ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ದನ ಮನೆಗೆ ಬರುವವರೆಗೆ…

ಬಿಹಾರದ ಈ ಮಹಿಳೆ ಹಸುವಿನ ದುಂಡಗಿನ ಸಗಣಿ ಚೆಂಡುಗಳನ್ನು ತಯಾರಿಸುತ್ತಿದ್ದು, ರಾಷ್ಟ್ರೀಯ ಆರ್ಥಿಕತೆಗೆ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಆದರೆ, ಅದನ್ನು ನಮ್ಮ ಜಿಡಿಪಿಯಲ್ಲಿ ಲೆಕ್ಕ ಹಾಕಲಾಗುವುದಿಲ್ಲ. ಹಸುವಿನ ಸಗಣಿಯನ್ನು ಇಂಧನವಾಗಿ ಬಳಸುವ ಲಕ್ಷಾಂತರ ಕುಟುಂಬಗಳು ಅದರ ಬದಲಿಗೆ ಅನಿಲ ಅಥವಾ ತೈಲ ಉರಿಸಲು ಆರಂಭಿಸಿದರೆ, ದುರಂತದ ಪರಿಸ್ಥಿತಿ ಉದ್ಭವಿಸುತ್ತದೆ. ಭಾರತವು ಯಾವುದೇ ಇತರ ಸರಕುಗಳಿಗಿಂತ ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚು ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತದೆ. 1999-2000 ವರ್ಷದಲ್ಲಿ, ಈ ಮೊತ್ತವು ರೂ 47,421 ಕೋಟಿಯಷ್ಟಿತ್ತು.

ಇದು ಆಹಾರ, ಖಾದ್ಯ ತೈಲಗಳು, ಔಷಧಿ ಮತ್ತು ಔಷಧೀಯ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕಿನ ಆಮದುಗಳ ಮೇಲೆ ನಾವು ಖರ್ಚು ಮಾಡುವ ವಿದೇಶಿ ವಿನಿಮಯದ ಮೂರು ಪಟ್ಟು ಹೆಚ್ಚು. ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳಿಗೆ ನಾವು ಖರ್ಚು ಮಾಡುವ ಮೊತ್ತವು ನಮ್ಮ ಒಟ್ಟು ಆಮದು ಮೊತ್ತದ ಸುಮಾರು ಕಾಲು ಭಾಗದಷ್ಟು ಇರುತ್ತದೆ.

ಇದು ನಾವು ರಸಗೊಬ್ಬರ ಆಮದಿನ ಮೇಲೆ ಖರ್ಚು ಮಾಡುವ ವಿದೇಶಿ ವಿನಿಮಯದ ಸುಮಾರು ಎಂಟು ಪಟ್ಟು ಹೆಚ್ಚು, ಅಂದರೆ $1.4 ಬಿಲಿಯನ್. ಸಗಣಿಯು ಒಂದು ಪ್ರಮುಖ ಸಾವಯವ ಗೊಬ್ಬರವಾಗಿದ್ದು, ಲಕ್ಷಾಂತರ ಜನರು ಬೆಳೆಗಳನ್ನು ಬೆಳೆಯಲು ಬಳಸುತ್ತಾರೆ. ಆದ್ದರಿಂದ, ಆ ವಿಭಾಗದಲ್ಲಿ ನಮಗಾಗಿ ಲೆಕ್ಕವಿಲ್ಲದಷ್ಟು ಮೊತ್ತವನ್ನು ಉಳಿಸಲು ಇದು ಕೆಲಸ ಮಾಡುತ್ತಿದೆ. ಇದು ಕೀಟನಾಶಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದಷ್ಟೇ ಅಲ್ಲದೆ, ಇನ್ನೂ ಅನೇಕ ಉಪಯೋಗಗಳನ್ನು ಹೊಂದಿದೆ. ನಿಮಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಹುದು. ದೇಶಾದ್ಯಂತ ಹಸುವಿನ ಸಗಣಿ ಸಂಗ್ರಹಿಸುವ ಮಹಿಳೆಯರಿದ್ದಾರೆ - ಮತ್ತು ಇದು 'ಮಹಿಳೆಯರ ಕೆಲಸ' – ಈ ಮೂಲಕ ಭಾರತಕ್ಕೆ ಲಕ್ಷಾಂತರ, ಬಹುಶಃ ಶತಕೋಟಿ ಡಾಲರ್‌ಗಳನ್ನು ವರ್ಷಕ್ಕೆ ಉಳಿಸುತ್ತಿದ್ದಾರೆ. ಆದರೆ ಹಸುವಿನ ಸಗಣಿ ಸ್ಟಾಕ್ ಎಕ್ಸ್ಚೇಂಜಿನಲ್ಲಿ ನೋಂದಾಯಿಸಲ್ಪಟ್ಟಿಲ್ಲದ ಕಾರಣ, ಮತ್ತು ಬಹುಶಃ ಅವರು ಅದನ್ನು ಸಂಗ್ರಹಿಸುವ ಮಹಿಳೆಯರ ಜೀವನದ ಬಗ್ಗೆ ಸ್ವಲ್ಪ ತಿಳಿದಿರುವ ಅಥವಾ ಅವರ ಕುರಿತು ಕಾಳಜಿ ವಹಿಸದ ಕಾರಣ - ಮುಖ್ಯವಾಹಿನಿಯ ಅರ್ಥಶಾಸ್ತ್ರಜ್ಞರು ಎಂದಿಗೂ ಅದರ ಬಗ್ಗೆ ಗಮನ ಹರಿಸುವುದಿಲ್ಲ. ಈ ಜನರು ಈ ರೀತಿಯ ಶ್ರಮವನ್ನು ನೋಡುವುದಿಲ್ಲ ಅಥವಾ ಗೌರವಿಸುವುದಿಲ್ಲ.

ವೀಡಿಯೊ ನೋಡಿ: 'ಆಕೆ ಬಾಗಿಕೊಂಡು ಸ್ವಚ್ಛಗೊಳಿಸುತ್ತಿದ್ದ ರೀತಿ, ತನ್ನ ಬೆನ್ನಿನ ಮೇಲೆ ಛಾವಣಿಯನ್ನು ಎತ್ತಿಹಿಡಿದಂತೆ ಇತ್ತು'

ಮಹಿಳೆಯರು ಹಸು ಮತ್ತು ಎಮ್ಮೆಗಳಿಗಾಗಿ ಮೇವು ಸಂಗ್ರಹಿಸುತ್ತಾರೆ. ಅವರು ಹಸುವಿನ ಸಗಣಿಗೆ ಒಣಹುಲ್ಲು ಮತ್ತು ಬೆಳೆ ಕಾಂಡಗಳನ್ನು ಬೆರೆಸಿ ಅಡುಗೆ ಇಂಧನವನ್ನು ತಯಾರಿಸುತ್ತಾರೆ. ಅದೂ ತನ್ನ ಸ್ವಂತ ಖರ್ಚಿನಲ್ಲಿ, ಮತ್ತು ಯಾವುದೇ ಆಯ್ಕೆಯಿಲ್ಲದೆ. ಸಗಣಿ ಸಂಗ್ರಹಿಸುವುದು ಆಯಾಸದಾಯಕ ಮತ್ತು ಅದನ್ನು ಬಳಸುವುದು ಕಷ್ಟ.

ಭಾರತವನ್ನು ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡುವಲ್ಲಿ ಲಕ್ಷಾಂತರ ಮಹಿಳೆಯರು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮತ್ತು ಇದು ಸಾಧ್ಯವಾಗಿರುವುದು ಭಾರತದ 100 ಮಿಲಿಯನ್ ಹಸುಗಳು ಮತ್ತು ಎಮ್ಮೆಗಳ ಹಾಲು ಕರೆಯಲು ಅವರು ಪ್ರಾಥಮಿಕವಾಗಿ ಜವಾಬ್ದಾರರಾಗಿರುವುದರಿಂದ ಮಾತ್ರವಲ್ಲ. ಆಂಧ್ರಪ್ರದೇಶದ ವಿಜಯನಗರದ ಈ ಮಹಿಳೆಗೆ ಆ ಹಸುವಿನ ಹಾಲು ಕರೆಯುವುದು ಸಣ್ಣ ಕೆಲಸ. ಅದಕ್ಕೆ ಮೇವು ಸಂಗ್ರಹಿಸಿ ಉಣಿಸಿ, ಸ್ನಾನ ಮಾಡಿಸಿ, ದನದ ಹಟ್ಟಿಯನ್ನು ಸ್ವಚ್ಛಗೊಳಿಸಿ, ಸಗಣಿ ಸಂಗ್ರಹಿಸುವುದು ಕೂಡಾ ಆಕೆಯದೇ ಕೆಲಸ. ಆಕೆಯ ನೆರೆಹೊರೆಯವರು ಈಗಾಗಲೇ ಹಾಲಿನ ಡೈರಿಯಲ್ಲಿ ಹಸುವಿನ ಹಾಲಿನೊಂದಿಗೆ ಹಾಜರಾಗಿದ್ದಾರೆ, ಅಲ್ಲಿ ಅವರು ಎಲ್ಲಾ ರೀತಿಯ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ಹೈನುಗಾರಿಕೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರ ಸಂಖ್ಯೆ ಶೇ.69ರಿಂದ ಶೇ.93ರಷ್ಟಿದೆ. ಅವರು ಹಾಲಿನ ಉತ್ಪನ್ನಗಳ ಹೆಚ್ಚಿನ ಸಂಸ್ಕರಣೆಯನ್ನು ಸಹ ಮಾಡುತ್ತಾರೆ. ಒಟ್ಟಾರೆಯಾಗಿ, ಎಲ್ಲಾ ಜಾನುವಾರುಗಳ ನಿರ್ವಹಣೆ ಮತ್ತು ಉತ್ಪಾದನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ.

