ಚೆನ್ನೈಯ ಹೊಸ ಮುನ್ಸಿಪಲ್ ಶಾಲೆಯಲ್ಲಿ ಎಂಟು ವರ್ಷದ ರಘುವಿನ ಮೊದಲ ದಿನ - ಕಪ್ಪು ಹಲಗೆಯ ಮೇಲೆ ಮತ್ತು ಪಠ್ಯಪುಸ್ತಕದಲ್ಲಿ ತಮಿಳಿನಲ್ಲಿ ಬರೆದ ಪದಗಳು ಅವನಿಗೆ ಸಂಪೂರ್ಣವಾಗಿ ಹೊಸತು. ಉತ್ತರ ಪ್ರದೇಶದ ತನ್ನ ತವರು ಗ್ರಾಮವಾದ ನವೋಲಿಯ ಶಾಲೆಯಲ್ಲಿ ಹಿಂದಿ ಅಥವಾ ಭೋಜ್‌ಪುರಿ ಓದುವುದು, ಬರೆಯುವುದು ಮತ್ತು ಮಾತನಾಡುವುದು ಮಾಡುತ್ತಿದ್ದ.

ಈಗವನು ಪುಸ್ತಕದಲ್ಲಿರುವ ಚಿತ್ರಗಳನ್ನು ನೋಡಿಯೇ ಊಹಿಸುತ್ತಿದ್ದಾನೆ. “ಪುಸ್ತಕವು ಪ್ಲಸ್-ಮೈನಸ್ ಚಿಹ್ನೆಯನ್ನು ಹೊಂದಿದ್ದರೆ, ಅದು ಗಣಿತ ಪುಸ್ತಕ; ಎರಡನೆಯ ಪುಸ್ತಕ ವಿಜ್ಞಾನ ಇರಬೇಕು; ಇನ್ನೊಂದು ಪುಸ್ತಕದಲ್ಲಿ ಹೆಂಗಸರು, ಮಕ್ಕಳು, ಮನೆಗಳು ಮತ್ತು ಪರ್ವತಗಳಿವೆ, ” ಎಂದು ಅವನು ಹೇಳುತ್ತಾನೆ.

4ನೇ ತರಗತಿಯಲ್ಲಿ ಎರಡನೇ ಸಾಲಿನ ಬೆಂಚಿನ ಮೇಲೆ ಮೌನವಾಗಿ ಕುಳಿತಿದ್ದಾಗ, ಅವನ ಪಕ್ಕದಲ್ಲಿ ಕುಳಿತಿದ್ದ ಹುಡುಗ ರಘುವಿಗೆ ಒಂದು ಪ್ರಶ್ನೆಯನ್ನು ಕೇಳಿದನು. "ನಂತರ ಎಲ್ಲರೂ ನನ್ನನ್ನು ಸುತ್ತುವರಿದು ತಮಿಳಿನಲ್ಲಿ ಏನೇನೋ ಕೇಳಿದರು. ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಕೊನೆಗೆ ನಾನು 'ಮೇರಾ ನಾಮ್ ರಘು ಹೈ' ಎಂದು ಹೇಳಿದೆ. ಅವರು ನಗಲು ಪ್ರಾರಂಭಿಸಿದರು. ನನಗೆ ಭಯವಾಯಿತು."

ರಘುವಿನ ಪೋಷಕರು 2015ರಲ್ಲಿ ಜಲೌನ್ ಜಿಲ್ಲೆಯ ನಾಡಿಗಾಂವ್ ತಾಲೂಕಿನ ತಮ್ಮ ಗ್ರಾಮವನ್ನು ತೊರೆಯಲು ನಿರ್ಧರಿಸಿದಾಗ, ಅವನು ಚೆನ್ನೈಗೆ ರೈಲಿನಲ್ಲಿ ಹೋಗುವ ದಿನ ನೆಲದ ಮೇಲೆ ಬಿದ್ದು ಅಳುತ್ತಿದ್ದ. ಐದು ವರ್ಷದ ತಮ್ಮ ತಂದೆಯ ಕೈ ಹಿಡಿದು ನಿಂತಿದ್ದ. "ಅವನಿಗೆ ಹೋಗಲು ಇಷ್ಟವಿರಲಿಲ್ಲ. ಅವನು ಹಾಗೆ ಅಳುವುದನ್ನು ನೋಡಿ ನನ್ನ ಹೃದಯ ಒಡೆಯಿತು,” ಎಂದು ಅವರ ತಾಯಿ ಗಾಯತ್ರಿ ಪಾಲ್ ಹೇಳುತ್ತಾರೆ.

ಆದರೆ ರಘುವಿನ ತಂದೆ ತಾಯಿಗೆ ಉದ್ಯೋಗಕ್ಕಾಗಿ ಊರು ಬಿಡುವುದನ್ನು  ಬಿಟ್ಟು ಬೇರೆ ದಾರಿ ಇರಲಿಲ್ಲ. ‘‘ಕೃಷಿಯಿಂದ ಆದಾಯವಿಲ್ಲದಿದ್ದರೆ ಊರು ಬಿಡಬೇಕಾಗುತ್ತದೆ. ಆ ವರ್ಷ ಕೇವಲ ಎರಡು ಕ್ವಿಂಟಾಲ್ ಭಜ್ರಾ ಫಸಲು ಬಂದಿತ್ತು. ಬೆಳೆಗಳಿಗೆ ನೀರಿಲ್ಲ, ಗ್ರಾಮದಲ್ಲಿ ಬೇರೆ ಕೆಲಸವಿಲ್ಲ. ಹಳ್ಳಿಯ ಅರ್ಧದಷ್ಟು ಜನರು ರಾಜ್ಯ ಬಿಟ್ಟು ಹೊರಗೆ ಹೋಗಿದ್ದಾರೆ. ಕೆಲಸ ಸಿಕ್ಕಿದ್ದಲ್ಲೆಲ್ಲಾ ಜನರು ಹೊರಟು ಹೋಗಿದ್ದಾರೆ” ಎಂದು 35 ವರ್ಷದ ಗಾಯತ್ರಿ ಹೇಳುತ್ತಾರೆ. ಅವರು ಮತ್ತು ಅವರ ಪತಿ, 45 ವರ್ಷದ ಮನೀಶ್, ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡಲು ಚೆನ್ನೈಗೆ ತೆರಳಿದರು, ಅಲ್ಲಿ ಅವರ ಗ್ರಾಮದ ಕೆಲವರು ಈಗಾಗಲೇ ಕೆಲಸ ಮಾಡುತ್ತಿದ್ದರು.

Left: When Raghu (standing behind his father Manish Pal) and his brother Sunny, moved with their parents from UP to Chennai to Maharashtra, at each stop, Raghu tried valiantly to go to school. Right: Manish and other migrant workers wait at labour nakas in Alibag every morning for contractors to hire them for daily wages
PHOTO • Jyoti
Left: When Raghu (standing behind his father Manish Pal) and his brother Sunny, moved with their parents from UP to Chennai to Maharashtra, at each stop, Raghu tried valiantly to go to school. Right: Manish and other migrant workers wait at labour nakas in Alibag every morning for contractors to hire them for daily wages
PHOTO • Jyoti

ಎಡ: ರಘು (ಅವನ ತಂದೆ ಮನೀಶ್ ಪಾಲ್ ಹಿಂದೆ ನಿಂತಿದ್ದಾರೆ) ಮತ್ತು ಅವನ ಸಹೋದರ ಸನ್ನಿ ತಮ್ಮ ಹೆತ್ತವರೊಂದಿಗೆ ಯುಪಿಯಿಂದ ಚೆನ್ನೈಗೆ ಮಹಾರಾಷ್ಟ್ರಕ್ಕೆ ಸ್ಥಳಾಂತರಗೊಂಡಾಗ, ಪ್ರತಿ ನಿಲುಗಡೆಯಲ್ಲಿ, ರಘು ಧೈರ್ಯದಿಂದ ಶಾಲೆಗೆ ಹೋಗಲು ಪ್ರಯತ್ನಿಸಿದನು. ಬಲ: ಮನೀಶ್ ಮತ್ತು ಇತರ ವಲಸೆ ಕಾರ್ಮಿಕರು ಪ್ರತಿದಿನ ಬೆಳಿಗ್ಗೆ ಅಲಿಬಾಗ್‌ ಕಾರ್ಮಿಕ ನಾಕಾಗಳಲ್ಲಿ ದಿನಗೂಲಿ ಗಳಿಸಲು ಗುತ್ತಿಗೆದಾರರಿಗಾಗಿ ಕಾಯುತ್ತಾರೆ

ರಘು ಸಂಪೂರ್ಣವಾಗಿ ಹೊಸದಾದ ನಗರದಲ್ಲಿ, ಮನೆಯನ್ನು ನೆನೆದು ಕೊರಗತೊಡಗಿದ. "ನಾನು ಹಳ್ಳಿಯಲ್ಲಿ ನನ್ನ ಸ್ನೇಹಿತರೊಂದಿಗೆ ಕ್ರಿಕೆಟ್, ಗಿಲ್ಲಿ ದಾಂಡು, ಕಬಡ್ಡಿ ಆಡುತ್ತಿದ್ದೆ. ನಾವು ಮರಗಳನ್ನು ಏರುತ್ತಿದ್ದೆವು ಮತ್ತು ಮಾವಿನ ಹಣ್ಣುಗಳನ್ನು ತಿನ್ನುತ್ತಿದ್ದೆವು" ಎಂದು ಅವನು ನೆನಪಿಸಿಕೊಳ್ಳುತ್ತಾನೆ. ಉತ್ತರ ಚೆನ್ನೈನ ರಾಯಪುರಂ ಪ್ರದೇಶದಲ್ಲಿ, ಅಂಗಳ ಮತ್ತು ಎರಡು ಎತ್ತುಗಳನ್ನು ಹೊಂದಿರುವ ಅವರ ಎರಡು ಅಂತಸ್ತಿನ ಮನೆಯ ಬದಲು, ತಗಡಿನ ಶೀಟಿನ ಕೋಣೆ ಇತ್ತು. ಬೇವು, ನೇರಳೆ ಮತ್ತು ಮಾವಿನ ಮರಗಳ ಬದಲಿಗೆ, ನಿರ್ಮಾಣ ಹಂತದಲ್ಲಿರುವ ವಸತಿ ಕಟ್ಟಡದ ಬೃಹತ್ ಅಟ್ಟಣಿಗೆ, ಸಿಮೆಂಟ್ ಮತ್ತು ಜೆಸಿಬಿ ಯಂತ್ರಗಳ ರಾಶಿಗಳು – ಇದು ಅವನ ಪೋಷಕರು ದಿನಕ್ಕೆ 350 ರೂ.ಗಳಿಗೆ ಕೆಲಸ ಮಾಡುತ್ತಿದ್ದ ಸೈಟ್.

ಆಗಲೇ ಈ ಬದಲಾವಣೆಗಳೊಂದಿಗೆ ಹೆಣಗಾಡುತ್ತಿದ್ದ ರಘುವಿಗೆ ಬಹುಶಃ ಎದುರಾದ ದೊಡ್ಡ ಬದಲಾವಣೆಯೆಂದರೆ ಹೊಸ ಶಾಲೆ. ಅವನಿಗೆ ಅಲ್ಲಿ ಭಾಷೆ ಅರ್ಥವಾಗಲಿಲ್ಲ ಮತ್ತು ಯಾವುದೇ ಸ್ನೇಹಿತರಿರಲಿಲ್ಲ, ಆದರೆ ಶಾಲೆಯಲ್ಲಿ ಅವನು ಬಿಹಾರದ ಇತರ ಇಬ್ಬರು ವಲಸಿಗ ಹುಡುಗರ ಪಕ್ಕದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದನು. ಕೇವಲ ಮೂರು ವಾರಗಳ ಕಾಲ ಚೆನ್ನೈ ಶಾಲೆಯಲ್ಲಿ ಓದಿದ ನಂತರ, ಅವನು ಒಂದು ದಿನ ಅಳುತ್ತಾ ಮನೆಗೆ ಮರಳಿದ ಎಂದು ಗಾಯತ್ರಿ ನೆನಪಿಸಿಕೊಳ್ಳುತ್ತಾರೆ. "ಅವನು ಇನ್ನು ಮುಂದೆ ಶಾಲೆಗೆ ಹೋಗಲು ಬಯಸುವುದಿಲ್ಲ ಎಂದು ಹೇಳಿದ. ಅಲ್ಲಿ ಅವನಿಗೆ ಏನೂ ಅರ್ಥವಾಗಲಿಲ್ಲ ಮತ್ತು ಎಲ್ಲರೂ ಅವನೊಂದಿಗೆ ಕೋಪದಿಂದ ಮಾತನಾಡುತ್ತಾರೆ ಎಂದು ಭಾವಿಸಿದ. ಆದ್ದರಿಂದ ನಾವು ಅವನನ್ನು ಒತ್ತಾಯಿಸಲಿಲ್ಲ."

ಇತರ ಪೋಷಕರಂತೆ ಟ್ಯೂಷನ್ ತರಗತಿಗಳನ್ನು ಭರಿಸಲು ಅಥವಾ ತಮ್ಮ ಮಕ್ಕಳಿಗೆ ಮನೆಕೆಲಸದಲ್ಲಿ ಸಹಾಯ ಮಾಡಲು ಗಾಯತ್ರಿ ಮತ್ತು ಮನೀಶ್ ರಘುವಿಗೆ ಸಾಧ್ಯವಿರಲಿಲ್ಲ. ಮನೀಶ್ ಕೇವಲ 4ನೇ ತರಗತಿಯವರೆಗೆ ಓದಿದ್ದರೆ, ಗಾಯತ್ರಿ ಒಂದು ವರ್ಷದ ಹಿಂದೆ ಹಿಂದಿಯಲ್ಲಿ ತನ್ನ ಹೆಸರನ್ನು ಹೇಗೆ ಬರೆಯಬೇಕೆಂದು ಕಲಿತರು - ರಘು ಅವರಿಗೆ ಕಲಿಸಿದ. ಅವರು ತನ್ನ ಬಾಲ್ಯದಲ್ಲಿ ಎಮ್ಮೆಗಳನ್ನು ಮೇಯಿಸುತ್ತಾ ಮತ್ತು ನಾಲ್ಕು ತಮ್ಮಂದಿರೊಡನೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. "ಅವನನ್ನು ಶಾಲೆಗೆ ಕಳುಹಿಸುವುದೇ ಕಷ್ಟ, ಹೀಗಿರುವಾಗ ಹೆಚ್ಚುವರಿ ಟ್ಯೂಷನ್ನುಗಳಿಗೆ ನಾವು ಹೇಗೆ ಹಣವನ್ನು ಒಟ್ಟುಗೂಡಿಸುವುದು?" ಎಂದು ಅವರು ಕೇಳುತ್ತಾರೆ.

ಚೆನ್ನೈ ಶಾಲೆಯಿಂದ ಹೊರಬಿದ್ದ ನಂತರ, ರಘು ತನ್ನ ಪೋಷಕರು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವುದನ್ನು ಮತ್ತು ಶಿಶುವಿಹಾರದಲ್ಲಿ ಸಹ ದಾಖಲಾಗದ ಸನ್ನಿಯನ್ನು ನೋಡಿಕೊಳ್ಳುವುದರಲ್ಲಿ ಮೂರು ವರ್ಷಗಳನ್ನು ಕಳೆದನು. ಕೆಲವೊಮ್ಮೆ, ಅವನು ತನ್ನ ತಾಯಿಯೊಂದಿಗೆ ಅಡುಗೆ ಒಲೆ ಉರುವಲಿಗಾಗಿ, ಪ್ಲಾಸ್ಟಿಕ್ ಮತ್ತು ಕಾಗದವನ್ನು ಸಂಗ್ರಹಿಸಲು ಹೋಗುತ್ತಿದ್ದನು.

ಶಾಲೆಗೆ ಹೋಗಲಾಗದ, ಪೋಷಕರು ಬಳಿಯಲ್ಲಿ ಇಲ್ಲದ ರಘು ಮತ್ತು ಸನ್ನಿಯಂತಹ ಮಕ್ಕಳ ನಿರ್ವಹಣೆ, ಶಾಲೆ, ಸುರಕ್ಷತೆ ಮತ್ತು ಆರೋಗ್ಯದ ಸಲುವಾಗಿ ಕಟ್ಟಡದ ಮಾಲೀಕರು ಯಾವುದೇ ವ್ಯವಸ್ಥೆ ಮಾಡಲಿಲ್ಲ. 2011ರ ಯುನಿಸೆಫ್- ಐಸಿಎಸ್‌ಎಸ್‌ಆರ್ ಕಾರ್ಯಾಗಾರದ ವರದಿಯ ಪ್ರಕಾರ , ಭಾರತದಲ್ಲಿ 40 ಮಿಲಿಯನ್ ವಲಸಿಗರು ಅಂತಹ ನಿರ್ಮಾಣ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.

Left: The zilla parishad school in Vaishet that Raghu and Sunny attend, where half of the students are children of migrant parents. Right: At the government-aided Sudhagad Education Society in Kurul village, students learn Marathi by drawing pictures and describing what they see
PHOTO • Jyoti
Left: The zilla parishad school in Vaishet that Raghu and Sunny attend, where half of the students are children of migrant parents. Right: At the government-aided Sudhagad Education Society in Kurul village, students learn Marathi by drawing pictures and describing what they see
PHOTO • Jyoti

ಎಡ: ರಘು ಮತ್ತು ಸನ್ನಿ ಹಾಜರಾಗುವ ವೈಶೇತ್‌ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ವಲಸೆ ಪೋಷಕರ ಮಕ್ಕಳಾಗಿದ್ದಾರೆ. ಬಲ: ಕುರುಲ್ ಗ್ರಾಮದ ಸರ್ಕಾರಿ-ಅನುದಾನಿತ ಸುಧಾಗಡ್ ಎಜುಕೇಶನ್ ಸೊಸೈಟಿಯಲ್ಲಿ, ವಿದ್ಯಾರ್ಥಿಗಳು ಚಿತ್ರಗಳನ್ನು ಬಿಡಿಸುವ ಮೂಲಕ ಮತ್ತು ತಾವು ನೋಡಿದ್ದನ್ನು ವಿವರಿಸುವ ಮೂಲಕ ಮರಾಠಿ ಕಲಿಯುತ್ತಾರೆ

ಮತ್ತು ಈ ಇಬ್ಬರು ಅಣ್ಣತಮ್ಮಂದಿರಂತೆ, ಭಾರತದಾದ್ಯಂತ, ಸ್ವತಂತ್ರವಾಗಿ ಅಥವಾ ತಮ್ಮ ಹೆತ್ತವರೊಂದಿಗೆ ವಲಸೆ ಹೋಗುವ 15 ಮಿಲಿಯನ್ ಮಕ್ಕಳು ಸ್ಥಿರ ಶಿಕ್ಷಣ ಅಥವಾ ಯಾವುದೇ ರೀತಿಯ ಶಿಕ್ಷಣವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಹೇಳುತ್ತದೆ. "ಕಾಲಕ್ಕೆ ತಕ್ಕಂತೆ ಹೋಗುವ, ಆವರ್ತಕ ಮತ್ತು ತಾತ್ಕಾಲಿಕ ವಲಸೆಗಳು ಮಕ್ಕಳ ಶಿಕ್ಷಣದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಮಕ್ಕಳು ಶಾಲಾ ಶಿಕ್ಷಣವನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ ಮತ್ತು ಇದರಿಂದಾಗಿ ಕಲಿಕೆಯ ಕೊರತೆಯಿಂದ ಬಳಲುತ್ತಿದ್ದಾರೆ... ವಲಸೆ ಕಾರ್ಮಿಕರ ಮೂರನೇ ಒಂದು ಭಾಗದಷ್ಟು ಮಕ್ಕಳು [ತಮ್ಮ ಹೆತ್ತವರೊಂದಿಗೆ ಸ್ಥಳಾಂತರಗೊಳ್ಳುತ್ತಾರೆ ಮತ್ತು ಕುಟುಂಬದೊಂದಿಗೆ ಇತರರೊಡನೆ ಹಳ್ಳಿಯಲ್ಲಿ ಉಳಿಯುವುದಿಲ್ಲ] ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ" ಎಂದು ವರದಿ ಉಲ್ಲೇಖಿಸಿದೆ.

ಮತ್ತು ಪೋಷಕರು ಕೆಲಸವನ್ನು ಹುಡುಕುತ್ತಾ ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಗೊಂಡಾಗ, ರಘುವಿನಂತಹ ಮಕ್ಕಳಿಗೆ ಅಧ್ಯಯನದ ಅಡೆತಡೆಗಳು ಹೆಚ್ಚಾಗುತ್ತವೆ. ಚೆನ್ನೈನ ನಿರ್ಮಾಣ ಸ್ಥಳದಲ್ಲಿ ಕೆಲಸ ಮುಗಿದ ನಂತರ, ಮಾರ್ಚ್ 2018ರಲ್ಲಿ, ಮನೀಶ್ ಮತ್ತು ಗಾಯತ್ರಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ತಾಲೂಕಿಗೆ ಸ್ಥಳಾಂತರಗೊಂಡರು, ಅಲ್ಲಿ ಅವರ ಸಂಬಂಧಿಕರೊಬ್ಬರು ಎರಡು ವರ್ಷಗಳಿಂದ ವಾಸಿಸುತ್ತಿದ್ದರು.

ಮನೀಶ್ ಅಲ್ಲಿಯೂ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ, ಗಾಯತ್ರಿ ನಿರಂತರ ಬೆನ್ನುನೋವಿನಿಂದಾಗಿ ಕೆಲಸ್ಕಕೆ ಹೋಗುವುದನ್ನು ನಿಲ್ಲಿಸಿದರು, ಮತ್ತು ಈಗ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ. ಮನೀಶ್ ಅಲಿಬಾಗ್ ಪಟ್ಟಣದ ಮಹಾವೀರ್ ಚೌಕದಲ್ಲಿರುವ ಲೇಬರ್ ನಾಕಾದಲ್ಲಿ ಕಾರ್ಮಿಕ ಗುತ್ತಿಗೆದಾರರಿಗಾಗಿ ಕಾಯುತ್ತ ನಿಂತಿರುತ್ತಾರೆ ಮತ್ತು ತಿಂಗಳಲ್ಲಿ ಸುಮಾರು 25 ದಿನಗಳವರೆಗೆ ದಿನಕ್ಕೆ 400 ರೂ.ಗಳನ್ನು ಗಳಿಸುತ್ತಾರೆ. "ಕೆಲವೊಮ್ಮೆ ಯಾರೂ ನನ್ನನ್ನು ಕೆಲಸಕ್ಕೆ ಕರೆದೊಯ್ಯದಿದ್ದಾಗ 4-5 ದಿನಗಳು ಕೆಲಸವಿಲ್ಲದೆ ಕಳೆಯುತ್ತವೆ.  ಆ ದಿನಗಳಲ್ಲಿ ಯಾವುದೇ ಆದಾಯವಿರುವುದಿಲ್ಲ" ಎಂದು ಅವರು ಹೇಳುತ್ತಾರೆ.

ಅಲಿಬಾಗ್‌ಗೆ ಸ್ಥಳಾಂತರವಾದ ನಂತರ, ರಘುವಿಗೆ ಮತ್ತೊಂದು ಹೋರಾಟ ಪ್ರಾರಂಭವಾಯಿತು - ಅವನು ಈಗ ಮರಾಠಿಯಲ್ಲಿ ಬರೆದ ಪಠ್ಯಪುಸ್ತಕಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿತ್ತು, ಮತ್ತೊಂದು ಹೊಸ ಶಾಲೆಗೆ ಹಾಜರಾಗಬೇಕಾಗಿತ್ತು ಮತ್ತು ಹೊಸ ಸ್ನೇಹಿತರನ್ನು ಸಂಪಾದಿಸಲು ಪ್ರಯತ್ನಿಸಬೇಕಾಗಿತ್ತು. ನೆರೆಹೊರೆಯ ಹುಡುಗನ 4 ನೇ ತರಗತಿಯ ಭೂಗೋಳಶಾಸ್ತ್ರದ ಪಠ್ಯಪುಸ್ತಕವನ್ನು ಮರಾಠಿಯಲ್ಲಿ ನೋಡಿದಾಗ, ಅವನಿಗೆ ದೇವನಾಗರಿ ಲಿಪಿಯನ್ನು ಓದಲು ಸಾಧ್ಯವಾಗಲಿಲ್ಲ. ಮೂರು ವರ್ಷಗಳ ಕಾಲ ಯಾವುದೇ ಶಾಲೆ ಇಲ್ಲದೆ ಕಳೆದ ಕಾರಣ ಅವನು ಸಾಕಷ್ಟು ಕಲಿಯುವುದಿತ್ತು. ಆದರೂ, ಅವನು ಜುಲೈ 2018ರ ಮಧ್ಯಭಾಗದಲ್ಲಿ ಮತ್ತೆ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದ. ಆಗ ಅವನಿಗೆ 11 ವರ್ಷ ಮತ್ತು ತನಗಿಂತ ಚಿಕ್ಕ ಮಕ್ಕಳೊಂದಿಗೆ 4ನೇ ತರಗತಿಗೆ ಸೇರಿದ್ದ,

"ಮರಾಠಿ ಅಕ್ಷರಗಳು ಹಿಂದಿಯಂತೆಯೇ ಇರುತ್ತವೆ, ಆದರೆ ಸ್ವಲ್ಪ ಬೇರೆ ರೀತಿಯಲ್ಲಿ ಬರೆಯಲಾಗುತ್ತದೆ ಎನ್ನುವುದನ್ನು ನಾನು ಮರೆತಿದ್ದೆ," ಎಂದು ಅವನು ಹೇಳುತ್ತಾನೆ. ಸುರೇಶ್ [ನೆರೆಹೊರೆಯ ಸ್ನೇಹಿತ] ನನಗೆ ಮರಾಠಿ ಓದುವುದು ಮತ್ತು ಪದಗಳ ಅರ್ಥವನ್ನೂ ಕಲಿಸಿದ. ಆಗ ನಿಧಾನವಾಗಿ ನನಗೆ ಹೊಳೆಯಿತು.”

Students at the Sudhagad school draw pictures like these and write sentences in Bhojpuri or Hindi, as well as in Marathi. The exercise helps them memorise new words
PHOTO • Jyoti
Students at the Sudhagad school draw pictures like these and write sentences in Bhojpuri or Hindi, as well as in Marathi. The exercise helps them memorise new words
PHOTO • Jyoti

ಸುಧಾಗಡ್ ಶಾಲೆಯ ವಿದ್ಯಾರ್ಥಿಗಳು ಈ ರೀತಿಯ ಚಿತ್ರಗಳನ್ನು ಬಿಡಿಸುತ್ತಾರೆ ಮತ್ತು ಭೋಜ್ ಪುರಿ ಅಥವಾ ಹಿಂದಿ ಮತ್ತು ಮರಾಠಿಯಲ್ಲಿ ವಾಕ್ಯಗಳನ್ನು ಬರೆಯುತ್ತಾರೆ. ಹೊಸ ಪದಗಳನ್ನು ನೆನಪಿಟ್ಟುಕೊಳ್ಳಲು ಈ ಪದ್ಧತಿ ಅವರಿಗೆ ಸಹಾಯ ಮಾಡುತ್ತದೆ

ರಘು ವೈಶೇಟ್ ಗ್ರಾಮದ ಜಿಲ್ಲಾ ಪರಿಷತ್ (ZP) ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. 1ರಿಂದ 10ನೇ ತರಗತಿವರೆಗಿನ ಈ ಶಾಲೆಯ 400 ವಿದ್ಯಾರ್ಥಿಗಳ ಪೈಕಿ ಸುಮಾರು 200 ಮಂದಿ ವಲಸೆ ಬಂದಿರುವ ಪೋಷಕರ ಮಕ್ಕಳು ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕಿ ಸ್ವಾತಿ ಗಾವಡೆ. ಇಲ್ಲಿ, ರಘು ಬಿಹಾರ ಮತ್ತು ಉತ್ತರ ಪ್ರದೇಶದ ಇತರ ಮಕ್ಕಳನ್ನು ಭೇಟಿಯಾದನು. ಅವನು ಈಗ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ ಮತ್ತು ಮರಾಠಿಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಬಲ್ಲ. ಸನ್ನಿಯನ್ನು ಸಹ ಆಕೆಯ ಪೋಷಕರು ಶಾಲೆಗೆ ಸೇರಿಸಿದ್ದಾರೆ ಮತ್ತು ಈಗ ಅವಳು 3ನೇ ತರಗತಿಯಲ್ಲಿದ್ದಾಳೆ.

ಅಲಿಬಾಗ್ ಅಭಿವೃದ್ಧಿ ಹೊಂದುತ್ತಿರುವ ಕರಾವಳಿ ಪಟ್ಟಣವಾಗಿದ್ದು, ಮುಂಬೈ ನಗರದಿಂದ ಸುಮಾರು 122 ಕಿಮೀ ದೂರದಲ್ಲಿದೆ. ಕಳೆದ ಎರಡು ದಶಕಗಳಿಂದ, ಇಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರವು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬರುವ ಅನೇಕ ವಲಸೆ ಕಾರ್ಮಿಕರನ್ನು ಆಕರ್ಷಿಸಿದೆ. ಇವರ ಮಕ್ಕಳು ಸಾಮಾನ್ಯವಾಗಿ ತಾಲೂಕಿನ ಜಿಲ್ಲಾ ಪರಿಷತ್ ಅಥವಾ ಸರಕಾರಿ ಅನುದಾನಿತ ಮರಾಠಿ ಮಾಧ್ಯಮ ಶಾಲೆಗಳಲ್ಲಿ ಓದುತ್ತಾರೆ.

ಪರಿವರ್ತನೆಯನ್ನು ಸುಲಭಗೊಳಿಸಲು, ಕೆಲವು ಶಿಕ್ಷಕರು ಆರಂಭದಲ್ಲಿ ವಲಸೆ ವಿದ್ಯಾರ್ಥಿಗಳೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸುತ್ತಾರೆ ಎಂದು ಗಾವಡೆ ವಿವರಿಸುತ್ತಾರೆ. “ಅಲಿಬಾಗ್‌ನಲ್ಲಿರುವ ಜಿಲ್ಲಾ ಪರಿಷತ್ ಶಾಲೆಗಳು ವಲಸೆ ಕುಟುಂಬಗಳ ಅನೇಕ ವಿದ್ಯಾರ್ಥಿಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಮಗುವಿಗೆ ತುಂಬಾ ಕಷ್ಟಕರವಾಗಿದೆ. ಶಿಕ್ಷಕರಾಗಿ, ನಾವು ಈ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಾವು ನಮ್ಮ ಭಾಷೆಯನ್ನು ಕೆಲವು ದಿನಗಳವರೆಗೆ ಬದಲಾಯಿಸಬಹುದು. ಮಕ್ಕಳು ಹೊಸ ವಿಷಯಗಳನ್ನು ವೇಗವಾಗಿ ಕಲಿಯುತ್ತಾರೆ, ಆದರೆ ಇದಕ್ಕಾಗಿ ಶಿಕ್ಷಕರು ಮೊದಲು ಪ್ರಯತ್ನಗಳನ್ನು ಮಾಡಬೇಕು."

ವೈಶೇಟ್‌ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕುರುಲ್ ಗ್ರಾಮದ ಸರ್ಕಾರಿ ಅನುದಾನಿತ ಶಾಲೆಯಾದ ಸುಧಾಗಡ ಎಜುಕೇಶನ್ ಸೊಸೈಟಿಯಲ್ಲಿ 5ನೇ ತರಗತಿಯಲ್ಲಿ ಮರಾಠಿ ಭಾಷಾ ತರಗತಿ ನಡೆಯುತ್ತಿತ್ತು. ಶಿಕ್ಷಕಿ ಮಾನ್ಸಿ ಪಾಟೀಲ್ ಅವರು ಪ್ರತಿ ಮಗುವಿಗೆ ತರಗತಿಯ ಮೊದಲು ಕೆಲವು ನಿಮಿಷಗಳ ಕಾಲ ಮಾತನಾಡಲು ಹೇಳಿದರು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಿದರು. ಈಗ 10 ವರ್ಷದ ಸತ್ಯಂ ನಿಶಾದ್ ಸರದಿ: “ನಮ್ಮ ಹಳ್ಳಿಯಲ್ಲಿ ಜನರು ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ನಮಗೂ ಭೂಮಿಯಿದೆ. ಮಳೆ ಬಂದಾಗ, ಅವರು ಬೀಜಗಳನ್ನು ಬಿತ್ತುತ್ತಾರೆ, ನಂತರ ಕೆಲವು ತಿಂಗಳ ನಂತರ ಕೊಯ್ಲು ಮಾಡುತ್ತಾರೆ. ಅವರು ಕಾಂಡದಿಂದ ಧಾನ್ಯವನ್ನು ಬೇರ್ಪಡಿಸುತ್ತಾರೆ. ನಂತರ ಅದನ್ನು ಗೋಣಿಚೀಲಗಳಲ್ಲಿ ಹಾಕಿ ಮನೆಯಲ್ಲಿಡುತ್ತಾರೆ. ಅಗತ್ಯ ಬಿದ್ದಾಗ ಅದನ್ನು ಹಿಟ್ಟು ಮಾಡಿಸಿ ರೊಟ್ಟಿ ತಯಾರಿಸುತ್ತಾರೆ. ತರಗತಿಯಲ್ಲಿ ಹಾಜರಿದ್ದ 22 ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು.

"ಸತ್ಯಮ್ ಮೊದಲು ಬಹಳ ದುಃಖಿತನಾಗಿರುತ್ತಿದ್ದ ಮತ್ತು ಯಾರೊಂದಿಗೂ ಮಾತನಾಡುತ್ತಿರಲಿಲ್ಲ" ಎಂದು ಪಾಟೀಲ್ ಹೇಳುತ್ತಾರೆ. "ಮಗುವಿಗೆ ಮೂಲಭೂತ ಅಂಶಗಳನ್ನು ಕಲಿಸುವುದು, ವರ್ಣಮಾಲೆಗಳ ಪರಿಚಯದಿಂದ ಪ್ರಾರಂಭಿಸಿದಾಗ, ಶಿಕ್ಷಕರು ಮತ್ತು ಇತರ ಮಕ್ಕಳೊಂದಿಗೆ ಮಾತನಾಡಲು ಅವರಲ್ಲಿ ಸ್ವಲ್ಪ ವಿಶ್ವಾಸವನ್ನು ನಿರ್ಮಿಸುತ್ತದೆ. ಅವರು ಎಂದಿಗೂ ಕೇಳಿರದ ಭಾಷೆಯ ದೀರ್ಘ ವಾಕ್ಯಗಳೊಂದಿಗೆ ನೀವು ಅವರನ್ನು ಒಂದೇ ಸಲ ಬುದ್ಧಿವಂತರನ್ನಾಗಿಸಲು ಸಾಧ್ಯವಿಲ್ಲ. ನೀವು ಅವರೊಂದಿಗೆ ಮೃದುವಾಗಿ ವರ್ತಿಸಬೇಕು.”

PHOTO • Jyoti

ಮೇಲಿನ ಸಾಲು: 2017ರಲ್ಲಿ ಸತ್ಯಂ ನಿಸಾದ್ ಕುಟುಂಬವು ಉತ್ತರ ಪ್ರದೇಶದಿಂದ ವಲಸೆ ಬಂದ ನಂತರ, ಅವನನ್ನು ಸುಧಾಗಡ ಶಾಲೆಗೆ ದಾಖಲಿಸಲಾಯಿತು, ಅಲ್ಲಿ 270 ವಿದ್ಯಾರ್ಥಿಗಳಲ್ಲಿ 178 ವಲಸೆ ಮಕ್ಕಳಿದ್ದಾರೆ. ಕೆಳಗಿನ ಸಾಲು: ಸತ್ಯಂ ಪೋಷಕರು, ಆರತಿ ನಿಸಾದ್ ಮತ್ತು ಬ್ರಿಜ್ ಮೋಹನ್ ನಿಸಾದ್, ಅವರು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. ಊರಿನಲ್ಲಿ ಕುಟುಂಬದ ಒಂದು ಎಕರೆ ಕೃಷಿ ಭೂಮಿಯಲ್ಲಿ ಸಜ್ಜೆಯನ್ನು ಬೆಳೆಯುತ್ತಿದ್ದರು

ಸತ್ಯಂ (ಮೇಲಿನ ಕವರ್ ಫೋಟೋದ ಮುಂಭಾಗದಲ್ಲಿ) 2017ರಲ್ಲಿ ತನ್ನ ಹೆತ್ತವರೊಂದಿಗೆ ಅಲಿಬಾಗಿಗೆ ಬಂದನು. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರಾಂಪುರ ದುಲ್ಲಾ ಎಂಬ ತನ್ನ ಹಳ್ಳಿಯಿಂದ ಬಂದ ಅವನಿಗೆ ಇದು ಒಂದು ಪ್ರಮುಖ ಬದಲಾವಣೆಯಾಗಿತ್ತು. ಆಗ ಅವನಿಗೆ ಕೇವಲ ಎಂಟು ವರ್ಷ ಮತ್ತು 3ನೇ ತರಗತಿಯಲ್ಲಿದ್ದ, ಹಿಂದಿ ಮಾಧ್ಯಮ ಶಾಲೆಗೆ ಹೋಗಿ ಮನೆಯಲ್ಲಿ ಭೋಜ್ ಪುರಿಯಲ್ಲಿ ಮಾತನಾಡುತ್ತಿದ್ದ ಸತ್ಯಂ ಇಲ್ಲಿ ಮರಾಠಿಗೆ ಒಗ್ಗಿಕೊಳ್ಳಬೇಕಾಯಿತು. "ನಾನು ಮೊದಲ ಬಾರಿಗೆ ಮರಾಠಿಯನ್ನು ನೋಡಿದಾಗ, ಅದು ತಪ್ಪು ಹಿಂದಿ ಎಂದು ನನ್ನ ಪೋಷಕರಿಗೆ ಹೇಳಿದೆ. ಕೊನೆಯಲ್ಲಿ ಯಾವುದೇ ದಂಡವಿರಲಿಲ್ಲ ಅದರಲ್ಲಿ... ನನಗೆ ಅಕ್ಷರಗಳನ್ನು ಓದಲು ಸಾಧ್ಯವಾಯಿತು ಆದರೆ ಇಡೀ ಪದದ ಅರ್ಥವನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಸತ್ಯಂ ಹೇಳುತ್ತಾನೆ.

"ನಮ್ಮ ಮಕ್ಕಳು ಮರಾಠಿ ಮಾಧ್ಯಮ ಶಾಲೆಗಳಿಗೆ ಹೋಗಬೇಕು. ಇಂಗ್ಲಿಷ್ ಶಾಲೆಗಳಲ್ಲಿ ಶುಲ್ಕ ಹೆಚ್ಚಿರುತ್ತದೆ. ನಮ್ಮಿಂದ ಅದನ್ನು ಭರಿಸಲು ಸಾಧ್ಯವಿಲ್ಲ," ಎಂದು ಕುಟುಂಬದ 100 ಚದರ ಅಡಿ ಬಾಡಿಗೆ ಕೋಣೆಯಲ್ಲಿ ಕುಳಿತಿರುವ ಸತ್ಯಂನ ತಾಯಿ 35 ವರ್ಷದ ಆರತಿ ಹೇಳುತ್ತಾರೆ. ಆರತಿ ಸ್ವತಃ ಕೇವಲ 2 ನೇ ತರಗತಿಯವರೆಗೆ ಓದಿದ್ದಾಳೆ; ಅವರು ರಾಂಪುರ್ ದುಲ್ಲಾದಲ್ಲಿನ ಕುಟುಂಬದ ಒಂದು ಎಕರೆ ಜಮೀನಿನಲ್ಲಿ ಸಜ್ಜೆ ಬೆಳೆಯುವ ಗೃಹಿಣಿ ಮತ್ತು ರೈತ ಮಹಿಳೆ. ಅವರ ಪತಿ, 42 ವರ್ಷದ ಬ್ರಿಜ್ ಮೋಹನ್ ನಿಸಾದ್ ಸಹ ಹೊಲದಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಕಳಪೆ ನೀರಾವರಿಯಿಂದಾಗಿ ಪದೇ ಪದೇ ಬೆಳೆ ವೈಫಲ್ಯದ ನಂತರ, ಅವರು ಕೆಲಸವನ್ನು ಹುಡುಕುತ್ತಾ ಗ್ರಾಮವನ್ನು ತೊರೆದರು.

ಈಗ, ಕಟ್ಟಡ ಕಾರ್ಮಿಕರಾಗಿ ತಿಂಗಳ 25 ದಿನಗಳವರೆಗೆ 500 ರೂ.ಗಳ ದಿನಗೂಲಿಯನ್ನು ಪಡೆಯುತ್ತಾರೆ. ಆ ಆದಾಯವು ಐದು ಜನರ ಅವರ ಕುಟುಂಬದ ವೆಚ್ಚಗಳನ್ನು ಭರಿಸಬೇಕಾಗುತ್ತದೆ (ಇಬ್ಬರು ಹೆಣ್ಣುಮಕ್ಕಳು - ಸಾಧನಾ,7, ಮತ್ತು ಸಂಜನಾ, 6, ಅವರು ಸತ್ಯಂ ಹೋಗುವ ಶಾಲೆಯಲ್ಲಿಯೇ ಓದುತ್ತಾರೆ). ಮತ್ತು ಅವರು ಪ್ರತಿ ತಿಂಗಳು 5,000 ರೂ.ಗಳನ್ನು ತಮ್ಮ ಹಳ್ಳಿಯಲ್ಲಿರುವ ತನ್ನ ವಯಸ್ಸಾದ ಹೆತ್ತವರಿಗೆ ಕಳುಹಿಸುತ್ತಾರೆ.

ಕುರುಲ್‌ನ ತಮ್ಮ ಮನೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಸಸವಾನೆ ಎನ್ನುವ ಹಳ್ಳಿಯಲ್ಲಿ, ಸುಡುವ ಬಿಸಿಲಿನಲ್ಲಿ ಒಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಬ್ರಿಜ್ ಮೋಹನ್ ನನಗೆ ಹೇಳುತ್ತಾರೆ, "ನನ್ನ ಮಕ್ಕಳು ನಾನು ಮಾಡುವ ಕಠಿಣ ದುಡಿಮೆಯನ್ನು ಮಾಡುವುದನ್ನು ನಾನು ಬಯಸುವುದಿಲ್ಲ. ಅವರು ಓದಬೇಕೆಂದು ಬಯಸುತ್ತೇನೆ. ಈ ಎಲ್ಲಾ ಪ್ರಯತ್ನಗಳು ಅವರಿಗಾಗಿಯೇ."

ಸತ್ಯಂನಂತೆಯೇ ಖುಷಿ ರಾಹಿದಾಸ್ ಕೂಡ ಭಾಷೆಯ ಬದಲಾವಣೆಗೆ ಒದ್ದಾಡುತ್ತಿದ್ದಳು. "ನಾನು ನನ್ನ ಹಳ್ಳಿಯ ಶಾಲೆಯಲ್ಲಿ ಭೋಜ್‌ಪುರಿ ಕಲಿಯುತ್ತಿದ್ದೆ" ಎಂದು ಸುಧಾಗಡದ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಹೇಳುತ್ತಾಳೆ. “ನನಗೆ ಮರಾಠಿ ಅರ್ಥವಾಗುತ್ತಿರಲಿಲ್ಲ ಮತ್ತು ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ವರ್ಣಮಾಲೆಯು ಹಿಂದಿಯನ್ನು ಹೋಲುತ್ತದೆ ಆದರೆ ಭಿನ್ನವಾಗಿ ಧ್ವನಿಸುತ್ತದೆ. ಕೊನೆಗೆ ನಾನು ಅದನ್ನು ಕಲಿತೆ. ಈಗ ನಾನು ಶಿಕ್ಷಕಿಯಾಗಲು ಬಯಸುತ್ತೇನೆ."

PHOTO • Jyoti

ಮೇಲಿನ ಎಡ: ಕುರುಲ್‌ನ ಸುಧಾಗಡ ಎಜುಕೇಶನ್ ಸೊಸೈಟಿಯಂತಹ ಕೆಲವು ಶಾಲೆಗಳಲ್ಲಿ, ವಲಸೆ ವಿದ್ಯಾರ್ಥಿಗಳು ಎದುರಿಸುವ ಭಾಷಾ ಸಂಘರ್ಷವನ್ನು ನಿವಾರಿಸಲು ಶಿಕ್ಷಕರು ಪ್ರಯತ್ನಿಸುತ್ತಾರೆ. ಮೇಲಿನ ಬಲ: ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಖುಷಿ ರಾಹಿದಾಸ್ ಇಲ್ಲಿಗೆ ಬಂದಾಗ ಭೋಜ್‌ಪುರಿ ಮಾತನಾಡುತ್ತಿದ್ದಳು. ಕೆಳಗೆ ಎಡ: ಸುಧಾಗಡದ ಶಾಲೆಯಲ್ಲಿ ವಿದ್ಯಾರ್ಥಿಗಳು ಮರಾಠಿ ಪುಸ್ತಕಗಳನ್ನು ಓದುತ್ತಿದ್ದಾರೆ. ಕೆಳಗಿನ ಬಲ: ಮಧ್ಯಾಹ್ನದ ಊಟದ ಸಮಯ, ಈ ಕಾರ್ಯಕ್ರಮವು ಸಾಮಾನ್ಯವಾಗಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ

ಖುಷಿಯ ಕುಟುಂಬ ಉತ್ತರ ಪ್ರದೇಶದ ಉಲಾರ್‌ಪಾರ್ ಗ್ರಾಮದಿಂದ ಅಲಿಬಾಗ್‌ಗೆ ಬಂದಿತ್ತು. ಆಕೆಯ ತಾಯಿ ಇಂದ್ರಮತಿ ಕುರುಲ್ ಗ್ರಾಮದ ತನ್ನ ಮನೆಯ ಸಮೀಪವಿರುವ ಸಣ್ಣ ‌ಹೋಟೆಲ್‌ ಒಂದಕ್ಕೆ 50 ಸಮೋಸಾಗಳನ್ನು ತಯಾರಿಸುವ ಮೂಲಕ ದಿನಕ್ಕೆ 150 ರೂ. ಸಂಪಾದಿಸುತ್ತಾರೆ. ಆಕೆಯ ತಂದೆ ರಾಜೇಂದ್ರ ಅವರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಾರೆ ಮತ್ತು ದಿನಕ್ಕೆ 500 ರೂ. ಆ ಮೂಲಕ ಸಂಪಾದಿಸುತ್ತಾರೆ. “ನಮ್ಮ ಬಳಿ ಸ್ವಂತ ಭೂಮಿಯಿಲ್ಲ, ನಾವು ಇತರರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಗ್ರಾಮದಲ್ಲಿ ಬೇರೆ ಕೆಲಸ ಇಲ್ಲದ ಕಾರಣ ಹಲವು ರೈತರು ಕೆಲಸ ಅರಸಿ ಗ್ರಾಮ ತೊರೆದಿದ್ದಾರೆ. ನಾವು ಅಲಿಬಾಗ್‌ನಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದ್ದೇವೆ. ಈ ಎಲ್ಲ ಪ್ರಯತ್ನಗಳು ಅವರಿಗಾಗಿಯೇ,” ಎಂದು ತನ್ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ತೋರಿಸುತ್ತಾರೆ ಇಂದ್ರಮತಿ.

ಸುಧಾಗಡ ಶಾಲೆಯಲ್ಲಿ ಮರಾಠಿಯೇತರ ವಿದ್ಯಾರ್ಥಿಗಳಾದ ಖುಷಿ ಮತ್ತು ಸತ್ಯಂ ಅವರಂತಹ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಶಿಶುವಿಹಾರದಿಂದ 10ನೇ ತರಗತಿವರೆಗಿನ 270 ವಿದ್ಯಾರ್ಥಿಗಳಲ್ಲಿ 178 ವಿದ್ಯಾರ್ಥಿಗಳು ವಲಸೆ ಬಂದ ಕುಟುಂಬಗಳ ಮಕ್ಕಳಾಗಿದ್ದು, ಪ್ರಾಂಶುಪಾಲರಾದ ಸುಜಾತಾ ಪಾಟೀಲ್ ಅವರು ಹಬ್ಬ, ಗಣರಾಜ್ಯ ಮುಂತಾದ ವಿವಿಧ ವಿಷಯಗಳ ಕುರಿತು ಸಾಪ್ತಾಹಿಕ ಗುಂಪು ಚರ್ಚೆಗಳನ್ನು ಆಯೋಜಿಸುತ್ತಿದ್ದಾರೆ. ಪ್ರಸಿದ್ಧ ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರು, ಹವಾಮಾನ. ಶಿಕ್ಷಕರು ಚಿತ್ರ ಕಾರ್ಡ್‌ಗಳನ್ನು ಬಳಸುತ್ತಾರೆ ಇದರಿಂದ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ನೋಡಿದ್ದನ್ನು ವಿವರಿಸಬಹುದು ಮತ್ತು ನಂತರ ಅವರಿಗೆ ಸಂಬಂಧಿಸಿದ ಪದಗಳನ್ನು ಮರಾಠಿಯಲ್ಲಿ ಹೇಳಬಹುದು ಎನ್ನುವುದು ಇದರ ಹಿಂದಿನ ಯೋಚನೆ. ಚರ್ಚೆಯ ನಂತರ, ವಿದ್ಯಾರ್ಥಿಗಳು ಚಿತ್ರಗಳನ್ನು ಚಿತ್ರಿಸುತ್ತಾರೆ ಮತ್ತು ಭೋಜ್‌ಪುರಿ ಅಥವಾ ಹಿಂದಿ ಮತ್ತು ಮರಾಠಿಯಲ್ಲಿ ವಾಕ್ಯವನ್ನು ಬರೆಯುತ್ತಾರೆ. ಈ ಅಭ್ಯಾಸವು ಪದಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಜೊತೆಗೆ, ಶಾಲೆಯು ಮರಾಠಿ ತಿಳಿದಿರುವ ಮಗುವನ್ನು ಹಿಂದಿ ಅಥವಾ ಭೋಜ್‌ಪುರಿ ಮಾತನಾಡುವ ಮಗುವಿನೊಂದಿಗೆ ಸಂಯೋಜಿಸುತ್ತದೆ. ಈ ಮೂಲಕ 11 ವರ್ಷದ ಸೂರಜ್ ಪ್ರಸಾದ್ ಪ್ರಾಣಿಗಳ ಕಥೆ ಪುಸ್ತಕದಿಂದ ಮರಾಠಿಯಲ್ಲಿ ಒಂದು ವಾಕ್ಯವನ್ನು ಓದುತ್ತಿದ್ದಾನೆ ಮತ್ತು 11 ವರ್ಷದ ಅವನ ಹೊಸ ಸಹಪಾಠಿ ದೇವೇಂದ್ರ ರಾಹಿದಾಸ್ ವಾಕ್ಯವನ್ನು ಪುನರಾವರ್ತಿಸುತ್ತಾನೆ. ಇಬ್ಬರೂ ಹುಡುಗರು ತಮ್ಮ ಪೋಷಕರೊಂದಿಗೆ ಉತ್ತರ ಪ್ರದೇಶದಿಂದ ಅಲಿಬಾಗ್‌ಗೆ ಬಂದಿದ್ದರು - ಸೂರಜ್ 2015ರಲ್ಲಿ ಮತ್ತು ದೇವೇಂದ್ರ 2018ರಲ್ಲಿ.

"ಭಾಷೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ ಮತ್ತು ವಿವಿಧ ಕುಟುಂಬಗಳು ವಿಭಿನ್ನ ಮಾತೃ ಭಾಷೆಗಳನ್ನು ಸಹ ಹೊಂದಿವೆ. ಆದ್ದರಿಂದ ವಲಸೆ ಬಂದ ಮಗುವನ್ನು ಕಲಿಕೆಯ ಮಾಧ್ಯಮವಾಗಿ ಸ್ಥಳೀಯ ಭಾಷೆಯೊಂದಿಗೆ ಆರಾಮದಾಯಕವಾಗಿ ಹೊಂದಿಕೊಳ್ಳುವಂತೆ ಮಾಡುವುದು ಮುಖ್ಯ, ಆಗ ಅವರು ಓದನ್ನು ಮುಂದುವರಿಸಲು ಸಾಧ್ಯವಾಗುತ್ತದೆ," ಎಂದು ಪ್ರಾಂಶುಪಾಲ ಪಾಟೀಲ್ ಹೇಳುತ್ತಾರೆ. ಅಂತಹ ಪ್ರಯತ್ನಗಳು ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಅವರು ನಂಬುತ್ತಾರೆ.

Left: Indramati Rahidas, Khushi’s mother, supplies 50 samosas a day to a small eatery. 'All these efforts are for them,” she says Indramati, pointing to her children. Right: Mothers of some of the migrant children enrolled in the Sudhagad Education Society
PHOTO • Jyoti
Left: Indramati Rahidas, Khushi’s mother, supplies 50 samosas a day to a small eatery. 'All these efforts are for them,” she says Indramati, pointing to her children. Right: Mothers of some of the migrant children enrolled in the Sudhagad Education Society
PHOTO • Jyoti

ಎಡ: ಖುಷಿಯ ತಾಯಿ ಇಂದ್ರಮತಿ ರಹೀದಾಸ್ ಒಂದು ಸಣ್ಣ ಹೋಟೆಲ್‌ ಒಂದಕ್ಕೆ ದಿನಕ್ಕೆ 50 ಸಮೋಸಾಗಳನ್ನು ಪೂರೈಸುತ್ತಾರೆ. ‘ಇವೆಲ್ಲ ಅಲ್ಲಿಗಾಗಿಯೇ’ ಎಂದು ಇಂದ್ರಮತಿ ಮಕ್ಕಳತ್ತ ಕೈತೋರಿಸುತ್ತಾರೆ. ಬಲ: ಸುಧಾಗಡ ಎಜುಕೇಶನ್ ಸೊಸೈಟಿಯಲ್ಲಿ ಓದುತ್ತಿರುವ ಕೆಲವು ವಲಸೆ ಮಕ್ಕಳ ತಾಯಂದಿರು

ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ, ಪರಿಚಯವಿಲ್ಲದ ಭಾಷೆ ಅಥವಾ ಬೋಧನಾ ಮಾಧ್ಯಮವು ವಿದ್ಯಾರ್ಥಿಗಳು  ಶಾಲೆಯಿಂದ ಹೊರಗುಳಿಯಲು ಕಾರಣವಾಗುವ ಸಂಗತಿಗಳಲ್ಲಿ ಒಂದಾಗಿದೆ. ಇದರ ಹೊರತಾಗಿ, ಇತರ ಕಾರಣಗಳಿವೆ- ಹಣಕಾಸಿನ ನಿರ್ಬಂಧಗಳು, ಗುಣಮಟ್ಟ ಮತ್ತು ಶೈಕ್ಷಣಿಕ ಮೂಲಸೌಕರ್ಯ. 2017-18ರ ವರದಿಯು ಭಾರತದಲ್ಲಿ ಡ್ರಾಪ್ಔಟ್ ದರವು ಪ್ರಾಥಮಿಕ ಹಂತದಲ್ಲಿ 10 ಪ್ರತಿಶತ, ಉನ್ನತ ಪ್ರಾಥಮಿಕ ಹಂತದಲ್ಲಿ 17.5 ಪ್ರತಿಶತ ಮತ್ತು ದ್ವಿತೀಯ ಹಂತದಲ್ಲಿ 19.8 ಪ್ರತಿಶತ ಎಂದು ಹೇಳುತ್ತದೆ.

ಯುನಿಸೆಫ್-‌ಐಸಿಎಸ್‌ಎಸ್‌ಆರ್ ವರದಿಯು ಹೇಳುತ್ತದೆ: “ಮಕ್ಕಳ ಅಂತರ-ರಾಜ್ಯ ವಲಸೆಯು ಭಾಷೆಯ ಅಡೆತಡೆಗಳು ಮತ್ತು ವಿಭಿನ್ನ ಆಡಳಿತಾತ್ಮಕ ರಚನೆಗಳಿಂದಾಗಿ ಹೆಚ್ಚು ಕಷ್ಟವನ್ನು ಸೃಷ್ಟಿಸುತ್ತದೆ. ಸಂಸತ್ತು ಅಂಗೀಕರಿಸಿದ ಶಿಕ್ಷಣ ಹಕ್ಕು [ಆರ್‌ಟಿಇ] ಕಾಯಿದೆಯ ಹೊರತಾಗಿಯೂ, ರಾಜ್ಯವು ವಲಸೆ ಬಂದ ಮಕ್ಕಳಿಗೆ ಗಮ್ಯಸ್ಥಾನದಲ್ಲಾಗಲಿ ಅಥವಾ ಮೂಲದ ಸ್ಥಳದಲ್ಲಿಯಾಗಲಿ ಯಾವುದೇ ಸಹಾಯವನ್ನು ನೀಡುವುದಿಲ್ಲ.‌"

“ಭಾಷೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ ಮತ್ತು ವಿವಿಧ ಕುಟುಂಬಗಳು ವಿಭಿನ್ನ ಮಾತೃಭಾಷೆಗಳನ್ನು ಹೊಂದಿವೆ. ಹೀಗಾಗಿ ವಲಸೆ ಬಂದ ಮಕ್ಕಳಿಗೆ ಸ್ಥಳೀಯ ಭಾಷೆಯೇ ಬೋಧನಾ ಮಾಧ್ಯಮವಾಗಿ ಅನುಕೂಲವಾಗುವಂತೆ ಮಾಡುವುದು ಮುಖ್ಯ, ಇದರಿಂದ ಅವರು ತಮ್ಮ ಓದನ್ನು ಮುಂದುವರಿಸಬಹುದು," ಎಂದು ಶಿಕ್ಷಕ ಪಾಟೀಲ್ ಹೇಳುತ್ತಾರೆ. ಇಂತಹ ಪ್ರಯತ್ನಗಳು ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಅವರು ನಂಬುತ್ತಾರೆ.

ಹೆಚ್ಚು ಸರಕಾರಿ ಬೆಂಬಲವಿಲ್ಲದೆ, ತಮ್ಮ ಸ್ನೇಹಿತರು ಮತ್ತು ಶಿಕ್ಷಕರ ಸಹಾಯದಿಂದ, ರಘು, ಸತ್ಯಂ ಮತ್ತು ಖುಷಿ ಈಗ ಮರಾಠಿಯಲ್ಲಿ ಮಾತನಾಡಬಲ್ಲರು, ಬರೆಯಬಲ್ಲರು ಮತ್ತು ಅರ್ಥಮಾಡಿಕೊಳ್ಳಬಲ್ಲರು. ಆದರೆ ವಲಸೆಯ ಖಡ್ಗವು ಅವರ ತಲೆಯ ಮೇಲೆ ನೇತಾಡುತ್ತಿದೆ. ಅವರ ಪೋಷಕರು ಮತ್ತೊಂದು ರಾಜ್ಯದಲ್ಲಿ ಕೆಲಸವನ್ನು ಹುಡುಕುತ್ತಾ ಮತ್ತೆ ವಲಸೆ ಹೊರಡಬಹುದು - ಅದು ಮತ್ತೊಂದು ಭಾಷೆಯನ್ನು ಹೊಂದಿರುತ್ತದೆ. ರಘುವಿನ ಪೋಷಕರು ಈಗಾಗಲೇ ಮೇ ತಿಂಗಳಲ್ಲಿ ಗುಜರಾತಿನ ಅಹ್ಮದಾಬಾದ್ ತೆರಳಲು ನಿರ್ಧರಿಸಿದ್ದಾರೆ. "ಅವರ ಪರೀಕ್ಷೆಗಳು ಮುಗಿಯಲಿ," ಎನ್ನುವ ಅವರ ತಂದೆಯ ಮುಖದಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. "ಫಲಿತಾಂಶದ ನಂತರ ನಾವು ಅವರಿಗೆ ವಿಷಯ ತಿಳಿಸುತ್ತೇವೆ."

ಅನುವಾದ: ಶಂಕರ. ಎನ್. ಕೆಂಚನೂರು

Jyoti

جیوتی پیپلز آرکائیو آف رورل انڈیا کی ایک رپورٹر ہیں؛ وہ پہلے ’می مراٹھی‘ اور ’مہاراشٹر۱‘ جیسے نیوز چینلوں کے ساتھ کام کر چکی ہیں۔

کے ذریعہ دیگر اسٹوریز Jyoti
Editor : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru