"ಮುಂಬಬರುವ ದಿನಗಳಲ್ಲಿ ಯಾವುದೇ ಎಂಎಸ್‌ಪಿ ಇರುವುದಿಲ್ಲ, ಅವರು ಕ್ರಮೇಣ ಎಪಿಎಂಸಿಯನ್ನು ನಿಲ್ಲಿಸುತ್ತಾರೆ ಮತ್ತು ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುತ್ತಿದ್ದಾರೆ ಇದರಿಂದಾಗಿ ನಾವು ಚಿಂತಿತರಾಗಿದ್ದೇವೆ” ಎಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈತ ಡಿ. ಮಲ್ಲಿಕಾರ್ಜುನಪ್ಪ ಹೇಳಿದರು.

61 ವರ್ಷದ ಮಲ್ಲಿಕಾರ್ಜುನಪ್ಪನವರು ಜನವರಿ 25ರಂದು ಬೆಂಗಳೂರಿನಲ್ಲಿ ಮರುದಿನ ನಡೆಯಲಿರುವ ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸುವ ಸಲುವಾಗಿ ಹುಲುಗಿನಕೊಪ್ಪ ಗ್ರಾಮದಿಂದ ಬಂದಿದ್ದರು. ಅವರು ಶಿಕಾರಿ‌ಪುರ ತಾಲ್ಲೂಕಿನ ತಮ್ಮ ಊರಿನಿಂದ ಸುಮಾರು 350 ಕಿಲೋಮೀಟರ್ ಪ್ರಯಾಣಿಸಿದ್ದರು. "ದೊಡ್ಡ ಕಂಪನಿಗಳ ಮಾತನ್ನು ಕೇಳುವ ಬದಲು, ಅವರು [ಕೇಂದ್ರ ಸರ್ಕಾರ] ಎಪಿಎಂಸಿಯನ್ನು ಸುಧಾರಿಸಬೇಕು ಇದರಿಂದ ನಮಗೆ ಸರಿಯಾದ ಬೆಲೆ ಸಿಗುತ್ತದೆ" ಎಂದು ಅವರು ಹೇಳಿದರು.

ಹೊಸ ಕೃಷಿ ಕಾನೂನುಗಳು ಅವರ ಕಳವಳವನ್ನು ಇನ್ನಷ್ಟು ಹೆಚ್ಚಿಸಿವೆ - ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ದುರ್ಬಲಗೊಳಿಸುತ್ತವೆ, ಇವೆರಡೂ ಅವರ ಬೆಳೆ ಖರೀದಿಯನ್ನು ಖಾತರಿಗೊಳಿಸುತ್ತಿದ್ದವು.

ಮಲ್ಲಿಕಾರ್ಜುನಪ್ಪನವರು ತನ್ನ 12 ಎಕರೆ ಭೂಮಿಯಲ್ಲಿ 3-4 ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಉಳಿದ ಭೂಮಿಯಲ್ಲಿ ಅಡಿಕೆ ತೋಟವಿದೆ. "ಕಳೆದ ವರ್ಷ ಅಡಿಕೆ ಇಳುವರಿ ಕಳಪೆಯಾಗಿತ್ತು, ಮತ್ತು ಅಷ್ಟೊಂದು ಭತ್ತವೂ ಸಿಗಲಿಲ್ಲ" ಎಂದು ಅವರು ಹೇಳಿದರು. “ನಾನು ಬ್ಯಾಂಕಿನಿಂದ ತೆಗೆದುಕೊಂಡ 12 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಬೇಕಾಗಿದೆ. ಅವರು [ರಾಜ್ಯ ಸರ್ಕಾರ] ಸಾಲವನ್ನು ಮನ್ನಾ ಮಾಡಿರುವುದಾಗಿ ಹೇಳಿದ್ದರು. ಆದರೆ ಬ್ಯಾಂಕುಗಳು ಇನ್ನೂ ನಿರಂತರವಾಗಿ ನನಗೆ ನೋಟಿಸ್ ಕಳುಹಿಸುತ್ತಿವೆ ಮತ್ತು ದಂಡದ ಎಚ್ಚರಿಕೆ ನೀಡುತ್ತಿವೆ. ಈ ಎಲ್ಲದರ ಕುರಿತು ಚಿಂತಿತನಾಗಿದ್ದೇನೆ,” ಎಂದು ಕೋಪದಿಂದ ಹೇಳಿದರು.

ಮೆರವಣಿಗೆಯ ಹಿಂದಿನ ದಿನ ಕರ್ನಾಟಕದ ದೂರದ ಜಿಲ್ಲೆಗಳಿಂದ ಮಲ್ಲಿಕಾರ್ಜುನಪ್ಪ ಅವರಂತಹ ರೈತರು ಬೆಂಗಳೂರಿಗೆ ಬಂದರು. ಆದರೆ ಜನವರಿ 26ರಂದು ಮಂಡ್ಯ, ರಾಮನಗರ, ತುಮಕೂರು ಮತ್ತು ಇತರ ಪಕ್ಕದ ಜಿಲ್ಲೆಗಳ ರೈತರು ಜನವರಿ 26ರಂದು ಬೆಳಿಗ್ಗೆ 9 ಗಂಟೆಯಿಂದ ಬೆಂಗಳೂರು ನಗರದ ಹೊರವಲಯದಲ್ಲಿ ಟ್ರಾಕ್ಟರುಗಳು, ಕಾರುಗಳು ಮತ್ತು ಬಸ್ಸುಗಳಲ್ಲಿ ಬಂದು ಸೇರಲು ಪ್ರಾರಂಭಿಸಿದರು. ಅವರು ಮಧ್ಯಾಹ್ನ ಬೆಂಗಳೂರಿನ ಕೇಂದ್ರ ಭಾಗವಾದ ಗಾಂಧಿ ನಗರ ಪ್ರದೇಶದ ಸ್ವಾತಂತ್ರ್ಯ ಉದ್ಯಾನವನವನ್ನು ತಲುಪಿ ದೆಹಲಿಯ ರೈತರ ಟ್ರಾಕ್ಟರ್ ಮೆರವಣಿಗೆಯನ್ನು ಬೆಂಬಲಿಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರು ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಆಯೋಜಿಸಿದ್ದರು.

Left: D. Mallikarjunappa (centre), a farmer from Shivamogga. Right: Groups from across Karnataka reached Bengaluru for the protest rally
PHOTO • Tamanna Naseer
Left: D. Mallikarjunappa (centre), a farmer from Shivamogga. Right: Groups from across Karnataka reached Bengaluru for the protest rally
PHOTO • Tamanna Naseer

ಎಡ: ಶಿವಮೊಗ್ಗದ ರೈತರಾದ ಡಿ.ಮಲ್ಲಿಕಾರ್ಜುನಪ್ಪ (ಮಧ್ಯ). ಬಲ: ಪ್ರತಿಭಟನಾ ರ‍್ಯಾಲಿಗಾಗಿ ಕರ್ನಾಟಕದೆಲ್ಲೆಡೆಯಿಂದ ರೈತರ ಗುಂಪುಗಳು ಬೆಂಗಳೂರು ತಲುಪಿದವು

ರೈತರು ಪ್ರತಿಭಟಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಟಿ.ಸಿ. ವಸಂತ ಬೆಂಗಳೂರು ಬಳಿಯ ಬಿಡದಿ ಪಟ್ಟಣದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡರು. ಅವರು ಮತ್ತು ಅವರ ಸಹೋದರಿ ಪುಟ್ಟ ಚನ್ನಮ್ಮ ಇಬ್ಬರೂ ರೈತರಾಗಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಿಂದ ಬಂದಿದ್ದರು. ಅವರ ಊರು ಕೆ.ಎಂ.ಡೊಡ್ಡಿ, ಅಲ್ಲಿ ವಸಂತ ಮತ್ತು ಅವರ ಪತಿ ಕೆ.ಬಿ. ನಿಂಗೇ‌ಗೌಡ ಅವರು ಎರಡು ಎಕರೆ ಭೂಮಿಯಲ್ಲಿ ಭತ್ತ, ರಾಗಿ ಮತ್ತು ಜೋಳದ ಕೃಷಿ ಮಾಡುತ್ತಾರೆ. ಅವರ ನಾಲ್ಕು ಸದಸ್ಯರ ಕುಟುಂಬದಲ್ಲಿ ಅವರ 23 ವರ್ಷದ ಮಗ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, 19 ವರ್ಷದ ಮಗಳು ಸೋಷಿಯಲ್‌ ವರ್ಕ್ ಕಲಿಯುತ್ತಿದ್ದಾಳೆ. ಈ ಕುಟುಂಬವು ಮುಖ್ಯವಾಗಿ ಕೃಷಿ‌ ಆದಾಯವನ್ನು ಅವಲಂಬಿಸಿರುತ್ತದೆ. ವಸಂತ ಮತ್ತು ಅವರ ಪತಿ ಕೂಡ ಮನರೇಗಾದಡಿ ವರ್ಷಕ್ಕೆ 100 ದಿನ ಕೆಲಸ ಮಾಡುತ್ತಾರೆ.

"ಹೊಸ ಕೃಷಿ ಕಾನೂನುಗಳು ಭೂ ಕಾಯಿದೆಯಂತೆಯೇ ಕಂಪನಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತವೆ" ಎಂದು ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ಅನ್ನು ಉಲ್ಲೇಖಿಸಿ ವಸಂತ ಹೇಳಿದರು, ಈ ಕಾಯ್ದೆಯಡಿ ಕೃಷಿಕರಲ್ಲದವರಿಗೆ ಕೃಷಿ ಭೂಮಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇದ್ದ ನಿರ್ಬಂಧಗಳನ್ನು ಸರಕಾರ ತೆಗೆದುಹಾಕಿದೆ. ಕೃಷಿ ಭೂಮಿಯ ಕಾರ್ಪೊರೇಟ್ ಸ್ವಾಧೀನಕ್ಕೆ ಹೆದರಿ ಕರ್ನಾಟಕದ ರೈತರು ರಾಜ್ಯ ಸರ್ಕಾರ ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.

“ಅವರು [ಸರ್ಕಾರ] ರೈತರು ಅನ್ನದಾತರು ಎಂದು ಹೇಳುತ್ತಲೇ ಇರುತ್ತಾರೆ, ಆದರೆ ಅವರು ನಮಗೆ ಕಿರುಕುಳ ನೀಡುತ್ತಲೇ ಇರುತ್ತಾರೆ. [ಪ್ರಧಾನಿ] ಮೋದಿ ಮತ್ತು [ಮುಖ್ಯಮಂತ್ರಿ] ಯಡಿಯೂರಪ್ಪ ಇಬ್ಬರೂ ರೈತರನ್ನು ಹಿಂಸಿಸುತ್ತಿದ್ದಾರೆ. ಯಡಿಯೂರಪ್ಪ ಇಲ್ಲಿ ಭೂ ಕಾಯ್ದೆಗೆ ತಿದ್ದುಪಡಿ ತಂದರು. ಅವರು ಅದನ್ನು ಕೈಬಿಟ್ಟು ರೈತರಿಗೆ ಭರವಸೆ ನೀಡಬೇಕು. ಟ್ರಾಕ್ಟರುಗಳಲ್ಲಿ ನೂರಾರು ಜನರು ಬರುತ್ತಿದ್ದಾರೆ, ಮತ್ತು ನಾವು ಹೆದರಿಲ್ಲ” ಎಂದು ವಸಂತ ಹೇಳಿದರು.

Top left: T.C. Vasantha (in orange saree), Putta Channamma (in yellow) and other farmers from Mandya assembled in Bidadi, near Bengaluru. Top right: R.S. Amaresh arrived from Chitradurga. Bottom: Farmers on their way to Bengaluru's Freedom Park
PHOTO • Tamanna Naseer

ಮೇಲಿನ ಎಡ ಚಿತ್ರ: ಟಿ.ಸಿ. ವಸಂತ (ಕಿತ್ತಳೆ ಬಣ್ಣದ ಸೀರೆಯಲ್ಲಿ), ಪುಟ್ಟ ಚನ್ನಮ್ಮ (ಹಳದಿ ಬಣ್ಣದ ಸೀರೆಯಲ್ಲಿ) ಮತ್ತು ಮಂಡ್ಯದ ಇತರ ರೈತರು ಬೆಂಗಳೂರಿನ ಬಳಿಯ ಬಿಡದಿಯಲ್ಲಿ ಒಟ್ಟುಗೂಡಿದರು. ಮೇಲಿನ ಬಲ: ಆರ್.ಎಸ್. ಅಮರೇಶ್ ಚಿತ್ರದುರ್ಗದಿಂದ ಬಂದರು. ಕೆಳಗಿನ ಚಿತ್ರ: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಹೋಗುತ್ತಿರುವ ರೈತರು

ಪಂಜಾಬ್ ಮತ್ತು ಹರಿಯಾಣದ ರೈತರಿಗೆ ಹೋಲಿಸಿದರೆ ಕರ್ನಾಟಕದ ರೈತರು ಬಹಳ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್)ದ ಮುಖಂಡ ಬದ್ಗಲ್‌ಪುರ ನಾಗೇಂದ್ರ ಹೇಳಿದರು. "ನಾವು ಮೊದಲು 2020ರ ಮೇ ತಿಂಗಳಲ್ಲಿ ಭೂ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದೆವು, ಮತ್ತು ಕೇಂದ್ರ ಸರ್ಕಾರವು ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧವೂ ನಾವು ಧ್ವನಿ ಎತ್ತುತ್ತಿದ್ದೇವೆ" ಎಂದು ಬೆಂಗಳೂರಿನ ಕೆಆರ್‌ಆರ್‌ಎಸ್ ಗಣರಾಜ್ಯೋತ್ಸವದ ರ‍್ಯಾಲಿಯ ಮುಖ್ಯ ಸಂಘಟಕರಲ್ಲಿ ಒಬ್ಬರಾಗಿರುವ ಅವರು ಹೇಳಿದರು. ರಾಜ್ಯದೆಲ್ಲೆಡೆಯಿಂದ 2 ಸಾವಿರ ಟ್ರಾಕ್ಟರುಗಳನ್ನು ತರಲು ಸಂಸ್ಥೆ ಯೋಜಿಸಿತ್ತು. "ಆದರೆ ಪೊಲೀಸರು ಕೇವಲ 125ಕ್ಕೆ ಮಾತ್ರ ಅನುಮತಿಸಲು ಒಪ್ಪಿಕೊಂಡರು" ಎಂದು ರೈತ ಮುಖಂಡ ಹೇಳಿದರು.

ಹೊಸ ಕೃಷಿ ಕಾನೂನುಗಳಿಂದಾಗಿ ರೈತರಿಗೆ ಆದಾಯ ಗಳಿಸಲು ಕಷ್ಟವಾಗಲಿದೆ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದ 65 ವರ್ಷದ ರೈತ ಆರ್.ಎಸ್.ಅಮರೇಶ್ ಹೇಳುತ್ತಾರೆ. “ರೈತನಾಗಿ ಬದುಕುವುದು ಬಹಳ ಕಷ್ಟ. ನಮ್ಮ ಬೆಳೆಗಳಿಗೆ ಬೆಲೆಯಿರುವುದಿಲ್ಲ. ನಾವು ಕೃಷಿಯ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದೇವೆ. ಇದು ಹೀಗೆಯೇ ಮುಂದುವರಿದರೆ, ರೈತರಿಲ್ಲದ ದಿನಗಳು ಬರಲಿವೆ."

ಅಮರೇಶ್‌ ತನ್ನ ಮಕ್ಕಳು ರೈತರಾಗುವುದನ್ನು ಇಷ್ಟಪಡುವುದಿಲ್ಲ ಹೀಗಾಗಿ ಅವರು ಮಕ್ಕಳು ಬೇರೆ ಕ್ಷೇತ್ರಗಳಿಗೆ ಹೋಗಲೆಂದು ಅವರಿಗೆ ಶಿಕ್ಷಣ ನೀಡುತ್ತಿದ್ದಾರೆ. “ನನ್ನ ಮಕ್ಕಳು ಬೇಸಾಯವನ್ನು ಅವಲಂಬಿಸಬಾರದೆಂದು ನಾನು ಅವರಿಗೆ ಶಿಕ್ಷಣ ನೀಡಿದ್ದೇನೆ. ಕೃಷಿಯಲ್ಲಿ ಉತ್ಪಾದನಾ ವೆಚ್ಚ ಬಹಳ ಹೆಚ್ಚಾಗಿದೆ. ನನ್ನ ಹೊಲಗಳಲ್ಲಿ ಮೂವರು ಕೆಲಸಗಾರರು ಕೆಲಸ ಮಾಡುತ್ತಾರೆ, ಮತ್ತು ನಾನು ಪ್ರತಿಯೊಬ್ಬರಿಗೂ 500 ರೂಪಾಯಿಗಳನ್ನು [ದಿನಕ್ಕೆ] ಪಾವತಿಸುತ್ತೇನೆ. ನನಗೆ ನನ್ನ ಆದಾಯ ಎಂದಿಗೂ ಸಾಲುವುದಿಲ್ಲ,” ಎಂದು ಅವರು ಹೇಳಿದರು. ಅವರ 28 ವರ್ಷದ ಮಗ ಚಾರ್ಟರ್ಡ್ ಅಕೌಂಟನ್ಸಿ ವಿದ್ಯಾರ್ಥಿಯಾಗಿದ್ದು, ಅವರ 20 ವರ್ಷದ ಮಗಳು ಎಂ.ಎಸ್ಸಿ ಓದುತ್ತಿದ್ದಾರೆ.

ಜನವರಿ 26ರಂದು ಬಿಡದಿಯ ಬೈರಮಂಗಲ ಕ್ರಾಸ್‌ಗೆ ಭೇಟಿ ನೀಡಿದ ಮೊದಲ ಪ್ರತಿಭಟನಾಕಾರರಲ್ಲಿ ಕೃಷಿಕರಲ್ಲದ ಗಜೇಂದ್ರ ರಾವ್ ಕೂಡ ಒಬ್ಬರು. ಅವರು ಕ್ಯಾಬ್ ಚಾಲಕರಾಗಿದ್ದು ರಾಜ್ಯ ಮೂಲದ ಜನಶಕ್ತಿ ಸಂಘಟನೆಯ ಸದಸ್ಯರು. ಪ್ರತಿಭಟನೆಯಲ್ಲಿ ನನ್ನ ಆಹಾರಕ್ಕಾಗಿ ಹೋರಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು. “ಸರ್ಕಾರ ಈಗ ಆಹಾರ ಧಾನ್ಯಗಳನ್ನು ಎಫ್‌ಸಿಐ [ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ] ಮೂಲಕ ಸಂಗ್ರಹಿಸುತ್ತದೆ. ಈ ವ್ಯವಸ್ಥೆಯು ಕ್ರಮೇಣ ಬದಲಾಗುತ್ತದೆ. ನಾವು ಆ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ಇದರಿಂದ ಆಹಾರದ ಬೆಲೆಗಳು ಖಂಡಿತವಾಗಿಯೂ ಹೆಚ್ಚಾಗುತ್ತವೆ ಏಕೆಂದರೆ ಈ ವ್ಯವಸ್ಥೆಯನ್ನು ಕಾರ್ಪೊರೇಟ್‌ಗಳು ನಿಯಂತ್ರಿಸುತ್ತಾರೆಯೇ ಹೊರತು ಸರ್ಕಾರವಲ್ಲ. ನನಗೆ ಪ್ರತಿಭಟಿಸುವ ಎಲ್ಲ ಹಕ್ಕಿದೆ,” ಎಂದು ಅವರು ಹೇಳಿದರು.

Left: Gajendra Rao, a cab driver in Bengaluru, joined the protestors in Bidadi. Right: Farmers' groups came in buses, tractors and cars
PHOTO • Tamanna Naseer
Left: Gajendra Rao, a cab driver in Bengaluru, joined the protestors in Bidadi. Right: Farmers' groups came in buses, tractors and cars
PHOTO • Tamanna Naseer

ಎಡ: ಬೆಂಗಳೂರಿನವರಾದ ಕ್ಯಾಬ್ ಚಾಲಕ ಗಜೇಂದ್ರ ರಾವ್ ಅವರು ಬಿಡದಿಯಲ್ಲಿ ಹೋರಾಟಗಾರನ್ನು ಸೇರಿಕೊಂಡರು. ಬಲ: ರೈತರ ಗುಂಪುಗಳು ಬಸ್ಸುಗಳು, ಟ್ರಾಕ್ಟರುಗಳು ಮತ್ತು ಕಾರುಗಳಲ್ಲಿ ಬಂದವು

ಗಜೇಂದ್ರ ಅವರ ಅಜ್ಜ ಉಡುಪಿ ಜಿಲ್ಲೆಯಲ್ಲಿ ಜಮೀನನ್ನು ಹೊಂದಿದ್ದರು. "ಆದರೆ ಕುಟುಂಬ ವಿವಾದದಿಂದಾಗಿ ನಾವು ಅದನ್ನು ಕಳೆದುಕೊಂಡೆವು. ನನ್ನ ತಂದೆ ಸುಮಾರು 40 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ರೆಸ್ಟೋರೆಂಟ್ ಪ್ರಾರಂಭಿಸಿದರು. ನಾನು ಈಗ ನಗರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದೇನೆ,” ಎಂದು ಅವರು ಹೇಳಿದರು.

ಈ ಮೂರು ಕೃಷಿ ಕಾನೂನುಗಳು ಭಾರತದಾದ್ಯಂತ ರೈತರ ಮೇಲೆ ಪರಿಣಾಮ ಬೀರುತ್ತವೆ ಎಂದು ಕೆಆರ್‌ಆರ್‌ಎಸ್ ಮುಖಂಡ ನಾಗೇಂದ್ರ ಹೇಳಿದರು. “ಕರ್ನಾಟಕದಲ್ಲೂ ಎಂಎಸ್‌ಪಿ ಮೇಲೆ ಪರಿಣಾಮ ಬೀರುತ್ತದೆ. 1966ರ [ಕರ್ನಾಟಕ] ಎಪಿಎಂಸಿ ಕಾಯ್ದೆಯಲ್ಲಿ ಸಂಗ್ರಹಣೆಗೆ ಕೆಲವು ನಿರ್ಬಂಧಗಳಿವೆ. ಹೊಸ ಕಾಯಿದೆ ಖಾಸಗಿ ಮಾರುಕಟ್ಟೆಗಳು ಮತ್ತು ಕಂಪನಿಗಳನ್ನು ಮಾತ್ರ ಉತ್ತೇಜನ ನೀಡುವಂತಿವೆ. ವಾಸ್ತವದಲ್ಲಿ ಈ ಕೃಷಿ ಕಾನೂನುಗಳು ಗ್ರಾಮೀಣ ಭಾರತದ ಜನರ ವಿರುದ್ಧವಾಗಿವೆ.”

ಈ ಕಾನೂನುಗಳು ರೈತರ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ ಎಂದು ಅಮರೇಶ್ ಅಭಿಪ್ರಾಯಪಡುತ್ತಾರೆ. "ಸರ್ಕಾರವು ನಮ್ಮ ಉತ್ಪಾದನಾ ವೆಚ್ಚವನ್ನು ಪರಿಗಣಿಸಬೇಕು ಮಾರ್ಜಿನ್‌ಗಳನ್ನು ಲಾಭವಾಗಿ ಅನುಮತಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಎಂಎಸ್‌ಪಿನ್ನು ಸರಿಪಡಿಸಬೇಕು. ಈ ಕಾನೂನು ತರುವ ಮೂಲಕ ಅವರು ರೈತರಿಗೆ ಹಾನಿ ಮಾಡಲಾಗುತ್ತಿದೆ. ಇದರಿಂದ ದೊಡ್ಡ ಕಂಪನಿಗಳು ತಮ್ಮ ಕಾರ್ಯತಂತ್ರವನ್ನು ಬಳಸಿ ನಮಗೆ ಕಡಿಮೆ ಪಾವತಿಸುತ್ತವೆ,” ಎಂದು ಅವರು ಹೇಳಿದರು.

ಆದರೆ ವಸಂತ ಇದನ್ನು ಆಗಲು ಬಿಡುವುದಿಲ್ಲವೆನ್ನುವ ನಿರ್ಧಾರಕ್ಕೆ ಬಂದಿದ್ದಾರೆ. "ನಾವು ಹಾಕಿದ ಕಠಿಣ ಪರಿಶ್ರಮದ ಪ್ರಕಾರ, ನಾವು ಪ್ರತಿ ಎಕರೆಗೆ 50,000 ರಿಂದ 1 ಲಕ್ಷ ರೂಪಾಯಿಗಳವರೆಗೆ ಸಂಪಾದಿಸಬೇಕು, ಆದರೆ ನಮಗೆ ಏನೂ ಸಿಗುತ್ತಿಲ್ಲ" ಎಂದು ಅವರು ಹೇಳಿದರು, "ಕೇವಲ ಒಂದು ತಿಂಗಳು ಮಾತ್ರವಲ್ಲ, ಅಗತ್ಯವಿದ್ದರೆ ಒಂದು ವರ್ಷದವರೆಗೂ ನಾವು ಹೋರಾಡುತ್ತೇವೆ."

ಅನುವಾದ - ಶಂಕರ ಎನ್. ಕೆಂಚನೂರು

Tamanna Naseer

تمنا نصیر بنگلورو میں مقیم ایک آزاد صحافی ہیں۔

کے ذریعہ دیگر اسٹوریز Tamanna Naseer
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

کے ذریعہ دیگر اسٹوریز Shankar N Kenchanuru