ರಾತ್ರಿ ಬೆಳಗಾಗುವುದರಲ್ಲಿ ತಾಯಿಬಾಯಿ ಘುಳೆ ಕಳೆದುಕೊಂಡಿದ್ದು ಒಂದು ಲಕ್ಷ ರೂಪಾಯಿಗಳ ಆದಾಯ.
ಅಂದು 42 ವರ್ಷದ ತಾಯಿಬಾಯಿ ಮತ್ತು ಆಕೆಯ ಕುರಿಗಳು ತಮ್ಮ ಗ್ರಾಮದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಭಲ್ವಾನಿಯ ಶಿವಾರ್ ಎನ್ನುವ ಊರಿನಲ್ಲಿದ್ದರು. ಆ ದಿನ ಅಲ್ಲಿ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು. “ಸಂಜೆ ಐದರ ನಂತರ ಶುರುವಾದ ಮಳೆ ಹನ್ನೆರಡರ ನಂತರ ಜೋರಾಗಿ ಸುರಿಯತೊಡಗಿತು” ಎನ್ನುತ್ತಾರೆ ಧಂಗರ್ ಸಮುದಾಯದವರಾದ ತಾಯಿಬಾಯಿ. ಆಗಷ್ಟೇ ಹೊಲ ಉಳುಮೆ ಮಾಡಿದ್ದ ಕಾರಣ ಗದ್ದೆ ಕೆಸರುಮಯವಾಯಿತು. ಕುರಿಗಳ ಕಾಲುಗಳು ಕೆಸರಿನಲ್ಲಿ ಹೂತಿದ್ದವು. ಸುಮಾರು 200ರಷ್ಟಿದ್ದ ಅವರ ಕುರಿಗಳು ಗದ್ದೆಯಿಂದ ಹೊರಬರಲಾರದೆ ಒದ್ದಾಡತೊಡಗಿದವು.
“ಅವತ್ತು ಇಡೀ ರಾತ್ತಿ ಗದ್ದೆಯ ಕೆಸರಿನಲ್ಲೇ ನಮ್ಮ ಜಾನುವಾರುಗಳೊಡನೆ ಕುಳಿತಿದ್ದೆವು. ಸುರಿವ ಮಳೆ ನಮ್ಮನ್ನು ಒದ್ದೆಮುದ್ದಯಾಗಿಸಿತ್ತು.” ಎನ್ನುತ್ತಾರೆ ತಾಯಿಬಾಯಿ. ಅವರು 2021ರ ಡಿಸೆಂಬರ್ ತಿಂಗಳಿನಲ್ಲಿ ಅಹಮದ್ ನಗರದಲ್ಲಿ ಸುರಿದ ಭಾರೀ ಮಳೆಯನ್ನು ಅವರು ನೆನಪಿಸಿಕೊಳ್ಳುತ್ತಿದ್ದರು.
“ಹಿಂದೆಯೂ ಇಂತಹ ಭಯಾನಕ ಮಳೆ ನೋಡಿದ್ದೆವು. ಆದರೆ ಆಗೆಲ್ಲ ಇಷ್ಟು ನಷ್ಟಕ್ಕೆ ಒಳಗಾಗಿರಲಿಲ್ಲ” ಎನ್ನುತ್ತಾರೆ ತಾಯಿಬಾಯಿ. ಧವಳಪುರಿ ಎನ್ನುವ ಗ್ರಾಮದ ಪಶುಪಾಲಕರಾದ ಇವರು ಎಂಟು ಕುರಿ ಮತ್ತು ಒಂದು ಹೆಣ್ಣು ಆಡನ್ನು ಕಳೆದುಕೊಂಡಿದ್ದಾರೆ. “ನಾವು ಅವುಗಳ ಜೀವ ಉಳಿಸುವುದನ್ನು ಬಯಸಿದ್ದೆವು.”
ಡಿಸೆಂಬರ್ 2, 2021ರಂದು ಸತಾರಾದಲ್ಲಿ 100 ಮಿ.ಮೀ ಮಳೆಯಾಗಿದ್ದು, ಆ ಜಿಲ್ಲೆಯ ಹೆಚ್ಚಿನ ತಾಲ್ಲೂಕುಗಳಲ್ಲಿ ಸುಮಾರು 100 ಮಿ.ಮೀ ಮಳೆಯಾಗಿದೆ.
“ಮಳೆ ಎಷ್ಟು ಜೋರಾಗಿ ಸುರಿಯುತ್ತಿತ್ತೆಂದರೆ ನಮಗೆ ಬೇರೇನು ಯೋಚಿಸಲು ಕೂಡಾ ಸಾಧ್ಯವಾಗಲಿಲ್ಲ. ನಂತರ ಸುಮಾರು ಕುರಿಗಳು ಚಳಿ ತಾಳಲಾರದೆ ಸತ್ತು ಹೋದವು” ಎನ್ನುತ್ತಾರೆ ಗಂಗಾರಾಮ್ ಧೇಬೆ. 40 ವರ್ಷ ಪ್ರಾಯದ ಇವರು ಧವಳಪುರಕ್ಕೆ ಸೇರಿದವರು. “ಅವು ಪೂರ್ತಿಯಾಗಿ ತಮ್ಮ ಶಕ್ತಿ ಕಳೆದುಕೊಂಡಿದ್ದವು.”
ಮಳೆ ಶುರುವಾಗುವ ಸಮಯದಲ್ಲಿ ಅವರು ಭಾಂಡ್ಗಾಂವ್ನಿಂದ 13 ಕಿ.ಮೀ. ದೂರದಲ್ಲಿದ್ದರು. ಆ ರಾತ್ರಿ ಗಂಗಾರಾಮ್ ತನ್ನ 200 ಜಾನುವಾರುಗಳ ಹಿಂಡಿನಿಂದ 13 ಜಾನುವಾರುಗಳನ್ನು ಕಳೆದುಕೊಂಡರು. ಅವುಗಳಲ್ಲಿ ಎಳು ಪೂರ್ತಿ ಬೆಳೆದಿದ್ದ ಕುರಿಗಳು, ಐದು ಮರಿಗಳು ಮತ್ತು ಒಂದು ಹೆಣ್ಣು ಆಡು. ಅವರು ಕಾಯಿಲೆ ಬಿದ್ದ ಆಡು, ಕುರಿಗಳ ಇಂಜಕ್ಷನ್ ಮಾತ್ರೆ ಇತ್ಯಾದಿಗಾಗಿ ಸ್ಥಳೀಯ ಔಷಧಿ ಅಂಗಡಿಯಲ್ಲಿ 5,000 ರೂ. ಖರ್ಚು ಮಾಡಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ತಾಯಿ ಬಾಯಿ ಮತ್ತು ಗಂಗಾರಾಮ್ ಧೇಬೆ ಇಬ್ಬರೂ ಧಂಗರ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಎಂದು ಪಟ್ಟಿ ಮಾಡಲಾಗಿದೆ. ಇವರು ಹೆಚ್ಚಾಗಿ ಅಹಮದ್ ನಗರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಈ ಜಿಲ್ಲೆ ಅತಿ ಹೆಚ್ಚು ಸಂಖ್ಯೆಯ ಕುರಿಗಳನ್ನು ಹೊಂದಿದೆ .
ಬೇಸಿಗೆಯಲ್ಲಿ ನೀರು ಮತ್ತು ಮೇವಿನ ಕೊರತೆ ಎದುರಾದಾಗ ತಾಯಿಬಾಯಿಯವರಂತಹ ಪಶುಗಾಹಿಗಳು ಉತ್ತರ ಕೊಂಕಣ ಪ್ರದೇಶದ ಪಾಲ್ಘಾರ್ ಮತ್ತು ಭಿವಾಂಡಿಯ ಕಡೆ ವಲಸೆ ಹೊರಡುತ್ತಾರೆ. ಇವರು ಆರು ತಿಂಗಳ ಕಾಲ ಹೀಗೆ ಊರಿನಿಂದ ಹೊರಗೇ ಉಳಿಯುತ್ತಾರೆ. ಕೊಂಕಣ ಪ್ರದೇಶದಲ್ಲಿನ ಮುಂಗಾರಿನ ಹೊಡೆತವನ್ನು ಕುರಿ, ಆಡಿನಂತಹ ಸಣ್ಣ ಪ್ರಾಣಿಗಳು ತಾಳಲು ಸಾಧ್ಯವಿಲ್ಲದ ಕಾರಣ ಅವರು ಆ ಸಮಯದಲ್ಲಿ ಊರಿಗೆ ಮರಳುತ್ತಾರೆ.
“ಅದು ಹೇಗೆ ಇಷ್ಟು ಮಳೆ ಬಂತೋ ಗೊತ್ತಿಲ್ಲ. ಅವನು ಮೇಘರಾಜನಿಗೇ ಗೊತ್ತು” ಎನ್ನುತ್ತಾರೆ ತಾಯಿಬಾಯಿ.
ಆ ದಿನವನ್ನು ನೆನೆಯುತ್ತಿದಂತೆ ಅವರ ಕಣ್ಣುಗಳಲ್ಲಿ ನೀರಾಡತೊಡಗಿತು. “ನಾವು ದೊಡ್ಡ ನಷ್ಟವನ್ನು ಎದುರಿಸಿದ್ದೇವೆ. ನಮಗೆ ಬೇರೆ ಸಿಗುವಂತಿದ್ದಿದ್ದರೆ ಈ ಕೆಲಸವನ್ನು ಬಿಡುತ್ತಿದ್ದೆವು.”
ತುಕಾರಾಮ್ ಕೋಕರೆ ತಮ್ಮ ಬಳಿಯಿದ್ದ 90 ಕುರಿಗಳ ಹಿಂಡಿನಿಂದ ಪೂರ್ತಿ ಬೆಳೆದು ನಿಂತಿದ್ದ ಕುರಿಗಳು ಹಾಗೂ ನಾಲ್ಕು ಕುರಿ ಮರಿಗಳನ್ನು ಕಳೆದುಕೊಂಡರು. ಅವರು ಕೂಡಾ, “ಅದೊಂದು ದೊಡ್ಡ ನಷ್ಟವಾಗಿತ್ತು” ಎನ್ನುತ್ತಾರೆ. ಖರೀದಿ ಮಾಡುವುದಾಗಿದ್ದರೆ ಒಂದು ಕುರಿಯ ಬೆಲೆ 12,000 ರೂಗಳಿಂದ 13,000 ರೂಗಳ ತನಕ ಆಗುತ್ತಿತ್ತು. “ನಾವು ಅಂತಹ ಒಂಬತ್ತು ಕುರಿಗಳನ್ನು ಕಳೆದುಕೊಂಡಿದ್ದೆವು. ನಾವು ಒಟ್ಟು ಎಷ್ಟು ಕಳೆದುಕೊಂಡಿದ್ದೇವೆ ಎನ್ನುವುದು ನಿಮಗೂ ಅರ್ಥವಾಗಿರಬಹುದು” ಎನ್ನುತ್ತಾರೆ ಈ 40 ವರ್ಷದ ಧಂಗರ್ ಸಮುದಾಯದ ಪಶುಪಾಲಕ.
ಅವರು ಪಂಚನಾಮೆ ಮಾಡಿದ್ದರೆ? “ನಮ್ಮಿಂದ ಹೇಗೆ ಸಾಧ್ಯ?” ಎಂದು ಅಸಹಾಯಕರಾಗಿ ಕೇಳುತ್ತಾರೆ ತುಕಾರಾಮ್. “ಅಕ್ಕಪಕ್ಕದಲ್ಲಿ ನಮಗೆ ರಕ್ಷಣೆ ನೀಡಬಲ್ಲಂತಹದ್ದು ಏನೂ ಇದ್ದಿರಲಿಲ್ಲ. ರೈತರೂ ಹತ್ತಿರದಲ್ಲಿ ಇದ್ದಿರಲಿಲ್ಲ. ಕುರಿಗಳು ಓಡತೊಡಗಿದ್ದವು. ಹೀಗಿರುವಾಗ ನಾವು ಅವುಗಳನ್ನು ಬಿಟ್ಟು ಹೋಗುವಂತೆಯೂ ಇರಲಿಲ್ಲ. ಹೀಗಾಗಿ ನಮಗೆ ಇಲ್ಲಿ ನಡೆದ ವಿಷಯವನ್ನು ವರದಿ ಮಾಡಲೂ ಸಾಧ್ಯವಾಗಲಿಲ್ಲ.”
ಅವರ ಅಂದಾಜಿನಂತೆ ಕೇವಲ ಭಾಲ್ವಾನಿಯೊಂದರಲ್ಲೇ 300 ಕುರಿಗಳು ಸತ್ತಿವೆ. ಮಹಾರಾಷ್ಟ್ರವು 2.7 ಮಿಲಿಯನ್ ಕುರಿಗಳನ್ನು ಹೊಂದಿದ್ದು, ಅದು ಕುರಿ ಸಾಕಣೆಯಲ್ಲಿ ದೇಶದಲ್ಲಿ ಏಳನೇ ಸ್ಥಾನದಲ್ಲಿದೆ.
ಸತಾರಾದ ಮಾನ್, ಖತವ್ ಮತ್ತು ದಹಿವಾಡಿ ಪ್ರದೇಶಗಳಲ್ಲಿ ಜಾನುವಾರುಗಳ ನಷ್ಟ ಮತ್ತು ಸರ್ಕಾರದ ನಿರಾಸಕ್ತಿಯ ಬಗ್ಗೆ ಮಾತನಾಡಿದ ಫಾಲ್ತಾನ್ನ ಕುರಿಪಾಲಕ ಮತ್ತು ಕುಸ್ತಿಪಟು ಶಂಭುರಾಜೆ ಶೆಂಡ್ಗೆ ಪಾಟೀಲ್, "ಔಪಚಾರಿಕ ಸೂಟ್ ಧರಿಸಿದ ವ್ಯಕ್ತಿಯು ಸರ್ಕಾರಿ ಕಚೇರಿಗೆ ಭೇಟಿ ನೀಡಿದರೆ, ಅಧಿಕಾರಿ ಕೆಲಸವನ್ನು ಒಂದು ಗಂಟೆಯಲ್ಲಿ ಮುಗಿಸುವುದಾಗಿ ಭರವಸೆ ನೀಡುತ್ತಾನೆ. ಆದರೆ ಅದೇ ಅಧಿಕಾರಿ ಕುರುಬರ ಬಟ್ಟೆಗಳನ್ನು ಧರಿಸಿದ ನನ್ನ ಸಹವರ್ತಿ ಧಂಗರ್ನನ್ನು ನೋಡಿ ಎರಡು ದಿನ ಬಿಟ್ಟು ಬರುವಂತೆ ಹೇಳುತ್ತಾನೆ."
"ಸತ್ತ ಕುರಿಗಳ ಫೋಟೊಗಳನ್ನು ಸಹ ತೆಗೆಯಲು ನಮಗೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಫೋನುಗಳಿವೆ ಆದರೆ ಅವುಗಳಿಗೆ ಚಾರ್ಜ್ ಮಾಡಿಸಲು ಸಾಧ್ಯವಿಲ್ಲ. ಹಳ್ಳಿಗಳ ಹತ್ತಿರದಲ್ಲಿದ್ದಾಗಲಷ್ಟೇ ಚಾರ್ಜ್ ಮಾಡಲು ಸಾಧ್ಯ” ಎನ್ನುತ್ತಾರೆ ತಾಯಿಬಾಯಿ.
ತಾಯಿಬಾಯಿ ಮತ್ತು ಅವರ ಕುರಿಗಳು ಸದ್ಯ ಹೊಲವೊಂದರಲ್ಲಿ ಹಗ್ಗದ ಆವರಣದಲ್ಲಿ ತಾತ್ಕಾಲಿಕವಾಗಿ ತಂಗಿದ್ದಾರೆ. ಅವರ ಕು, ಆಡುಗಳು ಮೇಯುತ್ತಾ ಅಲ್ಲಲ್ಲಿ ದಣಿವಾರಿಸಿಕೊಳ್ಳುತ್ತಿವೆ. “ನಾವು ನಮ್ಮ ಕುರಿಗಳ ಹೊಟ್ಟೆ ತುಂಬಿಸಲು ಬಹಳ ದೂರ ನಡೆಯಬೇಕಿದೆ” ಎಂದು ತಮ್ಮ ಹಿಂದಿರುವ ಹಿಂಡನ್ನು ತೋರಿಸುತ್ತಾ ಹೇಳಿದರು.
ಗಂಗಾರಾಮ್ ತಮ್ಮ ಕುರಿಗಳಿಗೆ ಹುಲ್ಲನ್ನು ಹುಡುಕುತ್ತಾ ಧವಳಪುರಿಯಿಂದ ಪುಣೆ ಜಿಲ್ಲೆಯ ದೇಹು ಎನ್ನುವಲ್ಲಿಗೆ ನಡೆದು ಸಾಗುತ್ತಾರರೆ. ದೇಹುವಿನ ಈ ಸಮತಟ್ಟು ನೆಲವನ್ನು ತಲುಪಲು ಅವರಿಗೆ ಹದಿನೈದು ದಿನಗಳು ಬೇಕಾಗುತ್ತವೆ. “ನಾವು ಮೇವಿಗಾಗಿ ಜನರ ಹೊಲಗಳಿಗೆ ಅನುಮತಿಯಿಲ್ಲದೆ [ಮೇವಿಗಾಗಿ] ಹೋದರೆ ಹೊಡೆಯುತ್ತಾರೆ. ನಮಗೆ ಹೊಡೆತವನ್ನು ತಿನ್ನುವುದನ್ನು ಬಿಟ್ಟರೆ ಬೇರೆ ಆಯ್ಕೆಯಿಲ್ಲ.” ಎಂದು ಅವರು ಹೇಳುತ್ತಾರೆ. ಸ್ಥಳೀಯ ಗೂಂಡಾಗಳ ಕಿರುಕುಳ ಕೊಡುತ್ತಿರುವುದರಿಂದಾಗಿ ನಮಗಿರುವ ಏಕೈಕ ಬೆಂಬಲವೆಂದರೆ “ರೈತರು” ಎನ್ನುತ್ತಾರೆ ಅವರು.
"ಸಾಮಾನ್ಯವಾಗಿ, ಕುರಿಗಾಹಿಗಳು ಸ್ಥಿತಿಸ್ಥಾಪಕ ಗುಂಪಾಗಿದ್ದು ಅವರು ಆಘಾತಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಆದರೆ ಡಿಸೆಂಬರ್ 1 ಮತ್ತು 2ರ ಅನಿರೀಕ್ಷಿತ ಮಳೆಗೆ ಹಲವಾರು ಕುರಿಗಳು ಸತ್ತಿದ್ದು ಅವರನ್ನು ತಲ್ಣಗೊಳಿಸಿತು" ಎಂದು ಪಶುವೈದ್ಯ ಡಾ.ನಿತ್ಯಾ ಘೋಟ್ಗೆ ಹೇಳುತ್ತಾರೆ.
ಹಠಾತ್ ಬಿಕ್ಕಟ್ಟಿನ ಸಮಯದಲ್ಲಿ ಒಂದೇ ಸಮಯದಲ್ಲಿ ಅನೇಕ ವಿಷಯಗಳನ್ನು ನೋಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. "ಸಣ್ಣ ಮಕ್ಕಳು, ಸಾಮಾನು, ದಿನಸಿ, ಉರುವಲು, ಮೊಬೈಲ್ ಫೋನ್ಗಳು ಮತ್ತು ಜಾನುವಾರುಗಳು, ಮರಿಗಳು ಅಥವಾ ಸಾಕುಪ್ರಾಣಿಗಳು ಸೇರಿದಂತೆ," ಡಾ. ನಿತ್ಯಾ ಹೇಳುತ್ತಾರೆ. ಅವರು ಅಂತ್ರಾ ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾಗಿದ್ದು, ಈ ಸಂಸ್ಥೆ ಹಲವು ವರ್ಷಗಳಿಂದ ಪಶುಸಂಗೋಪನೆ ಮತ್ತು ರೈತ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದೆ.
ಕುರಿಗಾಹಿಗಳಿಗೆ ಪಂಚನಾಮೆಗಳನ್ನು ಸಲ್ಲಿಸಲು, ಹವಾಮಾನ ಆಘಾತಗಳ ಬಗ್ಗೆ ಮಾಹಿತಿ ಪಡೆಯಲು, ರೋಗ, ಲಸಿಕೆಗಳು ಮತ್ತು ಸಮಯೋಚಿತ ಪಶುವೈದ್ಯಕೀಯ ಬೆಂಬಲವನ್ನು ಪಡೆಯಲು ನಿರ್ಣಾಯಕ ಬೆಂಬಲದ ಅಗತ್ಯವಿದೆ. "ಸರ್ಕಾರವು ತನ್ನ ಹವಾಮಾನ ಬದಲಾವಣೆ ಮತ್ತು ಜಾನುವಾರು ನೀತಿಗಳನ್ನು ರೂಪಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಭಾವಿಸಲಾಗಿದೆ" ಎಂದು ಘೋಟ್ಗೆ ಹೇಳುತ್ತಾರೆ.
ಧವಳಪುರಿಯಲ್ಲಿ ಎಲ್ಲರಿಗಾಗಿ ಒಂದು ಶೆಡ್ ನಿರ್ಮಿಸುವುದರಿಂದ ತನ್ನಂತಹ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ತುಕಾರಾಮ್ ಸಲಹೆ ನೀಡುತ್ತಾರೆ. "ಕುರಿಗಳು ನೆನೆಯದೆ ಸುರಕ್ಷಿತವಾಗಿರುವಂತೆ ಇದನ್ನು ನಿರ್ಮಿಸಬೇಕು. ಅವುಗಳಿಗೆ ಒಳಗೆ ಚಳಿಯಾಗುವುದಿಲ್ಲ" ಎಂದು ಅನುಭವಿ ಕುರಿಪಾಲಕ ಹೇಳುತ್ತಾರೆ.
ಅಲ್ಲಿಯವರೆಗೂ ತಾಯಿಬಾಯಿ, ಗಂಗಾರಾಮ್ ಮತ್ತು ತುಕಾರಾಮ್ ಮೇವು, ನೀರು ಮತ್ತು ಆಶ್ರಯವನ್ನು ಹುಡುಕುತ್ತಾ ತಮ್ಮ ಹಿಂಡಿನೊಂದಿಗೆ ನಡೆಯುತ್ತಲೇ ಇರುತ್ತಾರೆ. ಸರಕಾರದಿಂದ ಅಥವಾ ಮಳೆಯಿಂದ ಯಾವುದೇ ಸಹಾಯ ಅಥವಾ ಪರಿಹಾರಕ್ಕಾಗಿ ಕಾಯದೆ ಮುಂದುವರಿಯುವುದು ಬುದ್ಧಿವಂತಿಕೆ ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು