ಕಲೆಯ ಉದ್ದೇಶ ಕೇವಲ ಮನರಂಜನೆಯಲ್ಲ. ಅದೊಂದು ಶತ್ರುಗಳೊಡನೆ ಬಡಿದಾಡಲು ಬಳಸಬಹುದಾದ ಅಸ್ತ್ರ.
- ಪ್ಯಾಬ್ಲೊ ಪಿಕಾಸ್ಸೊ

ಮರಾಠಿ ಭಾಷೆಯಲ್ಲೊಂದು ಮಾತಿದೆ: “ಬಾಮನಾ ಘರೀ ಲಿಹನಂ, ಕುಣಬ್ಯ ಘರೀ ದಾನಂ ಆಣಿ ಮಾಂಗಾ-ಮಹಾರಾ ಘರಿ ಗಾಣಾ.” ಎಂದರೆ ಬ್ರಾಹ್ಮಣನ ಮನೆಯಲ್ಲಿ ವರ್ಣಮಾಲೆ, ಕುಣಬಿಯ ಮನೆಯಲ್ಲಿ ಧಾನ್ಯ ಮತ್ತು ಮಾಂಗ್-ಮಹರ್ ಜನರ ಮನೆಗಳಲ್ಲಿ ಸಂಗೀತವಿರುತ್ತದೆ. ಸಾಂಪ್ರದಾಯಿಕ ಹಳ್ಳಿ ವ್ಯವಸ್ಥೆಯಲ್ಲಿ, ಮಾಂಗ್ ಸಮುದಾಯದವರು ಹಲಗೆ ನುಡಿಸುತ್ತಿದ್ದರು, ಗೋಂಧಳಿಯವರು ಸಾಂಬಲ್, ಧಂಗಾರ್‌ ಧೋಲ್‌ ಮತ್ತು ಮಹಾರ್‌ ಸಮುದಾಯದವರು ಏಕತಾರಿ ನುಡಿಸುತ್ತಿದ್ದರು. ಆಗ ಜ್ಞಾನ, ಕೃಷಿ, ಕಲೆ ಮತ್ತು ಸಂಗೀತದ ಸಂಸ್ಕೃತಿಯನ್ನು ಜಾತಿಯಿಂದ ಪ್ರತ್ಯೇಕಿಸಲಾಗಿತ್ತು. ಇದಲ್ಲದೆ, 'ಅಸ್ಪೃಶ್ಯ' ಎಂದು ಪರಿಗಣಿಸಲಾದ ಅನೇಕ ಜಾತಿಗಳಿಗೆ, ಹಾಡುವುದು ಮತ್ತು ಸಂಗೀತವನ್ನು ಪ್ರದರ್ಶಿಸುವುದು ಜೀವನಾಧಾರದ ಪ್ರಮುಖ ಸಾಧನವಾಗಿತ್ತು. ಶತಮಾನಗಳಿಂದ ದಬ್ಬಾಳಿಕೆ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ದಲಿತರು ತಮ್ಮ ಇತಿಹಾಸ, ಶೌರ್ಯ, ನೋವು, ಸಂತೋಷ ಮತ್ತು ತತ್ವಗಳನ್ನು ಜಾತ್ಯವರ್ಚಿ ಓವಿ (ಬೀಸುಕಲ್ಲಿನ ಹಾಡುಗಳು ಅಥವಾ ಕವಿತೆಗಳು), ಮೌಖಿಕ ಕಥೆಗಳು, ಹಾಡುಗಳು ಮತ್ತು ಜಾನಪದ ಸಂಗೀತದ ರೂಪದಲ್ಲಿ ಉಳಿಸಿಕೊಂಡಿದ್ದಾರೆ. ಡಾ. ಅಂಬೇಡ್ಕರ್ ಅವರು ರಾಷ್ಟ್ರೀಯ ವೇದಿಕೆಯಲ್ಲಿ ಪ್ರಾಮುಖ್ಯತೆ ಪಡೆಯುವ ಮೊದಲು, ಮಹಾರ್ ಜನರು ಕಬೀರರ ದೋಹಾಗಳಿಗೆ ಏಕತಾರಿ ನುಡಿಸುತ್ತಿದ್ದರು ಮತ್ತು ವಿಠ್ಠಲನಿಗಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರು ದೇವರನ್ನು ಪೂಜಿಸುವ ಭಜನೆಗಳನ್ನು ಸಹ ಹಾಡುತ್ತಿದ್ದರು.

1920ರ ನಂತರ ಡಾ.ಅಂಬೇಡ್ಕರ್ ಅವರು ದಲಿತ ರಾಜಕಾರಣದ ದಿಗಂತದಲ್ಲಿ ಹೊಳೆವ ಸೂರ್ಯನಾಗಿ ಹೊರಹೊಮ್ಮಿದಾಗ ಅವರು ಪ್ರಾರಂಭಿಸಿದ ಜ್ಞಾನೋದಯ ಚಳವಳಿಯ ಪ್ರಚಾರ ಮತ್ತು ಪ್ರಸಾರದಲ್ಲಿ ಈ ಕಲಾ ಪ್ರಕಾರಗಳು ಮತ್ತು ಕಲಾವಿದರು ಪ್ರಮುಖ ಪಾತ್ರ ವಹಿಸಿದರು. ಡಾ.ಅಂಬೇಡ್ಕರ್ ಅವರ ಚಳವಳಿಯಿಂದ ಪ್ರೇರಿತವಾದ ಸಾಮಾಜಿಕ ಬದಲಾವಣೆಗಳು, ದೈನಂದಿನ ಘಟನೆಗಳು ಮತ್ತು ಡಾ.ಅಂಬೇಡ್ಕರ್ ಅವರ ಪಾತ್ರ, ಅವರ ಸಂದೇಶ, ಜೀವನ ಮತ್ತು ಹೋರಾಟಗಳು - ಎಲ್ಲವನ್ನೂ ಅನಕ್ಷರಸ್ಥರು ಮತ್ತು ಅರಿವಿಲ್ಲದವರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸಿದರು. ಒಮ್ಮೆ, ಮುಂಬೈಯ ನೈಗಾಂವ್ ಪ್ರದೇಶದ ವೆಲ್ಫೇರ್ ಗ್ರೌಂಡ್‌ನಲ್ಲಿ ಭೀಮರಾವ್ ಕಾರ್ಡಕ್ ಮತ್ತು ಅವರ ತಂಡವು ಜಲ್ಸಾ (ಹಾಡುಗಳ ಮೂಲಕ ಸಾಂಸ್ಕೃತಿಕ ಪ್ರತಿಭಟನೆ) ನಡೆಸುತ್ತಿರುವುದನ್ನು ಕಂಡ ಡಾ. ಅಂಬೇಡ್ಕರ್ ಅವರು ಹೇಳಿದರು: “ಕಾರ್ಡಕ್‌ ಮತ್ತು ಅವರ ತಂಡದ ಒಂದೇ ಒಂದು ಜಲ್ಸಾ ನನ್ನ ಹತ್ತು ಸಭೆಗಳಿಗಿಂತಲೂ ಪರಿಣಾಮಕಾರಿಯಾಗಿತ್ತು."

ಡಾ. ಅಂಬೇಡ್ಕರರ ಉಪಸ್ಥಿತಿಯಲ್ಲಿ ಪ್ರದರ್ಶನ ನೀಡಿದ ಶಾಹಿರ್ ಭೇಗ್ಡೆಯವರು ಹೀಗೆ ಹೇಳಿದ್ದರು:

ಆ ಮಹಾರ್‌ ಯುವಕ ಬುದ್ಧಿವಂತನಾಗಿದ್ದ
ನಿಜಕ್ಕೂ ಜಾಣ
ಇಂತಹ ಬುದ್ಧಿವಂತ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ
ಇವನು ನಮ್ಮನ್ನು ಕತ್ತಲೆಯಿಂದ ಬೆಳಕಿಗೆನೆಡೆಗೆ ಕರೆದೊಯ್ದ
ಮುಗ್ಧರನ್ನು ಬಡಿದೆಚ್ಚರಿಸಿದ

PHOTO • Keshav Waghmare
PHOTO • Keshav Waghmare

ಎಡ: ಬೀಡ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಎದ್ದು ಕಾಣುವಂತೆ ಇರಿಸಲಾಗಿರುವ ಬಾಬಾ ಸಾಹೇಬರ ವರ್ಣಚಿತ್ರ. ಆತ್ಮಾರಾಮ್ ಸಾಳ್ವೆಯವರಂತಹ ಅಂಬೇಡ್ಕರ್ ಕಾಲದ ನಂತರದ ಶಾಹಿರ್‌ಗಳು ಪುಸ್ತಕಗಳ ಮೂಲಕ ಡಾ. ಅಂಬೇಡ್ಕರರ ಚಳುವಳಿಯ ಲೋಕಕ್ಕೆ ಪರಿಚಿತರಾದರು. ಬಲ: ಆತ್ಮಾರಾಮ್ ಸಾಳ್ವೆಯವರ ಅಪರೂಪದ ಚಿತ್ರ

ಡಾ.ಅಂಬೇಡ್ಕರ್ ಅವರ ಪ್ರಬೋಧನ ಚಳವಳಿಯ ಅಲೆ ದಲಿತರನ್ನು ತಲುಪಿತ್ತು. ಜಲ್ಸಾ ಈ ಜಾಗೃತಿ ಚಳುವಳಿಯ ಸಾಧನವಾಗಿತ್ತು, ಶಾಹಿರಿ ಮತ್ತು ಸಾವಿರಾರು ಪರಿಚಿತ ಮತ್ತು ಅಪರಿಚಿತ ಕಲಾವಿದರು ಇದಕ್ಕೆ ಮಾಧ್ಯಮವಾಗಿತ್ತು.

ಅಂಬೇಡ್ಕರವಾದಿ ಆಂದೋಲನವು ಹಳ್ಳಿಗಳನ್ನು ತಲುಪುತ್ತಿದ್ದಂತೆ, ದಲಿತ ವಸ್ತಿಗಳಲ್ಲಿ (ನೆಲೆಗಳು) ಒಂದು ವಿಶಿಷ್ಟ ದೃಶ್ಯವು ಗೋಚರಿಸತೊಡಗಿತು - ಅಲ್ಲಿನ ಅರ್ಧದಷ್ಟು ಮನೆಗಳು ತಗಡಿನ ಛಾವಣಿಗಳು ಮತ್ತು ಅರ್ಧದಷ್ಟು ಹುಲ್ಲಿನ ಛಾವಣಿಗಳನ್ನು ಹೊಂದಿದ್ದವು - ವಸ್ತಿಯ ಮಧ್ಯದಲ್ಲಿ ಒಂದು ವೇದಿಕೆ ಇರುತ್ತಿತ್ತು, ಅಲ್ಲಿ ನೀಲಿ ಧ್ವಜವನ್ನು ಹಾರಿಸಲಾಗುತ್ತಿತ್ತು. ನೀಲಿ ಧ್ವಜದ ಕೆಳಗೆ, ಮಕ್ಕಳು, ಮಹಿಳೆಯರು, ಪುರುಷರು ಮತ್ತು ವೃದ್ಧರು ಸೇರುತ್ತಿದ್ದರು. ಸಭೆಗಳು ನಡೆಯುತ್ತಿದ್ದವು, ಮತ್ತು ಈ ಸಭೆಗಳಲ್ಲಿ, ಬುದ್ಧ-ಭೀಮ ಗೀತೆ (ಹಾಡುಗಳು) ಹಾಡಲಾಗುತ್ತಿತ್ತು. ಸಣ್ಣ ಮತ್ತು ದೊಡ್ಡ ಕವಿಗಳ ಹಾಡುಗಳ ಪುಸ್ತಕಗಳನ್ನು ಚೈತ್ಯಭೂಮಿ (ಮುಂಬೈ), ದೀಕ್ಷಾಭೂಮಿ (ನಾಗ್ಪುರ) ಮತ್ತು ಇತರ ದೊಡ್ಡ ನಗರಗಳಿಂದ ಇದಕ್ಕಾಗಿ ತರಲಾಗುತ್ತಿತ್ತು. ದಲಿತ ವಸ್ತಿಗಳಲ್ಲಿ ಹೆಂಗಸರು ಮತ್ತು ಗಂಡಸರು ಅನಕ್ಷರಸ್ಥರಾಗಿದ್ದರೂ, ಶಾಲೆಗೆ ಹೋಗುವ ಮಕ್ಕಳಿಗೆ ಹಾಡುಗಳನ್ನು ಓದುವಂತೆ ಹೇಳುತ್ತಿದ್ದರು ಮತ್ತು ನಂತರ ಅವುಗಳನ್ನು ಹಾಡುವಂತೆ ಕಂಠಪಾಠ ಮಾಡುತ್ತಿದ್ದರು. ಅಥವಾ ಅವರು ಶಾಹಿರ್ ಪ್ರದರ್ಶಿಸಿದ ಒಂದು ಹಾಡನ್ನು ಕಂಠಪಾಠ ಮಾಡುತ್ತಿದ್ದರು ಮತ್ತು ಅದನ್ನು ತಮ್ಮ ವಸ್ತಿಯಲ್ಲಿ ಪ್ರದರ್ಶಿಸುತ್ತಿದ್ದರು. ಕೆಲವು ಮಹಿಳಾ ಕೃಷಿ ಕಾರ್ಮಿಕರು ದೀರ್ಘ, ದಣಿವಿನ ದುಡಿಮೆಯ ದಿನದ ನಂತರ ಹಿಂತಿರುಗುತ್ತಿದ್ದರು, "ಭೀಮ್ ರಾಜಾ ಕೀ ಜಯ್! ಬುದ್ಧ ಭಗವಾನ್ ಕೀ ಜಯ್!" ಘೋಷ ಕೂಗಿ ನಂತರ ಹಾಡುತ್ತಿದ್ದರು. ಈ ಚಟುವಟಿಕೆಗಳು ವಸ್ತಿಯಲ್ಲಿ ಲವವಿಕೆ ತರುತ್ತಿದ್ದವು. ಈ ಹಾಡುಗಳು ಹಳ್ಳಿಗಳಲ್ಲಿ ದಲಿತರಿಗೆ ಏಕೈಕ ವಿಶ್ವವಿದ್ಯಾಲಯವಾಗಿದ್ದವು. ಅವರ ಮೂಲಕವೇ ಮುಂದಿನ ಪೀಳಿಗೆಯು ಬುದ್ಧ ಮತ್ತು ಅಂಬೇಡ್ಕರ್ ಅವರನ್ನು ಎದುರುಗೊಂಡಿತು. ಈ ಗಾಯಕರು ಮತ್ತು ಶಾಹಿರ್‌ಗಳ ಒರಟು ಮತ್ತು ಸಿದ್ಧ ಭಾಷೆಯಲ್ಲಿ, ಯುವ ಪೀಳಿಗೆಯು ಬುದ್ಧ, ಫುಲೆ ಮತ್ತು ಅಂಬೇಡ್ಕರ್ ಅವರ ಬಗ್ಗೆ ಶಕ್ತಿಯುತವಾದ ಹಾಡುಗಳನ್ನು ಅವರ ಮನಸ್ಸಿನಲ್ಲಿ ಅಳವಡಿಸಿಕೊಂಡಿತು - ಅಲ್ಲಿಂದ ಎಂದಿಗೂ ಮರೆಯಲು ಅಸಾಧ್ಯವಾಗಿತ್ತು. ಶಾಹಿರ್‌ಗಳು ಇಡೀ ತಲೆಮಾರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಿದರು. ಆತ್ಮಾರಾಮ್ ಸಾಳ್ವೆ ಮರಾಠವಾಡದ ಸಾಮಾಜಿಕ ಸಾಂಸ್ಕೃತಿಕ ಜಾಗೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅಂತಹ ಒಬ್ಬ ಶಾಹಿರ್ ಆಗಿದ್ದರು.

ಬೀಡ್ ಜಿಲ್ಲೆಯ ಮಜಲಗಾಂವ್ ತಾಲೂಕಿನ ಭಾಟವಡಗಾಂವ್‌ನಲ್ಲಿ 9 ಜೂನ್ 1953ರಂದು ಜನಿಸಿದ ಅವರು 1970ರ ದಶಕದಲ್ಲಿ ಶಿಕ್ಷಣಕ್ಕಾಗಿ ಔರಂಗಾಬಾದ್‌ಗೆ ಬಂದರು.

ಮರಾಠವಾಡದಲ್ಲಿ ನಿಜಾಮರ ಆಳ್ವಿಕೆಯಿಂದಾಗಿ ಶಿಕ್ಷಣ ಸೇರಿದಂತೆ ಹಲವು ವಿಷಯಗಳ ಅಭಿವೃದ್ಧಿ ಕುಂಠಿತವಾಗಿತ್ತು. ಈ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್ ಅವರು 1942ರಲ್ಲಿ "ಪೀಪಲ್ಸ್ ಎಜುಕೇಶನ್ ಸೊಸೈಟಿ" ಪರವಾಗಿ ಔರಂಗಾಬಾದ್‌ನ ನಾಗಸೇನವನ್ ಪ್ರದೇಶದಲ್ಲಿ ಮಿಲಿಂದ್ ಕಾಲೇಜನ್ನು ಪ್ರಾರಂಭಿಸಿದರು. ಇಂದು ನಾಗಸೇನವನ್ ಕ್ಯಾಂಪಸ್ ದಲಿತ ವಿದ್ಯಾರ್ಥಿಗಳ ಉನ್ನತ ಕಲಿಕೆಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಮಿಲಿಂದ್ ಕಾಲೇಜಿಗಿಂತ ಮೊದಲು ಇಡೀ ಮರಾಠವಾಡದಲ್ಲಿ ಔರಂಗಾಬಾದಿನಲ್ಲಿ ಒಂದೇ ಒಂದು ಸರ್ಕಾರಿ ಸರ್ಕಾರಿ ಕಾಲೇಜು ಇತ್ತು, ಅದೂ ಇಂಟರ್ ತನಕ ಮಾತ್ರ! ಮಿಲಿಂದ್ ಮರಾಠವಾಡದ ಮೊದಲ ಪದವಿ ಕಾಲೇಜು. ಈ ಕಾಲೇಜಿನ ಸ್ಥಾಪನೆಯು ಮರಾಠವಾಡದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಿತು. ಅದೇ ಸಮಯದಲ್ಲಿ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ಸಂಭವಿಸಿದವು. ಇದು ನಶಿಸುತ್ತಿರುವ ಸಮುದಾಯ ಮತ್ತು ಪ್ರದೇಶಕ್ಕೆ ಒಂದು ರೀತಿಯ ಜೀವ ತಂದಿತು. ಗುರುತಿನ ಅರಿವು. ಸ್ವಾಭಿಮಾನದ ಪ್ರಜ್ಞೆ ತಂದಿತು. ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಮಾತ್ರವಲ್ಲ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದಲೂ ಮಿಲಿಂದ್‌ಗೆ ಮಕ್ಕಳು ಬರಲಾರಂಭಿಸಿದರು. ಅದೇ ಸಮಯದಲ್ಲಿ, ಆತ್ಮರಾಮ್ ಸಾಳ್ವೆ ಸಹ ವಿದ್ಯಾರ್ಥಿಯಾಗಿ ಮಿಲಿಂದ್ ಪ್ರದೇಶವನ್ನು ಪ್ರವೇಶಿಸಿದರು. ಈ ಕ್ಯಾಂಪಸ್ಸಿನಲ್ಲಿ ಪ್ರಾರಂಭವಾದ ಮರಾಠಾವಾಡ ವಿಶ್ವವಿದ್ಯಾಲಯಕ್ಕೆ (ಔರಂಗಾಬಾದ್ ನಲ್ಲಿ) ಮರುನಾಮಕರಣ ಮಾಡುವ ಆಂದೋಲನವು ಎರಡು ದಶಕಗಳ ಕಾಲ ಅವರ ಪ್ರಕಾಶಮಾನವಾದ ಕಾವ್ಯದಿಂದ ಪ್ರಚೋದಿಸಲ್ಪಟ್ಟಿತು. ಒಂದು ರೀತಿಯಲ್ಲಿ, ಅವರು ನಾಮಾಂತರ್ ('ಮರುನಾಮಕರಣ') ಮತ್ತು ದಲಿತ ಪ್ಯಾಂಥರ್ ಚಳುವಳಿಗಳ ಸಾಂಸ್ಕೃತಿಕ ಕ್ರಿಯಾಶೀಲತೆಗೆ ಕಾರಣವಾಗಿತ್ತು.

PHOTO • Labani Jangi

ಆತ್ಮಾರಾಮ್ ಸಾಳ್ವೆ ಅವರು ದಲಿತರ ಮೇಲೆ ಹೇರಲಾದ ಜಾತಿ ಯುದ್ಧವನ್ನು ಎದುರಿಸಲು ತಮ್ಮ ಶಾಹಿರಿ, ಧ್ವನಿ ಮತ್ತು ಪದಗಳನ್ನು ಬಳಸಿದರು

1970ರ ದಶಕವು ಪ್ರಕ್ಷುಬ್ಧ ದಶಕವಾಗಿತ್ತು. ಅದು ಸ್ವತಂತ್ರ ಭಾರತದ ಮೊದಲ ತಲೆಮಾರಿನ ಯುವಕ-ಯುವತಿಯರ ಯುಗವಾಗಿತ್ತು. ಹೆಚ್ಚಿನ ಸಂಖ್ಯೆಯ ಯುವಕರು ಕೈಯಲ್ಲಿ ಪದವಿಗಳೊಂದಿಗೆ ಕಾಲೇಜಿನಂದ ಹೊರಬಂದಿದ್ದರು, ಆದರೆ ಅವರು ಸ್ವಾತಂತ್ರ್ಯದ (1947) ನಂತರದ ಪರಿಸ್ಥಿತಿಯಿಂದ ಭ್ರಮನಿರಸನಗೊಂಡಿದ್ದರು. ಅನೇಕ ಘಟನೆಗಳು ಅವರ ಮೇಲೆ ಭಾರಿ ಪರಿಣಾಮ ಬೀರಿದ್ದವು: ತುರ್ತು ಪರಿಸ್ಥಿತಿ; ಪಶ್ಚಿಮ ಬಂಗಾಳದ ನಕ್ಸಲ್ ಬರಿ; ತೆಲಂಗಾಣ ರಾಜ್ಯ ಆಂದೋಲನ; ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನವನಿರ್ಮಾಣ ಚಳವಳಿ; ಗುಜರಾತ್ ಮತ್ತು ಬಿಹಾರದಲ್ಲಿ ಒಬಿಸಿ ಮೀಸಲಾತಿಗಾಗಿ ಆಂದೋಲನ; ಇತ್ತೀಚಿನ ಸಂಯುಕ್ತ ಮಹಾರಾಷ್ಟ್ರ ಚಳವಳಿ; ಮುಂಬೈನಲ್ಲಿ ಗಿರಣಿ ಕಾರ್ಮಿಕರ ಹೋರಾಟ; ಶಹದಾ ಚಳವಳಿ; ಹಸಿರು ಕ್ರಾಂತಿ; ಮರಾಠಾವಾಡಾ ಮುಕ್ತಿ ಆಂದೋಲನ; ಮತ್ತು ಮರಾಠವಾಡದಲ್ಲಿನ ಬರ. ಯುವಕರು ಮತ್ತು ದೇಶವು ಪ್ರಕ್ಷುಬ್ಧವಾಗಿತ್ತು, ಮತ್ತು ಪರಿಣಾಮವಾಗಿ ಅಭಿವೃದ್ಧಿ ಮತ್ತು ಅಸ್ಮಿತೆಗಾಗಿ ಹೋರಾಟವು ತೀವ್ರಗೊಂಡಿತು.

ಡಾ. ಮಚ್ಚೀಂದ್ರ ಮೊಹೋಲ್ ನೇತೃತ್ವದ ಮರಾಠವಾಡ ರಿಪಬ್ಲಿಕನ್ ಸ್ಟೂಡೆಂಟ್ಸ್ ಫೆಡರೇಶನ್ ಬ್ಯಾನರ್ ಅಡಿಯಲ್ಲಿ, ನಾಗಸೇನವನ್ ಕ್ಯಾಂಪಸ್ಸಿಗೆ ಆಗಮಿಸಿದ ನಂತರ ಜಾಗೃತರಾದ ವಿದ್ಯಾರ್ಥಿಗಳು 1974ರ ಜೂನ್ 26ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದು ಮರಾಠವಾಡದ ಎರಡು ವಿಶ್ವವಿದ್ಯಾಲಯಗಳಲ್ಲಿ ಒಂದಕ್ಕೆ ಡಾ. ಅಂಬೇಡ್ಕರ್ ಅವರ ಹೆಸರನ್ನು ಇರಿಸುವಂತೆ ಒತ್ತಾಯಿಸಿದರು. ಆದರೆ ಭಾರತೀಯ ದಲಿತ ಪ್ಯಾಂಥರ್ಸ್ ಒಳಗೂಡಿದಾಗ ಮರುನಾಮಕರಣದ (ನಾಮಾಂತರ್) ಈ ಬೇಡಿಕೆಯು ಸಂಘಟಿತ ರೂಪವನ್ನು ಪಡೆಯಿತು. ನಾಮ್ ದೇವ್ ಢಸಾಳ್ ಮತ್ತು ರಾಜಾ ಧಾಲೆ ನಡುವಿನ ಸಂಘರ್ಷದಿಂದಾಗಿ, ಧಾಲೆ ದಲಿತ ಪ್ಯಾಂಥರ್ಸನ್ನು ವಿಸರ್ಜಿಸುವುದಾಗಿ ಘೋಷಿಸಿದ್ದರು. ಆದರೆ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ನ ಕೆಲಸವನ್ನು ಮುಂದುವರಿಸಲು ಪ್ರೊ. ಅರುಣ್ ಕಾಂಬಳೆ, ರಾಮದಾಸ್ ಅಠಾವಳೆ, ಗಂಗಾಧರ ಗಾಡೆ ಮತ್ತು ಎಸ್.ಎಮ್. ಪ್ರಧಾನ್ ಅವರ ನೇತೃತ್ವದಲ್ಲಿ 'ಭಾರತೀಯ ದಲಿತ ಪ್ಯಾಂಥರ್ಸ್' ಎಂಬ ಗುಂಪನ್ನು ರಚಿಸಲಾಯಿತು.

ಆತ್ಮಾರಾಮ್ ಸಾಳ್ವೆ ಹೊಸದಾಗಿ ರೂಪುಗೊಂಡ ಭಾರತೀಯ ದಲಿತ ಪ್ಯಾಂಥರ್ಸ್ ಬಗ್ಗೆ ಹೀಗೆ ಬರೆದಿದ್ದಾರೆ:

ನಾನೊಬ್ಬ ಪ್ಯಾಂಥರ್‌ ಸೈನಿಕ
ಕಾಂಬ್ಳೆ ಅರುಣ್‌ ನಮ್ಮ ಸರಾದರ
ನಾವು ಜೈಭೀಮ್‌ ಕುಟುಂಬಿಕರು
ನ್ಯಾಯಕ್ಕಾಗಿ ಹೋರಾಡುವೆವು ನಾವು
ಸೈನಿಕರು ಅಂಜುಬರುಕರಲ್ಲ
ನಮಗೆ ಯಾರ ಭಯವೂ ಇಲ್ಲ
ನಾವು ಅನ್ಯಾಯವನ್ನು ತೊಡೆದು ಹಾಕುವೆವು
ಮತ್ತೆ ಮುನ್ನುಗ್ಗುವೆವು
ದಲಿತರೇ, ರೈತರೇ, ಕಾರ್ಮಿಕರೇ, ಎದ್ದೇಳಿ
ನಾವು ಒಂದಾಗಿ ಮುಷ್ಟಿಯೆತ್ತೋಣ

ಈ ಹಾಡಿನ ಮೂಲಕ, ಸಾಳ್ವೆ ಹೊಸ ಪ್ಯಾಂಥರ್ಸ್ ಗಂಪನ್ನು ಸ್ವಾಗತಿಸಿದರು, ಮತ್ತು 'ಮರಾಠಾವಾಡಾ ಉಪಾಧ್ಯಕ್ಷ'‌ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡರು. ಜುಲೈ 7, 1977ರಂದು, ಹೊಸದಾಗಿ ರೂಪುಗೊಂಡ ಭಾರತೀಯ ದಲಿತ ಪ್ಯಾಂಥರ್ಸ್ ನ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಗಾಡೆ ಅವರು ಮರಾಠವಾಡ ವಿಶ್ವವಿದ್ಯಾಲಯಕ್ಕೆ ಡಾ. ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ಮೊದಲ ಸಾರ್ವಜನಿಕ ಬೇಡಿಕೆಯನ್ನು ಎತ್ತಿದರು.

PHOTO • Keshav Waghmare
PHOTO • Keshav Waghmare

ಎಡ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ನ ತೇಜೇರಾವ್ ಭದ್ರೆ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಹಾರ್ಮೋನಿಯಂ ಮತ್ತು ಧೋಲ್ಕಿ ನುಡಿಸುತ್ತಾ ಶಾಹಿರ್ ಆತ್ಮಾರಾಮ್ ಸಾಳ್ವೆ ಅವರ ತಂಡದ ಸದಸ್ಯರಾಗಿದ್ದರು. ಬಲ: ಅಂಬೇಡ್ಕರ್ ಚಳವಳಿಗೆ ಭದ್ರೆಯವರ ಸಾಂಸ್ಕೃತಿಕ ಕೊಡುಗೆಗೆ ನೀಡಲಾದ ಪ್ರಶಂಸಾ ಪತ್ರ

ಹೋರಾಟ ಮುಂದುವರೆದು ಜುಲೈ 18, 1977ರಂದು, ಎಲ್ಲಾ ಕಾಲೇಜುಗಳನ್ನು ಮುಚ್ಚಲಾಯಿತು, ಮತ್ತು ಸರ್ವಪಕ್ಷ ವಿದ್ಯಾರ್ಥಿ ಕ್ರಿಯಾ ಸಮಿತಿಯು ಮರಾಠಾವಾಡ ವಿಶ್ವವಿದ್ಯಾಲಯದ ನಾಮಾಂತರ್ಕ್ಕೆ ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ನಡೆಸಿತು. ನಂತರ, ಜುಲೈ 21, 1977ರಂದು ಔರಂಗಾಬಾದಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರಸ್ವತಿ ಭುವನ್ ಕಾಲೇಜು, ದೇವಗಿರಿ ಕಾಲೇಜು ಮತ್ತು ವಿವೇಕಾನಂದ ಕಾಲೇಜಿನ ಸವರ್ಣೀಯ (ಸವರ್ಣೀಯ ಹಿಂದೂ) ವಿದ್ಯಾರ್ಥಿಗಳು ಮರುನಾಮಕರಣದ ಬೇಡಿಕೆಯನ್ನು ವಿರೋಧಿಸಿ ಮೊದಲ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗಳು, ಮುಷ್ಕರಗಳು ಮತ್ತು ರ‍್ಯಾಲಿಗಳು - ನಾಮಾಂತರ್ ಪರ ಮತ್ತು ವಿರುದ್ಧವಾಗಿ ಹೆಚ್ಚಿತು. ಮುಂದಿನ ಎರಡು ದಶಕಗಳ ಕಾಲ ಮರಾಠವಾಡವು ದಲಿತರು ಮತ್ತು ದಲಿತೇತರರ ನಡುವಿನ ಭಿನ್ನಾಭಿಪ್ರಾಯದ ಯುದ್ಧಭೂಮಿಯಾಯಿತು. ಈ ಯುದ್ಧಭೂಮಿಯಲ್ಲಿ ಆತ್ಮಾರಾಮ್ ಸಾಳ್ವೆಯವರು ತಮ್ಮ ಶಾಹಿರಿಯ ಆಯುಧಗಳನ್ನು, ತಮ್ಮ ಧ್ವನಿಯನ್ನು ಮತ್ತು ಪದಗಳನ್ನು "ದಲಿತರ ಮೇಲೆ ಹೇರಲಾದ ಜಾತಿ ಯುದ್ಧದ ವಿರುದ್ಧ" ಬಳಸಿದರು.

ಅಂಬೇಡ್ಕರ್ ಅವರ ಚಳುವಳಿಯನ್ನು ಕಣ್ಣಾರೆ ಕಂಡಿದ್ದ ಮತ್ತು ಅನುಭವಿಸಿದ ಶಾಹಿರಗಳಾದ ಶಾಹಿರ್ ಅಣ್ಣಾಭಾವು ಸಾಠೆ, ಭೀಮರಾವ್ ಕರ್ದಕ್, ಶಾಹಿರ್ ಘೆಗ್ಡೆ, ಭಾವು ಫಕ್ಕಾಡ್, ರಾಜನಂದ್ ಗಡ್ಪಯಾಲೆ ಮತ್ತು ವಾಮನ್ ಕರ್ದಕ್ ಅವರಂತವರು ಸಾಮಾಜಿಕ ಸಾಂಸ್ಕೃತಿಕ ಪರಿಸರದಲ್ಲಿ ಉಪಸ್ಥಿತರಿರದ ಸಮಯದಲ್ಲಿ ಆತ್ಮಾರಾಮ್ ಸಾಳ್ವೆ ಭರವಸೆಯಾಗಿ ಹೊರಹೊಮ್ಮಿದರು.

ಅಂಬೇಡ್ಕರ್ ನಂತರದ ಅವಧಿಯಲ್ಲಿ ಬಂದ ಶಾಹಿರ್ ವಿಲಾಸ್ ಘೋಗ್ರೆ, ದಲಿತಾನಂದ್, ಮೋಹನಾಜಿ ಹಟ್ಕರ್, ವಿಜಯಾನಂದ್ ಜಾಧವ್. ಅಂಬೇಡ್ಕರ್ ಮತ್ತು ಅವರ ಚಳವಳಿಯು ಮತಾಂತರದ ಅವಧಿಯನ್ನು ಕಂಡಿಲ್ಲ. ಆ ಅರ್ಥದಲ್ಲಿ ಅವರು ಖಾಲಿ ಹಾಳೆಯಂತಿದ್ದರು. ಇವರು ಹಳ್ಳಿಗಳಿಂದ ಬರುವ ಶಾಹಿರುಗಳು. ಅವರು ಬಾಬಾಸಾಹೇಬರನ್ನು ಮತ್ತು ಅವರ ಚಳವಳಿಯನ್ನು ಪುಸ್ತಕಗಳ ಮೂಲಕ ತಿಳಿದುಕೊಂಡಿದ್ದರು. ಆದ್ದರಿಂದ, ಏಕಾಏಕಿ ಈ ಶಾಹಿರಿಯಲ್ಲಿ ಆಕ್ರಮಣಶೀಲತೆ ಹೆಚ್ಚು ಗೋಚರಿಸುತ್ತದೆ, ಇದು ಆತ್ಮರಾಮ್ ಸಾಳ್ವೆಯವರ ಶಾಹಿರಿಯಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತದೆ.

ನಾಮಾಂತರದ ವಿಷಯವು ಕೇವಲ ಹೆಸರು ಬದಲಾವಣೆಯ ಕುರಿತಾದ ಹೋರಾಟ ಮಾತ್ರವಾಗಿರಲಿಲ್ಲ. ಇದು ಅಸ್ಮಿತೆಯ ಹೊಸ ಅರಿವು ಮತ್ತು ಮಾನವನೆಂಬ ಪ್ರಜ್ಞೆಯ ಕುರಿತಾದ ಹೋರಾಟವೂ ಆಗಿತ್ತು.

ಮುಖ್ಯಮಂತ್ರಿಯಾಗಿದ್ದ ವಸಂತ ದಾದಾ ಪಾಟೀಲರು ನಾಮಾಂತರ ಚಳವಳಿಗೆ ನೀಡಿದ್ದ ಬೆಂಬಲದಿಂದ ಹಿಂದೆ ಸರಿದಾಗ, ಆತ್ಮಾರಾಮ್ ಸಾಳ್ವೆ ಹೀಗೆ ಬರೆದರು:

ವಸಂತದಾದಾ, ನಮ್ಮನ್ನು ಎದುರುಹಾಕಿಕೊಳ್ಳಬೇಡ
ಅದು ಕಿತ್ತುಕೊಳ್ಳುವುದು ನಿನ್ನ ಕುರ್ಚಿಯನ್ನು
ಈ ದಲಿತರು ಅಧಿಕಾರವನ್ನು ಕಸಿಯಲಿದ್ದಾರೆ
ಧೂಳು ತಿನ್ನುತ್ತ ಕುಳಿತುಕೊಳ್ಳುವೆ ನೀನೊಂದು ಮೂಲೆಯಲ್ಲಿ
ನಿನಗೆ ಅಧಿಕಾರದ ಮದವೇರಿದೆ
ನೋಡಿಲ್ಲಿ, ಬಿಟ್ಟುಕೊಡು ನಿನ್ನ ಸರ್ವಾಧಿಕಾರ
ನಿನ್ನ ನಿರಂತರ ದಬ್ಬಾಳಿಕೆ ಇನ್ನು ನಡೆಯುವುದಿಲ್ಲ

ಕೇಸರಬಾಯಿ ಘೋಟ್ಮುಖೆ ಹಾಡಿರುವ ವೀಡಿಯೊ ನೋಡಿ
'ಹೇ ವಸಂತ ದಾದಾ, ನಮ್ಮೊಂದಿಗೆ ನಿನ್ನ ಹೋರಾಟ ಬೇಡ'

ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿರುವ ಆರೋಪದ ಮೇಲೆ ಪೊಲೀಸರು ಆಗಾಗ್ಗೆ ಅವರ ಕಾರ್ಯಕ್ರಮಗಳನ್ನು ನಿಲ್ಲಿಸುತ್ತಿದ್ದರು, ಆದರೆ ಆತ್ಮಾರಾಮ್ ಪ್ರದರ್ಶನವನ್ನು ಎಂದಿಗೂ ನಿಲ್ಲಿಸಲಿಲ್ಲ‌

ಆತ್ಮಾರಾಮ್ ಸಾಳ್ವೆ ಅವರು ಈ ಹಾಡನ್ನು ಬರೆದದ್ದು ಮಾತ್ರವಲ್ಲದೆ ವಸಂತ ದಾದಾ ಪಾಟೀಲ್ ನಾಂದೇಡ್‌ಗೆ ಭೇಟಿ ನೀಡಿದಾಗ ಸಾವಿರಾರು ಜನರ ಮುಂದೆ ಅದನ್ನು ಪ್ರದರ್ಶಿಸಿದರು. ಆಗ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರ ಜೀವನದುದ್ದಕ್ಕೂ ರಾಜಕೀಯ 'ಅಪರಾಧಗಳ' ಸರಮಾಲೆಯೇ ಮುಂದುವರಿಯಿತು. 1978ರಿಂದ 1991ರವರೆಗೆ, ಎಂದರೆ ಸಾಳ್ವೆಯವರ ಮರಣದವರೆಗೆ, ಮಹಾರಾಷ್ಟ್ರದಾದ್ಯಂತದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು, ಅವರ ಮೇಲೆ ಹೊಡೆದಾಟ, ಸರ್ಕಾರಿ ಕೆಲಸಗಳಿಗೆ ಅಡ್ಡಿಪಡಿಸುವುದು, ಗಲಭೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ಅಪರಾಧಗಳನ್ನು ಎಸಗಿದ್ದಾರೆಂದು ಆರೋಪಿಸಲಾಗಿದೆ. ಮತ್ತು ಅವರ ಮೇಲೆ ಹಲವಾರು ಕೊಲೆಗಡುಕ ದಾಳಿಗಳು ನಡೆದವು. ಸಾಳ್ವೆಯವರ ಸ್ನೇಹಿತ ಮತ್ತು ಡೆಗ್ಲೂರಿನ ಸಹಚರ ಚಂದ್ರಕಾಂತ್ ಥಾನೇಕರ್ ನೆನಪಿಸಿಕೊಳ್ಳುವಂತೆ: "1980ರಲ್ಲಿ, ಡೆಗ್ಲೂರ್ ಬ್ಲಾಕ್ [ನಾಂದೇಡ್ ಜಿಲ್ಲೆ]ನ ಮಾರ್ಕೆಲ್ ಗ್ರಾಮದಲ್ಲಿ ಸಾಳ್ವೆಯವರ ಮೇಲೆ ಹಲ್ಲೆ ನಡೆಯಿತು. ಬೆನ್ನಾಳ್ ಗ್ರಾಮದಲ್ಲಿ ದಲಿತ ಕಾರ್ಮಿಕ ಕಾಳೆ  ಕೊಲೆ ಪ್ರಕರಣದಲ್ಲಿ ಸುಳ್ಳು ಮರಣ ಪ್ರಮಾಣ ಪತ್ರ ನೀಡಿದ ಆರೋಪ ಹೊತ್ತಿದ್ದ ವೈದ್ಯನನ್ನು ಪ್ರಶ್ನಿಸಿದ ನಂತರ ಸಾಳ್ವೆ ವಿರುದ್ಧ ಕೊಲೆಯತ್ನ ಆರೋಪ ಹೊರಿಸಲಾಗಿತ್ತು. ಅದಕ್ಕಾಗಿ, ಸಾಳ್ವೆ, ರಾಮ ಖರ್ಗೆ ಮತ್ತು ನನಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಲಾಯಿತು. ನಂತರ ಉನ್ನತ ನ್ಯಾಯಾಲಯವು ನಮ್ಮನ್ನು ಖುಲಾಸೆಗೊಳಿಸಿತು."

ಅದೇ ಮಾರ್ಕೆಲ್ ಎನ್ನುವ ಊರಿನಲ್ಲಿ, ನಾಗರಬಾಯಿ ಸೋಪನ್ ವಜರ್ಕರ್ ಎಂಬ 70 ವರ್ಷದ ಮಹಿಳೆ ಆತ್ಮಾರಾಮ್ ಸಾಳ್ವೆ ಅವರ ಕೈಬರಹದ ಹಾಡುಗಳ ನೋಟ್ ಬುಕ್ ಒಂದನ್ನು ನನಗೆ ನೀಡಿದರು. ಅವರು ಅದನ್ನು ಮಣ್ಣಿನ ಮಡಕೆಯಿಂದ ಹೊರತೆಗೆದರು, ಅಲ್ಲಿ ಅದನ್ನು 40 ವರ್ಷಗಳ ಕಾಲ ಸುರಕ್ಷಿತವಾಗಿಡಲಾಗಿತ್ತು. ಮರ್ಖೇಲ್‌ನಲ್ಲಿ ಆತ್ಮಾರಾಮ್ ಅವರ ಮೇಲೆ ದಾಳಿ ನಡೆದಾಗ ಅವರ ಜೀವವನ್ನು ಕಾಪಾಡಿದವರು ನಾಗರಬಾಯಿ. ಮತ್ತೊಂದು ಘಟನೆಯಲ್ಲಿ, ಮಜಲಗಾಂವ್‌ ವ್ಯಾಪಾರಿಗಳು ಪ್ಯಾಂಥರ್ಸ್ ಕರೆ ನೀಡಿದ್ದ ಬಂದ್‌ಗೆ ಆತ್ಮಾರಾಮ್ ಸಾಳ್ವೆ ಅವರನ್ನು ಬರದಂತೆ ತಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಅದರ ನಂತರ ಅವರನ್ನು ಬೀಡ್ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಯಿತು. ಆತ್ಮಾರಾಮ್ ಪ್ರದರ್ಶನ ನೀಡಿದಾಗ ಹಾರ್ಮೋನಿಯಂ ನುಡಿಸುತ್ತಿದ್ದ ಮುಖೇಡ್ ನ ತೇಜೇರಾವ್ ಭದ್ರೆ ಹೇಳುತ್ತಾರೆ: "ಆತ್ಮಾರಾಮ್ ತಮ್ಮ ಭಾಷಣದಲ್ಲಿ ಭಾವೋದ್ರಿಕ್ತರಾಗಿದ್ದರು ಮತ್ತು ಅವರ ಹಾಡುಗಳು ಪ್ರಚೋದನಕಾರಿಯಾಗಿದ್ದವು. ದಲಿತರು ಅವರ ಮಾತನ್ನು ಕೇಳಲು ಇಷ್ಟಪಡುತ್ತಿದ್ದರು, ಆದರೆ ಸವರ್ಣೀಯರು ಆಕ್ಷೇಪಿಸುತ್ತಿದ್ದರು. ಅವರು ಆಗಾಗ್ಗೆ ಕಲ್ಲುಗಳನ್ನು ಎಸೆಯುತ್ತಿದ್ದರು. ಆತ್ಮರಾಮ ಹಾಡಿದಾಗ, ಮುಂಭಾಗದಲ್ಲಿ ಕುಳಿತಿದ್ದ ಜನರು ನಾಣ್ಯಗಳನ್ನು ವೇದಿಕೆಯ ಕಡೆಗೆ ಎಸೆಯುತ್ತಿದ್ದರು, ಅವರಿಂದ ಕೋಪಗೊಂಡವರು ಕಲ್ಲುಗಳನ್ನು ಎಸೆಯುತ್ತಿದ್ದರು. ಒಬ್ಬ ಶಾಹಿರ್ ಆಗಿ, ಅವರು ಏಕಕಾಲದಲ್ಲಿ ಪ್ರೀತಿಸಲ್ಪಟ್ಟರು ಮತ್ತು ದ್ವೇಷಿಸಲ್ಪಟ್ಟರು - ಮತ್ತು ಇದು ಸಾಮಾನ್ಯವಾಗಿತ್ತು. ಆದರೆ ಕಲ್ಲು ತೂರಾಟವು ಆತ್ಮಾರಾಮ್ ಹಾಡುವುದನ್ನು ನಿಲ್ಲಿಸುವಂತೆ ಮಾಡುವಷ್ಟು ಶಕ್ತಿಯನ್ನು ಹೊಂದಿರಲಿಲ್ಲ. ಅವರು ತನ್ನ ಎಲ್ಲಾ ಆಕ್ರೋಶವನ್ನು ತನ್ನ ಹಾಡುಗಳಲ್ಲಿ ಹೊರಹಾಕಿದರು ಮತ್ತು ಜನರು ತಮ್ಮ ಹೆಮ್ಮೆ ಮತ್ತು ಘನತೆಗಾಗಿ ಹೋರಾಡುವಂತೆ ಮನವಿ ಮಾಡಿದರು. ಜನರು ಅನ್ಯಾಯದ ವಿರುದ್ಧ ಹೋರಾಡಬೇಕೆಂದು ಸಾ‍ಳ್ವೆ ಬಯಸಿದ್ದರು."

ಸಾಮಾಜಿಕ ಸಾಮರಸ್ಯವನ್ನು ಕದಡಿದ ಆರೋಪದ ಮೇಲೆ ಪೊಲೀಸರು ಆಗಾಗ್ಗೆ ಅವರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುತ್ತಿದ್ದರು, ಆದರೆ ಆತ್ಮಾರಾಮ್ ಎಂದಿಗೂ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಪ್ರದರ್ಶನಗಳ ಸಮಯದಲ್ಲಿ ಆತ್ಮಾರಾಮ್ ಅವರೊಂದಿಗೆ ಭಾಗವಹಿಸುತ್ತಿದ್ದ ಫುಲೆ ಪಿಂಪಲಗಾಂವ್‌ನ ಶಾಹಿರ್ ಭೀಮಸೇನ್ ಸಾಳ್ವೆ ನೆನಪಿಸಿಕೊಳ್ಳುತ್ತಾರೆ: "ಆತ್ಮಾರಾಮ್ ಸಾಳ್ವೆ ಅವರನ್ನು ಬೀಡ್ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು, ಆದರೆ ಒಂದು ರಾತ್ರಿ, ಅವರು ತಮ್ಮ ಶಾಹಿರಿಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಮಾಡಬೇಕಾಗಿತ್ತು. ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬಂದು ಆತ್ಮಾರಾಮ್ ಅವರಿಗೆ ಕಾರ್ಯಕ್ರಮ ನಿಲ್ಲಿಸಲು ಹೇಳಿದರು. ನಂತರ ಆತ್ಮಾರಾಮ್ ಹಳ್ಳಿಯ ಮೂಲಕ ಹರಿಯುವ ನದಿಯನ್ನು ದಾಟಿ ಇನ್ನೊಂದು ಬದಿಗೆ ಹೋದರು. ಆ ಭಾಗವು ಜಿಲ್ಲೆಯ ಗಡಿಯ ಹೊರಗಿತ್ತು, ಮತ್ತು ಆತ್ಮಾರಾಮ್ ಅಲ್ಲಿಂದ ಹಾಡಲು ಪ್ರಾರಂಭಿಸಿದರು. ಜನರು ನದಿಯ ಪಕ್ಕದಲ್ಲಿ ಕುಳಿತು, ಕತ್ತಲೆಯಲ್ಲಿ, ಹಾಡುವುದನ್ನು ಕೇಳುತ್ತಿದ್ದರು. ಗಾಯಕ ಜಿಲ್ಲೆಯ ಹೊರಗೆ ಇದ್ದರು, ಮತ್ತು ಪ್ರೇಕ್ಷಕರು ಜಿಲ್ಲೆಯ ಗಡಿಯೊಳಗೆ ಇದ್ದರು. ಪೊಲೀಸರು ಅಸಹಾಯಕರಾಗಿದ್ದರು! ಇದು ನೋಡಲು ತಮಾಷೆಯಾಗಿತ್ತು." ಆತ್ಮಾರಾಮ್ ಅಂತಹ ಅನೇಕ ಸಂದರ್ಭಗಳನ್ನು ನಿಭಾಯಿಸಿದ್ದರು, ಆದರೆ ಅವರು ಎಂದೂ ಹಾಡುವುದನ್ನು ನಿಲ್ಲಿಸಲಿಲ್ಲ. ಹಾಡುವುದು ಅವರ ಬದುಕಿನ ಶಕ್ತಿಯಾಗಿತ್ತು.

ಮರಾಠಾವಾಡಾ ವಿಶ್ವವಿದ್ಯಾಲಯ ಮರುನಾಮಕರಣ ಆಂದೋಲನವು ಎರಡು ದಶಕಗಳ ಕಾಲ ಆತ್ಮಾರಾಮ್ ಸಾಳ್ವೆ ಅವರ ಬೆಂಕಿಂಯಂತಹ ಕವಿತೆಯಿಂದ ಪ್ರಚೋದಿಸಲ್ಪಟ್ಟಿತು

ಶಾಹೀರ್ ಅಶೋಕ್ ನಾರಾಯಣ್ ಚೌರೆ ಹಾಡಿರುವ ವೀಡಿಯೋ ನೋಡಿ
'ನನ್ನ ಸಂಗಾತಿಗಳೇ, ನಾಮಾಂತರಕ್ಕಾಗಿ ಹೋರಾಡಿ'

ಮಾನವಿ ಹಕ್ಕ ಅಭಿಯಾನದ (ಬೀಡ್) ಸ್ಥಾಪಕ ಅಧ್ಯಕ್ಷ ನ್ಯಾಯವಾದಿ ಏಕನಾಥ್ ಅವದ್ ಅವರು ತಮ್ಮ ಆತ್ಮಚರಿತ್ರೆ 'ಜಗ್ ಬದಲ್ ಘಲುನಿ ಘಾವ್' (ಜೆರ್ರಿ ಪಿಂಟೋ ಅವರು ಅನುವಾದಿಸಿದ ಸ್ಟ್ರೈಕ್ ಎ ಬ್ಲೋ ಟು ಚೇಂಜ್ ದಿ ವರ್ಲ್ಡ್) ನಲ್ಲಿ ಆತ್ಮಾರಾಮ್ ಸಾಳ್ವೆ ಅವರನ್ನು ಒಳಗೊಂಡ ಒಂದು ಘಟನೆಯ ಬಗ್ಗೆ ಬರೆದಿದ್ದಾರೆ: "ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಮಾಡಿದ, ತನ್ನ ಶಾಹಿರಿ ಮೂಲಕ ಜನರನ್ನು ಕೆರಳಿಸಿದ ಆರೋಪದ ಮೇಲೆ ಆತ್ಮಾರಾಮ್ ಅವರನ್ನು ಬೀಡ್‌ನಿಂದ ಗಡಿಪಾರು ಮಾಡಲಾಗಿತ್ತು. ಆದ್ದರಿಂದ, ಅವರು ನಾಂದೇಡ್‌ನಲ್ಲಿದ್ದರು. ನಾವು ಪ್ಯಾಂಥರ್ಸಿನ ಜಿಲ್ಲಾ ಶಾಖೆಯನ್ನು ಪ್ರಾರಂಭಿಸಿ ಅವರ ಜಲ್ಸಾವನ್ನು ಆಯೋಜಿಸಿದೆವು. ಅಂಬಾಜೋಗೈಯಲ್ಲಿರುವ ಪರಾಲಿ ವೆಸ್ ಎನ್ನುವಲ್ಲಿ ಹೆಚ್ಚಿನ ದಲಿತ ಜನಸಂಖ್ಯೆ ಇತ್ತು. ಹೀಗಾಗಿ ಜಲ್ಸಾವನ್ನು ಅಲ್ಲಿ ಯೋಜಿಸಲಾಯಿತು. ಆತ್ಮಾರಾಮ್ ಅವರನ್ನು ಬೀಡ್ ಪ್ರವೇಶಿಸದಂತೆ ನಿಷೇಧಿಸಲಾಯಿತು. ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಪಿಎಸ್ಐ ಕದಂ ಆತ್ಮಾರಾಮ್ ಅವರನ್ನು ಬಂಧಿಸಲು ಸಜ್ಜಾಗಿದ್ದರು. ನಾವು ಹೋಗಿ ಅವರನ್ನು ಭೇಟಿಯಾದೆವು. 'ಪ್ರದರ್ಶನದ ನಂತರ ಅವರನ್ನು ಬಂಧಿಸಿ' ಎಂದು ನಾವು ಹೇಳಿದೆವು. ಅವರು ಒಪ್ಪಿದರು. ಆತ್ಮಾರಾಮ್ ಅದ್ಭುತವಾಗಿ ಹಾಡಿದರು. ಅವರ ಹಾಡುಗಳು ನಾಮಾಂತರ್ ಬೇಡಿಕೆಯನ್ನು ಪುನರುಚ್ಚರಿಸಿದವು. ಪಿಎಸ್ಐ ಕದಂ ಹಾಡುಗಳನ್ನು ಆನಂದಿಸಿದರು. ಅವರು 'ಬಹಳ ತೀವ್ರಗಾಮಿ ಶಾಹಿರ್' ಎಂದು ಶ್ಲಾಘಿಸಿದರು. ಆದರೆ ಅವರನ್ನು ಹೊಗಳುವಾಗಲೂ, ಬಂಧಿಸುವ ವಿಷಯವನ್ನು ಕೈಬಿಟ್ಟಿರಲಿಲ್ಲ. ಆತ್ಮರಾಮ್ ಅದನ್ನು ಗ್ರಹಿಸಿದರು ಮತ್ತು ವೇದಿಕೆಯ ಮೇಲೆ ತನ್ನ ಸ್ಥಾನದಲ್ಲಿ ಬೇರೊಬ್ಬರನ್ನು ಕೂರಿಸಿ ಅವರು ಓಡಿಹೋದರು. ಆತ್ಮಾರಾಮ್ ಅವರನ್ನು ಬಂಧಿಸಲು ಪಿಎಸ್ಐ ಕದಮ್ ವೇದಿಕೆಯನ್ನು ಪ್ರವೇಶಿಸಿದರು. ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ."

ಜುಲೈ 27, 1978ರಂದು, ಮರಾಠವಾಡ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಿದ ತಕ್ಷಣ, ಇಡೀ ಮರಾಠಾವಾಡ ಪ್ರದೇಶವು ದಲಿತರ ಹತ್ಯಾಕಾಂಡದ ಸ್ಥಳವಾಗಿ ಮಾರ್ಪಟ್ಟಿತು. ಒಂದೇ ದಿನದಲ್ಲಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು ಮತ್ತು ದಲಿತರಿಗೆ ಸೇರಿದ ಸಾವಿರಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಕೆಲವು ಸ್ಥಳಗಳಲ್ಲಿ ಗುಡಿಸಲುಗಳಿಗೂ ಬೆಂಕಿ ಹಚ್ಚಲಾಯಿತು, ಮಹಿಳೆಯರು ಮತ್ತು ಒಳಗಿದ್ದ ಪುಟ್ಟ ಮಕ್ಕಳು ಸಜೀವ ದಹನಗೊಂಡರು. ನಾಂದೇಡ್ ಜಿಲ್ಲೆಯ ಸುಗಾಂವ್ ಗ್ರಾಮದ ಜನಾರ್ದನ್ ಮೇವಾಡೆ ಮತ್ತು ತೆಂಭುರ್ನಿ ಗ್ರಾಮದ ಉಪ ಸರಪಂಚ್ ಪೋಚಿರಾಮ್ ಕಾಂಬ್ಳೆ ಹತ್ಯೆಗೀಡಾಗಿದ್ದರು. ಪರ್ಭಾನಿ ಜಿಲ್ಲೆಯ ಧಮನ್ಗಾಂವ್ ಗ್ರಾಮದ ದಲಿತ ಪೊಲೀಸ್ ಅಧಿಕಾರಿಗಳಾದ ಸಂಭಾಜಿ ಸೋಮಜಿ ಮತ್ತು ಗೋವಿಂದ್ ಭುರೆವಾರ್ ಅವರನ್ನೂ ಕೊಲೆ ಮಾಡಲಾಗಿತ್ತು. ಸಾವಿರಾರು ದಲಿತರು ಗಾಯಗೊಂಡರು. ಲಕ್ಷಾಂತರ ಮೌಲ್ಯದ ಆಸ್ತಿಯನ್ನು ಲೂಟಿ ಮಾಡಲಾಯಿತು. ಬೆಳೆದು ನಿಂತಿರುವ ಬೆಳೆಗಳು ಮತ್ತು ಕೃಷಿಭೂಮಿಗಳು ನಾಶವಾದವು. ಅನೇಕ ಹಳ್ಳಿಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕಲಾಯಿತು ಮತ್ತು ಆಹಾರ ಮತ್ತು ನೀರನ್ನು ನಿರಾಕರಿಸಲಾಯಿತು. ಸಾವಿರಾರು ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋದರು. ಸಾರ್ವಜನಿಕ ಮತ್ತು ಖಾಸಗಿ ಹಾನಿಗಳು ಒಟ್ಟು 1.5 ಕೋಟಿ ರೂ.ಗಳಷ್ಟಿತ್ತು. ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅನೇಕ ಸ್ಥಳಗಳಲ್ಲಿ ಧ್ವಂಸಗೊಳಿಸಲಾಯಿತು. ಮರಾಠವಾಡವು ಜಾತಿ ಯುದ್ಧದ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು.

ಆತ್ಮಾರಾಮ್ ಮರಾಠವಾಡದಲ್ಲಿ ನಡೆದ ಜಾತಿ ಹಿಂಸಾಚಾರದ ತೀವ್ರತೆಯನ್ನು ವಿವರಿಸುವ ಒಂದು ಹಾಡನ್ನು ಬರೆದು ಅದರ ಕ್ರೌರ್ಯವನ್ನು ಬಿಚ್ಚಿಡುತ್ತಾರೆ:

ಹಳ್ಳಿಗಳಿಗೆ, ಕೇರಿಗಳಿಗೆ ಬೆಂಕಿ ಹಚ್ಚಿದರು
ನಾಲಗೀರದಲ್ಲಿ ಮಗುವನ್ನೇ ಸುಟ್ಟರು
ಜೀವ ಕೈಯಲ್ಲಿ ಹಿಡಿದು ಓಡಿದರು
ದಲಿತ ಜನರು ಎದ್ದು ಬಿದ್ದು ಕಾಡಿನೆಡೆಗೆ
ಜಾತಿವಾದಿಗಳು ಅವರನ್ನು ಹಿಂಸಿಸಿದರು, ಕಿರುಕುಳ ನೀಡಿದರು
ದಲಿತರ ಕೈಯಲ್ಲಿ ಕೆಲಸವಿರಲಿಲ್ಲ, ಅಡುಗೆ ಒಲೆ ಉರಿಯುತ್ತಿರಲಿಲ್ಲ
ಏಳಿ ಜನರೇ ಎದ್ದೇಳಿ, ಏಳಿ
ಉರಿವ ಮನೆಗಳ ಬೆಂಕಿ ನಂದಿಸಿ
ರಕ್ತದ ಹೊಳೆಯೇ ಹರಿದರೂ ಸರಿಯೇ
ಅದರಲ್ಲೇ ಮೀಯುತ್ತೇನೆ ನಾನು
ಬನ್ನಿ ನನ್ನೊಡನೆ ಈ ಜೀವನ್ಮರಣದ ಹೋರಾಟಕ್ಕೆ ಜೊತೆಯಾಗಿ, ಜೊತೆಯಾಗುವಿರಲ್ಲವೆ
ಕ್ರಾಂತಿಯ ಫಸಲನ್ನು ಕೊಯ್ಯೋಣ ಬನ್ನಿ, ಬರುವಿರಲ್ಲವೆ

ಈ ದಲಿತ ವಿರೋಧಿ ವಾತಾವರಣ ಒಂದೇ ದಿನದಲ್ಲಿ ಸೃಷ್ಟಿಯಾಗಲಿಲ್ಲ. ಇದು ನಿಜಾಮ್ ಆಡಳಿತದಲ್ಲಿ ತನ್ನ ಪೂರ್ವಾಪರವನ್ನು ಹೊಂದಿತ್ತು. ಸ್ವಾಮಿ ರಮಾನಂದ ತೀರ್ಥರು ನಿಜಾಮರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಆರ್ಯ ಸಮಾಜಕ್ಕೆ ಸೇರಿದವರು. ಆರ್ಯ ಸಮಾಜವು ಬ್ರಾಹ್ಮಣವಾದಿ ದಬ್ಬಾಳಿಕೆಯನ್ನು ಪ್ರತಿರೋಧಿಸಲು ರೂಪುಗೊಂಡಿದ್ದರೂ, ಅದರ ಇಡೀ ನಾಯಕತ್ವವು ಇನ್ನೂ ಬ್ರಾಹ್ಮಣವಾದಿಯಾಗಿತ್ತು. ರಜಾಕಾರರ ವಿರುದ್ಧದ ಹೋರಾಟದ ಸಮಯದಲ್ಲಿ, ಈ ನಾಯಕತ್ವವು ದಲಿತರ ವಿರುದ್ಧ ಹಲವಾರು ಪೂರ್ವಾಗ್ರಹಗಳನ್ನು ಬಿತ್ತಿತ್ತು. 'ದಲಿತರು ನಿಜಾಮರನ್ನು ಬೆಂಬಲಿಸುತ್ತಾರೆ', 'ದಲಿತ ನೆರೆಹೊರೆಯವರು ರಜಾಕಾರರಿಗೆ ಆಶ್ರಯ ನೀಡುತ್ತಾರೆ' ಎಂಬಂತಹ ತಪ್ಪು ಮಾಹಿತಿಗಳು ಅಂಬೇಡ್ಕರ್ ವಿರೋಧಿ ಸವರ್ಣೀಯರನ್ನು ಕೆರಳಿಸಿದವು ಮತ್ತು ಅದು ಅವರ ಮನಸ್ಸಿನಲ್ಲಿ ಬೇರೂರಿತು. ಆದ್ದರಿಂದ, ರಜಾಕಾರರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದಾಗ ದಲಿತರು ಅನೇಕ ದೌರ್ಜನ್ಯಗಳನ್ನು ಎದುರಿಸಬೇಕಾಯಿತು. ಮರಾಠವಾಡ ಪರಿಶಿಷ್ಟ ಜಾತಿಗಳ ಒಕ್ಕೂಟದ ಆಗಿನ ಅಧ್ಯಕ್ಷರಾಗಿದ್ದ ಭಾವುಸಾಹೇಬ್ ಮೋರೆ ಅವರು ದಲಿತರ ಮೇಲಿನ ಈ ದೌರ್ಜನ್ಯಗಳ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿ, ಅದನ್ನು ಡಾ. ಅಂಬೇಡ್ಕರ್ ಮತ್ತು ಭಾರತ ಸರ್ಕಾರಕ್ಕೆ ಕಳುಹಿಸಿದರು.

PHOTO • Keshav Waghmare
PHOTO • Keshav Waghmare

ನಾಂದೇಡ್ ನ ಕೇಸರಬಾಯಿ ಘೋಟ್ಮುಖೆ ಅವರು ಭಾರತೀಯ ದಲಿತ ಪ್ಯಾಂಥರ್ಸ್ ನ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ನಿವೃತ್ತರಾದರು. 'ಆತ್ಮಾರಾಮ್ ಸಾಳ್ವೆ ನಮ್ಮ ಎಲ್ಲಾ ಪ್ರತಿಭಟನೆಗಳಲ್ಲಿ ನಮ್ಮೊಂದಿಗೆ ಇದ್ದರು. ಅವರು ಬೇಗನೆ ಹಾಡುಗಳನ್ನು ಬರೆಯುತ್ತಿದ್ದರು, ಮತ್ತು ನಾವು ಅವರೊಂದಿಗೆ ಕೋರಸ್ಸಿನಲ್ಲಿ ಹಾಡುತ್ತಿದ್ದೆವು.' ಬಲ: ಶಾಹಿರ್ ಅಶೋಕ್ ನಯರನ್ ಚೌರೆ ಹೇಳುವಂತೆ, ನಾಮಾಂತರ್ ಆಂದೋಲನವು ಅನೇಕ ವಿದ್ಯಾವಂತ ದಲಿತ ಯುವಕರ ಮೇಲೆ ಪರಿಣಾಮ ಬೀರಿತು. ನಮ್ಮ ಇಡೀ ತಲೆಮಾರು ಕಷ್ಟಗಳನ್ನು ಅನುಭವಿಸಿತು

ಡಾ. ಅಂಬೇಡ್ಕರರ ನಂತರ ದಾದಾಸಾಹೇಬ್ ಗಾಯಕ್ವಾಡ್ ಅವರ ನೇತೃತ್ವದಲ್ಲಿ ಭೂಹಕ್ಕುಗಳ ಹೋರಾಟವು 'ಕಾಸೆಲ್ ತ್ಯಾಚಿ ಜಮೀನ್, ನಾಸೆಲ್ ತ್ಯಾಚೆ ?' ಎಂಬ ಘೋಷವಾಕ್ಯದೊಂದಿಗೆ ನಡೆಯಿತು. ('ಉಳುವವನಿಗೆ ಭೂಮಿ, ಹಾಗಿದ್ದರೆ ಭೂರಹಿತರ ಗತಿ ಏನು?') ಎಂಬ ಘೋಷವಾಕ್ಯದೊಂದಿಗೆ ನಡೆಯಿತು. ಮರಾಠವಾಡದ ದಲಿತರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ಲಕ್ಷಾಂತರ ಮಹಿಳೆಯರು ಮತ್ತು ಪುರುಷರು ಅದಕ್ಕಾಗಿ ಜೈಲಿಗೆ ಹೋದರು. ದಲಿತರು ಜೀವನೋಪಾಯಕ್ಕಾಗಿ ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ದಲಿತರು ಸಾಮಾನ್ಯ ಹುಲ್ಲುಗಾವಲುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಕಂಡು ಸವರ್ಣೀಯರು ಹೆಚ್ಚು ಸಂತೋಷಪಡಲಿಲ್ಲ. ಆ ಸಿಟ್ಟು ಅವರ ಮನಸ್ಸಿನಲ್ಲಿ ಉಳಿಯಿತು. ವಸಂತ ದಾದಾ ಪಾಟೀಲ್ ಮತ್ತು ಶರದ್ ಪವಾರ್ ನಡುವಿನ ಹೋರಾಟವೂ ಇದರಲ್ಲಿ ಪ್ರಮುಖ ಪಾತ್ರ ವಹಿಸಿತು. ಹಳ್ಳಿ ಹಳ್ಳಿಗಳಲ್ಲಿ, ಸವರ್ಣೀಯರ ಕೋಪವನ್ನು ದ್ವೇಷ ಮತ್ತು ಹಿಂಸೆಯ ರೂಪದಲ್ಲಿ ವ್ಯಕ್ತಪಡಿಸಲಾಗುತ್ತಿತ್ತು. ನಾಮಾಂತರ್ ಚಳವಳಿಯ ಸಮಯದಲ್ಲಿ ವದಂತಿಗಳು ಹರಡಿದವು, "ವಿಶ್ವವಿದ್ಯಾಲಯಕ್ಕೆ ನೀಲಿ ಬಣ್ಣ ಬಳಿಯಲಾಗುವುದು"; "ಪದವಿ ಪ್ರಮಾಣಪತ್ರವು ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೊಂದಿರುತ್ತದೆ"; "ಡಾ. ಅಂಬೇಡ್ಕರರು ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುತ್ತಾರೆ, ಆದ್ದರಿಂದ ಈ ವಿದ್ಯಾವಂತ ಯುವ ದಲಿತರು ನಮ್ಮ ಹೆಣ್ಣುಮಕ್ಕಳನ್ನು ಕರೆದೊಯ್ಯುತ್ತಾರೆ," ಇತ್ಯಾದಿ.

"ಮರಾಠಾವಾಡಾ ವಿಶ್ವವಿದ್ಯಾಲಯದ ನಾಮಾಂತರ್ ವಿಷಯವನ್ನು ನವ ಬೌದ್ಧ ಆಂದೋಲನದ ಧ್ಯೇಯದಲ್ಲಿ ಸೇರಿಸಲಾಗಿದೆ. ಇದು ಸ್ಪಷ್ಟವಾಗಿ ಸ್ವತಂತ್ರ ದಲಿತ ಅಸ್ತಿತ್ವವನ್ನು ಬಯಸುವ ಪ್ರತ್ಯೇಕತಾವಾದಿ ಆಂದೋಲನವಾಗಿದೆ, ಇದಕ್ಕಾಗಿ ಅವರು ಬೌದ್ಧ ರಾಷ್ಟ್ರಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಅವರು ಭಾರತೀಯ ಪೌರತ್ವವನ್ನು ತ್ಯಜಿಸುವ ನಿಲುವನ್ನು ಸಹ ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಆದಷ್ಟು ಬೇಗ ಸ್ಪಷ್ಟ ಮತ್ತು ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕಾಗಿತ್ತು." ನಾಮಾಂತರ್ ವಿರೋಧಿ ಕೃತ್ತಿ ಸಮಿತಿಯು ಲಾತೂರಿನಲ್ಲಿ ನಡೆದ ತಮ್ಮ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಿತು ಮತ್ತು ದಲಿತರನ್ನು ಅವರ ತಾಯ್ನಾಡಿನಿಂದ ಬೇರ್ಪಡಿಸಲು ಪ್ರಯತ್ನಿಸಿತು. ನಾಮಾಂತರ್ ಚಳುವಳಿಯನ್ನು ಹಿಂದೂಗಳು ಮತ್ತು ಬೌದ್ಧರ ನಡುವಿನ ಹೋರಾಟವೆಂದು ಚಿತ್ರಿಸಲಾಯಿತು ಮತ್ತು ಅಂತಹ ಪೂರ್ವಾಗ್ರಹಗಳು ಸಾಮಾನ್ಯವಾದವು. ಆದ್ದರಿಂದ, ನಾಮಾಂತರ್ ಆಂದೋಲನವು ಪ್ರಾರಂಭವಾಗುವವರೆಗೆ ಮರಾಠವಾಡವು ಉರಿಯುತ್ತಲೇ ಇತ್ತು, ಮತ್ತು ನಂತರವೂ ಅದು ನಿರಂತರ ಪ್ರಕ್ಷುಬ್ಧತೆಯಲ್ಲಿತ್ತು. ನಾಮಾಂತರ್ ಚಳುವಳಿಯಲ್ಲಿ ಇಪ್ಪತ್ತೇಳು ದಲಿತರು ಹುತಾತ್ಮರಾದರು.

ಈ ಚಳುವಳಿಯು ಅಸ್ತಿತ್ವ ಮತ್ತು ಅಸ್ಮಿತೆಯ ವಿಷಯಗಳ ಕುರಿತಾದುದಷ್ಟೇ ಆಗಿರಲಿಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಲ್ಲಿಯೂ ವಿಲೀನಗೊಂಡಿತು. ಜನನ, ಮದುವೆ ಮತ್ತು ಮರಣ ಆಚರಣೆಗಳ ಸಮಯದಲ್ಲಿ ಇದರ ಪರಿಣಾಮಗಳು ಕಂಡುಬಂದವು. ಮದುವೆಗಳಲ್ಲಿ ಮತ್ತು ಅಂತಿಮ ವಿಧಿವಿಧಾನಗಳಲ್ಲಿ ಜನರು 'ಡಾ.ಅಂಬೇಡ್ಕರ್ಚಾ ವಿಜಯ್ ಆಸೋ' ('ಡಾ.ಅಂಬೇಡ್ಕರ್ ಅವರಿಗೆ ಜಯವಾಗಲಿ') ಮತ್ತು 'ಮರಾಠವಾಡ ವಿದ್ಯಾಪೀಠಚೆ ನಾಮಾಂತರ್ ಝಾಲೇಚ್ ಪಾಹಿಜೆ' ('ಮರಾಠವಾಡ ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಬೇಕು' ) ಎಂಬ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಶಾಹಿರ್ ಆತ್ಮಾರಾಮ್ ಸಾಳ್ವೆ ಅವರು ನಾಮಾಂತರ್ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಲ್ಲಿ ಮತ್ತು ಸಾಮಾಜಿಕ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

PHOTO • Keshav Waghmare

ಬೀಡ್‌ನ ವಿದ್ಯಾರ್ಥಿ ಸುಮಿತ್ ಸಾಳ್ವೆ ಆತ್ಮಾರಾಮ್ ಸಾಳ್ವೆಯವರ ಅನೇಕ ಹಾಡುಗಳನ್ನು ಹಾಡುತ್ತಾರೆ. 'ಶಾಹಿರ್ ಅವರ ಹಾಡುಗಳು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ'

ಆತ್ಮಾರಾಮ್ ಸಾಳ್ವೆಯವರ ಜೀವನ ಅಂಬೇಡ್ಕರ್ ಮತ್ತು ನಾಮಾಂತರ್‌ ಚಳವಳಿಗೆ ಮೀಸಲಾಗಿತ್ತು. "ವಿಶ್ವವಿದ್ಯಾನಿಲಯದ ಹೆಸರನ್ನು ಅಧಿಕೃತವಾಗಿ ಬದಲಾಯಿಸಿದಾಗ, ನಾನು ನನ್ನ ಮನೆ ಮತ್ತು ಜಮೀನನ್ನು ಮಾರಾಟ ಮಾಡುತ್ತೇನೆ ಮತ್ತು ಆ ಹಣವನ್ನು ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಕಮಾನಿನ ಮೇಲೆ ಚಿನ್ನದ ಅಕ್ಷರಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಬರೆಯಲು ಬಳಸುತ್ತೇನೆ" ಎಂದು ಅವರು ಹೇಳುತ್ತಿದ್ದರು. ತನ್ನ ಧ್ವನಿ, ಮಾತು ಮತ್ತು ಶಾಹಿರಿಯ ಮೂಲಕ ಅವರು ದಬ್ಬಾಳಿಕೆಯ ವಿರುದ್ಧ ಜ್ಞಾನೋದಯದ ಜ್ಯೋತಿಯನ್ನು ಹೊತ್ತು ಸಾಗಿದರು. ನಾಮಾಂತರ್‌ನ ಗುರಿಯನ್ನು ತಲುಪಲು ಶ್ರಮಿಸಿದ ಅವರು, ಮಹಾರಾಷ್ಟ್ರದ ಹಳ್ಳಿಗಳಲ್ಲಿ ಎರಡು ದಶಕಗಳ ಕಾಲ ಯಾವುದೇ ವಾಹನಗಳಿಲ್ಲದೆ ನಡೆದು ಸುತ್ತಾಡಿದರು. ಔರಂಗಬಾದಿನ ಡಾ. ಅಶೋಕ್ ಗಾಯಕ್ವಾಡ್ ಸಾಳ್ವೆಯವರನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ, "ನಾಂದೇಡ್ ಜಿಲ್ಲೆಯಲ್ಲಿರುವ ನನ್ನ ಗ್ರಾಮವಾದ ಬಾಂಡ್ ಗವಾನ್‌ಗೆ ಈಗಲೂ  ಪ್ರವೇಶ ರಸ್ತೆ ಆಗಿಲ್ಲ, ಮತ್ತು ಯಾವುದೇ ವಾಹನವು ಅಲ್ಲಿಗೆ ತಲುಪುವುದಿಲ್ಲ. ಆತ್ಮಾರಾಮ್ 1979ರಲ್ಲಿ ನಮ್ಮ ಗ್ರಾಮಕ್ಕೆ ಬಂದು ಶಾಹಿರಿ ಜಲ್ಸಾ ಮಾಡಿದರು. ಅವರು ತಮ್ಮ ಶಾಹಿರಿಯಿಂದ ನಮ್ಮ ಜೀವನಕ್ಕೆ ಬೆಳಕನ್ನು ತಂದರು, ಮತ್ತು ಅವರ ಹಾಡುಗಳು ದಲಿತರನ್ನು ಅವರ ಹೋರಾಟಗಳಲ್ಲಿ ಸಶಕ್ತಗೊಳಿಸಿದವು. ಅವರು ಜಾತಿವಾದಿ ಜನರನ್ನು ಬಹಿರಂಗವಾಗಿ ಹೆಸರಿಸಿದರು.  ಅವರು ತನ್ನ ಶಕ್ತಿಯುತ ಧ್ವನಿಯಲ್ಲಿ ಹಾಡಲು ಪ್ರಾರಂಭಿಸಿದ ಕ್ಷಣ, ಜನರು ಜೇನುಗೂಡಿಗೆ ಜೇನುನೊಣಗಳಂತೆ ಬರುವಂತೆ ಅವರ ಬಳಿಗೆ ಬಂದು ಗುಂಪುಗೂಡುತ್ತಿದ್ದರು. ಅವರ ಹಾಡುಗಳು ಕಿವಿಗಳಿಗೆ ಜೀವ ತುಂಬುತ್ತಿದ್ದವು, ಮತ್ತು ಅವರ ಮಾತುಗಳು ಸತ್ತ ಮನಸ್ಸನ್ನು ದ್ವೇಷದ ವಿರುದ್ಧ ಹೋರಾಡಲು ಬಡಿದೆಬ್ಬಿಸುತ್ತಿದ್ದವು."

ನಾಂದೇಡ್ ಜಿಲ್ಲೆಯ ಕಿನ್ವತ್‌ನ ದಾದಾರಾವ್ ಕಾಯಪಾಕ್ ಅವರ ಬಳಿ ಸಾಳ್ವೆಯವರ ನೆನಪುಗಳಿವೆ. “1978ರಲ್ಲಿ ಗೋಕುಲ್ ಗೊಂಡೆಗಾಂವ್‌ನಲ್ಲಿ ದಲಿತರ ವಿರುದ್ಧ ಬಹಿಷ್ಕಾರ ಹಾಕಲಾಗಿತ್ತು. ಇದನ್ನು ಪ್ರತಿಭಟಿಸಲು ಎಸ್.ಎಮ್.ಪ್ರಧಾನ್, ಸುರೇಶ್ ಗಾಯಕ್ವಾಡ್, ಮನೋಹರ್ ಭಗತ್, ವಕೀಲ ಮಿಲಿಂದ್ ಸರ್ಪೆ ಮತ್ತು ನಾನು ಒಂದು ಮೋರ್ಚಾವನ್ನು ಕೈಗೊಂಡೆವು. ಪೊಲೀಸರು ಸೆಕ್ಷನ್ 144 (ಸಿಆರ್‌ಪಿಸಿ) ಜಾರಿಗೆ ತಂದಿದ್ದರು, ಯಾವುದೇ ಗುಂಪುಗೂಡುವಿಕೆಯನ್ನು ನಿಷೇಧಿಸಿದ್ದರು. ಆತ್ಮಾರಾಮ್ ಸಾಳ್ವೆ ಅವರಿಂದ ಜಲ್ಸಾವನ್ನು ಆಯೋಜಿಸಲಾಗಿತ್ತು, ಮತ್ತು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಶಾಹಿರ್ ಸಾಳ್ವೆ ಮತ್ತು ಪ್ಯಾಂಥರ್ ಕಾರ್ಯಕರ್ತರನ್ನು ಬಂಧಿಸಬೇಕೆಂದು ಸವರ್ಣೀಯ ಜನರು ಒತ್ತಾಯಿಸಿದರು. ಪೊಲೀಸ್ ಅಧೀಕ್ಷಕರಾದ ಶೃಂಗಾರವೇಲ್ ಮತ್ತು ಉಪ ಅಧೀಕ್ಷಕ ಎಸ್.ಪಿ.ಖಾನ್ ಅವರಿಗೆ ಘೇರಾವ್ ಹಾಕಿದರು ಮತ್ತು ಪೊಲೀಸ್ ಅತಿಥಿಗೃಹದ ಕಾಂಪೌಂಡ್ ಗೋಡೆಗೆ ಬೆಂಕಿ ಹಚ್ಚಲಾಯಿತು. ವಾತಾವರಣದ ಉದ್ವಿಗ್ನಗೊಂಡಿತ್ತು, ಮತ್ತು ಪೊಲೀಸರು ಗುಂಡು ಹಾರಿಸಿದರು. ಇದು ಕಾಂಗ್ರೆಸ್ ಸಂಸದ ಉತ್ತಮರಾವ್ ರಾಥೋಡ್ ಅವರ ನಿಕಟವರ್ತಿ ಕಾರ್ಯಕರ್ತ ಜೆ. ನಾಗರಾವ್ ಮತ್ತು ದಲಿತ ಸಂರಕ್ಷಕ ವ್ಯಕ್ತಿಯೊಬ್ಬರ ಜೀವಗಳನ್ನು ಬಲಿತೆಗೆದುಕೊಂಡಿತು.”

ಶಾಹಿರ್ ಆತ್ಮಾರಾಮ್ ಸಾಳ್ವೆಯವರ ಹಾಡುಗಳು ಮಾನವೀಯತೆ, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ನ್ಯಾಯದ ವಿಚಾರಗಳಿಂದ ತುಂಬಿವೆ. ಲಡಾಯಿ (ಹೋರಾಟ), ತಿಂಗಿ (ಕಿಡಿ), ಕ್ರಾಂತಿ, ಆಗ್ (ಬೆಂಕಿ), ರಣ್ (ಯುದ್ಧಭೂಮಿ), ಶಸ್ತ್ರ (ಆಯುಧ), ತೋಫ್ (ಕ್ಯಾನನ್), ಯುದ್ಧ, ನವ ಇತಿಹಾಸ್ (ಹೊಸ ಇತಿಹಾಸ) ಮುಂತಾದ ಪದಗಳು ಅವರ ಹಾಡುಗಳನ್ನು ಅಲಂಕರಿಸುತ್ತವೆ. ಈ ಮಾತುಗಳು ಅವರ ನಿಜ ಜೀವನದ ಅನುಭವಗಳನ್ನು ಸೂಚಿಸುತ್ತವೆ. ಅವರ ಪ್ರತಿಯೊಂದು ಹಾಡು ಕೂಡಾ ಯುದ್ಧದ ಕೂಗು.

ಫಿರಂಗಿ ತಂದು ಉಡಾಯಿಸಿದ
ಮನುವಿನ ಸಂತತಿಯ ಮಣ್ಣು ಮಾಡಲು
ನಾವು ಹೊಸ ಇತಿಹಾಸ ಸೃಷ್ಟಿಸೋಣ
ಕ್ರಾಂತಿಯ ಚಿಗುರುಗಳ ನೆಟ್ಟು
ಕೋವಿಯಿಂದ ಹೊರಟ ಗುಂಡು
ಹೋಲಿಯನ್ನು ಸುರಿಸಲಿದೆ
ಮನುವಿನ ಕೋಟೆಯನ್ನು ಉರುಳಿಸಲಿದೆ

ತೇಜೇರಾವ್ ಭದ್ರೆಯವರ ನಿರೂಪಣೆಯನ್ನು ನೋಡಿ
' ನನ್ನ ದಲಿತ ಸಹೋದರರೇ, ನಿಮ್ಮೊಳಗಿನ ಕಿಡಿಯನ್ನು ಕಿಚ್ಚಾಗಿಸಿ'

ಆತ್ಮಾರಾಮ್ ಸಾಳ್ವೆ ಮನರಂಜನೆ, ಹಣ, ಖ್ಯಾತಿ ಅಥವಾ ಹೆಸರಿಗಾಗಿ ಪ್ರದರ್ಶನ ನೀಡಲಿಲ್ಲ. ಕಲೆಯು ತಟಸ್ಥವಾದುದಲ್ಲ, ಅದು ಬದಲಾವಣೆಯ ಹೋರಾಟದಲ್ಲಿ ಒಂದು ಪ್ರಮುಖ ಸಾಧನವೆಂದು ನಂಬಿದ್ದರು

ಒಬ್ಬ ಕಲಾವಿದ ಮತ್ತು ಶಾಹಿರ್ ಆಗಿ, ಆತ್ಮಾರಾಮ್ ತಟಸ್ಥರಾಗಿರಲಿಲ್ಲ. ಅವರು ಪ್ರಾಂತೀಯ ಅಥವಾ ಸಂಕುಚಿತ ಮನೋಭಾವದವರಾಗಿರಲಿಲ್ಲ. 1977ರಲ್ಲಿ ಬಿಹಾರದ ಬೆಲ್ಚಿಯಲ್ಲಿ ದಲಿತರ ಮಾರಣಹೋಮ ನಡೆಯಿತು. ಅವರು ಬೆಲ್ಚಿಗೆ ಹೋಗಿ ಅಲ್ಲಿ ಒಂದು ಚಳುವಳಿಯನ್ನು ಪ್ರಾರಂಭಿಸಿದರು. ಅದಕ್ಕಾಗಿ ಅವರು 10 ದಿನಗಳ ಕಾಲ ಜೈಲಿನಲ್ಲಿದ್ದರು. ಹತ್ಯಾಕಾಂಡದ ಬಗ್ಗೆ ಅವರು ಹೀಗೆ ಬರೆದಿದ್ದರು:

ಈ ಹಿಂದೂ ದೇಶ, ಬೆಲ್ಚಿಯಲ್ಲಿ
ನನ್ನ ಅಣ್ಣಂದಿರನ್ನು ಸುಟ್ಟುಹಾಕಲಾಗಿದೆ
ನಾನು ಕಣ್ಣಾರೆ ಕಂಡೆ ಇದನ್ನು
ಅಮ್ಮಂದಿರು, ಅಕ್ಕಂದಿರು, ಮಕ್ಕಳೂ
ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಿದರು
ಕಣ್ಣಾರೆ ಕಂಡೆ ನಾನು ಇದನ್ನು

ಅದೇ ಹಾಡಿನಲ್ಲಿ, ಅವರು ದಲಿತ ನಾಯಕರ ಸೈದ್ಧಾಂತಿಕವಾಗಿ ಟೊಳ್ಳಾದ ಮತ್ತು ಸ್ವಾರ್ಥ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು:

ಕೆಲವರು ಕಾಂಗ್ರೆಸ್ಸಿನ ಕೈಗೊಂಬೆಯಾದರು
ಇನ್ನೂ ಕೆಲವರು ಅಡವಿಟ್ಟರು ತಮ್ಮ ತನು ಮನವನ್ನು ಜನತಾ (ದಳ)ಕ್ಕೆ
ನಿರ್ಣಾಯಕ ಕ್ಷಣದಲ್ಲಿ, ಕಪಟಿ ಗವಾಯಿಂತೆ
ಅವರು ವೈರಿಗಳೊಡನೆ ಕೈ ಜೋಡಿಸುವುದನ್ನು
ನಾನು ನನ್ನ ಕಣ್ಣಾರೆ ಕಂಡೆ

1981ರಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಶಿಕ್ಷಣದಲ್ಲಿ ಸೀಟುಗಳ ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳಂತೆ ನಟಿಸುವ ಮೀಸಲಾತಿ ವಿರೋಧಿಗಳ ಗುಂಪು ಗುಜರಾತಿನಲ್ಲಿ ಹಿಂಸಾಚಾರಕ್ಕೆ ಇಳಿಯಿತು. ಸುಡುವುದು, ಲೂಟಿ ಮಾಡುವುದು, ಚಾಕು ಇರಿತ, ಅಶ್ರುವಾಯು ಮತ್ತು ಗುಂಡು ಹಾರಿಸುವುದು ನಡೆದವು. ಹೆಚ್ಚಿನ ದಾಳಿಗಳು ದಲಿತರನ್ನು ಗುರಿಯಾಗಿಸಿಕೊಂಡಿದ್ದವು. ಅಹಮದಾಬಾದಿನಲ್ಲಿ ದಲಿತರ ಕಾಲೋನಿಗಳಿಗೆ ಬೆಂಕಿ ಹಚ್ಚಲಾಯಿತು. ಸೌರಾಷ್ಟ್ರ ಮತ್ತು ಉತ್ತರ ಗುಜರಾತಿನ ಗ್ರಾಮೀಣ ಭಾಗಗಳಲ್ಲಿ ಮೇಲ್ಜಾತಿಯ ಹಳ್ಳಿಗರು ದಲಿತ ನೆಲೆಗಳ ಮೇಲೆ ದಾಳಿ ಮಾಡಿದರು. ಅಸಂಖ್ಯಾತ ದಲಿತರು ತಮ್ಮ ಗ್ರಾಮಗಳನ್ನು ತೊರೆಯಬೇಕಾಯಿತು.

ಈ ಬಗ್ಗೆ ಬರೆಯುತ್ತಾ ಆತ್ಮಾರಾಮ್ ಸಾಳ್ವೆ ಹೀಗೆಂದರು:

ಇಂದು, ಮೀಸಲಾತಿಗೆ ಎದುರಾಗಿ ನಿಂತು
ದುರ್ಬಲರನ್ನೇಕೆ ಹಿಂಸಿಸುತ್ತೀರಿ?
ನೀವು ಪ್ರಜಾಪ್ರಭುತ್ವದ ಫಲಾನುಭವಿಗಳು
ಏಕೆ ಇಷ್ಟೊಂದು ನೀಚರಂತೆ ವರ್ತಿಸುತ್ತೀರಿ?
ಇಂದು ಗುಜರಾತ್ ಹೊತ್ತಿ ಉರಿಯುತ್ತಿದೆ
ನಾಳೆ, ಇಡೀ ದೇಶ
ಇದು ಉರಿಯುತ್ತಿರುವ, ಹಬ್ಬುತ್ತಿರುವ ಬೆಂಕಿ
ನೀವು ಅದರಲ್ಲಿ ಏಕೆ ಹೀಗೆ ಬೇಯುತ್ತೀರಿ

ಆತ್ಮಾರಾಮ್ ಸಾಳ್ವೆ ಮನರಂಜನೆ, ಹಣ, ಖ್ಯಾತಿ ಅಥವಾ ಹೆಸರಿಗಾಗಿ ಪ್ರದರ್ಶನ ನೀಡಲಿಲ್ಲ. ಕಲೆಯು ತಟಸ್ಥ ಅಥವಾ ಮನರಂಜನೆಗಾಗಿ ಇರುವುದಲ್ಲ, ಅದು ಇರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಯ ಹೋರಾಟದಲ್ಲಿ ಒಂದು ಪ್ರಮುಖ ಸಾಧನವಾಗಿ ಬಳೆಕೆಯಾಗಲು ಎಂದು ಅವರು ನಂಬಿದ್ದರು. ಅವರು 300ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಇವುಗಳಲ್ಲಿ 200 ಹಾಡುಗಳನ್ನು ಇಂದು ನಾವು ಲಿಖಿತ ರೂಪದಲ್ಲಿ ನಮ್ಮೊಡನೆ ಹೊಂದಿದ್ದೇವೆ.

ಭೋಕರ್‌ನ ಲಕ್ಷ್ಮಣ್ ಹೀರೆ, ಮರ್ಖೇಲ್‌ನ ನಾಗರಬಾಯಿ ವಜಾರ್ಕರ್, ಮುಖೇಡ್‌ನ ತೇಜೇರಾವ್ ಭದ್ರೆ (ಎಲ್ಲವೂ ನಾಂದೇಡ್ ಜಿಲ್ಲೆಯಲ್ಲಿವೆ) ಮತ್ತು ಫುಲೆ ಪಿಂಪಲ್ ಗಾಂವ್ (ಬೀಡ್ ಜಿಲ್ಲೆ) ನ ಶಾಹಿರ್ ಮಹೇಂದ್ರ ಸಾಳ್ವೆ ಅವರ ಹಾಡುಗಳ ಸಂಗ್ರಹವನ್ನು ಹೊಂದಿದ್ದಾರೆ. ಅನೇಕ ಅಪೂರ್ಣ ಹಾಡುಗಳು ಜನರ ನೆನಪಿನಲ್ಲಿ ಉಳಿದಿವೆ. ಈ ಹಾಡುಗಳನ್ನು ಬರೆದವರು ಯಾರು? ಯಾರಿಗೂ ಗೊತ್ತಿಲ್ಲ. ಆದರೆ ಜನರು ಅವುಗಳನ್ನು ಗುನುಗುತ್ತಲೇ ಇರುತ್ತಾರೆ.

ನಾವು ಜೈಭೀಮ್‌ ಕುಟುಂಬಿಕರು
ನಮ್ಮ ಸರದಾರ ರಾಜಾ ಧಾಳೆ

ಆ ದಿನಗಳಲ್ಲಿ ಪ್ರತಿಯೊಬ್ಬ ಪ್ಯಾಂಥರ್ ಸದಸ್ಯರ ಬಾಯಲ್ಲಿ ನಲಿಯುತ್ತಿದ್ದ ಈ 'ದಲಿತ ಪ್ಯಾಂಥರ್ ಮುಖ್ಯ ಗೀತೆ'ಯನ್ನು ಸಾಳ್ವೆ ಬರೆದರು. ಈ ಹಾಡು ಇಂದಿಗೂ ಮರಾಠವಾಡದ ಜನರ ಹೃದಯ ಮತ್ತು ಮನಸ್ಸಿನಲ್ಲಿ ಮನೆಮಾಡಿದೆ.

ಬಿತ್ತುತ್ತಿದ್ದೇನೆ ಇಂದು ಈ ಕ್ರಾಂತಿಯ ಕಿಡಿಗಳನ್ನು
ಇವು ಕಿಚ್ಚಾಗಿ ಹೊರಹೊಮ್ಮಲಿ ಮುಂದೆ
ಹೇಗೆ ಸಹಿಸುವುದು ಈ ನಿರ್ಲಕ್ಷ್ಯವನ್ನು ನಾವು
ಎದೆಯೊಳಗೆ ಬೆಂಕಿ ಕುದಿಯುತ್ತದೆ
ಮಗುವೊಂದು ಒದೆಯುತ್ತದೆ ತಾಯಿಗೆ
ಗರ್ಭದೊಳಗಿಂದ
ಮುಂದೆ ಬರಲಿರುವ ಈ ಭೀಮನ ಸೈನಿಕರ ಕಂಡು
ನೀವು ಎಚ್ಚರಗೊಳ್ಳುವಿರಿ

PHOTO • Labani Jangi

ಆತ್ಮಾರಾಮ್ ಪ್ರದರ್ಶನ ನೀಡಿದಾಗಲೆಲ್ಲಾ ದಲಿತರು ಹತ್ತಿರದಿಂದ ಮತ್ತು ದೂರದ ಊರುಗಳಿಂದ ನಡೆದುಬಂದು ಸೇರುತ್ತಿದ್ದರು

ಆತ್ಮಾರಾಮ್ ಈ ಜನಪ್ರಿಯ (ಮೇಲಿನ) ಹಾಡನ್ನು ಬರೆದರು. ಅವರು ಮರಾಠವಾಡ ನಾಮಾಂತರ್ ಪೊವಡಾವನ್ನು ಸಹ ಬರೆದರು. ಇದನ್ನು ಅವರ ಹಸ್ತಪ್ರತಿಯ ಸೂಚ್ಯಂಕದಲ್ಲಿ ದಾಖಲಿಸಲಾಗಿದೆ, ಆದರೆ ಅದರ ಲಿಖಿತ ಪ್ರತಿ ನಮ್ಮಲ್ಲಿಲ್ಲ. ಆದಾಗ್ಯೂ, ಪುಣೆಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನಾಯಕ ರೋಹಿದಾಸ್ ಗಾಯಕ್ವಾಡ್ ಮತ್ತು ಅಂಬೇಡ್ಕರ್ ವಾದಿ ಚಳುವಳಿಯ ಹಿರಿಯ, ಮಿಷನರಿ ನಾಯಕ ವಸಂತ್ ಸಾಳ್ವೆ ಅವರು ನನಗಾಗಿ ಕೆಲವು ಸಾಲುಗಳನ್ನು ಹಾಡಿದರು. ಇಂದಾಪುರ ತಾಲ್ಲೂಕಿನ ಬಾವ್ಡಾ ಗ್ರಾಮದಲ್ಲಿ ದಲಿತರ ಬಹಿಷ್ಕಾರದ ಸಮಯದಲ್ಲಿ (ಮೇಲ್ಜಾತಿಯ ಗ್ರಾಮಸ್ಥರು), ಆತ್ಮಾರಾಮ್ ಸಾಳ್ವೆ ಪುಣೆಗೆ ಬಂದು ಅನೇಕ ಕೊಳೆಗೇರಿ ನೆರೆಹೊರೆಗಳಲ್ಲಿ ಪ್ರದರ್ಶನ ನೀಡಿದ್ದರು. ಅವರ ಹಾಡುಗಳು ಸಾಮೂಹಿಕ ಮನೋಭಾವ ಮತ್ತು ಸಂವೇದನಾಶೀಲತೆಯ ವಿಷಯಗಳ ಸುತ್ತ ಸುತ್ತುತ್ತವೆ. ಆತ್ಮಾರಾಮ್ ಪ್ರದರ್ಶನ ನೀಡಿದಾಗಲೆಲ್ಲಾ, ಆ ಸ್ಥಳದಿಂದ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ದಲಿತರು ಬರುತ್ತಿದ್ದರು, ಭಕ್ರಿಗಳನ್ನು ತುಂಬಿಕೊಂಡು, ಕಾರ್ಯಕ್ರಮದಲ್ಲಿ ಭಾಗವಹಿಸಲು ಕಿಲೋಮೀಟರ್ ಗಟ್ಟಲೆ ನಡೆಯುತ್ತಿದ್ದರು. ಅವರ ಪ್ರದರ್ಶನದ ನಂತರ ಪ್ಯಾಂಥರ್ ಕಾರ್ಯಕರ್ತರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಪ್ಯಾಂಥರ್ಸ್ ಮತ್ತು ನಾಮಾಂತರ್‌ ಹೋರಾಟಕ್ಕೆ 'ಜನಸಮೂಹ ಸೆಳೆಯುವವ'ರಾಗಿದ್ದರು. ನಾಮದೇವ್ ಢಸಾಳ್ ದಲಿತ ಪ್ಯಾಂಥರ್ ಯುಗದ ಪ್ರಾತಿನಿಧಿಕ ಕವಿಯಾಗಿರುವಂತೆ, ಆತ್ಮಾರಾಮ್ ಸಾಳ್ವೆ ಅವರು ಪ್ಯಾಂಥರ್ ಯುಗದ ಪ್ರಾತಿನಿಧಿಕ ಲಾವಣಿಕಾರರಾಗಿದ್ದಾರೆ. ನಾಮದೇವ್ ತನ್ನ ಕವಿತೆಗಳಲ್ಲಿ ಹೇಗೆ 'ಪಥ ಬದಲಿಸುವ' ಕೆಲಸವನ್ನು ಮಾಡುತ್ತಾರೋ ಆತ್ಮಾರಾಮ್ ಅದನ್ನು ಅಂಬೇಡ್ಕರ್ ನಂತರದ ಚಳುವಳಿಯ ಶಾಹಿರಿ ಚಳವಳಿಗೆ ಮಾಡಿದರು. ನಾಮ್ ದೇವ್ ಕಾವ್ಯವು ಪ್ಯಾಂಥರ್ ಯುಗವನ್ನು ವಿವರಿಸುವಂತೆಯೇ, ಆತ್ಮಾರಾಮರ ಶಾಹಿರಿ ಆ ಕಾಲವನ್ನು ವಿವರಿಸುತ್ತದೆ. ನಾಮದೇವರ ಕಾವ್ಯವು ಜಾತಿ ಮತ್ತು ವರ್ಗವನ್ನು ಒಟ್ಟಿಗೆ ಎದುರಿಸಿದಂತೆಯೇ, ಆತ್ಮಾರಾಮ್ ಶಾಹಿರಿ ಏಕಕಾಲದಲ್ಲಿ ಜಾತಿ, ವರ್ಗ ಮತ್ತು ಲಿಂಗ ದಬ್ಬಾಳಿಕೆಯನ್ನು ಎದುರುಹಾಕಿಕೊಳ್ಳುತ್ತದೆ. ಪ್ಯಾಂಥರ್ಸ್ ಅವರ ಮೇಲೆ ಪ್ರಭಾವ ಬೀರಿವೆ, ಮತ್ತು ಅವರು ಪ್ಯಾಂಥರ್ಸ್ ಮತ್ತು ಜನರ ಮೇಲೆ ಪ್ರಭಾವ ಬೀರಿದ್ದಾರೆ. ಈ ಪ್ರಭಾವದಿಂದಲೇ ಅವರು ಉನ್ನತ ಶಿಕ್ಷಣ, ಉದ್ಯೋಗ, ಮನೆ, ತಮ್ಮ ಎಲ್ಲವನ್ನೂ ಬಿಟ್ಟು ನಿರ್ಭೀತಿಯಿಂದ ಮತ್ತು ನಿಸ್ವಾರ್ಥದಿಂದ ತಾವು ಆರಿಸಿಕೊಂಡ ಮಾರ್ಗವನ್ನು ಅನುಸರಿಸಿದರು.

ನಾಮದೇವ್ ಢಸಾಳ್ ದಲಿತ ಪ್ಯಾಂಥರ್ ಯುಗದ ಪ್ರಾತಿನಿಧಿಕ ಕವಿಯಾಗಿರುವಂತೆ, ಆತ್ಮಾರಾಮ್ ಸಾಳ್ವೆ ಕೂಡ ಪ್ಯಾಂಥರ್ ಯುಗದ ಪ್ರಾತಿನಿಧಿಕ ಲಾವಣಿಕಾರರಾಗಿದ್ದಾರೆ

ಸುಮಿತ್ ಸಾಳ್ವೆ ಹಾಡುವುದನ್ನು ನೋಡಿ
'ಹಳೆಯ ಕಂಬಳಿಯನ್ನು ಇನ್ನೂ ಎಷ್ಟು ಕಾಲ ಹೊದ್ದು ಕಳೆಯುವೆ'

ವಸಾಯಿಯ ಮಾಜಿ ಶಾಸಕ ವಿವೇಕ್ ಪಂಡಿತ್ ಅವರು ಎರಡು ದಶಕಗಳ ಕಾಲ ಆತ್ಮಾರಾಮ್ ಸಾಳ್ವೆಯವರ ಸ್ನೇಹಿತರಾಗಿದ್ದರು. ಅವರು ಹೇಳುತ್ತಾರೆ, "ಭಯ ಮತ್ತು ಸ್ವಹಿತಾಸಕ್ತಿ - ಈ ಎರಡು ಪದಗಳು ಆತ್ಮಾರಾಮ್ ಅವರ ನಿಘಂಟಿನಲ್ಲಿ ಎಂದಿಗೂ ಇರಲಿಲ್ಲ." ಸಾಳ್ವೆ ತನ್ನ ಧ್ವನಿ ಮತ್ತು ಮಾತುಗಳ ಮೇಲೆ ಹೆಚ್ಚಿನ ಪಾಂಡಿತ್ಯವನ್ನು ಹೊಂದಿದ್ದರು. ತನಗೆ ತಿಳಿದಿರುವ ವಿಷಯದ ಮೇಲೆ ಅವರು ದೃಢವಾದ ಹಿಡಿತವನ್ನು ಹೊಂದಿದ್ದರು. ಮರಾಠಿಯಲ್ಲದೆ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರು ಹಿಂದಿ ಮತ್ತು ಉರ್ದುವಿನಲ್ಲಿ ಕೆಲವು ಹಾಡುಗಳನ್ನು ಸಂಯೋಜಿಸಿದರು. ಅವರು ಹಿಂದಿಯಲ್ಲಿ ಕೆಲವು ಕವ್ವಾಲಿಗಳನ್ನು ಸಹ ಬರೆದರು ಮತ್ತು ಪ್ರದರ್ಶಿಸಿದರು. ಆದರೆ ಅವರು ತಮ್ಮ ಕಲೆಯನ್ನು ಎಂದಿಗೂ ವಾಣಿಜ್ಯೀಕರಣಗೊಳಿಸಲಿಲ್ಲ, ಅದನ್ನು ಮಾರುಕಟ್ಟೆಗೆ ತರಲಿಲ್ಲ. ತನ್ನ ಕಲೆ, ಮಾತು ಮತ್ತು ತನ್ನ ಶಕ್ತಿಯುತ ಧ್ವನಿಯನ್ನು ಆಯುಧವಾಗಿ ಪರಿವರ್ತಿಸಿ, ಜಾತಿ-ವರ್ಗ-ಲಿಂಗ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ಸೈನಿಕನಂತೆ ಹೊರಹೊಮ್ಮಿದರು - ಮತ್ತು ತನ್ನ ಕೊನೆಯ ಕ್ಷಣದವರೆಗೂ ಏಕಾಂಗಿಯಾಗಿ ಹೋರಾಡುವುದನ್ನು ಮುಂದುವರಿಸಿದರು.

ಕುಟುಂಬ, ಚಳವಳಿ ಮತ್ತು ಉದ್ಯೋಗಗಳು ಕಾರ್ಯಕರ್ತನೊಬ್ಬನಿಗೆ ಮಾನಸಿಕ ಬೆಂಬಲದ ಮೂಲಗಳಾಗಿವೆ. ಇವೆಲ್ಲವನ್ನು ಒಟ್ಟುಗೂಡಿಸಿ, ಒಂದು ಜನಾಂದೋಲನವು ಕಾರ್ಯಕರ್ತರು ಮತ್ತು ಜನರ ಕಲಾವಿದರು ಬದುಕುಳಿಯಲು ಮತ್ತು ತಮ್ಮನ್ನು ತಾವು ಉಳಿಸಿಕೊಳ್ಳಲು ಪರ್ಯಾಯ ವೇದಿಕೆಯನ್ನು ಸೃಷ್ಟಿಸಬೇಕಾಗಿದೆ - ಅಲ್ಲಿ ಅವರು ಒಬ್ಬಂಟಿ ಮತ್ತು ಏಕಾಂಗಿಯಾಗಿರಬಾರದು.

ಅಂಬೇಡ್ಕರವಾದಿ ಚಳುವಳಿಯಲ್ಲಿ ಕಲಾವಿದರು ಮಾನಸಿಕ ಖಿನ್ನತೆಗೆ ಜಾರುವುದನ್ನು ತಪ್ಪಿಸಲು ಅಥವಾ ಅವರು ಖಿನ್ನತೆಗೆ ಒಳಗಾದಾಗ ಅವರಿಗೆ ಸಹಾಯ ಮಾಡಲು ಯಾವುದೇ ರಚನಾತ್ಮಕ ಮತ್ತು ಸಾಂಸ್ಥಿಕ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ, ಸ್ವಾಭಾವಿಕವಾಗಿ, ಆತ್ಮಾರಾಮ್ ಸಾಳ್ವೆಯಂತಹ ಕಲಾವಿದರಿಗೆ ಏನಾಗಬಹುದಿತ್ತೋ ಅದು ನಡೆಯಿತು.

ನಂತರದ ಜೀವನದಲ್ಲಿ, ಅವರು ಎಲ್ಲಾ ಮೂರು ಹಂತಗಳಲ್ಲಿ ನಿರಾಶೆಗೊಂಡರು. ಚಳವಳಿಯಿಂದಾಗಿ ಅವರ ಕುಟುಂಬವು ಬೇರ್ಪಟ್ಟಿತು. ಅವರ ವ್ಯಸನವು (ಮದ್ಯಪಾನ) ಉಲ್ಬಣಿಸಿತು. ಕೊನೆಯಲ್ಲಿ, ಅವರು ಭ್ರಮನಿರಸನಗೊಂಡರು. ಅವರು ಒಬ್ಬ ಪ್ರದರ್ಶಕನಂತೆ ನಿಂತು ಎಲ್ಲಿಯಾದರೂ ಹಾಡಲು ಪ್ರಾರಂಭಿಸುತ್ತಿದ್ದರು - ರಸ್ತೆಯ ಮಧ್ಯದಲ್ಲಿ, ಪಟ್ಟಣದ ಚೌಕದಲ್ಲಿ, ಯಾರದ್ದಾದರೂ ಬೇಡಿಕೆಯ ಮೇರೆಗೆ. ತನ್ನ ವ್ಯಸನದ ನಡುವೆ, ನಾಮಾಂತರ್ ಚಳವಳಿಗಾಗಿ ಹೋರಾಡಿದ ಈ ಶಾಹಿರ್ 1991ರಲ್ಲಿ ಕಮಾನಿನ ಮೇಲೆ ವಿಶ್ವವಿದ್ಯಾಲಯದ ಹೊಸ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆಯದೆ ಹುತಾತ್ಮನಾಗಿ ಮರಣಹೊಂದಿದರು.

ಈ ಲೇಖನವನ್ನು ಮೂಲತಃ ಮರಾಠಿಯಲ್ಲಿ ಬರೆಯಲಾಗಿದೆ

ಪೊವಾಡಾಗಳ ಇಂಗ್ಲಿಷ್ ಅನುವಾದ (ಲಾವಣಿಗಳು): ನಮಿತಾ ವಾಯ್ಕರ್.

ಲೇಖಕರು ಭೋಕರ್‌ ಮೂಲದ ಲಕ್ಷ್ಮಣ್ ಹಿರೇ, ನಾಂದೇಡ್‌ನ ರಾಹುಲ್ ಪ್ರಧಾನ್ ಮತ್ತು ಪುಣೆಯ ದಯಾನಂದ್ ಕನಕದಂಡೆ ಈ ಲೇಖನದ ತಯಾರಿಗೆ ಒದಗಿಸಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ತನ್ನ ಆರ್ಕೈವ್ಸ್ ಅಂಡ್ ಮ್ಯೂಸಿಯಮ್ಸ್ ಪ್ರೋಗ್ರಾಂ ಅಡಿಯಲ್ಲಿ ಅನುಷ್ಠಾನಗೊಳಿಸಿದ 'ಪ್ರಭಾವಶಾಲಿ ಶಾಹಿರ್‌ಗಳು, ಮರಾಠವಾಡದ ನಿರೂಪಣೆಗಳು' ಎಂಬ ಶೀರ್ಷಿಕೆಯ ಸಂಗ್ರಹದ ಭಾಗವಾಗಿದೆ. ಗೋಥೆ-ಇನ್ ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ್ ನವದೆಹಲಿ ಇದರ ಭಾಗಶಃ ಬೆಂಬಲದಿಂದ ಇದು ಸಾಧ್ಯವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Keshav Waghmare

کیشو واگھمارے مہاراشٹر کے پونہ میں مقیم ایک قلم کار اور محقق ہیں۔ وہ ۲۰۱۲ میں تشکیل شدہ ’دلت آدیواسی ادھیکار آندولن (ڈی اے اے اے) کے بانی رکن ہیں، اور گزشتہ کئی برسوں سے مراٹھواڑہ کی برادریوں کی دستاویز بندی کر رہے ہیں۔

کے ذریعہ دیگر اسٹوریز Keshav Waghmare
Illustrations : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru