ಲಾಕ್ಡೌನ್ಗೆ ಸಿದ್ಧರಾಗಲು ತನಗೇಕೆ ಯಾವುದೇ ಸಮಯವನ್ನು ನೀಡಲಿಲ್ಲವೆಂಬುದನ್ನು ಅರ್ಥೈಸಿಕೊಳ್ಳಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ವಸ್ತುಗಳ ಕೆಲಸಗಾರರಾದ ಮೊಹಮ್ಮದ್ ಖೊಕನ್, ಹೆಣಗಾಡುತ್ತಿದ್ದಾರೆ. ಇದು, ಇಷ್ಟು ದೀರ್ಘಾವಧಿಯ ನಿರ್ಬಂಧವೆಂಬ ಅರಿವಿದ್ದಲ್ಲಿ, ಊಟಕ್ಕಾಗಿ ಸ್ವಲ್ಪ ಹಣವನ್ನು ಉಳಿಸಬಹುದಿತ್ತು ಎನ್ನುತ್ತಾರೆ ಆತ.
ದಕ್ಷಿಣ ದೆಹಲಿಯ ಅಂಚಿನಲ್ಲಿರುವ ‘ನಗರʼ ಪ್ರದೇಶದ ಜಸೊಲ ಎಂಬ ಹಳ್ಳಿಯಲ್ಲಿನ ಮೊಹಮ್ಮದ್ ಅವರ ಮನೆ, ಬೆಂಗಳೂರಿನಿಂದ ಬಹಳ ದೂರವೇ ಹೌದು. ಉತ್ತರ ಬೆಂಗಳೂರಿನ ಅಮೃತಹಳ್ಳಿಯ ಆಸುಪಾಸಿನಲ್ಲಿ ಒಣ-ಕಸವನ್ನು ರಾಶಿ ಹಾಕುವಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಇವರು, ಅಲ್ಲಿಯೇ ವಾಸವಿದ್ದಾರೆ. “ನಮಗೆ ಮೊದಲೇ ಲಾಕ್ಡೌನ್ ಬಗ್ಗೆ ತಿಳಿದಿದ್ದಲ್ಲಿ, ನನ್ನ ಬಳಿ ಸ್ವಲ್ಪ ಹಣವನ್ನು ಇಟ್ಟುಕೊಂಡಿರುತ್ತಿದ್ದೆ. ನಮ್ಮ ಗುತ್ತಿಗೆದಾರನನ್ನು ಸಂಪರ್ಕಿಸಿ, ಒದಗಿರುವ ಕಷ್ಟವನ್ನು ಮನವರಿಕೆ ಮಾಡಿ, ಸ್ವಲ್ಪ ಹಣವನ್ನಾದರೂ ಕೇಳುತ್ತಿದ್ದೆ”ಎಂದರವರು.
ಈಗ ಯಾವುದೇ ಆದಾಯವಿಲ್ಲದ ಕಾರಣ, ಊಟವೂ ಇಲ್ಲದಂತಾಗಿದ್ದು, ಸ್ವಯಂ ಸೇವಾ ಸಂಸ್ಥೆಗಳು ಬಿಟ್ಟು ಹೋದ ಊಟದ ಪೊಟ್ಟಣದಿಂದ ದಿನಕ್ಕೊಮ್ಮೆ ಮಾತ್ರ ಊಟ ಮಾಡುತ್ತಿರುವ ಅವರು, “ಇದ್ದಕ್ಕಿದ್ದಂತೆಯೇ ಲಾಕ್ಡೌನ್ ಘೋಷಣೆಯಾದ ಕಾರಣ, ಎಲ್ಲರಿಗೂ ಇದು, ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ”ಎಂದು ಸಹ ತಿಳಿಸಿದರು.
ಲಾಕ್ಡೌನ್ ಕುರಿತ ಸೂಚನೆಯು ನಗರದಾದ್ಯಂತ ಅತ್ಯಂತ ಕಡಿಮೆ ಅವಧಿಯಲ್ಲಿ ಘೋಷಿಸಲ್ಪಟ್ಟಿತು. “ಇದಕ್ಕೆ ಸಿದ್ಧರಾಗಲು ನಮಗೆ ಸಮಯಾವಕಾಶದ ಅವಶ್ಯಕತೆಯಿತ್ತು. ಊಟದ ವ್ಯವಸ್ಥೆಯನ್ನಾದರೂ ನಾವು ಮಾಡಿಕೊಳ್ಳುತ್ತಿದ್ದೆವು. ಊಟವಿಲ್ಲದೆ, ಮನೆಯಲ್ಲಿ ಉಳಿಯುವುದಾದರೂ ಹೇಗೆ ಸಾಧ್ಯ?” ಎನ್ನುತ್ತಾರೆ ವಾಣಿಜ್ಯ ವರ್ಣಚಿತ್ರಕಾರರಾದ 40ರ ವಯಸ್ಸಿನ ಸುಂದರ್.
ದಕ್ಷಿಣ ದೆಹಲಿಯ ಅಂಚಿನಲ್ಲಿನ ‘ನಗರ’ಪ್ರದೇಶದ ಜಸೊಲ ಎಂಬ ಹಳ್ಳಿಯಲ್ಲಿರುವ ಮೊಹಮ್ಮದ್ ಅವರ ಮನೆ, ಬೆಂಗಳೂರಿನಿಂದ ಬಹಳ ದೂರವೇ ಹೌದು. ಉತ್ತರ ಬೆಂಗಳೂರಿನ ಅಮೃತಹಳ್ಳಿಯ ಆಸುಪಾಸಿನಲ್ಲಿ ಒಣ-ಕಸವನ್ನು ರಾಶಿ ಹಾಕುವಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಇವರು, ಅಲ್ಲಿಯೇ ವಾಸವಿದ್ದಾರೆ
ಸುಂದರ್, ಬನಶಂಕರಿ ಪ್ರದೇಶದ ನೆರೆಯಲ್ಲಿನ ಪದ್ಮನಾಭನಗರದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು. ಈ ಪ್ರದೇಶದಲ್ಲಿ ಸುಮಾರು ೧೦ ವರ್ಷಗಳಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, “ಕೆಲವರು ದಿನಕ್ಕೊಮ್ಮೆ ಮಾತ್ರವೇ ಊಟ ಮಾಡುತ್ತಿದ್ದು, ಇಂತಹ ಸಮಸ್ಯೆಯನ್ನು ಈ ಹಿಂದೆಂದೂ ಅನುಭವಿಸಿರಲಿಲ್ಲ”ಎಂಬುದಾಗಿ ಅಲವತ್ತುಕೊಂಡರು.
ಬನಶಂಕರಿಯ ಯಾರಬ್ ನಗರ ಕಾಲೋನಿಯಲ್ಲಿ, ಸುಂದರ್ ಅಂದಾಜಿನ ಪ್ರಕಾರ ಸುಮಾರು 300 ಕುಟುಂಬಗಳು, ಬಹುತೇಕ ಎಲ್ಲಾ ದಿನಗೂಲಿ ಕಾರ್ಮಿಕರು, ಆಹಾರ ಪಡೆಯಲು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ - ಪೊಲೀಸರು ತಮ್ಮನ್ನು ಹೊಡೆಯುತ್ತಾರೆಂದು ಅವರು ಹೆದರುತ್ತಾರೆ. ಆದರೆ ಅವರಿಗೆ ಹೆಚ್ಚಿನ ಆಯ್ಕೆಗಳಿಲ್ಲ ಎಂದು ಸುಂದರ್ ಹೇಳುತ್ತಾರೆ, ಅವರು ಈ ಪ್ರದೇಶದಲ್ಲಿ ಆಹಾರದ ಪೊಟ್ಟಣಗಳನ್ನು ತಲುಪಿಸುತ್ತಿರುವ ಸ್ವಯಂಸೇವಕ ಗುಂಪುಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. "ಆಹಾರವಿಲ್ಲದಿದ್ದಾಗ, ಅವರು ಏನು ಮಾಡುತ್ತಾರೆ? ಅವರು ಬೀದಿಗೆ ಬರುತ್ತಾರೆ" ಎಂದು ಅವರು ಹೇಳುತ್ತಾರೆ.
ಸುಂದರ್ ಅವರ ಪ್ರಕಾರ, ಯಾರಬ್ ನಗರದ ಕುಟುಂಬಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹುತೇಕವಾಗಿ ಅಸಾಧ್ಯ. “ನಾವು ಹೊರಗೆ ಬೀದಿಗೆ ಹೋಗದಿದ್ದಲ್ಲಿ, ನಮಗೆ ಸಹಾಯಮಾಡಲು ಯಾವಾಗ ಜನರು ಬರುತ್ತಾರೆ ಅಥವಾ ಊಟವನ್ನು ಕೊಡುತ್ತಾರೆಂಬುದನ್ನು, ತಿಳಿದುಕೊಳ್ಳುವುದಾದರೂ ಹೇಗೆ? ಸಾಮಾಜಿಕ ಅಂತರದ ನಿಟ್ಟಿನಲ್ಲಿ, ಇದು ಕಷ್ಟಸಾಧ್ಯ. ಊಟವನ್ನು ಪಡೆಯಲು ನೀವು ಅಲ್ಲಿರುವುದು ಅವಶ್ಯ. ಇಲ್ಲದಿದ್ದಲ್ಲಿ, ನಾವು ಈ ಸಹಾಯವನ್ನು ಕಳೆದುಕೊಂಡೆವೆಂದು ಜನರು ಚಿಂತೆಗೀಡಾಗುತ್ತಾರೆ.”
ಲಾಕ್ಡೌನ್ ಬಗ್ಗೆ ಮೊದಲೇ ಮಾಹಿತಿಯಿದ್ದಲ್ಲಿ, ಚಂದನ್ ಪ್ರಜಾಪತಿ ಮತ್ತು ಮಂಜೈ ಪ್ರಜಾಪತಿ ಉತ್ತರ ಪ್ರದೇಶದ ಮಹ್ರಾಜ್ಗಂಜ್ ಜಿಲ್ಲೆಯಲ್ಲಿನ ಮನೆಗೆ ತೆರಳಲು ಸಾಧ್ಯವಾಗುತ್ತಿತ್ತು. ಉತ್ತರ ಬೆಂಗಳೂರಿನಲ್ಲಿ ಬಡಗಿಯ ಕೆಲಸವನ್ನು ನಿರ್ವಹಿಸುವ ಈ ಇಬ್ಬರೂ, ಸೇವೆಗಳು (services) ನಿಂತುಹೋಗುವ ಮೊದಲೇ ತಮಗೆ ಈ ಅವಕಾಶವನ್ನು ನೀಡಬೇಕಿತ್ತೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. “ನಮ್ಮ ಹೊಲಗಳಲ್ಲಾದರೂ ದುಡಿದು, ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದೆವು” ಎನ್ನುತ್ತಾರೆ, ಮೂರು ವರ್ಷದ ಹಿಂದೆ, ಬೆಂಗಳೂರಿಗೆ ಬಂದ ಮಂಜೈ.
ಚಂದನ್ ಹಾಗೂ ಮಂಜೈ ಇಬ್ಬರೂ ಲಾಕ್ಡೌನ್ ನಿಯಮಗಳನ್ನು ಪಾಲಿಸುತ್ತಿದ್ದಾರಾದರೂ, ಊಟದ ಬಗ್ಗೆ ಚಿಂತಿತರಾಗಿದ್ದಾರೆ. “ನಾವು ಉಳಿಸಿದ್ದ ಹಣವೂ ಮುಗಿದು ಹೋಯಿತು. ನಮ್ಮ ಗುತ್ತಿಗೆದಾರ ನಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ. ಆತ ನಮಗೆ ಸಹಾಯಮಾಡುವುದಿಲ್ಲವೆಂಬ ಅರಿವಾಗುತ್ತಿದೆ”ಎಂದರು ಮಂಜೈ.
ಚಂದನ್ ಮತ್ತು ಮಂಜೈಯವರ ಪಡಿತರ ಚೀಟಿಗಳು ಮಹ್ರಾಜ್ಗಂಜ್ನಲ್ಲಿ ನೋಂದಣಿಯಾಗಿರುವ ಕಾರಣ, ಅವರು ಬೆಂಗಳೂರಿನಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಖರೀದಿಸಲು ಅವನ್ನು ಬಳಸಲಾಗದು. ಮುಂದೇನಾಗುವುದೋ ಎಂದು ಚಿಂತಿತರಾಗಿರುವ ಚಂದನ್, “ಈ ಲಾಕ್ಡೌನ್ ಹೆಚ್ಚು ದಿನಗಳವರೆಗೆ ಮುಂದುವರಿಯಬಹುದೆಂದು ನಮಗೆ ಕೇಳಿಬರುತ್ತಿದೆ. ನಾವು ಚಿಂತಿತರಾಗಿದ್ದೇವೆ. ಹೀಗೆ ಜೀವನ ಸಾಗಿಸುವುದಾದರೂ ಹೇಗೆ?”
ಯಾರಬ್ ನಗರದಲ್ಲಿ ಸ್ಥಳೀಯ ಸಂಸ್ಥೆಯು ಆಯೋಜಿಸಿರುವ ಒಣ ಪಡಿತರವನ್ನೊಳಗೊಂಡ ಚೀಲಗಳ (kit) ವಿತರಣೆಯಲ್ಲಿ ಪಡಿತರ ಚೀಟಿಯನ್ನು ಹೊಂದಿಲ್ಲದ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ ಎಂಬುದಾಗಿ ಸುಂದರ್ ತಿಳಿಸಿದರು.
ನಾವು ಅಲ್ಲಿಂದ ಬೀಳ್ಕೊಡುವಾಗ, “ಇಲ್ಲಿಗೆ ಬರುವ ಅನೇಕರು, ನಮಗೆ ಆಹಾರವನ್ನು ನೀಡುವಾಗ ನಮ್ಮ ಫೋಟೋಗಳನ್ನು ತೆಗೆಯುತ್ತಾರೆ. ನೀವು ಹಾಗೆ ಮಾಡದ್ದಕ್ಕಾಗಿ ಧನ್ಯವಾದಗಳು” ಎಂದರು.
ಸಂದರ್ಶನಗಳಿಗೆ ಸಹಾಯವನ್ನು ನೀಡಿದ, ಚಿಂದಿ ಆಯುವವರ ಹಕ್ಕುಗಳಿಗಾಗಿ ಕಾರ್ಯನಿರತವಾಗಿರುವ ಹಸಿರು ದಳ ಎಂಬ ಸಂಸ್ಥೆಗೆ, ವರದಿಗಾರರು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತಾರೆ.
ಅನುವಾದ: ಶೈಲಜಾ ಜಿ.ಪಿ.