“ಈ 58 ಒಂಟೆಗಳನ್ನು ನಾವು ಮುಟ್ಟುಗೋಲು ಹಾಕಿಕೊಂಡಿಲ್ಲ,” ಎನ್ನುತ್ತಾರೆ ಅಮರಾವತಿ ಜಿಲ್ಲೆಯ ತೆಲಂಗಾಣ ದಶಾಸರ್‌ ಪೊಲೀಸ್‌ ಠಾಣೆಯ ಉಸ್ತುವಾರಿ ಸಬ್‌ಇನ್‌ಸ್ಪೆಕ್ಟರ್‌ ಅಜಯ್‌ ಅಕಾರೆ ಸ್ಪಷ್ಟಪಡಿಸಿದರು. “ಈ ಪ್ರಾಣಿಗಳ ಮೇಲೆ ನಡೆಯವ ಹಿಂಸೆಯನ್ನು ನಿಯಂತ್ರಿಸುವ ಯಾವುದೇ ಕಾನೂನು ಮಹಾರಾಷ್ಟ್ರದಲ್ಲಿ ಇಲ್ಲದೆ ಇರುವುದರಿಂದ, ನಮಗೆ ಆ ರೀತಿ ಮಾಡಲು ಯಾವುದೇ ರೀತಿಯ ಅಧಿಕಾರ ಇರುವುದಿಲ್ಲ, ಎಂದರು.

“ಒಂಟೆಗಳು,” ಈಗ “ವಶದಲ್ಲಿವೆ,” ಎಂದು ಅವರು ಹೇಳಿದರು.

ಇದರಿಂದಾಗಿ ಅವುಗಳ ಆರೈಕೆ ನೋಡಿಕೊಳ್ಳುವವರು ಕೂಡ ಹೌದು, ಆದರೆ ಅದಕ್ಕೆ ಅಮರಾವತಿಯಲ್ಲಿ ಸ್ಥಳೀಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವಿದೆ. ಬಂಧಿತರಾಗಿದ್ದ ಐವರು ಗುಜರಾತ್‌ನ ಕಚ್ಛ್‌ ಜಿಲ್ಲೆಯ ಅರೆ ಅಲೆಮಾರಿ ಪಶುಗಾಹಿಗಳಲ್ಲಿ, ನಾಲ್ವರು ರಬರಿ ಸಮುದಾಯದಿಂದ ಬಂದವರು ಒಬ್ಬ ಫಕಿರಾನಿ ಜಾಟ್‌. ಈ ಎರಡು ಸಾಮಾಜಿಕ ಸಮುದಾಯಗಳು ಹಲವು ಪೀಳಿಗೆ ಮತ್ತು ಶತಮಾನಗಳಿಂದ ಸಾಂಪ್ರದಾಯಿಕ ಪಶುಗಾಹಿ ಕೆಲಸ ಮಾಡುತ್ತಿದ್ದರು. ಸ್ವಯಂ ಘೋಷಿತ ʼಪ್ರಾಣಿ ಹಕ್ಕುಗಳ ಕಾರ್ಯಕರ್ತರು,ʼ ನೀಡಿದ ದೂರನ್ನು ಆಧರಿಸಿ ಬಂಧಿಸಲಾಗಿದ್ದ ಈ ಐವರನ್ನು ಜಿಲ್ಲಾನ್ಯಾಯಾಧೀಶರು ಕೂಡಲೇ ಬಿಡುಗಡೆ ಮಾಡಿ, ಎಲ್ಲರಿಗೂ ಬೇಷರತ್ತು ಜಾಮೀನು ಘೋಷಿಸಿದರು.

“ಒಂಟೆಗಳನ್ನು ಖರೀದಿ ಮಾಡಿರುವ ಬಗ್ಗೆ ಅಥವಾ ಅವುಗಳನ್ನು ಹೊಂದಿರುವ ಬಗ್ಗೆ ದೃಢೀಕರಿಸುವ ಯಾವುದೇ ರೀತಿಯ ಕಾಗದಪತ್ರಗಳು ಈ ಆರೋಪಿತರಲ್ಲಿ ಇಲ್ಲ. ಅವರ ಸ್ವಂತ ನಿವಾಸಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ,” ಎಂದರು ಅಕಾರೆ. ಇದರ ಬೆನ್ನಲ್ಲೇ  ಅಲೆಮಾರಿ ಪಶುಪಾಲಕರು, ಒಂಟೆಗಳು ಮತ್ತು ಅದರ ಮಾಲಿಕರ ಗುರುತಿಗಾಗಿ ನ್ಯಾಯಾಲಯಕ್ಕೆ ಸಲ್ಲಿಸಲು ನೀಡಿರುವ ಗುರುತಿನ ಚೀಟಿ ಕುತೂಹಲವನ್ನು ಕೆರಳಿಸಿದೆ. ಎರಡು ಅರೆ-ಅಲೆಮಾರಿ ಕುರಿಗಾಹಿ ಗುಂಪಿಗೆ ಸೇರಿದವರ ಸಂಬಂಧಿಕರು ಮತ್ತು ಇತರ ಸದಸ್ಯರ ಹೆಸರಿನಲ್ಲಿ ಇವರನ್ನು ಕಳುಹಿಸಲಾಗಿದೆ.

ತಮ್ಮನ್ನು ಕಾಯುವವರಿಂದ ಪ್ರತ್ಯೇಕಿಸಲ್ಪಟ್ಟ ಒಂಟೆಗಳು ಗೋರಕ್ಷಾ ಕೇಂದ್ರದಲ್ಲಿದ್ದು ಸೊರಗಿವೆ. ಇಲ್ಲಿ ಗೋವುಗಳ ಆರೈಕೆ ಮಾಡಲಾಗುತ್ತಿದೆ, ಆದರೆ ಒಂಟೆಗಳನ್ನು ತರಿಸಲಾಗಿದ್ದು ಇವುಗಳಿಗೆ ಯಾವ ರೀತಿಯ ಆಹಾರ ಎಂಬುದೇ ಅಲ್ಲಿರುವವರಿಗೆ ತಿಳಿಯದಾಗಿದೆ. ಒಂಟೆ ಮತ್ತು ದನ ಎರಡೂ ಮೆಲುಕು ಹಾಕುವ ಪ್ರಾಣಿಗಳು. ಮತ್ತು ಆಹಾರ ಪದ್ಧತಿಯಲ್ಲೂ ದನಗಳು ಭಿನ್ನವಾಗಿವೆ. ಈ ಪ್ರಕರಣ ಬಹಳ ಸಮಯದವರೆಗೂ ಮುಂದುವರಿದರೆ ಸವಾರಿ ಒಂಟೆಯಾಗಿರುವ ಇವುಗಳ ಬದುಕು ದನಗಳ ಕೊಟ್ಟಿಗೆಯಲ್ಲಿ ಇನ್ನು ಸಂಕಷ್ಟದ ಹಂತ ತಲುಪಬಹುದು.

Rabari pastoralists camping in Amravati to help secure the release of the detained camels and their herders
PHOTO • Jaideep Hardikar

58 ' ಬಂಧನಕ್ಕೊಳಗಾಗಿರುವ ' ಒಂಟೆಗಳು ಮತ್ತು ಅವುಗಳ ಪಾಲಕರ ಬಿಡುಗಡೆಗೆ ಸಹಾಯ ಮಾಡಲು ಅಮರಾವತಿಯಲ್ಲಿ ಬಿಡಾರ ಹೂಡಿರುವ ಕೆಲವು ರಬರಿ ಪಶುಪಾಲಕರು

*****

ಒಂಟೆಯು ರಾಜಸ್ಥಾನದ ರಾಜ್ಯ ಪ್ರಾಣಿ ಮತ್ತು ಇತರ ರಾಜ್ಯಗಳಲ್ಲಿ ಅದು ಹೊಂದಿಕೊಳ್ಳುವುದಿಲ್ಲ.
ಜಸ್‌ರಾಜ್‌ ಶ್ರೀಶ್ರೀಮಾಲ್‌, ಭಾರತೀಯ ಪ್ರಾಣಿಮಿತ್ರ ಸಂಘ, ಹೈದರಾಬಾದ್‌

ಇವೆಲ್ಲ ಆರಂಭಗೊಂಡಿದ್ದು ಆಳವಾದ ಅನುಮಾನದಲ್ಲೇ.

2022 ಜನವರಿ 7ರಂದು ಹೈದರಾಬಾದ್‌ ಮೂಲದ ಪ್ರಾಣಿ ಸೇವಾ ಕಾರ್ಯಕರ್ತ 71 ವರ್ಷದ ಜಸ್‌ರಾಜ್‌ ಶ್ರೀಶ್ರೀಮಾಲ್‌ ಐವರು ಪಶುಪಾಲಕರು ಹೈದರಾಬಾದ್‌ನ ಕಸಾಯಿಖಾನೆಗಳಿಗೆ ಅಕ್ರಮವಾಗಿ ಒಂಟೆಗಳನ್ನು ಸಾಗಿಸುತ್ತಿದ್ದಾರೆ ಎಂದು  ತೆಲಂಗಾಣದ ದಶಾಸರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಕೂಡಲೇ ಆ ವ್ಯಕ್ತಿಗಳು ಮತ್ತು ಒಂಟೆಗಳನ್ನು ವಶಕ್ಕೆ ತೆಗೆದುಕೊಂಡರು. ಅಷ್ಟಕ್ಕೂ ಶ್ರೀಶ್ರೀಮಾಲ್‌ ಈ ಪಶುಪಾಲಕರನ್ನು ಎದುರಿಸಿದ್ದು ಮಹಾರಾಷ್ಟ್ರದ ವಿದರ್ಭ ವಲಯದಲ್ಲೇ ಹೊರತು ಹೈದರಾಬಾದ್‌ನಲ್ಲಿ ಅಲ್ಲ.

“ನಾನು ನನ್ನ ಸಹೋದ್ಯೋಗಿಯೊಂದಿಗೆ ಅಮರಾವತಿಯನ್ನು ಬಿಟ್ಟು ನಿಮ್ಗಾವಹಾನ್‌ ಗ್ರಾಮ [ಚಂದೂರ್‌ ರೈಲ್ವೆ ತಾಲೂಕು] ತಲುಪಿದೆ, ಇಲ್ಲಿ ಗದ್ದೆಯೊಂದರಲ್ಲಿ ನಾಲ್ಕು ಅಥವಾ ಐದು ಜನರು ಒಂಟೆಗಳೊಂದಿಗೆ ಶಿಬಿರದಲ್ಲಿದ್ದರು. ಲೆಕ್ಕ ಹಾಕಿದಾಗ ಒಟ್ಟು 58 ಒಂಟೆಗಳಿದ್ದವು- ಅವುಗಳ ಕಾಲು ಮತ್ತು ಕುತ್ತಿಗೆಯನ್ನು ಕಟ್ಟಲಾಗಿತ್ತು. ಹಾಗೆ ಮಾಡುವುದರಿಂದ ಅವುಗಳಿಗೆ ಸರಿಯಾಗಿ ನಡೆಯಲಾಗುವುದಿಲ್ಲ, ಈ ರೀತಿಯಲ್ಲಿ ಅವುಗಳಿಗೆ ಹಿಂಸೆ ನೀಡಲಾಗಿತ್ತು. ಅವುಗಳಲ್ಲಿ ಕೆಲವು ಗಾಯಗೊಂಡಿದ್ದವು, ಅವುಗಳಿಗೆ ಈ ಒಂಟೆಗಾಹಿಗಳು ಯಾವುದೇ ರೀತಿಯ ಔಷಧ ಹಾಕಿರಲಿಲ್ಲ. ಒಂಟೆಯು ರಾಜಸ್ಥಾನದ ಪ್ರಾಣಿ, ಅದು ಇತರ ರಾಜ್ಯದ ಹವಾಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಅಲ್ಲಿರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ ಮತ್ತು ಒಂಟೆಗಳನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ ಎನ್ನುವುದರ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ,” ಎಂದು ಶ್ರೀಶ್ರೀಮಾಲ್‌ ದೂರಿನಲ್ಲಿ ಹೇಳಿದ್ದಾರೆ.

ವಾಸ್ತವವಾಗಿ ಒಂಟೆಗಳು ರಾಜಸ್ಥಾನ, ಗುಜರಾತ್‌ ಮತ್ತು ಹರಿಯಾಣದಲ್ಲಿ ಹೆಚ್ಚಾಗಿ ವಾಸಿಸುತ್ತವೆ ಮತ್ತು ಕೆಲವು ಇತರ ಸ್ಥಳಗಳಲ್ಲೂ ಅನಿರೀಕ್ಷಿತವಾಗಿ ಕಾಣಬಹುದು. ಆದರೆ ಇವುಗಳ ಸಂತನಾಭಿವೃದ್ಧಿಯು ರಾಜಸ್ಥಾನ ಮತ್ತು ಗುಜರಾತ್‌ಗೆ ಸೀಮಿತವಾಗಿದೆ. 20ನೇ ಲೈವ್‌ಸ್ಟಾಕ್‌ ಸೆನ್ಸಸ್‌-2019 ಪ್ರಕಾರ ಭಾರತದಲ್ಲಿರುವುದು ಒಟ್ಟು ಕೇವಲ 250,000 ಒಂಟೆಗಳು. ಇದು 2012ರ ಗಣತಿಗೆ ಹೋಲಿಸಿದರೆ ಸಂಖ್ಯೆಯಲ್ಲಿ 37 ಪ್ರತಿಶತ ಕುಸಿತ ಕಂಡಿದೆ.

The camels, all male and between two and five years in age, are in the custody of a cow shelter in Amravati city
PHOTO • Jaideep Hardikar

ಇಲ್ಲಿರುವ ಒಂಟೆಗಳು, ಎಲ್ಲವೂ ಗಂಡು ಮತ್ತು ಎರಡರಿಂದ ಐದು ವರ್ಷ ವಯಸ್ಸಿನವು, ಪ್ರಸ್ತುತ ಅಮರಾವತಿ ನಗರದ ಗೋಶಾಲೆಯ ವಶದಲ್ಲಿವೆ

ಈ ಐವರು ಅನುಭವಿ ಪಶುಗಾಹಿಗಳು ಬೃಹತ್‌ ಪ್ರಾಣಿಗಳನ್ನು ಸಾಗಾಟ ಮಾಡುವಲ್ಲಿಯೂ  ಅನುಭವ ಹೊಂದಿದ್ದಾರೆ. ಎಲ್ಲಾ ಐವರೂ ಗುಜರಾತ್‌ನ ಕಚ್ಛ್‌ನಿಂದ ಬಂದವರು. ಅವರು ಇದುವರೆಗೂ ಹೈದರಾಬಾದ್‌ ನೋಡಿದವರಲ್ಲ.

ಈ ಐವರು ಅನುಭವಿ ಪಶುಗಾಹಿಗಳು ಬೃಹತ್‌ ಪ್ರಾಣಿಗಳನ್ನು ಸಾಗಾಟ ಮಾಡುವಲ್ಲಿಯೂ  ಅನುಭವ ಹೊಂದಿದ್ದಾರೆ. ಎಲ್ಲಾ ಐವರೂ ಗುಜರಾತ್‌ನ ಕಚ್ಛ್‌ನಿಂದ ಬಂದವರು. ಅವರು ಇದುವರೆಗೂ ಹೈದರಾಬಾದ್‌ ನೋಡಿದವರಲ್ಲ.  “ಆ ಗಂಡಸರಿಂದ ನನಗೆ ಯಾವುದೇ ರೀತಿಯ ಸ್ಪಷ್ಟ ಉತ್ತರ ಸಿಗಲಿಲ್ಲ, ಇದು ನನ್ನಲ್ಲಿ ಸಂಶಯ ಉದ್ಭವಿಸುವಂತೆ ಮಾಡಿತು,” ಎಂದು ಶ್ರೀಶ್ರೀಮಾಲ್‌ ಹೈದರಾಬಾದ್‌ನಿಂದ ʼಪರಿʼಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. “ಒಂಟೆಗಳನ್ನು ಅಕ್ರಮವಾಗಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ,” ಎಂದು ಹೇಳಿರುವ ಅವರು, ಭಾರತೀಯ ಪ್ರಾಣಿ ಮಿತ್ರ ಸಂಘ ಕಳೆದ ಐದು ವರ್ಷಗಳಲ್ಲಿ ಭಾರತದಾದ್ಯಂತ 600ಕ್ಕೂ ಹೆಚ್ಚು ಒಂಟೆಗಳನ್ನು ರಕ್ಷಿಸಿದೆ ಎಂದರು.

ಈ ರೀತಿ ರಕ್ಷಣೆ ಮಾಡಿರುವುದು ಗುಲ್ಬರ್ಗಾ, ಬೆಂಗಳೂರು, ಅಕೋಲಾ ಮತ್ತು ಹೈದರಾಬಾದ್‌ ಸೇರಿಂದಂತೆ ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ಅವರು. ತಮ್ಮ ಸಂಘಟನೆಯು ʼರಕ್ಷಿಸಿದʼ ಪ್ರಾಣಿಗಳನ್ನು ರಾಜಸ್ಥಾನಕ್ಕೆ ʼಬಿಟ್ಟುಬಂದಿದೆʼ ಎಂದಿದ್ದಾರೆ. ಹೈದರಾಬಾದ್‌ ಸೇರಿಂದಂತೆ ದೇಶಾದ್ಯಂತ ಇತರ ಕೇಂದ್ರಗಳಲ್ಲೂ ಒಂಟೆ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ. ಆದರೆ ಸಂಶೋಧಕರು ಮತ್ತು ವ್ಯಾಪಾರಸ್ಥರ ಪ್ರಕಾರ ಕೇವಲ ವಯಸ್ಸಾದ ಗಂಡು ಒಂಟೆಯನ್ನು ಮಾತ್ರ ಕಟುಕರಿಗೆ ಮಾರಾಟ ಮಾಡುತ್ತಾರೆ.

ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ನೇತೃತ್ವ ವಹಿಸಿರುವ ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರೊಂದಿಗೆ ಶ್ರೀಶ್ರೀಮಲ್ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ, "ದೊಡ್ಡ ದಂಧೆಯಿದೆ ಮತ್ತು ಈ ಗುಂಪು ಉತ್ತರ ಪ್ರದೇಶದ ಬಾಗ್ಪತ್‌ನಿಂದ ನಡೆಸಲಾಗುತ್ತದೆ. ಒಂಟೆಗಳನ್ನು ಬಾಂಗ್ಲಾದೇಶಕ್ಕೂ ಕರೆದೊಯ್ಯಲಾಗುತ್ತದೆ. ಇಷ್ಟೊಂದು ಒಂಟೆಗಳನ್ನು ಒಟ್ಟಿಗೆ ಹೊಂದುವ ಪ್ರಶ್ನೆಯೇ ಇಲ್ಲ."

ಪ್ರಾಥಮಿಕ ವಿಚಾರಣೆಯ ನಂತರ, ಪೊಲೀಸರು ಜನವರಿ 8ರಂದು ಮೊದಲ ಮಾಹಿತಿ ವರದಿಯನ್ನು ದಾಖಲಿಸಿದರು. ಮಹಾರಾಷ್ಟ್ರದಲ್ಲಿ ಒಂಟೆ ರಕ್ಷಣೆಗೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದ ಕಾರಣ, ಪೊಲೀಸರು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ, 1960 ರ ಸೆಕ್ಷನ್ 11 (1)(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಭು ರಾಣಾ, ಜಗ ಹೀರಾ, ಮೂಸಾಭಾಯಿ ಹಮೀದ್ ಜಾಟ್ (ಇವರೆಲ್ಲರೂ 40ರ ಪ್ರಾಯದವರು); ವಿಸಾಭಾಯಿ ಸರವು, (50) ಮತ್ತು ವರ್ಸಿಭಾಯ್ ರಾಣಾ ರಬರಿ, (70) ಇವರೆಲ್ಲರನ್ನು ಆರೋಪಿತರೆಂದು ಪಟ್ಟಿ ಮಾಡಲಾಯಿತು.

Four of the traditional herders from Kachchh – Versibhai Rana Rabari, Prabhu Rana Rabari, Visabhai Saravu Rabari and Jaga Hira Rabari (from left to right) – who were arrested along with Musabhai Hamid Jat on January 14 and then released on bail
PHOTO • Jaideep Hardikar

ಕಚ್ಛ್‌ನ ಸಾಂಪ್ರದಾಯಿಕ ಪಶುಪಾಲಕರಾದ ವರ್ಸಿಭಾಯಿ ರಾಣಾ ರಬರಿ , ಪ್ರಭು ರಾಣಾ ರಬರಿ , ವಿಸಾಭಾಯಿ ಸರವು ರಬರಿ ಮತ್ತು ಜಗ ಹೀರಾ ರಬರಿ ( ಎಡದಿಂದ ಬಲಕ್ಕೆ ) ಅವರನ್ನು ಜನವರಿ 14 ರಂದು ಮೂಸಾಭಾಯಿ ಹಮೀದ್ ಜಾಟ್ ಅವರೊಂದಿಗೆ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು

ಇನ್ಸ್‌ಪೆಕ್ಟರ್ ಅಕಾರೆ ಹೇಳುವಂತೆ, 58 ಒಂಟೆಗಳನ್ನು ನೋಡಿಕೊಳ್ಳುವುದು ನಿಜವಾದ ಸವಾಲಾಗಿತ್ತು. ಎರಡು ರಾತ್ರಿಗಳವರೆಗೆ, ಅಮರಾವತಿಯಲ್ಲಿ ಇಷ್ಟು ದೊಡ್ಡ ಗುಂಪನ್ನು ನೋಡಿಕೊಳ್ಳಲು ಹತ್ತಿರದ ಗೋರಕ್ಷಾ ಕೇಂದ್ರದ ಸಹಾಯ ಪಡೆದರು. ಅಮರಾವತಿಯ ದಸ್ತೂರ್ ನಗರ ಪ್ರದೇಶದಲ್ಲಿರುವ ಈ ಕೇಂದ್ರವು ಸ್ವಯಂಪ್ರೇರಿತವಾಗಿ ಸಹಾಯಕ್ಕೆ ಮುಂದೆ ಬಂದಿತು, ಮತ್ತು ಅಲ್ಲಿ ಒಂಟೆಗಳನ್ನು ಇರಿಸಲು ಸಾಕಷ್ಟು ಸ್ಥಳಾವಕಾಶವಿತ್ತು, ಅಂತಿಮವಾಗಿ ಅಲ್ಲಿಗೆ ಕಳುಹಿಸಲಾಯಿತು.

ವಿಪರ್ಯಾಸವೆಂದರೆ, ಅವುಗಳನ್ನು ಸಾಗಿಸುವ ಕೆಲಸ ಆರೋಪಿಯ ಸಂಬಂಧಿಕರು ಮತ್ತು ಪರಿಚಿತರ ಮೇಲೆ ಬಿತ್ತು, ಅವರು ಎರಡು ದಿನಗಳಲ್ಲಿ ತಲೇಗಾಂವ್ ದಶಾಸರದಿಂದ ಅಮರಾವತಿ ಪಟ್ಟಣಕ್ಕೆ 55 ಕಿಲೋಮೀಟರ್ ನಡೆದು ಹೋದರು.

ಪಶುಗಾಹಿಗಳಿಗೆ ಬೆಂಬಲ ಹರಿದು ಬರುತ್ತಿದೆ. ಕಚ್ಛ್‌ನ ಕನಿಷ್ಟ ಮೂರು ಗ್ರಾಮ ಪಂಚಾಯಿತಿಗಳು ಒಂಟೆಗಳನ್ನು ಒಂದೆಡೆ ಕಟ್ಟಿ ಹಾಕಿದರೆ ಅವು ಹಸಿವಿನಿಂದ ಬಳಲುತ್ತವೆ, ಆದ್ದರಿಂದ ತೆರೆದ ಸ್ಥಳದಲ್ಲಿ ಮೇಯಲು ಅನುವಾಗುವಂತೆ ಒಂಟೆಗಳನ್ನು ಬಿಡುಗಡೆ ಮಾಡುವಂತೆ ಅಮರಾವತಿ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳಿಗೆ ಮನವಿಗಳನ್ನು ಕಳುಹಿಸಿವೆ, ನಾಗ್ಪುರ ಜಿಲ್ಲೆಯ ಮಕರಧೋಕಡ ಗ್ರಾಮ ಪಂಚಾಯತ್,  ವ್ಯಾಪ್ತಿಯಲ್ಲಿ ರಬರಿಗಳು ದೊಡ್ಡ  ಡೇರಾ  (ವಲಸೆ ನೆಲೆ) ಹೊಂದಿದ್ದಾರೆ, ಅವರು ಸಾಂಪ್ರದಾಯಿಕ ಪಶುಗಾಹಿಗಳು ಮತ್ತು ಒಂಟೆಗಳು ಹೈದರಾಬಾದಿನ ಕಸಾಯಿಖಾನೆಗೆ ಹೊಡೆದುಕೊಂಡು ಹೋಗುತ್ತಿರಲಿಲ್ಲ ಎಂಬ ಸಮುದಾಯದ ನಿಲುವನ್ನು ಆ ಪತ್ರವು ಅನುಮೋದಿಸಿದೆ. ಈಗ ಒಂಟೆಗಳನ್ನು ಇಲ್ಲಿಗೆ ಕರೆತಂದ ಆರೋಪಿಗಳಿಗೆ ಹಿಂತಿರುಗಿಸಬೇಕೆ ಅಥವಾ ಕಚ್ಛ್‌ಗೆ ಮರಳಿ ಕಳುಹಿಸಬೇಕೆ ಎನ್ನುವುದನ್ನು ಕೆಳ ನ್ಯಾಯಾಲಯವು ತೀರ್ಮಾನಿಸಲಿದೆ

ಅಂತಿಮ ಫಲಿತಾಂಶವು ಈ ಜನರು ಒಂಟೆಗಳ ಸಾಂಪ್ರದಾಯಿಕ ಪಾಲಕರೆಂದು ನ್ಯಾಯಾಲಯವು ನಂಬುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

*****

ನಮ್ಮ ಅಜ್ಞಾನವು ಸಾಂಪ್ರದಾಯಿಕ ಪಶುಗಾಹಿಗಳ ಕುರಿತ ಅನುಮಾನಕ್ಕೆ ಕಾರಣವಾಗುತ್ತದೆ ಏಕೆಂದರೆ ಅವರು ನಮ್ಮಂತೆ ಕಾಣುವುದಿಲ್ಲ ಅಥವಾ ಮಾತನಾಡುವುದಿಲ್ಲ .
ಸಜಲ್ ಕುಲಕರ್ಣಿ, ಪಶುಪಾಲಕ ಸಮುದಾಯಗಳ ಸಂಶೋಧಕ, ನಾಗಪುರ

ಈ ಐವರು ಪಶುಗಾಹಿಗಳಲ್ಲಿ ಅತ್ಯಂತ ಹಿರಿಯರಾದ ವರ್ಸಿಭಾಯಿ ರಾಣಾ ರಬರಿ ತನ್ನ ಒಂಟೆಗಳು ಮತ್ತು ಕುರಿಗಳ ಹಿಂಡುಗಳೊಂದಿಗೆ ಕಾಲ್ನಡಿಗೆಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸುತ್ತಾಡಿದ್ದಾರೆ, ಆದರೆ ಪ್ರಾಣಿಗಳ ಮೇಲಿನ ಕ್ರೌರ್ಯದ ಆರೋಪವನ್ನು ಎಂದಿಗೂ ಎದುರಿಸಿರಲಿಲ್ಲ.

ಇದೇ ಮೊದಲ ಬಾರಿಗೆ ಎಂದು ಸುಕ್ಕುಗಟ್ಟಿದ ಮುಖದ ಹಿರಿಯ ಕಛ್ಚಿ ಭಾಷೆಯಲ್ಲಿ ಹೇಳುತ್ತಾರೆ. ಅವರು ಪೊಲೀಸ್ ಠಾಣೆಯ ಮರದ ಕೆಳಗೆ ಮಡಚಿದ ಕಾಲುಗಳೊಂದಿಗೆ ಕುಳಿತಿದ್ದರು - ಚಿಂತೆ ಮತ್ತು ಮುಜುಗರದೊಂದಿಗೆ.

Rabaris from Chhattisgarh and other places have been camping in an open shed at the gauraksha kendra in Amravati while waiting for the camels to be freed
PHOTO • Jaideep Hardikar
Rabaris from Chhattisgarh and other places have been camping in an open shed at the gauraksha kendra in Amravati while waiting for the camels to be freed
PHOTO • Jaideep Hardikar

ಚತ್ತೀಸಗಢ ಮತ್ತು ಇತರ ಕಡೆಗಳಿಂದ ಬಂದ ರಬರಿಗಳು ಒಂಟೆಗಳನ್ನು ಬಿಡುಗಡೆಗಾಗಿ ಕಾಯುತ್ತಾ ಅಮರಾವತಿಯ ಗೋರಕ್ಷಾ ಕೇಂದ್ರದ ತೆರೆದ ಶೆಡ್ಡಿನಲ್ಲಿ ಬಿಡಾರ ಹೂಡಿದ್ದಾರೆ

"ನಾವು ಈ ಒಂಟೆಗಳನ್ನು ಕಛ್ಚ್‌ನಿಂದ ತಂದಿದ್ದೇವೆ" ಎಂದು ಐದು ಆರೋಪಿಗಳಲ್ಲಿ ಒಬ್ಬರಾದ ಪ್ರಭು ರಾಣಾ ರಬರಿ ಜನವರಿ 13ರಂದು ತಲೇಗಾಂವ್ ದಶಾಸರ್ ಪೊಲೀಸ್ ಠಾಣೆಯಲ್ಲಿ ನಮಗೆ ತಿಳಿಸಿದರು, "ಮಹಾರಾಷ್ಟ್ರ ಮತ್ತು ಚತ್ತೀಸಗಢದಲ್ಲಿ ವಾಸಿಸುವ ನಮ್ಮ ಸಂಬಂಧಿಕರಿಗೆ ಅವುಗಳನ್ನು ತಲುಪಿಸಲೆಂದು ತಂದಿದ್ದೆವು." ಅವರು ಹೀಗೆ ನಮ್ಮೊಡನೆ ಹೇಳಿದ್ದು ಜನವರಿ 14ರಂದು ಅವರನ್ನು ಔಪಚಾರಿಕವಾಗಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಒಂದು ದಿನ ಮೊದಲು.

ಭುಜ್‌ನಿಂದ ಕಚ್ಛ್‌ನ ಅಮರಾವತಿಗೆ ಹೋಗುವ ಮಾರ್ಗದಲ್ಲಿ ಯಾರೂ ಅವರನ್ನು ತಡೆದಿರಲಿಲ್ಲ. ಅವರು ತಪ್ಪು ಮಾಡಿರಬಹುದೆಂದು ಯಾರೂ ಅನುಮಾನಿಸಿರಲಿಲ್ಲ. ಅವರ ಪಾರಂಪರಿಕ ಪ್ರಯಾಣವು ಈ ಊಹಿಸಲಾಗದ ತಿರುವಿನೊಂದಿಗೆ ಇದ್ದಕ್ಕಿದ್ದಂತೆ ನಿಂತಿತು.

ಈ ಜಾನುವಾರುಗಳನ್ನು ವಾರ್ಧಾ, ನಾಗ್ಪುರ, ಭಂಡಾರ (ಮಹಾರಾಷ್ಟ್ರ) ಮತ್ತು ಚತ್ತೀಸಗಢದ ರಬರಿ ನೆಲೆಗಳಿಗೆ ತಲುಪಿಸಬೇಕಿತ್ತು.

ರಬರಿ ಸಮುದಾಯವು ಅರೆ ಅಲೆಮಾರಿ ಪಶುಗಾಹಿ ಸಮುದಾಯವಾಗಿದ್ದು, ಕಚ್ಛ್‌ ಮತ್ತು ರಾಜಸ್ಥಾನದ ಇತರ ಎರಡು ಅಥವಾ ಮೂರು ಗುಂಪುಗಳೊಂದಿಗೆ, ತಮ್ಮ ಜೀವನೋಪಾಯಕ್ಕಾಗಿ ಕುರಿ ಮತ್ತು ಆಡುಗಳನ್ನು ಸಾಕುತ್ತಾರೆ, ಜೊತಗೆ ಕೃಷಿ ಕೆಲಸ ಮತ್ತು ಸಾರಿಗೆಯಲ್ಲಿ ಬಳಸಲು ಒಂಟೆಗಳ ಸಂತಾನೋತ್ಪತ್ತಿಯನ್ನೂ ಮಾಡುತ್ತಾರೆ. ಇದನ್ನು ಕಛ್ಚ್ ಕ್ಯಾಮೆಲ್ ಬ್ರೀಡರ್ಸ್ ಅಸೋಸಿಯೇಷನ್ ಡಾಕ್ಯೂಮೆಂಟ್‌ ಮಾಡಿರುವ 'ಜೈವಿಕ ಸಾಂಸ್ಕೃತಿಕ ಸಮುದಾಯ ಶಿಷ್ಟಾಚಾರ'ದೊಳಗೆ ಮಾಡುತ್ತಾರೆ.

ಸಮುದಾಯದೊಳಗಿನ ಒಂದು ವಿಭಾಗವಾಗಿರುವ ಧೇಬರಿಯಾ ರಬರಿ ಜನರು ನೀರು ಮತ್ತು ಮೇವು ಹೆಚ್ಚು ಸಿಗುವ ದೇಶದ ದೂರ ದೂರದ ಭಾಗಗಳಿಗೆ ವಲಸೆ ಹೋಗುತ್ತಾರೆ. ಈಗ ಅವುಗಳಲ್ಲಿ ಸಾಕಷ್ಟು ಕುಟುಂಬಗಳು ಮಧ್ಯ ಭಾರತದ ಉದ್ದಕ್ಕೂ ವಲಸೆ ನೆಲೆಗಳಲ್ಲಿ ಅಥವಾ ಡೇರಾಗಳಲ್ಲಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರು ವಲಸೆ ಹೋಗುತ್ತಾರೆ. ಅವರು ದೀಪಾವಳಿ ಮುಗಿದ ನಂತರ ಕಾಲ್ನಡಿಗೆಯಲ್ಲಿ ಕಚ್ಛ್‌ನಿಂದ ದೂರದ ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಚತ್ತೀಸಗಢ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದವರೆಗೆ ಹೋಗುತ್ತಾರೆ.

ಮಧ್ಯ ಭಾರತದಲ್ಲಿ ಧೇಬಾರಿಯಾ ರಬರಿಗಳ ಕನಿಷ್ಠ 3,000 ವಲಸೆ ನೆಲೆಗಳಿವೆಯೆಂದು ನಾಗ್ಪುರ ಮೂಲದ ಪಶುಪಾಲಕರು ಮತ್ತು ಸಾಂಪ್ರದಾಯಿಕ ಜಾನುವಾರು ಪಾಲಕರ ಕುರಿತ ಸಂಶೋಧಕರಾದ ಸಜಲ್ ಕುಲಕರ್ಣಿ ಹೇಳುತ್ತಾರೆ. Revitalising Rainfed Agriculture Network (RRAN)ನ ಸಹವರ್ತಿಯಾಗಿರುವ ಕುಲಕರ್ಣಿ, ಒಂದು ಡೇರಾದಲ್ಲಿ ಸಾಧಾರಣವಾಗಿ 5-10 ಕುಟುಂಬಗಳು, ಒಂಟೆಗಳು ಮತ್ತು ದೊಡ್ಡ ಕುರಿ ಮತ್ತು ಮೇಕೆಗಳ ಹಿಂಡುಗಳನ್ನು ಮಾಂಸಕ್ಕಾಗಿ ಸಾಕುತ್ತಾರೆ ಎಂದು ಹೇಳುತ್ತಾರೆ.

Jakara Rabari and Parbat Rabari (first two from the left), expert herders from Umred in Nagpur district, with their kinsmen in Amravati.They rushed there when they heard about the Kachchhi camels being taken into custody
PHOTO • Jaideep Hardikar

ಜಕಾರರಾ ರಬರಿ ಮತ್ತು ಪರ್ಬತ್ ರಬರಿ ( ಎಡದಿಂದ ಮೊದಲ ಇಬ್ಬರು ) , ನಾಗ್ಪುರ ಜಿಲ್ಲೆಯ ಉಮ್ರೆಡ್‌ನ ಪರಿಣತ ಪಶುಪಾಲಕರು , ಅವರ ಸಂಬಂಧಿಕರೊಂದಿಗೆ . ಒಂಟೆಗಳು ಮತ್ತು ಅದರ ಪಾಲಕರನ್ನು ಬಂಧಿಸಿದ ಸುದ್ದಿ ತಿಳಿದ ತಕ್ಷಣ ಕಚ್ಛ್‌ನಿಂದ ಧಾವಿಸಿದರು

ಕುಲಕರ್ಣಿಯವರು ದಶಕಕ್ಕೂ ಹೆಚ್ಚು ಕಾಲದಿಂದ ಪಶುಪಾಲಕರು ಮತ್ತು ಅವರು ಪಾಲನೆ ಮಾಡುವ ಜಾನುವಾರುಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ರಬರಿ ಸಮುದಾಯವೂ ಅವರ ಸಂಶೋಧನೆಯ ಭಾಗವಾಗಿದೆ. ಅವರು ಹೇಳುವಂತೆ, ಪಶುಪಾಲಕರನ್ನು ಬಂಧಿಸಿದ ಮತ್ತು ಒಂಟೆಗಳನ್ನು ʼವಶಕ್ಕೆ ಪಡೆದʼ “ಈ ಘಟನೆ,” “ಪಶುಪಾಲಕರ ಕುರಿತು ಜನರಿಗಿರುವ ಅಜ್ಞಾನದ ಸಂಕೇತವಾಗಿದೆ. ನಮ್ಮ ಈ ಅಜ್ಞಾನವು ಸಾಂಪ್ರದಾಯಿಕ ಪಶುಪಾಲಕರನ್ನು ಅನುಮಾನದಿಂದ ನೋಡುವಂತೆ ಮಾಡುತ್ತದೆ. ಅವರು ನಮ್ಮಂತೆ ಕಾಣದಿರುವುದು, ನಮ್ಮಂತೆ ಮಾತನಾಡದಿರುವುದು ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತದೆ.”

ಇತ್ತೀಚೆಗೆ ಸಾಕಷ್ಟು ರಬರಿ ಸಮುದಾಯದ ಕುಟುಂಬಗಳು ಒಂದೆಡೆ ನೆಲೆ ನಿಲ್ಲಲಾರಂಭಿಸಿವೆ ಎನ್ನುತ್ತಾರೆ ಕುಲಕರ್ಣಿ. ಗುಜರಾತಿನಲ್ಲಿಅವರು ಅವರು ತಮ್ಮ ಸಾಂಪ್ರದಾಯಿಕ ಕೆಲಸಗಳಿಂದ ದೂರವಾಗತೊಡಗುತ್ತಿದ್ದಾರೆ. ಈಗೀಗ ಔಪಚಾರಿಕ ಶಿಕ್ಷಣವನ್ನು ಪಡೆದು ಕೆಲಸಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಹರಾಷ್ಟ್ರದಲ್ಲಿನ ಕೆಲವು ಕುಟುಂಬಗಳು ಸಹ ಈಗ ಇಲ್ಲಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಇಲ್ಲಿನ ರೈತರೊಡನೆ ಆಪ್ತವಾಗಿ ಹೊಂದಿಕೊಂಡು ಬದುಕುತ್ತಿದ್ದಾರೆ.

ಅವರ ಮತ್ತು ರೈತರ ನಡುವೆ ಒಂದು ಪರಸ್ಪರ ಬಿಟ್ಟುಕೊಡಲಾಗದ ಸಂಬಂಧವಿದೆಯೆಂದು ಕುಲಕರ್ಣಿ ಹೇಳುತ್ತಾರೆ. ಉದಾಹರಣೆಗೆ ರಬರಿಗಳು ತಮ್ಮ ಮೇಕೆ ಮತ್ತು ಕುರಿಗಳ ʼದೊಡ್ಡಿ ಹೂಡುವುದುʼ. ಇದು ಕೃಷಿ ಚಟುವಟಿಕೆಯಿಲ್ಲದ ಸಮಯದಲ್ಲಿ ತಮ್ಮ ಜಾನುವಾರುಗಳನ್ನು ರೈತರ ಹೊಲಗಳಲ್ಲಿ ಮೇಯಲು ಬಿಡುವ ಪ್ರಕ್ರಿಯೆ. ಮೇಯುವಾಗ ಜಾನುವಾರುಗಳು ಹಾಖುವ ಹಿಕ್ಕೆಯು ಹೊಲಕ್ಕೆ ಸಾವಯವ ಗೊಬ್ಬರವಾಗಿ ಮಣ್ಣನ್ನು ಉತ್ಕೃಷ್ಟಗೊಳಿಸುತ್ತದೆ. “ಇಂತಹ ಬಂಧವನ್ನು ಹೊಂದಿರುವ ರೈತರು ಈ ಜನರ ಮೌಲ್ಯವನ್ನು ತಿಳಿದಿದ್ದಾರೆ,” ಎಂದು ಅವರು ಹೇಳುತ್ತಾರೆ.

ಈ 58 ಒಂಟೆಗಳನ್ನು ಪಡೆಯಬೇಕಿದ್ದ ರಬರಿ ಕುಟುಂಬವು ಮಹರಾಷ್ಟ್ರ ಅಥವಾ ಚತ್ತೀಸಗಢದಲ್ಲಿ ನೆಲೆಯಾಗಿದೆ. ಈ ಕುಟುಂಬಗಳು ಹಲವು ಕಾಲದಿಂದಲೂ ಈ ನೆಲೆಗಳಲ್ಲಿ ಬದುಕುತ್ತಿದ್ದು, ಕಚ್ಛ್‌ನಲ್ಲಿರುವ ತಮ್ಮ ಕುಲದ ಜನರೊಡನೆ ಆಪ್ತ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಫಕಿರಾನಿ ಜಾಟ್‌ ಸಮುದಾಯವು ಹೆಚ್ಚು ದೂರ ವಲಸೆ ಹೋಗುವುದಿಲ್ಲವಾದರೂ, ಅತ್ಯುತ್ತಮ ಒಂಟೆ ಸಾಕಣೆದಾರರು ಮತ್ತು ರಬರಿ ಸಮುದಾಯದೊಡನೆ ಸಾಂಸ್ಕೃತಿಕ ಬಾಂಧವ್ಯವನ್ನೂ ಹಂಚಿಕೊಂಡಿದ್ದಾರೆ.

ಭುಜ್‌ನಲ್ಲಿ ಪಶುಪಾಲನೆ ಕೇಂದ್ರವನ್ನು ನಡೆಸುತ್ತಿರುವ ಎನ್‌ಜಿಒ ಸಹಜೀವನ್ ಪ್ರಕಾರ, ಕಚ್ಛ್‌ನ ಎಲ್ಲಾ ಪಶುಪಾಲಕ ಸಮುದಾಯಗಳಿಂದ ಬಂದಿರುವ ಸುಮಾರು 500 ಒಂಟೆ ಸಾಕಣೆದಾರರಿದ್ದಾರೆ, ಇದರಲ್ಲಿ ರಬರಿ, ಸಾಮಸ್ ಮತ್ತು ಜಾಟ್‌ ಸಮುದಾಯಗಳೂ ಸೇರಿವೆ.

“ಈ 58 ಎಳೆಯ ಒಂಟೆಗಳನ್ನು ಕಚ್ಛ್‌ ಊಂಟ್‌ ಉಚ್ಛೇರಕ್‌ ಮಾಲ್ಧಾರಿ ಸಂಘಟನ್‌ನ [ಕಚ್ಛ್‌ ಒಂಟೆ ತಳಿ ಸಂವರ್ಧನೆಗಾರರ ಸಂಘ] ಸದಸ್ಯರಾಗಿರುವ 11 ತಳಿಸಂವರ್ಧನೆಗಾರರಿಂದ ಖರೀದಿಸಲಾಗಿತ್ತು, ಮತ್ತು ಅವುಗಳನ್ನು ಅವರ ಸಂಬಂಧಿಕರಿಗೆ ತಲುಪಿಸಲು ಒಯ್ಯಲಾಗುತ್ತಿತ್ತು ಎನ್ನುವುದನ್ನು ನಮ್ಮ ತನಿಖೆಯ ಮೂಲಕ ತಿಳಿದುಕೊಂಡಿದ್ದೇವೆ,” ಎಂದು ಸಹಜೀವನದ ಕಾರ್ಯಕ್ರಮ ನಿರ್ದೇಶಕರಾಗಿರುವ ರಮೇಶ್‌ ಭಟ್ಟಿ ಅವರನ್ನು ʼಪರಿʼ ಫೋನ್‌ ಮೂಲಕ ಸಂಪರ್ಕಿಸಿದಾಗ ಹೇಳಿದರು.

ಈ ಐದು ಜನರು ಚಾಣಾಕ್ಷ ಒಂಟೆ ತರಬೇತುದಾರರು, ಅದಕ್ಕಾಗಿಯೇ ಅವರನ್ನು ಈ ದೀರ್ಘ, ಕಠಿಣ, ಪ್ರಯಾಣದಲ್ಲಿ ಈ ಒಂಟೆಗಳೊಡನೆ ಹೋಗಲು ಆಯ್ಕೆ ಮಾಡಲಾಯಿತು ಎಂದು ಭಟ್ಟಿ ಹೇಳುತ್ತಾರೆ. ವರ್ಸಿಭಾಯ್ ಬಹುಶಃ ಕಚ್ಛ್ ಪ್ರದೇಶದ ಸಕ್ರಿಯ ತಜ್ಞ ತರಬೇತುದಾರರು ಮತ್ತು ಸಾಗಾಣಿಕೆದಾರರಲ್ಲಿ ಅತ್ಯಂತ ಹಿರಿಯರು.

Suja Rabari from Chandrapur district (left) and Sajan Rana Rabari from Gadchiroli district (right) were to receive two camels each
PHOTO • Jaideep Hardikar
Suja Rabari from Chandrapur district (left) and Sajan Rana Rabari from Gadchiroli district (right) were to receive two camels each
PHOTO • Jaideep Hardikar

ಚಂದ್ರಪುರ ಜಿಲ್ಲೆಯ ( ಎಡ ) ಸುಜಾ ರಬರಿ ಮತ್ತು ಗಡಚಿರೋಲಿ ಜಿಲ್ಲೆಯ ( ಬಲ ) ಸಜನ್ ರಾಣಾ ರಬರಿ ಬಂಧನದಲ್ಲಿರುವ 58 ರಲ್ಲಿ ತಲಾ ಎರಡು ಒಂಟೆಗಳನ್ನು ಸ್ವೀಕರಿಸಬೇಕಾಗಿತ್ತು

*****

ನಮ್ಮದು ಅಲೆಮಾರಿ ಸಮುದಾಯ ; ಅನೇಕ ಬಾರಿ ನಾವು ದಾಖಲೆಗಳನ್ನು ಹೊಂದಿರುವುದಿಲ್ಲ ...
ಮಶ್ರುಬಾಯಿ ರಬರಿ, ವಾರ್ಧಾ ಮೂಲದ ಸಮುದಾಯ ಮುಖಂಡರು

ಅವರಿಗೆ ತಾವು ಕಚ್ಛ್‌ನಿಂದ ಹೊರಟ ದಿನ ಯಾವುದೆಂದು ಖಚಿತವಾಗಿ ನೆನಪಿಲ್ಲ.

"ನಾವು ಒಂಬತ್ತನೇ ತಿಂಗಳಲ್ಲಿ [ಸೆಪ್ಟೆಂಬರ್ 2021] ವಿವಿಧ ಸ್ಥಳಗಳಿಂದ ಒಂಟೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆವು ಮತ್ತು ದೀಪಾವಳಿಯ ನಂತರ (ನವೆಂಬರ್ ಆರಂಭದಲ್ಲಿ) ಭಾಚೌ (ಕಚ್ಛ್‌ನ ಒಂದು ತೆಹಸಿಲ್ ) ನಿಂದ ನಮ್ಮ ನಡಿಗೆಯನ್ನು ಪ್ರಾರಂಭಿಸಿದೆವು" ಎಂದು ಕಿರುಕುಳಕ್ಕೊಳಗಾಗಿ ದಣಿದವರಂತೆ ಕಾಣುತ್ತಿದ್ದ ಪ್ರಭು ರಾಣಾ ರಬರಿ ಹೇಳುತ್ತಾರೆ. "ನಾವು ಈ ವರ್ಷದ ಫೆಬ್ರವರಿ ಮಧ್ಯಭಾಗದಲ್ಲಿ ಅಥವಾ ಕೊನೆಯಲ್ಲಿ ನಮ್ಮ ಗಮ್ಯಸ್ಥಾನವಾದ ಚತ್ತೀಸಗಢದ ಬಿಲಾಸಪುರವನ್ನು ತಲುಪುತ್ತಿದ್ದೆವು."

ಈ ಐದು ಜನರು ಅವರನ್ನು ವಶಕ್ಕೆ ಪಡೆದ ದಿನದಂದು ತಮ್ಮ ಊರಾದ ಕಚ್ಛ್‌ನಿಂದ ಸುಮಾರು 1,200 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಭಾಚೌವಿನಿಂದ ಅವರು ಅಹಮದಾಬಾದ್ ಮೂಲಕ ಪ್ರಯಾಣಿಸಿದ ಅವರು ನಂತರ ನಂದೂರ್ ಬಾರ್, ಭೂಸಾವಲ್, ಅಕೋಲಾ, ಕಾರಂಜಾ ಮತ್ತು ತಲೇಗಾಂವ್ ದಶಾಸರ್ ಮೂಲಕ ಮಹಾರಾಷ್ಟ್ರದಾದ್ಯಂತ ಪ್ರಯಾಣಿಸಿದ್ದರು. ಅವರು ವಾರ್ಧಾ, ನಾಗ್ಪುರ, ಭಂಡಾರ (ಮಹಾರಾಷ್ಟ್ರದಲ್ಲಿಯೂ ಇದೆ) ಕಡೆಗೆ ಹೋಗುತ್ತಿದ್ದರು ಮತ್ತು ನಂತರ ಅಲ್ಲಿಂದ ಬಿಲಾಸಪುರವನ್ನು (ಛತ್ತೀಸ್ ಗಢದ ಮೂರು ಊರುಗಳು) ತಲುಪಲು ದುರ್ಗ್ ಮತ್ತು ರಾಯ್ ಪುರಕ್ಕೆ ಹೋಗುತ್ತಿದ್ದರು. ಅವರು ವಾಶಿಮ್ ಜಿಲ್ಲೆಯ ಕಾರಂಜಾ ಪಟ್ಟಣವನ್ನು ತಲುಪಿದ ನಂತರ ಹೊಸದಾಗಿ ನಿರ್ಮಿಸಲಾದ ಸಂರುಧಿ ಹೆದ್ದಾರಿಯಲ್ಲಿಯೂ ನಡೆದಿದ್ದರು.

"ನಾವು ದಿನಕ್ಕೆ 12-15 ಕಿಲೋಮೀಟರ್ ನಡೆಯುತ್ತಿದ್ದೆವು, ಆದರೆ ಒಂದು ಎಳೆಯ ಒಂಟೆ ಸುಲಭವಾಗಿ 20 ಕಿಲೋಮೀಟರ್‌ ನಡೆಯಬಲ್ಲದು" ಎಂದು ಬಹುಶಃ ಐದು ಜನರಲ್ಲಿ ಕಿರಿಯವರಾದ ಮುಸಾಭಾಯಿ ಹಮೀದ್ ಜಾಟ್ ಹೇಳುತ್ತಾರೆ. "ನಾವು ರಾತ್ರಿಯಲ್ಲಿ ನಿಂತು ಮುಂಜಾನೆ ಮತ್ತೆ ನಡೆಯುವುದನ್ನು ಪ್ರಾರಂಭಿಸುತ್ತಿದ್ದೆವು." ಅಡುಗೆಯನ್ನು ಅವರೇ ತಯಾರಿಸಿಕೊಳ್ಳುತ್ತಾರೆ, ಮಧ್ಯಾಹ್ನ ಒಂದಷ್ಟು ಹೊತ್ತು ವಿರಾಮ ತೆಗೆದುಕೊಳ್ಳುತ್ತಾರೆ, ಒಂಟೆಗಳಿಗೂ ವಿಶ್ರಾಂತಿ ನೀಡಿ ಮತ್ತೆ ನಡೆಯಲು ಪ್ರಾರಂಭಿಸುತ್ತಾರೆ.

ಕೇವಲ ಒಂಟೆಗಳನ್ನು ಸಾಕಿರುವ ಕಾರಣಕ್ಕೆ ತಮ್ಮನ್ನು ಬಂಧಿಸಿರುವ ಕುರಿತು ದಿಗ್ಭ್ರಮೆಗೊಳಗಾಗಿದ್ದರೆ.

"ನಾವು ಯಾವುದೇ ಕಾರಣಕ್ಕೂ ನಮ್ಮ ಹೆಣ್ಣು ಒಂಟೆಗಳನ್ನು ಮಾರುವುದಿಲ್ಲ ಮತ್ತು ನಮ್ಮ ಗಂಡು ಒಂಟೆಗಳನ್ನು ಸಾರಿಗೆಗಾಗಿ ಬಳಸುತ್ತೇವೆ" ಎಂದು ವಾರ್ಧಾ ಜಿಲ್ಲೆಯವರಾದ ಹಿರಿಯ ಸಮುದಾಯದ ನಾಯಕ ಮಶ್ರುಬಾಯಿ ರಬರಿ ನಮಗೆ ತಿಳಿಸಿದರು. "ಒಂಟೆಗಳು ನಮ್ಮ ಕಾಲುಗಳಿದ್ದಂತೆ." ಈಗ 'ಬಂಧನದಲ್ಲಿರುವ' ಎಲ್ಲಾ 58 ಒಂಟೆಗಳೂ ಗಂಡು.

Mashrubhai Rabari (right) has been coordinating between the lawyers, police and family members of the arrested Kachchhi herders. A  community leader from Wardha, Mashrubhai is a crucial link between the Rabari communities scattered across Vidarbha
PHOTO • Jaideep Hardikar
Mashrubhai Rabari (right) has been coordinating between the lawyers, police and family members of the arrested Kachchhi herders. A  community leader from Wardha, Mashrubhai is a crucial link between the Rabari communities scattered across Vidarbha
PHOTO • Jaideep Hardikar

ಮಶ್ರುಬಾಯಿ ರಬರಿ ( ಬಲ ) ಬಂಧಿತ ಕಚ್ಛಿ ಪಶುಪಾಲಕರು ವಕೀಲರು , ಪೊಲೀಸರು ಮತ್ತು ಕುಟುಂಬ ಸದಸ್ಯರ ನಡುವೆ ಸಮನ್ವಯ ಸಾಧಿಸುತ್ತಿದ್ದಾರೆ . ವಾರ್ಧಾದ ಸಮುದಾಯ ನಾಯಕರಾಗಿರುವ ಅವರು ವಿದರ್ಭದಾದ್ಯಂತ ಹರಡಿರುವ ರಬರಿ ಸಮುದಾಯಗಳ ನಡುವಿನ ನಿರ್ಣಾಯಕ ಕೊಂಡಿಯಾಗಿದ್ದಾರೆ

'ಮಶ್ರು ಮಾಮಾ ' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರು ಐದು ಪಶುಪಾಲಕರನ್ನು ಪೊಲೀಸರು ಹಿಡಿದ ದಿನದಿಂದಲೂ ಇಲ್ಲಿಯೇ ಬಿಡಾರ ಹೂಡಿದ್ದಾರೆ. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ, ಅಮರಾವತಿಯಲ್ಲಿ ವಕೀಲರಿಗೆ ವ್ಯವಸ್ಥೆ ಮಾಡುತ್ತಿದ್ದಾರೆ, ಅನುವಾದಕಾರನಾಗಿ ಪೊಲೀಸರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಅವರು ಮರಾಠಿ ಮತ್ತು ಕಛ್ಹಿ ಎರಡರಲ್ಲೂ ನಿರರ್ಗಳವಾಗಿ ಮಾತನಾಡುತ್ತಾರೆ ಮತ್ತು ಇಲ್ಲಿನ ಎಲ್ಲಾ ಚದುರಿದ ರಬರಿ ವಲಸೆ ನೆಲೆಗಳ ನಡುವಿನ ನಿರ್ಣಾಯಕ ಕೊಂಡಿಯಾಗಿದ್ದಾರೆ.

"ಈ ಒಂಟೆಗಳನ್ನು ವಿದರ್ಭ, ತೆಲಂಗಾಣ ಮತ್ತು ಛತ್ತೀಸ್ ಗಢದ ವಿವಿಧ ಡೇರಾಗಳಲ್ಲಿ ವಾಸಿಸುವ ನಮ್ಮ 15-16 ಜನರಿಗೆ ತಲುಪಿಸಲು ಉದ್ದೇಶಿಸಲಾಗಿತ್ತು" ಎಂದು ಮಶ್ರುಬಾಯಿ ಹೇಳುತ್ತಾರೆ. "ಪ್ರತಿಯೊಬ್ಬರಿಗೂ 3-4 ಒಂಟೆಗಳನ್ನು ನೀಡಬೇಕಾಗಿತ್ತು." ಚಲಿಸುವಾಗ, ರಬರಿಗಳು ಒಂಟೆಗಳ ಮೇಲೆ ತಮ್ಮ ವಸ್ತುಗಳು, ಸಣ್ಣ ಮಕ್ಕಳು, ಕೆಲವೊಮ್ಮೆ ಕುರಿ ಮರಿಗಳು – ಹಾಗೆ ಹೇಳುವುದಾದರೆ ಅವರ ಇಡೀ ಜಗತ್ತನ್ನೇ ಒಂಟೆ ಮೇಲೆ ಹೇರುತ್ತಾರೆ. ಮಹಾರಾಷ್ಟ್ರದ ಕುರುಬ ಸಮುದಾಯವಾದ ಧಂಗಾರ್‌ಗಳಂತೆ ಅವರು ಎಂದಿಗೂ ಎತ್ತಿನ ಗಾಡಿಗಳನ್ನು ಬಳಸುವುದಿಲ್ಲ.

"ನಾವು ಈ ಒಂಟೆಗಳನ್ನು ಊರಿನಲ್ಲಿರುವ ನಮ್ಮ ಸ್ವಂತ ತಳಿಸಂವರ್ಧಕರಿಂದ ಖರೀದಿಸುತ್ತೇವೆ" ಎಂದು ಮಶ್ರುಬಾಯಿ ಹೇಳುತ್ತಾರೆ. "ವಯಸ್ಸಾದ ಒಂಟೆಗಳನ್ನು ಬದಲಾಯಿಸಲು ಇಲ್ಲಿ 10-15 ಜನರಿಗೆ ಎಳೆಯ ಗಂಡು ಒಂಟೆಗಳ ಅಗತ್ಯವಿದ್ದಾಗಲೆಲ್ಲಾ, ನಾವು ನಮ್ಮ ಅಗತ್ಯವನ್ನು ಕಚ್ಛ್‌ನಲ್ಲಿರುವ ನಮ್ಮ ಸಂಬಂಧಿಕರ ಬಳಿ ತಿಳಿಸುತ್ತೇವೆ. ನಂತರ ತಳಿಸಂವರ್ಧಕರು ಅವುಗಳನ್ನು ಒಂದು ದೊಡ್ಡ ದೊಡ್ಡ ಲಾಟ್ ನಲ್ಲಿ ಕಳುಹಿಸುತ್ತಾರೆ, ತರಬೇತಿ ಪಡೆದ ಜನರೊಂದಿಗೆ ಖರೀದಿದಾರರು ಒಂಟೆಗಳನ್ನು ತಲುಪಿಸಲು ವೇತನವನ್ನು ಪಾವತಿಸುತ್ತಾರೆ - ಪ್ರಯಾಣವು ದೀರ್ಘಾವಧಿಯದ್ದಾಗಿದ್ದರೆ ತಿಂಗಳಿಗೆ 6,000ರಿಂದ 7,000 ರೂಪಾಯಿಗಳ ನಡುವೆ ಇರುತ್ತದೆ. ಒಂದು ಎಳೆಯ ಪ್ರಾಯದ ಒಂಟೆಯ ಬೆಲೆ 10,000ದಿಂದ 20,000 ರೂಪಾಯಿಗಳಷ್ಟಿರುತ್ತದೆ ಎಂದು ಮಶ್ರುಬಾಯಿ ನಮಗೆ ಹೇಳಿದರು. ಒಂಟೆಯು ತನ್ನ 3ನೇ ವಯಸ್ಸಿನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮತ್ತು 20-22 ವರ್ಷಗಳವರೆಗೆ ಬದುಕುತ್ತದೆ. "ಗಂಡು ಒಂಟೆಯ ಕೆಲಸದ ಜೀವನವು 15 ವರ್ಷಗಳು" ಎಂದು ಅವರು ಹೇಳುತ್ತಾರೆ.

"ಈ ಜನರ ಬಳಿ ಯಾವುದೇ ದಾಖಲೆಗಳಿರಲಿಲ್ಲವೆನ್ನುವುದು ನಿಜ" ಎಂದು ಮಶ್ರುಬಾಯಿ ಒಪ್ಪಿಕೊಳ್ಳುತ್ತಾನೆ. "ನಮಗೆ ಅವು ಮೊದಲೇ ಬೇಕಾಗಿರಲಿಲ್ಲ. ಆದರೆ ಖಂಡಿತವಾಗಿ ನಾವು ಮುಂದಿನ ದಿನಗಳಲ್ಲಿ ಜಾಗರೂಕರಾಗಿರಬೇಕು. ಪರಿಸ್ಥಿತಿಗಳು ಬದಲಾಗುತ್ತಿವೆ."

ಈ ದೂರು, ಅವನು ಗೊಣಗುತ್ತಾ ಹೇಳುತ್ತಾರೆ ಅವರನ್ನು ಮತ್ತು ಅವರ ಒಂಟೆಗಳನ್ನು ಸಾಕಷ್ಟು ಅನಗತ್ಯ ತೊಂದರೆಗಳಲ್ಲಿ ಸಿಕ್ಕಿಹಾಕಿಸಿತು. " ಅಮಿ ಘುಮಾಂಟು ಸಮಾಜ ಆಹೆ , ಆಮ್ಚ್ಯಾ ಬರ್ಯಾಚ್ ಲೋಕೇ ಕಾಡ್ ಕಾಡಿ ಕಗಾಡ್ ಪಾತ್ರಾ ನಾಸ್ತೆ ಎಂದು ಅವರು ಮರಾಠಿಯಲ್ಲಿ ಹೇಳುತ್ತಾರೆ. "ನಮ್ಮದು ಅಲೆಮಾರಿ ಸಮುದಾಯ; ಅನೇಕ  ಬಾರಿ ನಮ್ಮಲ್ಲಿ ದಾಖಲೆಗಳಿರುವುದಿಲ್ಲ  (ಈ ಪ್ರಕರಣದಲ್ಲಿ ಅದೇ ಆಗಿತ್ತು)."

Separated from their herders, the animals now languish in the cow shelter, in the custody of people quite clueless when it comes to caring for and feeding them
PHOTO • Jaideep Hardikar
Separated from their herders, the animals now languish in the cow shelter, in the custody of people quite clueless when it comes to caring for and feeding them
PHOTO • Jaideep Hardikar

ತಮ್ಮ ಪಾಲಕರಿಂದ ಬೇರ್ಪಟ್ಟ ಒಂಟೆಗಳು ಈಗ ಗೋಶಾಲೆಯಲ್ಲಿ ಕೊಳೆಯುತ್ತಿವೆ , ಅವುಗಳನ್ನು ನೋಡಿಕೊಳ್ಳುವ ಮತ್ತು ಮೇವಿನ ವಿಷಯಕ್ಕೆ ಬಂದಾಗ ಅವುಗಳನ್ನು ವಶದಲ್ಲಿಟ್ಟುಕೊಂಡಿರುವ ಜನರಿಗೆ ಕುರಿಯು ಒಂದಿಷ್ಟೂ ಮಾಹಿತಿಯಿಲ್ಲ

*****

ನಾವು ಅವುಗಳನ್ನು ಕ್ರೂರವಾಗಿ ನಡೆಸಿಕೊಂಡಿದ್ದೇವೆ ಎನ್ನುವುದು ನಮ್ಮ ವಿರುದ್ಧದ ಆರೋಪವಾಗಿದೆ . ಆದರೆ ತೆರೆದ ಸ್ಥಳದಲ್ಲಿ ಮೇಯುವ ಅಗತ್ಯವಿರುವ ಪ್ರಾಣಿಗಳನ್ನು ಇಲ್ಲಿಗೆ ಸೀಮಿತವಾಗಿರಿಸುವುದಕ್ಕಿಂತ ದೊಡ್ಡ ಕ್ರೌರ್ಯ ವಿಲ್ಲ .
ಪರ್ಬತ್‌ ರಬರಿ, ನಾಗಪುರದ ಅನುಭವಿ ರಬರಿ ಒಂಟೆ ಸಾಕಣೆದಾರ

ಬಂಧನದಲ್ಲಿರುವ ಒಂಟೆಗಳು ಎರಡರಿಂದ ಐದು ವರ್ಷ ವಯಸ್ಸಿನ ಎಲ್ಲಾ ಎಳೆಯ ಗಂಡುಗಳಾಗಿವೆ. ಅವು ಕಚ್ಛಿ ತಳಿಯವು, ಸಾಮಾನ್ಯವಾಗಿ ಕಚ್ಛ್‌ನ ಒಳನಾಡಿನ ಭೂಪರಿಸರ ವ್ಯವಸ್ಥೆಗಳಲ್ಲಿ ಕಂಡುಬರುತ್ತವೆ. ಕಚ್ಛ್‌ನಲ್ಲಿ ಇಂದು ಅಂದಾಜು 8,000 ಒಂಟೆಗಳಿವೆ.

ಈ ತಳಿಯ ಗಂಡುಗಳು ಸಾಮಾನ್ಯವಾಗಿ 400ರಿಂದ 600 ಕಿಲೋ ತೂಕವನ್ನು ಹೊಂದಿದ್ದರೆ, ಹೆಣ್ಣುಗಳು 300ರಿಂದ 540 ಕಿಲೋಗಳಷ್ಟು ತೂಕವನ್ನು ಹೊಂದಿರುತ್ತವೆ. ಕಿರಿದಾದ ಎದೆ, ಡುಬ್ಬ, ಉದ್ದವಾದ, ಬಾಗಿದ ಕುತ್ತಿಗೆ ಮತ್ತು ಡುಬ್ಬ, ಭುಜಗಳು ಮತ್ತು ಗಂಟಲಿನ ಮೇಲಿನ ಉದ್ದವಾದ ಕೂದಲುಗಳು ಒಂಟೆಯ ಪ್ರಮುಖ ವಿಶಿಷ್ಟ ಲಕ್ಷಣಗಳಾಗಿವೆ ಎಂದು ವರ್ಲ್ಡ್ ಅಟ್ಲಾಸ್ ಅಟ್ಲಾಸ್ ಹೇಳುತ್ತದೆ. ಅವುಗಳ ಬಣ್ಣವು ಕಂದು ಬಣ್ಣದಿಂದ ಕಪ್ಪು, ಬಿಳಿಯವರೆಗೆ ಇರುತ್ತದೆ.

ಕಂದು ಬಣ್ಣದ, ಈ ಕಚ್ಛಿ ಪ್ರಭೇದಗಳು ತೆರೆದ ಸ್ಥಳದಲ್ಲಿ ಮೇಯುವಿಕೆಯನ್ನು ಇಷ್ಟಪಡುತ್ತವೆ ಮತ್ತು ವಿವಿಧ ರೀತಿಯ ಸಸ್ಯ ಮತ್ತು ಎಲೆ ಪ್ರಭೇದಗಳನ್ನು ತಿನ್ನುತ್ತವೆ. ಅವು ಕಾಡುಗಳಲ್ಲಿನ ಮರಗಳಿಂದ ಅಥವಾ ಹುಲ್ಲುಗಾವಲುಗಳಲ್ಲಿ ಅಥವಾ ಪಾಳುಬಿದ್ದ ಕೃಷಿಭೂಮಿಗಳಲ್ಲಿ ಹುಟ್ಟಿದ ಗಿಡಗಳ ಎಲೆಗಳನ್ನು ಸಹ ತಿನ್ನುತ್ತವೆ.

ಇಂದು ರಾಜಸ್ಥಾನ ಮತ್ತು ಗುಜರಾತಿನಲ್ಲಿ ಒಂಟೆಗಳನ್ನು ಸಾಕುವುದು ಹೆಚ್ಚು ಕಷ್ಟಕರವಾಗಿದೆ. ಎರಡೂ ರಾಜ್ಯಗಳಲ್ಲಿ, ಕಳೆದ ಒಂದೆರಡು ದಶಕದಲ್ಲಿ ಕಾಡುಗಳು ಮತ್ತು ಮ್ಯಾಂಗ್ರೋವ್ ಜೌಗು ಪ್ರದೇಶಗಳ ಪ್ರವೇಶದ ಮೇಲೆ ಕೆಲವು ನಿರ್ಬಂಧಗಳ ಹೆಚ್ಚಾಗುವಿಕ ಕಂಡುಬಂದಿದೆ. ಅವರ ಪ್ರದೇಶಗಳಲ್ಲಿನ ಅಭಿವೃದ್ಧಿಯ ಸ್ವರೂಪವು ಒಂಟೆಗಳು ಮತ್ತು ಅವುಗಳ ತಳಿಸಂವರ್ಧಕರು ಮತ್ತು ಮಾಲೀಕರ ಸಮಸ್ಯೆಗಳನ್ನು ಹೆಚ್ಚಿಸಿದೆ. ಹೀಗಾಗಿ ಪ್ರಾಣಿಗಳು ಈ ಹಿಂದೆ ಸಾಕಷ್ಟು ಲಭ್ಯವಿದ್ದ ಉಚಿತ ಮೇವಿಗಿದ್ದ ಪ್ರವೇಶವನ್ನು ಕಳೆದುಕೊಂಡಿವೆ.

ಈಗ ಜಾಮೀನಿನ ಮೇಲೆ ಹೊರಗಿರುವ ಈ ಐದು ಜನರು ಅಮರಾವತಿಯ ಜಾನುವಾರು ಆಶ್ರಯತಾಣದಲ್ಲಿ ತಮ್ಮ ಸಂಬಂಧಿಕರೊಡನೆ ಸೇರಿಕೊಂಡಿದ್ದಾರೆ, ಅಲ್ಲಿ ಅವರ ಒಂಟೆಗಳನ್ನು ಪ್ರಸ್ತುತ ದೊಡ್ಡ ತೆರೆದ ಪ್ರದೇಶದಲ್ಲಿರಿಸಲಾಗಿದ್ದು ಸುತ್ತಲೂ ಬೇಲಿ ಹಾಕಲಾಗಿದೆ. ರಬರಿಗಳಿಗೆ ಸಾಂಪ್ರದಾಯಿಕ ಮೇವು ದೊರೆಯುತ್ತಿಲ್ಲವಾದ್ದರಿಂದ ಅವರ ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ.

A narrow chest, single hump, and a long, curved neck, as well as long hairs on the hump, shoulders and throat are the characteristic features of the Kachchhi breed
PHOTO • Jaideep Hardikar
A narrow chest, single hump, and a long, curved neck, as well as long hairs on the hump, shoulders and throat are the characteristic features of the Kachchhi breed
PHOTO • Jaideep Hardikar

ಕಿರಿದಾದ ಎದೆ , ಒಂದೇ ಡುಬ್ಬ ಮತ್ತು ಉದ್ದವಾದ , ಬಾಗಿದ ಕುತ್ತಿಗೆ , ಮತ್ತು ಡುಬ್ಬ , ಭುಜಗಳು ಮತ್ತು ಗಂಟಲಿನ ಮೇಲಿನ ಉದ್ದವಾದ ಕೂದಲುಗಳು ಕಚ್ಛೀ ಒಂಟೆಯ ವಿಶಿಷ್ಟ ಲಕ್ಷಣಗಳಾಗಿವೆ

ಒಂಟೆಗಳು ಕಛ್ (ಅಥವಾ ರಾಜಸ್ಥಾನ)ನಿಂದ ದೂರವಿರುವ ಪ್ರದೇಶಗಳಲ್ಲಿ ಹೊಂದಿಕೊಳ್ಳಲು ಅಥವಾ ವಾಸಿಸಲು ಸಾಧ್ಯವಿಲ್ಲ ಎಂಬುದು ನಿಜವಲ್ಲ ಎಂದು ರಬರಿಗಳು ಹೇಳುತ್ತಾರೆ. ಭಂಡಾರ ಜಿಲ್ಲೆಯ ಪೌನಿ ಬ್ಲಾಕ್‌ನ ಅಸ್ಗಾಂವ್‌ನಲ್ಲಿ ವಾಸಿಸುವ ಅನುಭವಿ ರಬರಿ ಒಂಟೆ ಸಾಕಣೆದಾರ ಆಸಾಭಾಯಿ ಜೇಸಾ ಹೇಳುವಂತೆ, "ಅವು ಹಲವಾರು ವರ್ಷಗಳಿಂದ ನಮ್ಮೊಂದಿಗೆ ದೇಶದಾದ್ಯಂತ ವಾಸಿಸುತ್ತಿವೆ ಮತ್ತು ತಿರುಗಾಡುತ್ತಿವೆ."

ನಾಗ್ಪುರದ ಉಮ್ರೆಡ್ ಪಟ್ಟಣದ ಬಳಿಯ ಹಳ್ಳಿಯಲ್ಲಿ ನೆಲೆಸಿದ ಇನ್ನೊಬ್ಬ ಹಿರಿಯ ವಲಸೆ ಪಶುಪಾಲಕರಾದ ಪರ್ಬತ್ ರಬರಿ ಹೇಳುತ್ತಾರೆ, "ಇದು ಒಂದು ವಿಪರ್ಯಾಸ. ನಾವು ಅವುಗಳನ್ನು ಕ್ರೂರವಾಗಿ ನಡೆಸಿಕೊಂಡಿದ್ದೇವೆ ಎಂಬುದು ನಮ್ಮ ವಿರುದ್ಧದ ಆರೋಪವಾಗಿದೆ. ತೆರೆದ ಸ್ಥಳದಲ್ಲಿ ಮೇಯಬೇಕಿರುವ ಪ್ರಾಣಿಗಳನ್ನು ಇಲ್ಲಿ ಬಂಧನದಲ್ಲಿರಿಸುವುದಕ್ಕಿಂತ ದೊಡ್ಡ ಕ್ರೌರ್ಯವಿಲ್ಲ."

ನಾಗ್ಪುರ ಜಿಲ್ಲೆಯ ಉಮ್ರೆಡ್ ತಾಲ್ಲೂಕಿನ ಶಿರಸಿ ಎಂಬ ಹಳ್ಳಿಯಲ್ಲಿ ವಾಸಿಸುವ ಜಕಾರರಾ ರಬರಿ ಹೇಳುತ್ತಾರೆ, "ಒಂಟೆಗಳು ಜಾನುವಾರುಗಳು ಏನು ತಿನ್ನುತ್ತವೆಯೋ ಅದನ್ನು ತಿನ್ನುವುದಿಲ್ಲ. ಜಕರಭಾಯ್ ಈಗ ಬಂಧನದಲ್ಲಿರುವವುಗಳಲ್ಲಿ ಮೂರು ಒಂಟೆಗಳನ್ನು ಪಡೆಯಬೇಕಾಗಿತ್ತು.

ಕಚ್ಛಿ ಒಂಟೆಗಳು ಬೇವು, ಕರಿಜಾಲಿ , ಆಲ ಸೇರಿದಂತೆ ವಿವಿಧ ಇತರ ಸಸ್ಯ ಮತ್ತು ಎಲೆ ಪ್ರಭೇದಗಳನ್ನು ತಿನ್ನುತ್ತವೆ. ಕಚ್ಛ್‌ನಲ್ಲಿ, ಅವರು ಜಿಲ್ಲೆಯ ಶುಷ್ಕ ಮತ್ತು ಗುಡ್ಡಗಾಡು ಪ್ರದೇಶಗಳ ಸ್ಥಳೀಯ ಮರಗಳು ಮತ್ತು ಮೇವನ್ನು ಮೇಯಿಸುತ್ತಾರೆ, ಇದು ಅವುಗಳ ಹಾಲಿಗೆ ಗಮನಾರ್ಹವಾದ ಪೌಷ್ಟಿಕ ಮೌಲ್ಯದ ಕೊಡುಗೆ ನೀಡುತ್ತದೆ. ಈ ತಳಿಯ ಹೆಣ್ಣು ಒಂಟೆಯು ಸಾಮಾನ್ಯವಾಗಿ ದಿನಕ್ಕೆ 3-4 ಲೀಟರ್ ಹಾಲನ್ನು ಉತ್ಪಾದಿಸುತ್ತದೆ. ಕಚ್ಛಿ ಪಶುಪಾಲಕರು ಪ್ರತಿದಿನ ತಮ್ಮ ಒಂಟೆಗಳಿಗೆ ನೀರು ಕುಡಿಸಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ, ಬಾಯಾರಿಕೆಯಾದಾಗ ಈ ಪ್ರಾಣಿಗಳು 15ರಿಂದ 20 ನಿಮಿಷಗಳಲ್ಲಿ ಒಂದೇ ಬಾರಿಗೆ 70-80 ಲೀಟರುಗಳಷ್ಟು ನೀರನ್ನು ಸೇವಿಸುತ್ತವೆ. ಆದರೆ ಅವು ಹೆಚ್ಚು ಕಾಲ ನೀರಿಲ್ಲದೆ ಬದುಕಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಗೋರಕ್ಷಾ ಕೇಂದ್ರದಲ್ಲಿರುವ 58 ಒಂಟೆಗಳಲ್ಲಿ ಯಾವುದಕ್ಕೂ ಇಲ್ಲಿ ನೀಡುವ ಆಹಾರದ ಅಭ್ಯಾಸವಿಲ್ಲ. ಮತ್ತು ವಯಸ್ಸಾದ ಒಂಟೆಗಳು ಇಲ್ಲಿ ಕಂಡುಬರುವ ನೆಲಗಡಲೆ ಅವಶೇಷಗಳನ್ನು ತಿನ್ನುತ್ತವೆ, ಆದರೆ ಕಿರಿಯ ಪ್ರಾಣಿಗಳಿಗೆ ಇದುವರೆಗೆ ಅಂತಹ ಮೇವು ತಿಂದು ಅಭ್ಯಾಸವಿಲ್ಲ  ಎಂದು ಪರ್ಬತ್ ರಬರಿ ಹೇಳುತ್ತಾರೆ. ಒಂಟೆಗಳು ಅಮರಾವತಿಯ ಈ ಸ್ಥಳಕ್ಕೆ ಹೋಗುವ ದಾರಿಯಲ್ಲಿ ರಸ್ತೆ ಬದಿ ಅಥವಾ ಕೃಷಿ ಮರಗಳ ಎಲೆಗಳನ್ನು ಸೇವಿಸುತ್ತಿದ್ದವು ಎಂದು ಅವರು ಹೇಳುತ್ತಾರೆ.

ಪರ್ಬತ್‌ ಅವರು ಹೇಳುವಂತೆ ಒಂದು ಗಂಡು ಒಂಟೆ ದಿನಕ್ಕೆ 30 ಕೇಜಿಗಳಷ್ಟು ಮೇವನ್ನು ತಿನ್ನುತ್ತದೆ.

Eating cattle fodder at the cow shelter.
PHOTO • Jaideep Hardikar
A Rabari climbs a neem tree on the premises to cut its branches for leaves, to feed the captive camels
PHOTO • Jaideep Hardikar

ಎಡ : ಅಮರಾವತಿಯ ಗೋಶಾಲೆಯಲ್ಲಿ ದನಗಳ ಮೇವನ್ನು ತಿನ್ನುತ್ತಿರುವ ಒಂಟೆಗಳು . ಬಲ : ರಬರಿ ಸಮುದಾಯದ ವ್ಯಕ್ತಿಯೊಬ್ಬರು ಸೆರೆಯಲ್ಲಿರುವ ಒಂಟೆಗಳಿಗೆ ಮೇವು ನೀಡಲು ಆವರಣದಲ್ಲಿನ ಬೇವಿನ ಮರವನ್ನೇರಿ ಕೊಂಬೆಗಳನ್ನು ಕತ್ತರಿಸುತ್ತಿರುವುದು

ಇಲ್ಲಿನ ಆಶ್ರಯವು ತನ್ನ ಜಾನುವಾರುಗಳಿಗೆ ಸೋಯಾಬೀನ್, ಗೋಧಿ, ಜೋಳ , ಮೆಕ್ಕೆಜೋಳ, ಸಣ್ಣ ಮತ್ತು ಪ್ರಮುಖ ಕಿರುಧಾನ್ಯಗಳು ಮತ್ತು ಹಸಿರು ಹುಲ್ಲುಗಳ ಎಲ್ಲಾ ರೀತಿಯ ಬೆಳೆ ಅವಶೇಷಗಳನ್ನು ಇಲ್ಲಿ ಮೇವಾಗಿ ನೀಡುತ್ತದೆ. ಮತ್ತು ಬಂಧನಕ್ಕೊಳಗಾದ ಒಂಟೆಗಳಿಗೂ ಈಗ ಇದನ್ನೇ ನೀಡಲಾಗುತ್ತಿದೆ.

ಪರ್ಬತ್, ಜಕಾರಾ ಮತ್ತು ಇತರ ಹನ್ನೆರಡು ರಬರಿಗಳು ಮಹಾರಾಷ್ಟ್ರ ಮತ್ತು ಚತ್ತೀಸಗಢದಲ್ಲಿ ಅನೇಕ ದಶಕಗಳಿಂದ ನೆಲೆಸಿದ್ದಾರೆ, ತಮ್ಮ ಜನರು ಮತ್ತು ಒಂಟೆಗಳನ್ನು ಬಂಧನದಲ್ಲಿಡುತ್ತಿರುವ ಕುರಿತು ತಿಳಿದಾಗ ಅವರು ಅಮರಾವತಿಗೆ ಧಾವಿಸಿದರು. ಅವರು ಒಂಟೆಗಳತ್ತ ಆತಂಕದಿಂದ ನೋಡುತ್ತಿದ್ದಾರೆ.

"ಒಂಟೆಗಳೆಲ್ಲವನ್ನೂ ಕಟ್ಟಿಹಾಕಿರಲಿಲ್ಲ. ಆದರೆ ಅವುಗಳಲ್ಲಿ ಕೆಲವನ್ನು ಕಟ್ಟಲೇಬೇಕು, ಇಲ್ಲದಿದ್ದರೆ ಅವು ಪರಸ್ಪರ ಕಚ್ಚುತ್ತವೆ ಅಥವಾ ದಾರಿಹೋಕರಿಗೆ ತೊಂದರೆ ನೀಡುತ್ತವೆ" ಎಂದು ಪ್ರಸ್ತುತ ಗೋ ರಕ್ಷಾ ಕೇಂದ್ರದಲ್ಲಿ ಬಿಡಾರ ಹೂಡಿರುವ ಜಕಾರಾ ರಬರಿ ಹೇಳುತ್ತಾರೆ, ಅವರು ಒಂಟೆಗಳನ್ನು ಯಾರಿಗೆ ನೀಡಬೇಕೆಂದು ನ್ಯಾಯಾಲಯವು ನಿರ್ಧರಿಸುವುದನ್ನು ಕಾಯುತ್ತಿದ್ದಾರೆ. "ಈ ಎಳೆಯ ಗಂಡು ಒಂಟೆಗಳು ತುಂಬಾ ಆಕ್ರಮಣಕಾರಿಯಾಗಬಲ್ಲವು" ಎಂದು ಅವರು ಹೇಳುತ್ತಾರೆ.

ಒಂಟೆಗಳನ್ನು ತೆರೆದ ಸ್ಥಳದಲ್ಲಿ ಮೇಯಲು ಬಿಡುಗಡೆ ಮಾಡಬೇಕಾಗಿದೆ ಎಂದು ರಬರಿಗಳು ಒತ್ತಾಯಿಸುತ್ತಾರೆ. ಈ ಹಿಂದೆ ಪೊಲೀಸರು ವಶಕ್ಕೆ ಪಡೆದ ಒಂಟೆಗಳು ಬಂಧನದಲ್ಲಿ ಸತ್ತ ಉದಾಹರಣೆಗಳಿವೆ.

ಈ ವಿಷಯದಲ್ಲಿ ಅವರ ಸ್ಥಳೀಯ ವಕೀಲ ಮನೋಜ್ ಕಲ್ಲಾ ಅವರು ಒಂಟೆಗಳನ್ನು ಆದಷ್ಟು ಬೇಗ ರಬರಿಗಳ ವಶಕ್ಕೆ ಮರಳಿ ನೀಡುವಂತೆ ಕೆಳ ನ್ಯಾಯಾಲಯಕ್ಕೆ ಮನವಿಯನ್ನು ಮಂಡಿಸುತ್ತಿದ್ದಾರೆ. ಕಚ್ಛ್‌ನಲ್ಲಿರುವ ಅವರ ಸಂಬಂಧಿಕರು, ಸಮುದಾಯದ ಸ್ಥಳೀಯ ಸದಸ್ಯರು ಮತ್ತು ವಿವಿಧ ಸ್ಥಳಗಳಿಂದ ಬರುವ ಖರೀದಿದಾರರು - ಎಲ್ಲರೂ ಪ್ರಕರಣದ ವಿರುದ್ಧ ಹೋರಾಡಲು, ವಕೀಲರಿಗೆ ಪಾವತಿಸಲು, ಅವರ ವಾಸ್ತವ್ಯದ ಖರ್ಚು ಮತ್ತು ಪ್ರಾಣಿಗಳಿಗೆ ಸರಿಯಾದ ಮೇವನ್ನು ತಲುಪಿಸುವ ಪ್ರಯತ್ನವಾಗಿ ತಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿದ್ದಾರೆ.

ಸದ್ಯ, ಒಂಟೆಗಳು ಗೋಶಾಲೆಯ ವಶದಲ್ಲಿವೆ.

The 58 dromedaries have been kept in the open, in a large ground that's fenced all around. The Rabaris are worried about their well-being if the case drags on
PHOTO • Jaideep Hardikar
The 58 dromedaries have been kept in the open, in a large ground that's fenced all around. The Rabaris are worried about their well-being if the case drags on
PHOTO • Jaideep Hardikar

58 ಒಂಟೆಗಳನ್ನು ಸುತ್ತಲೂ ಬೇಲಿಯಿರುವ ದೊಡ್ಡ ಮೈದಾನದಲ್ಲಿ ಇರಿಸಲಾಗಿದೆ. ರಬರಿಗಳು ಪ್ರಕರಣ ಮುಂದುವರೆದರೆ ಅವುಗಳ ಯೋಗಕ್ಷೇಮದ ಕತೆಯೇನು ಎನ್ನುವುದರ ಕುರಿತು ಚಿಂತಿತರಾಗಿದ್ದಾರೆ

"ಆರಂಭದಲ್ಲಿ ನಾವು ಒಂಟೆಗಳಿಗೆ ಆಹಾರ ನೀಡಲಾಗದೆ ಸಮಸ್ಯೆಗಳನ್ನು ಎದುರಿಸಿದ್ದೆವು, ಆದರೆ ಈಗ ಅವುಗಳಿಗೆ ಎಷ್ಟು ಮತ್ತು ಯಾವ ರೀತಿಯ ಮೇವನ್ನು ನೀಡಬೇಕು ಎಂದು ನಮಗೆ ತಿಳಿದಿದೆ - ರಬರಿಗಳು ಸಹ ಈ ವಿಷಯದಲ್ಲಿ ನಮಗೆ ಸಹಾಯ ಮಾಡುತ್ತಿದ್ದಾರೆ" ಎಂದು ಜಾನುವಾರು ಆಶ್ರಯವನ್ನು ನಡೆಸುತ್ತಿರುವ ಅಮರಾವತಿಯ ಗೋರಕ್ಷಣ್ ಸಮಿತಿಯ ಕಾರ್ಯದರ್ಶಿ ದೀಪಕ್ ಮಂತ್ರಿ ಹೇಳುತ್ತಾರೆ. "ನಾವು ಹತ್ತಿರದಲ್ಲಿ 300 ಎಕರೆ ಕೃಷಿಭೂಮಿಯನ್ನು ಹೊಂದಿದ್ದೇವೆ, ಅಲ್ಲಿಂದ ಒಂಟೆಗಳಿಗೆ ಹಸಿರು ಮತ್ತು ಒಣ ಎಲೆಗಳನ್ನು ತರುತ್ತೇವೆ. "ಅವುಗಳಿಗೆ ಮೇವಿನ ಕೊರತೆಯಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲಿನ ಪಶು ವೈದ್ಯರ ತಂಡವು ಬಂದು ಕೆಲವು ಗಾಯಗಳಾಗಿದ್ದ ಒಂಟೆಗಳಿಗೆ ಚಿಕಿತ್ಸೆ ನೀಡಿದೆ. "ಇಲ್ಲಿ ಅವುಗಳನ್ನು ನೋಡಿಕೊಳ್ಳಲು ನಮಗೆ ಯಾವುದೇ ಸಮಸ್ಯೆ ಇಲ್ಲ," ಎಂದು ಅವರು ಒತ್ತಿ ಹೇಳುತ್ತಾರೆ.

"ಒಂಟೆಗಳು ಸರಿಯಾಗಿ ತಿನ್ನುತ್ತಿಲ್ಲ" ಎಂದು ಪರ್ಬತ್ ರಬರಿ ಹೇಳುತ್ತಾರೆ, ನ್ಯಾಯಾಲಯವು ಅವುಗಳ ಬಂಧನವನ್ನು ಕೊನೆಗೊಳಿಸಿ ಅವುಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುತ್ತದೆನ್ನುವುದು ಅವರ ಆಶಯ. "ಇದು ಅವುಗಳಿಗೆ ಜೈಲು ಇದ್ದಂತೆ" ಎಂದು ಅವರು ಹೇಳುತ್ತಾರೆ.

ಈಗ ಜಾಮೀನಿನ ಮೇಲೆ ಹೊರಗಿರುವ ವರ್ಸಿಭಾಯಿ ಮತ್ತು ಇತರ ನಾಲ್ವರು ಮನೆಗೆ ಹೋಗಲು ಉತ್ಸುಕರಾಗಿ ಕಾಯುತ್ತಿದ್ದಾರೆ, ಆದರೆ ಅವರು ಹೋಗುವುದು ಅವರ ಒಂಟೆಗಳನ್ನು ಮರಳಿ ಪಡೆದ ನಂತರವೇ. "ಜನವರಿ 21, ಶುಕ್ರವಾರದಂದು, 58 ಒಂಟೆಗಳ ಮಾಲೀಕತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡುವಂತೆ ಐದು ಪಶುಪಾಲಕರಿಗೆ ಧಮಂಗಾವ್ (ಕೆಳ ನ್ಯಾಯಾಲಯ) ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಹೇಳಿದರು" ಎಂದು ರಬರಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ಮನೋಜ್ ಕಲ್ಲಾ ಅವರು ʼಪರಿʼಗೆ ತಿಳಿಸಿದರು. "ದಾಖಲೆಯೆಂದರೆ ಒಂಟೆಗಳನ್ನು ಮಾರಿದವರು ತಮ್ಮಿಂದ ಖರೀದಿಸಲಾಗಿದೆ ಎಂದು ನೀಡಿರುವ ರಶೀದಿ ಕೂಡಾ ಆಗಬಹುದು."

ಏತನ್ಮಧ್ಯೆ, ಈ ಒಂಟೆಗಳನ್ನು ಬಂಧನದಿಂದ ಮರಳಿ ಪಡೆಯಲು ಕಾಯುತ್ತಿರುವ ರಬರಿಗಳು ತಮ್ಮ ಸಂಬಂಧಿಕರು ಮತ್ತು ಒಂಟೆ ಖರೀದಿದಾರರೊಂದಿಗೆ ಅಮರಾವತಿಯ ಜಾನುವಾರು ಆಶ್ರಯದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎಲ್ಲರ ಕಣ್ಣು ಧಮನ್‌ಗಾಂವ್ ನ್ಯಾಯಾಲಯದ ಮೇಲಿದೆ.

ಮನುಷ್ಯರ ಈ ವ್ಯವಹಾರಗಳು ಏನೂ ಅರ್ಥವಾಗದ ಒಂಟೆಗಳು ಬಂಧನದಲ್ಲುಳಿದಿವೆ.

ಅನುವಾದ: ಸೋಮಶೇಖರ ಪಡುಕರೆ

Jaideep Hardikar

جے دیپ ہرڈیکر ناگپور میں مقیم صحافی اور قلم کار، اور پاری کے کور ٹیم ممبر ہیں۔

کے ذریعہ دیگر اسٹوریز جے دیپ ہرڈیکر
Translator : Somashekar Padukare

Somashekar Padukare is a Udupi based sports journalist. From last 25 years he is working as a sports journalist in different Kannada Daily.

کے ذریعہ دیگر اسٹوریز Somashekar Padukare