ಆ ದಿನ ನನಗಿನ್ನೂ ನೆನಪಿದೆ. ನನ್ನ ತಾಯಿಯವರ ಪಕ್ಕದಲ್ಲಿ ಚಾದರ ಸುತ್ತಿಕೊಂಡು ನಾನು ಅವರು ಹೇಳುತ್ತಿದ್ದ ಕಥೆ ಕೇಳುತ್ತಿದ್ದೆ - ಮತ್ತು ಜೀವನದ ನಿಜವಾದ ಅರ್ಥವನ್ನು ಹುಡುಕುತ್ತಾ ಸಿದ್ಧಾರ್ಥನು ತನ್ನ ಮನೆಯನ್ನು ತೊರೆದನು" ಎಂದು ಅವರು ವಿವರಿಸುತ್ತಿದ್ದರು. ಆ ದಿನ ರಾತ್ರಿಯಿಡೀ ಜೋರಾಗಿ ಮಳೆ ಸುರಿಯಿತು, ಆಗ ನಮ್ಮ ಕೋಣೆಯು ಭೂಗರ್ಭದ ವಾಸನೆಯನ್ನು ಬೀರುತ್ತಿತ್ತು, ಇನ್ನೊಂದೆಡೆಗೆ ಮೇಣದ ಬತ್ತಿಯಿಂದ ಹೊರಸೂಸಿದ ಹೊಗೆ ಒಳತಾರಸಿಗೆ ಸ್ಪರ್ಶಿಸುತ್ತಿತ್ತು.
ಒಂದು ವೇಳೆ ಸಿದ್ದಾರ್ಥನಿಗೆ ಹಸಿವಾದರೆ?" ಎಂದು ನಾನು ಪ್ರಶ್ನಿಸಿದೆ. ಸಿದ್ಧಾರ್ಥನೊಬ್ಬ ದೇವರಾಗಿದ್ದ ಅವನಿಗೆ ಹಸಿವಾಗಲಿಲ್ಲವೆ ಎಂದು ಕೇಳಿದ್ದ ನನ್ನ ಮೂರ್ಖತನ ಎಂತಹದ್ದಿರಬಹುದು?
ಇದಾದ 18 ವರ್ಷಗಳ ಬಳಿಕ, ನಾನು ಮತ್ತೆ ಅದೇ ಕೋಣೆಗೆ ಬಂದೆ. ಆಗಲೇ ಮಳೆ ಸುರಿಯುತ್ತಿತ್ತು - ಕಿಟಕಿಗಳ ಮೇಲೆ ಹನಿಗಳು ಒಂದೊಂದಾಗಿ ತೊಟ್ಟಿಕ್ಕುತ್ತಿದ್ದವು. ನನ್ನ ಪಕ್ಕದಲ್ಲಿ ಚಾದರ ಸುತ್ತಿಕೊಂಡು ನನ್ನ ತಾಯಿ "21 ದಿನಗಳ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಅರ್ಧ ಮಿಲಿಯನ್ ವಲಸಿಗರು ಭಾರತದ ದೊಡ್ಡ ನಗರಗಳಿಂದ ತಮ್ಮ ಗ್ರಾಮಗಳಿಗೆ ನಡೆದುಕೊಂಡು ಹೋಗುತ್ತಿದ್ದಾರೆ" ಎನ್ನುವ ಸುದ್ದಿಯನ್ನು ಕೇಳುತ್ತಿದ್ದರು.
ಈಗಲೂ ಅದೇ ಪ್ರಶ್ನೆ: ಅವರಿಗೆ ಹಸಿವಾದರೆ ಹೇಗೆ?
ರಕ್ತದ ಜಾಡು
ನಾನು ನೋಡುತ್ತಿದ್ದ ಸಣ್ಣ ಕಿಟಕಿಯ ಮೂಲಕ
ಜನರು ಇರುವೆಗಳ ಸಾಲಿನಂತೆ ಸಾಗುತ್ತಿದ್ದಾರೆ.
ಮಕ್ಕಳು ಆಟವಾಡುತ್ತಿಲ್ಲ,
ಕಂದಮ್ಮಗಳು ಕಿರುಚುತ್ತಿಲ್ಲ,
ಮೌನವು ಅನಾಥ ರಸ್ತೆಗಳನ್ನು ಆಕ್ರಮಿಸಿದೆ.
ಅಥವಾ ಅದೇನು ಹಸಿವೆಯೇ..?
ಆ ಚಿಕ್ಕ ಕಿಟಕಿಯಿಂದ ನಾನು ನೋಡಿದೆ
ಜನರು ತಲೆಯ ಮೇಲೆ ಚೀಲಗಳನ್ನು ಹೊತ್ತು ಸಾಗುತ್ತಿದ್ದಾರೆ.
ಮತ್ತು ಅವರ ಆಂತರ್ಯದಲ್ಲಿ ಭಯ -
ಹಸಿವಿನ ಭೀತಿಯಿದೆ.
ತಮ್ಮ ಅಸ್ತಿತ್ವದ ಗುರುತನ್ನು ಬಿಟ್ಟು
ಮೈಲುಗಟ್ಟಲೆ ನಡೆಯುತ್ತಿದ್ದಾರೆ
ಈಗ ಅವರ ಕಾಲುಗಳಲ್ಲಿ ರಕ್ತಸ್ರಾವವಾಗುತ್ತಿದೆ,
ಭೂಮಿಯು ಕೆಂಬಣ್ಣಕ್ಕೆ ತಿರುಗಿದೆ,
ಅದೇ ರೀತಿ ಆಕಾಶವೂ ಕೂಡ.
ಚಿಕ್ಕ ಕಿಟಕಿಯಿಂದ,
ನಾನು ನೋಡಿದೆ,
ತಾಯಿ ತನ್ನ ಜೋತು ಬಿದ್ದ ಮೊಲೆಗಳ ಮೂಲಕ
ಮಗುವಿಗೆ ಹಾಲುಣಿಸುತ್ತಿದ್ದಾಳೆ.
ಆ ಜಾಡು ಕೊನೆಗೊಂಡಿತು.
ಕೆಲವರು ಅದನ್ನು ತಮ್ಮ ನೆಲೆಯನ್ನಾಗಿಸಿದರು,
ಕೆಲವರು ನಡು ದಾರಿಯಲ್ಲಿಯೇ ಕೊನೆಯುಸಿರೆಳೆದರು,
ಕೆಲವರ ಮೇಲೆ ಬ್ಲೇಚಿಂಗ್ ಪೌಡರ್
ಸಿಂಪಡಿಸಲಾಯಿತು,
ಕೆಲವರನ್ನು,
ಜಾನುವಾರುಗಳಂತೆ, ಟ್ರಕ್ಗಳಲ್ಲಿ ಕೂಡಿಹಾಕಲಾಯಿತು.
ಆಕಾಶವು ಕಪ್ಪಾಯಿತು ಮತ್ತು ನಂತರ ಅದು ನೀಲಿ ಬಣ್ಣಕ್ಕೆ ತಿರುಗಿತು,
ಆದರೆ ಭೂಮಿಯು ಮಾತ್ರ ಕೆಂಬಣ್ಣದಲ್ಲಿಯೇ ಉಳಿಯಿತು.
ಅವಳ ವಿಷಯದಲ್ಲಿ,
ಮೊಲೆಗಳ ಮೇಲೆ ರಕ್ತಸಿಕ್ತ ಗುರುತುಗಳು ಹಾಗೆಯೇ ಉಳಿದಿದ್ದವು.
ಆಡಿಯೋ: ಸುಧನ್ವಾ ದೇಶಪಾಂಡೆ ಅವರು ಜನ ನಾಟ್ಯ ಮಂಚ್ ನಲ್ಲಿ ನಟ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಮತ್ತು ಅವರು ಲೆಫ್ಟ್ ವರ್ಡ್ ಬುಕ್ಸ್ (LeftWord Books) ನಲ್ಲಿ ಸಂಪಾದಕರಾಗಿದ್ದಾರೆ.
ಅನುವಾದ - ಎನ್. ಮಂಜುನಾಥ್