ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ಈಗ ಮುಂಜಾನೆ 11.40 ರ ಸಮಯ. ಬೀಸುತ್ತಿರುವ ಗಾಳಿಯ ವೇಗದ ಬಗ್ಗೆ ಸುದ್ದಿಯನ್ನು ಬಿತ್ತರಿಸಲಾಗುತ್ತದೆ ಎಂಬುದಾಗಿ ಕಡಲ್ ಒಸಯ್ ರೇಡಿಯೋ ಕೇಂದ್ರದ ಯಶವಂತ್ ತಿಳಿಸುತ್ತಿದ್ದಾರೆ. "ಕಳೆದ ಒಂದು ವಾರ ಅಥವ ತಿಂಗಳಿನಿಂದ ಕಛಾನ್ ಕಾಥು (ದಕ್ಷಿಣ ಮಾರುತ) ಬಹಳ ತೀವ್ರವಾಗಿತ್ತು. ಇದರ ವೇಗವು ಗಂಟೆಗೆ 40 ರಿಂದ 60 ಕಿ.ಮೀ. ನಷ್ಟಿದ್ದಿತು. ಇಂದು ಮೀನುಗಾರರಿಗೆ ಸಹಕರಿಸಲೋ ಎಂಬಂತೆ ಅದರ ವೇಗವು ಗಂಟೆಗೆ 15 ಕಿ.ಮೀ. ನಷ್ಟಿದೆ."

ತಮಿಳು ನಾಡಿನ ರಾಮನಾಥಪುರಂ ಜಿಲ್ಲೆಯ ಮೀನುಗಾರರಿಗೆ ಇದು ಮಹತ್ವದ ಸಮಾಚಾರವೇ ಹೌದು. "ಅಂದರೆ, ಅವರು ಯಾವುದೇ ಭಯವಿಲ್ಲದಂತೆ ಸಮುದ್ರಕ್ಕಿಳಿಯಬಹುದು", ಎನ್ನುತ್ತಾರೆ ಸ್ವತಃ ಮೀನುಗಾರರೂ ಆದ ಯಶವಂತ್. ಈ ಪ್ರದೇಶದ ನೆರೆಯಲ್ಲಿರುವ ಸಾಮುದಾಯಿಕ ರೇಡಿಯೋ ಕೇಂದ್ರವಾದ ಕಡಲ್ ಒಸಯ್‍ನಲ್ಲಿ (ಕಡಲ ದನಿ) ಇವರು ರೇಡಿಯೋ ಜಾಕಿಯಾಗಿದ್ದಾರೆ.

ರಕ್ತದಾನವನ್ನು ಕುರಿತ ವಿಶೇಷ ಪ್ರಕಟಣೆಗಾಗಿ ಯಶವಂತ್, "ತಾಪಮಾನವು 32 ಡಿಗ್ರಿ ಸೆಲ್ಸಿಯಸ್‍ನಲ್ಲಿದ್ದು, ಸಾಕಷ್ಟು ನೀರನ್ನು ಸೇವಿಸಿ. ಬಿಸಿಲಿಗೆ ತೆರಳಬೇಡಿ", ಎನ್ನುತ್ತಾ ಹವಾಮಾನ ವರದಿಯನ್ನು ಸಮಾಪ್ತಿಗೊಳಿಸುತ್ತಾರೆ.

ಇದು ಅತ್ಯಗತ್ಯ ಮುನ್ನೆಚ್ಚರಿಕೆಯೂ ಹೌದು. ಏಕೆಂದರೆ ಪಂಬನ್‍ನಲ್ಲಿನ ಈಗಿನ ದಿನಗಳು, ಯಶವಂತ್ ಹುಟ್ಟಿದ 1996 ರಲ್ಲಿ ಇದ್ದುದಕ್ಕಿಂತಲೂ ಹೆಚ್ಚಿನ ತಾಪಮಾನದಿಂದ ಕೂಡಿವೆ. ಆಗ ವರ್ಷಂಪ್ರತಿ 162 ದಿನಗಳಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ತಲುಪುತ್ತಿತ್ತು ಅಥವ ಅದನ್ನು ಹಾದುಹೋಗುತ್ತಿತ್ತು. ಈಗಲೂ ಪೂರ್ಣಾವಧಿ ಮೀನುಗಾರಿಕೆಯಲ್ಲಿ ತೊಡಗಿರುವ ಆತನ ತಂದೆ ಅಂಥೋನಿ ಸಮಿ ವಸ್ ಹುಟ್ಟಿದ 1973 ರಲ್ಲಿ ಅದರ ಸಂಖ್ಯೆಯು, ವರ್ಷಂಪ್ರತಿ 125 ದಿನಗಳಿಗಿಂತಲೂ ಹೆಚ್ಚಿರುತ್ತಿರಲಿಲ್ಲ. ಈ ಜುಲೈನಲ್ಲಿ ಆನ್‍ಲೈನ್‍ನಲ್ಲಿ ಪ್ರಕಟಗೊಂಡ ನ್ಯೂಯಾರ್ಕ್ ಟೈಮ್ಸ್‍ ನ ಹವಾಮಾನ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಸಂವಾದಾತ್ಮಕ ಸಾಧನದ ಲೆಕ್ಕಾಚಾರದ ಪ್ರಕಾರ; ಇಂದು ವರ್ಷಂಪ್ರತಿ ಬಿಸಿಲಿನಿಂದ ಕೂಡಿದ ದಿನಗಳ ಸಂಖ್ಯೆ ಕನಿಷ್ಟ 180.

ಹೀಗಾಗಿ, ಯಶವಂತ್ ಹಾಗೂ ಆತನ ಸಹೋದ್ಯೋಗಿಗಳು ಹವಾಮಾನವನ್ನಷ್ಟೇ ಅಲ್ಲದೆ, ಹವಾಗುಣದ ಪ್ರಮುಖ ಅಂಶಗಳನ್ನೂ ಸಹ ಹೆಚ್ಚು ಶ್ರಮವಹಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆತನ ತಂದೆ ಮತ್ತು ದ್ವೀಪದ ಎರಡು ಪ್ರಮುಖ ಪಟ್ಟಣಗಳಾದ ಪಂಬನ್ ಮತ್ತು ರಾಮೇಶ್ವರಂನ ಸುಮಾರು 83 ಸಾವಿರದಷ್ಟಿರುವ ಮೀನುಗಾರ ಸಂಗಡಿಗರು ಹವಾಮಾನ ಬದಲಾವಣೆಯ ಸೂಕ್ತ ತಿಳುವಳಿಕೆಗಾಗಿ ಅವರತ್ತ ನೋಡುತ್ತಿದ್ದಾರೆ.

PHOTO • A. Yashwanth
PHOTO • Kadal Osai

ತನ್ನ ತಂದೆ ಅಂತೋನಿ ಸಮಿ ಹಾಗೂ ತನ್ನ ದೋಣಿಯೊಂದಿಗಿರುವ ರೇಡಿಯೋ ಜಾಕಿ, ಯಶವಂತ್ (ಬಲಕ್ಕೆ): ‘ನಾವು ಹೊರಬೀಳುತ್ತಿದ್ದಂತೆಯೇ ಮಾರುತಗಳು ಹಾಗೂ ಹವಾಮಾನವನ್ನು ಕುರಿತಂತೆ ಲೆಕ್ಕಾಚಾರಕ್ಕೆ ತೊಡಗುತ್ತಿದ್ದೆವು. ಇದೀಗ ಈ ಯಾವುದೇ ಲೆಕ್ಕಾಚಾರಗಳೂ ನಮಗೆ ನಿಲುಕದಂತಾಗಿವೆ.’

"ನಾನು 10 ವರ್ಷದವನಿದ್ದಾಗಿನಿಂದಲೂ ಮೀನು ಹಿಡಿಯುತ್ತಿದ್ದೇನೆ. ಅಂದಿನಿಂದ ಖಂಡಿತವಾಗಿಯೂ ಸಮುದ್ರದಲ್ಲಿ  ಮಹತ್ತರ ಬದಲಾವಣೆಗಳಾಗಿವೆ. ಈ ಮೊದಲು ನಾವು ಹೊರಬೀಳುತ್ತಿದ್ದಂತೆಯೇ ಮಾರುತಗಳು ಮತ್ತು ಹವಾಮಾನವನ್ನು ಕುರಿತಂತೆ ಲೆಕ್ಕಾಚಾರಕ್ಕೆ ತೊಡಗುತ್ತಿದ್ದವು. ಇದೀಗ ಈ ಯಾವುದೇ ಲೆಕ್ಕಾಚಾರಗಳೂ ನಮಗೆ ನಿಲುಕದಂತಾಗಿವೆ. ಬದಲಾವಣೆಗಳು ಎಷ್ಟು ತೀಕ್ಷ್ಣವಾಗಿವೆಯೆಂದರೆ, ಅವು ನಮ್ಮ ತಿಳುವಳಿಕೆಗೆ ಸವಾಲು ಒಡ್ಡುತ್ತಿವೆ. ಹಿಂದಿಗಿಂತಲೂ ಈಗ ತಾಪಮಾನದಲ್ಲಿ ಹೆಚ್ಚಳವಾಗಿದೆ. ಈ ಮೊದಲು ಕಡಲಿಗೆ ತೆರಳುವಾಗ ಇಷ್ಟು ತಾಪಮಾನವಿರುತ್ತಿರಲಿಲ್ಲ. ಇಂದಿನ ಈ ತಾಪಮಾನವು ನಮಗೆ ಹೆಚ್ಚು ತ್ರಾಸದಾಯಕವಾಗಿದೆ", ಎನ್ನುತ್ತಾರೆ ಅಂತೋನಿ ಸಮಿ.

ಕೆಲವೊಮ್ಮೆ ಅಶಾಂತವಾಗಿರುವ ಸಮುದ್ರವು ಪ್ರಾಣಾಂತಿಕವಾಗುತ್ತದೆ. ಸಮಯ ಸಿಕ್ಕಾಗಲೆಲ್ಲ ತಂದೆಯ ದೋಣಿಯಲ್ಲಿ ಮೀನುಗಾರಿಕೆಗೆ ತೆರಳುವ ಯಶವಂತ್, ಬಿರುಸಾಗಿದ್ದ ಕಡಲಿನಲ್ಲಿ ನಾಲ್ಕು ಜನರು ದಾರಿ ತಪ್ಪಿದ ಸುದ್ದಿಯೊಂದಿಗೆ ಜುಲೈ 4 ರಂದು ವಾಪಸ್ಸು ಮರಳಿದಾಗ ರಾತ್ರಿ 9 ರ ಸಮಯ. ಮುಂಜಾನೆ 7 ರಿಂದ ಸಂಜೆ 6 ರವರೆಗೆ ಚಾಲ್ತಿಯಲ್ಲಿರುವ ಕಡಲ್ ಒಸಯ್, ಆಗ ತನ್ನ ಪ್ರಸಾರವನ್ನು ನಿಲ್ಲಿಸಿದ್ದಾಗ್ಯೂ, ರೇಡಿಯೋ ಜಾಕಿಯೊಬ್ಬರು ಅಪಾಯದಲ್ಲಿ ಸಿಲುಕಿರುವ ಮೀನುಗಾರರತ್ತ ಇತರರ ಗಮನ ಸೆಳೆದರು. "ಅಧಿಕೃತವಾಗಿ ನಮ್ಮ ಪ್ರಸಾರವು ಸಮಾಪ್ತಿಗೊಂಡಿದ್ದರೂ, ನಮಗೆ ಯಾವಾಗಲೂ ಸ್ಥಳದಲ್ಲಿ ಒಬ್ಬ ರೇಡಿಯೋ ಜಾಕಿ ಲಭ್ಯವಿರುತ್ತಾರೆ. ಇತರೆ ಸಿಬ್ಬಂದಿಗಳೂ ಹತ್ತಿರದಲ್ಲೇ ವಾಸಿಸುತ್ತಾರೆ. ಹೀಗಾಗಿ ಆಪತ್ತಿನಲ್ಲಿ ನಾವು ಪ್ರಸಾರವನ್ನು ಪ್ರಾರಂಭಿಸುತ್ತೇವೆ", ಎನ್ನುತ್ತಾರೆ ರೇಡಿಯೋ ಕೇಂದ್ರದ ಮುಖ್ಯಸ್ಥೆ ಗಾಯತ್ರಿ ಉಸ್ಮಾನ್. ಆ ದಿನದಂದು ಪೋಲೀಸರು, ದಡದ ಕಾವಲುಗಾರರು, ಸಾರ್ವಜನಿಕರು ಮತ್ತು ಇತರೆ ಮೀನುಗಾರರನ್ನು ಎಚ್ಚರಿಸಲು ಕಡಲ್ ಒಸಯ್ ‍ನ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸಿದರು.

ನಿದ್ದೆಯಿಲ್ಲದ ಕೆಲವು ರಾತ್ರಿಗಳ ನಂತರ ಕೇವಲ ಇಬ್ಬರು ಮೀನುಗಾರರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. "ಅವರು ಹಾನಿಗೀಡಾಗಿದ್ದ ವಲ್ಲಂ ಅನ್ನು (ದೇಸೀ ದೋಣಿ) ಆಸರೆಗಾಗಿ ಹಿಡಿದುಕೊಂಡಿದ್ದರು" ಮತ್ತು ಉಳಿದಿಬ್ಬರ ಕೈಗಳು ಸೋತಿದ್ದರಿಂದಾಗಿ ಅವರು ಮಧ್ಯದಲ್ಲೇ ಕೈಚೆಲ್ಲಿದರು ಎನ್ನುತ್ತಾರೆ ಗಾಯತ್ರಿ. ಕುಟುಂಬಕ್ಕೆ ತಮ್ಮ ಪ್ರೀತಿಯನ್ನು ಸಲ್ಲಿಸುವಂತೆ ಹಾಗೂ ಹೆಚ್ಚಿನ ಸಮಯದವರೆಗೂ ದೋಣಿಯನ್ನು ಹಿಡಿದುಕೊಳ್ಳಲು ಸಾಧ್ಯವಾಗದ ತಮ್ಮ ಅಸಹಾಯಕತೆಯನ್ನು ಕುಟುಂಬದವರಿಗೆ ವಿವರಿಸುವಂತೆ ಸಹವರ್ತಿಗಳಿಗೆ ತಿಳಿಸಿದ ನಂತರ ಅವರ ದೇಹಗಳು ಜುಲೈ 10 ರಂದು ಕಡಲ ಪಾಲಾಗಿದ್ದವು.

ತನ್ನ ದೋಣಿಯ ದೆಸೆಯಿಂದಾಗಿ ‘ಕ್ಯಾಪ್ಟನ್ ರಾಜ್’ಎಂಬ ಬಿರುದು ಪಡೆದ 54 ರ ಎ. ಕೆ. ಸೇಸುರಾಜು, "ಈಗಿನ ದಿನಗಳು ಹಿಂದಿನಂತಿಲ್ಲ", ಎಂದು ದುಗುಡದಿಂದ ನುಡಿಯುತ್ತಾರೆ. ತಮ್ಮ 9 ನೇ ವಯಸ್ಸಿನಲ್ಲಿ ಅವರು ಕಡಲಿಗಿಳಿದಾಗ ಅದು ನಮ್ಮ ಸ್ನೇಹಿತನಂತಿತ್ತು ಎನ್ನುವ ಅವರು, ಅಂದು ದೊರಕಬಹುದಾದ ಮೀನುಗಳು ಹಾಗೂ ಹವಾಮಾನಗಳ ಬಗ್ಗೆ ನಮಗೆ ಮೊದಲೇ ತಿಳಿದಿರುತ್ತಿತ್ತು. ಈಗ ಈ ಎರಡೂ ನಮ್ಮ ಊಹೆಗೆ ನಿಲುಕದಂತಾಗಿವೆ ಎನ್ನುತ್ತಾರೆ.

‘ಈಗಿನ ದಿನಗಳು ಹಿಂದಿನಂತಿಲ್ಲ ಎಂದು ದುಗುಡದಿಂದ ನುಡಿಯುವ ಎ. ಕೆ. ಸೇಸುರಾಜ್ ಅಥವ ‘ಕ್ಯಾಪ್ಟನ್ ರಾಜ್.’ ಕಡಲು ನಮ್ಮ ಸ್ನೇಹಿತನಂತಿತ್ತು... ದೊರಕಬಹುದಾದ ಮೀನುಗಳು ಹಾಗೂ ಹವಾಮಾನಗಳ ಬಗ್ಗೆ ನಮಗೆ ತಿಳಿದಿರುತ್ತಿತ್ತು. ಈಗ ಈ ಎರಡೂ ನಮ್ಮ ಊಹೆಗೆ ನಿಲುಕದಂತಾಗಿವೆ’ಎಂಬುದನ್ನು ಒತ್ತಿ ಹೇಳುತ್ತಾರೆ.

ವೀಡಿಯೋ ಗಮನಿಸಿ: ‘ಅಂಬ ಹಾಡನ್ನು ಹಾಡುತ್ತಿರುವ ಕ್ಯಾಪ್ಟನ್ ರಾಜ್’

ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ ರಾಜ್ ದಿಗ್ಭ್ರಮೆಗೊಂಡಿದ್ದಾರಾದರೂ, ಕಡಲ್ ಒಸಯ್‍ ನಲ್ಲಿ ಅವರಿಗಾಗಿ ಕೆಲವು ಉತ್ತರಗಳಿವೆ. ನೇಸಕ್ಕರಂಗಲ್ ಎಂಬ ಸ್ವಯಂಸೇವಾ ಸಂಸ್ಥೆಯಿಂದ ವತಿಯಿಂದ 2016 ರ ಆಗಸ್ಟ್ 15 ರಲ್ಲಿ ಸದರಿ ಕೇಂದ್ರವು ಪ್ರಾರಂಭಗೊಂಡಾಗಿನಿಂದಲೂ ಕಡಲು, ಹವಾಮಾನದ ವಿಧಗಳು ಮತ್ತು ಬದಲಾವಣೆಗಳ ಬಗ್ಗೆ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

ಕಡಲ್ ಒಸಯ್, ಸಮುತಿರಂ ಪಜಗು (ಕಡಲನ್ನು ತಿಳಿಯಿರಿ) ಎಂಬ ಹೆಸರಿನ ದಿನನಿತ್ಯದ ಕಾರ್ಯಕ್ರಮವನ್ನು ಬಿತ್ತರಿಸುತ್ತಿದ್ದು ಕಡಲಿನ ಸಂರಕ್ಷಣೆ ಅದರ ಉದ್ದೇಶವಾಗಿದೆ. ಕಡಲಿಗೆ ಸಂಬಂಧಿಸಿದ ಮಹತ್ವದ ವಿಷಯಗಳು ಸಮುದಾಯದ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತವೆಂಬುದು ನಮಗೆ ತಿಳಿದಿದೆ. ಪಜಗು ಎಂಬುದು ಹವಾಮಾನ ಬದಲಾವಣೆಯನ್ನು ಕುರಿತ ಸಂವಾದವನ್ನು ಚಾಲ್ತಿಯಲ್ಲಿಡುವ ಪ್ರಯತ್ನವಾಗಿದೆ. ಕಡಲಿನ ಸ್ವಾಸ್ಥ್ಯಕ್ಕೆ ಹಾನಿಕರವಾದ ನಮ್ಮ ರೂಢಿಗಳು ಹಾಗೂ ಅವನ್ನು ನಿವಾರಿಸುವ ಬಗ್ಗೆ ನಾವು ಸಂವಾದಿಸುತ್ತೇವೆ. ಉದಾಹರಣೆಗೆ ಮೀನು ಹಿಡಿವ ದೋಣಿಗಳಲ್ಲಿನ ಅತೀವ ಮೀನುಗಾರಿಕೆ ಅಥವ ಡೀಸೆಲ್ ಮತ್ತು ಪೆಟ್ರೋಲ್‍ಗಳು ನೀರನ್ನು ಹೇಗೆ ಕಲುಷಿತಗೊಳಿಸುತ್ತಿವೆ ಎಂಬ ವಿಷಯಗಳು. ತಮ್ಮ ಸ್ವಂತ ಅನುಭವಗಳನ್ನು ತಿಳಿಸುವವರನ್ನು ಕರೆಸಿ ಮಾತನಾಡಿಸುತ್ತೇವೆ. ಕೆಲವೊಮ್ಮೆ ಅವರು ತಮ್ಮ ತಪ್ಪುಗಳ ಬಗ್ಗೆ ತಿಳಿಸಿ, ಅವನ್ನು ಪುನರಾವರ್ತಿಸುವುದಿಲ್ಲವೆಂದು ಭರವಸೆ ನೀಡುತ್ತಾರೆ ಎನ್ನುತ್ತಾರೆ ಗಾಯತ್ರಿ.

ಚೆನ್ನೈಯ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂ.ಎಸ್‍.ಎಸ್‍.ಆರ್‍.ಎಫ್) ಈ ರೇಡಿಯೋ ಕೇಂದ್ರಕ್ಕೆ ಬೆಂಬಲವನ್ನು ನೀಡುತ್ತಿದ್ದು ಸಂವಹನ ನಿರ್ವಾಹಕರಾದ ಕ್ರಿಸ್ಟಿ ಲೀಮ, "ಕಡಲ್ ಒಸಯ್ ಪ್ರಾರಂಭವಾದಾಗಿನಿಂದಲೂ ಅದರ ತಂಡವು ನಮ್ಮೊಂದಿಗೆ ಸಂಪರ್ಕದಲ್ಲಿದೆ. ಮೇ ತಿಂಗಳಿನಿಂದ ಹವಾಮಾನ ಬದಲಾವಣೆಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನಾವು ಅವರೊಂದಿಗೆ ಕೈಜೋಡಿಸಿದ್ದೇವೆ. ಕಡಲ್ ಒಸಯ್ ಮೂಲಕ ಇದು ಸುಲಭಸಾಧ್ಯ. ಏಕೆಂದರೆ ಪಂಬನ್ ನಲ್ಲಿ ಈ ಸಾಮುದಾಯಿಕ ರೇಡಿಯೋ ಈಗಾಗಲೇ ಅಪಾರ ಜನಪ್ರಿಯತೆಯನ್ನು ಗಳಿಸಿದೆ", ಎನ್ನುತ್ತಾರೆ.

ಮೇ ನಿಂದ ಜೂನ್‍ ವರೆಗೆ ಈ ಕೇಂದ್ರದಿಂದ ನಿರ್ದಿಷ್ಟವಾಗಿ ಹವಾಮಾನ ಬದಲಾವಣೆಯನ್ನು ಕುರಿತಂತೆ ‘ಕಡಲ್ ಒರು ಅತಿಸಯಂ, ಅಥೈ ಕಾಪತು ನಮ್ ಅವಸಿಯಂ’(ಕಡಲು ವಿಸ್ಮಯಕರ. ನಾವು ಅದನ್ನು ರಕ್ಷಿಸತಕ್ಕದ್ದು) ಎಂಬ ಹೆಸರಿನ ನಾಲ್ಕು ವೃತ್ತಾಂತಗಳನ್ನು ಪ್ರಸಾರ ಮಾಡಲಾಗಿದೆ.

PHOTO • Kavitha Muralidharan
PHOTO • Kadal Osai

ಮೇ ನಿಂದ ಜೂನ್‍ ವರೆಗೆ ಈ ಕೇಂದ್ರದಿಂದ ನಿರ್ದಿಷ್ಟವಾಗಿ ಹವಾಮಾನ ಬದಲಾವಣೆಯನ್ನು ಕುರಿತಂತೆ ‘ಕಡಲ್ ಒರು ಅತಿಸಯಂ, ಅಥೈ ಕಾಪತು ನಮ್ ಅವಸಿಯಂ’ (ಕಡಲು ವಿಸ್ಮಯಕರ. ನಾವು ಅದನ್ನು ರಕ್ಷಿಸತಕ್ಕದ್ದು) ಎಂಬ ಹೆಸರಿನ ನಾಲ್ಕು ವೃತ್ತಾಂತಗಳನ್ನು ಪ್ರಸಾರ ಮಾಡಲಾಗಿದೆ.

ಮೇ 10 ರಲ್ಲಿ ರೇಡಿಯೋದಲ್ಲಿ ಬಿತ್ತರಗೊಂಡ ಕಾರ್ಯಕ್ರಮದ ಮೂಲಕ ತಮ್ಮ ದ್ವೀಪದಲ್ಲಿ ಉಂಟಾಗುತ್ತಿರುವ ಮಹತ್ತರ ಬದಲಾವಣೆಗಳನ್ನು ಅರಿಯಲು ಜನರಿಗೆ ಸಾಧ್ಯವಾಯಿತು. ರಾಮೇಶ್ವರಮ್ ಪಟ್ಟಣವನ್ನು ಭಾರತದ ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುವ 2,065 ಮೀಟರ್ ‍ಗಳಷ್ಟಿರುವ ಪಂಬನ್ ಸೇತುವೆಯ ಬಳಿ ಎರಡು ದಶಕಗಳಿಂದಲೂ ಕನಿಷ್ಟ 100 ಕುಟುಂಬಗಳು ವಾಸಿಸುತ್ತಿದ್ದವು. ಸಮುದ್ರ ಮಟ್ಟದಲ್ಲಿನ ಏರಿಕೆಯು ಅವರು ತಮ್ಮ ನೆಲೆಯನ್ನು ತೊರೆದು ಬೇರೆಯ ಸ್ಥಳದಲ್ಲಿ ವಾಸಿಸುವುದನ್ನು ಅನಿವಾರ್ಯವಾಗಿಸಿದೆ. ಈ ಕಾರ್ಯಕ್ರಮದಲ್ಲಿ ಸೆಲ್ವನ್ ಅವರು ಹವಾಮಾನದಲ್ಲಿನ ಬದಲಾವಣೆಯು ಜನರ ಈ ಸಂಚಾರವನ್ನು ತೀವ್ರಗೊಳಿಸಿರುವುದಾಗಿ ವಿವರಿಸುತ್ತಾರೆ.

ವಿಷಯ ತಜ್ಞರಾಗಲಿ, ಮೀನುಗಾರರಾಗಲಿ, ರೇಡಿಯೋ ಕೇಂದ್ರದ ವರದಿಗಾರರಾಗಲಿ ಈ ವಿಷಯವನ್ನು ಹೆಚ್ಚು ಸರಳೀಕೃತಗೊಳಿಸಿರುವುದಿಲ್ಲ. ಅಲ್ಲದೆ ಸದರಿ ಬದಲಾವಣೆಗಳಿಗೆ ಕಾರಣವಾದ ಏಕೈಕ ಸಂಗತಿ ಅಥವ ಕಾರಣದ ವಿವರಗಳನ್ನು ಹುಡುಕುವ ಆಸಕ್ತಿಗೆ ತಡೆಯೊಡ್ಡಿರುವುದಿಲ್ಲ. ಈ ವಿಷಮ ಪರಿಸ್ಥಿತಿಯನ್ನು ಉತ್ತೇಜಿಸುವಲ್ಲಿ ಇರುವ ಮನುಷ್ಯರ ಚಟುವಟಿಕೆಗಳ ಪಾತ್ರದೆಡೆಗೆ ಅವರು ಗಮನ ಸೆಳೆಯುತ್ತಾರೆ. ಕಡಲ್ ಒಸಯ್ ಉತ್ತರವನ್ನು ಹುಡುಕುವ ಅನ್ವೇಷಣೆಯ ಪಯಣದಲ್ಲಿ ಸಮುದಾಯವನ್ನು ಮುನ್ನಡೆಸುವ ಪ್ರಯತ್ನದಲ್ಲಿದೆ.

ಪಂಬನ್ ದ್ವೀಪವು ಪರಿಸರದ ಒಂದು ವ್ಯವಸ್ಥೆಯಾಗಿದ್ದು ಹೆಚ್ಚು ಸಂವೇದನಾಶೀಲವಾಗಿದೆ. ಆದರೆ ಮರಳು ದಿಬ್ಬಗಳು ದ್ವೀಪವನ್ನು ಹವಾಮಾನದ ಪರಿಣಾಮಗಳಿಂದ ರಕ್ಷಿಸುತ್ತವೆ. ಅಲ್ಲದೆ ಶ್ರೀಲಂಕಾದ ಸಮುದ್ರತೀರದ ಸುಳಿಗಾಳಿಯಿಂದಲೂ ಈ ದ್ವೀಪವು ಕೊಂಚಮಟ್ಟಿಗೆ ರಕ್ಷಿಸಲ್ಪಟ್ಟಿದೆ ಎನ್ನುತ್ತಾರೆ ಸೆಲ್ವಂ.

ಹವಾಮಾನದ ಕಾರಣದಿಂದಾಗಿ ಹಾಗೂ ಹವಾಮಾನಕ್ಕೆ ಸಂಬಂಧಿಸಿಲ್ಲದ ಕಾರಣಗಳ ಸಂಯೋಜನೆಯಿಂದಾಗಿ ಕಡಲಿನ ಸಂಪತ್ತು ಹಾನಿಗೊಳಗಾಗಿರುವುದು ಸುಸ್ಪಷ್ಟ ಎಂಬುದಾಗಿಯೂ ಅವರು ತಿಳಿಸುತ್ತಾರೆ. ಮೀನು ಹಿಡಿಯುವ ದೋಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳನ್ನು ಹಿಡಿಯುವ ಪ್ರಕ್ರಿಯೆಯಿಂದಾಗಿ, ಮೀನುಗಳು ಹೆಚ್ಚು ಸಂಖ್ಯೆಯಲ್ಲಿ ಲಭ್ಯವಾಗುತ್ತಿಲ್ಲ. ಸಮುದ್ರದ ತಾಪಮಾನವು ಹೆಚ್ಚಾದಲ್ಲಿ ಮೀನಿನ ದೊಡ್ಡ ತಂಡಗಳ ಚಲನೆಯು ಅಸ್ತವ್ಯಸ್ತಗೊಳ್ಳುತ್ತದೆ.

PHOTO • Kadal Osai
PHOTO • Kavitha Muralidharan

ಎಡಕ್ಕೆ: ಎಂ. ಸೆಲಸ್ ಅವರು ತನ್ನಂತೆಯೇ ಮೀನುಗಾರರ ಸಮುದಾಯಕ್ಕೆ ಸೇರಿದ ಪಂಬನ್ ದ್ವೀಪದ ಮಹಿಳೆಯರನ್ನು ಸಂದರ್ಶಿಸುತ್ತಿದ್ದಾರೆ. ಬಲಕ್ಕೆ: ರೇಡಿಯೋ ಕೇಂದ್ರದ ಮುಖ್ಯಸ್ಥರಾದ ಗಾಯತ್ರಿ ಉಸ್ಮಾನ್ ಅವರು ಸಮುದಾಯದ ಈ ವೇದಿಕೆಗೆ ಸ್ಪಷ್ಟ ದಿಕ್ಕನ್ನು ತೋರುತ್ತಿದ್ದಾರೆ.

ಮೀನುಗಾರರ ಸಮುದಾಯಕ್ಕೆ ಸೇರಿದವರೇ ಆದ ಕಡಲ್ ಒಸಯ್‍ನ ಬಿ. ಮಧುಮಿತ, ತಮ್ಮ ಮೇ 24 ರ ಪ್ರಸಾರದಲ್ಲಿ; "ಊರಲ್, ಸಿರ, ವೆಲಕಂಬನ್... ಮುಂತಾದ ಪ್ರಭೇದಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಪಾಲ್ ಸುರ, ಕಲ್ವೆಟಿ, ಕೊಂಬನ್ ಸುರ ಪ್ರಭೇದಗಳು ಇನ್ನೂ ಅಸ್ತಿತ್ವದಲ್ಲಿವೆಯಾದರೂ ಅವುಗಳ ಸಂಖ್ಯೆ ಗಮನಾರ್ಹವಾಗಿ ಕುಂಠಿತಗೊಂಡಿದೆ. ವಿಚಿತ್ರವೆಂದರೆ ಒಂದೊಮ್ಮೆ ಕೇರಳದಲ್ಲಿ ಹೇರಳವಾಗಿದ್ದ ಮಥಿ ಮೀನುಗಳು ಈಗ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ", ಎನ್ನುತ್ತಾರೆ.

ಇದೇ ಪ್ರಸಾರದಲ್ಲಿ, ಎರಡು ದಶಕಗಳ ಹಿಂದೆ ಟನ್‍ ಗಟ್ಟಲೆ ದೊರೆಯುತ್ತಿದ್ದ ಮತ್ತೊಂದು ಪ್ರಭೇದವಾದ ಮಂಡೈಕಲುಗು ಈಗ ಕಣ್ಮರೆಯಾಗಿದೆ ಎನ್ನುವ ಹಿರಿಯ ಮಹಿಳೆ ಲೀನ, (ಅವರ ಸಂಪೂರ್ಣ ಹೆಸರು ಲಭ್ಯವಿಲ್ಲ) ತನ್ನ ತಲೆಮಾರಿನ ಜನರು ಆ ಮೀನಿನ ಬಾಯನ್ನು ತೆರೆದು ಅದರ ಮೊಟ್ಟೆಗಳನ್ನು ಹೇಗೆ ತಿನ್ನುತ್ತಿದ್ದರೆಂಬುದನ್ನು ನೆನೆಸಿಕೊಳ್ಳುತ್ತಾರೆ. ಯುವ ತಲೆಮಾರಿನ ಎಂ. ಸೆಲಸ್ ಅದೇ ಸಮುದಾಯಕ್ಕೆ ಸೇರಿದ್ದಾಗ್ಯೂ ಈ ವಿಚಾರವನ್ನು ಸರ್ವಥಾ ಗ್ರಹಿಸದಾದರು (ಎಂ.ಕಾಂ ಪದವೀಧರೆಯಾದ ಈಕೆಯು ಕಡಲ್ ಒಸಯ್‍ ನ ಉದ್ಘೋಷಕಿ ಹಾಗೂ ನಿರ್ಮಾಪಕಿಯಾಗಿದ್ದಾರೆ).

"1980 ರವರೆಗೂ ನಮಗೆ ಕಟ್ಟೈ, ಸೀಲ, ಕೊಂಬನ್ ಸುರ ಮಂತಾದ ಅಂಥದ್ದೇ ಪ್ರಭೇದಗಳು ಟನ್‍ ಗಟ್ಟಲೆ ದೊರೆಯುತ್ತಿದ್ದವು. ಇಂದು ನಾವು ಆ ಮೀನುಗಳನ್ನು ಡಿಸ್ಕವರಿ ಛಾನಲ್‍ ನಲ್ಲಿ ಹುಡುಕುತ್ತಿದ್ದೇವೆ. ಯಾಂತ್ರೀಕೃತವಲ್ಲದ ದೋಣಿಗಳನ್ನು ಬಳಸುತ್ತಿದ್ದ ನನ್ನ ಅಜ್ಜ-ಅಜ್ಜಿಯರು, ಇಂಜಿನ್ ಶಬ್ದವು ಮೀನುಗಳನ್ನು ದೂರಕ್ಕೆ ಓಡಿಸುತ್ತದೆಯೆನ್ನುತ್ತಿದ್ದರು. ಪೆಟ್ರೋಲ್ ಮತ್ತು ಡೀಸೆಲ್‍ಗಳು ನೀರನ್ನು ವಿಷಮಯವನ್ನಾಗಿಸಿ ಮೀನಿನ ರುಚಿಯನ್ನು ಬದಲಿಸಿವೆ. ಆಗಿನ ಕಾಲದಲ್ಲಿ ಮಹಿಳೆಯರು ದಡಕ್ಕೆ ಹತ್ತಿರವಾಗಿ ನೀರಿಗಿಳಿದು ಬಲೆ ಬೀಸುತ್ತಿದ್ದಂತೆಯೇ ಮೀನುಗಳು ದೊರೆಯುತ್ತಿದ್ದವು. ದಡಕ್ಕೆ ಹತ್ತಿರವಾಗಿ ಈಗ ಮೀನುಗಳು ದೊರೆಯುತ್ತಿಲ್ಲವಾದ ಕಾರಣ ಮಹಿಳೆಯರು ಕಡಲಿಗೆ ತೆರಳುವುದು ಕಡಿಮೆಯಾಗಿದೆ", ಎನ್ನುತ್ತಾರೆ ಲೀನ.

ಮೇ 17 ರಂದು ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ, ಇತ್ತೀಚಿನ ತಂತ್ರಜ್ಞಾನಗಳು ಮತ್ತು ಅವೆರಡರ ಸಂಯೋಜನೆಯಿಂದ ಕಡಲಿನ ಜೀವರಾಶಿಯನ್ನು ಸಂರಕ್ಷಿಸುವ ಬಗ್ಗೆ ಚರ್ಚಿಸಲಾಯಿತು. "ದಡದ ಸಮೀಪ ಗೂಡುಗಳನ್ನು ನಿರ್ಮಿಸಿ ಮೀನು ಸಾಕಾಣಿಕೆಯನ್ನು ಕೈಗೊಳ್ಳುವಂತೆ ಮೀನುಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಡಲಿನ ಸಂಪತ್ತಿನ ನಾಶದ ಬಗ್ಗೆ ಕಳಕಳಿಯನ್ನು ವ್ಯಕ್ತಪಡಿಸುತ್ತಿರುವ ಸರ್ಕಾರವು, ಈ ‘ಗೂಡು ಸಂಸ್ಕøತಿಯನ್ನು’ಬೆಂಬಲಿಸುತ್ತಿದೆ", ಎನ್ನುತ್ತಾರೆ ಗಾಯತ್ರಿ.

PHOTO • Kadal Osai

ಛಾಯಾಚಿತ್ರ: ಕಡಲ್ ಒಸಯ್

ಈ ಪ್ರಯತ್ನದಲ್ಲಿ ತೊಡಗಲು ಉತ್ಸುಕರಾಗಿರುವ ಪಂಬನ್ ಮೀನುಗಾರ, 28 ರ ಅಂತೋನಿ ಇನಿಗೊ, "ನಾವು ಮೊದಲೆಲ್ಲ ಬಲೆಗೆ ಸಿಕ್ಕ ಡ್ಯುಗಂಗ್‍ ಗಳನ್ನು (ಕಡಲ ಸಸ್ತನಿ) ವಾಪಸ್ಸು ಕಡಲಿಗೆ ಬಿಡುತ್ತಿರಲಿಲ್ಲ. ಆದರೆ ಕಡಲ್ ಒಸಯ್ ಕಾರ್ಯಕ್ರಮದ ನಂತರ, ಹವಾಮಾನದ ಬದಲಾವಣೆ ಹಾಗು ಮಾನವರ ಚಟುವಟಿಕೆಗಳು ಇವನ್ನು ಹೇಗೆ ನಿರ್ನಾಮಗೊಳಿಸುತ್ತಿವೆಯೆಂಬುದನ್ನು ಅರಿತ ನಾವು, ನಮ್ಮ ದುಬಾರಿ ಬಲೆಗಳನ್ನು ಕತ್ತರಿಸಿಯಾದರೂ ಅವನ್ನು ವಾಪಸ್ಸು ಕಡಲಿಗೆ ಮರಳಿಸುತ್ತಿದ್ದೇವೆ. ಬಲೆಗೆ ಬಿದ್ದ ಆಮೆಗಳನ್ನೂ ಹೀಗೆಯೇ ವಾಪಸ್ಸು ಕಡಲಿಗೆ ಬಿಡುತ್ತೇವೆ", ಎಂದು ತಿಳಿಸುತ್ತಾರೆ.

ವಿಷಯತಜ್ಞರು ಹವಾಮಾನದ ಬದಲಾವಣೆಯು ಮೀನುಗಳ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತಿದೆಯೆಂಬುದರ ಬಗ್ಗೆ ಮಾತನಾಡಿದಾಗಲೆಲ್ಲ ಮೀನುಗಾರರು ನಮ್ಮನ್ನು ಸಂಪರ್ಕಿಸಿ, ತಮಗೂ ಆ ಮಾತುಗಳ ಬಗ್ಗೆ ಸಹಮತವಿರುವ ಬಗ್ಗೆ ತಿಳಿಸುತ್ತಾರೆ ಎಂಬ ವಿಷಯವನ್ನು ಗಾಯತ್ರಿಯವರು ತಿಳಿಸಿದರು.

ಮೀನುಗಳು ಕಾಣೆಯಾಗಿರುವುದಕ್ಕೆ ನಾವು ಪ್ರಕೃತಿ ಹಾಗೂ ದೇವರನ್ನು ಹಳಿಯುತ್ತೇವೆ. ನಮ್ಮ ಕಾರ್ಯಕ್ರಮಗಳ ಮೂಲಕ ಇದು ಸಂಪೂರ್ಣವಾಗಿ ನಮ್ಮ ತಪ್ಪೇ ಹೌದು ಎಂಬ ವಿಷಯವನ್ನು ಅರಿತಿದ್ದೇವೆ ಎನ್ನುತ್ತಾರೆ ಸೆಲಸ್. ಗಾಯತ್ರಿಯನ್ನು ಹೊರತುಪಡಿಸಿ ಕಡಲ್ ಒಸಯ್‍ ನ ಎಲ್ಲ ಸಿಬ್ಬಂದಿಗಳೂ ವೀನುಗಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಕೆಯು ಪರಿಣಿತ ಶಬ್ದತಂತ್ರಜ್ಞೆಯಾಗಿದ್ದು; ಒಂದೂವರೆ ವರ್ಷದ ಹಿಂದೆ ಈ ತಂಡವನ್ನು ಸೇರಿದ್ದು, ಸಮುದಾಯದ ವೇದಿಕೆಯು ಸ್ಪಷ್ಟ ದಿಕ್ಕು ಹಾಗೂ ಉದ್ದೇಶದೊಂದಿಗೆ ಸಾಗಲು ಸಹಕರಿಸುತ್ತಿದ್ದಾರೆ.

ಬಹುತೇಕ ದಿನಗಳಲ್ಲಿ ಮೀನಿನ ಭಾರಿ ವ್ಯಾಪಾರವನ್ನು ಕಾಣಬಹುದಾದ ಪಂಬನ್ ಬೀದಿಯಲ್ಲಿ ಕಡಲ್ ಒಸಯ್‍ ನ ಕಛೇರಿಯಿದ್ದು; ನೀಲಿ ವರ್ಣದ ಬೋರ್ಡಿನ ಮೇಲೆ ನಮಥು ಮುನ್ನೆತ್ರಥುಕ್ಕನ ವಾನೊಲಿ (ರೇಡಿಯೋ-ನಮ್ಮ ವಿಕಾಸಕ್ಕಾಗಿ) ಎಂಬ ವಾಕ್ಯವಿದೆ. ಒಳಭಾಗದಲ್ಲಿ ಎಫ್‍.ಎಂ ಕೇಂದ್ರವಿದ್ದು ಆಧುನಿಕ ಧ್ವನಿಮುದ್ರಣ ಗೃಹವಿದೆ. ಮಕ್ಕಳು, ಮಹಿಳೆಯರು ಹಾಗೂ ಮೀನುಗಾರರಿಗೆ ಪ್ರತ್ಯೇಕ ವಿಭಾಗಗಳಿವೆ. ಕಾರ್ಯಕ್ರಮಗಳ ಮಧ್ಯೆ ಕಡಲಿಗೆ ತೆರಳುವ ಮೀನುಗಾರರಿಗಾಗಿ ಅಂಬ ಹಾಡನ್ನು ಪ್ರಸಾರಮಾಡಲಾಗುತ್ತದೆ. ಸ್ಟೇಶನ್ನಿನ 11 ಸಿಬ್ಬಂದಿಗಳಲ್ಲಿ ಕೇವಲ ಯಶವಂತ್ ಹಾಗೂ ಡಿ. ರೆಡಿಮೆರ್ ಈಗಲೂ ಕಡಲಿಗೆ ತೆರಳುತ್ತಾರೆ.

ಯಶವಂತ್ ನ ಕುಟುಂಬವು ತೂತ್ತುಕುಡಿಯಿಂದ ಪಂಬನ್‍ ಗೆ ಅನೇಕ ವರ್ಷಗಳ ಹಿಂದೆ ಸ್ಥಳಾಂತರಗೊಂಡಿತು. ಅಲ್ಲಿ ಮೀನುಗಾರಿಕೆಯು ಲಾಭದಾಯಕ ಆಯ್ಕೆಯಾಗಿರಲಿಲ್ಲ. ನನ್ನ ತಂದೆಗೆ ಸಾಕಷ್ಟು ಮೀನುಗಳನ್ನು ದೊರಕಿಸಿಕೊಳ್ಳಲು ಬಹಳ ಕಷ್ಟವೆನಿಸುತ್ತಿತ್ತು. ರಾಮೇಶ್ವರಂ ಸ್ವಲ್ಪ ಉತ್ತಮವೆನಿಸಿದಾಗ್ಯೂ ವರ್ಷಗಳು ಕಳೆದಂತೆ ಮೀನುಗಳು ಇಲ್ಲಿಯೂ ದುರ್ಲಭವಾಗುತ್ತಿವೆ ಎನ್ನುತ್ತಾರೆ ಆತ. ಈ ಹಿನ್ನೆಡೆಗೆ ಇತರರ ಕುಟಿಲ ಮಂತ್ರವಿದ್ಯೆಗಳು ಕಾರಣವಲ್ಲ. ಬದಲಿಗೆ ಹವಾಮಾನವನ್ನು ಕುರಿತ ನಮ್ಮ ಚಟುವಟಿಕೆಗಳೇ ಇದಕ್ಕೆ ಕಾರಣವೆಂಬ ಅಂಶವನ್ನು ಕಡಲ್ ಒಸಯ್ ಅವರಿಗೆ ಮನಗಾಣಿಸಿದೆ.

ಲಾಭಗ್ರಸ್ತತೆಯ ಬಗ್ಗೆ ಅವರು ಚಿಂತಿತರಾಗಿದ್ದಾರೆ. "ಕೆಲವು ಹಿರಿಯರು ಈಗಲೂ ತಮ್ಮ ಪೂರ್ವಿಕರು ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ಹಿಡಿಯದಿರುವುದೇ ತಮ್ಮ ಬಡತನಕ್ಕೆ ಕಾರಣವೆಂಬುದಾಗಿ ನಂಬಿದ್ದಾರೆ. ಅವರು ಗರಿಷ್ಠ ಪ್ರಮಾಣದ ಲಾಭವನ್ನು ಬಯಸುತ್ತಾರೆ. ಇದರಿಂದಾಗಿ ಕಡಲಿನ ಶೋಷಣೆ ಅವ್ಯಾಹತವಾಗಿದೆ. ನಮ್ಮಂಥ ಕೆಲವು ಯುವಜನರು ಇದರ ಅಪಾಯವನ್ನು ಅರಿತು ಕುಟಿಲ ತಂತ್ರಗಳಿಗೆ ಎಡೆಗೊಡುತ್ತಿಲ್ಲ", ಎಂಬುದಾಗಿ ಅವರು ವಿವರಿಸುತ್ತಾರೆ.

ಲಾಭಗ್ರಸ್ತತೆಯ ಬಗ್ಗೆ ಆತನು ಚಿಂತಿತನಾಗಿದ್ದಾನೆ. ‘ಕೆಲವು ಹಿರಿಯರು ಈಗಲೂ ತಮ್ಮ ಪೂರ್ವಿಕರು ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ಹಿಡಿಯದಿರುವುದೇ ತಮ್ಮ ಬಡತನಕ್ಕೆ ಕಾರಣವೆಂಬುದಾಗಿ ನಂಬಿದ್ದಾರೆ. ಅವರು ಗರಿಷ್ಠ ಪ್ರಮಾಣದ ಲಾಭವನ್ನು ಬಯಸುತ್ತಾರೆ. ಇದರಿಂದಾಗಿ ಕಡಲಿನ ಶೋಷಣೆ ಅವ್ಯಾಹತವಾಗಿದೆ’.

ವೀಡಿಯೋ ವೀಕ್ಷಿಸಿ: ಆರ್‍ಜೆ ಯಶವಂತ್, ಪಂಬನ್ ಹವಾಮಾನ ವರದಿಯನ್ನು ನೀಡುತ್ತಿದ್ದಾರೆ.

ಆದಾಗ್ಯೂ ಈ ದೊಡ್ಡ ಸಮುದಾಯದ ಸಾಂಪ್ರದಾಯಿಕ ಜ್ಞಾನವು ಕಲಿಕೆಯ ಅಮೂಲ್ಯ ಆಕರವಾಗಿದೆ. ವಿಷಯತಜ್ಞರು ಆ ಜ್ಞಾನಕ್ಕೆ ಮಾನ್ಯತೆಯನ್ನು ನೀಡಿ ಅದನ್ನು ನಾವು ಏಕೆ ಬಳಸತಕ್ಕದ್ದೆಂಬುದನ್ನು ನಮಗೆ ನೆನಪಿಸುತ್ತಾರೆ. ನಮ್ಮ ರೇಡಿಯೋ ಕೇಂದ್ರವು ಸಾಂಪ್ರದಾಯಿಕ ಜ್ಞಾನಕ್ಕೆ ಗೌರವವನ್ನಿತ್ತು ಅದಕ್ಕೆ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ನಂತರದಲ್ಲಿ ಸಮುದಾಯವು ನಾವು ಬಿತ್ತರಿಸಿದ ವಿಶೇಷ ಜ್ಞಾನವನ್ನು ಬಳಸಿಕೊಳ್ಳುತ್ತದೆ.

ಪಂಬನ್ ಕಂಟ್ರಿ ಬೋಟ್ಸ್ ಫಿಶರ್‍ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್. ಪಿ. ರಾಯಪ್ಪನ್ ಅವರೂ ಇದನ್ನು ಒಪ್ಪುತ್ತಾರೆ. "ನಾವು ಸದಾ ಕಡಲಿನ ಜೀವರಾಶಿಯ ಅತೀವ ಬಳಕೆಯ ಹಾಗೂ ಅದರ ಅಪಾಯದ ಬಗ್ಗೆ ಮಾತನಾಡುತ್ತಿರುತ್ತೇವೆ. ಕಡಲ್ ಒಸಯ್ ವತಿಯಿಂದ ಮೀನುಗಾರರಲ್ಲಿ ಮೂಡಿಸಲಾಗುವ ಜಾಗೃತಿಯು ಹೆಚ್ಚು ಪ್ರಭಾವಶಾಲಿಯಾಗಿದ್ದು, ನಮ್ಮ ಜನರು ಈಗ ಕೆಲವೊಮ್ಮೆ ಡ್ಯುಗಂಗ್ ಅಥವ ಆಮೆಯನ್ನು ಉಳಿಸಲು ತಾವು ಆಮದು ಮಾಡಿಕೊಂಡ ಬಲೆಗಳನ್ನು ಸಹ ತ್ಯಾಗಮಾಡುತ್ತಿದ್ದಾರೆ", ಎಂದು ಅವರು ತಿಳಿಸುತ್ತಾರೆ. ಸೆಲಸ್ ಹಾಗೂ ಮಧುಮಿತ ಬಹುಶಃ ಒಂದಲ್ಲ ಒಂದು ದಿನ, ಮಂಡೈಕಲುಗನ್ನು ದ್ವೀಪದ ನೀರಿಗೆ ವಾಪಸ್ಸು ತರುವಲ್ಲಿ ತಮ್ಮ ರೇಡಿಯೋ ಕೇಂದ್ರವು ಸಹಾಯ ಮಾಡುತ್ತದೆಂಬ ವಿಶ್ವಾಸವನ್ನು ಹೊಂದಿದ್ದಾರೆ.

ಬಹುತೇಕ ರೇಡಿಯೋ ಕೇಂದ್ರಗಳಂತೆ ಇದರ ಪ್ರಸಾರವು 15 ಕಿ.ಮೀ. ಗಿಂತಲೂ ಹೆಚ್ಚಿನ ದೂರಕ್ಕೆ ತಲುಪಲಾರದು. ಆದರೆ ಪಂಬನ್ ಜನರು ಕಡಲ್ ಒಸಯ್‍ನಲ್ಲಿ ಸಮಾವಿಷ್ಟರಾಗಿದ್ದು "ನಮಗೆ ಕೇಳುಗರಿಂದ ದಿನಕ್ಕೆ 20 ಪತ್ರಗಳು ಬರುತ್ತವೆ. ನಾವು ಇದನ್ನು ಪ್ರಾರಂಭಿಸಿದಾಗ ನಾವು ಯಾರು, ನಾವು ಯಾವ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಕುರಿತು ವಿಸ್ಮಯದಿಂದಿದ್ದ ಅವರು ಈಗ ನಮ್ಮನ್ನು ನಂಬುತ್ತಾರೆ", ಎಂಬುದಾಗಿ ಗಾಯತ್ರಿ ತಿಳಿಸುತ್ತಾರೆ.

ಆದರೆ ಹವಾಮಾನದಲ್ಲಿ ಮಾತ್ರ ಅವರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತಲೇ ಇದ್ದಾರೆ.

ಮುಖಪುಟ ಚಿತ್ರ: ಪಂಬನ್‍ ನ ಜೂನ್ 8 ರ ವಿಶ್ವಸಂಸ್ಥೆಯ ವಲ್ರ್ಡ್ ಓಷನ್ ಡೇ ಸಮಾರಂಭದಲ್ಲಿ ಕಡಲ್ ಒಸಯ್ ಎಂಬ ಬರಹವನ್ನುಳ್ಳ ಫಲಕವನ್ನು ಹಿಡಿದಿದ್ದಾರೆ. (ಚಿತ್ರ: ಕಡಲ್ ಒಸಯ್)

ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್‍ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected] .

ಅನುವಾದ: ಶೈಲಜ ಜಿ. ಪಿ.

Reporter : Kavitha Muralidharan

کویتا مرلی دھرن چنئی میں مقیم ایک آزادی صحافی اور ترجمہ نگار ہیں۔ وہ پہلے ’انڈیا ٹوڈے‘ (تمل) کی ایڈیٹر تھیں اور اس سے پہلے ’دی ہندو‘ (تمل) کے رپورٹنگ سیکشن کی قیادت کرتی تھیں۔ وہ پاری کے لیے بطور رضاکار (والنٹیئر) کام کرتی ہیں۔

کے ذریعہ دیگر اسٹوریز کویتا مرلی دھرن

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Series Editors : P. Sainath

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Series Editors : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

کے ذریعہ دیگر اسٹوریز Shailaja G. P.