ಬಿಳಿ ಬಣ್ಣದ ಚುಕ್ಕೆಗಳಿರುವ ಕಂದು ಬಣ್ಣದ ಗರಿಗಳು ಸಣ್ಣ ಸಣ್ಣ ಹುಲ್ಲುಗಳ ತುಂಬೆಲ್ಲಾ ಹರಡಿಕೊಂಡಿವೆ.
ಇವುಗಳನ್ನು ಹುಡುಕುತ್ತಾ ರಾಧೇಶ್ಯಾಮ್ ಬಿಷ್ಣೋಯ್ ಮಂದ ಬೆಳಕಿನಲ್ಲಿ ಆ ಪ್ರದೇಶದಲ್ಲೆಲ್ಲಾ ಸುತ್ತುತ್ತಾರೆ. ತಾನು ಅಂದುಕೊಂಡದ್ದು ಸುಳ್ಳಾಗಲಿ ಎಂದು ಅವರು ಬಯಸುತ್ತಾರೆ. "ಈ ಗರಿಗಳನ್ನು ಯಾರೋ ಕಿತ್ತಂತೆ ಕಾಣುತ್ತಿಲ್ಲ" ಎಂದು ಅವರು ಗಟ್ಟಿಯಾಗಿ ಹೇಳುತ್ತಾರೆ. ನಂತರ ಯಾರಿಗೋ ಕರೆ ಮಾಡಿ, “ನೀವು ಬರುತ್ತೀರಾ? ಖಂಡಿತವಾಗಿ ನನ್ನ ಊಹೆ ಸರಿ ಇದೆ ಅನ್ನಿಸುತ್ತಿದೆ…” ಎಂದು ಆ ವ್ಯಕ್ತಿಗೆ ಹೇಳುತ್ತಾರೆ.
ಏನೋ ಶಕುನವೆಂಬಂತೆ ನಮ್ಮ ತಲೆಯ ಮೇಲೆ 220-ಕಿಲೋವೋಲ್ಟ್ ಹೈ ಟೆನ್ಶನ್ (ಎಚ್.ಟಿ) ಕೇಬಲ್‌ಗಳು ಮಬ್ಬುಗತ್ತಲ ಸಂಜೆಯ ಆಕಾಶದ ಮೇಲೆ ಕಪ್ಪು ಗೆರೆಗಳನ್ನು ಮೂಡಿಸಿದ್ದವು.
27 ವರ್ಷ ವಯಸ್ಸಿನ ಡೇಟಾ ಸಂಗ್ರಾಹಕ ತಮ್ಮ ಕೆಲಸವನ್ನು ನೆನಪಿಸಿಕೊಂಡು ತನ್ನ ಕ್ಯಾಮೆರಾವನ್ನು ಹೊರತೆಗೆದು ಕ್ರೈಮ್ ಸೀನ್ ನ ಕ್ಲೋಸ್-ಅಪ್ ಮತ್ತು ಮಿಡ್-ಶಾಟ್‌ಗಳ ಸರಣಿ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ.
ಮರುದಿನ ಮುಂಜಾನೆ ನಾವು ಜೈಸಲ್ಮೇರ್ ಜಿಲ್ಲೆಯ ಖೇತೋಲಾಯ್ ಬಳಿಯ ಕುಗ್ರಾಮ ಗಂಗಾ ರಾಮ್ ಕಿ ಧಾನಿಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸೈಟ್‌ಗೆ ಹೋದೆವು.
ಈ ಬಾರಿ ನಮಗೆ ಯಾವುದೇ ಅನುಮಾನವಿರಲಿಲ್ಲ. ಗರಿಗಳು ಗ್ರೇಟ್ ಇಂಡಿಯನ್ ಬಸ್ಟರ್ಡ್ (ಜಿಐಬಿ) ಹಕ್ಕಿಯದ್ದಾಗಿತ್ತು. ಇದನ್ನು ಸ್ಥಳೀಯರು ಗೊಡಾವನ್ ಎಂದು ಕರೆಯುತ್ತಾರೆ.
ವನ್ಯಜೀವಿ ಪಶುವೈದ್ಯ ಡಾ. ಶ್ರವಣ್ ಸಿಂಗ್ ರಾಥೋಡ್ ಮಾರ್ಚ್ 23, 2023 ರಂದು ಬೆಳಿಗ್ಗೆ ಘಟನೆ ನಡೆದ ಸ್ಥಳದಲ್ಲಿದ್ದರು. ಅವರು ಸಾಕ್ಷ್ಯವನ್ನು ಪರಿಶೀಲಿಸುತ್ತಾ “ಎಚ್‌ಟಿ ತಂತಿಗಳಿಗೆ ಡಿಕ್ಕಿ ಹೊಡೆದು ಈ ಸಾವು ಸಂಭವಿಸಿದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಮೂರು ದಿನಗಳ ಹಿಂದೆ, ಅಂದರೆ ಮಾರ್ಚ್ 20 [2023] ರಂದು ನಡೆದಿರುವಂತೆ ಕಾಣುತ್ತದೆ,” ಎಂದರು.
ಇದು 2020 ರಿಂದ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲ್ಯೂ.ಐ.ಐ) ನೊಂದಿಗೆ ಕೆಲಸ ಮಾಡುತ್ತಿರುವ ಡಾ. ರಾಥೋಡ್ ಅವರಿಗೆ ಶವವಾಗಿ ಸಿಕ್ಕಿರುವ ನಾಲ್ಕನೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ. ಡಬ್ಲ್ಯೂ.ಐ.ಐ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಮತ್ತು ರಾಜ್ಯ ವಣ್ಯಜೀವಿ ಇಲಾಖೆಯ ಭಾಗವಾಗಿ ಕೆಲಸ ಮಾಡುತ್ತದೆ. “ಎಲ್ಲಾ ಶವಗಳು ಎಚ್‌ಟಿ ತಂತಿಗಳ ಅಡಿಯಲ್ಲಿ ಪತ್ತೆಯಾಗಿವೆ. ತಂತಿಗಳು ಮತ್ತು ಈ ದುರದೃಷ್ಟಕರ ಮರಣದ ನಡುವೆ ಒಂದು ನೇರ ಸಂಬಂಧ ಇರುವುದು ಸ್ಪಷ್ಟ,” ಎಂದು ಅವರು ಹೇಳುತ್ತಾರೆ.
ಸತ್ತಿರುವ ಈ ಪಕ್ಷಿಯು ಅತ್ಯಂತ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಆರ್ಡಿಯೊಟಿಸ್ ನಿಗ್ರಿಸೆಪ್ ಎಸ್). ಕೇವಲ ಐದು ತಿಂಗಳಲ್ಲಿ ಹೈ ಟೆನ್ಶನ್ ವೈರ್‌ಗಳಿಗೆ ಸಿಕ್ಕಿ ಸತ್ತಿರುವ ಹಕ್ಕಿಗಳಲ್ಲಿ ಇದು ಎರಡನೆಯದು. "ಇದು 2017 ರಿಂದ ಒಂಬತ್ತನೇ ಸಾವು [ಅವರು ಟ್ರ್ಯಾಕಿಂಗ್ ಮಾಡಲು ಆರಂಭಿಸಿದ ವರ್ಷ]," ಎಂದು ಜೈಸಲ್ಮೇರ್ ಜಿಲ್ಲೆಯ ಸಂಕ್ರಾ ಬ್ಲಾಕ್‌ನ ಸಮೀಪದ ಹಳ್ಳಿ ಧೋಲಿಯಾದ ರೈತ ರಾಧೇಶ್ಯಾಮ್ ಹೇಳುತ್ತಾರೆ. ಒಬ್ಬ ಉತ್ಕಟ ನಿಸರ್ಗಶಾಸ್ತ್ರಜ್ಞರಾಗಿರುವ ಇವರು ದೊಡ್ಡ ದೊಡ್ಡ ಹಕ್ಕಿಗಳ ಮೇಲೆ ನಿಗಾ ಇಟ್ಟಿರುತ್ತಾರೆ. "ಹೆಚ್ಚಿನ ಗೊಡಾವನ್ ಹಕ್ಕಿಗಳ ಸಾವು ಈ ಎಚ್‌ಟಿ ತಂತಿಗಳ ಕೆಳಗೇ ಸಂಭವಿಸಿವೆ" ಎಂದು ಅವರು ಹೇಳುತ್ತಾರೆ.
ಜಿಐಬಿ ಹಕ್ಕಿಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯಿದೆ 1972 ರ ಪರಿಚ್ಛೇದ I ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಭಾರತದ ಹುಲ್ಲುಗಾವಲುಗಳಲ್ಲಿ ನೋಡಲು ಸಿಗುತ್ತಿದ್ದ ಇವು ಇಂದು ಇಡೀ ಭೂಮಿಯಲ್ಲಿ ಇರುವ ಕಾಡಿಗಳಲ್ಲಿ ಕೇವಲ 120-150 ಮಾತ್ರ ಇವೆ. ಅವುಗಳ ಸಂಖ್ಯೆಯು ಐದು ರಾಜ್ಯಗಳ ನಡುವೆ ಹಂಚಿ ಹೋಗಿದ್ದು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಛೇದಕ ಪ್ರದೇಶಗಳಲ್ಲಿ ಸುಮಾರು 8-10 ಪಕ್ಷಿಗಳು ಮತ್ತು ಗುಜರಾತ್‌ನಲ್ಲಿ ನಾಲ್ಕು ಹೆಣ್ಣು ಪಕ್ಷಿಗಳು ಕಾಣಿಸಿಕೊಂಡಿವೆ.
ಜೈಸಲ್ಮೇರ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. "ಎರಡು ಇವೆ - ಒಂದು ಪೋಕ್ರಾನ್ ಬಳಿಯಿದೆ, ಇನ್ನೊಂದು ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಮರುಭೂಮಿ ರಾಷ್ಟ್ರೀಯ ಉದ್ಯಾನವನದಲ್ಲಿದೆ," ಎಂದು ವನ್ಯಜೀವಶಾಸ್ತ್ರಜ್ಞ ಡಾ. ಸುಮಿತ್ ದೂಕಿಯಾ ಹೇಳುತ್ತಾರೆ. ಇವರು ಈ ಪಕ್ಷಿಗಳನ್ನು ಅವುಗಳ ಆವಾಸಸ್ಥಾನ ಪಶ್ಚಿಮ ರಾಜಸ್ಥಾನದ ಹುಲ್ಲುಗಾವಲುಗಳಲ್ಲಿ ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತಾರೆ.
“ನಾವು ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಜಿಐಬಿ ಹಕ್ಕಿಗಳನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಇವುಗಳಿಗೆ ಆವಾಸಸ್ಥಾನ ನಿರ್ಮಿಸುವ ಮತ್ತು ಅವುಗಳನ್ನು ಸಂರಕ್ಷಣೆ ಮಾಡುವ ಯಾವ ಕ್ರಮವನ್ನೂ ಕೈಗೊಂಡಿಲ್ಲ,” ಎಂದು ಇಕೋಲಜಿ, ರೂರಲ್ ಡೆವಲಪ್ ಮೆಂಟ್ & ಸಸ್ಟೈನೇಬಿಲಿಟಿ (ಪರಿಸರ ವಿಜ್ಞಾನ, ಗ್ರಾಮೀಣ ಅಭಿವೃದ್ಧಿ ಮತ್ತು ಸುಸ್ಥಿರತೆ) (ERDS) ಫೌಂಡೇಶನ್‌ನಲ್ಲಿ ಗೌರವ ವೈಜ್ಞಾನಿಕ ಸಲಹೆಗಾರರಾಗಿರುವ ದೂಕಿಯಾ ಹೇಳುತ್ತಾರೆ. ಜಿಐಬಿ ಹಕ್ಕಿಗಳನ್ನು ಉಳಿಸುವ ಕೆಲಸದಲ್ಲಿ ಸಮುದಾಯಗಳು ಭಾಗವಹಿಸಲು 2015 ರಿಂದ ಈ ಪ್ರದೇಶದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
“ನನ್ನ ಜೀವಿತಾವಧಿಯಲ್ಲಿ ನಾನು ಈ ಪಕ್ಷಿಗಳನ್ನು ಆಕಾಶದಲ್ಲಿ ಹಿಂಡು ಹಿಂಡಾಗಿ ಹಾರುವುದನ್ನು ನೋಡಿದ್ದೇನೆ. ಈಗ ನಾನು ಆಕಾಶದಲ್ಲಿ ಅಪರೂಪಕ್ಕೆ ಹಾರುವ ಒಂದೇ ಹಕ್ಕಿಯನ್ನು ನೋಡುತ್ತಿದ್ದೇನೆ, " ಸುಮೇರ್ ಸಿಂಗ್ ಭಾಟಿ ಹೇಳುತ್ತಾರೆ. ಸ್ಥಳೀಯ ಪರಿಸರವಾದಿಯಾಗಿರುವ ಸುಮೇರ್ ಸಿಂಗ್ ತಮ್ಮ ನಲವತ್ತರ ಹರೆಯದಲ್ಲಿ ಜೈಸಲ್ಮೇರ್ ಜಿಲ್ಲೆಯ ತೋಪುಗಳಲ್ಲಿ ಬಸ್ಟರ್ಡ್ ಹಕ್ಕಿಗಳು ಮತ್ತು ಅವುಗಳ ಆವಾಸಸ್ಥಾನವನ್ನು ಉಳಿಸುವ ಕೆಲಸವನ್ನು ಮಾಡುತ್ತಾರೆ.
ಅವರು ಒಂದು ಗಂಟೆ ದೂರದಲ್ಲಿರುವ ಸಮ್ ಬ್ಲಾಕ್‌ನ ಸನ್ವಟಾ ಗ್ರಾಮದಲ್ಲಿ ವಾಸಿಸುತ್ತಾರೆ. ಗೊಡಾವನ್ ಸಾವು ಅವರನ್ನು ಮತ್ತು ಇತರ ಸಂಬಂಧಪಟ್ಟ ಸ್ಥಳೀಯರನ್ನು ಹಾಗೂ ವಿಜ್ಞಾನಿಗಳನ್ನು ಸೈಟ್‌ಗೆ ಬರುವಂತೆ ಮಾಡಿದೆ.
*****
ರಸ್ಲಾ ಗ್ರಾಮದ ಬಳಿ ಇರುವ ದೇಗ್ರಾಯ್ ಮಾತಾ ಮಂದಿರದಿಂದ ಸುಮಾರು 100 ಮೀಟರ್ ದೂರದಲ್ಲಿ ಪ್ಲಾಸ್ಟರ್-ಆಫ್-ಪ್ಯಾರಿಸ್‌ನಿಂದ ಮಾಡಿದ ಒಂದು ಗೊಡಾವನ್ ಮೂರ್ತಿ ಹಗ್ಗದ ಆವರಣದೊಳಗಿನ ವೇದಿಕೆಯ ಮೇಲೆ ಏಕಾಂಗಿಯಾಗಿ ನಿಂತಿದೆ. ಇದನ್ನು ಹೆದ್ದಾರಿಯಿಂದ ನೋಡಬಹುದು.
ಪ್ರತಿಭಟನೆಯ ಸಂಕೇತವಾಗಿ ಸ್ಥಳೀಯರು ಇದನ್ನು ಕೂರಿಸಿದ್ದಾರೆ. "ಇದು ಇಲ್ಲಿ ಸತ್ತಿರುವ ಜಿಐಬಿಯ ಪ್ರಥಮ ಪುಣ್ಯಸ್ಮರಣೆಯಂದು ಇದನ್ನು ಸ್ಥಾಪಸಲಾಗಿದೆ," ಎಂದು ಅವರು ನಮಗೆ ಹೇಳುತ್ತಾರೆ. ಹಿಂದಿಯಲ್ಲಿ ಇರುವ ಫಲಕದಲ್ಲಿ: '16 ಸೆಪ್ಟೆಂಬರ್ 2020 ರಂದು ದೇಗ್ರಾಯ್ ಮಾತಾ ಮಂದಿರದ ಬಳಿ ಹೆಣ್ಣು ಗೊಡಾವನ್ ಹಕ್ಕಿ ಹೈ ಟೆನ್ಷನ್ ಲೈನ್ ಗೆ ಡಿಕ್ಕಿ ಹೊಡೆದಿದೆ. ಅದರ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ,” ಎಂದು ಬರೆಯಲಾಗಿದೆ.
ಸುಮೇರ್ ಸಿಂಗ್, ರಾಧೇಶ್ಯಾಮ್ ಮತ್ತು ಜೈಸಲ್ಮೇರ್‌ನ ಇತರ ಸ್ಥಳೀಯರಿಗೆ ಸಾಯುತ್ತಿರುವ ಗೊಡಾವನ್‌ಗಳು ಮತ್ತು ಅವುಗಳ ಆವಾಸಸ್ಥಾನದ ನಾಶವು ಪಶುಪಾಲಕ ಸಮುದಾಯಗಳ ಜೀವನ ಮತ್ತು ಜೀವನೋಪಾಯದ ನಷ್ಟದ ಕಠೋರತೆಯನ್ನು ಸಂಕೇತಿಸುವಂತೆ ತೋರುತ್ತದೆ.
"ʼಅಭಿವೃದ್ಧಿʼ ಹೆಸರಿನಲ್ಲಿ ನಾವು ತುಂಬಾ ಕಳೆದುಕೊಳ್ಳುತ್ತಿದ್ದೇವೆ" ಎಂದು ಸುಮೇರ್ ಸಿಂಗ್ ಹೇಳುತ್ತಾರೆ. "ಮತ್ತು ಈ ಅಭಿವೃದ್ಧಿ ಯಾರಿಗಾಗಿ?" ಅವರು ಹೇಳುವುದರಲ್ಲಿ ಒಂದು ಅರ್ಥವಿದೆ - 100 ಮೀಟರ್ ದೂರದಲ್ಲಿ ಸೋಲಾರ್ ಫಾರ್ಮ್ ಇದೆ. ಇದರ ವಿದ್ಯುತ್ ತಂತಿಗಳು ತಲೆಯ ಮೇಲೆ ಹಾದು ಹೋಗುತ್ತವೆ, ಆದರೆ ಅವರ ಹಳ್ಳಿಯಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ, ಅಸ್ಥಿರವಾಗಿದೆ ಮತ್ತು ನಂಬಲರ್ಹವೂ ಆಗಿಲ್ಲ.
ಕಳೆದ 7.5 ವರ್ಷಗಳಲ್ಲಿ ಭಾರತದ ಆರ್‌ಇ ಸಾಮರ್ಥ್ಯವು ಶೇಕಡಾ 286 ರಷ್ಟು ಹೆಚ್ಚಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹೇಳಿದೆ. ಮತ್ತು ಕಳೆದ ದಶಕದಲ್ಲಿ, ಆದರಲ್ಲೂ ಕಳೆದ 3-4 ವರ್ಷಗಳಲ್ಲಿ, ಸೌರ ಮತ್ತು ಪವನ ಶಕ್ತಿ ಸೇರಿದಂತೆ ಸಾವಿರಾರು ನವೀಕರಿಸಬಹುದಾದ ಇಂಧನ ಸ್ಥಾವರಗಳು ಈ ರಾಜ್ಯದಲ್ಲಿ ಕಾರ್ಯಾರಂಭಗೊಂಡಿವೆ. ಅಲ್ಲದೆ, ಅದಾನಿ ರಿನ್ಯೂವಬಲ್ ಎನರ್ಜಿ ಪಾರ್ಕ್ ರಾಜಸ್ಥಾನ ಲಿಮಿಟೆಡ್ (AREPRL) ಜೋಧ್‌ಪುರದ ಭದ್ಲಾದಲ್ಲಿ 500 MW ಸಾಮರ್ಥ್ಯದ ಸೋಲಾರ್ ಪಾರ್ಕ್ ಮತ್ತು ಫತೇಘರ್, ಜೈಸಲ್ಮೇರ್‌ನಲ್ಲಿ 1,500 MW ಸಾಮರ್ಥ್ಯದ ಸೋಲಾರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅಂಡರ್ ಗ್ರೌಂಡ್ ನಲ್ಲಿ ಲೈನ್ ಗಳನ್ನು ಹಾಕಲಿದೆಯೇ ಎಂದು ಈ ಕಂಪನಿಗೆ ವೆಬ್‌ಸೈಟ್ ಮೂಲಕ ಪ್ರಶ್ನೆಯನ್ನು ಕೇಳಲಾಗಿದ್ದು ಈ ವರದಿಯನ್ನು ಪ್ರಕಟಿಸುವ ವರೆಗೆ ಉತ್ತರ ಬಂದಿಲ್ಲ.
ರಾಜ್ಯದಲ್ಲಿ ಸೌರ ಮತ್ತು ಪವನ ಶಕ್ತಿ ಉತ್ಪಾದನಾ ಕೇಂದ್ರಗಳು ವಿದ್ಯುತ್ ತಂತಿಗಳ ಬೃಹತ್ ಜಾಲದ ಮೂಲಕ ರಾಷ್ಟ್ರೀಯ ಗ್ರಿಡ್‌ಗೆ ಕಳುಹಿಸುತ್ತಿರುವ ವಿದ್ಯುತ್ ಶಕ್ತಿಯು ಬಸ್ಟರ್ಡ್‌ಗಳು, ಹದ್ದುಗಳು, ರಣಹದ್ದುಗಳು ಮತ್ತು ಇತರ ಪಕ್ಷಿ ಪ್ರಭೇದಗಳ ಹಾರಾಟಕ್ಕೆ ತಡೆಗೋಡೆಯಾಗಿ ಪರಿಣಮಿಸಿದೆ. ಆರ್‌ಇ ಯೋಜನೆಗಳು ಪೋಖ್ರಾನ್ ಮತ್ತು ರಾಮಗಢ-ಜೈಸಲ್ಮೇರ್‌ನ ಜಿಐಬಿ ಆವಾಸಸ್ಥಾನಗಳ ಮೂಲಕ ಹಾದುಹೋಗುವ ಹಸಿರು ಕಾರಿಡಾರ್‌ಗೆ ಕಾರಣವಾಗಿವೆ.
ಜೈಸಲ್ಮೇರ್ ಆರ್ಕ್ಟಿಕ್‌ನಿಂದ ಹಿಂದೂ ಮಹಾಸಾಗರಕ್ಕೆ ಮಧ್ಯ ಯುರೋಪ್ ಮತ್ತು ಏಷ್ಯಾದ ಮೂಲಕ ವಲಸೆ ಹೋಗುವ ಪಕ್ಷಿಗಳ ವಾರ್ಷಿಕ ಮಾರ್ಗವಾಗಿರುವ ಕ್ರಿಟಿಕಲ್ ಸೆಂಟ್ರಲ್ ಏಷ್ಯನ್ ಫ್ಲೈವೇ (CAF) ನಲ್ಲಿ ಬರುತ್ತದೆ. 182 ವಲಸೆ ಜಲಪಕ್ಷಿ ಪ್ರಭೇದಗಳ ಅಂದಾಜು 279 ಸಂಖ್ಯೆಯ ಪಕ್ಷಿಗಳು ಈ ಮಾರ್ಗದ ಮೂಲಕ ಬರುತ್ತವೆ ಎಂದು ವಲಸಿಗ ವನ್ಯಮೃಗ ಪ್ರಭೇದಗಳ ಸಂರಕ್ಷಣೆಯ ಸಮಾವೇಶವು (ಕನ್ವೆನ್ಷನ್ ಆಫ್ ಮೈಗ್ರೇಟರಿ ಸ್ಪೀಸಿಸ್ ಆಫ್ ವೈಲ್ಡ್ ಅನಿಮಲ್ಸ್) ಹೇಳುತ್ತದೆ. ಇತರ ಕೆಲವು ಅಳಿವಿನಂಚಿನಲ್ಲಿರುವ ಪಕ್ಷಿ ಗಳೆಂದರೆ ಓರಿಯೆಂಟಲ್ ವೈಟ್ ಬ್ಯಾಕ್ಡ್ ರಣಹದ್ದು (ಜಿಪ್ಸ್ ಬೆಂಗಾಲೆನ್ಸಿಸ್), ಲಾಂಗ್-ಬಿಲ್ಡ್ (ಜಿಪ್ಸ್ ಇಂಡಿಕಸ್), ಸ್ಟೋಲಿಕ್ಜ್ಕಾಸ್ ಬುಷ್ಚಾಟ್ (ಸಾಕ್ಸಿಕೋಲಾ ಮ್ಯಾಕ್ರೋರಿಂಚಾ) , ಗ್ರೀನ್ ಮುನಿಯಾ (ಅಮಂಡವ ಫಾರ್ಮೋಸಾ) ಮತ್ತು ಮ್ಯಾಕ್‌ಕ್ವೀನ್ಸ್ ಆರ್ ಹೌಬರಾ ಬಸ್ಟರ್ಡ್ (ಕ್ಲಮಿಡಾಟಿಸ್ ಮಾಕ್ವೀನಿ).
ರಾಧೇಶ್ಯಾಮ್ ಓರ್ವ ಹವ್ಯಾಸಿ ಛಾಯಾಗ್ರಾಹಕ, ಅವರ ಲಾಂಗ್ ಫೋಕಸ್ ಟೆಲಿ ಲೆನ್ಸ್ ಮನಸ್ಸನ್ನು ಕಾಡುವಂತಹ ಅನೇಕ ಫೋಟೋಗಳನ್ನು ಸೆರೆ ಹಿಡಿದಿದೆ. "ನಾನು ರಾತ್ರಿಯಲ್ಲಿ ಸೌರ ಫಲಕಗಳ ಮೈದಾನದಲ್ಲಿ ಪೆಲಿಕಾನ್ ಹಕ್ಕಿಗಳು ಆಕಾಶದಿಂದ ಇಳಿಯುವುದನ್ನು ನೋಡಿದ್ದೇನೆ. ಏಕೆಂದರೆ ಅವು ಈ ಫಲಕವನ್ನು ಸರೋವರ ಎಂದು ಅವರು ಭಾವಿಸುತ್ತವೆ. ಈ ಪಕ್ಷಿಗಳು ಫಲಕದ ಗಾಜಿನ ಮೇಲೆ ಜಾರಿಬಿದ್ದು ಅವುಗಳ ಸೂಕ್ಷ್ಮವಾದ ಕಾಲುಗಳು ಗಾಯಗೊಳ್ಳುತ್ತವೆ.
ಪವರ್‌ಲೈನ್‌ಗಳು ಕೇವಲ ಬಸ್ಟರ್ಡ್‌ಗಳನ್ನು ಮಾತ್ರ ಸಾಯಿಸುವುದಿಲ್ಲ, ಜೈಸಲ್ಮೇರ್‌ನ ಮರುಭೂಮಿ ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಮುತ್ತಲಿನ 4,200 ಚದರ ಕಿಲೋಮೀಟರ್ ಪ್ರದೇಶದಲ್ಲಿ ವರ್ಷಕ್ಕೆ ಅಂದಾಜು 84,000 ಪಕ್ಷಿಗಳನ್ನು ಇದು ನಾಶಮಾಡುತ್ತಿವೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ 2018 ರ ಅಧ್ಯಯನವು ಹೇಳುತ್ತದೆ. "ಹೆಚ್ಚಿನ ಮರಣ ಪ್ರಮಾಣವು [ಬಸ್ಟರ್ಡ್] ಜಾತಿಗಳ ಅಳಿವಿಗೆ ಖಚಿತ ಕಾರಣವಾಗಿದೆ."
ಅಪಾಯವು ಕೇವಲ ಆಕಾಶದಲ್ಲಿ ಮಾತ್ರವಲ್ಲ ನೆಲದ ಮೇಲೆ ಕೂಡ ಕಾದುಕೊಂಡಿದೆ. ಹುಲ್ಲುಗಾವಲು, ದೇವರ ವನಗಳು ಅಥವಾ ಓರಾನ್ ಗಳ ದೊಡ್ಡ ಪ್ರದೇಶಗಳಲ್ಲಿ ಈಗ 200-ಮೀಟರ್ ಎತ್ತರದ ವಿಂಡ್ ಮಿಲ್‌ಗಳನ್ನು 500 ಮೀಟರ್ ಅಂತರದಲ್ಲಿ ಇರಿಸಲಾಗಿದೆ. ಹೆಕ್ಟೇರ್ ಗಟ್ಟಲೆ ಪ್ರದೇಶಗಳಲ್ಲಿ ಸೌರ ಫಾರ್ಮ್‌ಗಳಿಗಾಗಿ ಗೋಡೆಗಳನ್ನು ನಿರ್ಮಿಸಲಾಗಿದೆ. ದೇವರ ವನಗಳಲ್ಲಿ ಸಮುದಾಯಗಳು ಒಂದೇ ಒಂದು ಕೊಂಬೆಯನ್ನು ಸಹ ಕತ್ತರಿಸುವಂತಿಲ್ಲ, ಅಂತದ್ದರಲ್ಲಿ ಈ ವನಗಳಲ್ಲಿ ಹಾವು ಮತ್ತು ಏಣಿಗಳ ಆಟ ನಡೆಯುತ್ತಿದೆ. ಪಶುಪಾಲಕರು ಇನ್ನು ಮುಂದೆ ನೇರ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ, ಬದಲಿಗೆ ಬೇಲಿಗಳನ್ನು ಸುತ್ತುಬಳಸಿ ಗಾಳಿಯಂತ್ರಗಳನ್ನು ಮತ್ತು ಅವುಗಳ ಅಟೆಂಡೆಂಟ್ ಮೈಕ್ರೋಗ್ರಿಡ್ ಗಳನ್ನು ದಾಟಿ ನಡೆಯಬೇಕಾಗಿದೆ.
"ನಾನು ಬೆಳಿಗ್ಗೆ ಹೋದರೆ ಸಂಜೆಯ ಹೊತ್ತಿಗೆ ಮನೆಗೆ ಬರುತ್ತೇನೆ" ಎಂದು ಧನೀ ಹೇಳುತ್ತಾರೆ (ಅವರು ಈ ಹೆಸರನ್ನು ಮಾತ್ರ ಬಳಸುತ್ತಾರೆ). 25 ವರ್ಷ ವಯಸ್ಸಿನ ಇವರು ತಮ್ಮ ನಾಲ್ಕು ಹಸುಗಳು ಮತ್ತು ಐದು ಮೇಕೆಗಳಿಗೆ ಹುಲ್ಲು ತರಲು ಕಾಡಿಗೆ ಹೋಗಬೇಕು. "ನಾನು ನನ್ನ ಸಾಕುಪ್ರಾಣಿಗಳನ್ನು ಕಾಡಿಗೆ ಕರೆದೊಯ್ಯುವಾಗ ಕೆಲವೊಮ್ಮೆ ತಂತಿಗಳನ್ನು ಮುಟ್ಟಿ ವಿದ್ಯುತ್ ಆಘಾತಕ್ಕೊಳಗಾಗುತ್ತೇನೆ," ಎಂದು ಅವರು ಹೇಳುತ್ತಾರೆ. ಧನೀ ಅವರ ಪತಿ ಬಾರ್ಮರ್ ಪಟ್ಟಣದಲ್ಲಿ ಓದುತ್ತಿದ್ದಾರೆ. ಇವರು ತಮ್ಮ ಆರು ಬಿಘಾ (ಸರಿಸುಮಾರು 1 ಎಕರೆ) ಭೂಮಿಯನ್ನು ಮತ್ತು 8, 5 ಮತ್ತು 4 ವರ್ಷ ವಯಸ್ಸಿನ ಮೂವರು ಗಂಡುಮಕ್ಕಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ.
ಜೈಸಲ್ಮೇರ್‌ನ ಸಮ್ ಬ್ಲಾಕ್‌ನ ರಾಸ್ಲಾ ಗ್ರಾಮದ ದೇಗ್ರಾಯ್ ಗ್ರಾಮ ಪ್ರಧಾನ್ ಮುರಿದ್ ಖಾನ್, "ನಾವು ನಮ್ಮ ಶಾಸಕ ಮತ್ತು ಜಿಲ್ಲಾಧಿಕಾರಿಗಳ (ಡಿಸಿ) ಮುಂದೆ ನಮ್ಮ ಪ್ರಶ್ನೆಗಳನ್ನಿಡಲು ಪ್ರಯತ್ನಿಸಿದೆವು, ಆದರೆ ಏನೂ ಪ್ರಯೋಜನ ಆಗಲಿಲ್ಲ" ಎಂದು ಹೇಳುತ್ತಾರೆ.
ನಮ್ಮ ಪಂಚಾಯಿತಿಯಲ್ಲಿ ಆರರಿಂದ ಏಳು ಲೈನ್‌ಗಳಲ್ಲಿ ಹೈಟೆನ್ಷನ್ ಕೇಬಲ್‌ಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು. “ಅದು ನಮ್ಮ ಓರನ್ಸ್ [ದೇವರ ವನಗಳಲ್ಲಿ]ಕೂಡ ಇದೆ. 'ಭಾಯಿ ನಿಮಗೆ ಯಾರು ಅನುಮತಿ ಕೊಟ್ಟಿದ್ದು' ಎಂದು ನಾವು ಅವರನ್ನು ಕೇಳಿದಾಗ, ಅವರು 'ನಿಮ್ಮ ಅನುಮತಿ ನಮಗೆ ಅಗತ್ಯವಿಲ್ಲ' ಎಂದು ಹೇಳುತ್ತಾರೆ,” ಎಂದು ಅವರು ಹೇಳಿದರು.
ಘಟನೆಯ ದಿನಗಳ ನಂತರ ಮಾರ್ಚ್ 27, 2023 ರಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆ ಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಪ್ರಮುಖ ಜಿಐಬಿ ಆವಾಸಸ್ಥಾನಗಳನ್ನು ರಾಷ್ಟ್ರೀಯ ಉದ್ಯಾನವನಗಳಾಗಿ (ನ್ಯಾಷನಲ್ ಪಾರ್ಕ್) ಗುರುತಿಸಿರುವುದಾಗಿ ತಿಳಿಸಿದ್ದಾರೆ.
ಎರಡು ಆವಾಸಸ್ಥಾನಗಳಲ್ಲಿ ಒಂದನ್ನು ಈಗಾಗಲೇ ರಾಷ್ಟ್ರೀಯ ಉದ್ಯಾನ ಎಂದು ಗೊತ್ತುಪಡಿಸಲಾಗಿದ್ದು, ಇನ್ನೊಂದು ರಕ್ಷಣಾ ಭೂಮಿಯಾಗಿದೆ, ಆದರೆ ಬಸ್ಟರ್ಡ್‌ಗಳು ಮಾತ್ರ ಸುರಕ್ಷಿತವಾಗಿಲ್ಲ.
*****
ಏಪ್ರಿಲ್ 19, 2021, ರಿಟ್ ಅರ್ಜಿಗೆ ಪ್ರತಿಕ್ರಿಯೆ ಯಾಗಿ ಸರ್ವೋಚ್ಚ ನ್ಯಾಯಾಲಯವು, "ಆದ್ಯತೆಯ ಮತ್ತು ಸಂಭಾವ್ಯ ಬಸ್ಟರ್ಡ್ ಪ್ರದೇಶದಲ್ಲಿ ಮೇಲ್ಗಡೆ ಹಾಕಲಾಗಿರುವ ಕೇಬಲ್‌ಗಳನ್ನು ಭೂಗತ ಪವರ್ ಲೈನ್ಗಳಾಗಿ ಪರಿವರ್ತಿಸಲು ಸಾಧ್ಯವೆಂದು ಕಂಡುಬಂದರೆ ಅದನ್ನು ಕೈಗೊಂಡು ಕೆಲಸವನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಬೇಕು. ಅಲ್ಲಿಯ ವರೆಗೆ ಡೈವರ್ಟರ್‌ಗಳನ್ನು [ಬೆಳಕನ್ನು ಪ್ರತಿಫಲಿಸುವ ಮತ್ತು ಪಕ್ಷಿಗಳನ್ನು ಎಚ್ಚರಿಸುವ ಪ್ಲಾಸ್ಟಿಕ್ ಡಿಸ್ಕ್‌ಗಳನ್ನು] ವಿದ್ಯುತ್‌ಲೈನ್‌ಗಳಿಗೆ ನೇತುಹಾಕಬೇಕು,” ಎಂದು ಹೇಳಿತ್ತು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ 104 ಕಿಲೋ ಮೀಟರ್ ಲೈನ್‌ಗಳು ಭೂಗತವಾಗಲು ಮತ್ತು 1,238 ಕಿಲೋ ಮೀಟರ್ ಲೈನ್‌ಗಳಿಗೆ ಡೈವರ್ಟರ್‌ಗಳನ್ನು ಅಳವಡಿಸಲು ರಾಜಸ್ಥಾನದಲ್ಲಿ ಪಟ್ಟಿಮಾಡಲಾಗಿದೆ.
ಎರಡು ವರ್ಷಗಳ ನಂತರ, ಅಂದರೆ ಏಪ್ರಿಲ್ 2023, ನೆಲದಡಿ ಲೈನ್‌ಗಳನ್ನು ಹಾಕಲು ಹೇಳಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು ಪ್ರಮುಖ ರಸ್ತೆಗಳ ಬಳಿ ಸಾರ್ವಜನಿಕರ ಮತ್ತು ಮಾಧ್ಯಮಗಳ ಗಮನ ಸೆಳೆಯುವ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಡೈವರ್ಟರ್‌ಗಳನ್ನು ಕೆಲವೇ ಕಿಲೋ ಮೀಟರ್ ವರೆಗೆ ಅಳವಡಿಸಲಾಗಿದೆ. “ಲಭ್ಯವಿರುವ ಸಂಶೋಧನೆಯ ಪ್ರಕಾರ, ಡೈವರ್ಟರ್‌ಗಳು ಪಕ್ಷಿಗಳ ಹಾಗೂ ಲೈನ್ ಗಳ ನಡುವಿನ ಘರ್ಷಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ. ಆದ್ದರಿಂದ ಅವುಗಳ ಸಾವನ್ನು ತಪ್ಪಿಸಬಹುದಿತ್ತು" ಎಂದು ವನ್ಯಜೀವಶಾಸ್ತ್ರಜ್ಞ ದೂಕಿಯಾ ಹೇಳುತ್ತಾರೆ.
ಸ್ಥಳೀಯ ಬಸ್ಟರ್ಡ್ ಈ ಭೂಮಿಯಲ್ಲಿರುವ ತನ್ನ ಏಕೈಕ ಆವಾಸದಲ್ಲಿಯೇ ಅಪಾಯದಲ್ಲಿದೆ. ಇದರ ಮಧ್ಯೆ ನಾವು ವಿದೇಶಿ ಜೀವಿಗಳಿಗೆ ಆವಾಸ ನಿರ್ಮಿಸಲು ಹೋಗಿದ್ದೇವೆ. 224 ಕೋಟಿ ರುಪಾಯಿಯ ಬೃಹತ್ ಪಂಚವಾರ್ಷಿಕ ಯೋಜನೆಯಲ್ಲಿ ಆಫ್ರಿಕನ್ ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. ವಿಶೇಷ ವಿಮಾನಗಳಲ್ಲಿ ಅವುಗಳನ್ನು ಕರೆತಂದು ಸುರಕ್ಷಿತ ಆವರಣಗಳನ್ನು ನಿರ್ಮಿಸಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಮತ್ತು ವೀಕ್ಷಣಾ ವಾಚ್‌ಟವರ್‌ಗಳನ್ನು ನಿರ್ಮಿಸಲು ಕೋಟಿ ಕೋಟಿ ವ್ಯಯಿಸಲಾಗಿದೆ. ಅಲ್ಲದೇ ಹುಲಿಗಳ ಸಂಖ್ಯೆಯು ಹೆಚ್ಚುತ್ತಿದ್ದು 2022 ರ ಬಜೆಟ್‌ನಲ್ಲಿ 300 ಕೋಟಿ ರುಪಾಯಿ ತೆಗೆದಿರಿಸಲಾಗಿದೆ.
*****
ಏವಿಯನ್ ಪ್ರಭೇದಕ್ಕೆ ಸೇರಿದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಒಂದು ಮೀಟರ್ ಎತ್ತರ ಮತ್ತು ಸುಮಾರು 5-10 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದು ವರ್ಷಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ, ಅದೂ ತೆರೆದ ಸ್ಥಳದಲ್ಲಿ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡು ನಾಯಿಗಳ ಸಂಖ್ಯೆಯಿಂದಾಗಿ ಬಸ್ಟರ್ಡ್ ಮೊಟ್ಟೆಗಳು ಸುರಕ್ಷಿತವಾಗಿಲ್ಲ. “ಪರಿಸ್ಥಿತಿ ಕಠಿಣವಾಗಿದೆ. ಈ ಸಂಖ್ಯೆಯನ್ನು ಉಳಿಸಿಕೊಳ್ಳಲು ನಾವು ಬೇರೆ ಮಾರ್ಗಗಳನ್ನು ಹುಡುಕಬೇಕಾಗಿದೆ ಮತ್ತು ಈ ಪ್ರಬೇಧದ ಹಕ್ಕಿಗಳಿಗೆ ಕೆಲವು [ನಿರ್ಬಂಧಿತ] ಪ್ರದೇಶವನ್ನು ನೀಡಬೇಕು,” ಎಂದು ಆ ಪ್ರದೇಶದಲ್ಲಿ ಯೋಜನೆಯೊಂದನ್ನು ನಡೆಸುತ್ತಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (BNHS) ಕಾರ್ಯಕ್ರಮ ಅಧಿಕಾರಿ ನೀಲಕಂಠ ಬೋಧ ಹೇಳುತ್ತಾರೆ.
ಭೂಮಿಯ ಮೇಲೆ ನಡೆದಾಡುವ ಜೀವಿಯಾದ ಇದು ಹಾರುವಾಗ ಭವ್ಯವಾಗಿ ಕಾಣುತ್ತದೆ.ಅದರ ರೆಕ್ಕೆಗಳು ಸುಮಾರು 4.5 ಅಡಿಗಳಷ್ಟು ಭಾರವಾದ ದೇಹವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅದು ಮರುಭೂಮಿಯ ಆಕಾಶದ ಮೂಲಕ ಜಾರುತ್ತದೆ.
ಬಲಶಾಲಿಯಾದ ಬಸ್ಟರ್ಡ್ ತನ್ನ ತಲೆಯ ಬದಿಯಲ್ಲಿ ಕಣ್ಣುಗಳನ್ನು ಹೊಂದಿದೆ. ಹಾಗಾಗಿ ಅವುಗಳಿಗೆ ತಮ್ಮ ಕಣ್ಣ ಮುಂದೆ ಸಾವು ಬರುತ್ತಿರುವುದು ಕಾಣುವುದಿಲ್ಲ. ಆದ್ದರಿಂದ ಹೈ-ಟೆನ್ಶನ್ ವೈರ್‌ಗೆ ಡಿಕ್ಕಿ ಹೊಡೆಯುತ್ತದೆ ಅಥವಾ ಕೊನೆಯ ನಿಮಿಷದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಈ ಟರ್ನ್ ತೆಗೆದುಕೊಳ್ಳಲು ಸಾಧ್ಯವಾಗದೆ ಟ್ರೈಲರ್ ಟ್ರಕ್‌ನಂತೆ ಜಿಐಬಿ ಹಕ್ಕಿಗೆ ತನ್ನ ದಿಕ್ಕನ್ನು ಬದಲಾಯಿಸುವುದು ತುಂಬಾ ತಡವಾಗಿರುತ್ತದೆ ಮತ್ತು ಅದರ ರೆಕ್ಕೆ ಅಥವಾ ತಲೆಯ ಕೆಲವು ಭಾಗವು 30 ಮೀಟರ್ ಹಾಗೂ ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿರುವ ತಂತಿಗಳಿಗೆ ಅಪ್ಪಳಿಸುತ್ತದೆ. "ವೈರ್‌ಗಳಿಂದ ವಿದ್ಯುತ್ ಆಘಾತವಾಗಿ ಸಾಯದೆ ಇದ್ದರೆ ಅವು ನೆಲಕ್ಕೆ ಬೀಳುತ್ತವೆ," ಎಂದು ರಾಧೇಶಾಯಮ್ ಹೇಳುತ್ತಾರೆ.
2022ರಲ್ಲಿ, ಮಿಡತೆಗಳು ರಾಜಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿದ್ದ ಸಂದರ್ಭದಲ್ಲಿ, “ಗೊಡಾವನ್ ಗಳು ಅನೇಕ ಹೊಲ ಗದ್ದೆಗಳನ್ನು ಉಳಿಸಿದ್ದವು. ಏಕೆಂದರೆ ಆ ಸಮಯದಲ್ಲಿ ಅವು ಸಾವಿರಾರು ಮಿಡತೆಗಳನ್ನು ತಿಂದಿದ್ದವು" ಎಂದು ರಾಧೇಶ್ಯಾಮ್ ನೆನಪಿಸಿಕೊಳ್ಳುತ್ತಾರೆ. 'ಗೊಡಾವನ್ ಯಾರಿಗೂ ಹಾನಿ ಮಾಡುವುದಿಲ್ಲ. ಇದು ಸಣ್ಣ ಹಾವು, ಚೇಳು, ಸಣ್ಣ ಹಲ್ಲಿಗಳನ್ನು ತಿಂದು ಬದುಕುತ್ತದೆ ಮತ್ತು ರೈತ ಸ್ನೇಹಿಯಾಗಿದೆ,” ಎಂದು ರಾಧೇಶ್ಯಾಮ್ ಹೇಳುತ್ತಾರೆ.
ಅವರು ಮತ್ತು ಅವರ ಕುಟುಂಬವು 80 ಬಿಘಾಸ್ (ಸುಮಾರು 8 ಎಕರೆ) ಭೂಮಿಯನ್ನು ಹೊಂದಿದ್ದಾರೆ. ಅದರಲ್ಲಿ ಅವರು ಗೌರ್ ಮತ್ತು ಬಾಜ್ರಾವನ್ನು ಬೆಳೆಯುತ್ತಾರೆ ಮತ್ತು ಕೆಲವೊಮ್ಮೆ ಚಳಿಗಾಲದ ಮಳೆಯಲ್ಲಿ ಮೂರನೇ ಬೆಳೆ ತೆಗೆಯುತ್ತಾರೆ. "150 ರಷ್ಟು ಜಿಐಬಿ ಇಲ್ಲದಿದ್ದರೆ ನೀವೇ ಊಹಿಸಿ, ಸಾವಿರಾರು ಸಂಖ್ಯೆಯಲ್ಲಿ ಮಿಡತೆಗಳು ಆಕ್ರಮಣ ಮಾಡಿ ಗಂಭೀರ ವಿಪತ್ತು ಸಂಭವಿಸುತ್ತಿತ್ತು" ಎಂದು ಅವರು ಹೇಳುತ್ತಾರೆ.
ಜಿಐಬಿಯನ್ನು ಉಳಿಸಲು ಮತ್ತು ಅದರ ಆವಾಸಸ್ಥಾನಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲದಂತೆ ಮಾಡಲು ಸಣ್ಣ ಪ್ರದೇಶಕ್ಕೆ ಗಮನ ಕೊಡಬೇಕಾದ ಅಗತ್ಯವಿದೆ. “ನಾವು ಆ ಪ್ರಯತ್ನವನ್ನು ಮಾಡಬಹುದು. ಇದೇನು ಅಷ್ಟು ದೊಡ್ಡ ವಿಷಯವಲ್ಲ. ಮತ್ತು ಲೈನ್‌ಗಳನ್ನು ನೆಲದಡಿಯಲ್ಲಿ ಹಾಕಲು ನ್ಯಾಯಾಲಯ ಆದೇಶ ನೀಡಿದೆ. ಇನ್ನು ಮುಂದೆ ಯಾವುದೇ ಮಾರ್ಗಗಳಿಗೆ ಅನುಮತಿ ನೀಡುವುದಿಲ್ಲ,” ಎಂದು ರಾಥೋರ್ ಹೇಳುತ್ತಾರೆ. "ಈಗ ಸರ್ಕಾರವು ನಿಜವಾಗಿಯೂ ಇದನ್ನು ನಿಲ್ಲಿಸಬೇಕು ಮತ್ತು ಅವುಗಳ ಸಂಖ್ಯೆ ಮುಗಿಯುವ ಮೊದಲು ಯೋಚಿಸಬೇಕು," ಎಂದು ಹೇಳುತ್ತಾರೆ.
ಈ ವರದಿಯನ್ನು ತಯಾರಿಸಲು ನೆರವಾದ ಜೀವವೈವಿಧ್ಯ ಸಹಯೋಗದ ಸದಸ್ಯ ಡಾ. ರವಿ ಚೆಲ್ಲಂ ಅವರಿಗೆ ವರದಿಗಾರ ಧನ್ಯವಾದ ಅರ್ಪಿಸಲು ಬಯಸುತ್ತಾರೆ.
ಅನುವಾದ: ಚರಣ್ ಐವರ್ನಾಡು