ಮೀನಾ ಯಾದವ್‌ ಭೋಜಪುರಿ, ಬಾಂಗ್ಲಾ, ಮತ್ತು ಹಿಂದಿ ಬಳಸಿ ತಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ. ಅವರ ಸ್ನೇಹಿತರು, ಕೆರೆಗೆ ದಾರಿ ಕೇಳಿಕೊಂಡು ಬರುವ ಅಪರಿಚಿತರು ಹೀಗೆ ಎಲ್ಲರೊಡನೆಯೂ ಅವರು ಇದೇ ರೀತಿ ವ್ಯವಹರಿಸುತ್ತಾರೆ. ಅವರು ಇರುವುದು ಬಹುಭಾಷಿಕ ಜನರಿರುವ ದಕ್ಷಿಣ ಕೊಲ್ಕತಾದಲ್ಲಿ. “ಇದು [ಭಾಷೆ] ಕೊಲ್ಕತಾದಲ್ಲಿ ಒಂದು ಸಮಸ್ಯೆಯೇ ಅಲ್ಲ” ಎಂದು ವಲಸಿಗರು ತಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳನ್ನು ವಿವರಿಸುತ್ತಾ ಹೇಳುತ್ತಾರೆ.

“ಯೇ ಕೆಹನೇ ಕಾ ಬಾತ್‌ ಬಾತ್‌ ಹೈ ಕೀ ಬಿಹಾರಿ ಲೋಗ್‌ ಬಿಹಾರ್‌ ಮೇ ರಹೇಗಾ [ಬಿಹಾರದವರು ಬಿಹಾರದಲ್ಲೇ ಇರಬೇಕೆನ್ನುವುದು ಸುಲಭ]. ಸತ್ಯವೆಂದರೆ ಶ್ರಮದ ಕೆಲಸಗಳೆಲ್ಲವೂ ನಮ್ಮಿಂದಲೇ ಮಾಡಲ್ಪಡುತ್ತವೆ. ಎಲ್ಲ ಕೂಲಿಗಳು, ನೀರು ಸಾಗಿಸುವವರು, ಮತ್ತು ಕೂಲಿಗಳು ಬಿಹಾರಿಗಳೇ. ಇವೆಲ್ಲ ಬಂಗಾಳಿಗಳಿಂದ ಸಾಧ್ಯವಿಲ್ಲ. ನೀವು ಹೊಸ ಮಾರ್ಕೆಟ್‌, ಹೌರಾ, ಶೆಲ್ಡಾ… ಹೀಗೆ ಎಲ್ಲಿ ಬೇಕಾದರೂ ನೋಡಿ. ಅಲ್ಲಿ ಬಿಹಾರಿಗಳು ಭಾರದ ಮೂಟೆಗಳನ್ನು ಹೊರುತ್ತಿರುತ್ತಾರೆ. ಇಷ್ಟು ಶ್ರಮದ ದುಡಿಮೆಯನ್ನು ಮಾಡಿದರೂ ಅವರಿಗೆ ಗೌರವ ಸಿಗುವುದಿಲ್ಲ. ಬಿಹಾರಿಗಳು ಎಲ್ಲರನ್ನೂ ಬಾಬು… ಎಂದು ಕರೆಯುತ್ತಾರೆ. ಆದರೆ ಅವರನ್ನು ಕೆಳ ದರ್ಜೆಯ ಜನರಂತೆ ನೋಡಲಾಗುತ್ತದೆ. “ಮಾವಿನ ಹಣ್ಣಿನ ಖಂಡ ಬಂಗಾಳಿ ಬಾಬುಗಳಿಗೆ ಸಿಕ್ಕರೆ, ನಮಗೆ ಉಳಿಯುವುದು ಗೊರಟೆ ಮಾತ್ರ.” ಅವರು ಎಡೆಬಿಡದೆ ಮಾತನಾಡುತ್ತಲೇ ಇದ್ದರು.

ಮೀನಾ ಯಾದವ್‌ ರಾಜಕೀಯ ಮತ್ತು ಭಾಷಾ ಅಸ್ಮಿತೆಯ ನಡುವೆ ತಮ್ಮ ಮಾತನ್ನು ಬಹಳ ಜಾಣ್ಮೆಯಿಂದ ಬದಲಾಯಿಸುತ್ತಾರೆ.

ಚೆನೈಯಲ್ಲಿ ನಾವು ಭಾಷೆಯ ಸಮಸ್ಯೆ ಎದುರಿಸಿದ್ದೆವು. ಅಲ್ಲಿನ ಜನರು ಹಿಂದಿ ಅಥವಾ ಭೋಜಪುರಿಯಲ್ಲಿ ಉತ್ತರ ಕೊಡುವುದಿಲ್ಲ. ಅವರು ನಮಗೆ ಅರ್ಥವಾಗದ ಅವರ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಇಲ್ಲಿ ಆ ಸಮಸ್ಯೆಯಿಲ್ಲ” ಎನ್ನುತ್ತಾರೆ ಮೀನಾ. “ನೋಡಿ ಬಿಹಾರಿ ಭಾಷೆಯೊಂದೇ ಅಲ್ಲ. ನಾವು ಮನೆಯಲ್ಲಿ ಮೂರ್ನಾಲ್ಕು ಭಾಷೆ ಮಾತನಾಡುತ್ತೇವೆ. ಒಮ್ಮೆ ಭೋಜಪುರಿ ಮಾತನಾಡಿದರೆ ಇನ್ನೊಮ್ಮೆ ಹಿಂದಿಯಲ್ಲಿ ಮಾತನಾಡುತ್ತೇವೆ. ಕೆಲವೊಮ್ಮೆ ಧರ್ಭಾಂಗಿಯಲ್ಲೂ (ಮೈಥಿಲಿ) ಮಾತನಾಡುವ ನಾವು ಇನ್ನೂ ಕೆಲವೊಮ್ಮೆ ಬಂಗಾಳಿಯಲ್ಲಿ ಮಾತನಾಡುತ್ತೇವೆ. ನಮಗೆ ಸುಲಭವೆನ್ನಿಸುವುದು ದರ್ಭಾಂಗಿಯಾ” ಎನ್ನುತ್ತಾರೆ ಬಿಹಾರದ ಛಪ್ರಾ ಮೂಲದ ಈ 45 ವರ್ಷದ ಜೋಳದ ವ್ಯಾಪಾರಿ ಮಹಿಳೆ.

"ನಾವು ಆರಾಹ್ ಮತ್ತು ಛಾಪ್ರಾ ಬೋಲಿಯನ್ನು ಸಹ ಬಳಸುತ್ತೇವೆ. ಯಾವುದೇ ಸಮಸ್ಯೆಯಿಲ್ಲ, ನಾವು ಯಾವುದೇ ಭಾಷೆಯಲ್ಲಿ ಮಾತನಾಡಲು ಬಯಸಿದರೂ, ಮಾತಾಡುತ್ತೇವೆ" ಎಂದು ಅವರು ಹೇಳುತ್ತಾರೆ. ಆದರೂ, ಇಷ್ಟೊಂದು ಭಾಷೆಗಳ ಅರಿವು ಅವರ ಅಸಾಧರಣ ಕೌಶಲದ ಒಂದು ಭಾಗ ಎಂದು ನಂಬಲು ಅವರು ಸಿದ್ಧರಿಲ್ಲ.

PHOTO • Smita Khator

ದಕ್ಷಿಣ ಕೋಲ್ಕತಾದ ಲೇಕ್ ಮಾರ್ಕೆಟ್ ಪ್ರದೇಶದಲ್ಲಿ ಜೋಳ ಮಾರಾಟ ಮಾಡುವ ಬಿಹಾರದವರಾದ ಮೀನಾ ಯಾದವ್, ಭೋಜ್ಪುರಿ, ಬಾಂಗ್ಲಾ, ಮೈಥಿಲಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾ ಸುಲಭವಾಗಿ  ವ್ಯಾಪಾರ ಮಾಡಬಲ್ಲರು. ಅವರು ಆರಾಹ್ ಮತ್ತು ಛಾಪ್ರಾ ಬೋಲಿಯಲ್ಲೂ ಮಾತನಾಡಬಲ್ಲರು

ʼಜಗತ್ತಿನ ಬಹುತ್ವವನ್ನು ವ್ಯಕ್ತಪಡಿಸುವ ಮಾಧ್ಯಮವಾದ ಭಾಷೆಗಳನ್ನು ಆಚರಿಸುವʼ ಸಲುವಾಗಿ ಯುನೆಸ್ಕೋ ಈ ಅಂತರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುತ್ತದೆ. ಮೀನಾ ಅವರ ವಿಷಯದಲ್ಲಿ ಈ ವಿಷಯ ಬಹಳ ಸರಳ. ಅವರಿಗೆ ಹಲವು ಭಾಷೆಯನ್ನು ಕಲಿಯುವ ಅನಿವಾರ್ಯತೆಯು ಅವರ ಮಾಲಿಕರು, ಉದ್ಯೋಗದಾತರು, ಅವರ ವ್ಯವಹಾರದ ಗ್ರಾಹಕರು, ಅವರು ವಾಸಿಸುವ ಸ್ಥಳಗಳಿಂದ ಹುಟ್ಟಿದೆ. “ಹೆಚ್ಚು ಭಾಷೆಗಳನ್ನು ಕಲಿಯುವುದು ಒಳ್ಳೆಯ ಸಂಗತಿಯೇ, ಆದರೆ ನಾವು ಅದನ್ನು ಕಲಿತಿರುವುದು ಹೊಟ್ಟೆಪಾಡಿನ ಸಲುವಾಗಿ.” ಎನ್ನುತ್ತಾರಾಕೆ.

ಈ ಬಾರಿಯ ಅಂತರಾಷ್ಟ್ರೀಯ ತಾಯ್ನುಡಿ ದಿನದಂದು , ಪರಿ ಭಾರತದಾದ್ಯಂತ ಇರುವ ವಲಸೆ ಕಾರ್ಮಿಕರನ್ನು ಕಂಡು ಅವರ ಬದುಕಿನಲ್ಲಿ ನೆಲ , ಭಾಷೆ ಮತ್ತು ಜೀವನೋಪಾಯದ ನಡುವಿನ ಪರಸ್ಪರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿ ̧ದೆ. ನಾವು ಅವರು ತಮ್ಮ ನೆಲೆಯಲ್ಲಿ ಅವರು ಕಟ್ಟಿಕೊಂಡಿರುವ ಭಾಷಾ ಜಗತ್ತಿನ ಒಳಗೆ ನೋಡಲು ಯತ್ನಿಸಿದೆವು.

ಅಸ್ಸಾಂನ ಕಚಾರ್ ಜಿಲ್ಲೆಯ ಬೊರ್ಕೊಲಾ ಬ್ಲಾಕಿಗೆ ಮರಳಿದ ನಂತರ ಪುಣೆಯ ವಲಸೆ ಕಾರ್ಮಿಕ ಶಂಕರ್ ದಾಸ್ ವಿಚಿತ್ರ ಸವಾಲನ್ನು ಎದುರಿಸುತ್ತಿದ್ದಾರೆ. ಅವರು ಹುಟ್ಟಿ ಬೆಳೆದ ಊರು ಜರೈಲ್‌ತಲಾದಲ್ಲಿ ಬಾಂಗ್ಲಾ ಮಾತನಾಡುವ ಜನರೇ ತುಂಬಿದ್ದರು. ಹೀಗಾಗಿ, ಅವರು ರಾಜ್ಯದ ಅಧಿಕೃತ ಭಾಷೆಯಾದ ಅಸ್ಸಾಮಿಯನ್ನು ಕಲಿಯಲಿಲ್ಲ. ಅವರು ತಮ್ಮ ಇಪ್ಪತ್ತರ ಹರೆಯದಲ್ಲಿದ್ದಾಗ ಮನೆಯನ್ನು ತೊರೆದರು ಹಾಗೂ ಪುಣೆಯಲ್ಲಿ ಕಳೆದ ಒಂದೂವರೆ ದಶಕದಲ್ಲಿ ಕೆಲಸ ಮಾಡುತ್ತಾ ಅವರು ಹಿಂದಿಯನ್ನು ಕರಗತ ಮಾಡಿಕೊಂಡರು ಮತ್ತು ಮರಾಠಿಯನ್ನು ಸಹ ಕಲಿತರು.

"ನನಗೆ ಮರಾಠಿ ಚೆನ್ನಾಗಿ ಗೊತ್ತು. ನಾನು ಪುಣೆಯ ಉದ್ದಗಲಕ್ಕೂ ಓಡಾಡಿದ್ದೇನೆ. ಆದರೆ ನನಗೆ ಅಸ್ಸಾಮಿ ಮಾತನಾಡಲು ಬರುವುದಿಲ್ಲ. ಅರ್ಥಮಾಡಿಕೊಳ್ಳಬಲ್ಲೆ ಆದರೆ ಮಾತನಾಡಲು ಸಾಧ್ಯವಿಲ್ಲ" ಎಂದು 40 ವರ್ಷದ ಅವರು ವಿವರಿಸುತ್ತಾರೆ.  ಕೋವಿಡ್ ಸಮಯದಲ್ಲಿ ಶಂಕರ್ ಪುಣೆಯ ಮಷಿನರಿ ವರ್ಕ್‌ಶಾಪ್‌ ಒಂದರಲ್ಲಿ ಮಾಡುತ್ತಿದ್ದ ಕೆಲಸ ಕಳೆದುಕೊಂಡಾಗ ಅಸ್ಸಾಂಗೆ ಹಿಂದಿರುಗಿ ಬಂದು ಕೆಲಸ ಹುಡುಕಬೇಕಾಯಿತು.  ಜರೈಲ್‌ತಲಾ ಎಂಬ ಹಳ್ಳಿಯಲ್ಲಿ ಕೆಲಸ ಸಿಗದೆ, ಅವರು ಗುವಾಹಟಿಗೆ ಹೋದರು ಆದರೆ ಅಸ್ಸಾಮಿ ಜ್ಞಾನವಿಲ್ಲದ ಕಾರಣ ಅಲ್ಲಿಯೂ ಅದೃಷ್ಟ ಫಲಿಸಲಿಲ್ಲ.

ಮೀನಾ ಅವರ ವಿಷಯದಲ್ಲಿ ಈ ವಿಷಯ ಬಹಳ ಸರಳ. 'ಹೆಚ್ಚು ಭಾಷೆಗಳನ್ನು ಕಲಿಯುವುದು ಒಳ್ಳೆಯ ಸಂಗತಿಯೇ, ಆದರೆ ನಾವು ಅದನ್ನು ಕಲಿತಿರುವುದು ಹೊಟ್ಟೆಪಾಡಿನ ಸಲುವಾಗಿ,' ಎನ್ನುತ್ತಾರಾಕೆ

ವಿಡಿಯೋ ನೋಡಿ: ಬಿಹಾರದ ಮೀನಾ ಯಾದವ್ ಮತ್ತು ಜಾರ್ಖಂಡ್‌ನ ಪ್ರಫುಲ್ ಸುರಿನ್ ಅವರ ಭಾಷೆಯ ಕುರಿತಾದ ಅನುಭಗಳ ಮಾತು

"ಉದ್ಯೋಗದಾತರೊಂದಿಗೆ ಮಾತನಾಡುವುದನ್ನು ಮರೆತುಬಿಡಿ, ಇಲ್ಲಿ ಭಾಷೆ ಬರದೆ ಬಸ್ ಹತ್ತುವುದು ಸಹ ಕಷ್ಟ" ಎಂದು ಅವರು ಹೇಳುತ್ತಾರೆ. "ನಾನು ಪುಣೆಗೆ ಮರಳುವ ಬಗ್ಗೆ ಯೋಚಿಸುತ್ತಿದ್ದೇನೆ. ನನಗೂ ಕೆಲಸ ಸಿಗುತ್ತದೆ ಮತ್ತು ಭಾಷೆಗೆ ಅಂತಹ ಸಮಸ್ಯೆಯಾಗುವುದಿಲ್ಲ.” ಈಗ ಅವರ ಮನಸ್ಸು ಅವರ ಊರಿಗಾಗಿ ಮಿಡಿಯುವುದಿಲ್ಲ.

ಗುವಾಹಟಿಯಿಂದ ಸುಮಾರು ಎರಡು ಸಾವಿರ ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರ ರಾಜಧಾನಿಯಲ್ಲಿ 13 ವರ್ಷದ ಪ್ರಫುಲ್ ಸುರಿನ್ ಶಾಲೆಯಲ್ಲಿ ತನ್ನದಲ್ಲದ ಭಾಷೆ ಹಿಂದಿಯನ್ನು ಕಲಿಯಲು ಹೆಣಗಾಡುತ್ತಿದ್ದಾನೆ. ಅವನ ತಂದೆ ಅಪಘಾತದಲ್ಲಿ ನಿಧನರಾದ ನಂತರ ಅವನು ತನ್ನ ಬುವಾ (ತಂದೆಯ ಸಹೋದರಿ)ಯೊಂದಿಗೆ ವಾಸಿಸಲು ಮತ್ತು ಜಾರ್ಖಂಡ್‌ನ ಗುಮ್ಲಾದ ಪಹಂತೋಲಿ ಎನ್ನುವ ಕುಗ್ರಾಮದಲ್ಲಿರುವ ತನ್ನ ಮನೆಯಿಂದ 1,300 ಕಿಲೋಮೀಟರ್ ದೂರದಲ್ಲಿರುವ ನವದೆಹಲಿಯ ಮುನಿರ್ಕಾ ಗ್ರಾಮಕ್ಕೆ ಬರಬೇಕಾಯಿತು. "ನಾನು ಇಲ್ಲಿಗೆ ಬಂದಾಗ ಬಹಳವಾಗಿ ಒಂಟಿತನವನ್ನು ಅನುಭವಿಸಿದೆ" ಎಂದು ಅವನು ಹೇಳುತ್ತಾನೆ. "ಇಲ್ಲಿ ಮುಂಡಾರಿ ಭಾಷೆಯ ಪರಿಚಯ ಯಾರಿಗೂ ಇರಲಿಲ್ಲ. ಎಲ್ಲರೂ ಹಿಂದಿ ಮಾತನಾಡುತ್ತಿದ್ದರು.”

ಅವನು ಈ ನಗರಕ್ಕೆ ಸ್ಥಳಾಂತರಗೊಳ್ಳುವ ಮೊದಲು ಊರಿನ ಶಾಲೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕೆಲವು ವರ್ಣಮಾಲೆಗಳನ್ನು ಕಲಿತಿದ್ದ, ಆದರೆ ಅದು ಆ ಭಾಷೆಗಳನ್ನು ಮಾತನಾಡಲು ಅಥವಾ ಅರ್ಥ ಮಾಡಿಕೊಳ್ಳಲು ಸಾಕಾಗುತ್ತಿರಲಿಲ್ಲ. ದೆಹಲಿಯಲ್ಲಿ ಎರಡು ವರ್ಷಗಳ ಶಿಕ್ಷಣ ಮತ್ತು ಕೆಲವು ವಿಶೇಷ ಟ್ಯೂಷನ್ ತರಗತಿಗಳ ನಂತರ, ಅವನು ಈಗ "ಶಾಲೆಯಲ್ಲಿದ್ದಾಗ ಅಥವಾ ಸ್ನೇಹಿತರೊಂದಿಗೆ ಆಡುವಾಗ ಒಂದಷ್ಟು ಹಿಂದಿ ಮಾತನಾಡಬಹುದು" ಎಂದು ಹೇಳುತ್ತಾನೆ. "ಆದರೆ ಮನೆಯಲ್ಲಿ ಬುವಾ ಜೊತೆ ಮುಂಡಾರಿಯಲ್ಲಿ ಮಾತನಾಡುತ್ತೇನೆ. ಅದು ನನ್ನ ತಾಯ್ನುಡಿ.”

ದೆಹಲಿಯಿಂದ 1,100 ಕಿಲೋಮೀಟರ್ ದೂರದಲ್ಲಿರುವ ಛತ್ತೀಸಗಢದಲ್ಲಿನ 10 ವರ್ಷದ ಪ್ರೀತಿ ತಾನು ದಾಖಲಾಗಿರುವ ಶಾಲೆಯಲ್ಲಿ ಮುಂದುವರಿಯಲು ಬಯಸುವುದಿಲ್ಲ.  ಅವಳು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ, ಆದರೆ ಅವಳು ಮನೆಮಾತಿನಿಂದ ದೂರವಿದ್ದಾಳೆ.

ಲತಾ ಭೋಯಿ, 40 ಮತ್ತು ಅವರ ಪತಿ ಸುರೇಂದ್ರ ಭೋಯ್, 60, ಮಾಲುವಾ ಕೊಂಡ್ ಆದಿವಾಸಿ ಬುಡಕಟ್ಟಿಗೆ ಸೇರಿದವರು. ಒಡಿಸ್ಸಾದ ಕಾಲಹಂಡಿಯ ಕೆಂದುಪಾರ ಗ್ರಾಮದಿಂದ ಖಾಸಗಿ ಫಾರ್ಮ್‌ಹೌಸ್‌ ಒಂದರಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡಲು ಅವರು ರಾಯ್‌ಪುರಕ್ಕೆ ಬಂದಿದ್ದಾರೆ. ಅವರು ಕೆಲಸಕ್ಕೆ ಬೇಕಾಗುವಷ್ಟು ಛತ್ತೀಸ್‌ಗಢಿಯ ಜ್ಞಾನವನ್ನು ಹೊಂದಿದ್ದಾರೆ ಮತ್ತು ಫಾರ್ಮ್‌ನ ಕೆಲಸಗಾರರೊಡನೆ ಅದೇ ಭಾಷೆಯಲ್ಲಿ ಸಂವಹನ ನಡೆಸಬಲ್ಲರು. "ನಾವು 20 ವರ್ಷಗಳ ಹಿಂದೆ ರೋಜಿ ರೋಟಿ [ಹೊಟ್ಟೆಪಾಡು] ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇವೆ" ಎಂದು ಲತಾ ಹೇಳುತ್ತಾರೆ. “ನನ್ನ ಕುಟುಂಬದ ಸದಸ್ಯರೆಲ್ಲರೂ ಒಡಿಶಾದಲ್ಲಿಯೇ ಇದ್ದಾರೆ. ಎಲ್ಲರೂ ಒಡಿಯಾ ಮಾತನಾಡುತ್ತಾರೆ. ಆದರೆ ನನ್ನ ಮಕ್ಕಳಿಗೆ ನಮ್ಮ ಭಾಷೆಯಲ್ಲಿ ಓದಲು ಅಥವಾ ಬರೆಯಲು ಬರುವುದಿಲ್ಲ. ಮಾತನಾಡಲು ಮಾತ್ರ ಬರುತ್ತದೆ. ಊರಿನಲ್ಲಿ ಎಲ್ಲರಿಗೂ ಬರುತ್ತದೆ. ನನಗೂ ಒಡಿಯಾ ಮಾತನಾಡಲಷ್ಟೇ ಬರುತ್ತದೆ ಓದಲು ಮತ್ತು ಬರೆಯಲು ಬರುವುದಿಲ್ಲ.” ಅವರ ಕಿರಿಯ ಮಗಳು ಪ್ರೀತಿಗೆ ಹಿಂದಿ ಕಾವ್ಯವೆಂದರೆ ಇಷ್ಟ, ಆದರೆ ಶಾಲೆಯಲ್ಲಿ ಹಿಂದಿ ಓದುವುದನ್ನು ದ್ವೇಷಿಸುತ್ತಾಳೆ.

PHOTO • Pankaj Das
PHOTO • Nirmal Kumar Sahu
PHOTO • Nirmal Kumar Sahu

ಪುಣೆಯಲ್ಲಿ ಒಂದೂವರೆ ದಶಕ ಕಳೆದಿರುವ ಶಂಕರ್ ದಾಸ್ (ಎಡ) ಮರಾಠಿ ಮಾತನಾಡಬಲ್ಲರು ಆದರೆ ಅವರಿಗೆ ಅಸ್ಸಾಮಿ ಭಾಷೆ ಬಾರದ ಕಾರಣ ತನ್ನ ಊರಿನಲ್ಲಿ ಕೆಲಸ ಪಡೆಯಲು ಸಾಧ್ಯವಾಗುತ್ತಿಲ್ಲ. ಲತಾ ಭೋಯಿ (ಬಲ) ಅವರ ಮಗಳು ಪ್ರೀತಿ ಭೋಯಿ (ಮಧ್ಯ) ಛತ್ತೀಸಗಢದಲ್ಲಿ ವಾಸಿಸುವ ಒರಿಸ್ಸಾದ ವಲಸಿಗರು. ಪ್ರೀತಿ ತಾನು ಪ್ರಸ್ತುತ ಓದುತ್ತಿರುವ ಶಾಲೆಯಲ್ಲಿ ಮುಂದುವರಿಯಲು ಬಯಸುವುದಿಲ್ಲ ಏಕೆಂದರೆ ಅಲ್ಲಿ ಅವಳನ್ನು ಅವಳ ಸಹಪಾಠಿಗಳು ಗೇಲಿ ಮಾಡುತ್ತಿದ್ದಾರೆ

“ನಾನು ನನ್ನ ಸಹಪಾಠಿಗಳೊಂದಿಗೆ ಛತ್ತೀಸ್‌ಗಢಿಯಲ್ಲಿ ಮಾತನಾಡುತ್ತಿದ್ದೇನೆ. ಆದರೆ ನನಗೆ ಇಲ್ಲಿ ಓದಲು ಇಷ್ಟವಿಲ್ಲ. ಶಾಲೆಯಲ್ಲಿನ ಮಕ್ಕಳು ಒಡಿಯಾ-ಧೋಡಿಯಾ ಎಂಧು ರೇಗಿಸುತ್ತಾರೆ. ಛತ್ತೀಸಗಢಿಯಲ್ಲಿ ಧೋಡಿಯಾ ಎಂದರೆ ಒಂದು ಬಗೆಯ ವಿಷರಹಿತ ಹಾವಾಗಿದ್ದು ಅದು ತನ್ನ ಅಂಜುಬುರುಕುತನಕ್ಕೆ ಹೆಸರುವಾಸಿ. ಆಕೆಯ ಪೋಷಕರು ಈ ಬಾರಿ ಪ್ರೀತಿಯನ್ನು ಒಡಿಶಾದ ಸರ್ಕಾರಿ ವಸತಿ ಶಾಲೆಗೆ ಕಳುಹಿಸಲು ಬಯಸಿದ್ದು, ಅವರು ಪರಿಶಿಷ್ಟ ಪಂಗಡದ ಕೋಟಾದಡಿಯಲ್ಲಿ ಸೀಟು ಸಿಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ.

ಬಾಲ್ಯದಲ್ಲಿಯೇ ತಂದೆ-ತಾಯಿ, ಭೂಮಿ ಮತ್ತು ಭಾಷೆಯಿಂದ ಬೇರ್ಪಡುವುದು ಬಹುತೇಕ ಪ್ರತಿಯೊಬ್ಬ ವಲಸಿಗರ ಬದುಕಿನ ಕಥೆಯಾಗಿದೆ.

21 ವರ್ಷದ ನಾಗೇಂದ್ರ ಸಿಂಗ್‌ ತನ್ನ 8ನೇ ವರ್ಷದಲ್ಲಿ ರೋಜಗಾರ್‌ ಹುಡುಕಿಕೊಂಡು ಮನೆಬಿಟ್ಟರು. ಹಾಗೆ ಹೊರಟವರಿಗೆ ಸಿಕ್ಕಿದ್ದು ಕ್ರೇನ್‌ ಆಪರೇಟಿಂಗ್‌ ಸೇವೆಯಲ್ಲಿ ಕ್ಲೀನಿಂಗ್‌ ಕೆಲಸ. ಅವರು ಉತ್ತರಪ್ರದೇಶದ  ಕುಶಿನಗರ ಜಿಲ್ಲೆಯ ಜಗದೀಶ್‌ಪುರ ಮೂಲದವರಾಗಿದ್ದು ಪ್ರಸ್ತುತ ಉತ್ತರ ಬೆಂಗಳೂರಿನ ನಿರ್ಮಾಣ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.  ಅವರು ತಮ್ಮ ಊರಿನಲ್ಲಿ ಭೋಜಪುರಿ ಮಾತನಾಡುತ್ತಿದ್ದರು. "ಅದು ಹಿಂದಿಗಿಂತ ಬೇರೆ ರೀತಿಯ ಭಾಷೆ. ನಾವು ಭೋಜಪುರಿಯಲ್ಲಿ ಮಾತನಾಡಲು ಆರಂಬಿಸಿದರೆ ನಿಮಗದು ಅರ್ಥವಾಗುವುದಿಲ್ಲ" ಎಂದರು. ಇಲ್ಲಿ ʼನಾವುʼ ಎಂದರೆ ಅವರ ಇನ್ನಿಬ್ಬರು ಸಹೋದ್ಯೋಗಿಗಳಾದ ಅಲಿ, 26, ಮನೀಶ್, ಇವರೆಲ್ಲರ ಊರು, ಜಾತಿ, ಧರ್ಮ ಬೇರೆಯಾದರೂ ಅವರನ್ನು ಭೋಜಪುರಿ ಭಾಷೆ ಒಂದಾಗಿ ಬೆಸೆದಿದೆ.

ಇವರೆಲ್ಲರೂ ತಮ್ಮ ಹದಿಹರೆಯದಲ್ಲೇ ತಮ್ಮ ಊರು ತೊರೆದವರು. ಮನೆ, ಮನೆಮಾತುಗಳಿಂದ ದೂರವಿದ್ದವರು. "ನಿಮ್ಮ ಬಳಿ ಕೌಶಲವಿದ್ದರೆ ಎಲ್ಲಿಯಾದರೂ ಬದುಕಬಹುದು" ಎನ್ನುತ್ತಾರೆ ಅಲಿ. "ನಾನು ದೆಹಲಿ, ಮುಂಬೈ, ಹೈದರಾಬಾದ್, ಸೌದಿ ಅರೇಬಿಯಾಕ್ಕೆ ಹೋಗಿದ್ದೇನೆ. ನನ್ನ ಪಾಸ್‌ಪೋರ್ಟ್ ಬೇಕಿದ್ದರೆ ತೋರಿಸುತ್ತೇನೆ. ನಾನು ಅಲ್ಲಿ ಇಂಗ್ಲಿಷ್‌ ಮತ್ತು ಹಿಂದಿಯನ್ನು ಕಲಿತೆ." ಇದೆಲ್ಲ ಬಹಳ ಸುಲಭವಾಗಿ ನಡೆದುಹೋಗುತ್ತದೆ ಎನ್ನುತ್ತಾ ನಾಗೇಂದ್ರ ಮಾತನ್ನು ಮುಂದುವರೆಸಿದರು. “ಕೆಲಸ ಇರುವ ಕಡೆ ಹೋಗುತ್ತೇವೆ. ಗಾಂವ್ ಕಾ ಕೋಯಿ ಲಡ್ಕಾ ಬುಲಾ ಲೇತಾ ಹೈ, ಹಮ್ ಆ ಜಾತೇ ಹೈ [ನಮ್ಮ ಹಳ್ಳಿಯ ಯಾರಾದರೂ ಹುಡುಗರು ನಮ್ಮನ್ನು ಕೆಲಸಕ್ಕೆ ಕರೆದಾಗ ನಾವು ಹೋಗುತ್ತೇವೆ],” ಎಂದು ಅವರು ಹೇಳುತ್ತಾರೆ.

"ಈ ಅಂಕಲ್‌ ತರಹದವರೂ ಇರುತ್ತಾರೆ" ಎಂದು ನಾಗೇಂದ್ರ ಅವರು ಸಹೋದ್ಯೋಗಿ, ಮಧುರೈನ 57 ವರ್ಷದ ಸುಬ್ರಮಣ್ಯಂ ಅವರನ್ನು ತೋರಿಸಿದರು. ಅವರಿಗೆ ಬರುವುದು ತಮಿಳು ಮಾತ್ರ. “ನಾವು ಸಂಕೇತ ಭಾಷೆಯನ್ನು ಬಳಸುತ್ತೇವೆ. ನಮಗೆ ಏನಾದರೂ ಹೇಳುವುದು ಇದ್ದರೆ ಕಾರ್ಪೆಂಟರ್‌ ಬಳಿ ಹೇಳುತ್ತೇವೆ. ಅವರು ಅಂಕಲ್‌ಗೆ ಹೇಳುತ್ತಾರೆ. ನಮ್ಮ ನಡುವೆ ನಾವು ಭೋಜ್‌ಪುರಿ ಮಾತನಾಡುತ್ತೇವೆ. ಸಂಜೆ ಕೋಣೆಗೆ ಹೋಗಿ ರಾತ್ರಿಯ ಅಡುಗೆ ಮಾಡುತ್ತೇನೆ ಮತ್ತು ಭೋಜ್‌ಪುರಿ ಹಾಡುಗಳನ್ನು ಕೇಳುತ್ತೇನೆ” ಎನ್ನುತ್ತಾ ತನ್ನ ನೆಚ್ಚಿನ ಹಾಡೊಂದನ್ನು ಹಾಕಲು ಮೊಬೈಲ್‌ ಕೈಗೆತ್ತಿಕೊಂಡರು.

PHOTO • Pratishtha Pandya
PHOTO • Pratishtha Pandya

ಉತ್ತರ ಬೆಂಗಳೂರಿನ ನಿರ್ಮಾಣ ಸ್ಥಳದಲ್ಲಿ ಪೇಂಟರ್‌ ಆಗಿರುವ ನಾಗೇಂದ್ರ ಸಿಂಗ್ (ಎಡ) ಮತ್ತು ಅಬ್ಬಾಸ್ ಅಲಿ (ಬಲ), ಇವರ ವಯಸ್ಸು, ಜಾತಿ, ಧರ್ಮ, ಊರು ಎಲ್ಲವೂ ಬೇರೆ ಬೇರೆ ಆದರೆ ಅವರ ಮನೆಮಾತಾದ ಭೋಜಪುರಿ ಅವರನ್ನು ಒಂದಾಗಿಸಿದೆ

PHOTO • Pratishtha Pandya
PHOTO • Pratishtha Pandya

ಎಡ: ತಮಿಳುನಾಡಿನ ಸುಬ್ರಮಣ್ಯಂ ಮತ್ತು ಉತ್ತರ ಪ್ರದೇಶದ ಮನೀಷ್ ಅವರು ನಿರ್ಮಾಣ ಸ್ಥಳದಲ್ಲಿ ಪೇಂಟರ್‌ಗಳಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರು ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ಬಲ: ನಾಗೇಂದ್ರ ಸಿಂಗ್ ತಾನೇ ತಯಾರಿಸಿದ ಆಹಾರವನ್ನು ತಿನ್ನುತ್ತಿದ್ದಾರೆ. ಊರಿನಲ್ಲಿನ ಮನೆಯೂಟದ ನೆನಪು ಅವರನ್ನು ಸದಾ ಕಾಡುತ್ತದೆ

ಪರಿಚಿತ ಆಹಾರ, ಮಧುರ ಹಾಡುಗಳು, ಹಬ್ಬಗಳು, ಭಾಷಾ ಅನುಭವದೊಡನೆ ಅಸ್ಪಷ್ಟವಾಗಿ ಬೆಸೆದುಕೊಂಡಿವೆ. ಹೀಗಾಗಿ ಪರಿ ಜನರ ಬಳಿ ಅವರ ತಾಯ್ನುಡಿಯ ಕುರಿತು ಕೇಳಿದಾಗ ಅವರು ತಮ್ಮ ಸಂಸ್ಕೃತಿಯ ಕುರಿತಾದ ಮಾತಿಗೆ ತೊಡಗಿದರು.

ಬಿಹಾರದ ತನ್ನ ಊರಾದ ಪಾರ್ತಪುರವನ್ನು ತೊರೆದ ಎರಡು ದಶಕಗಳ ನಂತರವೂ 39 ವರ್ಷದ ಬಸಂತ್‌ ಮುಖಿಯಾ ಮೈಥಿಲಿ ಭಾಷೆಯ ಹೆಸರು ಹೇಳುತ್ತಿದ್ದಂತೆ ಮನೆಯ ಊಟ, ತಿಂಡಿ ಹಾಗೂ ಹಾಡುಗಳ ನೆನಪಿನಲ್ಲಿ ಮುಳುಗೇಳತೊಡಗಿದರು.  ಪ್ರಸ್ತುತ ಮುಂಬಯಿಯಲ್ಲಿ ಮನೆಗೆಲಸಗಾರನಾಗಿ ಕೆಲಸ ಮಾಡುತ್ತಿರುವ ಅವರು, "ನನಗೆ ಸಟ್ಟು [ಹುರಿದ ಬೇಳೆಯಿಂದ ಮಾಡಿದ ಹಿಟ್ಟು] ಮತ್ತು ಚುರಾ ಅಥವಾ ಪೋಹಾ ತುಂಬಾ ಇಷ್ಟ" ಎನ್ನುತ್ತಾರೆ. ಮಾತು ಮುಂದುವರೆಸಿದ ಬಸಂತ್‌ "ನಮ್ಮ ಊರಿನ ತಿನಿಸುಗಳ ರುಚಿಯ ನೆನಪು ಕಾಡುತ್ತದೆ" ಎನ್ನುತ್ತಾ ತಮ್ಮ ಮಾತುಗಳನ್ನು ಮತ್ತೆ ತಿನಿಸುಗಳ ಕಡೆಯೇ ತಿರುಗಿಸಿದರು.  "ನಮ್ಮ ಊರಿನಲ್ಲಿ ಶನಿವಾರ ಮಧ್ಯಾಹ್ನದ ಊಟಕ್ಕೆ ಖಿಚಡಿ ಮತ್ತು ಸಂಜೆಯ ತಿಂಡಿಯಾಗಿ ಭುಜ ತಿನ್ನುತ್ತೇವೆ. ಭುಜವನ್ನು ಅವಲಕ್ಕಿ, ಹುರಿದ ಕಡಲೆಬೀಜ ಮತ್ತು ಈರುಳ್ಳಿ, ಟೊಮ್ಯಾಟೊ, ಹಸಿಮೆಣಸಿನಕಾಯಿ, ಉಪ್ಪು, ಸಾಸಿವೆ ಎಣ್ಣೆ ಮತ್ತು ಇತರ ಮಸಾಲೆಗಳೊಂದಿಗೆ ಬೆರೆಸಿ ಕರಿಬೇವಿನೊಡನೆ ಹುರಿದು ತಯಾರಿಸಲಾಗುತ್ತದೆ. ಆದರೆ ಈಗ ಮುಂಬೈಯಲ್ಲಿ ಶನಿವಾರ ಯಾವಾಗ ಬಂದು ಹೋಗುತ್ತದೆಯೆನ್ನುವುದು ಗೊತ್ತೇ ಆಗುವುದಿಲ್ಲ” ಎಂದು ಅವರು ವಿಷಾದದ ನಗುವಿನೊಂದಿಗೆ ಹೇಳುತ್ತಾರೆ.

ಅವರನ್ನು ಸದಾ ಕಾಡುವ ಇನ್ನೊಂದು ಸಂಗತಿಯೆಂದರೆ ತಮ್ಮ ಊರಿನಲ್ಲಿ ಹೋಳಿ ಆಡುತ್ತಿದ್ದ ರೀತಿ. "ನಾವು ಸ್ನೇಹಿತರು ಯಾವುದೇ ಸೂಚನೆಯಿಲ್ಲದೆ ಮನೆಗಳಿಗೆ ನುಗ್ಗುತ್ತಿದ್ದೆವು, ಹೇಗೆಂದರೆ ಹಾಗೆ ಬಣ್ಣ ಹಚ್ಚುತ್ತಿದ್ದೆವು. ಅದಾದ ನಂತರ ತಿನ್ನಲು ಮಲ್ಪುವಾ (ಹೋಲಿಯಂದು ರವೆ, ಮೈದಾ, ಸಕ್ಕರೆ ಮತ್ತು ಹಾಲಿನಿಂದ ಮಾಡುವ ವಿಶೇಷ ಸಿಹಿತಿಂಡಿ) ಇರುತ್ತಿತ್ತು. ನಾವು ಫಾಗುವಾ, ಹೋಳಿ ಹಾಡುಗಳನ್ನು ಹಾಡುತ್ತಿದ್ದೆವು" ಎಂದು ಬಸಂತ್ ಹೇಳುತ್ತಾರೆ. ಅವರು ತಮ್ಮದಲ್ಲದ ಭಾಷೆಯಲ್ಲಿ ತನ್ನೂರಿನ ಕುರಿತು ನಮ್ಮೊಂದಿಗೆ ಮಾತನಾಡುವಾಗ ಅವರ ಊರಿನ ಚಿತ್ರಗಳು ಕಣ್ಣ ಮುಂದೆ ಜೀವ ತಳೆಯುತ್ತಿದ್ದವು.

“ಊರಿನ ಜನರೊಂದಿಗೆ ನಮ್ಮ ಭಾಷೆಯನ್ನು ಮಾತನಾಡುವುದು ಮತ್ತು ಅವರೊಂದಿಗೆ ಹಬ್ಬವನ್ನು ಆಚರಿಸುವ ಸಂತೋಷವೇ ಬೇರೆ ಬಗೆಯದು,” ಎಂದು ಅವರು ನೋವಿನಿಂದ ಹೇಳುತ್ತಾರೆ.

ಅಲಹಾಬಾದ್‌ನ ಅಮಿಲೌಟಿ ಗ್ರಾಮದ ರಾಜು ಕೂಡಾ ಈ ಮಾತುಗಳನ್ನು ಅಲ್ಲಗಳೆಯುವುದಿಲ್ಲ. ಅವರು ಕಳೆದ ಮೂವತ್ತು ವರ್ಷಗಳಿಂದ ಪಂಜಾಬಿನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಹಿರ್‌ ಸಮುದಾಯದವರಾದ ಅವರು ವರು ಮನೆಯಲ್ಲಿ ಅವಧಿ ಭಾಷೆ ಮಾತನಾಡುತ್ತಿದ್ದರು. ಅಮೃತಸರಕ್ಕೆ ಬಂದ ಮೊದಲಿನಲ್ಲಿ ಅವರು ಭಾಷೆಯ ವಿಷಯದಲ್ಲಿ ಬಹಳ ಕಷ್ಟಪಟ್ಟಿದ್ದರು.  "ಆದರೆ ಇಂದು ನಾನು ಪಂಜಾಬಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದೇನೆ ಮತ್ತು ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ" ಎಂದು ಅವರು ಸಂತೋಷದಿಂದ ಹೇಳುತ್ತಾರೆ.

PHOTO • Swarn Kanta
PHOTO • Swarn Kanta

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮುಂಬೈಯಲ್ಲಿ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಬಸಂತ್ ಮುಖಿಯಾ ಅವರಿಗೆ ತಮ್ಮ ಹಳ್ಳಿಯ ಮಾತುಗಳ ಮತ್ತು ಹಾಡುಗಳ ನೆನಪು ಬಹಳವಾಗಿ ಕಾಡುತ್ತದೆ. ಅವರ ತಾಯ್ನುಡಿಯಾದ ಮೈಥಿಲಿಯ ಕುರಿತು ಮಾತನಾಡುತ್ತಿದ್ದಂತೆ ಅವರ ಮನಸ್ಸು ಊರಿನ ತಿನಿಸುಗಳತ್ತ ವಾಲಿತು

PHOTO • Kamaljit Kaur
PHOTO • Kamaljit Kaur

ಅಲಹಾಬಾದ್‌ನ ಅಮಿಲೌಟಿಯ ರಾಜು ಅವರು ಪಂಜಾಬ್‌ನ ಪಟ್ಟಿ ಪಟ್ಟಣದಲ್ಲಿ ಹಣ್ಣುಗಳ ವ್ಯಾಪಾರ ಮಾಡುತ್ತಾರೆ ಮತ್ತು ನಿರರ್ಗಳವಾಗಿ ಪಂಜಾಬಿ ಮಾತನಾಡಬಲ್ಲರು. ಅವರು ತಮ್ಮ ಹಳ್ಳಿಯಲ್ಲಿ ಆಚರಿಸುವ ಹಬ್ಬಗಳನ್ನು ಬಹಳವಾಗಿ ನೆನಪಿಸಿಕೊಳ್ಳುತ್ತಿರುತ್ತಾರೆ

ಆದರೂ ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಪಟ್ಟಿ ಪಟ್ಟಣದ ಈ ಹಣ್ಣು ಮಾರಾಟಗಾರ ತನ್ನ ಊರಿನ ಹಬ್ಬಗಳನ್ನು ಈಗಲೂ ನೆನಪಿಸಿಕೊಳ್ಳುತ್ತಿರುತ್ತಾರೆ. ಅದರ ನೆನಪು ಅವರನ್ನು ಕಾಡುತ್ತದೆ. ಇಲ್ಲಿನ ಕೆಲಸದ ಹೊರೆಯು ಅವರನ್ನು ಊರಿಗೆ ಹೋಗದಂತೆ ತಡೆಯುತ್ತದೆ. ಅಲ್ಲದೆ "ನನ್ನ ಊರಿನ ಹಬ್ಬಗಳನ್ನು ಇಲ್ಲಿ ಆಚರಿಸುವುದು ಅಸಾಧ್ಯ ಎನ್ನುತ್ತಾರವರು. "ನೂರಾರು ಜನರು ಭಾಗವಹಿಸುವ ಹಬ್ಬದಲ್ಲಿ ಯಾರದೂ ಭಾಗವಹಿಸಬಹುದು, ಆದರೆ ಇಬ್ಬರೋ ಒಬ್ಬರೋ ಆಚರಿಸುವ ಹಬ್ಬಕ್ಕೆ ಯಾರು ಬರುತ್ತಾರೆ ಹೇಳಿ"

ದೇಶದ ಇನ್ನೊಂದು ತುದಿಯಲ್ಲಿ, ತನ್ನ ಪತಿಯೊಂದಿಗೆ ಕೆಲಸ ಹುಡುಕಿಕೊಂಡು ರಾಜಸ್ಥಾನದಿಂದ ಕೇರಳಕ್ಕೆ ಬಂದಿರುವ 38 ವರ್ಷದ ಶಬಾನಾ ಶೇಖ್ ಅದೇ ಪ್ರಶ್ನೆಯನ್ನು ಕೇಳುತ್ತಾರೆ. “ನಾವು ನಮ್ಮ ಹಳ್ಳಿಯಲ್ಲಿ ನಮ್ಮ ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅದನ್ನು ಆಚರಿಸಲು ನಾಚಿಕೆಪಡುವುದಿಲ್ಲ. ಆದರೆ ಕೇರಳದಲ್ಲಿ ನಾವು ಹೇಗೆ ಆಚರಿಸುವುದು? ಎಂದು ಕೇಳುತ್ತಾರೆ. “ದೀಪಾವಳಿ ಸಮಯದಲ್ಲಿ ಕೇರಳದಲ್ಲಿ ಹೆಚ್ಚು ದೀಪ ಇರುವುದಿಲ್ಲ. ಆದರೆ ರಾಜಸ್ಥಾನದಲ್ಲಿ ಹಬ್ಬದ ಸಂದರ್ಭದಲ್ಲಿ ಮಣ್ಣಿನ ದೀಪಗಳನ್ನು ಹಚ್ಚುತ್ತೇವೆ. ಅದು ತುಂಬಾ ಸುಂದರವಾಗಿ ಕಾಣುತ್ತದೆ” ಎಂದು ಅವರು ಹೇಳುತ್ತಾರೆ. ಹೀಗೆ ಹೇಳುವಾಗ ಅವರ ಕಣ್ಣುಗಳು ನೆನಪುಗಳಿಂದ ಬೆಳಗುತ್ತಿದ್ದವು.

ಭಾಷೆ, ಸಂಸ್ಕೃತಿ ಮತ್ತು ನೆನಪಿನ ನಡುವಿನ ಸಂಬಂಧವು ನಾವು ಮಾತನಾಡಿಸಿದ ಪ್ರತಿಯೊಬ್ಬ ವಲಸಿಗರನ್ನೂ ತಕ್ಕಮಟ್ಟಿಗೆ ಬೆಸೆದಿದೆ. ಆದರೆ ದೂರದ ಸ್ಥಳಗಳಲ್ಲಿ ಮನೆಯಿಂದ ದೂರವಿರುವ ಊರುಗಳಲ್ಲಿ ವಾಸಿಸುವ ಅವರು ಅವುಗಳನ್ನು ಜೀವಂತವಾಗಿಡಲು ತಮ್ಮದೇ ಆದ ಮಾರ್ಗಗಳನ್ನು ಸಹ ಕಂಡುಕೊಂಡಿದ್ದಾರೆ.

60ರ ಹರೆಯದ ಮಶಾರು ರಬಾರಿಯವರಿಗೆ ನಾಗ್‌ಪುರ, ವಾರ್ಧಾ, ಚಂದರಾಪುರ ಅಥವಾ ಯವತ್ಮಾಲ್‌ನಲ್ಲಿನ ಯಾವುದೋ ಒಂದು ಹೊಲವನ್ನು ಹೊರತುಪಡಿಸಿ ಯಾವುದೇ ಶಾಶ್ವತ ವಿಳಾಸವಿಲ್ಲ. ಮಧ್ಯ ವಿದರ್ಭದವರಾದ ಈ ಪಶುಪಾಲಕ, ಗುಜರಾತ್‌ನ ಕಚ್ಛ್‌ ಮೂಲದವರು. "ಒಂದರ್ಥದಲ್ಲಿ ನಾನು ವರ್ಹಾದಿ" ಎಂದು ಅವರು ಹೇಳುತ್ತಾರೆ, ಧೋತಿ ಮತ್ತು ಬಿಳಿ ಪೇಟದಿಂದ ಕೂಡಿದ ವಿಶಿಷ್ಟವಾದ ರಾಬರಿ ವೇಷಭೂಷಣವನ್ನು ಧರಿಸುವ  ಅವರ ಬದುಕು ವಿದರ್ಭದ ಸ್ಥಳೀಯ ಸಂಸ್ಕೃತಿಯಲ್ಲಿ ಬೇರೂರಿದೆ ಮತ್ತು ಅಗತ್ಯವಿದ್ದಾಗ ಸ್ಥಳೀಯ ಬಯ್ಗುಳ ಮತ್ತು ಗ್ಯಾಮ್ಯ ಉಚ್ಛಾರಣೆಗಳನ್ನೂ ಬಳಸಬಲ್ಲರು! ಆದರೂ ಅವರು ತಮ್ಮ ನೆಲದ ಸಂಪ್ರದಾಯಗಳು ಮತ್ತು ಸಂಸ್ಕೃತಿಯೊಂದಿಗೆ ತಮ್ಮ ಸಂಬಂಧವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅವರ ಒಂಟೆಗಳು ಹೊಲದಿಂದ ಹೊಲಕ್ಕೆ ಚಲಿಸುವಾಗ ಅವರ ಒಂಟೆಗಳ ಹಿಂಭಾಗದಲ್ಲಿ ಪೇರಿಸುವ ಸಂಪತ್ತಿನಲ್ಲಿ ಜಾನಪದ ಕಥೆಗಳು, ಪರಂಪರೆಯ ಬುದ್ಧಿವಂತಿಕೆ, ಹಾಡುಗಳು, ಪ್ರಾಣಿ ಪ್ರಪಂಚದ ಬಗ್ಗೆ ಸಾಂಪ್ರದಾಯಿಕ ಜ್ಞಾನ, ಪರಿಸರ ವಿಜ್ಞಾನ ಮತ್ತು ಮತ್ತು ಇನ್ನಷ್ಟು ಜ್ಞಾನವೂ ಸೇರಿವೆ.

PHOTO • Jaideep Hardikar
PHOTO • Rajeeve Chelanat

ಎಡ: ಕಚ್ಛ್‌ನ ಮಶ್ರು ರಾಬರಿ ವಿದರ್ಭದ ಹತ್ತಿ ಹೊಲಗಳಲ್ಲಿ ವಾಸಿಸುತ್ತಾರೆ ಮತ್ತು ತನ್ನನ್ನು ತಾನು ವರ್ಹಾದಿ ಎಂದು ಕರೆದುಕೊಳ್ಳುತ್ತಾರೆ. ಬಲ: ರಾಜಸ್ಥಾನದ ಶಬಾನಾ ಶೇಖ್ (ಎಡ ತುದಿ) ತನ್ನ ಪತಿ ಮೊಹಮ್ಮದ್ ಅಲ್ವಾರ್ (ಬಲ) ಮತ್ತು ಮಗಳು ಸಾನಿಯಾ ಶೇಖ್ (ಮಧ್ಯದಲ್ಲಿ) ಜೊತೆ ಕೇರಳದಲ್ಲಿ ವಾಸಿಸುತ್ತಿದ್ದಾರೆ. ಅವರ ಪಾಲಿಗೆ ಊರಿನ ನೆನಪೆಂದರೆ ತನ್ನ ಹಳ್ಳಿಯಲ್ಲಿ ದೀಪಾವಳಿಗೆ ಹಚ್ಚಲಾಗುವ ರಾಶಿ ರಾಶಿ ದೀಪಗಳು

ಜಾರ್ಖಂಡ್‌ನ ಎಕ್ಸ್‌ಕ್ಯಾವೇಟರ್ (ಅಗೆದು ತೋಡುವ ಯಂತ್ರ) ಆಪರೇಟರ್, 25 ವರ್ಷದ ಶನಾವುಲ್ಲಾ ಆಲಂ, ಈಗ ಕರ್ನಾಟಕದ ಉಡುಪಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಕೆಲಸದ ಸ್ಥಳದಲ್ಲಿ ನಿರರ್ಗಳವಾಗಿ ಹಿಂದಿ ಮಾತನಾಡಬಲ್ಲವರು ಅವರೊಬ್ಬರೇ. ಉತ್ತರ ಚೋಟಾನಾಗ್‌ಪುರ ಮತ್ತು ಜಾರ್ಖಂಡ್‌ನ ಸಂತಾಲ್ ಪರಗಣದಲ್ಲಿ ಮಾತನಾಡುವ ಹಿಂದಿ ಅಥವಾ ಖೋರ್ಟಾ ಭಾಷೆಯಲ್ಲಿ ಮಾತನಾಡುವ ಬಯಕೆಯಾದಾಗ ಅವರು ತನ್ನ ಮೊಬೈಲಿನ ಮೊರೆಹೋಗುತ್ತಾರೆ. ಅದರ ಮೂಲಕ ಅವರು ಊರಿನಲ್ಲಿರುವ ತನ್ನ ಭಾಷೆ ಮತ್ತು ಅದನ್ನು ಮಾತನಾಡುವ ಜನರೊಡನೆ ಸಂಪರ್ಕ ಬೆಳೆಸುತ್ತಾರೆ.

ಜಾರ್ಖಂಡ್‌ನ ಮತ್ತೊಬ್ಬ ಯುವ ವಲಸಿಗ, 23 ವರ್ಷದ ಸೋಬಿನ್ ಯಾದವ್ ಕೂಡ ತನ್ನ ಪರಿಚಿತರೊಡನೆ ಸಂಪರ್ಕದಲ್ಲಿರಲು ತನ್ನ ಮೊಬೈಲ್ ಫೋನನ್ನು ಅವಲಂಬಿಸಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಕ್ರಿಕೆಟಿಗ ಧೋನಿ ಅವರ ಮನೆಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಮಜಗಾಂವ್ ಗ್ರಾಮದಿಂದ ಚೆನ್ನೈಗೆ ತೆರಳಿದರು. ಚೆನ್ನೈಯಲ್ಲಿ ಒಂದು ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಅಲ್ಲಿ ಹಿಂದಿ ಮಾತನಾಡಲು ಅವಕಾಶ ಸಿಗುವುದು ಅಪರೂಪ. ಪ್ರತಿದಿನ ಸಂಜೆ ಪತ್ನಿಯೊಂದಿಗೆ ಫೋನಿನಲ್ಲಿ ಮಾತನಾಡುವಾಗ ಮಾತ್ರವೇ ತನ್ನ ತಾಯ್ನುಡಿಯನ್ನು ಬಳಸುತ್ತಾರೆ. “ನಾನು ನನ್ನ ಮೊಬೈಲ್ ಫೋನ್‌ನಲ್ಲಿ ಹಿಂದಿಗೆ ಡಬ್ ಆಗಿರುವ ತಮಿಳು ಸಿನೆಮಾಗಳನ್ನು ಸಹ ನೋಡುತ್ತೇನೆ. ಸೂರ್ಯ ನನ್ನ ನೆಚ್ಚಿನ ನಟ,” ಎಂದು ತಮಿಳಿನಲ್ಲಿ ಹೇಳುತ್ತಾರೆ.

"ಹಿಂದಿ, ಉರ್ದು, ಭೋಜ್‌ಪುರಿ... ಇಲ್ಲಿ ಯಾವ ಭಾಷೆಯೂ ಕೆಲಸಕ್ಕೆ ಬರುವುದಿಲ್ಲ. ಇಂಗ್ಲಿಷ್ ಕೂಡ. ಹೃದಯದ ಭಾಷೆ ಮಾತ್ರ ಕೆಲಸ ಮಾಡುತ್ತದೆ" ಎನ್ನುತ್ತಾರೆ ವಿನೋದ್ ಕುಮಾರ್. ಬಿಹಾರದ ಮೋತಿಹಾರಿ ಗ್ರಾಮದ ಈ 53 ವರ್ಷದ ಮೇಸ್ತ್ರಿ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಬ್ಲಾಕ್‌ನಲ್ಲಿರುವ ಸಾಜಿದ್ ಗನಿಯವರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ನಮಗೆ ಸಿಕ್ಕರು. ಸಾಜಿದ್ ಅವರ ಸ್ಥಳೀಯ ಉದ್ಯೋಗದಾತ. "ಒಬ್ಬ ಕೆಲಸಗಾರನ ಪಕ್ಕದಲ್ಲಿ ಕುಳಿತು ಮನೆ ಮಾಲೀಕರು ತಿನ್ನುತ್ತಿದ್ದಾರೆ - ನೀವು ಇದನ್ನು ಬೇರೆಲ್ಲಿಯಾದರೂ ನೋಡಿದ್ದೀರಾ?" ವಿನೋದ್ ನಮ್ಮನ್ನು ಕೇಳುತ್ತಾರೆ, ಸಾಜಿದ್ ಕಡೆಗೆ ಬೆರಳು ತೋರಿಸುತ್ತಾ, "ಅವರಿಗೆ ನನ್ನ ಜಾತಿ ಯಾವುದೆನ್ನುವುದು ಕೂಡಾ ತಿಳಿದಿಲ್ಲ ಎನ್ನುವುದು ನನ್ನ ಭಾವನೆ, ನಮ್ಮ ಊರಿನ ಜನರು ನಾನು ಮುಟ್ಟಿದ ನೀರನ್ನು ಸಹ ಕುಡಿಯುವುದಿಲ್ಲ, ಆದರೆ ಇಲ್ಲಿ ಈ ಮನುಷ್ಯ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ತನ್ನ ಅಡುಗೆಮನೆಯಲ್ಲೇ ನನ್ನೊಂದಿಗೆ ಉಣ್ಣುತ್ತಿದ್ದಾನೆ."

ವಿನೋದ್ ಕೆಲಸಕ್ಕಾಗಿ ಕಾಶ್ಮೀರಕ್ಕೆ ಬಂದು ಇಂದಿಗೆ 30 ವರ್ಷಗಳು ಕಳೆದಿವೆ. "19930ರಲ್ಲಿ ನಾನು ಮೊದಲ ಬಾರಿಗೆ ಕಾಶ್ಮೀರಕ್ಕೆ ಕೂಲಿಯಾಗಿ ಬಂದೆ, ನನಗೆ ಕಾಶ್ಮೀರದ ಬಗ್ಗೆ ಹೆಚ್ಚು ಕಲ್ಪನೆಯಿರಲಿಲ್ಲ, ಆಗ, ಮಾಧ್ಯಮಗಳು ಈಗಿನಂತೆ ಇರಲಿಲ್ಲ, ಪತ್ರಿಕೆಗಳು ಕೆಲವು ಮಾಹಿತಿಯನ್ನು ನೀಡಿದ್ದರೂ, ನನಗೆ ಹೇಗೆ ತಿಳಿಯಲು ಸಾಧ್ಯ? ನನಗೆ ಓದಲು ಅಥವಾ ಬರೆಯಲು ಬರುವುದಿಲ್ಲ, ನಮಗೆ ಠೇಕೆದಾರರಿಂದ ಕರೆ ಬಂದಲ್ಲಿಗೆಲ್ಲ ನಾವು ನಮ್ಮ ಅನ್ನ ಸಂಪಾದಿಸಲು ಹೋಗುತ್ತಿದ್ದೆವು.” ಅವರು ವಿವರಿಸುತ್ತಾರೆ.

PHOTO • Shankar N. Kenchanuru
PHOTO • Rajasangeethan

ಎಡ: ಜಾರ್ಖಂಡ್‌ನವರಾದ ಶನಾವುಲ್ಲಾ ಆಲಂ ಕರ್ನಾಟಕದ ಉಡುಪಿಯಲ್ಲಿ ಎಕ್ಸ್‌ಕ್ಯಾವೇಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡುವಾಗ ಫೋನ್‌ನಲ್ಲಿ ಹಿಂದಿ ಅಥವಾ ಖೋರ್ಟಾ ಭಾಷೆಯಲ್ಲಿ ಮಾತನಾಡುತ್ತಾರೆ. ಬಲ: ಜಾರ್ಖಂಡ್‌ನವರೇ ಆದ ಸೋಬಿನ್ ಯಾದವ್ ಅವರು ಚೆನ್ನೈ ಯ ಉಪಾಹಾರ ಗೃಹದಲ್ಲಿ ಕೆಲಸ ಮಾಡುವ ಅವರು ಅಲ್ಲಿ ತಮಿಳು ಮಾತನಾಡುತ್ತಾರೆ. ಊರಿನಲ್ಲಿರುವ ತನ್ನ ಪತ್ನಿಯೊಡನೆ ಫೋನ್‌ ಮೂಲಕ ಮಾತನಾಡುವಾಗಲಷ್ಟೇ ಹಿಂದಿ ಬಳಸುತ್ತಾರೆ

"ಆಗ ನನಗೆ ಅನಂತನಾಗ್ ಜಿಲ್ಲೆಯಲ್ಲಿ ಕೆಲಸವಿತ್ತು" ಎಂದು ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. “ನಾವು ತಲುಪಿದ ದಿನ ಇದ್ದಕ್ಕಿದ್ದಂತೆ ಎಲ್ಲವೂ ಮುಚ್ಚಿಹೋಗಿತ್ತು.  ಜೇಬಿನಲ್ಲಿ ಪೈಸೆ ಇಲ್ಲದೆ  ಕೆಲವು ದಿನಗಳವರೆಗೆ ಕೆಲಸವಿಲ್ಲದೆ ಉಳಿದಿದ್ದೆ. ಆದರೆ ಇಲ್ಲಿನ ಗ್ರಾಮಸ್ಥರು ನನಗೆ, ಮತ್ತು ನಮ್ಮೆಲ್ಲರಿಗೂ ಸಹಾಯ ಮಾಡಿದರು. ನಾವು ಒಟ್ಟು 12 ಜನ ಸೇರಿದ್ದೆವು. ಅವರು ನಮಗೆ ಆಹಾರ ನೀಡಿದರು. ಹೇಳಿ, ಈ ಜಗತ್ತಿನಲ್ಲಿ ಯಾರು ಯಾವುದೇ ಫಲಾಪೇಕ್ಷೆಯಿಲ್ಲದೆ ಈ ರೀತಿ ಸಹಾಯ ಮಾಡುತ್ತಾರೆ?" ಎಂದು ಅವರು ಕೇಳುತ್ತಾರೆ. ನಮ್ಮ ಮಾತುಕತೆಯ ನಡುವೆಯೇ ಸಾಜಿದ್‌, ವಿನೋದ್‌ ಬೇಡ ಬೇಡ ಎಂದರೂ ಅವರ ತಟ್ಟೆಗೆ ಎರಡು ಕೋಳಿಯ ತುಂಡುಗಳನ್ನು ಹಾಕಿದರು.

"ನನಗೆ ಕಾಶ್ಮೀರಿಯ ಒಂದು ಪದವೂ ಅರ್ಥವಾಗುವುದಿಲ್ಲ" ಎಂದು ವಿನೋದ್ ಮುಂದುವರಿಸಿದರು. ಆದರೆ ಇಲ್ಲಿ ಎಲ್ಲರಿಗೂ ಹಿಂದಿ ಅರ್ಥವಾಗುತ್ತದೆ. ಹೀಗಾಗಿ ಇಲ್ಲಿಯವರೆಗೆ ಭಾಷೆಯ ಕಾರಣಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ.”

“ನಿಮ್ಮ ಭೋಜಪುರಿ ಭಾಷೆಯ ಕುರಿತು ಹೇಳಿ” ಎಂದು ನಾವು ಕೇಳಿದೆವು.

"ಅದರ ಬಗ್ಗೆ ಏನು ಹೇಳಲಿ?" ಎಂದು ಅವರು ಕೇಳುತ್ತಾರೆ. "ನನ್ನ ಊರಿನ ಜನರು ಬಂದಾಗ, ನಾವು ಭೋಜ್‌ಪುರಿಯಲ್ಲಿ ಮಾತನಾಡುತ್ತೇವೆ. ಆದರೆ ನಾನು ಇಲ್ಲಿರುವಾಗ ಭೋಜ್‌ಪುರಿಯಲ್ಲಿ ಯಾರೊಡನೆ ಮಾತನಾಡುವುದು? ಹೇಳಿ ...?" ಎಂದು ಕೇಳುತ್ತಾರೆ. ನಂತರ ಅವರು ಮುಗುಳ್ನಗುತ್ತಾ ಹೇಳುತ್ತಾರೆ, "ನಾನು ಸಾಜಿದ್ ಭಾಯ್‌ಗೆ ನನ್ನ ಮನೆಮಾತನ್ನು ಒಂದಷ್ಟು ಕಲಿಸಿದ್ದೇನೆ. ಕಾ ಹೋ ಸಾಜಿದ್‌ಭಾಯ್? ಕೈಸಾನ್ ಬನಿ? [ಹೇಳಿ ಸಾಜಿದ್ಭಾಯ್? ಹೇಗಿದ್ದೀರಿ?]"

“ಠೀಕ್‌ ಬಾ [ನಾನು ಚೆನ್ನಾಗಿದ್ದೇನೆ]” ಎಂದು ಸಾಜಿದ್‌ ಉತ್ತರಿಸಿದರು.

"ಇಲ್ಲಿ ಮತ್ತು ಅಲ್ಲಿ ಒಂದು ಸಣ್ಣ ತಪ್ಪು ಸಂಭವಿಸುತ್ತದೆ. ಆದರೆ ಮುಂದಿನ ಬಾರಿ ಇಲ್ಲಿ ನನ್ನ ಭಾಯ್ ನಿಮಗಾಗಿ ರಿತೇಶ್ ಅವರ [ಭೋಜ್ಪುರಿ ನಟ] ಹಾಡುಗಳಲ್ಲಿ ಒಂದನ್ನು ಹಾಡುತ್ತಾರೆ!

ಈ ವರದಿಯನ್ನು ದೆಹಲಿಯಿಂದ ಮಹಮದ್ ಖಮರ್ ತಬ್ರೇಜ್; ಪಶ್ಚಿಮ ಬಂಗಾಳದಿಂದ ಸ್ಮಿತಾ ಖಾಟೋರ್; ಕರ್ನಾಟಕದಿಂದ ಪ್ರತಿಷ್ಠಾ ಪಾಂಡ್ಯ ಮತ್ತು ಶಂಕರ್ ಎನ್. ಕೆಂಚನೂರು; ಕಾಶ್ಮೀರದಿಂದ ದೇವೇಶ್; ತಮಿಳುನಾಡಿನಿಂದ ರಾಜಸಂಗೀತನ್; ಛತ್ತೀಸ್‌ಗಢದಿಂದ ನಿರ್ಮಲ್ ಕುಮಾರ್ ಸಾಹು; ಅಸ್ಸಾಂನಿಂದ ಪಂಕಜ್ ದಾಸ್; ಕೇರಳದಿಂದ ರಾಜೀವ ಚೆಲನಾಟ್; ಮಹಾರಾಷ್ಟ್ರದಿಂದ ಜೈದೀಪ್ ಹರ್ಡಿಕರ್ ಮತ್ತು ಸ್ವರ್ಣ ಕಾಂತ; ಪಂಜಾಬಿನಿಂದ ಕಮಲಜಿತ್ ಕೌರ್ ವರದಿ ಮಾಡಿದ್ದಾರೆ; ಮತ್ತು ಮೇಧಾ ಕಾಳೆ, ಸ್ಮಿತಾ ಖಾಟೋರ್, ಜೋಶುವಾ ಬೋಧಿನೇತ್ರ ಮತ್ತು ಸಾನ್ವಿತಿ ಅಯ್ಯರ್ ಅವರ ಸಂಪಾದಕೀಯ ಬೆಂಬಲದೊಂದಿಗೆ ಪ್ರತಿಷ್ಠಾ ಪಾಂಡ್ಯರಿಂದ  ಈ ವರದಿ ಸಂಪಾದಿಸಲ್ಪಟ್ಟಿದೆ. ಬಿನೈಫರ್ ಭರುಚಾ ಅವರ ಫೋಟೋ ಎಡಿಟಿಂಗ್. ಶ್ರೇಯಾ ಕಾತ್ಯಾಯಿನಿ ಅವರ ವಿಡಿಯೋ ಎಡಿಟಿಂಗ್ ಈ ವರದಿಗಿದೆ.

ಮುಖಪುಟ ಚಿತ್ರ: ಲಬಾನಿ ಜಂಗಿ

ಅನುವಾದ: ಶಂಕರ. ಎನ್. ಕೆಂಚನೂರು

PARI Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru