ಭಾರತೀಯ ಉಪಖಂಡದಲ್ಲಿನ ಸುದೀರ್ಘ ವಸಾಹತುಶಾಹಿ ಮತ್ತು ವಿಭಜನೆಯ ಅವಧಿಯ ಛಾಯೆಗಳು ಅಸ್ಸಾಮಿನಲ್ಲಿ ಈಗಲೂ ಭಿನ್ನ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುತ್ತಿವೆ. ವಿಶೇಷವಾಗಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ) ರೂಪದಲ್ಲಿ. ಇದೊಂದು ಜನರ ಪೌರತ್ವವನ್ನು ನಿರ್ಧರಿಸುವ ಒಂದು ಮಾರ್ಗವಾಗಿದ್ದು, ಇದರಿಂದಾಗಿ ಸುಮಾರು 19 ಲಕ್ಷ ಜನರ ಪೌರತ್ವ ಅಪಾಯದಲ್ಲಿದೆ. 'ಅನುಮಾನಾಸ್ಪದ (ಡಿ)-ಮತದಾರರು' ಎಂದು ಕರೆಯಲ್ಪಡುವ ಹೊಸ ವರ್ಗದ ನಾಗರಿಕರನ್ನು ರಚಿಸಿರುವುದು ಮತ್ತು ಅವರನ್ನು ಬಂಧನ ಕೇಂದ್ರಗಳಲ್ಲಿ ಬಂಧಿಸಿಟ್ಟಿರುವುದು ಇದಕ್ಕೆ ಜೀವಂತ ಪುರಾವೆಯಾಗಿದೆ. 1990ರ ದಶಕದ ಅಂತ್ಯದ ವೇಳೆಗೆ, 'ಹೊರಗಿನವರನ್ನು' ಒಳಗೊಂಡ ಪ್ರಕರಣಗಳನ್ನು ನಿಭಾಯಿಸಲು ಅಸ್ಸಾಮಿನಾದ್ಯಂತ ಹೆಚ್ಚುತ್ತಿರುವ ನ್ಯಾಯಮಂಡಳಿಗಳು ಮತ್ತು ನಂತರ 2019ರ ಡಿಸೆಂಬರ್‌ ತಿಂಗಳಿನಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಜ್ಯದಲ್ಲಿನ ಪೌರತ್ವ ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸಿದವು.

ಈ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಆರು ಜನರ ಮೌಖಿಕ ಸಾಕ್ಷೀಕರಣವು ಈ ಬಿಕ್ಕಟ್ಟು ಇಲ್ಲಿನ ಜನರ ವೈಯಕ್ತಿಕ ಬದುಕು ಮತ್ತು ಅವರ ಇತಿಹಾಸದ ಮೇಲೆ ಬೀರಿರುವ ಕ್ರೂರ ಪರಿಣಾಮವನ್ನು ವಿವರಿಸುತ್ತವೆ. ತನ್ನ ಎಂಟನೇ ವಯಸ್ಸಿನಲ್ಲಿ ನೆಲ್ಲಿ ಹತ್ಯಾಕಾಂಡದಲ್ಲಿ ಪಾರಾಗಿ ಬದುಕುಳಿದವರಾದ ರಶೀದಾ ಬೇಗಂ ಈಗ ತನ್ನ ಕುಟುಂಬದ ಎಲ್ಲ ಸದಸ್ಯರ ಹೆಸರೂ ಎನ್‌ಆರ್‌ಸಿ ಪಟ್ಟಿಯಲ್ಲಿದ್ದರೂ ತನ್ನ ಹೆಸರು ಇಲ್ಲದಿರುವುನ್ನು ಕಂಡು ಚಿಂತಿತರಾಗಿದ್ದಾರೆ. ಶಹಜಹಾನ್‌ ಅಲಿಯವರದೂ ಅದೇ ಕತೆ ಕುಟುಂಬದ ಎಲ್ಲರ ಹೆಸರೂ ಪಟ್ಟಿಯಲ್ಲಿದ್ದರೂ ಅವರ ಹೆಸರಿಲ್ಲ. ಪ್ರಸ್ತುತ ಅವರು ಅಸ್ಸಾಮಿನಲ್ಲಿ ಪೌರತ್ವದ ವಿಷಯಗಳಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅಸ್ಸಾಮಿನ ಪೌರತ್ವ ಬಿಕ್ಕಟ್ಟಿನ ಇತಿಹಾಸವು ಅಸ್ಸಾಂನಲ್ಲಿನ ಪೌರತ್ವ ಬಿಕ್ಕಟ್ಟಿನ ಇತಿಹಾಸವು ಬ್ರಿಟಿಷ್ ಸಾಮ್ರಾಜ್ಯದ ನೀತಿಗಳು ಮತ್ತು 1905ರ ಬಂಗಾಳ ಮತ್ತು 1947ರ ಭಾರತ ಉಪಖಂಡದ ವಿಭಜನೆಗಳಿಂದ ಉಂಟಾದ ವಲಸೆಯ ಅಲೆಗಳೊಂದಿಗೆ ಸಂಬಂಧ ಹೊಂದಿದೆ

ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿದ್ದರೂ ಉಲೋಪಿ ಬಿಸ್ವಾಸ್ ಮತ್ತು ಅವರ ಕುಟುಂಬದವರನ್ನು 'ವಿದೇಶಿಯರು' ಎಂದು ಘೋಷಿಸಲಾಯಿತು. ಅನುಮಾನಾಸ್ಪದ (ಡಿ) ಮತದಾರರು ಎಂದು ಘೋಷಿಸಿದ ನಂತರ, ಪೌರತ್ವವನ್ನು ಸಾಬೀತುಪಡಿಸಲು ಅವರನ್ನು 2017-2022ರಲ್ಲಿ ಬೊಂಗೈಗಾಂವ್ ವಿದೇಶಿಯರ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಕುಲ್ಸೂಮ್ ನಿಸಾ ಮತ್ತು ಸೂಫಿಯಾ ಖತೂನ್ ಅವರು ಕಸ್ಟಡಿಯಲ್ಲಿ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಆಡಳಿತಾತ್ಮಕ ಲೋಪದಿಂದಾಗಿ ಮೊರ್ಜಿನಾ ಬೀಬಿ ಎಂಟು ತಿಂಗಳು ಮತ್ತು 20 ದಿನಗಳನ್ನು ಕೊಕ್ರಜಾರ್ ಬಂಧನ ಕೇಂದ್ರದಲ್ಲಿ ಕಳೆಯಬೇಕಾಯಿತು.

ಅಸ್ಸಾಂ ಪೌರತ್ವ ಬಿಕ್ಕಟ್ಟಿನ ಇತಿಹಾಸವು ಸಾಕಷ್ಟು ಸಂಕೀರ್ಣವಾದದ್ದು. ಇದು ಬ್ರಿಟಿಷ್ ಸಾಮ್ರಾಜ್ಯದ ಸಾಮಾಜಿಕ-ಆರ್ಥಿಕ ನೀತಿಗಳು, 1905ರ ಬಂಗಾಳ ಮತ್ತು 1947ರ ಭಾರತ ಉಪಖಂಡದ ವಿಭಜನೆಯಿಂದ ಉಂಟಾದ ಸ್ಥಳಾಂತರದೊಂದಿಗೆ ಸಂಬಂಧ ಹೊಂದಿದೆ. 1979 ಮತ್ತು 1985ರ ನಡುವೆ 'ಹೊರಗಿನವರ' ವಿರುದ್ಧದ ಹಲವಾರು ಆಡಳಿತಾತ್ಮಕ ಮತ್ತು ಕಾನೂನು ಹಸ್ತಕ್ಷೇಪಗಳು ಮತ್ತು ಚಳುವಳಿಗಳು ಬಂಗಾಳಿ ಮೂಲದ ಮುಸ್ಲಿಮರು ಮತ್ತು ಹಿಂದೂಗಳನ್ನು ಅವರ ಸ್ವಂತ ಮನೆಗಳಲ್ಲಿಯೇ 'ಹೊರಗಿನವರನ್ನಾಗಿ' ಪರಿವರ್ತಿಸಿವೆ.

ಕುಲ್ಸೂಮ್ ನಿಸಾ, ಮೊರ್ಜಿನಾ ಬೀಬಿ, ರಶೀದಾ ಬೇಗಂ, ಶಹಜಹಾನ್ ಅಲಿ ಅಹ್ಮದ್, ಸೂಫಿಯಾ ಖಾತೂನ್ ಮತ್ತು ಉಲೋಪಿ ಬಿಸ್ವಾಸ್ ಅವರ ಕಥೆಯನ್ನು 'ಫೇಸಿಂಗ್ ಹಿಸ್ಟರಿ ಅಂಡ್ ಅವರ್ ಸೆಲ್ಫ್ಸ್' ಯೋಜನೆಯಡಿ ಚಿತ್ರೀಕರಿಸಲಾಗಿದೆ. ಅಸ್ಸಾಂನಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಬಿಕ್ಕಟ್ಟು ಕೊನೆಗೊಳ್ಳುತ್ತಿಲ್ಲವೆನ್ನುವುದನ್ನು ಈ ಕಥೆಗಳು ಹೇಳುತ್ತವೆ. ಈ ಜೌಗು ಪ್ರದೇಶದಲ್ಲಿ ಸಿಲುಕಿರುವ ಜನರ ಬದುಕು ಏನಾಗಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ.


ರಶೀದಾ ಬೇಗಂ ಅಸ್ಸಾಂನ ಮೋರಿಗಾಂವ್ ಜಿಲ್ಲೆಯವರು. ಫೆಬ್ರವರಿ 18, 1983ರಂದು ನೆಲ್ಲಿ ಹತ್ಯಾಕಾಂಡ ನಡೆದಾಗ ಆಕೆಗೆ ಎಂಟು ವರ್ಷ. ಆದರೆ ಅವರು ಅದರಿಂದ ಹೇಗೋ ತಪ್ಪಿಸಿಕೊಂಡು ಬದುಕುಳಿದರು. ಈಗ 2019ರ ರಾಷ್ಟ್ರೀಯ ನಾಗರಿಕರ ನೋಂದಣಿಯ ಅಂತಿಮ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ತಿಳಿದುಬಂದಿದೆ.


ಶಹಜಹಾನ್ ಅಲಿ ಅಹ್ಮದ್ ಅಸ್ಸಾಂನ ಬಕ್ಸಾ ಜಿಲ್ಲೆಯವರು. ಅವರು ಅಸ್ಸಾಮಿನಲ್ಲಿ ಪೌರತ್ವ ಸಂಬಂಧಿತ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರೊಂದಿಗೆ, ಅವರ ಕುಟುಂಬದ 33 ಸದಸ್ಯರ ಹೆಸರುಗಳನ್ನು ರಾಷ್ಟ್ರೀಯ ನಾಗರಿಕರ ನೋಂದಣಿಯಿಂದ ತೆಗೆದುಹಾಕಲಾಗಿದೆ.


ಸೂಫಿಯಾ ಖಾತುನ್ ಅಸ್ಸಾಂನ ಬಾರ್ಪೇಟಾ ಜಿಲ್ಲೆಯವರು. ಅವರು ಕೊಕ್ರಜಾರ್ ಬಂಧನ ಕೇಂದ್ರದಲ್ಲಿ (detention centre) ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸೆರೆಯಾಳಾಗಿ ಕಳೆದಿದ್ದಾರೆ. ಅವರು ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾಮೀನಿನ ಮೇಲೆ ಹೊರಗಿದ್ದಾರೆ.


ಕುಲ್ಸೂಮ್ ನಿಸಾ ಅಸ್ಸಾಂನ ಬಾರ್ಪೇಟಾ ಜಿಲ್ಲೆಯವರು. ಆಕೆಯನ್ನು ಕೊಕ್ರಜಾರ್ ಬಂಧನ ಕೇಂದ್ರದಲ್ಲಿ ಐದು ವರ್ಷಗಳ ಕಾಲ ಬಂಧಿಸಲಾಗಿತ್ತು. ಅವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ, ಆದರೆ ಪ್ರತಿ ವಾರ ಸ್ಥಳೀಯ ಪೊಲೀಸರ ಮುಂದೆ ಹಾಜರಾಗಬೇಕಾಗಿದೆ.


ಉಲೋಪಿ ಬಿಸ್ವಾಸ್ ಅಸ್ಸಾಂನ ಚಿರಾಂಗ್ ಜಿಲ್ಲೆಯವರು. ಅವರು 2017ರಿಂದ ಬೊಂಗೈಗಾಂವ್ ವಿದೇಶಿಯರ ನ್ಯಾಯಮಂಡಳಿಯಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದರು.


ಮೊರ್ಜಿನಾ ಬೀಬಿ ಅಸ್ಸಾಂನ ಗೋಲ್ಪಾರಾ ಜಿಲ್ಲೆಯವರು. ಅವರನ್ನು ಕೊಕ್ರಜಾರ್ ಬಂಧನ ಕೇಂದ್ರದಲ್ಲಿ ಎಂಟು ತಿಂಗಳು ಮತ್ತು 20 ದಿನಗಳ ಕಾಲ ಬಂಧಿಸಿಡಲಾಯಿತು. ಪೊಲೀಸರು ತಪ್ಪು ವ್ಯಕ್ತಿಯನ್ನು ಹಿಡಿದಿದ್ದಾರೆ ಎಂದು ಸಾಬೀತಾದ ನಂತರ, ಅಂತಿಮವಾಗಿ ಅವರನ್ನು ಬಿಡುಗಡೆ ಮಾಡಲಾಯಿತು.

ಈ ವೀಡಿಯೊಗಳು ಸುಭಶ್ರೀ ಕೃಷ್ಣನ್ ಅವರು ಸಿದ್ಧಪಡಿಸಿದ 'ಫೇಸಿಂಗ್ ಹಿಸ್ಟರಿ ಅಂಡ್ ಓವರ್ ಸೆಲ್ಫ್ಸ್' ಯೋಜನೆಯ ಭಾಗವಾಗಿದೆ. ಪೀಪಲ್ಸ್ ಆರ್ಕೈವ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ತನ್ನ ಆರ್ಕೈವ್ಸ್ ಮತ್ತು ಮ್ಯೂಸಿಯಂ ಕಾರ್ಯಕ್ರಮದ ಅಡಿಯಲ್ಲಿ ಈ ಫೌಂಡೇಶನ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ನವದೆಹಲಿಯ ಗೋಥೆ-ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನ್ ಸಹ ಈ ಯೋಜನೆಯಲ್ಲಿ ಭಾಗಶಃ ತೊಡಗಿಸಿಕೊಂಡಿದೆ. ಶೆರ್ಗಿಲ್ ಸುಂದರಂ ಆರ್ಟ್ಸ್ ಫೌಂಡೇಶನ್ ಕೂಡ ಈ ಯೋಜನೆಗೆ ಬೆಂಬಲ ನೀಡಿದೆ.

ಫೀಚರ್ ಕೊಲಾಜ್: ಶ್ರೇಯಾ ಕಾತ್ಯಾಯಿನಿ

ಅನುವಾದ: ಶಂಕರ. ಎನ್. ಕೆಂಚನೂರು

Subasri Krishnan

سُبشری کرشنن ایک فلم ساز ہیں، جو اپنے کام کے ذریعے شہریت سے متعلق سوالوں کو اٹھاتی ہیں اور اس کے لیے وہ لوگوں کی یادداشتوں، مہاجرت سے جڑی کہانیوں اور سرکاری پہچان سے متعلق دستاویزوں کی مدد لیتی ہیں۔ ان کا پروجیکٹ ’فیسنگ ہسٹری اینڈ اَورسیلوز‘ آسام میں اسی قسم کے مسائل کی پڑتال کرتا ہے۔ وہ فی الحال جامعہ ملیہ اسلامیہ، نئی دہلی کے اے جے کے ماس کمیونی کیشن ریسرچ سینٹر سے پی ایچ ڈی کر رہی ہیں۔

کے ذریعہ دیگر اسٹوریز Subasri Krishnan
Editor : Vinutha Mallya

ونوتا مالیہ، پیپلز آرکائیو آف رورل انڈیا کے لیے بطور کنسلٹنگ ایڈیٹر کام کرتی ہیں۔ وہ جنوری سے دسمبر ۲۰۲۲ تک پاری کی ایڈیٹوریل چیف رہ چکی ہیں۔

کے ذریعہ دیگر اسٹوریز Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru