ಕೃಷ್ಣ ಗಾವಡೆ ‌ಬಹಳ ಬೇಗನೆ ಮನೆಯ ಜವಬ್ದಾರಿಗಳಿಗೆ ತನ್ನ ಹೆಗಲು ಕೊಡಬೇಕಾಯಿತು. ತನ್ನ ಹಳ್ಳಿಯ ಮಕ್ಕಳು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕೃಷ್ಣ 200 ರೂಪಾಯಿಗಳ ದಿನಗೂಲಿಗೆ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ. ಅವನ ಸ್ನೇಹಿತರು ಊರಿನ ಮೈದಾನಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದರೆ ಕೃಷ್ಣ ತಾನು ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಸೈಟುಗಳಲ್ಲಿ ಕೆಲಸಕ್ಕಾಗಿ ಕಾಯುತ್ತಾ ನಿಲ್ಲುತ್ತಿದ್ದ. ತನ್ನ 13ನೇ ವಯಸ್ಸಿನಲ್ಲಿ ಕೃಷ್ಣ ತನ್ನ ಅಣ್ಣ ಮಹೇಶನೊಡನೆ ಸೇರಿ ಆರು ಜನರ ಕುಟುಂಬದ ಜವಬ್ದಾರಿ ಹೊತ್ತಿದ್ದ. ಆತನ ಅಣ್ಣ ಅವನಿಗಿಂತ ಹೆಚ್ಚೆಂದರೆ ಮೂರು ವರ್ಷ ದೊಡ್ಡವ.

ಕೃಷ್ಣನ ತಂದೆ ಪ್ರಭಾಕರ್ ಅವರಿಗೆ ಮಾನಸಿಕ ಅಂಗವೈಕಲ್ಯ ಇರುವುದರಿಂದ ಕೆಲಸ ಮಾಡಲು ಸಾಧ್ಯವಿಲ್ಲ, ಮತ್ತು ಅವರ ತಾಯಿ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನವಗನ್ ರಾಜೂರಿ ಗ್ರಾಮದ ತಮ್ಮ ಮನೆಯ ಹೊರಗೆ ಕಲ್ಲಿನ ಹಲಗೆಯ ಮೇಲೆ ಕುಳಿತಿದ್ದ ಕೃಷ್ಣನ 80 ವರ್ಷದ ಅಜ್ಜ ರಘುನಾಥ್ ಗಾವಡೆ ಹೇಳುತ್ತಾರೆ. "ನಾನು ಮತ್ತು ನನ್ನ ಹೆಂಡತಿಗೆ ವಯಸ್ಸಿನಕಾರಣದಿಂದಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ನನ್ನ ಮೊಮ್ಮಕ್ಕಳು ಬೇಗನೆ ಕುಟುಂಬದ ಜವಬ್ದಾರಿ ಹೊರಬೇಕಾಯಿತು. ಕಳೆದ 4-5 ವರ್ಷಗಳಿಂದ ಅವರ ಸಂಪಾದನೆಯಿಂದಲೇ ಮನೆ ನಡೆಯುತ್ತಿದೆ,” ಎಂದು ಅವರು ಮುಂದುವರೆದು ಹೇಳುತ್ತಾರೆ.

ಗಾವಡೆ ಕುಟುಂಬವು ಧಂಗರ್ ಸಮುದಾಯಕ್ಕೆ ಸೇರಿದ್ದು, ಅವರು ಸಾಂಪ್ರದಾಯಿಕವಾಗಿ ಪಶುಪಾಲಕರು ಮತ್ತು ಮಹಾರಾಷ್ಟ್ರದಲ್ಲಿ ವಿಮುಕ್ತ್ ಜಾತಿಗಳು ಮತ್ತು ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದಾರೆ. ಈ ಕುಟುಂಬವು ನವಗನ್ ರಾಜೂರಿನಲ್ಲಿ ಒಂದು ತುಂಡು ಭೂಮಿಯನ್ನು ಹೊಂದಿದೆ (ಒಂದು ಎಕರೆಗಿಂತ ಕಡಿಮೆ), ಅದರಲ್ಲಿ ಜೋಳ ಮತ್ತು ಬಜ್ರಾ ಬೆಳೆಗಳನ್ನು ಬೆಳೆಯಲಾಗುತ್ತದೆಯಾದರೂ ಇದು ಅವರ ಮನೆಬಳಕೆಗಷ್ಟೇ ಸಾಲುತ್ತದೆ.

ಕೃಷ್ಣ ಮತ್ತು ಮಹೇಶ್ ಇಬ್ಬರೂ ಸೇರಿ ತಿಂಗಳಿಗೆ ಸುಮಾರು 6,000-8,000 ರೂ. ಗಳಿಸುತ್ತಿದ್ದರು. ಇದು ಕುಟುಂಬದ ಜೀವನ ವೆಚ್ಚಕ್ಕೆ ಸಾಕಾಗುತ್ತಿತ್ತು. ಆದಾಗ್ಯೂ, ಕೋವಿಡ್-19ರ ಉಲ್ಬಣವು ಕುಟುಂಬದ ಹಣಕಾಸಿನ ಸೂಕ್ಷ್ಮ ಸಮತೋಲನವನ್ನು ಹದಗೆಡಿಸಿತು. ಮಾರ್ಚ್ 2020ರಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಸಹೋದರರು ಕೆಲಸ ಮತ್ತು ಆದಾಯವನ್ನು ಕಳೆದುಕೊಂಡರು.

"ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರ ನೀಡಿದ ಉಚಿತ ಪಡಿತರ ಕಿಟ್‌ಗಳಿಂದ ದಿನ ಕಳೆದೆವು" ಎಂದು ಕೃಷ್ಣ ಮತ್ತು ಮಹೇಶನ ಅಜ್ಜಿ 65 ವರ್ಷದ ಸುಂದರ್ ಬಾಯಿ ಹೇಳುತ್ತಾರೆ. "ಆದರೆ ಮನೆಯಲ್ಲಿ ಹಣವಿರಲಿಲ್ಲ. ನಮಗೆ ಎಣ್ಣೆ ಅಥವಾ ತರಕಾರಿಗಳನ್ನು ಖರೀದಿಸಲು ಸಹ ಸಾಧ್ಯವಾಗಲಿಲ್ಲ. ಲಾಕ್ ಡೌನ್ ನಂತರದ ಮೊದಲ ಮೂರು ತಿಂಗಳುಗಳು ನಮ್ಮ ಪಾಲಿಗೆ ವಿನಾಶಕಾರಿಯಾಗಿದ್ದವು."

ಜೂನ್ 2020ರಲ್ಲಿ ಲಾಕ್ ಡೌನ್ ಅನ್ನು ಸಡಿಲಗೊಳಿಸಲಾಯಿತು ಮತ್ತು ಇದರೊಂದಿಗೆ ಆರ್ಥಿಕ ಚಟುವಟಿಕೆ ಕ್ರಮೇಣ ಗರಗೆದರತೊಡಗಿತಾದರೂ, ಬೀಡ್‌ನಲ್ಲಿ ದಿನಗೂಲಿ ಕೆಲಸ ಸಿಗುವುದು ದುಸ್ತರವಾಗಿತ್ತು. “ಹಾಗಾಗಿ ಮಹೇಶ್ ಪುಣೆಗೆ ವಲಸೆ ಹೋಗಲು ನಿರ್ಧರಿಸಿದ” ಎನ್ನುತ್ತಾರೆ ರಘುನಾಥ್. ಆದರೆ ಮನೆಗೆ ಹಣ ಕಳುಹಿಸಲು ಬೇಕಾಗುವಷ್ಟು ಕೆಲಸ ಸಿಗಲಿಲ್ಲ. "ಕುಟುಂಬವನ್ನು ನೋಡಿಕೊಳ್ಳಲೆಂದು ಕೃಷ್ಣ ಕೆಲಸ ಹುಡುಕುತ್ತಾ ಬೀಡ್‌ನಲ್ಲೇ ಉಳಿದುಕೊಂಡನು."

ಈ ನಿರ್ಧಾರವು ಆತನ ಪಾಲಿಗೆ ಮಾರಕವಾಗಿ ಪರಿಣಮಿಸಿತು.

Left: Krishna's grandparents, Raghunath and Sundarbai Gawade. Right: His father, Prabhakar Gawade. They did not think his anxiety would get worse
PHOTO • Parth M.N.
Left: Krishna's grandparents, Raghunath and Sundarbai Gawade. Right: His father, Prabhakar Gawade. They did not think his anxiety would get worse
PHOTO • Parth M.N.

ಎಡಚಿತ್ರ: ಕೃಷ್ಣನ ತಾತ ಮತ್ತು ಅಜ್ಜಿಯಾದ ರಘುನಾಥ್ ಮತ್ತು ಸುಂದರಬಾಯಿ ಗಾವಡೆ. ಬಲಚಿತ್ರ: ಅವನ ತಂದೆ ಪ್ರಭಾಕರ ಗಾವಡೆ. ಆತನ ಖಿನ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅವರಿಗೆ ತಿಳಿಯಲಿಲ್ಲ

ಕೃಷ್ಣ ತನ್ನ ಜವಬ್ದಾರಿಗಳನ್ನು ನಿಭಾಯಿಸಲಾಗದೆ ಅವುಗಳೊಡನೆ ಹೋರಾಡುತ್ತಿದ್ದ. ಇದು 17 ವರ್ಷದ ಕೃಷ್ಣನ ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿತು ಮತ್ತು ಆತನ ಆತಂಕ ಮತ್ತು ಖಿನ್ನತೆಯು ಆತನ ಕುಟುಂಬ ಸದಸ್ಯರಿಗೆ ಸ್ಪಷ್ಟವಾಗಿ ಗೋಚರಿಸತೊಡಗಿತು. ರಘುನಾಥ್ ಹೇಳುತ್ತಾರೆ, "ಆ ಸಮಯದಲ್ಲಿ ಯಾವುದೇ ಕೆಲಸವಿರಲಿಲ್ಲ. ಅವನು ತುಂಬಾ ಸಿಡುಕುತ್ತಿದ್ದ. ಊಟ ಮಾಡೆಂದು ಹೇಳಿದರೂ ನಮ್ಮ ಮೇಲೆ ಕೂಗಾಡುತ್ತಿದ್ದ. ಅವನು ದಿನ ಕಳೆದಂತೆ ಜನರೊಡನೆ ಮಾತನಾಡುವುದನ್ನು ನಿಲ್ಲಿಸಿದ. ಅಲ್ಲದೆ ಇಡೀ ದಿನ ಮಲಗಿರುತ್ತಿದ್ದ.

ಆದರೆ ಇದು ಹೀಗೆ ಕೊನೆಗೊಳ್ಳಬಹುದೆಂದು ಕುಟುಂಬವು ಊಹಿಸಿರಲಿಲ್ಲ: ಕಳೆದ ವರ್ಷ ಜುಲೈ ಮೂರನೇ ವಾರದಲ್ಲಿ ಒಂದು ಮಧ್ಯಾಹ್ನ, ಸುಂದರಬಾಯಿ ಕೃಷ್ಣನ ಕೋಣೆಗೆ ಹೋದಾಗ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೃಷ್ಣನ ದೇಹವನ್ನು ಕಂಡರು.

ಸುಂದರ್ ಬಾಯಿ ಹೇಳುತ್ತಾರೆ, "ಮಹೇಶನಿದ್ದಾಗ, ಅವನಿಗೆ ಸ್ವಲ್ಪ ನೆಮ್ಮದಿ ಇತ್ತು. ಅವನನ್ನು ಅರ್ಥಮಾಡಿಕೊಳ್ಳಬಲ್ಲ ಒಬ್ಬ ಅಣ್ಣನಿದ್ದಾನೆನ್ನುವ ಭರವಸೆಯಿತ್ತು. ಮಹೇಶ ಪುಣೆಗೆ ತೆರಳಿದ ನಂತರ, ಅವನು ಒಬ್ಬಂಟಿಯಾದ. ಇಡೀ ಕುಟುಂಬದ ಭಾರ ಅವನೊಬ್ಬನ ಮೇಲೆ ಹೊರಿಸಿದಂತೆ ಅನ್ನಿಸತೊಡಗಿತು ಹಾಗೂ ತನ್ನ ಅನಿಯಮಿತ ಆದಾಯದಿಂದ ಕುಟುಂಬದ ಜವಬ್ದಾರಿ ಹೊರುವುದು ಸಾಧ್ಯವಿಲ್ಲವೆಂದು ಅವನಿಗೆ ಎನ್ನಿಸಿರಬಹುದು."

ಕೃಷ್ಣನ ನಿಧನದ ನಂತರ 21 ವರ್ಷದ ಮಹೇಶ್ ಮನೆಗೆ ಮರಳಿದ್ದಾರೆ. ಮಹೇಶ್‌ ಈಗ ಬೀಡ್‌ನಲ್ಲಿ ಮೊದಲಿನಂತೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅಲ್ಲಿ ಸಿಕ್ಕಾಗಲಷ್ಟೇ ಕೆಲಸ. ಈಗ ಕುಟುಂಬದ ಸಂಪೂರ್ಣ ಜವಾಬ್ದಾರಿ ಮಹೇಶ್‌ ಹೆಗಲಿಗೇರಿದೆ.

ಕೃಷ್ಣನ ಕುಟುಂಬದಂತೆಯೇ ಸಾಂಕ್ರಾಮಿಕ ಪಿಡುಗಿನ ಪರಿಣಾಮವು ಮಾರ್ಚ್ 2020ರಿಂದ ಇನ್ನೂ ಅನೇಕರನ್ನು ಬಡತನಕ್ಕೆ ತಳ್ಳಿದೆ. ಯುಎಸ್ ಮೂಲದ ಪ್ಯೂ ರಿಸರ್ಚ್ ಸೆಂಟರ್‌ನ ಮಾರ್ಚ್ 2021ರ ವರದಿಯ ಪ್ರಕಾರ : "ಕೋವಿಡ್-19 ಆರ್ಥಿಕ ಹಿಂಜರಿತದಿಂದಾಗಿ ಭಾರತದಲ್ಲಿ (ದಿನಕ್ಕೆ 2‌ ಡಾಲರ್ ಅಥವಾ ಅದಕ್ಕಿಂತ ಕಡಿಮೆ ಆದಾಯದೊಂದಿಗೆ) ಬಡವರ ಸಂಖ್ಯೆ 75 ದಶಲಕ್ಷದಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ." ಆರ್ಥಿಕ ಹಿಂಜರಿತವು ಹಲವಾರು ವರ್ಷಗಳಿಂದ ಮಂದಗತಿಯ ಗ್ರಾಮೀಣ ಆರ್ಥಿಕತೆ‌ ಹೊಂದಿರುವ, ಬರ ಮತ್ತು ಸಾಲದೊಂದಿಗೆ ಹೋರಾಡುತ್ತಿರುವ ಕೃಷಿ ಜಿಲ್ಲೆಯಾದ ಬೀಡ್‌ನಲ್ಲಿ ಜೀವನೋಪಾಯಗಳ ವಿನಾಶವನ್ನು ಇನ್ನಷ್ಟು ಹೆಚ್ಚಿಸಿದೆ.

ತಮ್ಮ ಸುತ್ತಲಿನ ವಯಸ್ಕರು ಹೊರುವ ಆರ್ಥಿಕ ಹೊರೆ ಮಕ್ಕಳು ಮತ್ತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಮಹಾರಾಷ್ಟ್ರದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಸಂತೋಷ್ ಶಿಂಧೆ ಹೇಳುವಂತೆ, ಈ ಬಿಕ್ಕಟ್ಟು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. "ವಿಶೇಷವಾಗಿ ಹಿಂದುಳಿದ ಕುಟುಂಬಗಳಲ್ಲಿ, ಮಕ್ಕಳು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಬೇಕಾದ ಪರಿಸ್ಥಿತಿಯಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಜವಾಬ್ದಾರಿಯನ್ನು ನಿಭಾಯಿಸುವುದು ಮಕ್ಕಳಿಗೆ ಒಮ್ಮೊಮ್ಮೆ ಕಷ್ಟವಾಗುತ್ತದೆ" ಎಂದು ಅವರು ಹೇಳುತ್ತಾರೆ. "ನಮ್ಮ ಸುತ್ತಲಿನ ಜನರು ಎರಡು ಹೊತ್ತಿನ ಊಟ ಹೊಂದಿಸಿಕೊಳ್ಳುವುದಕ್ಕೇ ಪರದಾಡುತ್ತಿರುವಾಗ ಮಾನಸಿಕ ಆರೋಗ್ಯದ ಕುರಿತು ಕಾಳಜಿ ವಹಿಸುವಷ್ಟು ಸಮಯ ಸಿಗುವುದಿಲ್ಲ."

ಮಕ್ಕಳು ಕೆಲಸ ಮಾಡಬೇಕಾಗಿಲ್ಲದಿದ್ದರೂ, ಮನೆಯಲ್ಲಿ ವಯಸ್ಕರ ನಡುವೆ ಆಗಾಗ ಜಗಳಕ್ಕೆ ಕಾರಣವಾಗುವ ಆರ್ಥಿಕ ಸಂಕಷ್ಟ ಮತ್ತು ಒತ್ತಡದ ವಾತಾವರಣದಿಂದ ಅವರು ತೊಂದರೆಗೊಳಗಾಗುತ್ತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ' ಎಂದು ಶಿಂಧೆ ಹೇಳುತ್ತಾರೆ. "ಕೊವಿಡ್‌ ಪಿಡುಗಿಗೂ ಮೊದಲು ಮಕ್ಕಳು ಹೊರಗೆ ಆಟವಾಡಬಹುದಿತ್ತು, ಬೇರೆ ಊರುಗಳಿಗೆ ಹೋಗಬಹುದಿತ್ತು. ಆದರೆ ಈಗ ಶಾಲೆಗಳು ಮುಚ್ಚಲ್ಪಟ್ಟಿವೆಯಾದ್ದರಿಂದ ಅವರಿಗೆ ಮನೆಯ ವಾತಾವರಣದಿಂದ ದೂರವಿರುವ ಅವಕಾಶಗಳೇ ಇಲ್ಲವಾಗಿವೆ.”

Left: Sanjana Birajdar left home to escape the stressful atmosphere. Right: Her mother, Mangal. "I can see why my daughter fled"
PHOTO • Parth M.N.
Left: Sanjana Birajdar left home to escape the stressful atmosphere. Right: Her mother, Mangal. "I can see why my daughter fled"
PHOTO • Parth M.N.

ಎಡ: ಒತ್ತಡದ ವಾತಾವರಣದಿಂದ ತಪ್ಪಿಸಿಕೊಳ್ಳಲೆಂದು ಸಂಜನಾ ಬಿರಾಜ್ದಾರ್ ಮನೆ ಬಿಟ್ಟು ಹೋದಳು. ಬಲ: ಅವಳ ತಾಯಿ ಮಂಗಲ್. 'ನನ್ನ ಮಗಳು ಏಕೆ ಓಡಿಹೋದಳೆನ್ನುವುದನ್ನು ಊಹಿಸಬಲ್ಲೆ

ಆದರೆ 14 ವರ್ಷದ ಸಂಜನಾ ಬಿರಾಜದಾರ ಆ ಪರಿಸರವನ್ನು ತೊರೆದಳು. ಜೂನ್ 2021ರಲ್ಲಿ, ಅವಳು ಬೀಡ್‌ನ ಪರ್ಲಿ ನಗರದಲ್ಲಿರುವ ತನ್ನ ಒಂದು ಕೋಣೆಯ ಮನೆ ಬಿಟ್ಟು ಅಲ್ಲಿಂದ 220 ಕಿಮೀ ದೂರದಲ್ಲಿರುವ ಔರಂಗಾಬಾದ್‌ಗೆ ಓಡಿಹೋದಳು. ಸಂಜನಾ ತನ್ನ ಜೊತೆ ತಮ್ಮ ಸಮರ್ಥ್ (11 ವರ್ಷ) ಮತ್ತು ತಂಗಿ ಸಪ್ನಾಳನ್ನು (9 ವರ್ಷ) ಕೂಡ ತನ್ನೊಂದಿಗೆ ಕರೆದುಕೊಂಡು ಹೋದಳು. "ನನಗೆ ಅದನ್ನು ಇನ್ನು ಸಹಿಸುವುದು ಸಾಧ್ಯವಿಲ್ಲವೆನ್ನಿಸಿತ್ತು. ನಾನು ಆ ಮನೆಯಿಂದ ಹೊರಬರಲು ಬಯಸಿದ್ದೆ" ಎಂದು ಅವಳು ಗಟ್ಟಿ ದನಿಯಲ್ಲಿ ಹೇಳುತ್ತಾಳೆ.

ಸಂಜನಾಳ ತಾಯಿ ಐದು ಮನೆಗಳಲ್ಲಿ ಮನೆಗೆಲಸ ಮಾಡುವ ಮೂಲಕ ತಿಂಗಳಿಗೆ 2,500 ರೂ.ಗಳನ್ನು ಗಳಿಸುತ್ತಾರೆ. ಅವಳ ತಂದೆ ಟೆಂಪೋ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದರು. ಮಂಗಲ್‌ ಹೇಳುತ್ತಾರೆ, "ಲಾಕ್‌ಡೌನ್‌ ಅವರ ಕೆಲಸ ಹೋಯಿತು, ನಮ್ಮ ಬಳಿ ಕೃಷಿಭೂಮಿಯೂ ಇಲ್ಲ. ನನ್ನ ತಮ್ಮನೂ ನಮ್ಮೊಂದಿಗೆ ಇದ್ದು ಅವನಿಗೂ ಕೆಲಸವಿಲ್ಲ. ನಾವು ಬದುಕು ನಡೆಸಲು ಹೆಣಗಾಡುತ್ತಿದ್ದೇವೆ.ʼ

ಸಂಜನಾ ಮನೆಯಿಂದ ಹೊರಹೋಗಲು ನಿರ್ಧರಿಸಿದಾಗ, 35 ವರ್ಷದ ಮಂಗಲ್ ಮತ್ತು 40 ವರ್ಷದ ರಾಮ್ ಪ್ರತಿದಿನ ಹಣದ ವಿಷಯವಾಗಿ ಜಗಳವಾಡುತ್ತಿದ್ದರು. ಅವರ ಜಗಳವು ಪದೇಪದೇ ಅತ್ಯಂತ ಕೆಟ್ಟ ರೂಪವನ್ನು ಪಡೆಯುತ್ತಿತ್ತು. ಮಂಗಲ್ ಹೇಳುತ್ತಾರೆ, "ಕೆಲವೊಮ್ಮೆ ಮನೆಯಲ್ಲಿ ತಿನ್ನಲು ಏನೂ ಇರುತ್ತಿರಲಿಲ್ಲ, ನಾವು ನೀರು ಕುಡಿದು ಮಲಗುತ್ತಿದ್ದೆವು. ನಮಗೆ ಕೋಪ ಬಂದಾಗ ನಾವು ಅದನ್ನು ನಮ್ಮ ಪುಟ್ಟ ಮಕ್ಕಳ ಮೇಲೆ ತೀರಿಸಿಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ಮಕ್ಕಳಿಗೆ ಪೂರಕ ವಾತಾವರಣ ಇದ್ದಿರಲಿಲ್ಲವೆನ್ನುವುದನ್ನು ನಾನೂ ಒಪ್ಪುತ್ತೇನೆ "

ಕೆಲಸ ಸಿಗದೆ ಹತಾಶನಾಗಿದ್ದ ಮಂಗಲ್‌ ಅವರ ತಮ್ಮ ಮನೆಯಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದಾಗಿ ಮನೆಯ ವಾತಾವರಣ ಬಹಳ ಕೆಟ್ಟದಾಗಿತ್ತು. “ಅವನುಕುಡಿದು ಬಂದು ನನ್ನನ್ನು ಹೊಡೆಯುತ್ತಿದ್ದ. ದೊಡ್ಡ ಪಾತ್ರೆಗಳನ್ನು ಎತ್ತಿಕೊಂಡು ನನ್ನ ತಲೆಗೆ ಬಡಿಯುತ್ತಿದ್ದ. ಅವನಿಂದಾಗಿ ನನಗೆ ಗಾಯಗಳಾಗಿವೆ. ಅವನಿಗೆ ಸರಿಯಾಗಿ ಊಟ ಹಾಕುವುದಿಲ್ಲವೆನ್ನುವ ಕಾರಣ ಹೇಳಿ ಹೊಡೆಯುತ್ತಾನೆ. ಆದರೆ ಮನೆಯಲ್ಲಿ ತಿನ್ನಲು ಏನೂ ಇಲ್ಲದರಿರುವಾಗ ಅವನಿಗೆ ಎಲ್ಲಿಂದ ತಂದು ಹಾಕುವುದು?”

ಅವರ ಈ ತಮ್ಮ ಮಕ್ಕಳು ನೋಡುತ್ತಿದ್ದರೆನ್ನುವುದನ್ನು ಕೂಡಾ ಗಮನಿಸುವುದಿಲ್ಲವೆಂದು ಮಂಗಲ್‌ ಹೇಳುತ್ತಾರೆ. “ಅವನು ಮಕ್ಕಳ ಮುಂದೆಯೇ ನನ್ನನ್ನು ಹೊಡೆಯುತ್ತಾನೆ. ಈಗೀಗ ಅವನು ಕುಡಿದು ಬಂದಾಗಲೆಲ್ಲ ಮನೆಯಲ್ಲಿ ಗದ್ದಲ ಸೃಷ್ಟಿಸುತ್ತಾನೆ. ಅಂತಹ ಸಮಯದಲ್ಲಿ ಮಕ್ಕಳು ಮನೆಯಿಂದ ಹೊರಹೋಗುತ್ತಾರೆ.” ಎನ್ನುತಾರೆ ಆಕೆ. “ಆದರೂ ಅವರಿಗೆ ಎಲ್ಲವೂ ಕೇಳಿಸುತ್ತದೆ. ಒಳಗೆ ಏನು ನಡೆಯುತ್ತಿದೆಯೆನ್ನುವುದು ಅವರಿಗೂ ಅರ್ಥವಾಗುತ್ತದೆ. ನನ್ನ ಮಗಳು ಯಾಕೆ ಮನೆ ಬಿಟ್ಟು ಹೋದಳೆಂದು ನಾನು ತಿಳಿಯಬಲ್ಲೆ.”

ಸಂಜನಾ ಮನೆಯಲ್ಲಿ ಉಸಿರುಕಟ್ಟಿಸುವಂತಾಗುತ್ತಿತ್ತು ಎನ್ನುತ್ತಾಳೆ. ಅವಳಿಗೆ ಉಳಿದಿದ್ದ ಏಕೈಕ ಆಯ್ಕೆಯೆಂದರೆ ಮನೆ ಬಿಟ್ಟು ಹೋಗುವುದು. ಆದರೆ ಪಾರ್ಲಿಯಲ್ಲಿ ರೈಲು ಹತ್ತಿದ ನಂತರ ಮಕ್ಕಳಿಗೆ ಎಲ್ಲಿಗೆ ಹೋಗುವುದೆನ್ನುವುದು ತಿಳಿದಿರಲಿಲ್ಲ. ಮುಂದೇನು ಎನ್ನುವುದು ಗೊತ್ತಿಲ್ಲದೆ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ಅವಳು “ನಾನು ಯಾಕೆ ಔರಂಗಬಾದಿನಲ್ಲಿ ಇಳಿದೆ ಎನ್ನುವುದು ನನಗೂ ಗೊತ್ತಿಲ್ಲ,” ಎನ್ನುತ್ತಾಳೆ. “ರೈಲಿಳಿದು ನಂತರ ಒಂದಷ್ಟು ಹೊತ್ತು [ರೈಲ್ವೇ] ಸ್ಟೇಷನ್ನಿನಲ್ಲೇ ಕುಳಿತಿದ್ದೆವು. ನಂತರ ರೈಲ್ವೇ ಪೋಲಿಸರು ನಮ್ಮನ್ನು ಮಕ್ಕಳ ಹಾಸ್ಟೆಲ್ಲಿಗೆ ಸೇರಿಸಿದರು,” ಮುಂದುವರೆದು ಹೇಳುತ್ತಾಳೆ.

Mangal with three of her four children: the eldest, Sagar (left), Sanjana and Sapna (front). Loss of work has put the family under strain
PHOTO • Parth M.N.

ತನ್ನ ನಾಲ್ಕು ಮಕ್ಕಳಲ್ಲಿ ಮೂವರೊಂದಿಗೆ ಮಂಗಲ್: ಹಿರಿಯ ಮಗ, ಸಾಗರ್ (ಎಡ), ಸಂಜನಾ ಮತ್ತು ಸಪ್ನಾ (ಮುಂಭಾಗ). ಕೆಲಸದ ನಷ್ಟವು ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿದೆ

ಈ ಮೂವರು 2021ರ ಆಗಸ್ಟ್ ಕೊನೆಯ ವಾರದವರೆಗೆ ಎರಡು ತಿಂಗಳ ಕಾಲ ಹಾಸ್ಟೆಲ್ಲಿನಲ್ಲಿ ತಂಗಿದ್ದರು. ಕೊನೆಗೆ ಸಂಜನಾ ತಾವೆಲ್ಲರೂ ಪಾರ್ಲಿಯಿಂದ ಬಂದವರು ಎಂದು ಹಾಸ್ಟೆಲ್ ಅಧಿಕಾರಿಗಳಿಗೆ ತಿಳಿಸಿದಳು. ಸ್ಥಳೀಯ ಕಾರ್ಯಕರ್ತರ ಸಹಾಯದಿಂದ ಔರಂಗಾಬಾದ್ ಮತ್ತು ಬೀಡ್ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳು ಮಕ್ಕಳನ್ನು ತಮ್ಮ ಹೆತ್ತವರೊಂದಿಗೆ ಮತ್ತೆ ಸೇರಿಸಿದರು.

ಆದರೆ ಅವರು ಮನೆಗೆ ಮರಳಿದ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ

ಸಂಜನಾ ತನ್ನ ಶಾಲೆ ತೆರೆಯುವುದನ್ನೇ ಕಾಯುತ್ತಿದ್ದಾಳೆ. “ನನಗೆ ಶಾಲೆಗೆ ಹೋಗುವುದೆಂದರೆ ಬಹಳ ಇಷ್ಟ. ನಾನು ನನ್ನ ಶಾಲೆ ಮತ್ತು ಸ್ನೇಹಿತರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ,” ಎನ್ನುತ್ತಾಳೆ ದೊಡ್ಡವಳಾದ ನಂತರ ಪೋಲಿಸ್‌ ಆಗಲು ಬಯಸುವ ಈ ಹುಡುಗಿ. “ಶಾಲೆ ಇದ್ದಿದ್ದರೆ ನಾನು ಮನೆ ಬಿಟ್ಟು ಹೋಗುವ ಸನ್ನಿವೇಶವೇ ಬರುತ್ತಿರಲಿಲ್ಲ,” ಎಂದು ಅವಳು ಹೇಳುತ್ತಾಳೆ.

ಮಹಾರಾಷ್ಟ್ರದಾದ್ಯಂತ ಮಕ್ಕಳು ಸಾಂಕ್ರಾಮಿಕ ಪಿಡುಗು ಸೃಷ್ಟಿಸಿರುವ ಬದುಕಿನ ಸಮಸ್ಯೆಗಳನ್ನು ಎದುರಿಸಲು ಹೆಣಗಾಡುತ್ತಿದ್ದಾರೆ. ಬೀಡ್‌ನಲ್ಲಿ ಪ್ರಕಟವಾಗುವ ಮರಾಠಿ ದೈನಿಕ ಪ್ರಜಾಪತ್ರದಲ್ಲಿ ಆಗಸ್ಟ್ 8, 2021 ರಂದು ಪ್ರಕಟವಾದ ವರದಿಯು , ವರ್ಷದ ಮೊದಲ ಏಳು ತಿಂಗಳಲ್ಲಿ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 25 ಮಕ್ಕಳು ಆತ್ಮಹತ್ಯೆಯಿಂದ ತೀರಿಕೊಂಡಿದ್ದಾರೆ ಎಂದು ಹೇಳಿದೆ

“ಮಕ್ಕಳ ಮನರಂಜನೆಗೆ ಅವಕಾಶವಿಲ್ಲದಿದ್ದಾಗ ಮತ್ತು ರಚನಾತ್ಮಕವಾಗಿ ತಮ್ಮ ಮನಸ್ಸನ್ನು ಉತ್ತೇಜಿಸಬಲ್ಲ ಸಂಪನ್ಮೂಲಗಳು ಇಲ್ಲದೆ ಹೋದಾಗ ಬಹಳ ದೊಡ್ಡ ನಿರ್ವಾತವೊಂದು ನಿರ್ಮಾಣವಾಗುತ್ತದೆ. ಜೊತೆಗೆ ತಮ್ಮ ಬದುಕಿನ ಶೈಲಿಯಲ್ಲಿ ಕಂಡುಬರುತ್ತಿರುವ ಕುಸಿತಕ್ಕೆ ತಾವು ಸಾಕ್ಷಿಯಾಗುತ್ತಿರುವುದರ ಜೊತೆಗೆ ಅದರಲ್ಲಿ ಭಾಗಿಯೂ ಆಗಿರುತ್ತಾರೆ. ಇವೆಲ್ಲವೂ ಅವರಲ್ಲಿ ಖಿನ್ನತೆ ಮೂಡಿಸಲು ಕಾರಣವಾಗುತ್ತವೆ,” ಎನ್ನುತ್ತಾರೆ ಥಾಣೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಮುದಾಯ ಮಾನಸಿಕ ಆರೋಗ್ಯದ ಮೇಲೆ ಕೇಂದ್ರೀತವಾಗಿರುವ ಲಾಭರಹಿತ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಫಾರ್ ಸೈಕಲಾಜಿಕಲ್ ಹೆಲ್ತ್ ನ ಸ್ಥಾಪಕರಾದ ಡಾ. ಆನಂದ್ ನಾಡಕರ್ಣಿ.

Rameshwar Thomre at his shop, from where his son went missing
PHOTO • Parth M.N.

ರಾಮೇಶ್ವರ ಥೋಮ್ರೆ ತನ್ನ ಅಂಗಡಿಯಲ್ಲಿ, ಇಲ್ಲಿಂದಲೇ ಅವರ ಮಗ ಕಾಣೆಯಾದನು

ಮಹಾರಾಷ್ಟ್ರದಾದ್ಯಂತ ಮಕ್ಕಳು ಸಾಂಕ್ರಾಮಿಕ ಪಿಡುಗು ಸೃಷ್ಟಿಸಿರುವ ಬದುಕಿನ ಸಮಸ್ಯೆಗಳನ್ನು ಎದುರಿಸಲು ಹೆಣಗಾಡುತ್ತಿದ್ದಾರೆ. ಬೀಡ್‌ನಲ್ಲಿ ಪ್ರಕಟವಾಗುವ ಮರಾಠಿ ದೈನಿಕ ಪ್ರಜಾಪಾತ್ರದಲ್ಲಿ ಆಗಸ್ಟ್ 8, 2021 ರಂದು ಪ್ರಕಟವಾದ ವರದಿಯು, ವರ್ಷದ ಮೊದಲ ಏಳು ತಿಂಗಳಲ್ಲಿ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 25 ಮಕ್ಕಳು ಆತ್ಮಹತ್ಯೆಯಿಂದ ತೀರಿಕೊಂಡಿದ್ದಾರೆ ಎಂದು ಹೇಳಿದೆ

ಕೋವಿಡ್-19 ಕಾಣಿಸಿಕೊಂಡ ನಂತರ ಮಕ್ಕಳು ಮತ್ತು ಹದಿಹರೆಯದವರಲ್ಲಿ ಖಿನ್ನತೆ ಹೆಚ್ಚಾಗಿದೆ ಎಂದು ನಾಡಕರ್ಣಿ ಹೇಳುತ್ತಾರೆ. "ಇದನ್ನು 'ಮರೆಮಾಚಿದ ಖಿನ್ನತೆ' ಎಂದು ಕರೆಯಲಾಗುತ್ತದೆ" ಎಂದು ಅವರು ಹೇಳುತ್ತಾರೆ. "ಇದು ವಯಸ್ಕರಲ್ಲಿ ಕಾಣುವಂತೆ ಹೊರಗೆ ಕಾಣುವುದಿಲ್ಲ. ಅನೇಕ ಬಾರಿ, ಕುಟುಂಬ ಸದಸ್ಯರಿಗೆ ಅದರ ಯಾವುದೇ ಸುಳಿವು ಸಿಗುವುದಿಲ್ಲ. ಭಾವನಾತ್ಮಕ ಸಂಕಟದ ಸೂಚನೆಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಗುವುದಿಲ್ಲ, ಮತ್ತು ಹದಿಹರೆಯದ ಮಕ್ಕಳಿಗೆ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಖಿನ್ನತೆಯು ಗಮನಕ್ಕೆ ಬರುವುದಿಲ್ಲ, ಅದು ಪತ್ತೆಯಾಗದಂತೆ ಮತ್ತು ಚಿಕಿತ್ಸೆ ಇಲ್ಲದಂತೆ ಆಗಿಬಿಡುತ್ತದೆ."

ರಾಮೇಶ್ವರ ಥೋಮ್ರೆ ಅವರಿಗೂ ತನ್ನ ಮಗನಲ್ಲಿ ಖಿನ್ನತೆಯ ಯಾವ ಲಕ್ಷಣಗಳೂ ಕಂಡುಬಂದಿರಲಿಲ್ಲ.

ರಾಮೇಶ್ವರ್ ಅವರ 15 ವರ್ಷದ ಮಗ ಅವಿಷ್ಕಾರ್ ಫೆಬ್ರವರಿ 28, 2021ರಂದು ಬೀಡ್‌ನ ಮಜಲ್ಗಾಂವ್ ತಾಲ್ಲೂಕಿನ (ಮಂಜ್ಲೆಗಾಂವ್ ಎಂದೂ ಕರೆಯಲ್ಪಡುತ್ತದೆ) ಅವರ ಗ್ರಾಮವಾದ ದಿಂಡ್ರುಡ್‌ನಿಂದ ಕಾಣೆಯಾಗಿದ್ದನು. ಒಂದು ವಾರದ ನಂತರ, ಅವಿಷ್ಕಾರ್ ಶವ ಅವನ ಶಾಲೆಯಲ್ಲಿ ಪತ್ತೆಯಾಯಿತು. "ಇದರ ಹಿಂದೆ ಯಾರದೇ ಕೈವಾಡವಿಲ್ಲವೆಂದು ಪೊಲೀಸರು ಖಚಿತಪಡಿಸಿದ್ದಾರೆ" ಎಂದು ರಾಮೇಶ್ವರ್ ಹೇಳುತ್ತಾರೆ. "ಶಾಲೆ ಮುಚ್ಚಿತ್ತು. ಆದರೆ ಬಾಗಿಲ ಕೆಳಗೆ ಒಬ್ಬರು ನುಸುಳುವಷ್ಟು ಜಾಗವಿತ್ತು ಅವನ ಅದರ ಮೂಲಕ ಒಳಗೆ ಹೋಗಿ ನೇಣು ಹಾಕಿಕೊಂಡಿದ್ದಾನೆ."

ಶಾಲೆಯು ಮುಚ್ಚಿದ್ದರಿಂದಾಗಿ ನಾವು ನೋಡುವ ತನಕವೂ ಹೆಣವು ನೇಣು ಹಾಕಿದ ಸ್ಥಿತಿಯಲ್ಲೇ ಇತ್ತು. “ನಾವು ಅವನಿಗಾಗಿ ಎಲ್ಲೆಡೆ ಹುಡುಕಿದ್ದೆವು. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ.” ಎನ್ನುತ್ತಾರೆ ತಂದೆ. “ಶಾಲೆಯ ಬಳಿ ಕ್ರಿಕೆಟ್‌ ಆಡುತ್ತಿದ್ದ ಕೆಲವು ಮಕ್ಕಳು ತಮ್ಮ ಚೆಂಡು ಆ ಕೋಣೆಗೆ ಹೋದ ಕಾರಣ ಆ ಕೋಣೆಯೊಳಗೆ ಚೆಂಡು ತರಲು ಹೋದಾಗ ಅವರಿಗೆ ಅಲ್ಲಿ ಹೆಣವಿರುವುದು ಕಾಣಿಸಿತು.”

ರಾಮೇಶ್ವರ್‌ ತನ್ನ ಮಗನ ಜೀವನ ಕೊನೆಗೊಳಿಸಿಕೊಳ್ಳುವಂತೆ ಮಾಡಿದ್ದು ಏನಿರಬಹುದೆಂದು ಚಿಂತಿಸುತ್ತಿದ್ದಾರೆ. “ಅವನು ನಮ್ಮ ಬಳಿ ಏನೂ ಹೇಳಿಕೊಳ್ಳಲಿಲ್ಲ. ಅವನ ಸಹೋದರನಿಗೂ ಅವನು ತುಂಬಾ ಆಪ್ತನಾಗಿದ್ದ. ಈಗ ಅವನೂ ನಮ್ಮಂತೆಯೇ ಗೊಂದಲದಲ್ಲಿದ್ದಾನೆ.” ಎನ್ನುತ್ತಾರವರು. “ಅವನು ಕಣ್ಮರೆಯಾದ ದಿನ ಅಂಗಡಿಯ ಬಾಗಿಲು ತೆರೆದು ಮಧ್ಯಾಹ್ನ ಊಟದ ನಂತರ ಬರುವುದಾಗಿಹೇಳಿ ಹೋಗಿದ್ದ. ಹಾಗೆ ಹೋದವನು ಮತ್ತೆ ಬರಲೇ ಇಲ್ಲ.”

ರಾಮೇಶ್ವರ ತಮ್ಮ ಮಾಲಿಕತ್ವದ ಕೃಷಿ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಬೀಜ, ಗೊಬ್ಬರ, ಕೀಟನಾಶಕ ಮತ್ತು ಇತ್ಯಾದಿ ಕೃಷಿ ಸಂಬಂಧಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. “ಲಾಕ್‌ಡೌನ್‌ ಸಮಯದಲ್ಲಿ ಎಲ್ಲರಂತೆ ನಾವೂ ಸಂಕಷ್ಟಗಳನ್ನು ಎದುರಿಸಿದೆವು. ಆದರೆ ಅವನ ಸಾವಿಗೆ ಅದೇ ಕಾರಣವೆಂದು ನನಗೆ ಈಗಲೇ ಅನ್ನಿಸುತ್ತಿಲ್ಲ. ಅವನ ಸಾವಿಗೆ ನಿಜವಾದ ಕಾರಣ ಏನೆನ್ನುವುದು ಇದುವರೆಗೂ ನನಗೆ  ತಿಳಿದಿಲ್ಲ. ತಿಳಿದಿದ್ದರೆ ಚೆನ್ನಾಗಿರುತ್ತಿತ್ತು.” ಎನ್ನುತ್ತಾರವರು.

ವರದಿಯು ಪುಲಿಟ್ಜರ್ ಸೆಂಟರ್ ಬೆಂಬಲಿತ ಸರಣಿಯ ಒಂದು ಸಂಚಿಕೆಯಾಗಿದೆ . ಸಹಯೋಗವು ವರದಿಗಾರರಿಗೆ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ರೂಪದಲ್ಲಿ ದೊರೆತಿರುತ್ತದೆ .

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru