ಆಗ ಮಧ್ಯಾಹ್ನದ ಸಮಯ. ಕತ್ಕರಿವಡಿಯ ನಡ್ಸರ್‍ನ ದೇವಸ್ಥಾನದ ಹೊರಗೆ ಕೆಲವು ಕಾರುಗಳು ಬಂದು ನಿಂತವು. ಯಾರು ಬಂದರೆಂದು ಇಣುಕಿ ನೋಡಿದ ವಿಷ್ಣು ವಘ್ಮರೆ, ಕತ್ಕರಿ ಭಾಷೆಯಲ್ಲಿ ಏನೋ ಹೇಳಿದ. ಸುಮಾರು 15 ಜನ ಗಂಡಸರು ಹಾಗೂ ಸ್ತ್ರೀಯರಾದಿಯಾಗಿ ಬಂದವರನ್ನು ಸ್ವಾಗತಿಸಲು ಹೊರಗೆ ಬಂದರು.
"ಅವರು ಹೆಚ್ಚಿನ ಸಂಖ್ಯೆಯ ಕೂಲಿಗಳನ್ನು ಕರೆದೊಯ್ಯಲು ಬಂದಿದ್ದು, ಅವರೆಲ್ಲರೂ ಈಗ ಮಾತುಕತೆಗೆ ಕುಳಿತುಕೊಳ್ಳುತ್ತಾರೆ. ನಮ್ಮಲ್ಲಿನ ಹೆಚ್ಚು ಜನಕ್ಕೆ ಈ ಮುಖದ್ದಮ್‍ಗಳಿಂದ (ಗುತ್ತಿಗೆದಾರರು) ಮೂರ್ಖರಾಗುತ್ತಿದ್ದೇವೆಂಬುದು ತಿಳಿದಿಲ್ಲ. ಅವರು ನಮ್ಮನ್ನು ಶೋಷಿಸಿದರೂ ಸಹ ಅವರ ಕೆಲಸಗಳಿಗಾಗಿ ಮತ್ತೆ ಅವರಲ್ಲಿಗೇ ಹೋಗುತ್ತೇವೆ. ನಾನೆಂದೂ ಭಟ್ಟಿಗೆ ಹೋಗುವುದಿಲ್ಲ," ಎನ್ನುತ್ತಾನೆ 21 ವರ್ಷ ವಯಸ್ಸಿನ ವಿಷ್ಣು. ಆತನು ಹತ್ತಿರದ ಹಳ್ಳಿಗಳಲ್ಲಿ ಆಗಾಗ ತನಗೆ ದೊರಕಿದ ಕೆಲಸಗಳನ್ನು ಮಾಡುತ್ತಾನೆ.
ಮಹಾರಾಷ್ಟ್ರದ ರಾಯ್‍ಗಡ್ ಜಿಲ್ಲೆಯ (ಜನಗಣತಿಯ ದಾಖಲೆಗಳಲ್ಲಿ ಇದನ್ನು ರಾಯ್ಘರ್ ಎನ್ನುತ್ತಾರೆ.) ಸುದ್ಘಡ್ ಕ್ಷೇತ್ರದ (ಬ್ಲಾಕ್) ನಡ್ಸರ್ ಪಂಚಾಯತ್‍ನಲ್ಲಿ, ನಡ್ಸರ್ ಕತ್ಕರಿವಡಿಯು ಒಂದು ಸಣ್ಣ ಹಳ್ಳಿ. ಇಲ್ಲಿನ ಸಮುದಾಯವನ್ನು ನಿರ್ದಿಷ್ಟವಾಗಿ ಹಿಂದುಳಿದ ಬುಡಕಟ್ಟು ಎಂಬುದಾಗಿ ದಾಖಲಿಸಲಾಗಿದೆ. ಇಲ್ಲಿನ 360 ಕತ್ಕರಿ ಆದಿವಾಸಿಗಳಲ್ಲಿ ಬಹುತೇಕರು ದೀಪಾವಳಿಯ ನಂತರ ಸಾಮಾನ್ಯವಾಗಿ, ನವೆಂಬರ್ ತಿಂಗಳ ಮಧ್ಯಂತರದಲ್ಲಿ ವಲಸೆ ಹೋಗುತ್ತಾರೆ. ಆಂಧ್ರ ಪ್ರದೇಶ, ಕರ್ನಾಟಕ, ಚಿಪ್ಲನ್, ಅಮರಾವತಿ ಮತ್ತು ಮಹಾರಾಷ್ಟ್ರದ ಇತರೆ ಕೆಲವು ಸ್ಥಳಗಳ ಇದ್ದಿಲಿನ ಗೂಡುಗಳಲ್ಲಿ ಕೆಲಸ ಮಾಡುವ ಇವರು, ಜೂನ್ ತಿಂಗಳ ಪ್ರಾರಂಭದಲ್ಲಿ ಹಳ್ಳಿಗೆ ವಾಪಸ್ಸಾಗುತ್ತಾರೆ. ಈ ಭಟ್ಟಿಗಳಲ್ಲಿ ಬಬೂಲ್ ಮರಗಳಿಂದ ಇದ್ದಿಲನ್ನು ತಯಾರಿಸಲಾಗುತ್ತದೆ. ಹೋಟೆಲ್ಲುಗಳಲ್ಲಿನ ಬಾರ್ಬೆಕ್ಯೂ ಮತ್ತು ತಂದೂರ್‍ಗಳಿಗೆ ಇವನ್ನು ಬಳಸಲಾಗುತ್ತದೆ.
ಈ ಕೂಲಿಗಳನ್ನು ಕೊಂಡೊಯ್ಯುವ ಟ್ರಕ್‍ಗಳು ಮಹಾರಾಷ್ಟ್ರದೊಳಗಿನ ಇದ್ದಿಲಿನ ಗೂಡುಗಳನ್ನು ಸುಮಾರು 18 ಗಂಟೆಗಳಲ್ಲಿ ತಲುಪುತ್ತವೆ. 38 ಗಂಟೆಗಳಲ್ಲಿ ಅವು ಇತರೆ ರಾಜ್ಯಗಳನ್ನು ತಲುಪುತ್ತವೆ. ಬಯಲು ಪ್ರದೇಶದಲ್ಲಿ ಒಣಹುಲ್ಲು, ಬಿದಿರು ಹಾಗೂ ಕಬ್ಬಿನ ಜಲ್ಲೆಗಳ ನಿರುಪಯುಕ್ತ ವಸ್ತುಗಳಿಂದ ಅಷ್ಟೇನು ಭದ್ರವಿಲ್ಲದ ಕಚ್ಚಾ ವಾಸದ ಮನೆಗಳನ್ನು ಇವರು ನಿರ್ಮಿಸಿಕೊಳ್ಳುತ್ತಾರೆ. ವಿದ್ಯುತ್ ಅಥವಾ ಶೌಚಗೃಹಗಳಿಲ್ಲದ ಈ ಮನೆಗಳಲ್ಲಿ ವಾಸಿಸುವ ಅವರಿಗೆ ಕಾಡು ಪ್ರಾಣಿಗಳು ಹಾಗೂ ಹಾವುಗಳ ಆತಂಕ ನಿರಂತರ.






