/static/media/uploads/Kali/img_3364.jpg


ಅಕ್ಕ, ನನ್ನ ಕಚೇರಿ ಪರೀಕ್ಷೆ ಇದೆ, ನಿಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೆ ಖಂಡಿತಾ ಈ ಕಾರ್ಯಕ್ರಮಕ್ಕೆ ಬರಬೇಕು' ಭಾರತದ ಪ್ರಖ್ಯಾತ ನೃತ್ಯಶಾಲೆ ಚೆನ್ನೈನ ಕಲಾಕ್ಷೇತ್ರದಲ್ಲಿ ತನ್ನ ನೃತ್ಯದ ಅಂತಿಮ ಪರೀಕ್ಷೆಗೆ ನನ್ನನ್ನು ಆಹ್ವಾನಿಸಲು ಕಾಳಿ ವೀರಪ್ಪನ್ ಕರೆ ಮಾಡಿದ್ದ.  ಎರಡು ಕ್ಷಣಗಳ ಮೌನದ ನಂತರ ಮೆಲುದನಿಯಲ್ಲಿ ಕೇಳಿದ, ’ಅಕ್ಕ ನಾನು ಮಾತಾಡಿದ್ದು ಸರಿಯಾದ ಇಂಗ್ಲಿಷಾ?’.

ಅವನ ಹಿಂಜರಿಕೆಗೊಂದು ಕಾರಣ ಇತ್ತು.  ನಾಲ್ಕು ವರ್ಷಗಳ ಮೊದಲಿನವರೆಗೂ ಅವನಿಗೆ ಇಂಗ್ಲಿಷ್ ನ ಗಂಧಗಾಳಿಯೂ ಇರಲಿಲ್ಲ..  ಹಾಗೆ ನೋಡಿದರೆ ಅಲ್ಲಿಯವರೆಗೂ ಅವನಿಗೆ ನೃತ್ಯದ ಓಂ ನಾಮ ಸಹ ಗೊತ್ತಿರಲಿಲ್ಲ.  ಆದರೆ ಈಗ ಆತ ಶಾಸ್ತ್ರೀಯ ನೃತ್ಯಶೈಲಿಯಾದ ಭರತನಾಟ್ಯವನ್ನಷ್ಟೇ ಅಲ್ಲ, ತಮಿಳುನಾಡಿನ ಪುರಾತನ ಜಾನಪದ ನೃತ್ಯಪ್ರಕಾರಗಳಾದ ಕರಗಟ್ಟಮ್, ತಾಪಟ್ಟಮ್ ಮತ್ತು ಒಯಿಲಾಟಮ್ ನಲ್ಲೂ ಪ್ರಾವಿಣ್ಯತೆ ಸಾಧಿಸಿದ್ದ.  ಇದನ್ನೆಲ್ಲಾ ಆತ ಆಯಾ ಕ್ಷೇತ್ರದ ದಿಗ್ಗಜ ಗುರುಗಳಿಂದಲೇ ಕಲಿತಿದ್ದ.


uploads/Kali/img_1736.jpg


ಆದಿದ್ರಾವಿಡ ದಲಿತ ಸಮುದಾಯಕ್ಕೆ ಸೇರಿದ ಕಾಳಿಯ ಕುಟುಂಬ ಇರುವುದು ಬಡ ಬೆಸ್ತರು ನೆಲೆಸಿರುವ ಕೋವಲಮ್ ಹಳ್ಳಿಯಲ್ಲಿ.  ಅದು ಚೆನ್ನೈಗೆ ಹತ್ತಿರವಿದೆ.  ೨೧ ವರ್ಷಗಳ ಕಾಳಿ ತಂದೆಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡಿದ್ದ.  ’ನನಗಾಗ ಆರೇಳು ತಿಂಗಳಿರಬಹುದು’ ಭಾವುಕತೆಯ ಪಸೆ ಇಲ್ಲದ ದನಿಯಲ್ಲಿ ಅವನು ಹೇಳುತ್ತಿದ್ದ.  ಅವನ ಎಲ್ಲಾ ಭಾವನೆಗಳೂ ಎಚ್ಚರಾಗುವುದು ಅವನು ತನ್ನ ವಿಧವೆ ತಾಯಿಯ ಬಗ್ಗೆ ಮಾತನಾಡುವಾಗ ಮಾತ್ರ.  ಗಂಡನನ್ನು ಕಳೆದುಕೊಂಡ ಆಕೆ ಕೂಲಿ ಮಾಡಿ, ದಿನಗೂಲಿಯ ಹಣದಲ್ಲಿ ತನ್ನ ದೊಡ್ಡ ಸಂಸಾರವನ್ನು ಸಾಕಿದ್ದಾಳೆ.  ’ನನಗೆ ಮೂರು ಜನ ಅಕ್ಕಂದಿರು, ಇಬ್ಬರು ಸಹೋದರರು.  ನನ್ನ ಒಬ್ಬ ಸಹೋದರ ಮಿದುಳಿನ ಜ್ವರ ಬಂದು ತೀರಿಕೊಂಡ.  ಅಲ್ಲಿಯವರೆಗೂ ನಾನು ನನ್ನ ಅಜ್ಜಿಯ ಮನೆಯಲ್ಲಿ ಇದ್ದೆ.  ಆಮೇಲೆ ಮರಳಿ ಅಮ್ಮನ ಹತ್ತಿರಕ್ಕೆ ಬಂದೆ.’

ಇಂದಿನಂತೆ ಆಗ ಆ ಮನೆಗೆ ಒಂದು ಪಕ್ಕಾ ಸೂರು ಸಹ ಇರಲಿಲ್ಲ.  ಚೆನ್ನೈನ ವಿರಳ ಮಳೆಯನ್ನೂ ತಡೆಯುವ ಶಕ್ತಿ ಅದಕ್ಕಿರಲಿಲ್ಲ.  ಆಮೇಲೆ ಸರಕಾರದ ಸಹಾಯದಿಂದ ಮನೆಗೊಂದು ಗಟ್ಟಿ ಸೂರು ದಕ್ಕಿದೆ.  ತನ್ನ ಕನಸನ್ನು ನನಸಾಗಿಸಲು ನೆರವಾದ ಎಲ್ಲರ ಮೇಲಿರುವಷ್ಟೇ ಕೃತಜ್ಞತೆ ಅವನಿಗೆ ಸರಕಾರದ ಬಗ್ಗೆಯೂ ಇದೆ..

ಕಾಳಿಯ ಕನಸು ನರ್ತಿಸುವುದು.  ಅದರಲ್ಲೇನು ವಿಶೇಷ ಎನ್ನುವಿರಾ? ಇರಿ, ಅವನ ಪೂರ್ಣ ಕನಸನ್ನು ಕೇಳಬೇಕು ನೀವು. ಎಣ್ಣೆ ಮತ್ತು ನೀರಿನಷ್ಟು ಭಿನ್ನವಾದ ಎರಡು ವಿಭಿನ್ನ ನರ್ತನದ ಪ್ರಕಾರಗಳಲ್ಲಿ ಪ್ರಾವಿಣ್ಯತೆ ಸಾಧಿಸುವ ಆಸೆ ಅವನಿಗೆ.  ಒಂದು ಭರತನಾಟ್ಯ -  ಮೊದಲು ದೇವದಾಸಿಗಳು ಕಲಿತು ಪ್ರದರ್ಶಿಸುತ್ತಿದ್ದು, ಅದನ್ನು ಆಗ ತುಚ್ಛೀಕರಿಸಿ ದೂರವಿಟ್ಟಿದ್ದ ಮೇಲ್ವರ್ಗದವರೇ ಈಗ ತಮ್ಮ ಪಾಳೆಯಪಟ್ಟು ಮಾಡಿಕೊಂಡಿರುವ ಶಾಸ್ತ್ರೀಯ ನೃತ್ಯಪ್ರಕಾರ, ಇನ್ನೊಂದು ಹಲವಾರು ಶತಮಾನಗಳಿಂದ ತಮಿಳುನಾಡಿನ ಹಳ್ಳಿಗಳಲ್ಲಿ ಉಸಿರಾಡಿಕೊಂಡಿರುವ ಜಾನಪದ ನೃತ್ಯ ಪ್ರಕಾರಗಳು.


/static/media/uploads/Kali/Kannan Kumar.jpg


ನಿಯಮದ ಪ್ರಕಾರ ಭರತನಾಟ್ಯ ನರ್ತಕರು ಜನಪದ ನೃತ್ಯಗಳ ಕಡೆ ಗಮನ ಹರಿಸುವುದಿಲ್ಲ.  ಅವರ ನೃತ್ಯದಲ್ಲಿ ಕರಗ ಅಥವಾ ಕಾವಡಿಯ ತುಣುಕಿದ್ದಾಗ ಒಂದಿಷ್ಟು ಅದು ಸೇರಿಕೊಳ್ಳಬಹುದೇ ಹೊರತು ಅದನ್ನೊಂದು ಶಾಸ್ತ್ರಪ್ರಕಾರವಾಗಿ ಅವರು ಎಂದೂ ಪರಿಗಣಿಸುವುದಿಲ್ಲ. ಅದನ್ನು ಪ್ರದರ್ಶಿಸುವುದಿರಲಿ, ಗಂಭೀರವಾಗಿ ಅಭ್ಯಾಸ ಮಾಡಿರುವವರ ಸಂಖ್ಯೆಯೂ ಹೆಚ್ಚಿಲ್ಲ.  ಇಡೀ ತಮಿಳುನಾಡಿನಲ್ಲೇ ಜಾನಪದ ನೃತ್ಯಗಳ ಪೂರ್ಣಾವಧಿ ಶಿಕ್ಷಕ ಎಂದಿರುವುದು ಕಣ್ಣನ್ ಕುಮಾರ್ ಎನ್ನುವವರು ಮಾತ್ರ.  ಕಾಳಿ ನೃತ್ಯ ಕಲಿತಿರುವುದು ಅವರ ಹತ್ತಿರವೇ. ಅವರು ಹೇಳುವ ಪ್ರಕಾರ ಜನರ ನಡೆನುಡಿಯಲ್ಲಿ ಹಾಸುಹೊಕ್ಕಾಗಿರುವ, ಹೃದಯದಲ್ಲಿ ಮಿಡಿಯುವ ಜಾನಪದ ನೃತ್ಯ ಪಾಯವಿದ್ದಂತೆ, ಗೋಡೆ ಇದ್ದಂತೆ, ಮುದ್ರೆಗಳ ಮೂಲಕ ಕತೆ ಹೇಳುವ ಭರತನಾಟ್ಯ ಮೆದುಳಿನ ಯೋಚನೆಗಳಿಂದ ರಚಿಸುವ ಚಿತ್ರದಂತೆ.  ಎರಡೂ ಒಂದಕ್ಕೊಂದು ಪೂರಕವಾಗಬಲ್ಲವು.  ಅವರ ಶಿಷ್ಯನಾದ ಕಾಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ಸಂಘರ್ಷಕ್ಕೊಳಗಾಗದಂತೆ ಎರಡನ್ನೂ ತನ್ನದಾಗಿಸಿಕೊಂಡಿದ್ದಾನೆ.

ಕಾಳಿಯ ಜೀವನದಲ್ಲಿ ಸಂಘರ್ಷ ಎಂದು ಎದುರಾದದ್ದು ಅವನು ತನ್ನ ಹೈಸ್ಕೂಲು ವಿದ್ಯಾಭ್ಯಾಸ ಪೂರೈಸಿದ ಘಟ್ಟದಲ್ಲಿ.  ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಆಗ ಅವನಲ್ಲಿದ್ದದ್ದು ಪ್ರಶ್ನೆಗಳು ಮಾತ್ರ.  ಅವನ ಕುಟುಂಬ ಇದ್ದ ಆರ್ಥಿಕ ಸ್ಥಿತಿಯಲ್ಲಿ ಅವನು ಒಂದು ಕೆಲಸಕ್ಕೆ ಸೇರಿ ಮನೆಗೆ ನೆರವಾಗುವುದು ಸರಿಯಾದ ದಾರಿ ಎನ್ನುವಂತೆ ಕಾಣುತ್ತಿತ್ತು.  ಅದೇ ಸಮಯದಲ್ಲಿ ಅವನ ಚಿಕ್ಕಮ್ಮ ಅವನಿಗೆ ಕೋವಲಂ ಹತ್ತಿರದಲ್ಲೇ ಇರುವ ದಕ್ಷಿಣ್ ಚಿತ್ರಾ ಎನ್ನುವ ಹೆರಿಟೇಜ್ ಹಳ್ಳಿಯಲ್ಲಿ ಯಾವುದೇ ಫೀಸ್ ಇಲ್ಲದೆ ನಡೆಯುವ ದೇಸೀಕುಣಿತದ ತರಗತಿಗಳ ಬಗ್ಗೆ ಹೇಳುತ್ತಾರೆ. ಒಮ್ಮೆ ಅದನ್ನು ನೋಡಲು ಹೋಗುವ ಕಾಳಿ ಅದರ ಮೋಡಿಗೆ ಪರವಶನಾಗುತ್ತಾನೆ.  ಅಲ್ಲಿನ ತರಗತಿಗಳಿಗೆ ಸೇರಿಕೊಳ್ಳುವ ಆತ ಕೇವಲ ಎರಡೇ ತಿಂಗಳುಗಳಲ್ಲಿ ಕರಗಾಟ್ಟಮ್, ಒಯಿಲಾಟ್ಟಮ್ ಮತ್ತು ತಪ್ಪಾಟ್ಟಮ್ ಕುಣಿತದಲ್ಲಿ ನಿಸ್ಸೀಮನಾಗುತ್ತಾನೆ.  ಅವನ ಕಲಿಕೆಯ ವೇಗ ಕಂಡು ಸಂತೋಷಗೊಂಡ ಅವನ ಗುರು ಕಣ್ಣನ್ ಕುಮಾರ್ ಅವನಿಗೆ ದೇವರಾಟ್ಟಮ್ ಎನ್ನುವ ನಾಲ್ಕನೆಯ ಕುಣಿತ ಪ್ರಕಾರವನ್ನು ಹೇಳಿಕೊಡಲು ಪ್ರಾರಂಭಿಸುತ್ತಾರೆ.  ಆಗಲೇ ಕಾಳಿ ಕಲಾಕ್ಷೇತ್ರದಲ್ಲಿ ನಾಲ್ಕು ವರ್ಷಗಳ ನೃತ್ಯದ ಡಿಪ್ಲೋಮಾ ಕೋರ್ಸಿಗೆ ಸೇರುತ್ತಾನೆ.


/static/media/uploads/Kali/img_7975.jpg


ಕೆಲವೇ ವರ್ಷಗಳ ಹಿಂದಿನವರೆಗೂ ಕಾಳಿ ಕಲಾಕ್ಷೇತ್ರದ ಹೆಸರನ್ನೂ ಕೇಳಿರಲಿಲ್ಲ.  ಕೋವಲಂ ನಲ್ಲಿ ಒಂದು ಸುನಾಮಿ ಪುನರ್ವಸತಿ ಕೇಂದ್ರದಲ್ಲಿ ಕಾಳಿ ನರ್ತಿಸಿದ್ದನ್ನು ನೋಡಿದ ಸಾರಾ ಚಂದ, ನೃತ್ಯ ಅವನ ಆತ್ಮವಾಗಿರುವುದನ್ನು ಗುರುತಿಸಿ ಅವನು ಕಲಾಕ್ಷೇತ್ರದಲ್ಲಿ ಶಾಸ್ತ್ರೀಯವಾಗಿ ನೃತ್ಯ ಕಲಿಯಬೇಕೆಂದು ಹೇಳಿದ್ದಲ್ಲದೇ ತಾವೇ ಅವನ ನೃತ್ಯಕ್ಕೆ ಪ್ರಾಯೋಜಕರೂ ಆಗುತ್ತಾರೆ.  ಮನೆಯವರು, ದೂರದ ನೆಂಟರು ಎಲ್ಲರೂ ಭರತನಾಟ್ಯದಂತಹ ಹೆಣ್ಣುಕಲೆಯನ್ನು ಕಲಿಯುವುದರ ಬಗ್ಗೆ ಅಪಹಾಸ್ಯ ಮಾಡಿದರೂ ಕಾಳಿ ಹಿಂದೆ ಸರಿಯುವುದಿಲ್ಲ.  ಸಂದರ್ಶನದಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗುತ್ತಾನೆ.  ಅಲ್ಲಿ ಪ್ರವೇಶವನ್ನೂ ಸಂಪಾದಿಸಿಕೊಳ್ಳುತ್ತಾನೆ.  ಅವನು ಒಂದು ತಡೆಯನ್ನೇನೋ ದಾಟುತ್ತಾನೆ, ಆದರೆ ಅಂತಹ ಅನೇಕ ತಡೆಗಳು ಅವನ ಹಾದಿಯಲ್ಲಿ ಕಾಯುತ್ತಿರುತ್ತವೆ.

ಕಾಳಿ ತಮಿಳು ಮೀಡಿಯಂನಲ್ಲಿ ಓದಿದ ಹುಡುಗ. ಭರತನಾಟ್ಯ, ಶಾಸ್ತ್ರೀಯ ಸಂಗೀತದ ಪರಿಚಯ ಇಲ್ಲದ ಇವನನ್ನು ಮೊದಮೊದಲಿಗೆ ಕಲಾಕ್ಷೇತ್ರದ ಶಾಸ್ತ್ರೀಯ ಪರಿಸರ ಬೆದರಿಸಿಬಿಟ್ಟಿತ್ತು. ಅಲ್ಲಿನ ಊಟ ಶುದ್ಧ ಸಸ್ಯಾಹಾರಿ, ಅವನೋ ಖುಷಿಯಾಗಿ ಮಾಂಸಾಹಾರ ಸವಿಯುತ್ತಿದ್ದ ಹುಡುಗ. ’ನಾನಾಗ ಡುಮ್ಮನಾಗಿದ್ದೆ!’ ಅವನ ಹಿಂಬಾಗವನ್ನು ಹೊರಚಾಚಿ, ಕಾಲುಗಳನ್ನು ಅಗಲಿಸಿ, ಕೈಗಳನ್ನು ತೂಗಾಡಿಸಿ ತಾನು ಆಗ ಹೇಗೆ ಭರತನಾಟ್ಯ ಮಾಡುತ್ತಿದ್ದೆ ಎನ್ನುವುದನ್ನು ತೋರಿಸಿ ಕಾಳಿ ನಕ್ಕಿದ್ದ.  ಅಲ್ಲಿ ಕಲಿಯುತ್ತಿದ್ದ ಅನೇಕ ವಿದೇಶಿ ವಿದ್ಯಾರ್ಥಿಗಳಿಗಿಂತ ಒಂದಿಷ್ಟು ಮೇಲು ಎನ್ನುವುದು ಬಿಟ್ಟರೆ ಇವನೂ ಸಹ ಕಲಾಕ್ಷೇತ್ರದ ಸಂಸ್ಕೃತಿಗೆ ಅವರಷ್ಟೇ ಅಪರಿಚಿತನಾಗಿದ್ದ.  ಎಲ್ಲಕ್ಕಿಂತಲೂ ಹೆಚ್ಚಾಗಿ ಎಲ್ಲರಂತೆ ಇಂಗ್ಲಿಷಿನಲ್ಲಿ ಸಂವಹಿಸಲಾಗದ ಕೀಳರಿಮೆ ಅವನನ್ನು ಬೇಟೆಯಾಡುತ್ತಿತ್ತು.

ಹಾಗಾಗಿ ಅವನು ಅಭಿನಯದ ಮೂಲಕ ಸಂಭಾಷಿಸಲಾರಂಭಿಸುತ್ತಾನೆ. ಪದಗಳ ಸ್ಥಾನದಲ್ಲಿ ಆಂಗಿಕವನ್ನು ಬಳಸುತ್ತಾನೆ.  ಸ್ವಲ್ಪ ಸಮಯದಲ್ಲೇ ತನ್ನ ನಾಚಿಕೆಯನ್ನು ಮೀರಿ ವಿದೇಶಿಯರೊಂದಿಗೆ ದೋಸ್ತಿ ಮಾಡಿಕೊಳ್ಳುತ್ತಾನೆ.  ಮೊದಲ ವರ್ಷದ ವಿದ್ಯಾರ್ಥಿಗಳ ದಿನದ ಸಮಾರಂಭದಲ್ಲಿ ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಹುಡುಗಿಯರಿಗೆ ಒಯಿಲಾಟ್ಟಮ್ ಹೇಳಿಕೊಟ್ಟು ಅದ್ಭುತವಾದ ಪ್ರದರ್ಶನವನ್ನೂ ಕೊಡುತ್ತಾನೆ.  ಕಲಾಕ್ಷೇತ್ರದ ಆಗಿನ ನಿರ್ದೇಶಕಿಯಾಗಿದ್ದ ಲೀಲಾ ಸಾಮ್ಸನ್ ಅವನ ಈ ಪ್ರಯತ್ನವನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತಾರೆ.  ಇವೆಲ್ಲಕ್ಕೂ ಕಳಶವಿಟ್ಟಂತೆ ಅವನು ತನ್ನ ತರಗತಿಗೇ ಮೊದಲಿಗನಾಗಿ ಉತ್ತೀರ್ಣನಾಗುತ್ತಾನೆ.  ಅವನ ಆತ್ಮವಿಶ್ವಾಸ ಬೆಳೆಯುತ್ತದೆ ಹಾಗೆಯೇ ಅವನ ತಿಳುವಳಿಕೆಯೂ ವಿಕಸಿತವಾಗುತ್ತದೆ.

ಈಗ ಕಾಳಿ ಒಂದು ಕ್ಷಣದಲ್ಲಿ ರಾಗಗಳನ್ನು ಗುರ್ತಿಸಬಲ್ಲ.  ರುಕ್ಮಿಣಿ ಅರಂಗಮ್ ನಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಆತ ರಾಗಗಳನ್ನು ಗುರ್ತಿಸಿ, ಸರಿಯೇ ಎಂದು ಅವನ ದೊಡ್ಡ ಗೆಳೆಯರ ಗುಂಪಿನಲ್ಲಿ ಯಾರನ್ನಾದರೂ ಕೇಳುತ್ತಾನೆ.  ಸಾಧಾರಣವಾಗಿ ಅವನು ಸರಿಯಾಗಿಯೇ ಗುರುತಿಸಿರುತ್ತಾನೆ.  ಮೊದಲ ದಿನಗಳ ಅವನ ಹುಚ್ಚುಕುಣಿತದ ಭರತನಾಟ್ಯ ಇಂದು ಒಂದು ಪೂರ್ಣತೆಯತ್ತ ಬಂದಿದೆ.  ಈಗ ಅವನ ಅಡುವಾ(ಹೆಜ್ಜೆ)ಗಳು ನಿಖರವಾಗಿರುತ್ತವೆ, ಅವನ ಭಾವ (ಅಭಿವ್ಯಕ್ತಿ) ಪರಿಪೂರ್ಣವಾಗಿರುತ್ತದೆ.


/static/media/uploads/Kali/img_0059.jpg


ಮಾರ್ಚ್ ೨೮, ೨೦೧೪ರಲ್ಲಿ ಅದೇ ರುಕ್ಮಿಣಿ ಅರಂಗಮ್ ನಲ್ಲಿ ಅವನ ಪರೀಕ್ಷೆ ನಡೆಯಿತು.  ಅವನ ತರಗತಿಯಲ್ಲಿದ್ದ ಎಂಟು ವಿದ್ಯಾರ್ಥಿಗಳು ಸಂಪೂರ್ಣ ಅಲಂಕಾರದೊಂದಿಗೆ ರಂಗದ ಮೇಲೆ ಒಂದು ಪೂರ್ಣ ಮಾರ್ಗ(ಒಂದರ ನಂತರ ಒಂದರಂತೆ ಆಡುವ ನೃತ್ಯ ಪ್ರದರ್ಶನ)ವನ್ನು ಪ್ರದರ್ಶಿಸಿದರು.  ನಟುವಾಂಗದಲ್ಲಿ ಅವರ ತರಗತಿಯ ಶಿಕ್ಷಕಿ ಇಂದು ನಿದೇಶ್ ಇದ್ದರು.  ಇಡೀ ಪ್ರದರ್ಶನವನ್ನು ಪ್ರೇಕ್ಷಕರು ನಿಬ್ಬೆರಗಾಗಿ ವೀಕ್ಷಿಸಿದರು.  ಇಂದು ನರೇಶ್ ಅವರಿಗೆ ಆಗ ತನ್ನ ಶಿಷ್ಯರ ವಿಷಯದಲ್ಲಿ ಅಪಾರವಾದ ಹೆಮ್ಮೆ ಆಗಿದ್ದಿರಬೇಕು.

ಕಾಳಿಯ ತಾಯಿ, ಕೋವಲಂನಲ್ಲೇ ಇಡ್ಲಿ ಅಂಗಡಿ ಇಟ್ಟಿರುವ ಅವನ ಸೋದರ ರಜನಿ, ಅವನ ಮೂರು ಜನ ಸಹೋದರಿಯರು, ಅವರ ಕುಟುಂಬ, ಸ್ನೇಹಿತರು ಎಲ್ಲರೂ ಅವನ ಕಛೇರಿ ನೋಡಲು ಕಲಾಕ್ಷೇತ್ರಕ್ಕೆ ಬಂದಿದ್ದರು.  ಕಾಳಿಯ ಅದ್ಭುತವಾದ ಪ್ರದರ್ಶನ ನೋಡಿದ ನಾನು ಅವನ ಸೋದರ ರಜನಿಯ ಬಳಿ ಹೋಗಿ ಅವನನ್ನು ಅಭಿನಂದಿಸಿದಾಗ, ಅವನು ಸರ್ವೇಸಾಧಾರಣವಾಗಿ ’ನಮಗೆ ಅವನ ನೃತ್ಯ ಎಲ್ಲಾ ಅರ್ಥವಾಗುವುದಿಲ್ಲ.  ನಾವು ಇಲ್ಲೇ ಹೊರಗಡೆ ಕುಳಿತಿರುತ್ತೇವೆ.  ನೀವುಗಳೆಲ್ಲಾ ಅವನನ್ನು ಮೆಚ್ಚಿಕೊಳ್ಳುತ್ತೀರಿ, ಸಂತೋಷ’ ಎಂದ.  ಅಷ್ಟರಲ್ಲಿ ಕಾಳಿ ಅವರನ್ನೆಲ್ಲಾ ನೋಡಲು ಹೊರಗೆ ಬಂದಿದ್ದ.  ತನ್ನ ತಾಯಿಯನ್ನು ಅಪ್ಪಿಕೊಂಡ, ಮನೆಯವರೊಂದಿಗೆ ಫೋಟೋ ತೆಗೆಸಿಕೊಂಡ.  ಅಷ್ಟರಲ್ಲಿ ಅವನ ಸಹಪಾಠಿಗಳು ಗ್ರೂಪ್ ಫೋಟೋಗಾಗಿ ಅವನನ್ನು ಕರೆದರು.  ಒಳಗೆ ಓಡುತ್ತಿರುವಾಗಲೇ ಅವನ ಕಣ್ಣು ಅಲ್ಲೇ ಇದ್ದ ಅವನ ಗುರು ಕಣ್ಣನ್ ಕುಮಾರ್ ಮೇಲೆ ಬಿತ್ತು.  ಅಲ್ಲೇ ಧಡಾರ್ ಎಂದು ಅವರ ಕಾಲಿಗೆ ಬಿದ್ದ.  ಪೂರ್ಣ ಬೆವತಿದ್ದ ಅವನ ಭುಜಗಳನ್ನು ಹಿಡಿದು ಅವನ ಗುರು ಅವನನ್ನು ಮೇಲೆತ್ತಿ ನಿಲ್ಲಿಸಿದರು, ಅವನ ಭುಜದ ಮೇಲಿಂದ ಕೈ ತೆಗೆಯದೆ ಹಾಗೇ ನಿಂತಿದ್ದರು.  ಗುರುವಿನ ಕಣ್ಣುಗಳಲ್ಲಿ ಹೆಮ್ಮೆ, ಶಿಷ್ಯನ ಕಣ್ಣುಗಳಲ್ಲಿ ಸಂತಸ.


/static/media/uploads/Kali/img_1713.jpg


’ನಾನು ಎರಡ ನೃತ್ಯ ಪ್ರಕಾರಗಳಲ್ಲಿ ಯಾವುದನ್ನೂ ಬಿಡುವುದಿಲ್ಲ’ ಪರೀಕ್ಷೆ ಮುಗಿದ ನೆಮ್ಮದಿ ಹಾಗು ಸಂತಸದಲ್ಲಿದ್ದ ಕಾಳಿ ಹೇಳಿದ.  ತರಗತಿಗೇ ಮೊದಲಿಗನಾದ ಸುದ್ದಿ ಕೇಳಿ ಖುಷಿಪಡುತ್ತಿರುವಾಗಲೇ ಕಲಾಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾಗೆ ಅವನು ಆಯ್ಕೆಯಾಗಿರುವುದು ಕೇಳಿ ಅವನ ಸಂತಸ ಇಮ್ಮಡಿಯಾಯಿತು.   ಈಗ ನಶಿಸಿಹೋಗುತ್ತಿರುವ ಜಾನಪದ ನೃತ್ಯ ಕುಣಿತಗಳನ್ನು ಉಳಿಸಿಕೊಳ್ಳಲು ತನ್ನ ಕೈಲಾದ ಪ್ರಯತ್ನ ಮಾಡುವ ಅವನ ಬಯಕೆಗೆ ಮತ್ತಷ್ಟು ಬಲ ಬಂದಿದೆ.  ಅಷ್ಟೇ ಅಲ್ಲ ಭರತನಾತ್ಯವನ್ನು ಎಲ್ಲರ ಬಳೆಗೆ ಕೊಂಡೊಯ್ದು ಅದರ ಸೌಂದರ್ಯನ್ನು ಎಲ್ಲರಿಗೂ ಹತ್ತಿರವಾಗಿಸಬೇಕೆಂಬ ಬಯಕೆಯೂ ಅವನಿಗಿದೆ.  ’ಒಂದು ತರಗತಿಯಲ್ಲಿ ಜಾನಪದ, ಮುಂದಿನ ತರಗತಿಯಲ್ಲಿ ಭರತ.  ನಾನು ಎರಡನ್ನೂ ಕಲಿಸಬೇಕು.  ನಾನು ಒಂದು ನೃತ್ಯಶಾಲೆಯನ್ನು ಕಟ್ಟಬೇಕು, ಹಣ ಸಂಪಾದಿಸಬೇಕು, ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ನಾನು ನರ್ತಿಸಬೇಕು’ ಎಳೆಯ ನರ್ತಕ ತನ್ನ ಕನಸುಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾನೆ.

(ಕಾಳಿ ಎನ್ನುವ ನರ್ತಕ ಮತ್ತು ಅವನ ಕನಸುಗಳು , ವಿಡಿಯೋ ನೋಡಲು : http://www.ruralindiaonline.org/articles/kali-the-dancer-and-his-dreams )

Aparna Karthikeyan

اپرنا کارتی کیئن ایک آزاد صحافی، مصنفہ اور پاری کی سینئر فیلو ہیں۔ ان کی غیر فکشن تصنیف ’Nine Rupees and Hour‘ میں تمل ناڈو کے ختم ہوتے ذریعہ معاش کو دستاویزی شکل دی گئی ہے۔ انہوں نے بچوں کے لیے پانچ کتابیں لکھیں ہیں۔ اپرنا اپنی فیملی اور کتوں کے ساتھ چنئی میں رہتی ہیں۔

کے ذریعہ دیگر اسٹوریز اپرنا کارتکیئن
Translator : N. Sandhyarani