PHOTO • P. Sainath

ನೆರೆಹೊರೆಯ ಇನ್ನೊಬ್ಬರು ಹೊಲದಿಂದ ಎಮ್ಮೆಗಳನ್ನು ಕರೆತರುತ್ತಿದ್ದಾರೆ. ಎಮ್ಮೆ ಸ್ವಲ್ಪ ಒತ್ತಡದಲ್ಲಿದೆ, ಏಕೆಂದರೆ ಅದು ನೋಡಲು ಚಿಕ್ಕದಾಗಿರುವ ಆದರೆ ಶಕ್ತಿಯುತ ಆಕ್ರಮಣಕಾರ ಪ್ರಾಣಿಯೊಂದನ್ನು ನೋಡಿದೆ: ಒಂದು ಸಣ್ಣ ನಾಯಿ ಅದರ ಕಾಲುಗಳ ಮೇಲೆ ದಾಳಿ ಮಾಡಲು ಕಾಯುತ್ತಿದೆ. ಮಹಿಳೆ ಎರಡೂ ಚಿಹ್ನೆಗಳನ್ನು ಗಮನಿಸಿದ್ದಾರೆ, ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಎಮ್ಮೆಯ ಮೇಲೆ ಕಣ್ಣಿಟ್ಟು ಸುರಕ್ಷಿತವಾಗಿ ಮನೆಗೆ ಹೊಡೆದುಕೊಂಡು ಹೋಗುತ್ತಾರೆ. ಇದು ಆಕೆಗೆ ದೈನಂದಿನ ಚಟುವಟಿಕೆ.

ಜಾನುವಾರುಗಳು ತಮ್ಮ ಹಾಲು ಅಥವಾ ಮಾಂಸದೊಂದಿಗೆ ಜನರಿಗೆ ಹಣವನ್ನು ನೀಡುವುದಲ್ಲದೆ, ಲಕ್ಷಾಂತರ ಬಡ ಭಾರತೀಯರಿಗೆ ಪ್ರಮುಖ ವಿಮಾ ರಕ್ಷಣೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ತೀವ್ರ ಸಂಕಟದ ಅವಧಿಯಲ್ಲಿ, ಎಲ್ಲಾ ಆದಾಯದ ಮೂಲಗಳು ಖಾಲಿಯಾದಾಗ, ಬಡ ಜನರು ಬದುಕಲು ತಮ್ಮ ಒಂದು ಅಥವಾ ಎರಡು ಜಾನುವಾರುಗಳನ್ನು ಮಾರಾಟ ಮಾಡುತ್ತಾರೆ. ಆದ್ದರಿಂದಲೇ ಅನೇಕ ಬಡ ಭಾರತೀಯರ ಸಂತೋಷವು ದೇಶದ ಜಾನುವಾರುಗಳ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಮತ್ತು ದನಗಳ ಆರೋಗ್ಯ ಮಹಿಳೆಯರ ಕೈಯಲ್ಲಿದೆ. ಆದರೂ, ಜಾನುವಾರುಗಳನ್ನು ಸಾಕಿಕೊಂಡು ನಿಯಂತ್ರಿಸುವ ಕೆಲವೇ ಕೆಲವು ಮಹಿಳೆಯರು ಇದ್ದಾರೆ. ಭಾರತದ 70,000 ಗ್ರಾಮ ಮಟ್ಟದ ಡೈರಿ ಸಹಕಾರಿಗಳಲ್ಲಿ ಹೆಚ್ಚಿನವು ಪುರುಷರ ಪ್ರಾಬಲ್ಯ ಹೊಂದಿವೆ. ಈ ಸಮಿತಿಗಳ ಒಟ್ಟು ಸದಸ್ಯರಲ್ಲಿ ಶೇ.18ರಷ್ಟು ಮಹಿಳೆಯರು ಮಾತ್ರ ಇದ್ದಾರೆ. ಡಿಸಿ ಮಂಡಳಿಯ ಸದಸ್ಯರಲ್ಲಿಯೂ ಅವರ ಸಂಖ್ಯೆ ಶೇಕಡಾ ಮೂರಕ್ಕಿಂತ ಕಡಿಮೆ.

PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru