2021ರ ಮೇ ತಿಂಗಳಲ್ಲಿ ರಾಜೇಂದ್ರ ಪ್ರಸಾದ್ ಅವರ ಪತ್ನಿ ಉಸಿರಾಡಲು ಕಷ್ಟಪಡುತ್ತಿದ್ದಂತೆ ಉತ್ತರ ಪ್ರದೇಶದ ಹಳ್ಳಿಯಿಂದ ಪತ್ನಿಯನ್ನು ಹತ್ತಿರದ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ದರು. ಹತ್ತಿರದಲ್ಲಿ ಒಂದು ಆಸ್ಪತ್ರೆ ಇದ್ದರೂ ಅವರ ಆಯ್ಕೆ ಈ ಆಸ್ಪತ್ರೆಯಾಗಿತ್ತು, ಆದರೆ ನೇಪಾಳದ ರಾಷ್ಟ್ರೀಯ ಗಡಿಯನ್ನು ದಾಟಬೇಕಾಗಿತ್ತು.
“ಗಡಿಯ ಇನ್ನೊಂದು ಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುವುದು ನಮಗೆ ಸಾಮಾನ್ಯವಾಗಿದೆ, ಹಳ್ಳಿಯಲ್ಲಿರುವ ಅನೇಕರು ಹಲವು ವರ್ಷಗಳಿಂದ ಇದನ್ನು ಮಾಡುತ್ತಿದ್ದೇವೆ,” ಎಂದು ತಮ್ಮ ಅಸಹಜ ಆಯ್ಕೆಯ ಬಗ್ಗೆ 37 ವರ್ಷದ ರಾಜೇಂದ್ರ ಹೇಳುತ್ತಾರೆ. ರಾಜೇಂದ್ರ ಅವರ ಗ್ರಾಮವಾದ ಬಂಕಟಿಯಿಂದ 15 ಕಿಮೀ ದೂರದಲ್ಲಿ ನೇಪಾಳದ ಆಸ್ಪತ್ರೆ ಇದೆ. ನೇಪಾಳದ ಗಡಿಯಲ್ಲಿರುವ ಉತ್ತರಪ್ರದೇಶದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬಂಕಟಿ ಲಖೀಂಪುರ್ ಖೇರಿಯಲ್ಲಿ ಬರುತ್ತದೆ, (ಅದು ಖೇರಿ ಎಂದೂ ಕರೆಯಲ್ಪಡುತ್ತದೆ)
ಭಾರತ ಹಾಗೂ ನೇಪಾಳ ನಡುವಿನ ಮುಕ್ತ ಗಡಿ ನಿಯಮವು 1950ರ ಶಾಂತಿ ಮತ್ತು ಗೆಳೆತನದ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಜಾರಿಗೆ ಬಂತು, ಇದರಿಂದಾಗಿ ಭಾರತ ಹಾಗೂ ನೇಪಾಳದ ಜನರು ಮುಕ್ತವಾಗಿ ಎರಡೂ ಪ್ರದೇಶಗಳಲ್ಲಿ ಸಂಚರಿಸಬಹುದಾಯಿತು. ಇದು ಅವರಿಗೆ ವ್ಯಾಪಾರದಲ್ಲಿ ತೊಡಗಿಕೊಳ್ಳಲು, ಆಸ್ತಿಯನ್ನು ಹೊಂದಲು ಮತ್ತು ಉದ್ಯೋಗಗಳನ್ನು ಪಡೆಯಲು ಅವಕಾಶಮಾಡಿಕೊಟ್ಟಿತು.
ಆದರೆ ಕೋವಿಡ್-19 ಅದೆಲ್ಲವನ್ನೂ ಬದಲಾಯಿಸಿತು.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗ ಮಟ್ಟ ತಲುಪಿರುವಾಗ ರಾಜೇಂದ್ರ ಅವರ ಪತ್ನಿ 35 ವರ್ಷದ ಗೀತಾ ದೇವಿ ಆಸ್ಪತ್ರೆಯೊಂದಕ್ಕೆ ದಾಖಲಾದರು. ಆದರೆ ಅವರಿಗೆ ಗಡಿಯನ್ನು ದಾಟಿ ಆಸ್ಪತ್ರೆಗೆ ಹೋಗಲಾಗಲಿಲ್ಲ, ಏಕೆಂದರೆ ಕೋವಿಡ್-19 ಉಲ್ಬಣಗೊಂಡ ನಂತರ 2020 ಮಾರ್ಚ್ 20ರಿಂದ ಭಾರತದ ಐದು ರಾಜ್ಯಗಳು ಸೇರಿದಂತೆ 1,850 ಕಿಮೀ ಉದ್ದದ ಗಡಿಯನ್ನು ನೇಪಾಳ ಮುಚ್ಚಿತ್ತು.
ಅದಕ್ಕೆ ರಾಜೇಂದ್ರನ ಕುಟುಂಬ ಭಾರೀ ಬೆಲೆ ತೆತ್ತಿತು.
ರಾಜೇಂದ್ರ ಅವರು ಬಂಕಟಿಯಿಂದ 25 ಕಿಮೀ ದೂರದಲ್ಲಿರುವ ಪಾಲಿಯಾ ನಗರಕ್ಕೆ ಗೀತಾ ಅವರನ್ನು ಕೊಂಡೊಯ್ದರು. ಅದು ಅವರ ಗ್ರಾಮವಿರುವ ಬ್ಲಾಕ್‌ನ ಕೇಂದ್ರಸ್ಥಾನವಾಗಿತ್ತು. “ರಸ್ತೆಯ ಮಾರ್ಗವು [ಪಾಲಿಯಾಕ್ಕೆ ಗೋಗುವ] ದುರವಸ್ತೆಯಿಂದ ಕೂಡಿತ್ತು, ಇದರಿಂದಾಗಿ ಅಲ್ಲಿಗೆ ತಲುಪಲು ಬಹಳ ಸಮಯ ತಗಲುತ್ತಿತ್ತು,” ಎಂದು ಅವರು ಹೇಳಿದರು. “ನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಚೆನ್ನಾಗಿಲ್ಲ, ಆದ್ದರಿಂದ ನಾವು ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು,” ರಾಜೇಂದ್ರ ಅವರು ಗೀತಾ ಅವರನ್ನು ಪಾಲಿಯಾಕ್ಕೆ ಕೊಂಡೊಯ್ಯಲು 2,000ರೂ.ಗೆ ವಾಹವೊಂದನ್ನು ಬಾಡಿಗೆಗೆ ತೆಗೆದುಕೊಂಡರು ಏಕೆಂದರೆ ಬಂಕಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸೌಲಭ್ಯಗಳಿಲ್ಲ.
ಕೆಮ್ಮು ಮತ್ತು ಚಳಿ ಮತ್ತು ಉಸಿರಾಡಲು ಕಷ್ಟಪಡುತ್ತಿದ್ದ-ಗೀತಾ ಕೋವಿಡ್ ಲಕ್ಷಣಗಳನ್ನು ಹೊಂದಿದ್ದರೂ-ನಗರದ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟವ್ ಬಂದಿದೆ. ಆದರೆ ಅವರಿಗೆ ನ್ಯುಮೇನಿಯಾ ಇರುವುದು ಪತ್ತೆಯಾಗಿದೆ. “ಅವರ ಉಸಿರಾಟದ ತೊಂದರೆ ಮುಂದುವರಿಯಿತು,” ಎನ್ನುತ್ತಾರೆ ರಾಜೇಂದ್ರ. ನಂತರ ಪಾಲಿಯಾದಲ್ಲಿ ಆಮ್ಲಜನಕದ ಕೊರತೆ ಕಂಡು ಬಂತು. “ನಾನು ಖುದ್ದಾಗಿ ಕೆಲವು ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಿದೆ, ಆದರೆ ಅದು ಸಾಕಾಗಲಿಲ್ಲ. ದಾಖಲು ಮಾಡಿ ಆರು ದಿನ ಕಳೆಯುತ್ತಿದ್ದಂತೆ, ಆಕೆ ಅಸುನೀಗಿದಳು.”
ಒಂದು ಎಕರೆಗಿಂತಲೂ ಕಡಿಮೆ ಭೂಮಿಯನ್ನು ಹೊಂದಿರುವ ರಾಜೇಂದ್ರ ಅವರ ವಾರ್ಷಿಕ ಆದಾಯ ಸ್ಥಿರವಾಗಿರಲಿಲ್ಲ, ಮತ್ತು 1.5ಲಕ್ಷಕ್ಕಿಂತ ಹೆಚ್ಚಿರಲಿಲ್ಲ. ಗೀತಾ ಅವರ ಚಿಕಿತ್ಸೆಗಾಗಿ ಅವರು 50,000ರೂ. ವ್ಯಯಮಾಡಿರುತ್ತಾರೆ, ಇದರಲ್ಲಿ ಖಾಸಗಿಯಾಗಿ ತಂದ ಆಕ್ಸಿಜನ್ ಸಿಲಿಂಡರ್‌ಗಳ ವೆಚ್ಚವೂ ಸೇರಿದೆ. “ನನ್ನ ದಾಸ್ತಾನಿನ ಅಕ್ಕಿಯನ್ನು ಖರೀದಿಸುವ ವ್ಯಾಪಾರಸ್ಥರಿಂದ ಹಣ ತಂದಿರುವೆ. ನನ್ನ ಬೆಳೆಯ ಮೂಲಕ ಅದನ್ನು ಹಿಂದಿರುಗಿಸುವೆ,” ಎಂದರು. “ಸಾಲದ ಬಗ್ಗೆ ನನಗೆ ಖೇದವಿಲ್ಲ, ಆದರೆ ಆಕೆಗೆ ಸರಿಯಾದ ಚಿಕಿತ್ಸೆ ನೀಡಲಾಗದಿರುವುದಕ್ಕೆ ಖೇದವಿದೆ,” ಎಂದು ಇಬ್ಬರು ಮಕ್ಕಳ ತಂದೆ ಹೇಳಿದರು. “ಈಗ ನಾನು ಹದಿಹರೆಯದ ನನ್ನ ಮಕ್ಕಳ ಆರೈಕೆಯನ್ನು ಖುದ್ದಾಗಿ ನೋಡಿಕೊಳ್ಳುವೆ,”
ಗೀತಾ ಸತ್ತು ಸದ್ಯದಲ್ಲೇ ಒಂದು ವರ್ಷ ಪೂರ್ಣವಾಗುತ್ತದೆ. ನೇಪಾಳಕದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತೇನೋ ಎಂದು ರಾಜೇಂದ್ರ ಅಭಿಪ್ರಾಯಪಡುತ್ತಾರೆ. “ಗಡಿ ಮುಚ್ಚಿರುವಾಗ ಕೆಲವು ಜನರು [ಮೋಹನಾ] ನದಿ ಅಥವಾ [ದುಧ್ವಾ] ಕಾಡಿನ ಮೂಲಕ ನುಸುಳಲು ಯತ್ನಿಸಿದ್ದರು. “ಆದರೆ ನಾನು ಯಾವುದೇ ಅಪಾಯವನ್ನು ಸ್ವೀಕರಿಸಲು ಯತ್ನಿಸಲಿಲ್ಲ. ನಮ್ಮಲ್ಲಿ ಸಾಕಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ನೇಪಾಳಕ್ಕೆ ಹೋಗುವ ಬದಲು ಪಾಲಿಯಾದಲ್ಲೇ ಆಸ್ಪತ್ರೆಯೊಂದನ್ನು ನೋಡಲು ತೀರ್ಮಾನಿಸಿದೆ. ಅದು ಸರಿಯಾದ ತೀರ್ಮಾನವೋ ಏನೋ ಎಂಬುದು ನನಗೆ ಗೊತ್ತಿರಲಿಲ್ಲ,”
ಬಂಕಟಿಯಲ್ಲಿರುವ ಸರಿಸುಮಾರು ಎಲ್ಲಾ 214 ಮನೆಯವರು ನೇಪಾಳದ ಧನ್‌ಗಢಿ ಜಿಲ್ಲೆಯಲ್ಲಿರುವ ಸೇತಿ ಝೋನಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿರುತ್ತಾರೆ. ಅವರಲ್ಲಿ ಬಂಕಟಿ ಗ್ರಾಮದ ಪ್ರಮುಖ 42 ವರ್ಷ ಪ್ರಾಯದ ಜೈ ಬಹದ್ದೂರ್ ರಾಣಾ ಕೂಡ ಒಬ್ಬರು.
6-7 ವರ್ಷಗಳ ಹಿಂದೆ ಕುಷ್ಠ ರೋಗ (ಟಿಬಿ)ದ ಸೋಕು ತಗಲಿದಾಗ ಐದಾರು ಬಾರಿ ಆಸ್ಪತ್ರೆಗೆ ಹೋಗಿರುವುದಾಗಿ ಅವರು ಹೇಳುತ್ತಾರೆ. “ಆರು ತಿಂಗಳ ಕಾಲ ಚಿಕಿತ್ಸೆ ನಡೆಯಿತು.” ಎನ್ನುತ್ತಾರೆ ರಾಣಾ. “ಆ ಅವಧಿಯಲ್ಲಿ ಗಡಿಯಲ್ಲಿ ಯಾವುದೇ ರೀತಿಯ ತಪಾಸಣೆ ಇರಲಿಲ್ಲ. ಯಾವುದೇ ತೋಂದರೆ ಇಲ್ಲದೆ ನಾನು ಚಿಕಿತ್ಸೆ ಪಡೆಯುತ್ತಿದ್ದೆ,”
ತಮ್ಮ ಗ್ರಾಮದ ಕೆಲವು ಜನರು ಸೇತಿ ಝೋನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೆಲವು ಕಾರಣಗಳಿವೆ ಎಂದು ರಾಣಾ ಅವರು ವಿವರಿಸುತ್ತಾರೆ. “ಪಾಲಿಯಾಕ್ಕೆ ಹೋಗುವ ರಸ್ತೆ ದುಧ್ವಾ ಅಭಯಾರಣ್ಯದಲ್ಲಿ ಹಾದುಹೋಗುತ್ತದೆ. ಇದು ಪ್ರಯಾಣಕ್ಕೆ ಸುರಕ್ಷಿತವಾದುದಲ್ಲ. ಅಲ್ಲಿ ಹಲವು ರೀತಿಯ ಕಾಡು ಪ್ರಾಣಿಗಳಿರುತ್ತವೆ,” ಎಂದರು. “ನಾವು ಪಾಲಿಯಾಕ್ಕೆ ಹೋದರೂ ಆಯ್ಕೆಗಳು ಯಾವುವು? ಅಲ್ಲಿ ಖಾಸಗಿ ಆಸ್ಪತ್ರೆಗಳು ನಮಗೆ ಸಿಗುವುದಿಲ್ಲ, ಖೇರಿಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಹಾಗೇ ಹೋಲಿಕೆ ಮಾಡಿದರೆ ಸೇತಿ ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಸೌಲಭ್ಯಗಳಿವೆ,”
ನೇಪಾಳದಲ್ಲಿ ತಾವು ಕಂಡ ಪ್ರೀತಿಯ ಅನುಭವವನ್ನು ಅವರು ಸ್ಮರಿಸಿದರು. “ಇಲ್ಲಿನ [ಭಾರತ] ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಹಾಸಿಗೆ ಉಚಿತವಾಗಿರುತ್ತದೆ. ಆದರೆ ಇಲ್ಲಿನ ವೈದ್ಯರು ಯಾವಾಗಲೂ ಬರೆದುಕೊಡುವ ಔಷಧಿಯನ್ನು [ಔಷಧದ ಅಂಗಡಿ] ಹೊರಗಡೆಯಿಂದಲೇ ತರಬೇಕು. ಇದಕ್ಕೆ ಬಹಳ ಹಣ ಬೇಕಾಗುತ್ತದೆ,” ನೇಪಾಳದಲ್ಲಿ ಈ ರೀತಿ ಇಲ್ಲ ಎನ್ನುತ್ತಾರೆ ಅವರು. “ಅಲ್ಲಿ ಅವರು ಆಸ್ಪತ್ರೆಯಲ್ಲಿ ಔಷಧ ಇಲ್ಲವೆಂದಾಗ ಮಾತ್ರ ಹೊರಗಡೆಯಿಂದ ತರಲು ಬರೆದುಕೊಡುತ್ತಾರೆ. ನನ್ನ ಚಿಕಿತ್ಸೆಗೆ ಹೆಚ್ಚು ಹಣ ಬೇಕಾಗಲಿಲ್ಲ. ನಾನು ಅದೃಷ್ಟವಂತ, 2020ರ ನಂತರ ನನಗೆ ಟಿಬಿ ಸೋಕಲೇ ಇಲ್ಲ. ಖೇರಿ ಅಥವಾ ಲಖನೌ [ಇಲ್ಲಿಂದ 200ಕಿಮೀ ದೂರದಲ್ಲಿದೆ] ದಲ್ಲಿ ಯಾವುದಾದರೂ ಆಸ್ಪತ್ರೆ ಸಿಗುತ್ತಿತ್ತು, ಗಡಿ ತೆರವುಗೊಳಿಸಿದ ನಂತರವೂ ಇದೇ ರೀತಿಯಾಗಿರುವುದಿಲ್ಲ,”
2021ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ನೇಪಾಳವು ಭಾರತದಿಂದ ಬರುವವರಿಗಾಗಿ ಭೂಮಾರ್ಗದ ಸಂಚಾರಕ್ಕೆ ಅವಕಾಶ ಕಲ್ಪಿಸಿತು. ನಿರ್ಗಮಿಸಿದ 72 ಗಂಟೆಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಪಡೆಯತಕ್ಕದ್ದು, ಈಗ ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅಂತಾರಾಷ್ಟ್ರೀಯ ಪ್ರಯಾಣಿಕ ಅರ್ಜಿಯ ಮುದ್ರಿತ ಪ್ರತಿಯನ್ನು ಸಲ್ಲಿಸಬೇಕಾಗದ ಅಗತ್ಯವಿದೆ .
ಹೊಸ ನಿಯಮದಿಂದಾಗಿ ಬಂಕಾಟಿಯ ನಿವಾಸಿಗಳಿಗಳು ಈಗ ತಮ್ಮದೇ ದೇಶದ ವೈದ್ಯಕೀಯ ಸೇವೆಯನ್ನು ಅವಲಂಬಿಸಬೇಕಾಗಿದೆ.
“ಗಡಿಯಲ್ಲಿ ಈಗ [ಗೌರಿಫಂತ] ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ.,” ಎನ್ನುತ್ತಾರೆ ರಾಣಾ, “ಅವರು ನಿಮ್ಮ ಗ್ರಾಮದ ಹೆಸರು, ನಿಮ್ಮ ಗುರುತಿನ ಚೀಟಿ, ಭೇಟಿಗೆ ಕಾರಣ ಇತ್ಯಾದಿ” ಎಂದು ಹೇಳಿದರು. ಬಹುತೇಕವಾಗಿ ಅವರು ನಮ್ಮನ್ನು ಹೋಗಲು ಬಿಟ್ಟರೂ ಕೂಡ, ಹಳ್ಳಿಯವರಿಗೆ ಕಾವಲುಗಾರರ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಭಯ ಉಂಟಾಗುತ್ತದೆ. ಆದ್ದರಿಂದ ಈಗ ಬಹುತೇಕ ಜನರು [ಕೇವಲ] ನಿಶ್ಚಿತವಾಗಿ ಹೋಗಬೇಕೆನಿಸಿದಾಗ ಮಾತ್ರ ಗಡಿ ದಾಟುತ್ತಾರೆ,”
ನೇಪಾಳದ ಕೈಲಾಲಿ ಜಿಲ್ಲೆಯಲ್ಲಿರುವ ಗೀತಾ ಕಣ್ಣಿನ ಆಸ್ಪತ್ರೆಗೆ ಹೋಗುವ ಅಂತಹ ಒಂದು ಅನಿವಾರ್ಯ ಸಂದರ್ಭ.
2022ರ ಜನವರಿ ಮಧ್ಯದಲ್ಲಿ 23 ವರ್ಷದ ಮಾನ್‌ಸರೋವರ್ ಖೇರಿ ಜಿಲ್ಲೆಯ ತಮ್ಮ ಗ್ರಾಮವಾದ ಕಜಾರಿಯಾದಿಂದ 20ಕಿಮೀ ದೂರದಲ್ಲಿರುವ ಕಣ್ಣಿನ ಆಸ್ಪತ್ರೆ ತಲುಪಲು ಕಾಡಿನ ಮೂಲಕ ಸಾಗಿದರು. ಅಲ್ಲಿರುವ ವೈದ್ಯರಿಗೆ ತೋರಿಸುವುದಕ್ಕಾಗಿ ಜತೆಯಲ್ಲಿ ತಮ್ಮ ಗಂಡು ಮಗುವನ್ನು ಕರೆದೊಯ್ದಿದ್ದರು. “ಕಣ್ಣಿನ ಚಿಕಿತ್ಸೆ ನೀಡುವ ಗೀತಾ ಆಸ್ಪತ್ರೆ ರೀತಿಯ ಉತ್ತಮ ಆಸ್ಪತ್ರೆ ನಮ್ಮ ಜಿಲ್ಲೆಯಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಇಲ್ಲ,” ಎನ್ನುತ್ತಾರೆ ಅವರು. “ನನ್ನ ಮಗನಿಗೆ ಅಪಾಯವಾಗುವುದಕ್ಕೆ ನಾನು ಅವಕಾಶ ಕಲ್ಪಿಸುವುದಿಲ್ಲ,,”
2021ರ ಏಪ್ರಿಲ್‌ನಲ್ಲಿ ಜನಿಸಿದ ಅವರ ಮಗನ ಕಣ್ಣಿನಲ್ಲಿ ಸಮಸ್ಯೆ ಉಂಟಾಗಿ ಸಂಕಷ್ಟ ಎದುರಿಸುತ್ತಿದ್ದ- ಕಣ್ಣಿನಲ್ಲಿ ವಿಪರೀತ ನೀರು ಬರುವುದು, ಕೀವು ಹೊರಸೂಸುತ್ತಿತ್ತು. ಮಾನ್‌ಸರೋವರ್ ಮಗುವನ್ನು ಅಲ್ಲೆಲ್ಲ ಕೊಂಡೊಯ್ದರೂ ಅದು ನಿರಂತರವಾಗಿತ್ತು. “ಅದೃಷ್ಟವಶಾತ್, ಗಡಿಯಲ್ಲಿ ನನ್ನನ್ನು ಯಾರೂ ತಡೆಯಲಿಲ್ಲ,” ಎಂದರು ಅವರು. “ಎರಡು ವಾರಗಳಲ್ಲಿ ನನ್ನ ಮಗ ಚೇತರಿಸಿಕೊಂಡ, ಕಣ್ಣಿನಲ್ಲಿ ಕೀವು ಬರುವುದು ನಿಂತ ಮೇಲೂ ಅವನನ್ನು ಮರಳಿ ಆಸ್ಪತ್ರೆಗೆ ಕರೆದೊಯ್ದೆ. ನನ್ನ ಮಗನ ತಲೆಯ ಮೇಲೆ ಕೈ ಇಟ್ಟ ವೈದ್ಯರು, ಇನ್ನು ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ಚಿಕಿತ್ಸೆಗೆ ಎಲ್ಲ ಸೇರಿ ವೆಚ್ಚ ತಗಲಿದ್ದು 500 ರೂ,”
ಖೇರಿಯ ಗಡಿಯಲ್ಲಿರುವ ಹಳ್ಳಿಗಳ ಜನರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಪರಿಶಿಷ್ಟ ಪಂಗಡದ ಸಮುದಯವಾದ ಥರು ಸಮುದಾಯಕ್ಕೆ ಸೇರಿದವರು. ಇಲ್ಲಿಯ ಜನರಿಗೆ ಸೂಕ್ತವಾದ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯವೆಂದರೆ ಗೌರವಯುತ ಚಿಕಿತ್ಸೆಯಷ್ಟೇ ಮುಖ್ಯವಾಗಿತ್ತು.
ಬಂಕಾಟಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಕಜಾರಿಯಾದ 20ವರ್ಷದ ಶಿಮಾಲಿ ರಾಣಾ ಆಸ್ಪತ್ರೆಯಲ್ಲಿ ಅವಮಾನಕ್ಕೊಳಗಾದ ಅನುಭವ ಹೊಂದಿರುತ್ತಾರೆ. “ನೀವು ಅಸಹಾಯಕಾಗುತ್ತೀರಿ, ನೀವು ಮಾತನಾಡಲೂ ಸಾಧ್ಯವಿಲ್ಲ, ಏಕೆಂದರೆ ಯಾವ ವ್ಯಕ್ತಿ ನಿಮ್ಮನ್ನು ಅವಮಾನಿಸಿರುತ್ತಾರೋ ಅವರೇ ನಿಮಗೆ ಚಿಕಿತ್ಸೆ ನೀಡುತ್ತಾರೆ,” ಎನ್ನುತ್ತ, ಪಾಲಿಯಾದ ಆಸ್ಪತ್ರೆಯೊಂದರಲ್ಲಿ ತಮಗಾದ ಅನುಭವವನ್ನು ವಿವರಿಸಿದರು.
2021 ನವೆಂಬರ್‌ನಲ್ಲಿ ಹುಟ್ಟಿದ ಅವರ ಗಂಡು ಮಗುವಿಗೆ ಹುಟ್ಟುವಾಗಲೇ ಶ್ವಾಸಕೋಶದ ಸಮಸ್ಯೆ ಇದ್ದಿತ್ತು. “ಅವನಿಗೆ ಸರಿಯಾಗಿ ಉಸಿರಾಡಲು ಆಗುತ್ತಿರಲಿಲ್ಲ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದವರು ಪಾಲಿಯಾಕ್ಕೆ ಕರೆದೊಯ್ಯಲು ಸೂಚಿಸಿದರು, ಏಕೆಂದರೆ ಆ ಬಗ್ಗೆ ಅವರಿಗೆ ಏನು ಮಾಡಬೇಕೆಂಬುದೇ ಗೊತ್ತಿಲ್ಲ,” ಎಂದರು. “ನಾವು ಖಾಸಗಿ ಆಸ್ಪತ್ರೆಗೆ ಹೋದೆವು ಮತ್ತು ಭಯಾನಕ ಅನುಭವ ಪಡೆದೆವು,”
ಹುಡುಗ ಚೇತರಿಸಿಕೊಂಡ ನಂತರವೂ ವೈದ್ಯರುಗಳಿಗೆ ಬಿಡುಗಡೆ ಮಾಡಲು ಇಷ್ಟವಿರಲಿಲ್ಲ, ಎನ್ನುತ್ತಾರೆ ಅವರ ಪತಿ 20ವರ್ಷ ಪ್ರಾಯದ ರಾಮ್‌ಕುಮಾರ್. “ಅವರು ಹೆಚ್ಚು ಹಣವನ್ನು ಕೀಳಲು ಬಯಸುತ್ತಿದ್ದರು,” ಎಂದರು, “ನಾವು ಚಿಕ್ಕ ಭೂಮಿ [ಒಂದು ಎಕರೆಗಿಂತ ಕಡಿಮೆ] ಹೊಂದಿರುವ ಬಡ ರೈತರು. ಇದಕ್ಕಿಂತ ಜಾಸ್ತಿ ಕೊಡಲು ಅಸಾಧ್ಯವೆಂದು ಅವರಿಗೆ ತಿಳಿಸಿದೆವು. ಅಲ್ಲಿರುವ ವೈದ್ಯರು ನಮ್ಮನ್ನು ನಿಂದಿಸಿ, “ನೀವು ಬಡವರಾಗಿರುವುದಕ್ಕೆ ನನ್ನ ತಪ್ಪಲ್ಲ,” ಎಂದರು. ಇದಕ್ಕೂ ಮೊದಲು ಮುಂಗಡವಾಗಿ ಹಣ ನೀಡದಿರುವುದಕ್ಕೂ ಅವಮಾನಿಸಿದ್ದರು,”
ಅವರು ಎದುರಿಸಿದ ತಾರತಮ್ಯತೆ ಅಸಹಜವಾದುದಲ್ಲ. ರೋಗಿಗಳ ಹಕ್ಕಿನ ಕುರಿತು ಆಕ್ಸ್‌ಫಾಮ್ ಇಂಡಿಯಾ 2021ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯೊಂದರ ಪ್ರಕಾರ, ಉತ್ತರ ಪ್ರದೇಶದಲ್ಲಿ ಸ್ಪಂದಿಸಿದ 472 ಜನರಲ್ಲಿ 52.44 ಪ್ರತಿಶತ ಜನರು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ತಾರತಮ್ಯ ಅನುಭವಿಸಿದ್ದಾರೆ. 14.34 ಪ್ರತಿಶತ ಜನರು ಧರ್ಮದ ಆಧಾರದ ಮೇಲೆ ತಾರತಮ್ಯ ಅನುಭವಿಸಿದ್ದಾರೆ, 18.68 ಪ್ರತಿಶತ ಜನರು ಜಾತಿಯ ಆಧಾರದ ಮೇಲೆ ತಾರತಮ್ಯಕ್ಕೆ ಈಡಾಗಿದ್ದಾರೆ.
ಶಿಮಾಲಿ ಮತ್ತು ರಾಮ್‌ಕುಮಾರ್ ಮಗುವನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸುವವರೆಗೂ, ಒಂದು ವಾರದ ಪರ್ಯಂತ ಈ ಅಹಿತಕರ ಅನುಭವವನ್ನು ಕಂಡರು, ಅಷ್ಟರಲ್ಲಿ ರಾಮ್‌ಕುಮಾರ್ ತಮ್ಮ ಸಂಬಂಧಿಕರಿಂದ 50,000 ರೂ. ತಂಡು ವೈದ್ಯಕೀಯ ಶುಲ್ಕವನ್ನು ಭರಿಸಿದರು. “ನಮ್ಮ ಹುಡುಗನನ್ನು ಬಿಡುಗಡೆ ಮಾಡುವಾಗಲೂ ಕೂಡ ವೈದ್ಯರು, “ಆತನಿಗೆ ಏನಾದರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ,” ಎಂದರು.
ಮಾನ್‌ಸರೋವರ್ ಅವರು ನೇಪಾಳದಲ್ಲಿ ಅನುಭವಿಸಿದ್ದು ಇದಕ್ಕೆ ವಿರುದ್ಧವಾಗಿತ್ತು. ಅವರು ಗೀತಾ ಆಸ್ಪತ್ರೆಯಿಂದ ಸಮಾಧಾನಗೊಂಡು, ಪುನರ್‌ಭರವಸೆಯೊಂದಿಗೆ ಹಿಂದಿರುಗಿದರು. “ವೈದ್ಯರುಗಳು ಗೌರವನೀಡುತ್ತಿದ್ದರು,” ಎಂದರು. “ನಿಮಗೆ ನೇಪಾಳಿ ಭಾಷೆ ಅರ್ಥವಾಗದಿದ್ದರೆ, ಅವರು ಹಿಂದಿ ಭಾಷೆಯ ಬಗ್ಗೆ ನಿರರ್ಗಳವಲ್ಲದಿದ್ದರೂ ನಿಮಗೆ ಅರ್ಥವಾಗುವ ರೀತಿಯಲ್ಲಿ ಹಿಂದಿಯಲ್ಲಿ ಅರ್ಥೈಸಲು ಯತ್ನಿಸುತ್ತಿದ್ದರು. ಅವರು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಭಾರತದಲ್ಲಿ ಬಡವರನ್ನು ತಿರಸ್ಕಾರದಿಂದ ನೋಡಿಕೊಳ್ಳುತ್ತಾರೆ. ಇದು ದೇಶದಲ್ಲಿನ ದೊಡ್ಡ ಸಮಸ್ಯೆಯಾಗಿದೆ,”
ಪಾರ್ಥ್ ಎಂ.ಎನ್. ಅವರು ಠಾಕೂರ್ ಫ್ಯಾಮಿಲಿ ಫೌಂಡೇಷನ್ ನೀಡುವ ಅನುದಾನದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯದ ಬಗ್ಗೆ ವರದಿ ಮಾಡುತ್ತಾರೆ. ಈ ವರದಿಯಲ್ಲಿರುವ ವಿಷಯದ ಮೇಲೆ ಠಾಕೂರ್ ಫ್ಯಾಮಿಲಿ ಫೌಂಡೇಷನ್ ಯಾವುದೇ ರೀತಿಯ ಸಂಪಾದಕೀಯ ನಿಯಂತ್ರಣವನ್ನು ಹೊಂದಿರುವುದಿಲ್ಲ.
ಅನುವಾದ: ಸೋಮಶೇಖರ ಪಡುಕರೆ