ಅಲ್ಲಿ ಹೊಳಪಿನ ಕೆಂಪು ಬಣ್ಣದ ಹಿನ್ನೆಲೆಯಲ್ಲಿ KFC ಎಂದು ಬರೆಯಲಾಗಿತ್ತು.
ಇಲ್ಲಿನ ರುಚಿಕರವಾದ ಆಹಾರಕ್ಕೆ ಕಾರಣರಾದ ವ್ಯಕ್ತಿ ಇತರ ಕೆಎಫ್‌ಸಿ ಫ್ರಾಂಚೈಸಿಗಳ ದಿವಂಗತ ಕರ್ನಲ್ ಸ್ಯಾಂಡರ್ಸ್ ಅಲ್ಲ, ಅಲ್ಲಿ 'ಕೆ' ಎಂದರೆ 'ಕೆಂಟುಕಿ'. ಈ ಏಕ ಅಂತಸ್ತಿನ ರೆಸ್ಟೋರೆಂಟನ್ನು ಕುಲಮೋರಾದ 32 ವರ್ಷದ ಬಿಮನ್ ದಾಸ್ ನಡೆಸುತ್ತಿದ್ದಾರೆ.
ಅಧಿಕೃತವಾಗಿ ನಾತುನ್ ಕುಲಮೊರಾ ಚಪೋರಿ ಎಂದು ಕರೆಯಲ್ಪಡುವ ಇದು ಅಸ್ಸಾಂನ ಮಜುಲಿ ನದಿ ದ್ವೀಪದಲ್ಲಿರುವ ಒಂದು ಹಳ್ಳಿಯಾಗಿದೆ. ಕುಲಮೊರಾದ ನಿವಾಸಿಗಳಾದ 480 ಜನರು ಮುಖ್ಯವಾಗಿ ರೈತರು ಮತ್ತು ಕೃಷಿ ಕಾರ್ಮಿಕರು (ಜನಗಣತಿ 2011), ಆದರೆ ದ್ವೀಪಕ್ಕೆ ಭೇಟಿ ನೀಡುವ ಸಂದರ್ಶಕರು ಸಹ ತ್ವರಿತ ಊಟಕ್ಕಾಗಿ ಕೆಎಫ್‌ಸಿಯನ್ನು ಹುಡುಕುತ್ತಾರೆ. ಇದು ಇಲ್ಲಿ ಎಲ್ಲಾ ಪ್ರಯಾಣ ಮಾರ್ಗದರ್ಶಿಗಳ ನಡುವೆ ಹೆಚ್ಚು ರೇಟಿಂಗ್ ಪಡೆದಿದೆ.
"ನಾನು 2017ರಲ್ಲಿ ಕೆಎಫ್‌ಸಿಯನ್ನು ಪ್ರಾರಂಭಿಸಿದೆ, ಆಗ ಒಂದು ಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದೆ" ಎಂದು ಬಿಮನ್ 2022ರ ಮೇ ತಿಂಗಳ ಬೇಸಿಗೆಯ ಬಿಸಿಲಿನ ಮಧ್ಯಾಹ್ನ ಊಟದ ವ್ಯಾಪಾರಕ್ಕಾಗಿ ತಮ್ಮ ರೆಸ್ಟೋರೆಂಟ್ ತೆರೆಯುವಾಗ ಹೇಳಿದರು. ಹೊರಗಿನ ಮತ್ತು ಒಳಗಿನ ಗೋಡೆಗಳಿಗೆ ಕೆಂಪು ಹೊಳೆಯುವ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಸುಡುವ ಬಿಸಿಲಿನಲ್ಲಿ ಆಡುಗಳು, ಹೆಬ್ಬಾತುಗಳು ಮತ್ತು ಜಾನುವಾರುಗಳು ಹೊರಗೆ ತಿರುಗಾಟದಲ್ಲಿದ್ದವು.
ತಳ್ಳುಗಾಡಿಯಲ್ಲಿ, ಬಿಮನ್ ಚೌ ಮೇನ್ (ಬೇಯಿಸಿ - ಹುರಿದ ನೂಡಲ್ಸ್) ಮತ್ತು ಕೆಲವು ಇತರ ತಿನಿಸುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ 2019ರಲ್ಲಿ ಅವರು 10 ಆಸನಗಳ ರೆಸ್ಟೋರೆಂಟನ್ನು ತೆರೆದು, ಅಲ್ಲಿ ವಿವಿಧ ಫ್ರೈಗಳು, ಬರ್ಗರ್, ಪಿಜ್ಜಾ, ಪಾಸ್ತಾ, ಮಿಲ್ಕ್ ಕೇಕ್ ಮತ್ತು ಇನ್ನೂ ಹಲವು ತಿನಿಸುಗಳ್ನು ಅಲ್ಲಿ ತಯಾರಿಸುತ್ತಿದ್ದರು.
ಕೆಎಫ್‌ಸಿ ಈಗ ಕುಲಮೊರಾದ ಸ್ಥಳೀಯ ಜನರ ನಡುವೆ ಮಾತ್ರವಲ್ಲದೆ ನದಿ ದ್ವೀಪಕ್ಕೆ ಭೇಟಿ ನೀಡುವ ಪ್ರಪಂಚದಾದ್ಯಂತದ ಪ್ರವಾಸಿಗರ ನಡುವೆಯೂ ಜನಪ್ರಿಯವಾಗಿದೆ. ಗೂಗಲ್ ರಿವ್ಯೂಸ್‌ನಲ್ಲಿ ಅದಕ್ಕೆ ಈ ಪ್ರವಾಸಿಗರು 4.3 ಸ್ಟಾರ್ ರೇಟಿಂಗ್ ನೀಡಿದ್ದಾರೆ, ಅಲ್ಲಿ ಈ ಕೆಎಫ್‌ಸಿಯ ರುಚಿ ಮತ್ತು ತಾಜಾತನವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ.
ಹಾಗಿದ್ದರೆ, ಇದನ್ನು ಕೃಷ್ಣ ಫ್ರೈಡ್ ಚಿಕನ್ ಎಂದು ಏಕೆ ಕರೆಯಲಾಗುತ್ತದೆ? ಬಿಮನ್ ಇದಕ್ಕೆ ಉತ್ತರವಾಗಿ ತನ್ನ ಫೋನ್ ತೆಗೆದು ತನ್ನ, ಮತ್ತು ಹೆಂಡತಿ ದೇಬಜಾನಿ ದಾಸ್ ಮತ್ತು 7-8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಿಕ್ಕ ಹುಡುಗನ ಚಿತ್ರವನ್ನು ತೋರಿಸುತ್ತಾರೆ. "ನಾನು ಇದಕ್ಕೆ ನನ್ನ ಮಗನಾದ ಕೃಷ್ಣನ ಹೆಸರನ್ನು ಇಟ್ಟಿದ್ದೇನೆ" ಎಂದು ಹೆಮ್ಮೆಯಿಂದ ತಂದೆ ನಗುತ್ತಾ ಹೇಳುತ್ತಾರೆ. ಬಿಮನ್ ಹೇಳುವಂತೆ, ಈ ಹುಡುಗ ಪ್ರತಿದಿನ ಶಾಲೆ ಮುಗಿದ ನಂತರ ಕೆಎಫ್‌ಸಿಗೆ ಬಂದು ತನ್ನ ಮನೆಕೆಲಸವನ್ನು ಮಾಡುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಾನೆ, ಆದರೆ ಅವನ ಪೋಷಕರು ಹಸಿದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾರೆ.
ಆಗ ಊಟದ ಸಮಯವಾಗಿತ್ತು. ಬಿಮನ್ ನಮಗೆ ಫ್ರೈಡ್ ಚಿಕನ್ ಬರ್ಗರ್ ಕೊಳ್ಳುವಂತೆ ಶಿಫಾರಸು ಮಾಡಿದರು. ಅದನ್ನು ಹೇಗೆ ತಯಾರಿಸಲಾಗುತ್ತದೆಯೆನ್ನುವುದನ್ನು ಸಹ ಅವರು ನಮಗೆ ತೋರಿಸಿದರು. “ನಮ್ಮ ಮಜುಲಿಯಲ್ಲಿನ ಸ್ವಚ್ಛ ಅಡುಗೆ ಮನೆಗಳಲ್ಲಿ ಒಂದು” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲಿ ಮೂರು ಕೌಂಟರುಗಳು, ಫ್ರಿಡ್ಜ್, ಓವನ್ ಮತ್ತು ಡೀಪ್ ಫ್ರೈಯರ್‌ಗಳಿದ್ದವು. ಕತ್ತರಿಸಿದ ತರಕಾರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರೆ, ಸಾಸ್, ಕೆಚಪ್‌ಗಳನ್ನು ಅಡುಗೆ ಮನೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಲಾಗಿತ್ತು.
ಬಿಮನ್ ಫ್ರಿಡ್ಜಿನಲ್ಲಿಟ್ಟಿದ್ದ ಮ್ಯಾರಿನೇಟ್ ಮಾಡಿದ ಕೋಳಿ ಮಾಂಸವನ್ನು ಹೊರತೆಗೆದು ಹಿಟ್ಟಿನಲ್ಲಿ ಅದ್ದಿ ಕರಿಯಲು ಬಿಟ್ಟರು. ಅದು ಎಣ್ಣೆಯಲ್ಲಿ ಕುದಿಯುತ್ತಿರುವ ಹೊತ್ತಿಗೆ ಅವರು ಬನ್‌ಗಳನ್ನು ಟೋಸ್ಟ್ ಮಾಡತೊಡಗಿದರು. “ನನ್ನ ತಾಯಿ ಬೆಳಗ್ಗೆಯೇ ಕೆಲಸಕ್ಕೆ ಹೋಗಿಬಿಡುತ್ತಿದ್ದರು. ಹೀಗಾಗಿ ನಾನೇ ಬಡಿಸಿಕೊಂಡು ತಿನ್ನಬೇಕಿತ್ತು” ಹೀಗೆ ಅವರು ತಾನು ಹೇಗೆ 10 ವರ್ಷದವರಿರುವಾಗಲೇ ಈ ಕೆಲಸ ಮಾಡಲು ಆರಂಭಿಸಿದೆ ಎನ್ನುವುದನ್ನು ವಿವರಿಸತೊಡಗಿದರು. ಅವರ ತಾಯಿ ಎಲಾ ದಾಸ್ ಮಜುಲಿಯಲ್ಲಿ ಕೃಷಿ ಕಾರ್ಮಿಕರಾಗಿದ್ದರು; ಅವರ ತಂದೆ ದಿಘಲಾ ದಾಸ್ ಮೀನು ಮಾರಾಟ ಮಾಡುತ್ತಿದ್ದರು.
“ಅಮ್ಮ ಅಡುಗೆ ಮಾಡುವುದನ್ನು ನೋಡಿ ದಾಲ್, ಚಿಕನ್ ಮತ್ತು ಮೀನು ಅಡುಗೆ ಮಾಡುವುದನ್ನು ಕಲಿತೆ” ಎನ್ನುತ್ತಾರೆ ಬಿಮನ್. “ನನ್ನ ನೆರೆಹೊರೆಯವರು ಮತ್ತು ಸ್ನೇಹಿತರು ನಾನು ಮಾಡಿದ ಅಡುಗೆ ತಿನ್ನಲು ಬರುತ್ತಿದ್ದರು. ಇದು ನನಗೆ ಇನ್ನಷ್ಟು ಅಡುಗೆ ಕಲಿಯಲು ಪ್ರೇರಣೆ ನೀಡಿತು.”
ತಮ್ಮ 18ನೇ ವರ್ಷದಲ್ಲಿ ಮನೆಯಿಂದ ಹೊರಬಂದ ಬಿಮನ್ ಕೆಲಸ ಹುಡುಕತೊಡಗಿದರು. ಜೇಬಿನಲ್ಲಿ ಕೇವಲ 1,500 ರೂ.ಗಳೊಂದಿಗೆ ಸ್ನೇಹಿತನೊಂದಿಗೆ ಮುಂಬೈಗೆ ಪ್ರಯಾಣ ಬೆಳೆಸಿದರು. ನಗರದ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಹುಡುಕಲು ಸಂಬಂಧಿಕರೊಬ್ಬರು ಅವರಿಗೆ ಸಹಾಯ ಮಾಡಿದರು, ಆದರೆ ಅವರು ಅದರಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. “ನಾನು ಕೆಲಸ ಬಿಟ್ಟು ಓಡಿ ಹೋದೆ. ಆ ಕೆಲಸ ಮಾಡಲು ನನಗೆ ಇಷ್ಟವಾಗುತ್ತಿರಲಿಲ್ಲ. ಕಡೆಗೆ ಕೆಲಸ ಕೊಡಿಸಿದ ಸಂಬಂಧಿಕರಿಗೆ ʼದಯವಿಟ್ಟು ನನ್ನ ಬಗ್ಗೆ ತಪ್ಪು ತಿಳಿಯಬೇಡಿ. ನಾನು ಈ ಕೆಲಸ ಬಿಡುತ್ತಿದ್ದೇನೆ. ನನಗೆ ಈ ಕೆಲಸ ಹೊಂದುತ್ತಿಲ್ಲʼ ಎಂದು ಪತ್ರ ಬರೆದೆ”
ನಂತರ ಮುಂಬೈನ ವಿವಿಧ ರೆಸ್ಟೋರೆಂಟ್‌ಗಳಲ್ಲಿ ಅವರು ಪಂಜಾಬಿ, ಗುಜರಾತಿ, ಇಂಡೋ-ಚೈನೀಸ್ ಮತ್ತು ಕಾಂಟಿನೆಂಟಲ್ ಆಹಾರದಂತಹ ಅನೇಕ ವಿಧದ ಅಡುಗೆಗಳನ್ನು ಕಲಿತರು. ಆರಂಭದಲ್ಲಿ ಇದೆಲ್ಲವೂ ಒಂದಾದ ನಂತರ ಒಂದಾಗಿ ಒದಗಿತ್ತು. "ನಾನು ಆರಂಭದಲ್ಲಿ ತಟ್ಟೆಗಳನ್ನು ಸ್ವಚ್ಛಗೊಳಿಸುವುದು, ಟೇಬಲ್ ಹೊಂದಿಸುವ ಕೆಲಸ ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. 2010ರಲ್ಲಿ, ಬಿಮನ್‌ಗೆ ಹೈದರಾಬಾದಿನ ಎಟಿಕೊ ಎಂಬ ಫುಡ್ ಕೋರ್ಟಿನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು; ಅವರು ಅಲ್ಲಿ ಉದ್ಯೋಗ ಶ್ರೇಣಿಗಳನ್ನು ಏರುತ್ತಾ ವ್ಯವಸ್ಥಾಪಕರಾದರು.
ಏತನ್ಮಧ್ಯೆ ಅವರು ಪ್ರೀತಿಯಲ್ಲಿ ಸಿಲುಕಿದರು ಮತ್ತು ಪ್ರಸ್ತುತ ಕೆಎಫ್‌ಸಿಯಲ್ಲಿ ಅವರ ವ್ಯವಹಾರ ಪಾಲುದಾರರಾದ ದೇಬಜಾನಿಯನ್ನು ವಿವಾಹವಾದರು. ಅವರ ಕಿರಿಯ ಸೋದರಸಂಬಂಧಿಗಳಾದ ಶಿವಾನಿ ಮತ್ತು ದೇಬಜಾನಿ ಎಂಬ ಹೆಸರಿನ ಸಹೋದರಿ ಕೂಡ ಉಪಾಹಾರ ಗೃಹದಲ್ಲಿ ಸಹಾಯ ಮಾಡುತ್ತಾರೆ.
ಹೈದರಾಬಾದ್ ನಂತರ, ಬಿಮನ್ ಮಜುಲಿಗೆ ಮರಳಲು ನಿರ್ಧರಿಸಿದರು ಮತ್ತು ಊರಿಗೆ ಮರಳಿದ ಆರಂಭದಲ್ಲಿ ಅಸ್ಸಾಂನ ಶಿವಸಾಗರ ಜಿಲ್ಲೆಯ ಡೆಮೋವ್ ವಿಭಾಗದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡಿದರು. ಇದೆಲ್ಲದರ ನಡುವೆಯೂ, ಅವರು ತಮ್ಮದೇ ಆದ ರೆಸ್ಟೋರೆಂಟ್ ಒಂದನ್ನು ತೆರೆಯುವ ಕನಸನ್ನು ಪೋಷಿಸಿದ್ದರು. ಮತ್ತು ಅವರು ಅದನ್ನು ನನಸಾಗಿಸಿದರು - ಇಂದು ಅವರು ಇಟ್ಟಿಗೆ ಮತ್ತು ಗಾರೆಯ ಗೋಡೆ ಹೊಂದಿರುವ ಉಪಾಹಾರ ಗೃಹವನ್ನು ನಡೆಸುತ್ತಿದ್ದಾರೆ. "ನಾನು [ರೆಸ್ಟೋರೆಂಟ್ ಹಿಂಭಾಗದಲ್ಲಿ] ಅಡುಗೆಮನೆಯನ್ನು ನಿರ್ಮಿಸಿದೆ ಆದರೆ ಕುಳಿತುಕೊಳ್ಳುವ ಜಾಗಕ್ಕೆ ತಿಂಗಳಿಗೆ 2,500 ರೂಪಾಯಿಗಳಿಗೆ ಬಾಡಿಗೆ ನೀಡುತ್ತೇನೆ" ಎಂದು ಬಿಮನ್ ಹೇಳುತ್ತಾರೆ.
ಅವರ ಕತೆ ಕೇಳುತ್ತಾ ಅತ್ಯುತ್ತಮ ರುಚಿಯ ಬರ್ಗರ್ ಮತ್ತು ಫ್ರೈ ತಿಂದು 120 ರೂಪಾಯಿಗಳನ್ನು ಪಾವತಿಸಿದೆ. ಇಲ್ಲಿನ ಗ್ರಾಹಕರ ಮತ್ತೊಂದು ಅಚ್ಚುಮೆಚ್ಚಿನ ತಿನಿಸೆಂದರೆ ಅದು ಅವರು ತಯಾರಿಸುವ ಪಿಜ್ಜಾಗಳು. ಅದರ ಬೆಲೆ 270. ಇಲ್ಲಿ ನಿಂಬೂ ಪಾನಿ, ಮಿಲ್ಕ್ ಶೇಕ್ ಹಾಗೂ ವೆಜ್‌ರೋಲ್‌ಗಳು ಚೆನ್ನಾಗಿರುತ್ತವೆ ಎಂದು ರಿವ್ಯೂಗಳು ಹೇಳುತ್ತವೆ.
ಕುಲಮೋರಾದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಸೆನ್ಸೋವಾದಲ್ಲಿ ಬಿಮನ್ ಮತ್ತು ಅವರ ಕುಟುಂಬ ವಾಸಿಸುತ್ತಿದೆ. ಅವರು ಪ್ರತಿದಿನ ತನ್ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ತನ್ನ ರೆಸ್ಟೋರೆಂಟ್‌ಗೆ ಹೋಗಿ ಬರುತ್ತಾರೆ. "ತರಕಾರಿಗಳು ಮತ್ತು ಚಿಕನ್ ಮತ್ತು ತರಕಾರಿ ಕತ್ತರಿಸುವುದರೊಂದಿಗೆ ಪ್ರತಿದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ನನ್ನ ಕೆಲಸ ಆರಂಬಿಸುತ್ತೇನೆ" ಎಂದು ಬಿಮನ್ ಹೇಳುತ್ತಾರೆ.
ಒಳ್ಳೆಯ ದಿನದಂದು, ಅವರು 10,000 ರೂಪಾಯಿಗಳನ್ನು ಗಳಿಸಬಹುದು. ಇದು ಸಾಮಾನ್ಯವಾಗಿ ಪ್ರವಾಸಿ ಋತುವಿನಲ್ಲಿ ಅಂದರೆ ಅಕ್ಟೋಬರ್ - ಡಿಸೆಂಬರ್ ತಿಂಗಳುಗಳಲ್ಲಿ ಇರುತ್ತದೆ. ಇತರ ದಿನಗಳಲ್ಲಿ, ಅವರು ಸುಮಾರು 5,000 ರೂಪಾಯಿಗಳ ವ್ಯಾಪಾರ ಮಾಡುವುದಾಗಿ ಅವರು ಹೇಳುತ್ತಾರೆ.
ಅಷ್ಟರಲ್ಲಿ, ನಿಯಮಿತ ಗ್ರಾಹಕ ನಿಕಿತಾ ಚಟರ್ಜಿ ತನ್ನ ಆರ್ಡರ್ ನೀಡಲು ಬರುತ್ತಾರೆ. ಸಾಮಾಜಿಕ ಕಾರ್ಯಕರ್ತರಾದ ಅವರು ಒಂದು ವರ್ಷದ ಹಿಂದೆ ಮುಂಬೈನಿಂದ ಮಜುಲಿಗೆ ಸ್ಥಳಾಂತರಗೊಂಡರು. "ಕೆಎಫ್‌ಸಿ ನನ್ನ ಪಾಲಿಗೆ ಜೀವ ರಕ್ಷಕ" ಎಂದು ಅವರು ಹೇಳುತ್ತಾರೆ. "ನಾನು ಮೊದಲು ಕೃಷ್ಣ ಫ್ರೈಡ್ ಚಿಕನ್ ಬಗ್ಗೆ ಕೇಳಿದಾಗ, ಜನರು ಮಜುಲಿಯ ಮಟ್ಟಿಗೆ ಇದು ತುಂಬಾ ಒಳ್ಳೆಯ ಹೋಟೆಲ್ ಎಂದು ಹೇಳಿದರು. ಆದರೆ ನನಗೆ ಇಲ್ಲಿ ತಿಂದ ಮೇಲೆ ಅನ್ನಿಸಿದ್ದೆಂದರೆ ಇದು ಎಲ್ಲೆಡೆಗಿಂತಲೂ ಒಳ್ಳೆಯ ಆಹಾರ ಸಿಗುವ ತಾಣ.”
ಬಿಮನ್ ಅವರನ್ನು ನೋಡುತ್ತಾ, "ನನಗೆ ಕೆಲವು ದೂರುಗಳಿವೆ. ಎರಡು ದಿನ ಯಾಕೆ ಬಂದ್ ಮಾಡಿದ್ದು?” ಅಸ್ಸಾಂನ ಮುಖ್ಯ ಹಬ್ಬವಾದ ಬಿಹುಗೆ ದ್ವೀಪದಲ್ಲಿ ಎಲ್ಲವನ್ನೂ ಮುಚ್ಚಿರುವುದನ್ನು ಅವರು ಉಲ್ಲೇಖಿಸುತ್ತಿದ್ದರು.
ಬಿಮನ್ ತಮಾಷೆಯಾಗಿ ಕೇಳುತ್ತಾರೆ, "ಕಳೆದ ಎರಡು ದಿನಗಳಿಂದ ನೀವು ಏನಾದರೂ ತಿಂದಿದ್ದೀರಾ ಇಲ್ವಾ?"
ನೀವು ಎಂದಾದರೂ ನಾತುನ್ ಕುಲ್ಮೋರಾ ಚಪೋರಿ ಗ್ರಾಮಕ್ಕೆ ಭೇಟಿ ನೀಡಿದರೆ, ಕೃಷ್ಣ ಫ್ರೈಡ್ ಚಿಕನ್‌ಗೆ ಭೇಟಿ ನೀಡಲೇಬೇಕು. ಇಲ್ಲಿನ ತಿನಿಸುಗಳು ʼಕೈ ಬೆರಳು ಚೀಪುವಷ್ಟುʼ ಚೆನ್ನಾಗಿವೆ.
ಅನುವಾದ: ಶಂಕರ. ಎನ್. ಕೆಂಚನೂರು