ನಾನು ಹೊರಟಿದ್ದ ಸ್ಥಳಕ್ಕೆ ಬಂದು ತಲುಪಿದ್ದೇನೆಂದು ನನ್ನ ಗೂಗಲ್‌ ಮ್ಯಾಪ್‌ ಹೇಳುತ್ತಿತ್ತು. ಆದರೆ ಆದರೆ ನನಗೆ ಪರಿಚಿತವಾದ ಆ ಸ್ಥಳ ಅಲ್ಲಲ್ಲಿ ಒಂದಿಷ್ಟು ಬದಲಾದಂತೆ ಕಾಣುತ್ತಿತ್ತು. ನಾನು ಕಳೆದ ಬಾರಿ ಉಪ್ಪಡಕ್ಕೆ ಬಂದಾಗ ಗುರುತಿಗೆಂದು ನೆನಪಿಟ್ಟುಕೊಂಡಿದ್ದ ಅಲ್ಲಿದ್ದ ಹಳೆಯ ಮನೆ ಕಾಣುತ್ತಿರಲಿಲ್ಲ “ಓಹ್‌, ಆ ಮನೆನಾ? ಅದು ಈಗ ಸಮುದ್ರದಲ್ಲಿ ಸೇರಿಕೊಂಡಿದೆ.” ಎಂದು ಬಂಗಾಳಕೊಲ್ಲಿಯ ಅಲೆಗಳನ್ನು ತೋರಿಸುತ್ತಾ ಟಿ. ಮಾರಮ್ಮ ಹೇಳಿದರು.

2020ರ ಮಾರ್ಚ್‌ ತಿಂಗಳಿನಲ್ಲಿ ಮಾರಮ್ಮ ಮತ್ತು ಅವರ ಕುಟುಂಬದ ಫೋಟೊ ತೆಗೆಯುವಾಗ ಆ ಮನೆಯು ಬೆರಗುಗೊಳಿಸುವ ಆದರೆ ಆದರೆ ಅಷ್ಟೇ ಯಾತನೆ ಹುಟ್ಟಿಸುವ ಹಿನ್ನೆಲೆಯನ್ನು ಒದಗಿಸಿತ್ತು. ಹೀಗಾಗಿ ಆ ರಚನೆ ನನಗೆ ಸ್ಪಷ್ಟವಾಗಿ ನೆನಪಿತ್ತು.ಕಡಲ ಕರೆಯಲ್ಲಿ ಅಪಾಯಕಾರಿ ರೀತಿಯಲ್ಲಿ ನೆಲೆಯಾಗಿದ್ದ ಇದು ಈ ಶತಮಾನದ ಆರಂಭಿಕ ವರ್ಷಗಳವರೆಗೂ ಮಾರಮ್ಮನ ಅವಿಭಕ್ತ ಕುಟುಂಬ ನೆಲೆಗೊಂಡಿದ್ದ ದೊಡ್ಡ ಮನೆಯಾಗಿತ್ತು.

"ಅದು ಎಂಟು ಕೋಣೆಗಳು ಮತ್ತು ಮೂರು ಶೆಡ್‌ಗಳನ್ನು (ಜಾನುವಾರುಗಳಿಗಾಗಿ) ಹೊಂದಿರುವ ಕಟ್ಟಡವಾಗಿತ್ತು. ಸುಮಾರು ನೂರು ಜನರು ಇಲ್ಲಿ ವಾಸಿಸುತ್ತಿದ್ದರು" ಎಂದು 50ರ ಪ್ರಾಯದ ಸಣ್ಣ ಮಟ್ಟದ ಸ್ಥಳೀಯ ರಾಜಕಾರಣಿ ಮಾರಮ್ಮ ಹೇಳುತ್ತಾರೆ, ಅವರು ಒಂದು ಕಾಲದಲ್ಲಿ ಮೀನು ವ್ಯಾಪಾರವನ್ನು ನಡೆಸುತ್ತಿದ್ದರು. ೨೦೦೪ರ ಸುನಾಮಿಗೆ ಸ್ವಲ್ಪ ಮೊದಲು ಉಪ್ಪಡಕ್ಕೆ ಅಪ್ಪಳಿಸಿದ ಚಂಡಮಾರುತವು ಕಟ್ಟಡದ ದೊಡ್ಡ ಭಾಗವೊಂದನ್ನು ಕಸಿದುಕೊಂಡಿತು, ಇದು ಕೂಡು ಕುಟುಂಬವನ್ನು ವಿವಿಧ ಮನೆಗಳಿಗೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಮಾರಮ್ಮ ಹತ್ತಿರದ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಇನ್ನೂ ಕೆಲವು ವರ್ಷಗಳವರೆಗೆ ಹಳೆಯ ರಚನೆಯನ್ನು ಬಳಸುವುದನ್ನು ಮುಂದುವರಿಸಿದ್ದರು.

ಆದರೆ ಈ ವಿಷಯದಲ್ಲಿ ಮಾರಮ್ಮ ಮತ್ತು ಅವರ ಕುಟುಂಬವಷ್ಟೇ ಅಲ್ಲ; ಉಪ್ಪಡದ ಬಹುತೇಕ ಎಲ್ಲಾ ಕುಟುಂಬಗಳೂ ಒಮ್ಮೆಯಲ್ಲ ಒಮ್ಮೆ ಇಲ್ಲಿ ಸ್ಥಳಾಂತರ ಎದುರಿಸಿದವರೇ ಎನ್ನುವಂತೆ ಕಾಣುತ್ತದೆ. ಮನೆಯನ್ನು ಯಾವಾಗ ತೊರೆಯಬೇಕೆನ್ನುವುದು ಅವರ ಅಲ್ಲಿನ ಬದುಕಿನ ಅನುಭವವೇ ಕಲಿಸುತ್ತದೆ. ಸ್ಥಳೀಯ ಸಮುದಾಯಗಳಿಗೆ ಅಲ್ಲಿನ ಕಡಲು ಅಷ್ಟರಮಟ್ಟಿಗೆ ಅದನ್ನು ಮಾಡಿಕೊಳ್ಳಲು ಕಲಿಸಿದೆ. “ಅಲೆಗಳ ಉಬ್ಬರಗೊಂಡು ಮುಂದೆ ಬಂದಂತೆಲ್ಲ ಮನೆ ಸಮುದ್ರದ ಪಾಲಾಗಲಿದೆಯೆಂದು ನಾವು ಗ್ರಹಿಸಬಹುದು. ಆಗ ನಾವು ನಮ್ಮ ಸಾಮಾನು-ಸರಂಜಾಮುಗಳನ್ನು ಒಂದು ಬದಿಗೆ ಪೇರಿಸಿಡುತ್ತೇವೆ [ಮತ್ತು ಬಾಡಿಗೆಗೆ ತಾತ್ಕಾಲಿಕ ಮನೆಯನ್ನು ಹುಡುಕಲು ಪ್ರಾರಂಭಿಸುತ್ತೇವೆ]. ಹಳೆಯ ಮನೆ ಸಾಮಾನ್ಯವಾಗಿ ಒಂದು ತಿಂಗಳೊಳಗೆ [ಸಮುದ್ರದೊಳಗೆ] ಹೋಗುತ್ತದೆ" ಎಂದು ಎಂದು ಓ. ಶಿವ ವಿವರಿಸುತ್ತಾರೆ. 14ನೇ ವಯಸ್ಸಿನಲ್ಲಿ, ಅವರು ಸಮುದ್ರದಿಂದ ತಪ್ಪಿಸಿಕೊಳ್ಳಲು ಒಂದು ಮನೆಯನ್ನು ಬಿಟ್ಟಿದ್ದರು.

T. Maramma and the remains of her large home in Uppada, in January 2020. Her joint family lived there until the early years of this century
PHOTO • Rahul M.

ಟಿ. ಮಾರಮ್ಮ ಮತ್ತು ಉಪ್ಪಡದಲ್ಲಿರುವ ಅವರ ದೊಡ್ಡ ಮನೆಯ ಅವಶೇಷಗಳು. ಜನವರಿ 2020ರಲ್ಲಿ ತೆಗೆಯಲಾದ ಫೋಟೊ. ಅವರ ಅವಿಭಕ್ತ ಕುಟುಂಬವು ಈ ಶತಮಾನದ ಆರಂಭದ ವರ್ಷಗಳವರೆಗೆ ಇಲ್ಲಿ ವಾಸಿಸುತ್ತಿತ್ತು

*****

ಆಂಧ್ರಪ್ರದೇಶದ 975 ಕಿಲೋಮೀಟರ್ ಕರಾವಳಿಯ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಉಪ್ಪಡದ ನಿವಾಸಿಗಳ ನೆನಪುಗಳು ವಿಸ್ತರಿಸಬಹುದಾದಷ್ಟು ಕಾಲದ ಉದ್ದಕ್ಕೂ ಈ ಕಡಲ್ಕೊರೆತದ ಇತಿಹಾಸವಿದೆ.

ಸುಮಾರು 50 ವರ್ಷಗಳ ಹಿಂದೆ ಮಾರಮ್ಮನವರ ಕುಟುಂಬವು ಅಂದಿನ ಹೊಸಮನೆಗೆ ಸ್ಥಳಾಂತರಗೊಂಡ ಸಮಯದಲ್ಲಿ ಅದು ಕಡಲ ತೀರದಿಂದ ಬಹಳ ದೂರದಲ್ಲಿತ್ತು. “ಕಡಲ ತೀರದಿಂದ ಮನೆಗೆ ನೆಡದು ಬರುವಷ್ಟರಲ್ಲಿ ಕಾಲು ನೋವು ಬಂದಿರುತ್ತಿತ್ತು.” ಎಂದು ಶಿವ ಅವರ ಅಜ್ಜ ಹಾಗೂ ಮಾರಮ್ಮನ ಚಿಕ್ಕಪ್ಪ ಓ. ಚಿನ್ನಬ್ಬಾಯಿ ನೆನಪಿಸಿಕೊಳ್ಳುತ್ತಾರೆ. ಸುಮಾರು 70-80 ವರ್ಷದ ಅವರು ಆಳ ಸಮುದ್ರದ ಮೀನುಗಾರ. ತನ್ನ ಯೌವನದ ದಿನಗಳಲ್ಲಿ ಕಡಲಿನಿಂದ ಮನೆಗೆ ಬರುವ ದಾರಿಯ ಉದ್ದಕ್ಕೂ ಅಂಗಡಿಗಳು ಹಾಗೂ ಮನೆಗಳದಿದ್ದನ್ನು ನೆನಪಿಸಿಕೊಳ್ಳುತ್ತಾರವರು. “ಸಮುದ್ರದ ದಡ ಅಲ್ಲಿತ್ತು,” ಎಂದು ದೂರ ದಿಗಂತದೆಡೆಗೆ ಕೈ ತೋರಿಸಿ ಹೇಳಿದರು. ಅಲ್ಲಿ ಕೆಲವು ದೋಣಿಗಳು ಮುಳುಗುವ ಸೂರ್ಯನಿಗೆ ಅಡ್ಡಲಾಗಿ ಹೊಯ್ದಾಡುತ್ತಿದ್ದವು.

"ನಮ್ಮ ಹೊಸ ಮನೆ ಮತ್ತು ಸಮುದ್ರದ ನಡುವೆ ಸಾಕಷ್ಟು ಮರಳು ಕೂಡ ಇತ್ತು" ಎಂದು ಮಾರಮ್ಮ ನೆನಪಿಸಿಕೊಳ್ಳುತ್ತಾರೆ. "ನಾವು ಮಕ್ಕಳಾಗಿದ್ದಾಗ ಮರಳಿನ ದಿಬ್ಬಗಳಲ್ಲಿ ಆಟವಾಡಿ ಅವುಗಳ ಮೇಲಿಂದ ಜಾರುತ್ತಿದ್ದೆವು."

ಈ ನೆನಪುಗಳಲ್ಲಿ ಬದುಕಿರುವ ಉಪ್ಪಡದ ಬಹುಭಾಗ ಈಗ ಸಮುದ್ರದ ಪಾಲಾಗಿದೆ. 1989 ಮತ್ತು 2018ರ ನಡುವೆ, ಉಪ್ಪಡದ ಕರಾವಳಿಯು ಪ್ರತಿ ವರ್ಷ ಸರಾಸರಿ 1.23 ಮೀಟರುಗಳಷ್ಟು ಕೊರೆತಕ್ಕೆ ಒಳಗಾಗಿದೆ; 2017-18ರಲ್ಲಿ ಕೊರೆತವು 26.3 ಮೀಟರ್ ಗಳಷ್ಟಿತ್ತು ಎಂದು ವಿಜಯವಾಡದ ಆಂಧ್ರಪ್ರದೇಶ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ಸಂಶೋಧಕರು ನಡೆಸಿದ ಅಧ್ಯಯನವು ಹೇಳುತ್ತದೆ. ಮತ್ತೊಂದು ಅಧ್ಯಯನವು ಕಳೆದ ನಾಲ್ಕು ದಶಕಗಳಲ್ಲಿ ಸಮುದ್ರವು ಕಾಕಿನಾಡ ಉಪನಗರಗಳಲ್ಲಿ 600 ಎಕರೆಗೂ ಹೆಚ್ಚು ಭೂಮಿಯನ್ನು ತನ್ನ ಒಡಲಿಗೆ ಹಾಕಿಕೊಂಡಿದೆ, ಕಾಕಿನಾಡ ಕಂದಾಯ ವಿಭಾಗದ ಕೊತ್ತಪಲ್ಲೆ ಮಂಡಲದಲ್ಲಿರುವ  ಉಪ್ಪಡವೊಂದೇ ಅದರ ನಾಲ್ಕನೇ ಒಂದು ಭಾಗವನ್ನು ಕಳೆದುಕೊಂಡಿದೆ. 2014ರ ಅಧ್ಯಯನವು ಕಾಕಿನಾಡದ ಉತ್ತರದ ಕರಾವಳಿಯಲ್ಲಿ ವಾಸಿಸುತ್ತಿರುವ ಮೀನುಗಾರರನ್ನು ಉಲ್ಲೇಖಿಸಿ, ಕಳೆದ 25 ವರ್ಷಗಳಲ್ಲಿ ಕಡಲತೀರವು ನೂರಾರು ಮೀಟರುಗಳಷ್ಟು ಕುಗ್ಗಿದೆ ಎಂದು ಹೇಳಿದೆ.

Maramma’s old family home by the sea in 2019. It was washed away in 2021, in the aftermath of Cyclone Gulab.
PHOTO • Rahul M.
Off the Uppada-Kakinada road, fishermen pulling nets out of the sea in December 2021. The large stones laid along the shore were meant to protect the land from the encroaching sea
PHOTO • Rahul M.

ಎಡ: ಮಾರಮ್ಮನ ಕುಟುಂಬದ ಹಳೆಯ ಮನೆ 2019ರಲ್ಲಿ ಸಮುದ್ರ ತೀರದಲ್ಲಿದ್ದ ಇದು 2021ರ ಗುಲಾಬ್ ಚಂಡಮಾರುತಕ್ಕೆ ಬಲಿಯಾಯಿತು. ಬಲ: ಉಪ್ಪಡ-ಕಾಕಿನಾಡ ರಸ್ತೆಯ ಪಕ್ಕದಲ್ಲಿ, ಡಿಸೆಂಬರ್ 2021ರಲ್ಲಿ ಮೀನುಗಾರರು ಸಮುದ್ರದಿಂದ ಬಲೆಗಳನ್ನು ಎಳೆಯುತ್ತಿರುವುದು. ಉದ್ದಕ್ಕೂ ಹಾಕಲಾದ ದೊಡ್ಡ ಕಲ್ಲುಗಳನ್ನು ಕಡಲ ಕೊರೆತದಿಂದ ತೀರವನ್ನು ರಕ್ಷಿಸುವ ಉದ್ದೇಶದಿಂದ ಹಾಕಲಾಗಿತ್ತು

"ಕಾಕಿನಾಡ ಪಟ್ಟಣದ ಉತ್ತರಕ್ಕೆ ಸರಿಸುಮಾರು ಕೆಲವು ಕಿಲೋಮೀಟರ್ ದೂರದಲ್ಲಿರುವ ಉಪ್ಪಡದಲ್ಲಿ ಕರಾವಳಿಯ ಕೊರೆತವು ಮುಖ್ಯವಾಗಿ ಹೋಪ್ ಐಲ್ಯಾಂಡ್‌ ಬೆಳವಣಿಗೆಯಿಂದ ಉಂಟಾಗುತ್ತದೆ – ವೈಜ್ಞಾನಿಕವಾಗಿ ಇದನ್ನು 'ಸ್ಪಿಟ್' ಎಂದು ಕರೆಯಲಾಗುತ್ತದೆ - ಇದೊಂದು 21-ಕಿಲೋಮೀಟರ್ ಉದ್ದದ ರೇಖಾತ್ಮಕ ಮರಳಿನ ಗುಪ್ಪೆ. ಆ ಸ್ಪಿಟ್ ಗೋದಾವರಿ ನದಿಯ ಉಪ ನದಿಯಾದ ನೀಲರೇವುವಿನ ನದಿ ಮುಖಜದಿಂದ ನೈಸರ್ಗಿಕವಾಗಿ ಉತ್ತರಾಭಿಮುಖವಾಗಿ ಬೆಳೆದಿದೆ ಎಂದು ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದ ಜಿಯೋ- ಎಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕಾಕಣಿ ನಾಗೇಶ್ವರ ರಾವ್ ಹೇಳುತ್ತಾರೆ. ಈ ಕಾರುವಿಕೆಯಿಂದ (ಸ್ಪಿಟ್) ವಕ್ರೀಭವನಗೊಂಡ ಅಲೆಗಳು ಉಪ್ಪಡ ಕರಾವಳಿಯ ಮೇಲೆ ಪ್ರಭಾವ ಬೀರುತ್ತಿವೆ, ಇದು ಅದರ ಕೊರೆತಕ್ಕೆ ಕಾರಣವಾಗುತ್ತದೆ. ಪ್ರಾಯಶಃ ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಈ ಚಟುವಟಿಕೆ ಪ್ರಾರಂಭವಾಯಿತು, ಈ ಮರಳು ಉಗುಳುವಿಕೆಯು 1950ರ ದಶಕದಲ್ಲಿ ಹೆಚ್ಚು ಕಡಿಮೆ ಅದರ ಪ್ರಸ್ತುತ ಸ್ವರೂಪವನ್ನು ಪಡೆದುಕೊಂಡಿದೆ,” ಎಂದು ಹಲವಾರು ದಶಕಗಳಿಂದ ಆಂಧ್ರ ಕರಾವಳಿಯ ಕರಾವಳಿಯ ರೂಪಗಳು ಮತ್ತು ಪ್ರಕ್ರಿಯೆಗಳನ್ನು ನಿಕಟವಾಗಿ ಅಧ್ಯಯನ ಮಾಡುತ್ತಿರುವ ಪ್ರಾಧ್ಯಾಪಕರು ವಿವರಿಸುತ್ತಾರೆ.

1900ರ ದಶಕದ ಆರಂಭದ ಅಧಿಕೃತ ದಾಖಲೆಗಳು ಉಪ್ಪಡಾ ವಿದ್ಯಮಾನವನ್ನು ಈಗಾಗಲೇ ಒಂದು ಶತಮಾನಕ್ಕೂ ಹಿಂದೆ ಗುರುತಿಸಲಾಗಿದೆ ಎಂದು ದೃಢಪಡಿಸುತ್ತವೆ. ಉದಾಹರಣೆಗೆ,  1907ರ ಗೋದಾವರಿ ಜಿಲ್ಲಾ ಗೆಜೆಟಿಯರ್, 1900ರಿಂದ ಉಪ್ಪಡದಲ್ಲಿ ಸಮುದ್ರವು 50 ಗಜಗಳಿಗಿಂತ ಹೆಚ್ಚು ಭೂಮಿಯನ್ನು ಕೊರೆದಿದೆ ಎಂದು ಹೇಳುತ್ತದೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಏಳು ವರ್ಷಗಳಲ್ಲಿ ಗ್ರಾಮವು ಪ್ರತಿ ವರ್ಷ ಏಳು ಮೀಟರ್ ಭೂಮಿಯನ್ನು ಕಳೆದುಕೊಂಡಿತ್ತು.

"ಸಾಮಾನ್ಯವಾಗಿ ಕರಾವಳಿ ವಲಯಗಳು ಅತ್ಯಂತ ಕ್ರಿಯಾತ್ಮಕ ಪ್ರದೇಶಗಳಾಗಿವೆ, ಸಂಕೀರ್ಣ ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ವಿದ್ಯಮಾನಗಳ ಪರಸ್ಪರ ಸಂಬಂಧದೊಂದಿಗೆ, ಉಪ್ಪಡದಲ್ಲಿನ ಕರಾವಳಿ ಕೊರೆತಕ್ಕೆ ಕಾರಣಗಳು ಬಹು ಆಯಾಮದಲ್ಲಿವೆ" ಎಂದು ಡಾ. ರಾವ್ ಹೇಳುತ್ತಾರೆ. ಜಾಗತಿಕ ತಾಪಮಾನ ಏರಿಕೆ, ಧ್ರುವೀಯ ಮಂಜುಗಡ್ಡೆಗಳು ಕರಗುವಿಕೆ ಮತ್ತು ಸಮುದ್ರ ಮಟ್ಟಏರಿಕೆ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಆವರ್ತನ ಹೆಚ್ಚಳ, ಅಂತಹ ಕಾರಣಗಳಲ್ಲಿ ಕೆಲವು. ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಣೆಕಟ್ಟುಗಳಿಂದ ನದಿ ಅಳಿವೆಗಳಲ್ಲಿ ಸೆಡಿಮೆಂಟ್ (ಮಡ್ಡಿ ಮಣ್ಣು) ಲೋಡ್‌ಗಳ ತೀವ್ರ ಇಳಿಕೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.

*****

ಉಪ್ಪಡದ ಭೂಮಿ ಇಷ್ಟಿಷ್ಟಾಗಿ ಕಡಲಿನ ಪಾಲಾಗುತ್ತಿದ್ದರೆ, ಉಪ್ಪಡ ಜನರ ನೆನಪಿನೊಳಗೆ ಆ ಪ್ರದೇಶಗಳು ಮರುಹುಟ್ಟು ಪಡೆಯುತ್ತಿವೆ.

ಹಳ್ಳಿಯಲ್ಲಿಯಲ್ಲಿನ ತಮ್ಮ ನೆನಪುಗಳಲ್ಲಿ ಮತ್ತು ಹಳ್ಳಿಯ ಕತೆಗಳಲ್ಲಿ ಬದುಕಿರುವ ಅವರ ಊರನ್ನು ನೋಡಲು ʼನಾಕು ಸ್ವಾತಂತ್ರಮ್‌ ವಚ್ಚಿಂದಿʼ ಎನ್ನುವ ಸಿನೆಮಾವನ್ನು ನೋನೋಡುವಂತೆ ಹೇಳಿದರು.1975ರ ಈ ಚಿತ್ರವನ್ನು ನೋಡಿದಾಗ ಅದರಲ್ಲಿ ಹಳ್ಳಿ ಮತ್ತು ಕಡಲು ಸಾಕಷ್ಟು ದೂರದಲ್ಲಿದ್ದವು. ಹಳ್ಳಿ ಮತ್ತು ಕಡಲಿನ ನಡುವೆ ಇದ್ದ ಮರಳು ಚಿತ್ರ ತಂಡಕ್ಕೆ ವಿವಿಧ ಕೋನಗಳಿಂದ ಚಿತ್ರ ತೆಗೆಯಲು ಅನುಕೂಲವಾಗವಷ್ಟು ವ್ಯಾಪ್ತಿಯಲ್ಲಿತ್ತು. ಸಿಂಗಲ್‌ ಫ್ರೇಮಿನಲ್ಲಿ ಕಡಲನ್ನು ತೋರಿಸುವಷ್ಟು ಜಾಗ ಅಲ್ಲಿತ್ತು. ಚಿತ್ರದ ವಿವಿಧ ದೃಶ್ಯಗಳಿಗೆ ಕಡಲಿನ ಹಿನ್ನೆಲೆ ದೊರಕಿತ್ತು.

Pastor S. Kruparao and his wife, S. Satyavati, outside their church in Uppada, in September 2019.
PHOTO • Rahul M.
D. Prasad  grew up in the coastal village, where he remembers collecting shells on the beach to sell for pocket money. With the sand and beach disappearing, the shells and buyers also vanished, he says
PHOTO • Rahul M.

ಎಡಕ್ಕೆ: ಪಾದ್ರಿ ಎಸ್. ಕೃಪಾ ರಾವ್ ಮತ್ತು ಅವರ ಪತ್ನಿ ಎಸ್. ಸತ್ಯವತಿ, ಸೆಪ್ಟೆಂಬರ್ 2019ರಲ್ಲಿ ಉಪ್ಪಡದಲ್ಲಿನ ತಮ್ಮ ಚರ್ಚಿನ ಹೊರಗೆ. ಬಲಕ್ಕೆ: ಡಿ.ಪ್ರಸಾದ್ ಈ ಕರಾವಳಿ ಗ್ರಾಮದಲ್ಲಿ ಬೆಳೆದವರು. ಚಿಪ್ಪುಗಳನ್ನು ಸಂಗ್ರಹಿಸಲು ತನ್ನ ಸ್ನೇಹಿತರೊಂದಿಗೆ ಹೋಗುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ, ಆ ಚಿಪ್ಪನ್ನು ಮಾರಿ ಖರ್ಚಿಗೆ ಒಂದಿಷ್ಟು ಹಣ ಮಾಡಿಕೊಳ್ಳುತ್ತಿದ್ದರು.  ಮರಳು ಮತ್ತು ಕಡಲ ತೀರ ಕಣ್ಮರೆಯಾಗುತ್ತಿರುವುದರಿಂದ, ಚಿಪ್ಪುಗಳು ಮತ್ತು ಅದರ ಖರೀದಿದಾರರು ಸಹ ಕಣ್ಮರೆಯಾದರು ಎಂದು ಅವರು ಹೇಳುತ್ತಾರೆ

“ಚಿತ್ರದ ಶೂಟಿಂಗ್ ನಾನು ನೋಡಿದ್ದೆ. ಚಿತ್ರೀಕರಣಕ್ಕಾಗಿ ಬಂದ ಕೆಲವು ನಟರು ಇಲ್ಲಿನ ಅತಿಥಿ ಗೃಹದಲ್ಲಿಯೇ ಇದ್ದರು" ಎಂದು ಉಪ್ಪಡ ಚರ್ಚಿನ 68 ವರ್ಷದ ಪಾದ್ರಿ ಎಸ್. ಕೃಪಾರಾವ್ ಹೇಳುತ್ತಾರೆ. "ಈಗ ಅದೆಲ್ಲವೂ ಸಮುದ್ರದಲ್ಲಿದೆ . ಅತಿಥಿಗೃಹವೂ ಸಹ."

1961ರಲ್ಲಿ ಪ್ರಕಟವಾದ ಪೂರ್ವ ಗೋದಾವರಿಯ ಜಿಲ್ಲಾ ಜನಗಣತಿಯ ಕೈಪಿಡಿಯು ಅತಿಥಿ ಗೃಹದ ಉಲ್ಲೇಖವನ್ನೂ ಹೊಂದಿದೆ: "ಸಮುದ್ರ ದಡದಿಂದ ಸುಮಾರು ಒಂದು ಫರ್ಲಾಂಗ್ ದೂರದಲ್ಲಿ ಎರಡು ಕೋಣೆಗಳ ಸೂಟ್‌ಗಳನ್ನು ಹೊಂದಿರುವ ಅತ್ಯಂತ ಆರಾಮದಾಯಕ ಪ್ರಯಾಣಿಕರ ಬಂಗಲೆಯಿದೆ. ಹಿಂದಿನ ಪ್ರವಾಸಿ ಮಂದಿರವನ್ನು ಸಮುದ್ರ ನುಂಗಿದ ನಂತರ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ."  ಆ ಲೆಕ್ಕದಲ್ಲಿ ನಾಕು... ಸಿನಿಮಾ ತಂಡ ತಂಗಿದ್ದ ಅತಿಥಿ ಗೃಹ ಹೀಗೆ ಕಡಲಿನಲ್ಲಿ ಮುಳುಗಿದ ಎರಡನೆಯ ಬಂಗಲೆಯಾಗಿದೆ.

ಸಮುದ್ರದಲ್ಲಿ ಮುಳುಗುವ ಮಾನವ ನಿರ್ಮಿತ ವಸ್ತುಗಳು ಮತ್ತು ರಚನೆಗಳು ಸಾಮಾನ್ಯವಾಗಿ ಆರ್ಕೈವಲ್ ದಾಖಲೆಗಳಲ್ಲಿ ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಕಥೆಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಅನೇಕ ವರ್ಷಗಳಿಂದ ಸಮುದ್ರದಲ್ಲಿ ಮುಳುಗಿರುವ ದೊಡ್ಡ ಕಲ್ಲು, ಪೆದ್ದ ರಾಯಿ ಬಗ್ಗೆ ಹಳ್ಳಿಯ ಹಿರಿಯರು ತಮ್ಮ ಹೆತ್ತವರು ಅಥವಾ ಅಜ್ಜಿಯರು ಮಾತನಾಡುತ್ತಿದ್ದಿದ್ದನ್ನು ನೆನಪಿಸಿಕೊಳ್ಳುತ್ತಾರೆ. 1907ರ ಗೆಜೆಟಿಯರ್ ಇದೇ ಕತೆಗೆ ಸಂಬಂಧಿಸಿದ ವಿಷಯವನ್ನು ವಿವರಿಸುತ್ತದೆ: "ಸಮುದ್ರದಲ್ಲಿ ಸುಮಾರು ಅರ್ಧ ಮೈಲುಗಳಷ್ಟು ವಿಸ್ತಾರದ ಅವಶೇಷವು ೀಗಲು ಮೀನುಗಾರರ ಬಲೆಗಳನ್ನು ತಡೆಯುತ್ತದೆ, ಮತ್ತು ಮಕ್ಕಳು ವಸಂತದ ಸಮಯದಲ್ಲಿ ಕಡಲಿನಲ್ಲಿ ಇಳಿತವಿರುವಾಗ ಸಮುದ್ರತೀರದಲ್ಲಿ ನಾಣ್ಯಗಳಿಗಾಗಿ ಹುಡುಕುತ್ತಾರೆ, ಇದು ಪ್ರಾಯಶಃ ಮುಳುಗಿದ ಪಟ್ಟಣದಿಂದ ತೀರಕ್ಕೆ ಬರುತ್ತಿರಬಹುದು."

ಈ ಅವಶೇಷವು 1961ರ ಕೈಪಿಡಿಯಲ್ಲಿಯೂ ಒಂದು ಉಲ್ಲೇಖವನ್ನು ಹೊಂದಿದೆ: "ಹಿರಿಯ ಮೀನುಗಾರ ಜನರು ತಮ್ಮ ದೋಣಿಗಳಲ್ಲಿ ಅಥವಾ ತೆಪ್ಪಗಳಲ್ಲಿ ಮೀನುಗಾರಿಕೆಗಾಗಿ ಪ್ರಯಾಣಿಸುತ್ತಿದ್ದರು, ಆಗ ಅವರ ಬಲೆಗಳು ಅಥವಾ ಅದರ ಹಗ್ಗಗಳು ಹೆಚ್ಚಾಗಿ ದಡದಿಂದ ಒಂದು ಮೈಲಿ ದೂರದಲ್ಲಿ ಕಡಲಿನೊಳಗಿನ ಕಟ್ಟಡಗಳ ಅಥವಾ ಮರಗಳ ಕಾಂಡಗಳ ತುದಿಗಳಿಗೆ ಸಿಕ್ಕಿ ಬೀಳುತ್ತಿತ್ತು ಮತ್ತು ಅವರು ತಮ್ಮ ಸ್ವಂತ ಜ್ಞಾನದಿಂದ ತಮ್ಮ ಊರನ್ನು ಸಮುದ್ರ ಆಕ್ರಮಿಸುತ್ತಿರುವುದಾಗಿ ಹೇಳುತ್ತಿದ್ದರು"

ಅಲ್ಲಿಂದೀಚೆಗೆ ಸಮುದ್ರದ ಹಸಿವಿಗೆ ಹಳ್ಳಿಯ ಹೆಚ್ಚಿನ ಭಾಗ ಬಲಿಯಾಗಿದೆ: ಅದರ ಬಹುತೇಕ ಎಲ್ಲಾ ತೀರಗಳು, ಲೆಕ್ಕವಿಲ್ಲದಷ್ಟು ಮನೆಗಳು, ಕನಿಷ್ಠ ಒಂದು ದೇವಸ್ಥಾನ ಮತ್ತು ಮಸೀದಿ. ಕಳೆದೊಂದು ದಶಕದಲ್ಲಿ, ಈ ಅಲೆಗಳು 2010ರಲ್ಲಿ ಅಂದಾಜು 12.16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 1,463 ಮೀಟರ್ ಉದ್ದದ 'ಜಿಯೋಟ್ಯೂಬ್' ಅನ್ನು ಧ್ವಂಸಗೊಳಿಸಿವೆ. ಉಪ್ಪಡ ರಕ್ಷಣೆಗೆಂದು ಸ್ಥಾಪಿಸಲಾಗಿದ್ದ ಜಿಯೋಟ್ಯೂಬ್‌ಗಳು ದೊಡ್ಡ ಕೊಳವೆಯಾಕಾರದ ಕಂಟೈನರ್‌ಗಳಾಗಿದ್ದು, ಅವುಗಳನ್ನು ಮರಳು ಮತ್ತು ಕೆಸರಿನ ಮಿಶ್ರಣದಿಂದ ತುಂಬಿಸಲಾಗಿರುತ್ತದೆ, ಇವುಗಳನ್ನು ತೀರದ ರಕ್ಷಣೆ ಮತ್ತು ಭೂ ಸುಧಾರಣೆಯಲ್ಲಿ ಬಳಸಲಾಗುತ್ತದೆ. "15 ವರ್ಷಗಳಲ್ಲಿ, ಅಲೆಗಳ ಘರ್ಷಣೆಯಿಂದಾಗಿ ಸುಮಾರು ಎರಡು ಚದರ ಅಡಿಗಳಷ್ಟು ದೊಡ್ಡ ಬಂಡೆಗಳು ಆರು ಇಂಚಿನ ಬೆಣಚುಕಲ್ಲುಗಳಾಗಿ ಕರಗುವುದನ್ನು ನಾನು ನೋಡಿದ್ದೇನೆ" ಎಂದು ನೆರೆ ಊರಿನ ಅರೆಕಾಲಿಕ ಮೀನುಗಾರರಾದ 24 ವರ್ಷದ ಡಿ. ಪ್ರಸಾದ್, ಹೇಳುತ್ತಾರೆ.

Remnants of an Uppada house that was destroyed by Cyclone Gulab.
PHOTO • Rahul M.
O. Chinnabbai, Maramma's uncle, close to where their house once stood
PHOTO • Rahul M.

ಎಡಕ್ಕೆ: ಕಳೆದ ವರ್ಷ ಗುಲಾಬ್ ಚಂಡಮಾರುತ ಅಪ್ಪಳಿಸಿದಾಗ ನಾಶವಾದ ಮನೆಯ ಅವಶೇಷಗಳು. ಬಲಕ್ಕೆ: ಓ. ಚಿನ್ನಬ್ಬಾಯಿ, ಮಾರಮ್ಮನ ಚಿಕ್ಕಪ್ಪ, ಒಮ್ಮೆ ಅವರ ಮನೆಯಿದ್ದ ಸ್ಥಳದ ಬಳಿ

2021ರಲ್ಲಿ ಬಿಡುಗಡೆಯಾದ ತೆಲುಗು ಚಲನಚಿತ್ರ ಉಪ್ಪೇನಾದಲ್ಲಿ ಸಮುದ್ರದ ಬಾಯಿಯಿಂದ ಕಡಲನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಬಂಡೆ ಮತ್ತು ಕಲ್ಲುಗಳಿಂದ ಕೂಡಿದ ಉಪ್ಪಡದ ಕಡಲ ತೀರವನ್ನು ಸೆರೆಹಿಡಿದಿದೆ. ಇದರಲ್ಲಿ 1975ರ ಚಿತ್ರದಲ್ಲಿ ತೋರಿಸಿದಂತೆ ಹಳ್ಳಿ ಮತ್ತು ಸಮುದ್ರವನ್ನು ಒಂದೇ ಚೌಕಟ್ಟಿನಲ್ಲಿ ತೋರಿಸಲು ಪಕ್ಷಿನೋಟ ಅಥವಾ ಡಯಾಗ್ನಲ್‌ ಕೋನದಲ್ಲಿ ಕೆಮೆರಾ ಇರಿಸಬೇಕಯಿತು. ಏಕೆಂದರೆ ಆಗಿನಂತೆ ಈಗ ಅಲ್ಲಿ ಕೆಮೆರಾ ಇರಿಸಲು ಕಡಲ ತೀರ ಲಭ್ಯವಿಲ್ಲ.

ಬಹುಶಃ ಇತ್ತೀಚಿನ ದಿನಗಳಲ್ಲಿ ಉಪ್ಪಡದ ಕಡಲ ತೀರದ ಮೇಲೆ ನಡೆದ ಅತ್ಯಂತ ಕೆಟ್ಟ ದಾಳಿಯೆಂದರೆ 2021ರ ಗುಲಾಬ್ ಚಂಡಮಾರುತ, ಸೆಪ್ಟೆಂಬರ್‌ ಕೊನೆಯಲ್ಲಿ ಸಮುದ್ರವು ಕನಿಷ್ಠ 30 ಮನೆಗಳನ್ನು ಬಲಿ ತೆಗೆದುಕೊಂಡಿತು. ಡಿಸೆಂಬರ್ ತಿಂಗಳಿನಲ್ಲಿ, ಜವಾದ್ ಚಂಡಮಾರುತವು ಹೊಸದಾಗಿ ನಿರ್ಮಿಸಲಾದ ಉಪ್ಪಡಾ-ಕಾಕಿನಾಡ ರಸ್ತೆಯನ್ನು ತೀವ್ರವಾಗಿ ಹಾನಿಮಾಡಿತು, ಇದು ಈಗ  ಬಳಕೆಗೆ ಅಸುರಕ್ಷಿತವಾಗಿದೆ.

ಗುಲಾಬ್ ಚಂಡಮಾರುತದ ನಂತರ ಪ್ರಕ್ಷುಬ್ಧ ಸಮುದ್ರವು ಅಕ್ಟೋಬರ್ ತಿಂಗಳ ಆರಂಭದಲ್ಲಿ ಮಾರಮ್ಮನ ಹಳೆಯ ಕುಟುಂಬದ ಮನೆಯ ಅವಶೇಷಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅವರು ಮತ್ತು ಅವರ ಪತಿ ವಾಸಿಸುತ್ತಿದ್ದ ಮನೆಯನ್ನು ಸಹ ಅದು ಕೊಚ್ಚಿಕೊಂಡು ಹೋಯಿತು.

*****

“ಕಳೆದ ಬಾರಿಯ ಚಂಡಮಾರುತದ [ಗುಲಾಬ್] ನಂತರ ನಮ್ಮ ಊರಿನ ಒಂದಷ್ಟು ಜನರು ಊರಿನ ಮನೆಗಳ ಹೊರಗಿನ ಜಗುಲಿಗಳ ಮೇಲೆ ಮಲಗುವ ಪರಿಸ್ಥಿತಿ ಎದುರಾಗಿತ್ತು,” ಎಂದು ಮಾರಮ್ಮ 2021ರ ವಿನಾಶವನ್ನು ನಡುಗುವ ದನಿಯಲ್ಲಿ ವಿವರಿಸುತ್ತಿದ್ದರು.

2004ರಲ್ಲಿ ಬಂದ ಚಂಡಮಾರುತಕ್ಕೆ ಅವರ ಪೂರ್ವಜರ ಮನೆಯು ನಾಶವಾದ ನಂತರ ಮಾರಮ್ಮ ಮತ್ತು ಅವರ ಆಳಸಾಗರ ಮೀನುಗಾರಿಕೆ ಮಾಡುವ ಪತಿ ಟಿ. ಬಾಬಾಯಿ ಎರಡು ಮನೆಗಳನ್ನು ಬದಲಾಯಿಸಿದ್ದಾರೆ. ಮೊದಲಿನದು ಬಾಡಿಗೆ ಮನೆ. ಎರಡನೆಯದು ಅವರ ಸ್ವಂತ ಮನೆ. ಕಳೆದ ವರ್ಷದ ಚಂಡಮಾರುತವು ಅವರ ಹೊಸಮನೆಯನ್ನು ಸಮುದ್ರದ ಬಾಯಿಗೆ ಹಾಕಿತು. ಈಗ, ದಂಪತಿಗಳು ಊರಿನ ಸಂಬಂಧಿಕರ ಮನೆಗಳ ಜಗುಲಿಗಳಲ್ಲಿ ಮಲಗಿ ದಿನ ಕಳೆಯುತ್ತಿದ್ದಾರೆ.

“ಒಂದು ಕಾಲದಲ್ಲಿ ನಾವು ಕೂಡಾ ʼಸೌಂಡ್‌ ಪಾರ್ಟಿʼ [ಒಂದು ಹಂತಕ್ಕೆ ಶ್ರೀಮಂತರು]” ಎನ್ನುತ್ತಾರೆ ಮಾರಮ್ಮ. ನಿರಂತರ ಸ್ಥಳಾಂತರ ಹಾಗೂ ಹಾಗೂ ಮರಳಿ ಮನೆ ಕಟ್ಟುವಿಕೆಯ ಜೊತೆಗೆ ನಾಲ್ಕು ಹೆಣ್ಣುಮಕ್ಕಳ ಮದುವೆ ಖರ್ಚಿನ ಸಾಲ ಕುಟುಂಬದ ಉಳಿತಾಯವನ್ನು ಇನ್ನಿಲ್ಲದಂತೆ ಕರಗಿಸಿದೆ.

M. Poleshwari outside her third house; the first two were lost to the sea. “We take debts again and the house gets submerged again”
PHOTO • Rahul M.
M. Poleshwari outside her third house; the first two were lost to the sea. “We take debts again and the house gets submerged again”
PHOTO • Rahul M.

ಎಡ: ಮಾರಮ್ಮನ ಹಳೆಯ ಮನೆ ಎಂಟು ಕೋಣೆಗಳಿರುವ ಕಟ್ಟಡವಾಗಿತ್ತು. 'ಸುಮಾರು ನೂರು ಜನರು ಇಲ್ಲಿ ವಾಸಿಸುತ್ತಿದ್ದರು' ಎಂದು ಅವರು ಹೇಳುತ್ತಾರೆ. ಬಲ: ಎಂ. ಪೋಲೇಶ್ವರಿ ತನ್ನ ಮೂರನೆಯ ಮನೆಯ ಹೊರಗೆ; ಅವರ ಮೊದಲ ಎರಡು ಮನೆಗಳು ಸಮುದ್ರಕ್ಕೆ ಬಲಿಯಾದವು. ಅವರು ಹೇಳುತ್ತಾರೆ: 'ನಾವು ಮತ್ತೆ ಮತ್ತೆ ಸಾಲ ಮಾಡಿ ಮನೆ ಕಟ್ಟುತ್ತೇವೆ ಮತ್ತು ಆದರೆ ಮನೆ ಮತ್ತೆ ಮುಳುಗುತ್ತದೆ'

"ನಾವು ಮನೆ ಕಟ್ಟಲು ಜನರ ಬಳಿ ಸಾಲ ಮಾಡಿದ್ದೇವೆ, ಆದರೆ ಈಗ ಮನೆ ಮುಳುಗಿದೆ" ಎಂದು ಇಲ್ಲಿನ ಮೀನುಗಾರ ಕುಟುಂಬದವರಾದ ಎಂ. ಪೋಲೇಶ್ವರಿ ಹೇಳುತ್ತಾರೆ, ಇದು ಮಾರಮ್ಮನ ದುಃಖವನ್ನು ಪ್ರತಿಧ್ವನಿಸುತ್ತದೆ. "ನಾವು ಮತ್ತೆ ಮತ್ತೆ ಸಾಲ ತೆಗೆದುಕೊಳ್ಳುತ್ತೇವೆ ಮತ್ತು ಮನೆ ಮತ್ತೆ ಮತ್ತೆ ಮುಳುಗುತ್ತದೆ." ಪೋಲೇಶ್ವರಿ ಈವರೆಗೆ ಸಮುದ್ರಕ್ಕೆ ಎರಡು ಮನೆಗಳನ್ನು ಬಲಿ ನೀಡಿದ್ದಾರೆ. ಈಗ ತನ್ನ ಮೂರನೇ ಮನೆಯಲ್ಲಿ ವಾಸಿಸುತ್ತಿರುವ ಅವರು ತನ್ನ ಕುಟುಂಬದ ಹಣಕಾಸಿನ ಪರಿಸ್ಥಿತಿ ಮತ್ತು ಆಳ ಸಮುದ್ರದ ಮೀನುಗಾರರಾದ ತನ್ನ ಗಂಡನ ಸುರಕ್ಷತೆಯ ಬಗ್ಗೆ ನಿರಂತರವಾಗಿ ಚಿಂತಿಸುತ್ತಿರುತ್ತಾರೆ. "ಅವರು ಹೊರಗೆ ಹೋದಾಗ ಚಂಡಮಾರುತವೆದ್ದರೆ, ಅವರು ಸಾಯುವ ಪರಿಸ್ಥಿತಿ ಎದುರಾಗಬಹುದು. ಆದರೆ ನಮಗೆ ಬೇರೆ ಆಯ್ಕೆಯೆಲ್ಲಿದೆ? ಸಮುದ್ರವೊಂದೇ ನಮಗಿರುವ ಜೀವನೋಪಾಯದ ದಾರಿ.”

ಇತರ ಆದಾಯದ ಮೂಲಗಳೂ ಬತ್ತುತ್ತಿವೆ. ಸಮುದ್ರದಲ್ಲಿ ಇಳಿತವಿರುವ ಸಮಯದಲ್ಲಿ  ಸಣ್ಣವರಿದ್ದಾಗ ಚಿಪ್ಪು ಮತ್ತು ಏಡಿಗಳನ್ನು ಸಂಗ್ರಹಿಸಲೆಂದು ಸ್ನೇಹಿತರ ಜೊತೆ ಹೋಗುತ್ತಿದ್ದ ದಿನಗಳನ್ನು ಪ್ರಸಾದ್‌ ನೆನಪಿಸಿಕೊಳ್ಳುತ್ತಾರೆ. ಆದರೆ ಮರಳು ಮತ್ತು ತೀರ ಎರಡೂ ಇಲ್ಲವಾಗುತ್ತಿರುವುದರಿಂದಾಗಿ, ಇಂದು ಚಿಪ್ಪುಗಳೂ ಇಲ್ಲವಾಗಿ ಜೊತೆಗೆ ಅವುಗಳ ಖರೀದಿದಾರರೂ ಇಲ್ಲವಾಗಿದ್ದಾರೆ.

ತಮ್ಮ ಮನೆಯ ಹಿಂದೆ ಬಿಸಿಲಿನಲ್ಲಿ ಒಣಗಿಸಿದ್ದ ಹಳೆಯ ಚಿಪ್ಪುಗಳತ್ತ ನೋಡುತ್ತಾ “ನಾವು ಈ ಚಿಪ್ಪುಗಳು ಮಾರಾಟವಾಗಬಹುದೆಂಬ ಆಸೆಯಿಂದ ಅವುಗಳನ್ನು ಸಂಗ್ರಹಿಸಿದ್ದೇವೆ,” ಎಂದರು ಪೋಲೇಶ್ವರಿ. “ಹಿಂದೆಲ್ಲ ʼನಾವು ಚಿಪ್ಪು ಖರೀದಿಸುತ್ತೇವೆ, ನಾವು ಚಿಪ್ಪು ಖರೀದಿಸುತ್ತೇವೆʼ ಎಂದು ಕೂಗುತ್ತಾ ಜನರು ಬರುತ್ತಿದ್ದರು – ಆದರೆ ಈಗ ಅವರು ಕಾಣುವುದೇ ಅಪರೂಪವಾಗಿದೆ.”

2021ರ ಚಂಡಮಾರುತದ ನಂತರ ಮಾರಮ್ಮ ಮತ್ತು ಮೀನುಗಾರಿಕಾ ಕಾಲನಿಯ ಸುಮಾರು 290 ಜನರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರಿಗೆ ಪತ್ರ ಬರೆದು, ತಮ್ಮ ಗ್ರಾಮದಲ್ಲಿ ಹೆಚ್ಚುತ್ತಿರುವ ಅಪಾಯ ಮತ್ತು ದುರಂತದ ಬಗ್ಗೆ ಗಮನ ಸೆಳೆದರು. "ಈ ಹಿಂದೆ ಶ್ರೀ ವೈ. ಎಸ್. ರಾಜಶೇಖರ್ ರೆಡ್ಡಿಗಾರು (ಮಾಜಿ ಮುಖ್ಯಮಂತ್ರಿ) ಅವರು ಉಪ್ಪಡದ ಮೀನುಗಾರಿಕಾ ಗ್ರಾಮದ ಕರಾವಳಿಯ ಸಮುದ್ರದ ಅಂಚಿನಲ್ಲಿ ದೊಡ್ಡ ಕಲ್ಲುಗಳನ್ನು ಹಾಕಿಸಿ ಗ್ರಾಮವು ಸಮುದ್ರದಲ್ಲಿ ಮುಳುಗದಂತೆ ರಕ್ಷಿಸಿದ್ದರು. ಈ ಕಲ್ಲುಗಳು ನಮ್ಮನ್ನು ಚಂಡಮಾರುತಗಳು ಮತ್ತು ಸುನಾಮಿಗಳಿಂದ ರಕ್ಷಿಸಿದ್ದವು" ಎಂದು ಅವರ ಪತ್ರ ಹೇಳಿದೆ."ಈಗ ಚಂಡಮಾರುತಗಳ ಸಂಖ್ಯೆ ಹೆಚ್ಚಿರುವುದರಿಂದ, ದಡದಲ್ಲಿರುವ ದೊಡ್ಡ ಕಲ್ಲುಗಳು ಸ್ಥಳಾಂತರಗೊಂಡಿವೆ ಮತ್ತು ಬ್ಯಾಂಕ್ ನಾಶವಾಗಿದೆ. ಕಲ್ಲುಗಳನ್ನು ಬಂಧಿಸುವ ಹಗ್ಗವೂ ಸವೆದು ಹೋಗಿದೆ. ಆದ್ದರಿಂದ, ದಡದಲ್ಲಿ ಸಾಲುಗಟ್ಟಿನಿಂತಿರುವ ಮನೆಗಳು ಮತ್ತು ಗುಡಿಸಲುಗಳು ಸಮುದ್ರದೊಂದಿಗೆ ಒಂದಾಗಿವೆ. ಕರಾವಳಿಯ ಮೀನುಗಾರರು ಭಯಭೀತರಾಗಿದ್ದಾರೆ," ಎಂದು ಅವರು ಹೇಳಿದರು, ಬಂಡೆಗಳನ್ನು ದೊಡ್ಡಬಂಡೆಗಳಿಂದ ಬದಲಾಯಿಸಬೇಕೆಂದು ವಿನಂತಿಸಿದರು.

The stretch from the fishing colony to the beach, in January 2020. Much of it is underwater now.
PHOTO • Rahul M.
The Uppada-Kakinada road became unsafe after it was damaged by Cyclone Jawad in December 2021. A smaller road next to it is being used now
PHOTO • Rahul M.

ಎಡ: ಜನವರಿ 2020ರಲ್ಲಿ ಮೀನುಗಾರಿಕೆ ಕಾಲೋನಿಯಿಂದ ಕಡಲತೀರದವರೆಗಿನ ಸ್ಥಳ. ಅದರ ಹೆಚ್ಚಿನ ಭಾಗವು ಈಗ ನೀರೊಳಗಿನದಾಗಿದೆ. ಬಲ: 2021ರ ಡಿಸೆಂಬರ್ ತಿಂಗಳಿನಲ್ಲಿ ಜವಾದ್ ಚಂಡಮಾರುತದಿಂದ ಹಾನಿಗೊಳಗಾದ ಉಪ್ಪಡಾ-ಕಾಕಿನಾಡ ರಸ್ತೆ ಬಳಕೆಗೆ ಅಸುರಕ್ಷಿತವಾಯಿತು. ಅದರ ಪಕ್ಕದಲ್ಲಿ ನಿರ್ಮಿಸಲಾದ ಸಣ್ಣ ರಸ್ತೆಯನ್ನು ಈಗ ಬಳಸಲಾಗುತ್ತಿದೆ

"ಈಗ ಚಂಡಮಾರುತಗಳ ಸಂಖ್ಯೆ ಹೆಚ್ಚಿರುವುದರಿಂದ, ತೀರದಲ್ಲಿದ್ದ ದೊಡ್ಡ ಕಲ್ಲುಗಳು ಸ್ಥಳಾಂತರಗೊಂಡಿವೆ ಮತ್ತು ತೀರ ನಾಶವಾಗಿದೆ. ಕಲ್ಲುಗಳನ್ನು ಬಂಧಿಸಿಟ್ಟಿರುವ ಹಗ್ಗವೂ ಸವೆದು ಹೋಗಿದೆ. ಆದ್ದರಿಂದ, ದಡದಲ್ಲಿ ಸಾಲುಗಟ್ಟಿನಿಂತಿರುವ ಮನೆಗಳು ಮತ್ತು ಗುಡಿಸಲುಗಳು ಸಮುದ್ರದೊಂದಿಗೆ ಒಂದಾಗಿವೆ. ಕರಾವಳಿಯ ಮೀನುಗಾರರು ಭಯಭೀತರಾಗಿದ್ದಾರೆ," ಎಂದು ಪತ್ರದಲ್ಲಿ ಮುಂದುವರೆದು ಬರೆಯಲಾಗಿದೆ, ಈಗಿರುವ ಬಂಡೆಗಳ ಸ್ಥಳದಲ್ಲಿ ದೊಡ್ಡಬಂಡೆಗಳನ್ನು ಹಾಕಿಸಬೇಕೆಂದು ವಿನಂತಿಸಲಾಗಿದೆ.

ಆದಾಗ್ಯೂ, ಡಾ. ರಾವ್ ಅವರ ಪ್ರಕಾರ, ಬಂಡೆಗಳು ದೃಢವಾದ ಸಮುದ್ರದ ವಿರುದ್ಧ ಶಾಶ್ವತ ರಕ್ಷಣೆಯನ್ನು ನೀಡಬಲ್ಲವು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ; ಸಮುದ್ರವು ಅತಿಕ್ರಮಿಸುತ್ತಲೇ ಇರುವುದರಿಂದ ಅವು ಅತ್ಯುತ್ತಮವಾಗಿ ತಾತ್ಕಾಲಿಕ ಪರಿಹಾರವಾಗಿವೆ. "ಆಸ್ತಿಯನ್ನು ರಕ್ಷಿಸಲು ಪ್ರಯತ್ನಿಸಬೇಡಿ. ಕಡಲತೀರವನ್ನು ರಕ್ಷಿಸಿ. ಕಡಲತೀರವು ನಿಮ್ಮ ಆಸ್ತಿಯನ್ನು ರಕ್ಷಿಸುತ್ತದೆ," ಎಂದು ಅವರು ಹೇಳುತ್ತಾರೆ. ಮತ್ತು "ತೀರ ಸಮುದ್ರ ತಡೆಗೋಡೆಗಳು - ಜಪಾನ್ ನ ಕೈಕೆ ಕರಾವಳಿಯಲ್ಲಿರುವಂತಹ ಅಲೆಗಳನ್ನು ಒಡೆಯುವ ಬೃಹತ್ ಕಲ್ಲಿನ ರಚನೆಗಳು  - ಉಪ್ಪಡಾದಲ್ಲಿ ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ" ಎಂದು ಸೇರಿಸುತ್ತಾರೆ.

*****

ದಿನದಿಂದ ದಿನಕ್ಕೆ ಕಡಲು ತನ್ನನ್ನು ತಿಂದು ಮುಗಿಸುತ್ತಿದ್ದರೂ ಈ ಊರು ತನ್ನ ಸಾಮಾಜಿಕ ಸ್ವರೂಪದಲ್ಲಿ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. 1980ರ ದಶಕದಲ್ಲಿ, ನೇಕಾರ ಸಮುದಾಯವು ಸರಕಾರ ಮಂಜೂರು ಮಾಡಿದ ಸ್ಥಳದಲ್ಲಿ ನೆಲೆಸಲು ಆರಂಭಿಸಿದ್ದರಿಂದಾಗಿ ಉಪ್ಪಡವು ಆ ಸಮುದಾಯವು ಕೈಯಿಂದ ನೇಯ್ದ ಸೊಗಸಾದ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಈ ಮೊದಲು ಈ ಸಮುದಾಯವು ಉಪ್ಪಡದ ಹೊರಗಿತ್ತು. ಕ್ರಮೇಣ, ಹೆಚ್ಚು ಶ್ರೀಮಂತ ಹಳ್ಳಿಗರು, ಮುಖ್ಯವಾಗಿ ಮೇಲ್ವರ್ಗದವರೂ ಸಮುದ್ರದಿಂದ ದೂರ ಸರಿಯಲು ಪ್ರಾರಂಭಿಸಿದರು. ಆದರೆ ಮೀನುಗಾರ ಸಮುದಾಯ, ಅವರ ಜೀವನೋಪಾಯವು ಸಮುದ್ರದೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದ್ದು, ಅವರಿಗೆ ಅಲ್ಲೇ ಉಳಿಯದೆ ಬೇರೆ ದಾರಿಯಿರಲಿಲ್ಲ.

ಮೇಲ್ಜಾತಿಗಳು ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತಿದ್ದ ಹಾಗೆ, ಜಾತಿ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಪದ್ಧತಿಗಳು ಮತ್ತು ಆಚರಣೆಗಳು ದುರ್ಬಲಗೊಳ್ಳಲು ಪ್ರಾರಂಭಿಸಿದವು; ಉದಾಹರಣೆಗೆ, ಈಗ ಮೀನುಗಾರ ಸಮುದಾಯವು ಮೇಲ್ಜಾತಿಯ ಉತ್ಸವಗಳಿಗಾಗಿ ತಾವು ಹಿಡಿದ ಮೀನನ್ನು ಉಚಿತವಾಗಿ ನೀಡಬೇಕಿಲ್ಲ. ನಿಧಾನವಾಗಿ, ಮೀನುಗಾರ ಸಮುದಾಯವು ಕ್ರಿಶ್ಚಿಯಾನಿಟಿಯ ಕಡೆಗೆ ಹೊರಳಲು ಪ್ರಾರಂಭಿಸಿತು. "ಅನೇಕರು ತಮ್ಮ ಸ್ವಾತಂತ್ರ್ಯಕ್ಕಾಗಿ ಧರ್ಮಕ್ಕೆ ಸೇರಿದರು" ಎಂದು ಪಾದ್ರಿ ಕೃಪಾರಾವ್ ಹೇಳುತ್ತಾರೆ. ಇಲ್ಲಿ ಹೆಚ್ಚಿನ ಜನರು ತುಂಬಾ ಬಡವರು ಮತ್ತು ಮೂಲತಃ ಹಿಂದುಳಿದ ಜಾತಿಗಳು ಎಂದು ವರ್ಗೀಕರಿಸಲಾದ ಸಾಮಾಜಿಕ ಗುಂಪುಗಳಿಗೆ ಸೇರಿದವರು. ಕ್ರಿಶ್ಚಿಯಾನಿಟಿಯನ್ನು ಅಪ್ಪಿಕೊಳ್ಳುವ ಮೊದಲು‌ ಈ ಜನರು ಜಾತಿ ಅವಮಾನದ ಅನೇಕ ನಿದರ್ಶನಗಳನ್ನು ಅನುಭವಿಸಿದ್ದನ್ನು ಕೃಪಾರಾವ್ ನೆನಪಿಸಿಕೊಳ್ಳುತ್ತಾರೆ.

Poleru and K. Krishna outside their home, in 2019. The structure was washed away in 2021 after Cyclone Gulab struck the coast.
PHOTO • Rahul M.
The cyclone also wrecked the fishing colony's church, so prayers are offered in the open now
PHOTO • Rahul M.

ಎಡಕ್ಕೆ: ಕೆ. ಪೊಲೇರು ಮತ್ತು ಕೆ. ಕೃಷ್ಣ ಅವರು 2019ರಲ್ಲಿ  ತಮ್ಮ ಮನೆಯ ಎದುರು ನಿಂತಿರುವುದು. ಕಳೆದ ವರ್ಷ ಗುಲಾಬ್ ಚಂಡಮಾರುತದಿಂದ ಈ ರಚನೆ ಕೊಚ್ಚಿಹೋಗಿದೆ. ಬಲ: ಮೀನುಗಾರಿಕೆ ಕಾಲೋನಿಯಲ್ಲಿರುವ ಚರ್ಚ್ ಕಟ್ಟಡವು ಚಂಡಮಾರುತದಿಂದ ಧ್ವಂಸಗೊಂಡಿರುವುದರಿಂದ, ಈಗ ತೆರೆದ ಪ್ರದೇಶದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ

"ಸುಮಾರು 20-30 ವರ್ಷಗಳ ಹಿಂದೆ, ಹಳ್ಳಿಗರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದರು. ಊರು ಸ್ಥಳೀಯ ದೇವತೆಗಾಗಿ ನಿಯಮಿತವಾಗಿ ಹಬ್ಬಗಳನ್ನು ಆಚರಿಸುತ್ತಿತ್ತು" ಎಂದು ಚಿನ್ನಬ್ಬಾಯಿಯವರ ಮಗ ಓ. ದುರ್ಗಯ್ಯ ಹೇಳುತ್ತಾರೆ. "ಈಗ ಹಳ್ಳಿಯ ಬಹುಪಾಲು ಜನರು ಕ್ರಿಶ್ಚಿಯನ್." 1990ರವರೆಗೂ ತನ್ನ ವಾರದ ರಜೆಯನ್ನು ಗುರುವಾರದಂದು (ದೇವತೆಯನ್ನು ಪ್ರಾರ್ಥಿಸಲು) ತೆಗೆದುಕೊಳ್ಳುತ್ತಿದ್ದ ಊರಿನ ಜನರು ಈಗ ಚರ್ಚಿಗೆ ಹೋಗಲೆಂದು ಭಾನುವಾರಗಳಂದು ರಜೆ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ದಶಕಗಳ ಹಿಂದೆ ಉಪ್ಪಡದಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಮರಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ, ಆದರೆ ಸ್ಥಳೀಯ ಮಸೀದಿ ಮುಳುಗಿದ ನಂತರ ಅವರಲ್ಲಿ ಸಾಕಷ್ಟು ಜನರು ಊರಿನಿಂದ ಹೊರಗೆ ತೆರಳಿದರು.

ಹಳ್ಳಿಯಲ್ಲಿ ಉಳಿದುಕೊಂಡಿರುವ ಜನರಿಗೆ ಅಲ್ಲಿನ ಬದಲಾವಣೆಗಳ ಕುರಿತು ಸಂಕೇತಗಳನ್ನು ಊರನ್ನು ನುಂಗುವ ಸಮುದ್ರವೇ ಕಳುಹಿಸುತ್ತದೆ. “[ಅಪಾಯವನ್ನು] ಗುರುತಿಸಲು ಸಾಧ್ಯ. ಅಂತಹ ಸಮಯದಲ್ಲಿ ಕಲ್ಲುಗಳು ಘಲ್‌ ಘಲ್‌ ಎನ್ನುವ ವಿಚಿತ್ರವಾದ ಸದ್ದು ಮಾಡಲು ಪ್ರಾರಂಭಿಸುತ್ತವೆ. ಈ ಮೊದಲು, ನಾವು ನಕ್ಷತ್ರಗಳನ್ನು (ಅಲೆಗಳ ಮಾದರಿಯನ್ನು ಊಹಿಸಲು) ನೋಡುತ್ತಿದ್ದೆವು; ಆಗ ಅವು ಭಿನ್ನ ರೀತಿಯಲ್ಲಿ ಹೊಳೆಯುತ್ತಿರುತ್ತವೆ. ಈ ಇದನ್ನು ಮೊಬೈಲ್‌ ಫೋನ್‌ ತಿಳಿಸುತ್ತದೆ,” ಎಂದು ಕೃಷ್ಣ ಎನ್ನುವ ಮೀನುಗಾರರು 2019ರಲ್ಲಿ ಇಲ್ಲಿಗೆ ಮೊದಲ ಸಲ ಬಂದಾಗ ಹೇಳಿದ್ದರು. “ಕೆಲವೊಮ್ಮೆ ಪೂರ್ವ ಮಾರುತಗಳು ಭೂಮಿಯೆಡೆಯಿಂದ ಬಂದಾಗ ಮೀನುಗಾರರಿಗೆ ಒಂದು ರೂಪಾಯಿಯೂ (ಅಂದರೆ ಸಮುದ್ರದಲ್ಲಿ ಮೀನು ಸಿಗುವುದಿಲ್ಲ) ಹುಟ್ಟುವುದಿಲ್ಲ,” ಎಂದು ಅವರ ಪತ್ನಿ ಪೊಲೇರು ಹೇಳಿದ್ದರು. ಅಂದು ನಾವು ಮೂವರೂ ಅವರ ಗುಡಿಸಲಿನಲ್ಲಿ ಕುಳಿತು ಸಮುದ್ರದ ಅಲೆಗಳನ್ನು ನೋಡುತ್ತಾ ಕುಳಿತಿದ್ದೆವು. 2021ರ ಗುಲಾಬ್‌ ಚಂಡಮಾರುತವು ಅವರ ಗುಡಿಸಲನ್ನು ನಾಶಗೊಳಿಸಿದ್ದರಿಂದಾಗಿ ಅವರು ಈಗ ಹೊಸ ಗುಡಿಸಲಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ್ದಾರೆ.

ಇದೆಲ್ಲದರ ನಡುವೆ ಮಾರಮ್ಮ ಈಗಲೂ ತನ್ನ ಸಂಬಂಧಿಕರ ಮನೆಗಳ ಜಗುಲಿಯ ಮೇಲೆಯೇ ದಿನ-ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಅವರ ದನಿಯಲ್ಲಿದ್ದ ಕಂಪನವು ಅವರ ನಿರಾಶೆ ಮತ್ತು ಕಳೆದುಕೊಂಡ ಭಾವನೆಯನ್ನು ಹೊರಹಾಕುತ್ತಿದ್ದವು. ಅವರು ಹೇಳುತ್ತಾರೆ, “ನಾವು ಕಟ್ಟಿದ ಎರಡೆರಡು ಮನೆಗಳು ಸಮುದ್ರದ ಪಾಲಾದವು; ಆದರೆ ನಮ್ಮಿಂದ ಇನ್ನೊಂದು ಮನೆಯನ್ನು ಕಟ್ಟಲು ಸಾಧ್ಯವೇ ಎನ್ನುವ ಕುರಿತು ನನಗೆ ಅನುಮಾನಗಳಿವೆ.”

ಅನುವಾದ: ಶಂಕರ ಎನ್. ಕೆಂಚನೂರು

Reporter : Rahul M.

راہل ایم اننت پور، آندھرا پردیش میں مقیم ایک آزاد صحافی ہیں اور ۲۰۱۷ میں پاری کے فیلو رہ چکے ہیں۔

کے ذریعہ دیگر اسٹوریز Rahul M.
Editor : Sangeeta Menon

سنگیتا مینن، ممبئی میں مقیم ایک قلم کار، ایڈیٹر، اور کمیونی کیشن کنسلٹینٹ ہیں۔

کے ذریعہ دیگر اسٹوریز Sangeeta Menon
Series Editor : P. Sainath

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru