ಎರಡು ವರ್ಷಗಳ ಹಿಂದೆ ಬಿಹಾರದ ದರ್ಭಾಂಗ ಜಿಲ್ಲೆಯ ಮೋಹನ್ ಬಹೆರ ಎಂಬ ತಮ್ಮ ಪತಿಯ ಹಳ್ಳಿಯಲ್ಲಿ ಪಡಿತರ ಚೀಟಿಗಾಗಿ ರುಕ್ಸಾನ ಖಾತುನ್ ಅರ್ಜಿಯನ್ನು ಸಲ್ಲಿಸಿದ್ದರು. ಆ ತಿಂಗಳು ಪರಿವಾರದ ಪಕ್ಕಾ ಮನೆಯ ನಿರ್ಮಾಣವು ಪೂರ್ಣಗೊಂಡಿತು. ರುಕ್ಸಾನ ಆಧಾರ್ ಕಾರ್ಡಿಗೂ ಅರ್ಜಿ ಸಲ್ಲಿಸಿ, ಅದನ್ನು ಪಡೆದುಕೊಂಡರು. ಇದಕ್ಕೆ ಹಿಂದೆ ಎರಡು ಬಾರಿ ಆಕೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾಗ್ಯೂ ಅದು ಅವರ ಕೈಸೇರಲೇ ಇಲ್ಲ.
ಇದು ಆಗಸ್ಟ್ 2018ರಲ್ಲಿನ ಮೂರನೆಯ ಪ್ರಯತ್ನವಾಗಿದ್ದು, ಆಕೆಯು ಕಾಯಲು ಸಿದ್ಧರಿದ್ದರು.
30 ವರ್ಷದ ರುಕ್ಸಾನ ಹಾಗೂ 34ರ ವಯಸ್ಸಿನ ಆಕೆಯ ಪತಿ, ಮೊಹಮ್ಮದ್ ವಕೀಲ್, ಕಷ್ಟಪಟ್ಟು ದುಡಿಯುತ್ತಿದ್ದು, ತಮ್ಮ ಜೀವನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು. ಪಶ್ಚಿಮ ದೆಹಲಿಯಲ್ಲಿನ ಪಟೇಲ್ ನಗರದಲ್ಲಿ ರುಕ್ಸಾನ ಅವರ ಐದು ಮನೆಗಳಲ್ಲಿನ ಕೆಲಸ ಹಾಗೂ ವಕೀಲ್ ಅವರ ದರ್ಜಿಯ ಕೆಲಸಗಳಿಂದ ತಿಂಗಳಿಗೆ 27,000 ರೂ.ಗಳ ಒಟ್ಟಾರೆ ಆದಾಯವನ್ನು ಅವರಿಬ್ಬರೂ ಮನೆಗೆ ತರುತ್ತಿದ್ದರು. ಆರು ಜನರ ತಮ್ಮ ಕುಟುಂಬದ ಖರ್ಚನ್ನು ನಿಭಾಯಿಸಿ 12, 8, 2, ವರ್ಷದ ಮೂವರು ಪುತ್ರಿಯರು ಹಾಗೂ 10 ವರ್ಷದ ಒಬ್ಬ ಮಗ), ಹಳ್ಳಿಯಲ್ಲಿನ ವಕೀಲ್ ಅವರ ತಾಯಿಗೆ 2,000 ರೂ.ಗಳನ್ನು ಕಳುಹಿಸಿದ ನಂತರವೂ ಈ ದಂಪತಿಯು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಉಳಿಸುತ್ತಿದ್ದರು.
ಇವರ ದುಡಿಮೆಯ ಶ್ರಮದ ಪ್ರತಿಫಲದಿಂದಾಗಿ, ಪಶ್ಚಿಮ ದೆಹಲಿಯಲ್ಲಿನ ಹೊಸ ರಂಜೀತ್ ನಗರ್ ಪ್ರದೇಶದಲ್ಲಿ ವಕೀಲ್ ತಮ್ಮ ಸ್ವಂತ ಹೊಲಿಗೆ ಅಂಗಡಿಯನ್ನು ತೆರೆದರು. ಹೊಲಿಗೆ ಅಂಗಡಿಯಲ್ಲಿನ ತನ್ನ ನೌಕರಿಯಿಂದ ಗಳಿಸುತ್ತಿದ್ದ 12,000 ರೂ.ಗಳಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸುವುದು ಅವರ ಆಶಯವಾಗಿತ್ತು. ಇದು ನಡೆದದ್ದು, 2020ರ ಮಾರ್ಚ್ 15ರಂದು.
ಅದಾದ ಕೇವಲ ಒಂದು ವಾರದ ನಂತರದಲ್ಲಿ, ಭಾರತದಾದ್ಯಂತ ರಾಷ್ಟ್ರವ್ಯಾಪಿ ಲಾಕ್ಡೌನ್ ವಿಧಿಸಲಾಯಿತು.
ರುಕ್ಸಾನ ಅವರ ಉದ್ಯೋಗದಾತರು ಆಕೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸುವಂತೆ ತಿಳಿಸಿದರು. ಲಾಕ್ಡೌನ್ ಅವಧಿಯಲ್ಲಿ ಆಕೆಗೆ ಸಂಬಳವನ್ನು ನೀಡುವುದಿಲ್ಲವೆಂಬುದು ತಕ್ಷಣವೇ ಸ್ಪಷ್ಟವಾಯಿತು. ಐದು ಮನಗೆಳಲ್ಲಿನ ಕೆಲಸದಿಂದ ದೊರೆಯುತ್ತಿದ್ದ 15,000 ರೂ.ಗಳಿಗೆ ಬದಲಾಗಿ, ಒಂದು ಮನೆಯಲ್ಲಿ ಅಡಿಗೆಯ ಕೆಲಸವನ್ನು ಮುಂದುವರಿಸಿದ ಕಾರಣ, 2,400 ರೂ.ಗಳ ಸಂಪಾದನೆಯಷ್ಟೇ ಸಾಧ್ಯವಾಯಿತು. ಜೂನ್ ತಿಂಗಳಲ್ಲಿ ಆ ಕೆಲಸವೂ ಆಕೆಗೆ ಇಲ್ಲವಾಯಿತು. ಆದರೆ ತಕ್ಷಣವೇ ಮತ್ತೊಂದೆಡೆ ಅಡಿಗೆ ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ ಆಕೆ ನಿಯುಕ್ತಿಗೊಂಡರು. ರೋಗವನ್ನು ವ್ಯಾಪಕವಾಗಿ ಹರಡುತ್ತಿರುವವರ ಬಗ್ಗೆ ಕಳವಳಕ್ಕೀಡಾಗಿದ್ದ ಹೊಸ ಉದ್ಯೋಗದಾತರು, ರುಕ್ಸಾನ, ಮಸೀದಿಗೆ ಭೇಟಿ ನೀಡಿದ್ದರೇ ಎಂಬುದನ್ನು ತಿಳಿಯಬಯಸಿದರು. “ನನಗೆ ಇದರಿಂದ ಬೇಸರವಾಗಲಿಲ್ಲ. ಪ್ರತಿಯೊಬ್ಬರೂ ಕೊರೊನಾದಿಂದ ಭಯಭೀತರಾಗಿದ್ದಾರೆ. ಹಾಗಾಗಿ ಆಕೆಯ ಕಳವಳವು ನನಗೆ ಅರ್ಥವಾಯಿತು” ಎಂದರು ರುಕ್ಸಾನ.
ಜೂನ್ ತಿಂಗಳ ಹೊತ್ತಿಗೆ, ಈ ಪರಿವಾರದ ಉಳಿತಾಯವೆಲ್ಲವೂ ಮುಗಿಯುತ್ತಾ ಬಂದಿತ್ತು. ಹಳ್ಳಿಯಲ್ಲಿನ ಸಂಬಂಧಿಯೊಬ್ಬರು ನೀಡಿದ ಮಾಹಿತಿಯಂತೆ, ಮುಖ್ಯಮಂತ್ರಿಯ ವಿಶೇಷ ಸಹಾಯ ಯೋಜನೆಯಡಿಯಲ್ಲಿ ಬಿಹಾರ್ ಸರ್ಕಾರವು ವಲಸೆ ಕಾರ್ಮಿಕರಿಗೆ ಒದಗಿಸುವ ಒಂದು ಬಾರಿಯ ಧನ ಸಹಾಯ, 1,000 ರೂ.ಗಳನ್ನು ಇವರು ಕೋರಿದರು.
“ನಿತೀಶ್ ಕುಮಾರ್ ಅವರು ಕಳುಹಿಸಿದ ಪರಿಹಾರವನ್ನು ಪಡೆಯಲು ನನಗೆ ಸಾಧ್ಯವಾಯಿತಾದರೂ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಏಪ್ರಿಲ್ ತಿಂಗಳಿನಿಂದ ಮೂರು ತಿಂಗಳವರೆಗೂ 500 ರೂ.ಗಳನ್ನು ಒದಗಿಸುವ ಭರವಸೆಯ ನಿಟ್ಟಿನಲ್ಲಿ ಮೋದಿಯವರು ನೀಡಿದ ಹಣವನ್ನು ಹಿಂಪಡೆಯಲು ನನಗೆ ಸಾಧ್ಯವಾಗಲಿಲ್ಲ” ಎಂದರು ರುಕ್ಸಾನ. ಈಕೆಯ ಖಾತೆಯೊಂದಿಗೆ ಜೋಡಿಸಲಾದ ಸಂಪರ್ಕ ಕೊಂಡಿಯು (link) ತಪ್ಪಾಗಿರುವುದಾಗಿ ಬ್ಯಾಂಕಿನವರು ತಿಳಿಸಿದರು. “ಕ್ಯಾ ಹೋತಾ ಹೈ 1,000 ರುಪೀಸ್ ಸೆ? ಎರಡು ದಿನವೂ ಅದು ಉಳಿಯುವುದಿಲ್ಲ” ಎಂದರಾಕೆ.
ರುಕ್ಸಾನರ ಮನೆಯ ಬಳಿಯಲ್ಲಿನ ಸರ್ಕಾರಿ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ಆಹಾರದ ವಿತರಣೆಯು ಪ್ರಾರಂಭಗೊಂಡ ಕಾರಣ, ಸ್ವಲ್ಪ ನೆಮ್ಮದಿಯಾಯಿತು. ಇಲ್ಲಿ, ಬೆಳಿಗ್ಗೆ 11 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಊಟವನ್ನು ನೀಡಲಾಗುತ್ತಿತ್ತು. “ಎರಡು ಬಾರಿಯೂ ಅವರು ನಮಗೆ ದಾಲ್ ಅಥವ ರಾಜ್ಮದೊಂದಿಗೆ ಅನ್ನವನ್ನು ನೀಡುತ್ತಿದ್ದರು. ರೋಗಿಗಳಿಗೆ ನೀಡುವ ಊಟದಂತಿದ್ದ ಅದರಲ್ಲಿ, ಮಸಾಲೆಯಾಗಲಿ ಉಪ್ಪಾಗಲಿ ಇರುತ್ತಿರಲಿಲ್ಲ. 200 ಜನರ ಸಾಲಿನಲ್ಲಿ ನಾನು ನಿಲ್ಲಬೇಕಿತ್ತು. ಅಲ್ಲಿಗೆ ಬೇಗನೆ ತಲುಪಿದಲ್ಲಿ, ಊಟವು ದೊರೆಯುತ್ತಿತ್ತು. ಇಲ್ಲದಿದ್ದಲ್ಲಿ, ದಿನದ ಊಟಕ್ಕಾಗಿ ಹತ್ತಿರದಲ್ಲೇ ವಾಸಿಸುತ್ತಿರುವ ಹಾಗೂ ಇತರರ ಮನೆಗಳಲ್ಲಿ ಕೆಲಸಮಾಡುವ ತನ್ನ ತಾಯಿಯನ್ನು ಆಶ್ರಯಿಸುತ್ತಿದ್ದರು. (ಕೂಲಿ ಕಾರ್ಮಿಕರಾಗಿದ್ದ ಈಕೆಯ ತಂದೆ, ಹಲವು ವರ್ಷಗಳ ಮೊದಲೇ ಕ್ಷಯ ರೋಗದಿಂದಾಗಿ ಸಾವಿಗೀಡಾದರು.)
ಲಾಕ್ಡೌನ್ ಸಮಯದಲ್ಲಿ ಶಾಲೆಯಲ್ಲಿ ವಿತರಿಸಲಾಗುತ್ತಿದ್ದ ಊಟವು ಇಡೀ ಕುಟುಂಬಕ್ಕೆ ಸಾಲುತ್ತಿರಲಿಲ್ಲ. “ಮಕ್ಕಳು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕೆ, ನಾನು ಹಾಗೂ ನನ್ನ ಪತಿಯು ಅದರ ಸ್ವಲ್ಪ ಭಾಗವನ್ನು ಮಾತ್ರವೇ ತಿನ್ನುತ್ತಿದ್ದೆವು. ನಾವು ಬೇರೇನು ತಾನೇ ಮಾಡಲು ಸಾಧ್ಯವಿತ್ತು? ನಮಗಿಲ್ಲಿ ಪಡಿತರ ಚೀಟಿಯಿಲ್ಲ. ನಮ್ಮ ಹಳ್ಳಿಯಲ್ಲಿ ಅದಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ್ಯೂ ಅದು ನಮಗೆ ಸಿಗಲೇ ಇಲ್ಲ” ಎಂಬುದಾಗಿ ರುಕ್ಸಾನ ನನಗೆ ತಿಳಿಸಿದರು.
ಮೇ ತಿಂಗಳ ಕೊನೆಯಲ್ಲಿ, ಅನೇಕ ವಲಸೆ ಕಾರ್ಮಿಕರು ಮನೆಗೆ ವಾಪಸ್ಸು ಬರಲು ಪ್ರಾರಂಭಿಸಿದಾಗ, ಆಹಾರದ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆಯೆಂದು ಸರ್ಕಾರವು ತಿಳಿಸಿತು. ಇದರ ತರುವಾಯ, ರುಕ್ಸಾನ ಅವರನ್ನು ಈ ಹಿಂದೆ ಕೆಲಸಕ್ಕೆ ನೇಮಿಸಿಕೊಂಡಿದ್ದವರು ಗೋಧಿ, ಅಕ್ಕಿ, ಬೇಳೆಗಳನ್ನೊಳಗೊಂಡಂತೆ ಸ್ವಲ್ಪ ದಿನಸಿಗಳನ್ನು ನೀಡಿದರು. “ಹಳ್ಳಿಯಲ್ಲಿ ಕೆಲಸವಿಲ್ಲದ ಕಾರಣ, ನಾವು ದೆಹಲಿಯಲ್ಲೇ ಉಳಿಯಲು ನಿರ್ಧರಿಸಿದೆವು. ಈಗ ಇಲ್ಲಿ ವಾಸಿಸುವುದು ಕಷ್ಟವಾಗುತ್ತಿದೆ” ಎಂಬುದಾಗಿ ರುಕ್ಸಾನ, ಜೂನ್ 11ರಂದು ದೂರವಾಣಿಯ ಮೂಲಕ ನನಗೆ ತಿಳಿಸಿದರು.
ಹೀಗಾಗಿ, ಆ ತಿಂಗಳಿನಲ್ಲಿ, ವಕೀಲ್ ದೆಹಲಿಯಲ್ಲೇ ಉಳಿದರು, ರುಕ್ಸಾನ, ತನ್ನ ಮಕ್ಕಳೊಂದಿಗೆ ಸುಮಾರು 1,170 ಕಿ.ಮೀ. ದೂರದ ಅವರ ಹಳ್ಳಿ, ದರ್ಭಾಂಗಕ್ಕೆ ತೆರಳಲು ನಿಶ್ಚಯಿಸಿದರು.
ಅಷ್ಟರಲ್ಲಾಗಲೇ, ಬಾಕಿಯುಳಿದಿದ್ದ Rs. 15,000 ರೂ.ಗಳ ಕೋಣೆಯ ಬಾಡಿಗೆ ಮತ್ತು 16,500 ರೂ.ಗಳ ವಕೀಲ್ ಅವರ ಅಂಗಡಿಯ ಬಾಡಿಗೆಯ ಬಗ್ಗೆ ಇವರು ಆತಂಕಕ್ಕೀಡಾಗಿದ್ದರು. ಈ ಪರಿವಾರದ ವಿನಂತಿಯ ಮೇರೆಗೆ ಮಾಲೀಕರು ಎರಡು ತಿಂಗಳ ಬಾಡಿಗೆಯನ್ನು ಮನ್ನಾಮಾಡಿದರು. ಬಿಹಾರಕ್ಕೆ ತೆರಳುವ ಮೊದಲು, ರುಕ್ಸಾನ, ತನ್ನನ್ನು ಈ ಹಿಂದೆ ಕೆಲಸಕ್ಕೆ ನೇಮಿಸಿಕೊಂಡಿದ್ದವರಿಂದ ಹಣವನ್ನು ಸಾಲ ಪಡೆದು, ಒಂದು ತಿಂಗಳ ಬಾಡಿಗೆಯನ್ನು ಪಾವತಿಸಿದರು.
ತಾವು ಪಡಿತರ ಚೀಟಿಗೆ ಅರ್ಹರಾಗಿದ್ದು, ಕೊನೆಯ ಪಕ್ಷ ಬಿಹಾರದಲ್ಲಿಯಾದರೂ ಅದರ ಮೂಲಕ ತಮಗೆ ಸ್ವಲ್ಪ ದಿನಸಿಯು ದೊರೆಯಬಹುದೆಂದು ಆಕೆ ನಿರೀಕ್ಷಿಸಿದ್ದರಾದರೂ, ಇದುವರೆಗೂ ಆಕೆಗೆ ಅದು ದೊರೆತಿರುವುದಿಲ್ಲ. 2013ರ ರಾಷ್ಟ್ರೀಯ ಆಹಾರ ಭದ್ರತೆ ಅಧಿನಿಯಮದ ಅನುಸಾರ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ, ನಿರ್ದಿಷ್ಟ ‘ನ್ಯಾಯಬೆಲೆ ಅಂಗಡಿಗಳಿಂದ’ (ಪಡಿತರ ವಿತರಣಾ ಕೇಂದ್ರ) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಒಂದು ಕೆ.ಜಿ ಅಕ್ಕಿಗೆ 3, ಗೋಧಿಗೆ 2, ಕಿರು ಧಾನ್ಯಗಳಿಗೆ 1 ರೂ.ಗಳಂತೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹವಾಗಿವೆ. ‘ಆದ್ಯತೆ’ ನೀಡಲಾಗುವ ವರ್ಗದಲ್ಲಿನ ಕುಟುಂಬಗಳು ತಿಂಗಳಿಗೆ 25 ಕೆ.ಜಿ ಆಹಾರ ಧಾನ್ಯಗಳಿಗೆ ಅರ್ಹವೆನಿಸಿದ್ದು, ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿನ ಕಡುಬಡತನದ ಕುಟುಂಬಗಳು ಮಾಹೆಯಾನ 35 ಕೆ.ಜಿ.ಗಳವರೆಗೂ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ.
ಮೇ 2020ರಲ್ಲಿ ಕೇಂದ್ರ ಸರ್ಕಾರವು, ದೇಶಾದ್ಯಂತ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ (ಮಾರ್ಚ್ 2021ರಂದು ಪೂರ್ಣಗೊಳ್ಳುವಂತೆ) ಎಂಬುದಾಗಿ ಘೋಷಿಸಿತು. ಪಡಿತರ ಚೀಟಿಯನ್ನು ವ್ಯಕ್ತಿಯ ಆಧಾರ್ ಕಾರ್ಡಿನೊಂದಿಗೆ ಜೋಡಿಸಿದ ನಂತರ ಅದನ್ನು (ಎಲ್ಲಿಯೇ ನೋಂದಾಯಿಸಲ್ಪಟ್ಟಿದ್ದರೂ) ಎಲ್ಲಿಗೆ ಬೇಕಾದರೂ ಒಯ್ದು, ಅದರ ಪ್ರಯೋಜನವನ್ನು ಪಡೆಯುವ ಅವಕಾಶವು ದೊರೆಯಲಿದೆ. ಇದನ್ನು ಯಥಾರ್ಥವಾಗಿಯೂ ಜಾರಿಗೆ ತಂದಲ್ಲಿ, ರುಕ್ಸಾನಾರ ಪರಿಸ್ಥಿತಿಯಲ್ಲಿರುವ ಯಾರೇ ಆದರೂ ದೇಶದ ಯಾವುದೇ ವಿತರಣಾ ಕೇಂದ್ರದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿನ ಪಡಿತರವನ್ನು ಪಡೆಯಬಹುದಾಗಿದೆ.
ಪಟೇಲ್ ನಗರದಲ್ಲಿ ಈ ಕುಟುಂಬದ ನೆರೆಹೊರೆಯಲ್ಲಿದ್ದವರು ವಾರ್ತೆಯಲ್ಲಿ ಪಡಿತರ ಚೀಟಿಯನ್ನು ಎಲ್ಲಗೆ ಬೇಕಾದರೂ ಒಯ್ದು ಅದರ ಪ್ರಯೋಜನ ಪಡೆಯಬಹುದೆಂಬ ವಿಷಯವನ್ನು ಆಲಿಸಿ, ರುಕ್ಸಾನ ಹಾಗೂ ವಕೀಲ್ ಅವರಿಗೆ ಈ ಬಗ್ಗೆ ತಿಳಿಸಿದರು. ಬಿಹಾರದಲ್ಲಿ ಇವರಿಗಿನ್ನೂ ತಲುಪಿರದ ಪಡಿತರ ಚೀಟಿಯನ್ನು ಪಡೆಯುವುದು ಅನಿವಾರ್ಯವಾಯಿತು.
“ಮುಂಬರುವ ತಿಂಗಳುಗಳಿಗೆ ನಾವು ಸಿದ್ಧರಿರಬೇಕು. ಈಗ ನಮಗೆ ದೆಹಲಿಯಲ್ಲಿ ಕೆಲಸ ದೊರೆಯಬಹುದೋ ಇಲ್ಲವೋ ಎಂಬುದು ಯಾರಿಗೆ ಗೊತ್ತು? ಈ ಹೊಸ ವ್ಯವಸ್ಥೆಯ ನಿಟ್ಟಿನಲ್ಲಿ ಪಡಿತರ ಚೀಟಿಯೊಂದಿಗೆ ನಾವು ರಾಜಧಾನಿಯಲ್ಲಿ ಜೀವನ ಸಾಗಿಸಬಹುದು. ಇಲ್ಲದಿದ್ದಲ್ಲಿ, ನಾವು ಬಿಹಾರಕ್ಕೆ ವಾಪಸ್ಸಾಗುತ್ತೇವೆ. ನಮ್ಮ ಹಳ್ಳಿಯಲ್ಲಿ ಯಾವುದೇ ಕೆಲಸವು ದೊರೆಯದಿದ್ದಾಗ್ಯೂ, ಪಡಿತರ ಚೀಟಿಯೊಂದಿದ್ದಲ್ಲಿ, ನಮ್ಮ ಹೊಟ್ಟೆಯನ್ನಾದರೂ ತುಂಬಿಸಿಕೊಳ್ಳಬಹುದು” ಎಂದಿದ್ದರು ರುಕ್ಸಾನ.
ಜೂನ್ 17ರಂದು, ರುಕ್ಸಾನ ಮತ್ತು ಆಕೆಯ ಮಕ್ಕಳು ಬಿಹಾರ್ ಸಂಪರ್ಕ್ ಕ್ರಾಂತಿ ಎಂಬ ಕೋವಿಡ್-19 ವಿಶೇಷ ರೈಲಿನಲ್ಲಿ ಪ್ರಯಾಣವನ್ನು ಕೈಗೊಂಡರು. ವಕೀಲ್ ಅವರು ಕೆಲಸವನ್ನು ಮತ್ತೆ ಪ್ರಾರಂಭಿಸುವ ನಿರೀಕ್ಷೆಯಲ್ಲಿ ದೆಹಲಿಯಲ್ಲೇ ಉಳಿದರು.
ಬಿಹಾರದಲ್ಲಿ, ಸೆಪ್ಟೆಂಬರ್ ಮೊದಲ ಭಾಗದವರೆಗೂ ಮುಂದುವರಿಸಲ್ಪಟ್ಟ ಲಾಕ್ಡೌನ್ ಹಾಗೂ ಜುಲೈ, ಆಗಸ್ಟ್ ತಿಂಗಳಿನಲ್ಲಿ ದರ್ಭಾಂಗದಲ್ಲಿನ ಪ್ರವಾಹದಿಂದಾಗಿ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು. ಮೋಹನ್ ಬಹೆರ ಹಳ್ಳಿಯಲ್ಲಿ ಪ್ರವಾಹವಿಲ್ಲದಾಗ್ಯೂ, ಪಡಿತರ ಚೀಟಿಯ ಬಗ್ಗೆ ವಿಚಾರಿಸಲು ಪ್ರಯಾಣಮಾಡುವುದು ಮತ್ತಷ್ಟು ಕಷ್ಟಕರವಾಯಿತು. ಆದಾಗ್ಯೂ, 2020ನೇ ಜುಲೈ ಮತ್ತು ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ರುಕ್ಸಾನಾರವರು 10 ಕಿ.ಮೀ. ದೂರದ ಬೆನಿಪುರ್ ನಗರ್ ಪರಿಷದ್ಗೆ ಎರಡು ಬಾರಿ ತೆರಳಿದಾಗಲೂ ಪಡಿತರ ಚೀಟಿಯ ಕಛೇರಿಯನ್ನು ಮುಚ್ಚಲಾಗಿತ್ತು.
ಸೆಪ್ಟೆಂಬರ್ ತಿಂಗಳಿನಲ್ಲಿ ಆಕೆಯು ಪಡಿತರ ಚೀಟಿಯ ಬಗ್ಗೆ ವಿಚಾರಿಸಲು ಮತ್ತೊಮ್ಮೆ ಬೆನಿಪುರ್ಗೆ ತೆರಳಿದರು. ಅಲ್ಲಿನ ನೌಕರರು ಪಡಿತರ ಚೀಟಿಯಿನ್ನೂ ಬಂದಿಲ್ಲವಾಗಿ, ಆಕೆಯು ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
“2018ರ ಆಗಸ್ಟ್ ತಿಂಗಳಿನಲ್ಲಿ ನನ್ನ ಅತ್ತೆಯವರೊಂದಿಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು (ಮೂರನೆಯ ಬಾರಿಗೆ) ಬೆನಿಪುರ್ಗೆ ತೆರಳಿದಾಗ, ಅಲ್ಲಿನ ನೌಕರರು ನನಗೆ ಚೀಟಿಯೊಂದನ್ನಿತ್ತು, ಹಳ್ಳಿಯಲ್ಲಿನ ನಮ್ಮ ಮನೆಗೆ ಪಡಿತರ ಚೀಟಿಯನ್ನು ಕಳುಹಿಸಲಾಗುತ್ತದೆಯೆಂದು ತಿಳಿಸಿದರು. ಆದರೆ ನಮ್ಮ ಅತ್ತೆಯವರ ಮನೆಗೆ ಅದು ರವಾನೆಯಾಗಲೇ ಇಲ್ಲ” ಎಂದರಾಕೆ. ಸ್ಥಳೀಯ ಸ್ವಸಹಾಯ ಗುಂಪಿನಿಂದ ಪಡೆದ 35,000 ರೂ.ಗಳ ಸಾಲದಿಂದ ಇವರ ಪಕ್ಕಾ ಮನೆಯ ಸ್ವಲ್ಪ ಭಾಗವನ್ನು ನಿರ್ಮಿಸಲಾಗಿದ್ದು, ಆ ತಿಂಗಳಿನಲ್ಲಿ ಅದರ ನಿರ್ಮಾಣವು ಪೂರ್ಣಗೊಂಡಿತು.
ರುಕ್ಸಾನ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಐದು ವರ್ಷಗಳು ಸಂದಿವೆ. ಪ್ರತಿಯೊಂದು ಪ್ರಯತ್ನದ ನಂತರವೂ ಆಕೆಗೆ ಚೀಟಿಯೊಂದನ್ನು ನೀಡಲಾಗುತ್ತದೆಯೇ ಹೊರತು ಪಡಿತರ ಚೀಟಿಯಂತೂ ದೊರೆತಿರುವುದಿಲ್ಲ. ಆಗಸ್ಟ್ 2018ರಲ್ಲಿ ಬೆನಿಪುರ್ನಲ್ಲಿ ಅರ್ಜಿ ಸಲ್ಲಿಸಿದ ತನ್ನ ಮೂರನೆಯ ಪ್ರಯತ್ನದಲ್ಲಿ, [ರುಕ್ಸಾನ ಬಿಹಾರಕ್ಕೆ ಹಿಂದಿನ ಸಾರಿ ಭೇಟಿ ನೀಡಿದಾಗ (ಜೂನ್ 2020ಕ್ಕೂ ಮೊದಲು)] ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ನ ಪ್ರತಿಯನ್ನು ಆಕೆಯು ಸಲ್ಲಿಸಬೇಕಾಯಿತು. ಆದರೆ ಆ ಆಧಾರ್ ಕಾರ್ಡನ್ನು ದೆಹಲಿಯಲ್ಲಿ ಪಡೆಯಲಾಗಿದ್ದ ಕಾರಣ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ಅದರಲ್ಲಿನ ವಿಳಾಸವನ್ನು ಹಳ್ಳಿಯಲ್ಲಿನ ವಿಳಾಸಕ್ಕೆ ಬದಲಿಸಬೇಕಿತ್ತು.
“ಇಂತಹ ಕೆಲಸಗಳಿಗೆಲ್ಲ ಇಲ್ಲಿ ಹಣವನ್ನು (ಲಂಚ) ನೀಡಬೇಕಾಗುತ್ತದೆ. ಆಗ ನೀವು ಏನನ್ನಾದರೂ ಪಡೆಯಬಹುದು” ಎಂಬುದಾಗಿ ರುಕ್ಸಾನ ಅಕ್ಟೋಬರ್ 6ರಂದು ದೂರವಾಣಿಯಲ್ಲಿ ನನಗೆ ತಿಳಿಸಿದ್ದರು. ಬಹುಶಃ, ಈಗಲೂ ತನ್ನ ತಾಯಿಯ ಕಾರ್ಡಿನಲ್ಲಿ ಈಕೆಯ ಹೆಸರು ನಮೂದಿಸಲ್ಪಟ್ಟಿರುವ ಕಾರಣ, ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ತನಗೆ ಪಡಿತರ ಚೀಟಿಯನ್ನು ನೀಡಲಾಗಿಲ್ಲವೆಂಬುದು ಅವರ ಅನಿಸಿಕೆ. “ಅದನ್ನು ತೆಗೆಸಬೇಕು. ಆಗ ಮಾತ್ರವೇ ಇಲ್ಲಿ ಏನಾದರೂ ಮಾಡಲು ಸಾಧ್ಯವೆಂದು ನನಗನಿಸುತ್ತದೆ” ಎಂದರಾಕೆ.
ಇದಕ್ಕಾಗಿ ಅವರು ಪಡಿತರ ಕಛೇರಿಗೆ ಹಲವಾರು ಬಾರಿ ಎಡತಾಕಬೇಕಾಗುತ್ತದೆ. ಮತ್ತಷ್ಟು ಕಾಗದಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ಆಗಸ್ಟ್ನಿಂದ ದೆಹಲಿಯಲ್ಲಿ ವಕೀಲ್ ಅವರಿಗೆ ಕೆಲವು ಹೊಲಿಗೆಯ ಕೆಲಸಗಳು ದೊರೆಯಲಾರಂಭಿಸಿದವು. “ಕೆಲವೊಮ್ಮೆ ಒಬ್ಬಿಬ್ಬರು ಗಿರಾಕಿಗಳು ಬರುತ್ತಿದ್ದರು. ಅಂದು ನಾನು 200-250 ರೂ.ಗಳನ್ನು ಸಂಪಾದಿಸುತ್ತಿದ್ದೆ. ಕೆಲವೊಮ್ಮೆ ಗಿರಾಕಿಗಳೇ ಇರುತ್ತಿರಲಿಲ್ಲ” ಎಂದು ಅವರು ತಿಳಿಸಿದರು. ಪ್ರತಿ ತಿಂಗಳು ಇವರು 500 ರೂ.ಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ.
ಜೂನ್ನಿಂದ ಆಗಸ್ಟ್ವರೆಗಿನ ಬಾಡಿಗೆಯನ್ನು ಪಾವತಿಸಲು ಈ ಪರಿವಾರಕ್ಕೆ ಮತ್ತೊಮ್ಮೆ ಸಾಧ್ಯವಾಗದಿದ್ದಾಗ, ಮಾಲೀಕನು ಕೋಣೆಯನ್ನು ತೆರವುಗೊಳಿಸುವಂತೆ ವಕೀಲ್ ಅವರಿಗೆ ತಿಳಿಸಿದನು. ಸೆಪ್ಟೆಂಬರ್ನಲ್ಲಿ ಅವರು, ಚಿಕ್ಕ ವಾಸಸ್ಥಳಕ್ಕೆ ತೆರಳಿದರು. ಅಂಗಡಿಯ ಬಾಡಿಗೆಯು ಈಗಲೂ ಬಾಕಿಯಿತ್ತು. ಬಾಡಿಗೆಯನ್ನು ಪಾವತಿಸಲು ಹಾಗೂ ದೆಹಲಿಯಲ್ಲಿ ಈ ಹಿಂದೆ ತಮಗೆ ನೌಕರಿ ನೀಡಿದ್ದ ಮಾಲೀಕನಿಂದ ಈ ದಂಪತಿಗಳು ಪಡೆದಿದ್ದ 12,000 ರೂ.ಗಳನ್ನು ವಾಪಸ್ಸು ನೀಡಲು ಮತ್ತು ತರಕಾರಿ ಮಾರುವಾತ ಹಾಗೂ ಇತರರಿಂದ ಸಾಲಕ್ಕೆ ಪಡೆದಿದ್ದ ವಸ್ತುಗಳ ಹಣವನ್ನು ಹಿಂದಿರುಗಿಸಲು ರುಕ್ಸಾನ, ಸ್ವಸಹಾಯ ಗುಂಪಿನಿಂದ 30,000 ರೂ.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಈ ಅರ್ಜಿಯು ಇದುವರೆಗೂ ಬಾಕಿಯುಳಿದಿದೆ. ಲಾಕ್ಡೌನ್ನಲ್ಲಿ ಪಡೆದಿದ್ದ 10,000 ರೂ.ಗಳ ಸಾಲವನ್ನು ಹಿಂದಿರುಗಿಸುವಂತೆ ದೆಹಲಿಯಲ್ಲಿನ ಹಿಂದಿನ ಉದ್ಯೋಗದಾತರು ಒತ್ತಾಯಿಸಿದ್ದರಿಂದಾಗಿ, ಹಳ್ಳಿಯಲ್ಲಿನ ವ್ಯಕ್ತಿಯೊಬ್ಬರಿಂದ ಈಕೆಯು 10,000 ರೂ.ಗಳ ಸಾಲವನ್ನು ಪಡೆದರು.
ರುಕ್ಸಾನ, ಸ್ವಲ್ಪ ದಿನಗಳವರೆಗೂ ಬಿಹಾರದಲ್ಲೇ ಉಳಿಯಲು ನಿಶ್ಚಯಿಸಿದರು. ದೆಹಲಿಯಲ್ಲಿ ಮತ್ತೊಮ್ಮೆ ಮನೆಕೆಲಸವು ದೊರೆಯುವ ಬಗ್ಗೆ ಅವರಿಗೆ ಭರವಸೆಯಿರಲಿಲ್ಲ. ಹಳ್ಳಿಯಲ್ಲಿನ ಪಡಿತರ ಚೀಟಿಗಾಗಿ ಕಾಯುವ ಇಚ್ಛೆಯೂ ಅವರಿಗಿತ್ತು.
“ನನ್ನ ಪತಿಯು, ಉಪವಾಸವಿದ್ದರೂ ಸರಿಯೇ, ಯಾರನ್ನೂ ಸಹಾಯಕ್ಕಾಗಿ ಯಾಚಿಸುವುದಿಲ್ಲವೆಂಬುದು ನನಗೆ ತಿಳಿದಿತ್ತು. ಸರ್ಕಾರವೇ ಏನಾದರೂ ಮಾಡಿ, ನಮಗೆ ಪಡಿತರ ಚೀಟಿಯನ್ನು ಕೊಡಬಹುದಷ್ಟೇ“ ಎಂದರಾಕೆ.
ಅನುವಾದ - ಶೈಲಜ ಜಿ . ಪಿ .