಮರುದಿನದವರೆಗೆ ಕಾಯಬೇಕಾಯಿತು

"[ಉರಾನ್‌ನಲ್ಲಿರುವ] ಆಸ್ಪತ್ರೆಯು ನನ್ನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲು 70,000 ರೂಪಾಯಿಗಳನ್ನು ಕೇಳಿತು" ಎಂದು ಹೀರಾಬಾಯಿ ಹೇಳುತ್ತಾರೆ. "ನಮ್ಮಲ್ಲಿ ಅಷ್ಟೊಂದು ಹಣ ಇರಲಿಲ್ಲ, ಆದ್ದರಿಂದ ಪನ್ವೇಲ್ [ಒಂದು ಗಂಟೆ ದೂರ] ಹೋದೆವು, ಅಲ್ಲಿ ನಮಗೆ ಅದೇ ಮೊತ್ತವನ್ನು ಕೇಳಲಾಯಿತು. ನಾವು ಕೊನೆಗೆ ಜೆಜೆ ಆಸ್ಪತ್ರೆಗೆ (ಮುಂಬೈನ) ಹೋದೆವು, ಅಲ್ಲಿ ನನಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು. ನನಗೆ ಅಲ್ಲಿ ಈ ಪ್ಲಾಸ್ಟರ್ ಹಾಕಲಾಯಿತು." ಕೊನೆಗೂ ಉಚಿತ ಚಿಕಿತ್ಸೆ ಪಡೆದು ಕೇವಲ ಔಷಧಿಗಳಿಗಷ್ಟೇ ಹಣ ನೀಡಿದರೂ, ಕುಟುಂಬವು ಚಿಕಿತ್ಸೆ, ಔಷಧಿಗಳು ಮತ್ತು ಪ್ರಯಾಣಕ್ಕಾಗಿ 10,000 ರೂ.ಗಳನ್ನು ಖರ್ಚು ಮಾಡಿತು.

ದ್ವೀಪದಲ್ಲಿ ಯಾವುದೇ ಬ್ಯಾಂಕ್ ಇಲ್ಲ, ಎಟಿಎಂ ಸಹ ಇಲ್ಲ, ಆದ್ದರಿಂದ ಶೈಲೇಶ್ ಸಂಬಂಧಿಕರು ಮತ್ತು ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಯಿತು. ಅವರು ಕುಟುಂಬದ ಏಕೈಕ ಸಂಪಾದನೆ ಹೊಂದಿರುವ ಸದಸ್ಯರು ಮತ್ತು ಅಂಗಡಿಯಲ್ಲಿ ಸಹಾಯಕರಾಗಿ ಅವರ ಕೆಲಸದಿಂದ ಹೆಚ್ಚು ಸಂಬಳ ದೊರೆಯುವುದಿಲ್ಲ. ಕುಟುಂಬವು ಈಗಾಗಲೇ 30,000 ರೂ.ಗಳ ವೈದ್ಯಕೀಯ ಸಾಲವನ್ನು (ಕೋವಿಡ್ -19 ಚಿಕಿತ್ಸೆಗಾಗಿ) ಭರಿಸಿದೆ.

ತನ್ನ ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡು, ನಡೆಯಲು ಸಾಧ್ಯವಾಗದೆ, ಹೀರಾಬಾಯಿ ಚಿಂತಿತರಾಗಿದ್ದರು. "ನಾನು ಈ ಪ್ಲಾಸ್ಟರನ್ನು ನೋಡುತ್ತಲೇ ಇದ್ದೆ ಮತ್ತು ಇದನ್ನು ಪರೀಕ್ಷಿಸಲು ಮತ್ತು ತೆಗೆದುಹಾಕಲು ನಾನು ಮುಂಬೈಗೆ ಹೇಗೆ ಹೋಗುವುದು ಎನ್ನುವ ಕುರಿತು ಯೋಚಿಸುತ್ತಿದ್ದೆ" ಎಂದು ಅವರು ಹೇಳಿದರು, "ಜಂಗಲ್ ಸಮಜ್ ಕರ್ ಚೋಡ್ ದಿಯಾ ಹೈ [ನಮ್ಮನ್ನು ಈ ಕಾಡಿನಲ್ಲಿ ಅನಾಥವಾಗಿ ಬಿಡಲಾಗಿದೆ]."

ಅವರ ಈ ಅನಿಸಿಕೆ ಊರಿನದೂ ಆಗಿದೆ. ಇಲ್ಲಿ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು 2017ರಿಂದ ಉರಾನ್ ಜಿಲ್ಲಾ ಪರಿಷತ್‌ಗೆ ಮನವಿ ಸಲ್ಲಿಸುತ್ತಿರುವ ಸರಪಂಚ್ ಬಲಿರಾಮ್ ಠಾಕೂರ್ ಅವರು ಅದೇ ಭಾವನೆಯನ್ನು ಹಂಚಿಕೊಂಡರು: “ನಾವು ಅಂತಿಮವಾಗಿ 2020ರಲ್ಲಿ ಶೆಟ್‌ಬಂದರ್‌ನಲ್ಲಿ ಆಸ್ಪತ್ರೆ ನಿರ್ಮಿಸಿದ್ದೇವೆ. ಆದರೆ ಈಲ್ಲಿ ಉಳಿದುಕೊಳ್ಳಬಲ್ಲ ವೈದ್ಯರನ್ನು ಹುಡುಕಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳಿದರು. ಭಾರತೀಯ ಆರೋಗ್ಯ ಕಾರ್ಯಪಡೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಜಂಟಿಯಾಗಿ 2018ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ: ಮಹಾರಾಷ್ಟ್ರವು ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ವೈದ್ಯರನ್ನು ಹೊಂದಿದೆ. ರಾಜ್ಯದಲ್ಲಿ ಕೇವಲ 8.6ರಷ್ಟು ವೈದ್ಯಕೀಯ ವೃತ್ತಿಪರರು ಹಳ್ಳಿಗಳಲ್ಲಿ ಕೆಲಸ ಮಾಡುತ್ತಾರೆ.

ಬಲಿರಾಮ್ ಆರೋಗ್ಯ ಕಾರ್ಯಕರ್ತರನ್ನು ನೇಮಿಸುವಂತೆಯೂ ಕೇಳುತ್ತಿದ್ದಾರೆ. ಆದರೆ “ಯಾರೂ ಇಲ್ಲಿ ಉಳಿಯಲು ಸಿದ್ಧರಿಲ್ಲ. ಗ್ರಾಮದಲ್ಲಿ ನಮಗೆ ಮಾತ್ರವಲ್ಲ, ಪ್ರವಾಸಿಗರಿಗೂ ವೈದ್ಯಕೀಯ ಸೌಲಭ್ಯ ಬೇಕು. ಹಿಂದೊಮ್ಮೆ ಟ್ರೆಕ್ಕಿಂಗ್ ಮಾಡುವಾಗ ಬಿದ್ದ ಪ್ರವಾಸಿಗರನ್ನು ಮುಂಬೈಗೆ ಸ್ಥಳಾಂತರಿಸಬೇಕಾಯಿತು,” ಬಲಿರಾಮ್ ಹೇಳಿದರು

PHOTO • Aakanksha
PHOTO • Aakanksha

ಎಡ: ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಸ್ಥಾಪಿಸುವಂತೆ ಘರಾಪುರಿ ಸರಪಂಚ್ ಬಲಿರಾಮ್ ಠಾಕೂರ್ ಉರಾನ್ ಜಿಲ್ಲಾ ಪರಿಷತ್ ಗೆ ಮನವಿ ಸಲ್ಲಿಸಿದರು. ಆದರೆ ಇಲ್ಲಿ ಉಳಿಯಬಲ್ಲ ವೈದ್ಯರು ಸಿಗಲಿಲ್ಲ. ಬಲ: ದ್ವೀಪದ ನಿವಾಸಿಗಳು ದೋಣಿ ಮೂಲಕ ಮಾತ್ರ ಎಲ್ಲಿಗಾದರೂ ಹೋಗಲು ಸಾಧ್ಯ

ಘರಾಪುರಿ ನಿವಾಸಿಗಳ ಆರೋಗ್ಯ ಡಾ.ರಾಜಾರಾಂ ಭೋಸ್ಲೆ ಅವರ ಕೈಯಲ್ಲಿದೆ. ಇವರು 2015ರಿಂದ ಕೊಪ್ರೋಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಉಸ್ತುವಾರಿಯಲ್ಲಿ 55 ಗ್ರಾಮಗಳಿವೆ. ಅವರ ಪಿಎಚ್‌ಸಿಯಿಂದ ಘರಾಪುರಿಗೆ (ರಸ್ತೆ, ದೋಣಿ ಮೂಲಕ) ಪ್ರಯಾಣಿಸಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. "ನಮ್ಮ ನರ್ಸ್‌ಗಳು ತಿಂಗಳಿಗೆ ಎರಡು ಬಾರಿ ಅಲ್ಲಿಗೆ ಹೋಗುತ್ತಾರೆ. ಯಾವುದೇ ತುರ್ತು ಪರಿಸ್ಥಿತಿಯಿದ್ದಲ್ಲಿ ನನಗೆ ತಿಳಿಸುತ್ತಾರೆ" ಎಂದು ಅವರು ಹೇಳಿದರು. ಅವರ ಅಧಿಕಾರಾವಧಿಯಲ್ಲಿ ಯಾವುದೇ ವೈದ್ಯಕೀಯ ತುರ್ತುಸ್ಥಿತಿಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಕೊಪ್ರೋಲಿ ಪಿಎಚ್‌ಸಿಯ ದಾದಿಯರು ಅಂಗನವಾಡಿ ಕೇಂದ್ರ ಅಥವಾ ಘರಾಪುರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರೋಗಿಗಳನ್ನು ನೋಡುತ್ತಾರೆ. ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತೆಯೂ ಆಗಿರುವ ಸಾರಿಕಾ ತಾಳೆ ಅವರು 2016ರಿಂದ ಈ ಗ್ರಾಮದ (ಇತರ 15 ಗ್ರಾಮಗಳನ್ನು ಒಳಗೊಂಡಂತೆ) ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪೋಲಿಯೊ ಹನಿ ಹಾಕಲು ಮತ್ತು ಚೊಚ್ಚಲ ತಾಯಂದಿರನ್ನು ಭೇಟಿ ಮಾಡಲು ಅವರು ತಿಂಗಳಿಗೆ ಎರಡು ಬಾರಿ ಹಳ್ಳಿಗಳಿಗೆ ಹೋಗುತ್ತಾರೆ.

ಮಳೆಗಾಲದಲ್ಲಿ ಅಲೆಗಳ ರಭಸಕ್ಕೆ ದೋಣಿಗಳು ಸಂಚರಿಸದ ಕಾರಣ ಇಲ್ಲಿಗೆ ಬರಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಅವರು. ಘರಾಪುರಿಯಲ್ಲಿ ವಾಸಿಸುವುದು ತನಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು. “ನನಗೆ (ಸಣ್ಣ) ಮಕ್ಕಳಿದ್ದಾರೆ. ಅವರು ಎಲ್ಲಿ ಓದುತ್ತಾರೆ? ನನ್ನ ಕೆಲಸಕ್ಕಾಗಿ ನಾನು ಇಲ್ಲಿಂದ ಬೇರೆ ಹಳ್ಳಿಗಳಿಗೆ ಹೋಗುವುದು ಹೇಗೆ?”

ಘರಾಪುರಿಯಲ್ಲಿ ಇತ್ತೀಚೆಗೆ ನೀರು ಮತ್ತು ವಿದ್ಯುತ್‌ನಂತಹ ಇತರ ಸೌಲಭ್ಯಗಳು ಲಭ್ಯವಾಗಿವೆ. 2018ರವರೆಗೆ, ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (MTDC) ಒದಗಿಸಿದ ಜನರೇಟರ್‌ಗಳಿಂದ ಉತ್ಪಾದಿಸಲಾದ ವಿದ್ಯುತ್ ಮಾತ್ರ ದ್ವೀಪಕ್ಕೆ ಲಭ್ಯವಿತ್ತು; ಅದು ಕೂಡಾ ಸಂಜೆ 7ರಿಂದ ರಾತ್ರಿ 10ರವರೆಗೆ ಓಡುತ್ತಿತ್ತು. 2019ರಲ್ಲಿ ನೀರಿನ ಲೈನುಗಳು ಬಂದವು. ದ್ವೀಪದಲ್ಲಿದ್ದ ಏಕೈಕ ಶಾಲೆಯನ್ನು ಮುಚ್ಚಲಾಯಿತು.

PHOTO • Aakanksha
PHOTO • Aakanksha

ಎಡ: ದ್ವೀಪದಿಂದ ಮುಂಬೈಯ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಹೊಯ್ದಾಡುವ ದೋಣಿಯಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ್ದನ್ನು ಸಂಧ್ಯಾ ಭೋರ್ ನೆನಪಿಸಿಕೊಳ್ಳುತ್ತಾರೆ. ಬಲ: ಘರಾಪುರಿಯಲ್ಲಿರುವ ಜಿಲ್ಲಾ ಪರಿಷತ್ ಶಾಲೆಯನ್ನು ಏಪ್ರಿಲ್ 2022ರಲ್ಲಿ ಮುಚ್ಚಲಾಯಿತು

ಸೌಲಭ್ಯಗಳ ಕೊರತೆಯಿಂದಾಗಿ ಗರ್ಭಿಣಿಯರು ತಮ್ಮ ನಿಗದಿತ ಹೆರಿಗೆ ದಿನಾಂಕಕ್ಕೆ ಕೆಲವು ತಿಂಗಳು ಮುಂಚಿತವಾಗಿ ಗ್ರಾಮವನ್ನು ತೊರೆದರೂ ಆಶ್ಚರ್ಯವಿಲ್ಲ. ಅನೇಕರು ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಅಥವಾ ಮುಖ್ಯಭೂಮಿಯಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆಯಲು ದ್ವೀಪವನ್ನು ಬಿಡುತ್ತಾರೆ. ಈ ಎರಡೂ ಕಾರ್ಯಗಳು ಹೆಚ್ಚುವರಿ ವೆಚ್ಚಗಳನ್ನು ಒಳಗೊಂಡಿರುತ್ತವೆ. ಗರ್ಭಿಣಿಯರಿಗೆ ಬೇಕಾಗುವ ವೈದ್ಯಕೀಯ ಸಾಮಾಗ್ರಿಗಳು, ತಾಜಾ ತರಕಾರಿ, ಬೇಳೆಕಾಳುಗಳನ್ನು ಹುಡುಕುವುದು ಕಷ್ಟದ ಕೆಲಸ ಎನ್ನುತ್ತಾರೆ ಇಲ್ಲಿ ತಂಗಿರುವವರು.

2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ, ದೋಣಿಗಳು ಚಲಿಸದ ಕಾರಣ ಗರ್ಭಿಣಿಯರು ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆ ವರ್ಷದ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದಾಗ 26 ವರ್ಷದ ಕ್ರಾಂತಿ ಘರಾತ್ ಮೂರು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ಎಲ್ಲಾ ರೀತಿಯ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ಹೋಗಲು ಸಹ ಆಕೆಗೆ ಸಾಧ್ಯವಾಗಲಿಲ್ಲ. ಕೆಲವೊಮ್ಮೆ ಗರ್ಭಧಾರಣೆಗೆ ಸಂಬಂಧಿಸಿದ ಅಸ್ವಸ್ಥತೆ ಅಸಹನೀಯವಾಗಿರುತ್ತದೆ ಎಂದು ಅವರು ಹೇಳಿದರು. "ನನ್ನ ಸ್ಥಿತಿಯನ್ನು ವಿವರಿಸಲು ನಾನು ವೈದ್ಯರೊಂದಿಗೆ ಫೋನ್‌ನಲ್ಲಿ ಮಾತನಾಡಬೇಕಾಯಿತು" ಎಂದು ಅವರು ಅಂದಿನ ಪರಿಸ್ಥಿತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.

ಮುಂಬೈನ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ದೋಣಿಯಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ಸಂಧ್ಯಾ ಭೋಯಿರ್ ನೆನಪಿಸಿಕೊಳ್ಳುತ್ತಾರೆ. ಇದು 30 ವರ್ಷಗಳ ಹಿಂದೆ. ಸ್ಥಳೀಯ ದಾದಿ (ಸೂಲಗಿತ್ತಿ) ಹೆರಿಗೆ ಮಾಡಿಸಿ ಮಗುವನ್ನು ಹೊರತರಲು ಕಷ್ಟಪಡುತ್ತಿದ್ದರು. "ನಾನು ಸಂಪೂರ್ಣವಾಗಿ ದೇವರಿಗೆ ಬಿಟ್ಟುಬಿಟ್ಟಿದ್ದೆ" ಎಂದು ಹೊಯ್ದಾಡುವ ದೋಣಿಯಲ್ಲಿ ಮಗುವಿಗೆ ಜನ್ಮ ನೀಡಿದ ನೆನಪಲ್ಲಿ ನಗುತ್ತಿದ್ದರು. ಒಂದು ದಶಕದ ಹಿಂದೆ ಗ್ರಾಮದಲ್ಲಿ ಇಬ್ಬರು ಸೂಲಗಿತ್ತಿಯರಿದ್ದರು. ಕಾಲಾನಂತರದಲ್ಲಿ ಸಾಂಸ್ಥಿಕ ಜನನಗಳ ಪ್ರಾಮುಖ್ಯತೆ ಮತ್ತು ಸರ್ಕಾರದ ಪ್ರೋತ್ಸಾಹಗಳು ಹೆಚ್ಚಾದಂತೆ ಅವರ ಸೇವೆಗಳ ಅಗತ್ಯವು ಗಮನಾರ್ಹವಾಗಿ ಕಡಿಮೆಯಾಗಿದೆ.

PHOTO • Aakanksha
PHOTO • Aakanksha

ಎಡ: ಕ್ರಾಂತಿ ಘರಾತ್ ತನ್ನ ಮಗು ಹಿಯಾನ್ಶ್ ಜೊತೆ ತನ್ನ ಪತಿಯೊಡನೆ ನಡೆಸುವ ಸಣ್ಣ ಅಂಗಡಿಯಲ್ಲಿ. ಬಲ: ಗ್ರಾಮಸ್ಥರಿಗೆ ಮುಖ್ಯ ಭೂಮಿಯನ್ನು ತಲುಪಲು ಬೋಟ್ ಜೆಟ್ಟಿ

ಗ್ರಾಮದಲ್ಲಿ ಔಷಧ ಅಂಗಡಿಯ ಕೊರತೆಯಿಂದಾಗಿ ದ್ವೀಪವಾಸಿಗಳು ಮುಂಚಿತವಾಗಿ ಯೋಜನೆಗಳನ್ನು ಮಾಡಲು ಒತ್ತಾಯಿಸಲ್ಪಡುತ್ತಾರೆ. "ನಾನು ಯಾವಾಗ ಆಸ್ಪತ್ರೆಗೆ ಹಿಂತಿರುಗಬಹುದು ಎಂದು ನನಗೆ ತಿಳಿದಿಲ್ಲದ ಕಾರಣ, ಔಷಧಿಗಳನ್ನು ಕೆಲವು ದಿನಗಳವರೆಗೆ ಮಾತ್ರ ಶಿಫಾರಸು ಮಾಡಿದ್ದರೂ ಸಹ, ನಾನು ತಿಂಗಳವರೆಗೆ ಔಷಧಿಗಳನ್ನು ಖರೀದಿಸುತ್ತೇನೆ" ಎಂದು ಅವರು ಹೇಳಿದರು. ಕ್ರಾಂತಿ ಮತ್ತು ಆಕೆಯ ಪತಿ ಸೂರಜ್ ಅಗ್ರಿ ಕೋಲಿ ಸಮುದಾಯಕ್ಕೆ ಸೇರಿದವರು. ಅವರು ಘರಾಪುರಿಯಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಕೋವಿಡ್-19 ಲಾಕ್‌ಡೌನ್‌ಗಳ ಮೊದಲು, ಅವರು ಸುಮಾರು ಮಾಸಿಕ ರೂ. 12,000 ಗಳಿಸುತ್ತಿದ್ದರು.

ಗರ್ಭಿಣಿಯಾದ ಆರನೇ ತಿಂಗಳಿನಲ್ಲಿ ಕ್ರಾಂತಿ ಉರಾನ್ ತಾಲೂಕಿನ ನವೀನ್ ಶೇವಾ ಗ್ರಾಮದಲ್ಲಿರುವ ತನ್ನ ಸಹೋದರನ ಮನೆಗೆ ತೆರಳಿದ್ದರು. "ನಾನು ಬೀಮಾರಿ (ಕೋವಿಡ್ -19) ಬಗ್ಗೆ ಚಿಂತಿತಳಾಗಿದ್ದರಿಂದ ಮೊದಲು ಅಲ್ಲಿಗೆ ಹೋಗಲಿಲ್ಲ. ಘರಾಪುರಿಯಲ್ಲಿ ಸುರಕ್ಷಿತವಾಗಿರಬಹುದೆಂದುಕೊಂಡೆ. ನಾನು ಭಾಯಿಗೆ (ನನ್ನ ಸಹೋದರ) ಹೊರೆಯಾಗಲು ಬಯಸುವುದಿಲ್ಲ,” ಎಂದು ಅವರು ಹೇಳಿದರು.

ಅಣ್ಣನ ಬಳಿ ಹೊರಡುವಾಗ ಸಾಮಾನ್ಯ ಬೆಲೆಗಿಂತ (30 ರೂ.) ಹತ್ತು ಪಟ್ಟು ಹೆಚ್ಚು ಬೆಲೆ ಇರುವುದು ಕಂಡು ಬಂತು. 300 ಖರ್ಚು ಮಾಡಿ ದೋಣಿ ಪ್ರಯಾಣ ಮಾಡಿದೆ. ಕೋವಿಡ್ -19 ಪ್ರಕರಣಗಳಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಅಪಾಯಕಾರಿ ಎಂದು ಆತಂಕಗೊಂಡ ಆಕೆಯ ಕುಟುಂಬವು ಖಾಸಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿ ಸುಮಾರು ರೂ. 80,000 ಖರ್ಚು ಮಾಡಿತು. ಇದನ್ನು ವೈದ್ಯರ ಶುಲ್ಕ, ಪರೀಕ್ಷೆಗಳು ಮತ್ತು ಔಷಧಿಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಕ್ರಾಂತಿ ಹೇಳಿದರು. ಆಕೆ ಮತ್ತು ಸೂರಜ್ ಅವರು ಕೂಡಿಟ್ಟಿದ್ದ ಹಣವನ್ನು ಇದಕ್ಕಾಗಿ ಬಳಸಿದ್ದಾರೆ.

ಕ್ರಾಂತಿಯವರು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಮ್‌ಎಮ್‌ವಿವೈ), ಗರ್ಭಿಣಿ ಮತ್ತು ಹೆರಿಗೆಯಾದ ತಾಯಂದಿರ ಆರೋಗ್ಯವನ್ನು ಸುಧಾರಿಸಲು ಇರುವ ಕೇಂದ್ರ ಸರ್ಕಾರದ ಹೆರಿಗೆ ಪ್ರಯೋಜನ ಯೋಜನೆಗೆ ಅರ್ಹವಾಗಿದ್ದರು. ಆಕೆಗೆ ರೂ. 5,000 ಬರಬೇಕಿದೆ. ಆದರೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರೂ ಕ್ರಾಂತಿಯವರಿಗೆ ಇದುವರೆಗೆ ಆ ಮೊತ್ತ ಬಂದಿಲ್ಲ. ಘರಾಪುರಿ ನಿವಾಸಿಗಳ ಬಗೆಗಿನ ಅಧಿಕೃತ ಅಸಡ್ಡೆ ಆರೋಗ್ಯ ರಕ್ಷಣೆಯ ಅಂಶಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Aakanksha

آکانکشا (وہ صرف اپنے پہلے نام کا استعمال کرتی ہیں) پاری کی رپورٹر اور کنٹینٹ ایڈیٹر ہیں۔

کے ذریعہ دیگر اسٹوریز Aakanksha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru