ನಮ್ಮ ತಂಡ ಎರಡು ಗುಂಪುಗಳಲ್ಲಿ, ರೈಲಿನ ಮೇಲೆ ದಾಳಿ ನಡೆಸಿತು. ಒಂದು ತಂಡದ ನಾಯಕತ್ವ ಜಿ. ಡಿ. ಬಾಪು ಲಾಡ್ ವಹಿಸಿದ್ದರೆ, ಇನ್ನೊಂದರ ನಾಯಕತ್ವವನ್ನು ನಾನೇ ವಹಿಸಿದ್ದೆ. ಹಳಿಯ ಮೇಲೆ ಕಲ್ಲುಗಳನ್ನು ರಾಶಿ ಹಾಕಿ ನಾವು ರೈಲನ್ನು ತಡೆದದ್ದು - ಇಲ್ಲೇ ನಾವೀಗ ನಿಂತಿರುವ ಜಾಗದಲ್ಲೇ. ಬಳಿಕ ರೈಲಿನ ಹಿಂದಿನ ಬದಿಯ ಹಳಿಯ ಮೇಲೂ ಕಲ್ಲುಗಳನ್ನು ರಾಶಿ ಹಾಕಿ, ರೈಲು ಹಿಂದೆ ಹೋಗದಂತೆ ನೋಡಿಕೊಂಡೆವು. ನಮ್ಮ ಬಳಿ ಬಂದೂಕುಗಳು ಇರಲಿಲ್ಲ, ಗುದ್ದಲಿಗಳು ಬಿಟ್ಟರೆ ಬೇರೆ ಆಯುಧಗಳೇ ಇರಲಿಲ್ಲ. ಲಾಠಿಗಳನ್ನು ಹೊರತುಪಡಿಸಿದರೆ ಒಂದೆರಡು 'ಕಚ್ಚಾ ಬಾಂಬುಗಳು' ಇದ್ದವು. ರೈಲಿನ ಮುಖ್ಯ ಗಾರ್ಡ್ ಬಳಿ ಬಂದೂಕು ಇತ್ತು, ಮುಗಿಬಿದ್ದು ಆತನನ್ನು ಮಿಸುಕಾಡದಂತೆ ಮಾಡಿದಾಗ, ಆತ ಸುಲಭವಾಗಿ ಶರಣಾದ. ಸಾಗಿಸುತ್ತಿದ್ದ ಸಂಬಳದ ಕಾಸನ್ನು ಕಸಿದು, ನಾನು ಚಿಲಕ ಹಾಕಿದೆ.

ಇದು ನಡೆದದ್ದು 73 ವರ್ಷಗಳ ಹಿಂದೆ. ಆದರೆ 'ಕ್ಯಾಪ್ಟನ್ ಬಾಪು' ಲಾಡ್ ಅದನ್ನು ನಿನ್ನೆ-ಮೊನ್ನೆ ನಡೆದಷ್ಟು ಸಚಿತ್ರವಾಗಿ ವಿವರಿಸುತ್ತಾರೆ. ಈಗ 94ರ ಹರೆಯದ ರಾಮಚಂದ್ರ ಶ್ರೀಪತಿ ಲಾಡ್ ಅವರನ್ನು ಜನ 'ಬಾಪು' (ಮರಾಠಿಯಲ್ಲಿ ದೊಡ್ಡಣ್ಣ ಎಂದರ್ಥ) ಎಂದೇ ಕರೆಯುತ್ತಾರೆ. ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರಿಗಳಿಗೆ ಸೇರಿದ ಸಂಬಳವನ್ನು ಹೊತ್ತು ಸಾಗಿಸುತ್ತಿದ್ದ ಪುಣೆ-ಮೀರಜ್ ರೈಲಿನ ಮೇಲೆ ಅವರ ತಂಡ ನಡೆಸಿದ ದಾಳಿಯನ್ನು ಬಾಪು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.

ಇತ್ತೀಚೆಗೆ ಅವರು ಇಷ್ಟೊಂದು ಸ್ಪಷ್ಟತೆಯಿಂದ ಮಾತನಾಡಿದ್ದನ್ನು ಕೇಳೇ ಇಲ್ಲ ಎಂದು ಪಿಸುಗುಡುತ್ತಾರೆ ಬಾಪು ಅವರ ಅನುಯಾಯಿ ಬಾಳಾ ಸಾಹೇಬ್ ಗಣಪತಿ ಶಿಂಧೆ. ಎಲ್ಲರೂ ಕ್ಯಾಪ್ಟನಣ್ಣ ಎಂದು ಕರೆಯುವ ಈವತ್ತಿನ ಈ ವೃದ್ಧ ಸೇನಾನಿ, ಅಂದು 1943ರ ಜೂನ್ 7ರಂದು, ತನ್ನ ಸುಂಟರಗಾಳಿ ಸೇನೆಯ (ತೂಫಾನ್ ಸೇನಾ) ನಾಯಕತ್ವ ವಹಿಸಿ ನಡೆಸಿದ ಸಾಹಸಗಳು, ಅವರೀಗ ಮತ್ತೆ ಆ ರೈಲು ಹಳಿಯ ಅದೇ ಜಾಗದಲ್ಲಿ ನಿಂತಾಗ ಮತ್ತೆ ಜೀವ ತಳೆಯತೊಡಗಿವೆ.

ಅಂದಿನ ಹೋರಾಟದ ಬಳಿಕ ಸತಾರಾದ ಶೇನೋಲಿ ಗ್ರಾಮದಲ್ಲಿರುವ ಆ ರೈಲುಹಳಿಯ ಜಾಗಕ್ಕೆ, ಬಾಪು ಬಂದಿರುವುದು ಇದೇ ಮೊದಲು. ಕೆಲವು ಕ್ಷಣಗಳು, ಅವರು ಅವರದೇ ಯೋಚನಾಲೋಕದಲ್ಲಿ ಮುಳುಗಿದ್ದರು.  ಬಳಿಕ ನೆನಪುಗಳ ಮೆರವಣಿಗೆ ಆರಂಭ. ಅವರಿಗೆ ತನ್ನ ಆ ದಾಳಿಯ ಕಾಮ್ರೇಡ್ ಗಳೆಲ್ಲರ ಹೆಸರೂ ನೆನಪಿದೆ. ನಾವು ಕಸಿದುಕೊಂಡ ದುಡ್ಡನ್ನು ನಾವೇನೂ ನಮ್ಮ ಕಿಸೆಗಳಿಗೆ ಇಳಿಸಲಿಲ್ಲ, ಬದಲಾಗಿ ಪ್ರತಿ ಸರ್ಕಾರ [ಅಥವಾ ಸತಾರದ ಪ್ರಾಂತೀಯ ಸರಕಾರ]ಕ್ಕೆ ಕೊಟ್ಟೆವು. ಆ ದುಡ್ಡು ಆವಶ್ಯಕತೆ ಇರುವವರಿಗೆ ಮತ್ತು ಬಡವರಿಗೆ ಬಳಕೆ ಆಯಿತು ಎನ್ನುವುದನ್ನು ಅವರು ಸ್ಪಷ್ಟಪಡಿಸಿದರು.




ನಾವು ರೈಲನ್ನು 'ಲೂಟಿ' ಮಾಡಿದೆವೆಂಬುದು ನ್ಯಾಯವಾದ ಮಾತಲ್ಲ ಎಂದು ಬಿರುದನಿಯಲ್ಲಿ ಹೇಳಿದ ಬಾಪು, ಅದು ನಮ್ಮಿಂದ [ಬ್ರಿಟಿಷರು ಭಾರತೀಯ ನಾಗರಿಕರಿಂದ] ಕದ್ದ ಹಣವಾಗಿತ್ತು, ನಾವದನ್ನು ವಾಪಾಸ್ ತಂದೆವು ಎಂದರು. ಅವರ ಈ ಮಾತು 2010ರಲ್ಲಿ, ತಾವು ತೀರಿಕೊಳ್ಳುವ ಮೊದಲು ಜಿ. ಡಿ. ಬಾಪು ಲಾಡ್ ಅವರು ಹೇಳಿದ್ದ ಮಾತುಗಳದ್ದೇ ಪ್ರತಿಧ್ವನಿಯಾಗಿತ್ತು.

ತೂಫಾನಿ ಸೇನಾ (ಸುಂಟರಗಾಳಿ ಸೇನೆ) ಪ್ರತಿ ಸರ್ಕಾರದ ಸಶಸ್ತ್ರ ವಿಭಾಗವಾಗಿತ್ತು - ಇದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಒಂದು ಕೌತುಕಮಯ ಅಧ್ಯಾಯ. 1942ರಲ್ಲಿ 'ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ' ಹೊರಾಟದ ಕುಡಿಯಾಗಿ ಹುಟ್ಟಿ, ಸಶಸ್ತ್ರ ಹೋರಾಟದ ಕವಲಾಗಿ ಬೆಳೆದ ಈ ಕ್ರಾಂತಿಕಾರಿಗಳ ಗುಂಪು, ಸತಾರಾದಲ್ಲಿ ಸಮಾನಾಂತರ ಸರಕಾರವನ್ನೇ ಘೋಷಿಸಿತು. ಈವತ್ತಿನ ಸಾಂಗ್ಲಿ ಜಿಲ್ಲೆ ಸೇರಿದಂತೆ ಸವಿಸ್ತಾರವಾದ ಜಿಲ್ಲೆ ಆಗಿತ್ತು ಅಂದಿನ ಸತಾರಾ. ಅಲ್ಲಿನ ಆರುನೂರೂ ಚಿಲ್ಲರೆ ಗ್ರಾಮಗಳಲ್ಲಿ 150ಕ್ಕೂ ಮಿಕ್ಕಿ ಗ್ರಾಮಗಳು ಈ ಸರಕಾರದ ಆಡಳಿತವನ್ನು ಒಪ್ಪಿಕೊಂಡಿದ್ದವು; ಹಾಗಾಗಿ ಅಲ್ಲೆಲ್ಲ ಬ್ರಿಟಿಷ್ ಆಡಳಿತ ಅಸ್ತಿತ್ವದಲ್ಲೆ ಇರಲಿಲ್ಲ ಎಂಬುದು ಬಾಪು ಅವರ ಸ್ಪಷ್ಟ ಅಭಿಪ್ರಾಯ. ಅಂಡರ್ ಗ್ರೌಂಡ್ ಸರ್ಕಾರ ಅಂತ ಯಾಕೆ ಹೇಳ್ತೀರಿ ?  ನಾನು ಆ ಶಬ್ದವನ್ನು ಬಳಸಿದಾಗ ಬಾಪು ಸಿಡುಕಿದರು. ಅಲ್ಲಿದ್ದದ್ದು ನಮ್ಮದೇ ಸರ್ಕಾರ. ಬ್ರಿಟಿಷರಿಗೆ ಅಲ್ಲಿಗೆ ಪ್ರವೇಶವೇ ಇರಲಿಲ್ಲ. ಪೋಲೀಸರಿಗೂ ತೂಫಾನ್ ಸೇನೆಯ ಭಯ ಇತ್ತು



02-PS-‘Captain Elder Brother’  and the whirlwind army.jpg

1942ರಲ್ಲಿ ಕ್ಯಾಪ್ಟನಣ್ಣ, ಈಗ 74 ವರ್ಷಗಳ (ಬಲಗಡೆಯ ಚಿತ್ರ) ಬಳಿಕ.


ಅವರು ಹೇಳುವುದರಲ್ಲಿ ನಿಜವಿತ್ತು. ದಂತಕಥೆಯೇ ಆಗಿರುವ ಕ್ರಾಂತಿಸಿನ್ಹಾ ನಾನಾ ಪಾಟೀಲ್ ಅವರ ನೇತೃತ್ವದ ಪ್ರತಿ ಸರ್ಕಾರ ತನ್ನ ನಿಯಂತ್ರಣದಲ್ಲಿರುವ ಹಳ್ಳಿಗಳ ಮೇಲೆ ಪೂರ್ಣ ನಿಯಂತ್ರಣ ಹೊಂದಿ, ಸರ್ಕಾರದ ಕೆಲಸಗಳನ್ನೂ ನಿರ್ವಹಿಸುತ್ತಿತ್ತು. ಆಹಾರ ಧಾನ್ಯಗಳ ಸರಬರಾಜು, ವಿತರಣೆ, ಸಮರ್ಪಕವಾದ ಮಾರುಕಟ್ಟೆ ವ್ಯವಸ್ಥೆಗಳು ಮಾತ್ರವಲ್ಲದೆ ನ್ಯಾಯದಾನ ವ್ಯವಸ್ಥೆಯೂ ಚಾಲ್ತಿ ಇದ್ದವು. ಬ್ರಿಟಿಷ್ ಆಡಳಿತದ ಪರವಾಗಿದ್ದ ಲೇವಾದೇವಿಗಾರರು, ಚಕ್ರಬಡ್ಡಿಯವರು ಮತ್ತು ಭೂ ಮಾಲಕರಿಗೆ ದಂಡಗಂದಾಯ ಹಾಕಲಾಗುತ್ತಿತ್ತು. ಕಾನೂನು ಮತ್ತು ಸುವ್ಯವಸ್ಥೆ ನಮ್ಮದೇ ನಿಯಂತ್ರಣದಲ್ಲಿತ್ತು. ಜನ ನಮ್ಮ ಪರ ಇದ್ದರು ಅನ್ನುತ್ತಾರೆ ಕ್ಯಾಪ್ಟನಣ್ಣ. ತೂಫಾನ್ ಸೇನೆಯು ಬ್ರಿಟಿಷ್ ಶಸ್ತ್ರಗಾರಗಳು, ರೈಲುಗಳು, ಖಜಾನೆ ಮತ್ತು ಅಂಚೆ ಕಚೇರಿಗಳ ಮೇಲೆ ಧೈರ್ಯದಿಂದ ಹೊಂಚುದಾಳಿ ನಡೆಸುತ್ತಿತ್ತು ಮತ್ತು ತೊಂದರೆಯಲ್ಲಿದ್ದ ರೈತರು ಮತ್ತು ಕಾರ್ಮಿಕರಿಗೆ ಪರಿಹಾರಗಳನ್ನು ಒದಗಿಸುತ್ತಿತ್ತು.

ಕ್ಯಾಪ್ಟನಣ್ಣ ಹಲವು ಬಾರಿ ಜೈಲಿಗೂ ಹೋಗಿದ್ದರು. ಅಲ್ಲಿ ಜೈಲಿನ ಕಾವಲುಗಾರರೂ ಅವರನ್ನು ಗೌರವದಿಂದಲೇ ಕಾಣುತ್ತಿದ್ದರು. ಮೂರನೇ ಬಾರಿ ನನ್ನನ್ನು ಔಂಧ್ ನ ಜೈಲಿಗೆ ಕಳುಹಿಸಲಾಗಿತ್ತು. ಅದಂತೂ ರಾಜನ ಅತಿಥಿಯಾಗಿ ಅರಮನೆಯಲ್ಲಿ ಉಳಿದುಕೊಂಡ ಅನುಭವ ಎಂದು ಬೀಗುತ್ತಾರೆ ಕ್ಯಾಪ್ಟನಣ್ಣ. 1943-1946ರ ನಡುವೆ ಪ್ರತಿ ಸರಕಾರ ಮತ್ತು ಸುಂಟರಗಾಳಿ ಸೇನೆಗಳು ಸತಾರಾದಲ್ಲಿ ತಮ್ಮ ಹಿಡಿತ ಹೊಂದಿದ್ದವು. ಭಾರತದ ಸ್ವಾತಂತ್ರ್ಯ ಖಚಿತವಾದ ಬಳಿಕ, ಸೇನೆಯನ್ನು ವಿಸರ್ಜಿಸಲಾಯಿತು.

ನಾನು ಮತ್ತೊಮ್ಮೆ ಅವರನ್ನು ಕೆಣಕಿದ್ದೆ. ನಾನು ತೂಫಾನ್ ಸೇನಾ ಸೇರಿದ್ದು ಯಾವಾಗ ಅಂದರೆ ಏನರ್ಥ ?  ಅದನ್ನು ಹುಟ್ಟುಹಾಕಿದ್ದೇ ನಾನು ಗರ್ಜಿಸಿತು ಸಿಂಹ. ನಾನಾ ಪಾಟೀಲ್ ಸರ್ಕಾರದ ಮುಖ್ಯಸ್ಥರಾಗಿದ್ದರು. ಜಿ. ಡಿ. ಬಾಪು ಲಾಡ್, ನಾನಾರ ಬಲಗೈ ಬಂಟನಾಗಿ, ಸೇನೆಯ 'ಫೀಲ್ಡ್ ಮಾರ್ಷಲ್' ಆಗಿದ್ದರು. ಕ್ಯಾಪ್ಟನಣ್ಣ ಈ ಸೇನೆಯ ಕಾರ್ಯಾಚರಣೆ ಪ್ರಮುಖರಾಗಿದ್ದರು. ತಮ್ಮ ಅನುಯಾಯಿಗಳ ಜೊತೆಗೂಡಿ ಅವರು ಬ್ರಿಟಿಷ್ ಸಾಮ್ರಾಜ್ಯಕ್ಕೆ ಮುಖಮರೆಸಿಕೊಳ್ಳುವಂತಹ ಏಟುಕೊಟ್ಟಿದ್ದರು. ಆ ಹಂತದಲ್ಲಿ, ಬಂಗಾಳ, ಬಿಹಾರ, ಉತ್ತರಪ್ರದೇಶ ಮತ್ತು ಓಡಿಷಾಗಳಲ್ಲಿ ಕುದಿಯುತ್ತಿದ್ದ ಅಸಹನೆಯನ್ನು, ಸಂಘರ್ಷವನ್ನು ನಿಭಾಯಿಸುವುದು ಬ್ರಿಟಿಷ್ ಸರ್ಕಾರದ ಗಂಟಲಿಗೆ ಬಿಸಿತುಪ್ಪವಾಗಿತ್ತು.


03-DSC00407(Crop)-PS-‘Captain Elder Brother’  and the whirlwind army.jpg

1942-43ರ ಸುಮಾರಿಗೆ ಕುಂಡಾಲ್ ಪ್ರದೇಶದಲ್ಲಿ ತೆಗೆಯಲಾಗಿದ್ದ ತೂಫಾನ್ ಸೇನೆಯ ಚಿತ್ರ


ಕ್ಯಾಪ್ಟನಣ್ಣನ ಮನೆಯ ಚಾವಡಿಯಲ್ಲಿ ಆ ದಿನಗಳ ನೆನಪುಗಳು, ಸ್ಮರಣಿಕೆಗಳು ಭರ್ತಿ ತುಂಬಿದ್ದವು. ಆದರೆ ಸರಳವಾಗಿದ್ದ ಅವರ ಕೋಣೆಯಲ್ಲಿ ಅವರ ಕೆಲವು ಆವಶ್ಯಕ ಸೊತ್ತುಗಳು ಮಾತ್ರ ಇದ್ದವು. ಕ್ಯಾಪ್ಟನಣ್ಣನಿಗಿಂತ ಹತ್ತು ವರ್ಷ ಕಡಿಮೆ ಪ್ರಾಯದ ಅವರ ಪತ್ನಿ ಕಲ್ಪನಾ, ತನ್ನ ದಂತಕತೆ ಪತಿಯ ಬಗ್ಗೆ ಖಡಕ್ಕಾಗಿ ಹೀಗೆನ್ನುತ್ತಾರೆ:  ಅವರಿಗೆ ಅವರ ಕುಟುಂಬದ ಆಸ್ತಿ-ಮನೆ ಎಲ್ಲಿದೆ, ಎಷ್ಟಿದೆ ಎಂಬುದು ಈವತ್ತಿನ ತನಕ ಗೊತ್ತಿರಲಿಕ್ಕಿಲ್ಲ. ನಾನು ಏಕಾಂಗಿ ಹೆಣ್ಣುಹೆಂಗಸು, ಮಕ್ಕಳನ್ನು ಬೆಳೆಸಿದೆ, ಮನೆವಾರ್ತೆ, ಕೃಷಿ ನೋಡಿಕೊಂಡೆ. ಎಲ್ಲವನ್ನೂ ನಾನೇ ನಿಭಾಯಿಸಿದೆ - ಐದು ಮಕ್ಕಳು, 13 ಮೊಮ್ಮಕ್ಕಳು ಮತ್ತು 11 ಮರಿಮಕ್ಕಳ ಕೂಡುಕುಟುಂಬ ನಮ್ಮದು. ಅವರು ತಾಸಗಾಂವ್, ಔಂಧ್ ಮತ್ತು ಸ್ವಲ್ಪ ಕಾಲ ಯೆರವಾಡದಲ್ಲೂ ಜೈಲಿನಲ್ಲಿದ್ದರು. ಬಿಡುಗಡೆಯಾದರೆ, ಹಳ್ಳಿಗಳಲ್ಲಿ ಕಳೆದುಹೋಗಿ ತಿಂಗಳುಗಟ್ಟಲೆ ಪತ್ತೆ ಇರುತ್ತಿರಲಿಲ್ಲ. ಎಲ್ಲವನ್ನೂ ನಾನೇ ನಿಭಾಯಿಸುತ್ತಾ ಬಂದಿದ್ದು, ಈವತ್ತಿಗೂ ಆ ಜವಾಬ್ದಾರಿಗಳನ್ನೆಲ್ಲ ನಾನೇ ಮಾಡುತ್ತಿದ್ದೇನೆ.


04-PS-‘Captain Elder Brother’  and the whirlwind army.jpg

ಕುಂಡಾಲ್ ನ ಈ ಸ್ಮಾರಕ ಕಂಬದಲ್ಲಿ ಸತಾರಾ ಹಾಗೂ ಸಾಂಗ್ಲಿಯ ವಿವಿಧ ಭಾಗಗಳ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ದಾಖಲಿಸಲಾಗಿದ್ದು, ಎಡಭಾಗದ ಕಾಲಂನಲ್ಲಿ ಆರನೇ ಹೆಸರು ಕ್ಯಾಪ್ಟನಣ್ಣಂದು. ಕಲ್ಪನಾ ಲಾಡ್, ಕ್ಯಾಪ್ಟನಣ್ಣನ ಮನೆಯಲ್ಲಿ


ಪ್ರತಿ ಸರ್ಕಾರ ಮತ್ತು ತೂಫಾನ್ ಸೇನೆಗಳ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿ ಕೆಲವು ಪ್ರಮುಖ ನಾಯಕರು ಬೆಳೆದು ನಿಲ್ಲುವಂತಾಯಿತು. ನಾನಾ ಪಾಟೀಲ್, ನಾಗನಾಥ್ ನಾಯಕ್ವಾಡಿ, ಜಿ. ಡಿ. ಬಾಪು ಲಾಡ್, ಕ್ಯಾಪ್ಟನ್ ಬಾವು ಮತ್ತಿತರ ಹಲವರು. ಸ್ವಾತಂತ್ರ್ಯದ ಬಳಿಕ ಅವರಲ್ಲಿ ಹೆಚ್ಚಿನವರಿಗೆ, ಸಿಗಬೇಕಾಗಿದ್ದ ಆದ್ಯತೆ ಸಿಗಲೇಇಲ್ಲ. ಸರಕಾರ ಮತ್ತು ಸೇನೆಯ ಒಳಗೆ ಹಲವು ರಾಜಕೀಯ ಒಳಸುಳಿಗಳಿದ್ದವು. ಅವರಲ್ಲಿ ಹೆಚ್ಚಿನವರು ಅಂದಿನ ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರೊಳಗೆ ನಾನಾ ಪಾಟೀಲ್ ಮುಂದೆ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷರಾದರು ಮತ್ತು 1957ರಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸತಾರಾ ಕ್ಷೇತ್ರದಿಂದ ಸಂಸತ್ತಿಗೂ ಚುನಾಯಿತರಾದರು. ಉಳಿದವರಲ್ಲಿ ಕ್ಯಾಪ್ಟನಣ್ಣ ಮತ್ತು ಬಾಪು ಲಾಡ್ ರೈತರು ಮತ್ತು ಕಾರ್ಮಿಕರ ಪಕ್ಷ (ಕಘಕ) ಸೇರಿಕೊಂಡರೆ, ಮಾಧವರಾವ್ ಮಾನೆ ಕಾಂಗ್ರೆಸ್ ಸೇರಿಕೊಂಡರು. ಇಂದು ಬದುಕಿರುವವರಲ್ಲಿ, ಅವರ ಪಕ್ಷನಿಷ್ಟೆ ಯಾವುದೇ ಇದ್ದರೂ, ಒಂದು ವಿಚಾರದಲ್ಲಿ ಸಹಮತ ಇದೆ. ಅದೇನೆಂದರೆ ಆಗ ಅವರೆಲ್ಲರಿಗೂ ಸ್ಫೂರ್ತಿಯಾಗಿದ್ದದ್ದು, ಆವತ್ತಿನ ಸೋವಿಯತ್ ಒಕ್ಕೂಟ; ಮತ್ತು ಅದು ಹಿಟ್ಲರ್ ವಿರುದ್ಧ ತೋರುತ್ತಿದ್ದ ಪ್ರತಿರೋಧ.

94ರ ಹರೆಯದ ಬಾಪು ಈಗ ಸುಸ್ತಾಗಿದ್ದಾರೆ, ಆದರೂ ಅವರ ನೆನಪು ಸುಸ್ತಾಗಿಲ್ಲ. ನಾವು ಜನ ಸಾಮಾನ್ಯರಿಗೆ ಸ್ವಾತಂತ್ರ್ಯ ತಂದುಕೊಡುವ ಕನಸು ಕಂಡೆವು. ಅದೊಂದು ಸುಂದರ ಕನಸು. ನಮಗೆ ಸ್ವಾತಂತ್ರ್ಯ ಸಿಕ್ಕಿತು ಎನ್ನುವ ಹೆಮ್ಮೆಯ ಜೊತೆಗೇ ಆ ಕನಸು ಯಾವತ್ತೂ ಸಾಕಾರಗೊಳ್ಳಲೇಇಲ್ಲ ಅನ್ನಿಸುತ್ತದೆ..... ಈವತ್ತು ದುಡ್ಡಿದ್ದವರದ್ದೇ ಅಧಿಕಾರ. ನಮ್ಮ ಸ್ವಾತಂತ್ರ್ಯ ಅಲ್ಲಿಗೆ ಬಂದು ತಲುಪಿದೆೆ ಎಂಬ ಮಾತೂ ಅವರ ಬಾಯಿಯಲ್ಲಿ ಕೇಳಿತು.

ಸುಂಟರಗಾಳಿ ಸೇನೆ, ಕನಿಷ್ಟ ಸ್ಫೂರ್ತಿಯಾಗಿಯಾದರೂ, ಕ್ಯಾಪ್ಟನಣ್ಣನ ಬದುಕಿನಲ್ಲಿ ಇಂದು ಜೀವಂತವಿದೆ. ತೂಫಾನ್ ಸೇನೆ ಇನ್ನೂ ಜೀವಂತ ಇದೆ. ಜನ ಬಯಸಿದರೆ ಅದು ಮತ್ತೆ ಜನರಿಗಾಗಿ ಕೆಲಸ ಮಾಡುತ್ತದೆ.


05-DSC00320-HorizontalSepia-PS-Captain Elder Brother and the whirlwind army.jpg



پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

کے ذریعہ دیگر اسٹوریز راجا رام تلّور