ಸರಿಯಾದ ಸಮಯಕ್ಕೆ ರೈಲು ಹಿಡಿಯುವ ನನ್ನ ಆತಂಕ ಈಗ ನವದೆಹಲಿ ಕಲ್ಕಾ ಶತಾಬ್ದಿ ರೈಲಿನ ವಿಶೇಷ ಆಸನಗಳಲ್ಲಿ ಒಂದರ ಮೇಲೆ ನನ್ನೊಂದಿಗೆ ವಿಶ್ರಾಂತಿ ಪಡೆಯುತ್ತಿತ್ತು. ರೈಲು ಆಲಸಿತನದೊಡನೆ ಪ್ಲಾಟ್ ಫಾರ್ಮ್ ಬಿಟ್ಟು ಕಿರ್ ಕಿರ್ ಸದ್ದಿನೊಂದಿಗೆ ಹೊರಟಾಗ, ನನ್ನ ಸುತ್ತಲಿನ ಎಲ್ಲಾ ಸಂಗತಿಗಳೂ ನನ್ನ ಸ್ವಂತ ಆಲೋಚನೆಗಳಂತೆ ಚಕ್ರಗಳ ಸಾಂತ್ವನದ ಏಕತಾನತೆಯ ಲಯದಲ್ಲಿ ನೆಲೆಗೊಳ್ಳಲು ಪ್ರಾರಂಭಿಸಿದವು. ಆದರೆ ಅವಳಲ್ಲ. ಅವಳ ಚುರುಕುತನ ವೇಗವನ್ನು ಪಡೆಯುತ್ತಿದ್ದ ರೈಲಿಗೆ ಅನುಗುಣವಾಗಿತ್ತು.
ಮೊದಲಿಗೆ, ಅವಳು ವೇಗವಾಗಿ ಹಿಂದೆ ಸರಿಯುತ್ತಿರುವ ತನ್ನ ಅಜ್ಜನ ತಲೆ ಕೂದಲನ್ನು ಬಾಚುವಲ್ಲಿ ನಿರತಳಾಗಿದ್ದಳು. ನಾವು ಕುರುಕ್ಷೇತ್ರ ತಲುಪುವ ಹೊತ್ತಿಗೆ ಕಿಟಕಿಯ ಹೊರಗಿನ ಸೂರ್ಯ ಹೆಚ್ಚಿನ ಕುರುಹುಗಳನ್ನುಳಿಸದೆ ಕಣ್ಮರೆಯಾಗಿದ್ದನು. ಅವಳು ಈಗ ಸೀಟಿನ ಕೈಯೊಡನೆ ಆಡುತ್ತಿದ್ದಳು, ಅದನ್ನು ಒಂದು ಕ್ಷಣ ಮೇಲಕ್ಕೆತ್ತಿ ಮತ್ತೊಂದು ಕ್ಷಣ ಕೆಳಕ್ಕೆ ತಳ್ಳುತ್ತಿದ್ದಳು. ನಾನು ಸೂರ್ಯ ನಮ್ಮನ್ನು ಕತ್ತಲೆಯ ಮಡಿಲಿಗೆ ತಳ್ಳಿ ತನ್ನೊಂದಿಗೆ ತೆಗೆದುಕೊಂಡು ಹೋದ ಹಳದಿ ಬೆಳಕಿಗಾಗಿ ಹಾತೊರೆಯುತ್ತಿದ್ದೆ.
ಆದರೆ ಗಾಢವಾಗುತ್ತಿದ್ದ ಕತ್ತಲೆ ಅವಳ ಹೆಚ್ಚುತ್ತಿರುವ ಶಕ್ತಿಯ ಮೇಲೆ ಸ್ವಲ್ಪ ಪರಿಣಾಮ ಬೀರಿತು. ಅವಳು ತನ್ನ ಗಾಢ ನೀಲಿಯ ಮೇಲೆ ಪಟ್ಟೆಗಳಿದ್ದ ಫ್ರಾಕ್ ಧರಿಸಿ ತನ್ನ ತಾಯಿಯ ಮಡಿಲಲ್ಲಿ ನಿಂತಿದ್ದಳು. ಆ ಹುಡುಗಿಯನ್ನು ತನ್ನ ತೋಳುಗಳಲ್ಲಿ ಹೊತ್ತ ಯುವತಿಯು ಅವಳನ್ನು ಮೇಲಕ್ಕೆತ್ತಿ ಅವಳಿಗೆ ಎಲ್ಲೆಡೆ ಕಾಣುವಂತೆ ಮಾಡಿದಳು. ಮಗು ನನ್ನತ್ತ ನೋಡಿತು ಮತ್ತು ನಾನು ಕೂಡ ಅವಳ ನೋಟವನ್ನು ಗಮನಿಸಿದೆ. ನಮ್ಮ ಕಣ್ಣುಗಳು ಅವಳ ತಲೆಯ ಬಳಿಯಿದ್ದ ಎರಡು ಸ್ವಿಚ್ಗಳನ್ನು ಗುರುತಿಸಿದವು. ಅವಳು ತನ್ನ ತಾಯಿಯ ಮಡಿಲಿಂದ ಸ್ವಲ್ಪ ಮೇಲಕ್ಕೆ ಜಿಗಿದು ಮೊದಲಿಗೆ ಒಂದು ಕೈಯಿಂದ ಮತ್ತು ನಂತರ ಎರಡು ಕೈಗಳಿಂದ ಅದನ್ನು ಎಟುಕಲು ಪ್ರಯತ್ನಿಸಿದಳು... ಯುರೇಕಾ!
ಹಳದಿ ಬೆಳಕಿನ ಕಿರಣ ಅವಳ ಮುಖವನ್ನು ಆವರಿಸಿತು. ಅಲ್ಲಿ ಸೂರ್ಯನಿದ್ದ, ಅವಳ ಕಣ್ಣುಗಳಲ್ಲಿ ಅಡಗಿಕೊಂಡು ಮತ್ತೆ ಮೇಲೇಳುತ್ತಿದ್ದ. ಅವಳು ಎರಡನೇ ಸ್ವಿಚ್ ಅನ್ನು ಒತ್ತಿದಳು. ಮತ್ತೊಂದು ಬೆಳಕಿನ ಕಿರಣವು ಅವಳ ದೇಹವನ್ನು ಬೆಳಗಿಸಿತು. ಬೆಳಕು ಅವಳ ನಗು, ಅವಳ ಕಣ್ಣು, ಮತ್ತು ಹಳದಿ ಬಲ್ಬಿಗೆ ಅಡ್ಡಲಾಗಿ ಹಿಡಿದಿದ್ದ ಅಂಗೈಗೆ ಚಿನ್ನದ ಬಣ್ಣದ ಹೊಳಪನ್ನು ನೀಡಿತ್ತು.
ನನ್ನ ಸಹ ಪಯಣಿಗಳ ಈ ಪ್ರಕಾಶಮಾನವಾದ ನೋಟದಿಂದ ಸ್ಫೂರ್ತಿಗೊಂಡ ನಾನು ನಿದಾ ಫಾಜಲಿಯವರ ಕೆಲವು ಸಾಲುಗಳನ್ನು ಗುನುಗತೊಡಗಿದೆ
ಬಚ್ಚೋಂ ಕೇ ಛೋಟೇ ಹಾತೋ ಕೋ ಚಾಂದ್ ಸಿತಾರೆ ಛೂನೇ ದೋ
ದೋ-ಚಾರ್ ಕಿತಾಬೇ ಪಡ್ ಕರ್ ಯೇ ಭೀ ಹಮ್ ಜೈಸೇ ಹೋ ಜಾಯೇಂಗೆ
ಚುಕ್ಕಿ ಚಂದ್ರಮನೆಡೆಗೆ ಕೈ ಚಾಚಲಿ ಬಿಡಿ ಮಕ್ಕಳು
ನಾಲ್ಕಾರು ಪುಸ್ತಕ ಓದಿ ನಮ್ಮಂತೆಯೇ ಆಗಿಬಿಡದಿರಲಿ ಅವುಗಳೂ
ಅನುವಾದ: ಶಂಕರ. ಎನ್. ಕೆಂಚನೂರು