"ಗಟಾರವು ಸುಮಾರು 20 ಅಡಿ ಆಳವಿತ್ತು. ಮೊದಲು ಪರೇಶ್ ಒಳಗೆ ಹೋದನು. ಅವನು ಎರಡು ಅಥವಾ ಮೂರು ಬಕೆಟ್ ತ್ಯಾಜ್ಯವನ್ನು ಹೊರತೆಗೆದ; ನಂತರ ಅವನು ಮೇಲೆ ಬಂದು, ಸ್ವಲ್ಪ ಹೊತ್ತು ಕುಳಿತು ಮತ್ತೆ ಒಳಗೆ ಹೋದ. ಅವನು ಒಳಗೆ ಹೋದ ಕೂಡಲೇ ಕಿರುಚಿದ...
"ಏನಾಯಿತೆನನುವುದು ನಮಗೆ ತಿಳಿದಿರಲಿಲ್ಲ, ಕೊನೆಗೆ ಗಲ್ಸಿಂಗ್ ಭಾಯ್ ಒಳಗೆ ಹೋದರು. ಆದರೆ ಅಲ್ಲಿ ಮೌನ ಆವರಿಸಿತು. ನಂತರ, ಅನಿಪ್ ಭಾಯ್ ಮುಂದೆ ಹೋದರು. ಆದರೂ, ಒಳಗಿರುವ ಮೂವರಲ್ಲಿ ಯಾರೂ ಶಬ್ದ ಮಾಡಲಿಲ್ಲ. ಅವರು ಹಗ್ಗ ಕಟ್ಟಿ ನನ್ನನ್ನು ಒಳಗೆ ಕಳುಹಿಸಿದರು. ನನ್ನನ್ನು ಯಾರೋ ಒಬ್ಬರ ಕೈ ಹಿಡಿಯುವಂತೆ ಮಾಡಲಾಯಿತು; ಅದು ಯಾರ ಕೈ ಎನ್ನುವುದು ನನಗೆ ಖಚಿತವಿಲ್ಲ. ಆದರೆ ನಾನು ಅದನ್ನು ಗ್ರಹಿಸಿದ ನಂತರ, ಅವರು ನನ್ನನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸಿದರು ಆಗ ನಾನು ಪ್ರಜ್ಞಾಹೀನನಾದೆ" ಎನ್ನುವ ಭಾವೇಶ್ ಉಸಿರಾಡುವುದನ್ನು ಮರೆತು ಮಾತನಾಡುತ್ತಿದ್ದರು.
ನಾವು ಭವೇಶ್ ಅವರನ್ನು ಭೇಟಿಯಾದಾಗ, ಅವರು ತಮ್ಮ ಸಹೋದರ ಪರೇಶ್ ಮತ್ತು ಇತರ ಇಬ್ಬರು ಕಾರ್ಮಿಕರನ್ನು ಕಣ್ಣ ಮುಂದೆಯೇ ಕಳೆದುಕೊಂಡು ಒಂದು ವಾರವಾಗಿತ್ತು. ಆ ದುರಂತದ ವಿವರಗಳನ್ನು ನೆನಪಿಸಿಕೊಳ್ಳುತ್ತಾ ನೋವಿನಿಂದ ಬಳಲುತ್ತಿದ್ದಾರೆ. ಮತ್ತು ಸ್ಪಷ್ಟವಾಗಿ ದುಃಖ ಮತ್ತು ಖಿನ್ನತೆಯ ಧ್ವನಿಯಲ್ಲಿ ಮಾತನಾಡುತ್ತಾರೆ.
ಗುಜರಾತಿನ ದಾಹೋದ್ ಜಿಲ್ಲೆಯ ಖರ್ಸಾನಾ ಗ್ರಾಮದ 20 ವರ್ಷದ ಭವೇಶ್ ಕಟಾರಾ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಭರೂಚ್ ಜಿಲ್ಲೆಯ ದಹೇಜ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಷಕಾರಿ ಒಳಚರಂಡಿ ಚೇಂಬರ್ ಸ್ವಚ್ಛಗೊಳಿಸುತ್ತಿದ್ದ ಐವರು ಆದಿವಾಸಿಗಳಲ್ಲಿ ವಿಪತ್ತಿನಲ್ಲಿ ಜೀವಂತವಾಗಿ ಹೊರಬಂದ ಇಬ್ಬರಲ್ಲಿ ಅವರು ಒಬ್ಬರಾಗಿದ್ದರು. ಬದುಕುಳಿದ ಇನ್ನೊಬ್ಬ ವ್ಯಕ್ತಿ 18 ವರ್ಷದ ಜಿಗ್ನೇಶ್ ಪರ್ಮಾರ್, ದಾಹೋದ್‌ನ ಬಾಲೆಂಡಿಯಾ-ಪೇಠಾಪುರದವರು.
ಜಿಗ್ನೇಶ್ ಊರಿನವರಾದ 20 ವರ್ಷದ ಅನಿಪ್ ಪರ್ಮಾರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು; ದಾಹೋದ್ ದಾಂಟ್ಗಡ್-ಚಕಾಲಿಯಾ ಮೂಲದ 25 ವರ್ಷದ ಗಲ್ಸಿಂಗ್ ಮುನಿಯಾ; ಮತ್ತು 24 ವರ್ಷದ ಪರೇಶ್ ಕಟಾರಾ ತನ್ನ ಸಹೋದರ ಭಾವೇಶ್ ಅವರಂತೆಯೇ ಅದೇ ಊರಿನವರು. ಈ ಮೂವರು ಒಳಚರಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. [ಇಲ್ಲಿ ಉಲ್ಲೇಖಿಸಲಾದ ವಯಸ್ಸನ್ನು ಅವರ ಆಧಾರ್ ಕಾರ್ಡುಗಳಿಂದ ತೆಗೆದುಕೊಳ್ಳಲಾಗಿದೆ ಮತ್ತು ಅವುಗಳನ್ನು ಅನಿಶ್ಚಿತ ಅಂದಾಜುಗಳೆಂದು ಪರಿಗಣಿಸಬೇಕಾಗುತ್ತದೆ. ಕೆಳಮಟ್ಟದ ಅಧಿಕಾರಿಗಳು ತಮಗೆ ತೋಚಿದಂತೆ ವಯಸ್ಸನ್ನು ದಾಖಲಿಸುತ್ತಾರೆ.]
ಆದರೆ 325ರಿಂದ 330 ಕಿಲೋಮೀಟರ್ ದೂರದ ಹಳ್ಳಿಗಳ ಈ ಐದು ಆದಿವಾಸಿಗಳು ದಹೇಜ್‌ನಲ್ಲಿಏನು ಮಾಡುತ್ತಿದ್ದರು, ಚರಂಡಿ ಸ್ವಚ್ಛಗೊಳಿಸುವುದೇ? ಅವರಲ್ಲಿ ಇಬ್ಬರು ಇನ್ನೊಂದು ಗ್ರಾಮ ಪಂಚಾಯತಿಯಲ್ಲಿ ತಿಂಗಳ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಇನ್ನುಳಿದವರು ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಕುರಿತು ಅವರ ಕುಟುಂಬಗಳಿಗೆ ಮಾಹಿತಿಯಿಲ್ಲ. ಅವರು ಸಿಕ್ಕಂತಹ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಅವರೆಲ್ಲರೂ ಭಿಲ್ ಆದಿವಾಸಿ ಗುಂಪಿನ ಅತ್ಯಂತ ಅಂಚಿನಲ್ಲಿರುವ ವಿಭಾಗಗಳಿಂದ ಬಂದವರು.
ಏಪ್ರಿಲ್ 4, 2023 ರಂದು ಈ ವಿಪತ್ತು ಸಂಭವಿಸಿದೆ. "ಒಳಗೆ ಒಬ್ಬ ವ್ಯಕ್ತಿ ಇದ್ದನು" ಎಂದು ಆ ದಿನ ಪಕ್ಕದ ಚೇಂಬರ್‌ನಲ್ಲಿ ಕೆಲಸ ಮಾಡುತ್ತಿದ್ದ ಜಿಗ್ನೇಶ್ ನೆನಪಿಸಿಕೊಳ್ಳುತ್ತಾರೆ. "ಅವರು ವಿಷಕಾರಿ ಅನಿಲವನ್ನು ಉಸಿರಾಡಿ ಅಸಹಾಯಕರಾಗಿದ್ದರು. ಮತ್ತೊಬ್ಬರು [ಗಲ್ಸಿಂಗ್] ಆ ವ್ಯಕ್ತಿಯನ್ನು ಉಳಿಸಲು ಹೋದಾಗ, ಗ್ಯಾಸ್ ಅವರಿಗೂ ತಾಕಿತು. ಅವರಿಬ್ಬರನ್ನು ಉಳಿಸಲು, ಅನಿಪ್ ಒಳಗೆ ಹೋದರು, ಆದರೆ ಗ್ಯಾಸ್ ಬಹಳ ತೀಕ್ಷ್ಣವಾಗಿತ್ತು. ಅವರು ತಿರುಗಿ ಬಿದ್ದು ಕುಸಿದರು.
"ನಾವು ಅವರನ್ನು ಉಳಿಸಲು ಕೂಗುತ್ತಲೇ ಇದ್ದೆವು" ಎಂದು ಜಿಗ್ನೇಶ್ ಹೇಳುತ್ತಾರೆ. “ಆಗ ಊರಿನವರು ಬಂದರು. ಅವರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಭಾವೇಶ್ ಅವರನ್ನು ಒಳಗೆ ಕಳುಹಿಸಿದಾಗ, ಗ್ಯಾಸ್‌ನಿಂದಾಗಿ ಅವರೂ ಪ್ರಜ್ಞಾಹೀನರಾಗಿ ಬಿದ್ದರು. ಅವರನ್ನು ಹೊರಗೆಳೆದಾಗ ಮೊದಲು ಭಾವೇಶರನ್ನು ಠಾಣೆಗೆ ಕರೆದೊಯ್ದರು. ಅವರಿಗೆ ಪ್ರಜ್ಞೆ ಬಂದ ನಂತರ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಜ್ಞೆ ಬರುವವರೆಗೂ ಏಕೆ ಕಾಯುತ್ತಿದ್ದರು? ಅವರಿಬ್ಬರ ಬಳಿಯೂ ಉತ್ತರವಿಲ್ಲ. ಆದಾಗ್ಯೂ, ಭಾವೇಶ್ ರಕ್ಷಿಸಲ್ಪಟ್ಟರು.
*****
ಅನಿಪ್ ಮದುವೆಗೂ ಮೊದಲೇ ದಹೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಮದುವೆಯ ನಂತರ ಅವರ ಪತ್ನಿ ರಮಿಲಾ ಬೆನ್ ಅವರನ್ನು ಅಲ್ಲಿಗೆ ಕರೆಸಿಕೊಂಡರು. "ನಾನು ಬೆಳಿಗ್ಗೆ ಎಂಟು ಗಂಟೆಗೆ [ಕೆಲಸಕ್ಕೆ] ಹೋಗುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಅವರು ಊಟ ಮಾಡಿದ ನಂತರ ಬೆಳಿಗ್ಗೆ 11 ಗಂಟೆಗೆ ಒಬ್ಬರೇ ಹೋಗುತ್ತಿದ್ದರು ಮತ್ತು ತಲಾತಿ ಸಾಹೇಬ್ ಅಥವಾ ಸರಪಂಚ್ ಹೇಳಿದ ಯಾವುದೇ ಕೆಲಸವನ್ನು ಮಾಡುತ್ತಿದ್ದರು" ಎಂದು ಹೇಳುತ್ತಾ ರಮಿಲಾ ಬೆನ್, ಅನಿಪ್ ಸಾಯುವ ಸಮಯದಲ್ಲಿ ತಾನು ಅಲ್ಲಿ ಏಕೆ ಇರಲಿಲ್ಲ ಎಂಬುದನ್ನು ವಿವರಿಸುತ್ತಾರೆ.
"ಈ ಮೊದಲು ನಾವು ಒಟ್ಟಿಗೆ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದೆವು" ಎಂದು ಅವರು ಹೇಳುತ್ತಾರೆ. "ನನ್ನ ಮದುವೆಯ ನಂತರ ನಾಲ್ಕು ತಿಂಗಳ ಕಾಲ ನಾವು ಚರಂಡಿ ಕೆಲಸ ಮಾಡಿದ್ದೇವೆ. ನಂತರ ಅವರು ನಮಗೆ 'ಟ್ರಾಕ್ಟರ್ ಕೆಲಸ' ಮಾಡುವಂತೆ ಹೇಳಿದರು. ನಾವು ಟ್ರ್ಯಾಕ್ಟರ್ ಜೊತೆ ಹಳ್ಳಿಗಳಿಗೆ ಹೋಗುತ್ತಿದ್ದೆವು. ಅಲ್ಲಿ ಜನರು ತಮ್ಮ ಕಸವನ್ನು ಟ್ರಾಲಿಯಲ್ಲಿ ಹಾಕುತ್ತಿದ್ದರು. ನಾನು ತ್ಯಾಜ್ಯವನ್ನು ಬೇರ್ಪಡಿಸುತ್ತೇನೆ. ದಹೇಜ್ನಲ್ಲಿ, ನಾವು ದೊಡ್ಡ ಚರಂಡಿಗಳನ್ನು ಸಹ ಸ್ವಚ್ಛಗೊಳಿಸಿದ್ದೇವೆ. ದೊಡ್ಡ ಚೇಂಬರ್‌ಗಳನ್ನು ಹೊಂದಿರುವ ಆ ಖಾಸಗಿ ಗುಂಡಿಗಳು ನಿಮಗೆ ಗೊತ್ತೇ? ನಾನು ಬಕೆಟ್ಟಿಗೆ ಹಗ್ಗ ಕಟ್ಟಿ ಅದರಲ್ಲಿನ ತ್ಯಾಜ್ಯವನ್ನು ಹೊರತೆಗೆಯುತ್ತಿದ್ದೆ" ಎಂದು ಅವರು ವಿವರಿಸುತ್ತಾರೆ.
"ಒಂದು ದಿನದ ಕೆಲಸಕ್ಕೆ ಅವರು 400 ರೂಪಾಯಿಗಳನ್ನು ನೀಡುತ್ತಿದ್ದರು" ಎಂದು ರಮಿಲಾ ಬೆನ್ ಹೇಳುತ್ತಾರೆ. "ಕೆಲಸಕ್ಕೆ ಹೋದ ದಿನಗಳಲ್ಲಿ ನನಗೆ 400 ರೂಪಾಯಿ ಸಿಗುತ್ತಿತ್ತು. ಸುಮಾರು ನಾಲ್ಕು ತಿಂಗಳ ನಂತರ, ಅವರು ನಮಗೆ ತಿಂಗಳ ಸಂಬಳ ನೀಡಲು ಪ್ರಾರಂಭಿಸಿದರು. ಮೊದಲು ಒಂಬತ್ತು ಸಾವಿರ, ನಂತರ ಹನ್ನೆರಡು, ನಂತರ ಅಂತಿಮವಾಗಿ ಹದಿನೈದು ಸಾವಿರ ರೂಪಾಯಿ ಕೊಡುತ್ತಿದ್ದರು." ಅನಿಪ್ ಮತ್ತು ಗಲ್ಸಿಂಗ್ ಕೆಲವು ವರ್ಷಗಳಿಂದ ದಹೇಜ್ ಗ್ರಾಮ ಪಂಚಾಯಿತಿಗೆ ತಿಂಗಳ ಸಂಬಳದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರಿಗೆ ಪಂಚಾಯತ್ ಕಡೆಯಿಂದ ಉಳಿಯಲು ಒಂದು ಕೋಣೆಯನ್ನು ಸಹ ನೀಡಲಾಗಿತ್ತು.
ಅವರ ನೇಮಕಾತಿ ಸಮಯದಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ್ದರೆ?
ಈಗ ಸತ್ತಿರುವ ನೌಕರರನ್ನು ನಾಗರಿಕ ಸಂಸ್ಥೆಗಳು ನೇಮಿಸಿಕೊಂಡಿರುವ ಖಾಸಗಿ ಗುತ್ತಿಗೆದಾರರು ನೇಮಿಕೊಂಡಿದ್ದರೋ ಅಥವಾ ಪಂಚಾಯತ್ ಒಪ್ಪಂದದಡಿ ತಾತ್ಕಾಲಿಕವಾಗಿಯೋ, ಖಾಯಂ ಆಗಿ ನೇಮಿಸಿಕೊಂಡಿತ್ತೋ ಎನ್ನುವುದರ ಕುರಿತು ಸಂಬಂಧಿಕರಿಗೆ ಖಾತರಿಯಿಲ್ಲ.
"ಲೆಟರ್ ಹೆಡ್ ಕಾಗದದಲ್ಲಿ ದಾಖಲೆ ಇದ್ದಿರಬೇಕು. ಆದರೆ ಅನಿಪ್‌ನ ಜೇಬಿನಲ್ಲೇ ಇದ್ದಿರಬಹುದು" ಎಂದು ಅವರ ತಂದೆ ಝಾಲು ಭಾಯ್ ಹೇಳುತ್ತಾರೆ. ಹಾಗಿದ್ದರೆ ಈ ಉದ್ಯೋಗಕ್ಕೆ ಹೊಸಬರಾದ ಹಾಗೂ ಅವಘಡದಲ್ಲಿ ಬದುಕುಳಿದಿರುವ ಭಾವೇಶ್ ಮತ್ತು ಜಿಗ್ನೇಶ್ ಕತೆಯೇನು? "ನಮಗೆ ಯಾವುದೇ ಕಾಗದ ನೀಡಿಲ್ಲ ಅಥವಾ ಸಹಿ ಹಾಕಿಸಿಕೊಂಡಿಲ್ಲ. ಅವರು ನಮ್ಮನ್ನು ಕೆಲಸಕ್ಕೆ ಕರೆದರು ಮತ್ತು ನಾವು ಹೋದೆವು" ಎಂದು ಭಾವೇಶ್ ಹೇಳುತ್ತಾರೆ.
ದುರಂತ ಸಂಭವಿಸಿದಾಗ ಭಾವೇಶ್ ಕೆಲಸಕ್ಕೆ ಸೇರಿ ಹತ್ತು ದಿನಗಳಷ್ಟೇ ಆಗಿತ್ತು. ಆ ದಿನ ಜಿಗ್ನೇಶ್ ಮತ್ತು ಪರೇಶ್ ಅವರನ್ನು ಕೆಲಸಕ್ಕೆ ಕರೆಯಲಾಯಿತು. ಇದು ಅವರ ಕೆಲಸದ ಮೊದಲ ದಿನವಾಗಿತ್ತು. ಮತ್ತು ಅವರ ಕುಟುಂಬದ ಯಾವುದೇ ಸದಸ್ಯರಿಗೆ ಅವರು ಕೈಗೊಳ್ಳಬೇಕಾದ ಶ್ರಮದ ಸ್ವರೂಪದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ.
ಪರೇಶ್ ಅವರ ತಾಯಿ, 51 ವರ್ಷದ ಸಪ್ನಾ ಬೆನ್ ಅವರು ಮಾತನಾಡುವಾಗ ಕಣ್ಣೀರು ಹಾಕುತ್ತಾರೆ: "ಪಂಚಾಯತಿಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಪರೇಶ್ ಮನೆಯಿಂದ ಹೊರಟ, ಅಲ್ಲಿ ಅವರು ಅವನನ್ನು ಅಲ್ಲಿಗೆ [ದಹೇಜ್‌ಗೆ] ಕಳುಹಿಸಿದರು. ಅವನ ಸಹೋದರ [ಭಾವೇಶ್] ಹತ್ತು ದಿನಗಳ ಹಿಂದೆಯೇ ಅಲ್ಲಿಗೆ ಬಂದಿದ್ದನು. ಗಲ್ಸಿಂಗ್ ಭಾಯ್ ಅವನನ್ನು ಕರೆದಿದ್ದರು. ನಿಮಗೆ ದಿನಕ್ಕೆ ೫೦೦ ರೂಪಾಯಿ ಕೂಲಿ ಸಿಗುತ್ತದೆ ಎಂದು ಭಾವೇಶ್ ಮತ್ತು ಪರೇಶ್ ಇಬ್ಬರೂ ಹೇಳಿದ್ದರು. ಒಳಚರಂಡಿಗಳನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಹೋಗುತ್ತಿರುವುದಾಗಿ ಇಬ್ಬರೂ ನಮಗೆ ಹೇಳಿರಲಿಲ್ಲ. ವರು ಎಷ್ಟು ದಿನ ಅಲ್ಲಿರುತ್ತಾರೆ, ಅವರು ಅಲ್ಲಿ ಯಾವ ಕೆಲಸ ಮಾಡುತ್ತಾರೆಂದು ನಮಗೆ ಹೇಗೆ ತಿಳಿಯಲು ಸಾಧ್ಯ?" ಎಂದು ಅವರು ಕೇಳುತ್ತಾರೆ.
ಗಲ್ಸಿಂಗ್ ಮುನಿಯಾ ಅವರ ಮನೆಯಲ್ಲಿ, 26 ವರ್ಷದ ಕನಿತಾ ಬೆನ್ ಅವರಿಗೆ ತನ್ನ ಗಂಡ ಯಾವ ಕೆಲಸ ಮಾಡುತ್ತಾರೆನ್ನುವುದು ತಿಳಿದಿರಲಿಲ್ಲ. "ನಾನು ಮನೆಯಿಂದ ಹೊರಬರುವುದಿಲ್ಲ" ಎಂದು ಅವರು ಹೇಳುತ್ತಾರೆ. "ಪಂಚಾಯತಿಯಲ್ಲಿ ಕೆಲಸ ಮಾಡಲು ಹೋಗುತ್ತೇನೆ' ಎಂದು ಹೇಳಿ ಹೊರಟು ಹೋಗುತ್ತಿದ್ದರು. ಅವರು ಏನು ಮಾಡುತ್ತಿದ್ದರೆಂದು ಎಂದೂ ಹೇಳಿಲ್ಲ. ಅವರು ಈ ಕೆಲಸವನ್ನು ಮಾಡಲು ಶುರು ಮಾಡಿ ಏಳು ವರ್ಷಗಳಾಗಿರಬೇಕು. ಮನೆಗೆ ಮರಳಿದ ನಂತರವೂ ಈ ಕುರಿತು ಅವರು ನನ್ನ ಬಳಿ ಮಾತನಾಡಿರಲಿಲ್ಲ" ಎಂದು ಅವರು ಹೇಳುತ್ತಾರೆ.
ಈ ಐದು ಕುಟುಂಬಗಳ ಒಬ್ಬರೇ ಒಬ್ಬ ಸದಸ್ಯರಿಗೆ ತಮ್ಮ ಮಕ್ಕಳು, ಗಂಡಂದಿರು, ಸಹೋದರರು ಅಥವಾ ಸೋದರಳಿಯರು ಪಂಚಾಯತಿಯಲ್ಲಿ ಕೆಲಸ ಮಾಡುತ್ತಾರೆನ್ನುವುದರ ಹೊರತು ಅವರ ಕೆಲಸದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಅನಿಪ್ ಸಾವಿನ ನಂತರವೇ ತನ್ನ ಮಗ ಏನು ಮಾಡುತ್ತಿದ್ದಾನೆಂದು ಝಾಲು ಭಾಯಿಗೆ ತಿಳಿಯಿತು. ಹಣದ ತೀವ್ರ ಅಗತ್ಯವು ಅವರನ್ನು ಅಂತಹ ಕೆಲಸಕ್ಕೆ ಪ್ರೇರೇಪಿಸಿತು ಎನ್ನುವುದು ಅವರ ಅಭಿಪ್ರಾಯ. "ಪನ್ಸಾಯತ್ನು ಕೋಮ್ ಎಟ್ಲೆ ಭೂಂಡ್ ಉಠಾವವ್ನು ಕೆಹ್ ತೋ ಭೂಂಡ್ ಉಠವಾವು ಪಡೇ. (ಪಂಚಾಯತ್ ಕೆಲಸ ಎಂದರೆ ಅವರು ಹಂದಿಯ ಹೆಣ ಎತ್ತಲು ಹೇಳಿದರೆ ನಾವು ಎತ್ತಬೇಕು)" ಎಂದು ಝಾಲು ಭಾಯ್ ಹೇಳುತ್ತಾರೆ. "ಅವರು ಗಟಾರವನ್ನು ಸ್ವಚ್ಛಗೊಳಿಸಲು ಹೇಳಿದರೆ, ನಾವು ಅದನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಅವರು ನಮಗೆ ಕೆಲಸದಲ್ಲಿ ಉಳಿಯಲು ಬಿಡುವುದಿಲ್ಲ. ಮನೆಗೆ ಕಳಿಸಿಬಿಡುತ್ತಾರೆ.”
ಸತ್ತವರರು ಅಥವಾ ಈ ಕೆಲಸಕ್ಕೆ ಹೊಸದಾಗಿ ಸೇರಿದವರಿಗೆ ಈ ಕೆಲಸದಲ್ಲಿ ಯಾವ ಕೆಲಸಗಳೆಲ್ಲ ಸೇರಿವೆಯೆನ್ನುವುದು ತಿಳಿದಿತ್ತೇ? ಭಾವೇಶ್ ಮತ್ತು ಜಿಗ್ನೇಶ್ ತಮಗೆ ತಿಳಿದಿತ್ತು ಎನ್ನುತ್ತಾರೆ. ಭಾವೇಶ್ ಹೇಳುವಂತೆ "ಗಲ್ಸಿಂಗ್ ಭಾಯ್ ಸ್ವಲ್ಪ ಗಟಾರ ಚೊಕ್ಕ ಮಾಡುವ ಕೆಲಸವಿದೆ ದಿನಕ್ಕೆ ಐನೂರು ರೂ ಕೊಡುವುದಾಗಿ ಹೇಳಿದ್ದರು" ಇದನ್ನು ಖಚಿತಪಡಿಸುವ ಜಿಗ್ನೇಶ್ "ನನಗೆ ಅನಿಪ್ ಕರೆ ಮಾಡಿ ಕರೆದರು. ನಾನು ಹೋದೆ. ಮರುದಿನ ಬೆಳಗ್ಗೆ ಅವರು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡರು."
ಬರ್ ಜಿಗ್ನೇಶ್ ಯಾವುದೇ ಕೆಲಸಗಾರರು ಮಧ್ಯಮ ಶಾಲೆಯನ್ನು ಮೀರಿ ಓದಿರಲಿಲ್ಲ. ಜಿಗ್ನೇಶ್ ಗುಜರಾತಿ ಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ - ಬಾಹ್ಯ ವಿದ್ಯಾರ್ಥಿಯಾಗಿ. ಅವರೆಲ್ಲರಿಗೆ ಮತ್ತೆ ಮತ್ತೆ, ಗಟಾರಗಳೊಳಗೆ ಇಳಿದು ಕೆಲಸ ಮಾಡುವುದು ಬಡತನದಿಂದ ಹೊರಬರಲು ಇದ್ದ ಏಕೈಕ ಮಾರ್ಗವಾಗಿತ್ತು. ಅವರಿಗೆ ಮನೆಯಲ್ಲಿ ತುಂಬಿಸಬೇಕಿದ್ದ ಹೊಟ್ಟೆಗಳಿದ್ದವು ಮತ್ತು ಓದಿಸಬೇಕಿದ್ದ ಮಕ್ಕಳಿದ್ದವು.
*****
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ (ಎನ್‌ಸಿಎಸ್‌ಕೆ) 2022-23ರ ವಾರ್ಷಿಕ ವರದಿಯ ಪ್ರಕಾರ, 1993 ಮತ್ತು 2022ರ ನಡುವೆ ಅಪಾಯಕಾರಿ ಒಳಚರಂಡಿಗಳ ಶುಚಿಗೊಳಿಸುವಿಕೆಯಲ್ಲಿ ತೊಡಗಿದ್ದಾಗ ಗುಜರಾತಿನಲ್ಲಿ 153 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ 220 ಸಾವುಗಳನ್ನು ದಾಖಲಿಸಿದ ತಮಿಳುನಾಡಿನ ನಂತರ ಇದು ಎರಡನೇ ಅತಿ ಹೆಚ್ಚು ಸಾವುಗಳು.
ಆದಾಗ್ಯೂ, ಸಾವಿನ ನಿಜವಾದ ಸಂಖ್ಯೆ ಅಥವಾ ಸೆಪ್ಟಿಕ್ ಟ್ಯಾಂಕುಗಳು ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ಜನರ ಸಂಖ್ಯೆಯ ಅಧಿಕೃತ ದತ್ತಾಂಶವು ಅಸ್ಪಷ್ಟವಾಗಿಯೇ ಮುಂದುವರೆದಿದೆ. ಆದಾಗ್ಯೂ, ಗುಜರಾತ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು 2021 ಮತ್ತು 2023ರ ನಡುವೆ ಒಟ್ಟು 11 ನೈರ್ಮಲ್ಯ ಕಾರ್ಮಿಕರ ಸಾವುಗಳ ಬಗ್ಗೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದರು. ಮತ್ತು ಜನವರಿ 2022 ಮತ್ತು ಜನವರಿ 2023ರ ನಡುವೆ ಇನ್ನೂ ನಾಲ್ಕು ಸಾವುಗಳಾಗಿವೆ.
ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ವರದಿಯಾದ ಎಂಟು ನೈರ್ಮಲ್ಯ ಕಾರ್ಮಿಕರ ಸಾವುಗಳನ್ನು ಸೇರಿಸಿದರೆ ಒಟ್ಟು ಸಂಖ್ಯೆ ಹೆಚ್ಚಾಗುತ್ತದೆ. ಅವುಗಳಲ್ಲಿ ಮಾರ್ಚ್‌ನಲ್ಲಿ ರಾಜ್‌ಕೋಟ್‌ನಲ್ಲಿ ಎರಡು, ಏಪ್ರಿಲ್ ತಿಂಗಳಿನಲ್ಲಿ ದಹೇಜ್‌ನಲ್ಲಿ ಮೂರು (ಈ ಕಥೆಯಲ್ಲಿ ವರದಿಯಾಗಿದೆ) ಒಳಗೊಂಡಿರುತ್ತದೆ. ಮತ್ತು ಅದೇ ತಿಂಗಳಲ್ಲಿ ಧೋಲ್ಕಾದಲ್ಲಿ ಇನ್ನೆರಡು ಮತ್ತು ಥರಾಡ್‌ನಲ್ಲಿ ಒಂದು ಸಾವುಗಳಾಗಿವೆ.
ಅವರು ಯಾವುದಾದರೂ ಸುರಕ್ಷತಾ ಸಾಧನಗಳನ್ನು ಹೊಂದಿದ್ದರೇ?
ಅನಿಪ್ ಅವರ 21 ವರ್ಷದ ಪತ್ನಿ ರಮಿಲಾ ಬೆನ್ ಅವರು ಭರೂಚ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಇದಕ್ಕೆ ಉತ್ತರವಿದೆ: “ಸರ್ಪಂಚ್ ಜೈದೀಪ್‌ಸಿಂಗ್ ರಾಣಾ ಮತ್ತು ಉಪ ಸರಪಂಚ್ ಅವರ ಪತಿ ಮಹೇಶ್ ಭಾಯ್ ಗೋಹಿಲ್ ಅವರಿಗೆ ನನ್ನ ಪತಿ ಮತ್ತು ಅವರೊಂದಿಗೆ ಇರುವ ಇತರರು ... ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ 20-ಅಡಿ ಆಳದ ದುರ್ವಾಸನೆಯ ಒಳಚರಂಡಿಯೊಳಗೆ ಇಳಿಯುತ್ತಿದ್ದಾರೆ, ಅವರು ಸಾಯುವ ಸಾಧ್ಯತೆಯಿದ್ದರೂ ಅವರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಲಾಗಿರಲಿಲ್ಲ." [ಉಪ ಸರಪಂಚ್ ಮಹಿಳೆಯಾಗಿದ್ದರು ಮತ್ತು ಸಂಪ್ರದಾಯವಾದಿ ಸಮಾಜಗಳಲ್ಲಿ ನಡೆಯುವಂತೆ, ಆಕೆಯ ಹೆಸರಿನಲ್ಲಿ ನಿಜವಾಗಿಯೂ ಅಧಿಕಾರವನ್ನು ಚಲಾಯಿಸುತ್ತಿದ್ದಿದ್ದು ಆಕೆಯ ಪತಿ.]
2013ರ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ , ಹಿಂದಿನ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗ ಮತ್ತು ಡ್ರೈ ಲ್ಯಾಟ್ರಿನ್‌ಗಳ ನಿರ್ಮಾಣ (ನಿಷೇಧ) ಕಾಯಿದೆ, 1993 ಇದನ್ನು ವಿಸ್ತರಿಸಿದಾಗಿನಿಂದ ಮನುಷ್ಯರಿಂದ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಆದರೆ ಇದು ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುವಂತೆ ಕಾಣುತ್ತದೆ. ಅದೇ ಕಾನೂನು "ಅಪಾಯಕಾರಿ ಶುಚಿಗೊಳಿಸುವಿಕೆ" ಯಲ್ಲಿರುವ ಜನರ ಬಗ್ಗೆ ಮತ್ತು ರಕ್ಷಣಾತ್ಮಕ ಸಾಧನಗಳನ್ನು ಪಡೆಯುವ ಅವರ ಹಕ್ಕನ್ನು ಹೇಳುತ್ತದೆ. ಉದ್ಯೋಗದಾತನು ಕೆಲಸಗಾರನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಸಾಧನಗಳು ಮತ್ತು ಇತರ ಶುಚಿಗೊಳಿಸುವ ಸಾಧನಗಳನ್ನು ಒದಗಿಸುವ ತನ್ನ ಜವಾಬ್ದಾರಿಯನ್ನು ಪೂರೈಸದಿದ್ದರೆ, ಅದು ಕಾನೂನಿನ ಪ್ರಕಾರ ಜಾಮೀನು ರಹಿತ ಅಪರಾಧವಾಗುತ್ತದೆ.
ರಮಿಲಾ ಬೆನ್ ಅವರ ಎಫ್ಐಆರ್ ಆಧರಿಸಿ ಪೊಲೀಸರು ದಹೇಜ್ ಗ್ರಾಮ ಪಂಚಾಯತಿನ ಸರಪಂಚ್ ಮತ್ತು ಉಪ ಸರಪಂಚ್ ಅವರ ಪತಿಯನ್ನು ಬಂಧಿಸಿದ್ದಾರೆ. ಮೃತರ ಕುಟುಂಬಗಳು ತಮ್ಮ ಅರ್ಜಿಯ ಫಲಿತಾಂಶದ ಬಗ್ಗೆ ಏನೂ ಹೇಳಿಲ್ಲ.
*****
“ಅಗಲ್ ಪಾಚಲ್ ಕೋಯಿ ನಾಥ್. ಆ ಪಂಚ ಸೋಕ್ರ ಸೆ. ಕೋಯಿ ನಾಥ್ ಪಾಲ್ ಪೋಸ್ ಕರ್ನಾರಾ ಮೇರ್,” ಭಾವನೆಗಳು ಗಲ್ಸಿಂಗ್ ಅವರ ಪತ್ನಿ ಕನಿತಾ ಬೆನ್ ಅವರನ್ನು ಉಸಿರುಗಟ್ಟಿಸಿದವು. ("ನನಗೆ ಯಾರೂ ಉಳಿದಿಲ್ಲ. ಐದು ಮಕ್ಕಳಿವೆ. ಅವರಿದ್ದಾಗ ಅವರ ಆಹಾರ, ಓದಿನ ಕಾಳಜಿ ಮಾಡುತ್ತಿದ್ದರು. ಇನ್ನು ನಮ್ಮ ಪಾಲಿಗೆ ಯಾರೂ ಇಲ್ಲ"). ಅವರ ಗಂಡನ ಮರಣದ ನಂತರ, ತನ್ನ ಅತ್ತೆ ಮತ್ತು ಐದು ಹೆಣ್ಣುಮಕ್ಕಳೊಂದಿಗೆ ಬದುಕುತ್ತಿದ್ದಾರೆ; ಹಿರಿಯ ಕಿನಾಲ್‌ಗೆ 9 ವರ್ಷ ಮತ್ತು ಕಿರಿಯ ಸಾರಾಗೆ ಒಂದು ವರ್ಷವೂ ತುಂಬಿಲ್ಲ. "ನನಗೆ ನಾಲ್ಕು ಗಂಡು ಮಕ್ಕಳಿದ್ದರು" ಎಂದು ಗಲ್ಸಿಂಗ್ ಅವರ 54 ವರ್ಷದ ತಾಯಿ ಬಾಬುಡಿ ಬೆನ್ ಹೇಳುತ್ತಾರೆ, "ಇಬ್ಬರು ಸೂರತ್‌ನಲ್ಲಿದ್ದಾರೆ. ಅವರು ಎಂದಿಗೂ ಇಲ್ಲಿಗೆ ಬರುವುದಿಲ್ಲ. ದೊಡ್ಡವನು ಪ್ರತ್ಯೇಕವಾಗಿ ಉಳಿದಿದ್ದಾನೆ. ಅವನು ನಮಗೆ ಏಕೆ ಆಹಾರವನ್ನು ನೀಡುತ್ತಾನೆ? ನಾವು ಚಿಕ್ಕವನಾದ ಗಲ್ಸಿಂಗ್ ಜೊತೆಯಲ್ಲಿ ಇರುತ್ತಿದ್ದೆವು. ಈಗ ಅವನು ಹೋಗಿದ್ದಾನೆ. ಈಗ ನಮಗೆ ಯಾರಿದ್ದಾರೆ? ” ಎಂದು ಕೇಳುತ್ತಾರೆ.
21ನೇ ವಯಸ್ಸಿನಲ್ಲಿ ವಿಧವೆಯಾದ ಮತ್ತು ಗರ್ಭದಲ್ಲಿ ಮಗುವನ್ನು ಹೊಂದಿರುವ ರಮಿಲಾ ಬೆನ್ ಕೂಡ ಅಷ್ಟೇ ನೋವಿನಲ್ಲಿದ್ದಾರೆ. "ನಾನು ಈಗ ಹೇಗೆ ಬದುಕಲಿ? ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ಕುಟುಂಬದಲ್ಲಿ ಜನರಿದ್ದಾರೆ ಆದರೆ ನಾವು ಎಷ್ಟು ಸಮಯದವರೆಗೆ ಅವರ ಮೇಲೆ ಅವಲಂಬಿತರಾಗಲು ಸಾಧ್ಯ? ಅವರು ತನ್ನ ಐವರು ಮೈದುನ-ಬಾವಂದಿರು, ಅತ್ತಿಗೆ ಮತ್ತು ಅನಿಪ್ ಅವರ ಹೆತ್ತವರನ್ನು ಉಲ್ಲೇಖಿಸುತ್ತಿದ್ದಾರೆ.
"ಈಗ ನಾನು ಈ ಮಗುವನ್ನು ಏನು ಮಾಡಲಿ? ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ಒಂಟಿ ಮಹಿಳೆಯಾದ ನಾನು ಗುಜರಾತಿನಲ್ಲಿ ಎಲ್ಲಿಗೆ ಹೋಗಲಿ? ಅವರು ರಾಜಸ್ಥಾನದವರು ಆದರೆ ಅಲ್ಲಿಗೆ ಹಿಂತಿರುಗಲು ಸಾಧ್ಯವಿಲ್ಲ. "ನನ್ನ ತಂದೆಗೆ ಕೆಲಸ ಮಾಡಲು ಸಾಧ್ಯವಾಗದಷ್ಟು ವಯಸ್ಸಾಗಿದೆ. ಕೃಷಿ ಮಾಡಲು ಸಹ ಭೂಮಿಯಿಲ್ಲ, ಮತ್ತು ನನ್ನ ಕುಟುಂಬವು ದೊಡ್ಡದು. ನಾಲ್ವರು ಸಹೋದರರು ಮತ್ತು ಆರು ಸಹೋದರಿಯರಿದ್ದಾರೆ. ನಾನು ನನ್ನ ಹೆತ್ತವರ ಬಳಿಗೆ ಹೇಗೆ ಹೋಗುವುದು?" ಅವರು ಮಾತನಾಡುವಾಗ ಅವರ ಕಣ್ಣುಗಳು ಅವರ ಹೊಟ್ಟೆಯ ಮೇಲೆ ನೆಟ್ಟಿದ್ದವು. ಅವರೀಗ ಆರು ತಿಂಗಳ ಗರ್ಭಿಣಿ.
"ಅನಿಪ್ ನನಗೆ ಪುಸ್ತಕಗಳನ್ನು ತರುತ್ತಿದ್ದ" ಎಂದು ಅವರ ಹತ್ತು ವರ್ಷದ ತಂಗಿ ಜಾಗೃತಿ ನಮಗೆ ಹೇಳಲು ಪ್ರಾರಂಭಿಸುತ್ತಿದ್ದಂತೆ ಉಕ್ಕಿ ಬಂದ ದುಃಖ ಆಕೆಯ ಮಾತುಗಳನ್ನು ತಡೆಯಿತು.
ಭಾವೇಶ್ ಮತ್ತು ಪರೇಶ್ ಅವರು ಚಿಕ್ಕವರಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಇತರ ಮೂವರು ಸಹೋದರರು, ಇಬ್ಬರು ಅತ್ತಿಗೆಯಂದಿರು, ಒಬ್ಬ ತಾಯಿ ಮತ್ತು ಒಬ್ಬ ತಂಗಿ ಅವರ ಕುಟುಂಬದಲ್ಲಿದ್ದಾರೆ. "ಪರೇಶ್ ನನ್ನನ್ನು ಮುದ್ದಿಸುತ್ತಿದ್ದ" ಎಂದು ಅವರ 16 ವರ್ಷದ ತಂಗಿ ಭಾವನಾ ಹೇಳುತ್ತಾಳೆ. "ನಾನು 12ನೇ ತರಗತಿಯಲ್ಲಿ ಉತ್ತೀರ್ಣಳಾದರೆ ನಾನು ಬಯಸಿದಲ್ಲಿಗೆ ಓದಲು ಕಳಿಸುವುದಾಗ್ ಅಣ್ಣ ಹೇಳಿದ್ದ. ಅವಳು ಈ ವರ್ಷ 12ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದಾಳೆ.
ಗಲ್ಸಿಂಗ್, ಪರೇಶ್ ಮತ್ತು ಅನಿಪ್ ಅವರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಇವು ಅನೇಕ ಸದಸ್ಯರನ್ನು ಹೊಂದಿರುವ ದೊಡ್ಡ ಕುಟುಂಬಗಳು - ಅವು ಈಗಷ್ಟೇ ಪ್ರಮುಖ ಆದಾಯ ಗಳಿಸುವವರನ್ನು ಕಳೆದುಕೊಂಡಿವೆ. ಅದಕ್ಕಿಂತ ಹೆಚ್ಚಾಗಿ, ಚೆಕ್‌ಗಳು ಖಂಡಿತವಾಗಿಯೂ ವಿಧವೆಯರ ಹೆಸರಿನಲ್ಲಿ ಬರುತ್ತಿದ್ದವು - ಆದರೆ ಮಹಿಳೆಯರಿಗೆ ಹಣ ಬರುವುದರ ಬಗ್ಗೆ ಏನೂ ತಿಳಿದಿರಲಿಲ್ಲ. ಪುರುಷರಿಗೆ ಮಾತ್ರ ತಿಳಿದಿತ್ತು.
ಪ್ರಕೃತಿಗೆ ಹತ್ತಿರದಲ್ಲಿ ವಾಸಿಸುವ ಆದಿವಾಸಿಗಳ ಸಮುದಾಯ ಹೇಗೆ ಈ ಕೆಲಸಕ್ಕೆ ಬಂದಿತು? ಅವರ ಬಳಿ ಭೂಮಿ ಇರಲಿಲ್ಲವೇ? ಬೇರೆ ಜೀವನೋಪಾಯದ ಅವಕಾಶಗಳಿರಲಿಲ್ಲವೇ?
"ನಮ್ಮ ಕುಟುಂಬಗಳಲ್ಲಿ ನಾವು ಸಣ್ಣ ತುಂಡು ಭೂಮಿಯನ್ನು ಹೊಂದಿದ್ದೇವೆ" ಎಂದು ಅನಿಪ್ ಅವರ ಮೋಟಾ ಬಾಪಾ (ದೊಡ್ಡಪ್ಪ) ವಿವರಿಸುತ್ತಾರೆ. "ನಮ್ಮ ಕುಟುಂಬದ ಬಳಿ ಹತ್ತು ಎಕರೆ ಜಮೀನಿರಬಹುದು ಆದರೆ ನಮ್ಮಲ್ಲಿ ಅದಕ್ಕೆ ಮುನ್ನೂರು ಜನರಿದ್ದಾರೆ. ಅದರಲ್ಲಿ ಹೇಗೆ ಎಲ್ಲವನ್ನೂ ಪೂರೈಸುವುದು? ಕೆಲಸ ಹುಡುಕಿಕೊಂಡು ಹೋಗಲೇಬೇಕಾಗುತ್ತದೆ. ಬೇಸಾಯದಿಂದ ಊಟಕ್ಕೆ ಆಗುವಷ್ಟು ಸಿಗಬಹುದು ಆದರೆ ಮಾರಲು ಏನೂ ಉಳಿಯುವುದಿಲ್ಲ.”
ಇಂತಹ ಕೆಲಸ ಮಾಡಿದರೆ ಅವರಿಗೆ ಕಳಂಕ ಅಂಟುವುದಿಲ್ಲವೆ?
"ನಿಜವಾಗಿಯೂ ಯಾವುದೇ ಕಳಂಕ ಇರಲಿಲ್ಲ" ಎಂದು ಪರೇಶ್ ಅವರ ಮೋಟಾ ಬಾಪಾ, ಬಚುಭಾಯ್ ಕಟಾರಾ ಹೇಳುತ್ತಾರೆ. "ಆದರೆ ಈಗ ಈ ರೀತಿಯ ಘಟನೆ ಸಂಭವಿಸಿದೆ, ನಾವು ಅಂತಹ ಕೊಳಕು ಕೆಲಸವನ್ನು ಮಾಡಬಾರದು ಅನ್ನಿಸುತ್ತದೆ.”
“ಆದರೆ ಬದುಕಲು ಏನು ಮಾಡುವುದು?”
ಲೇಖಕರು ಮೂಲತಃ ಈ ವರದಿಯನ್ನು ಗುಜರಾತಿ ಭಾಷೆಯಲ್ಲಿ ಬರೆದಿದ್ದರು ಮತ್ತು ಪ್ರತಿಷ್ಠಾ ಪಾಂಡ್ಯ ಅವರು ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು