"ನಾವು ನಮ್ಮ ಇಡೀ ಜೀವನವನ್ನು ದಾಖಲೆಗಳನ್ನು ನೀಡುತ್ತಾ, ಸರ್ಕಾರ ಮತ್ತು ಇತರ ನಾಗರಿಕರ ಮುಂದೆ ನಾವೂ ಎಲ್ಲರಂತೆ ಈ ದೇಶಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸುವುದರಲ್ಲೇ ಕಳೆದಿದ್ದೇವೆ."

ಬಹರುಲ್ ಇಸ್ಲಾಂ ಕಸವನ್ನು ಬೇರ್ಪಡಿಸುವುದರಲ್ಲಿ ತೊಡಗಿದ್ದರು. ಅವರು ಪ್ಲಾಸ್ಟಿಕ್ ಬಾಟಲಿಗಳು, ಒದ್ದೆಯಾದ ಕಸ, ರಟ್ಟಿನ ಮತ್ತು ಥರ್ಮಾಕೋಲ್, ಹೀಗೆ ತ್ಯಾಜ್ಯಗಳ ಪ್ರತ್ಯೇಕ ರಾಶಿಗಳನ್ನು ಮಾಡಿ, ಪ್ರತಿಯೊಂದನ್ನು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಿಗೆ ತುಂಬುತ್ತಾರೆ. 35 ವರ್ಷ ವಯಸ್ಸಿನ ಇವರ ಕುಟುಂಬ ಅಸ್ಸಾಂನ ಬಾರ್ಪೇಟಾ, ಬೊಂಗೈಗಾಂವ್ ಮತ್ತು ಗೋಲ್ಪಾರಾ ಜಿಲ್ಲೆಗಳಿಂದ ವಲಸೆ ಬಂದಿರುವ 13 ಕುಟುಂಬಗಳಲ್ಲಿ ಒಂದು. ಹರಿಯಾಣದ ಅಸಾವರ್‌ಪುರ ಪಟ್ಟಣದಲ್ಲಿ ಒಟ್ಟಿಗೆ ವಾಸಿಸುತ್ತಿರುವ ಇವರು, ತಮ್ಮ ಜೀವನೋಪಾಯಕ್ಕಾಗಿ ತ್ಯಾಜ್ಯ ಸಂಗ್ರಹಿಸಿ, ಬೇರ್ಪಡಿಸುವ ಕೆಲಸ ಮಾಡುತ್ತಾರೆ.

"ಇಲ್ಲಿ ಮತ್ತು ಅಸ್ಸಾಂನಲ್ಲಿ ಜನರು ಯಾವಾಗಲೂ ನಮ್ಮ ಅಸ್ಮಿತೆಯನ್ನು ಪ್ರಶ್ನಿಸುತ್ತಾರೆ. ಅಧಿಕಾರಿಗಳು ಸ್ಲಂಗೆ ಸಂಬಂಧಿಸಿದ ಬೇಕಾದ ದಾಖಲೆಗಳನ್ನು ಎಲ್ಲರಿಂದ ಕೇಳುತ್ತಲೇ ಇರುತ್ತಾರೆ,” ಎಂದು ಬಹರುಲ್ ಹೇಳುತ್ತಾರೆ. “ನಾವು ಕಸ ಎತ್ತಲು ಹೋದಾಗ, ಜನ ನಮ್ಮನ್ನು ಎಲ್ಲಿಂದ ಬಂದವರು ಎಂದು ಕೇಳುತ್ತಾರೆ. ಅಸ್ಸಾಂನ ಮಾತು ಕೇಳಿ ನಮ್ಮನ್ನು ಬಾಂಗ್ಲಾದೇಶದವರು ಎಂದು ಭಾವಿಸುತ್ತಾರೆ. ನಮ್ಮ ಮೇಲೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಆಗಾಗ ಅಸ್ಸಾಂ ಪೊಲೀಸರ ಪರಿಶೀಲನೆಯನ್ನು ಕೇಳುತ್ತಾರೆ,” ಎಂದು ಅವರು ಹೇಳುತ್ತಾರೆ. "ನಾವು ಏನು ಹೇಳುತ್ತೇವೆ ಎಂಬುದು ಇವರಿಗೆ ಮುಖ್ಯವಲ್ಲ," ಎಂದು ಬಹರುಲ್ ಹೇಳುತ್ತಾರೆ. ಇವರಿಗೆ ಅಸ್ಸಾಂನಲ್ಲಿ ನಡೆಸಲಾಗುತ್ತಿರುವ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಬಗ್ಗೆ ತಿಳಿದಿದೆ, ಆದರೆ ಅವರಲ್ಲಿ ಭೂ ಮಾಲೀಕತ್ವದ ದಾಖಲೆಗಳು ಇರುವುದರಿಂದ ಅವರಿಗೆ ಯಾವುದೇ ಚಿಂತೆಯಿಲ್ಲ.

ಅದೇ ಕಾಂಪೌಂಡ್‌ನಲ್ಲಿ ವಾಸಿಸುತ್ತಿರುವ ಅವರ ಸಹೋದರರಾದ ರಿಯಾಜ್ ಮತ್ತು ನೂರ್ ಇಸ್ಲಾಂ ಅವರು ಕೂಡ ಅಸ್ಸಾಂ ಬಿಟ್ಟು ಬಂದವರು. ಇವರಿಗೆ ಬ್ರಹ್ಮಪುತ್ರ ಬಳಿಯ ತಮ್ಮ ಜಮೀನಿನಲ್ಲಿ ನಿರಂತರ ಪ್ರವಾಹ ಉಂಟಾಗುವುದರಿಂದ ಕೃಷಿಯನ್ನು ಅವಲಂಬಿಸಲು ಬದುಕಲು ಸಾಧ್ಯವಾಗಲಿಲ್ಲ. ಬಾರ್ಪೇಟಾದಲ್ಲಿ ಅವರ ಹೆತ್ತವರು 800 ಚದರ ಅಡಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾರೆ. ಅಲ್ಲಿ ಅವರು ಹಸಿರು ಮೆಣಸಿನಕಾಯಿಗಳು, ಟೊಮೆಟೊಗಳು ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಾರೆ. “ಭಾರೀ ಮಳೆ ಬಂದ ಸಂದರ್ಭದಲ್ಲಿ, ನದಿ ನೀರು ನಮ್ಮ ಮನೆಗಳಿಗೆ ಬರುತ್ತದೆ, ಆಗ ನಾವು ಅಲ್ಲಿಂದ ಜಾಗ ಖಾಲಿ ಮಾಡಬೇಕು. ನಾವು ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಲು ಬಾಳೆ ಮರದ ದಿಮ್ಮಿಗಳನ್ನು ಬಳಸುತ್ತೇವೆ,” ಎಂದು ಬಹರುಲ್ ಅವರ ಸಹೋದರರು ಹೇಳುತ್ತಾರೆ. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಪ್ರಕಾರ, ಅಸ್ಸಾಂನಲ್ಲಿ ಸುಮಾರು ಶೇಕಡಾ 28.75 ರಷ್ಟು ಭೂಮಿ 1998 ಮತ್ತು 2015 ರ ನಡುವೆ ನಡೆದ ಪ್ರವಾಹದಿಂದ ಹಾನಿಗೀಡಾಗಿದೆ.

PHOTO • Harsh Choudhary
PHOTO • Najam Sakib

ಎಡ: ತಾವು ಸಂಗ್ರಹಿಸಿರುವ ಕಸವನ್ನು ಪ್ರತ್ಯೇಕಿಸಲು ನೆಲದ ಮೇಲೆ ಸುರಿಯುತ್ತಿರುವ ಬಹರುಲ್ ಇಸ್ಲಾಂ. ಬಲ: ಹರಿಯಾಣದ ಅಸಾವರ್‌ಪುರ ಗ್ರಾಮದ ಬಹರುಲ್‌ ಅವರ ಮನೆಯ ಪಕ್ಕದಲ್ಲಿ ಒಂದರ ಮೇಲೊಂದರಂತೆ ಜೋಡಿಸಿ ಇಡಲಾಗಿರುವ ಕಸದ ಚೀಲಗಳು

PHOTO • Najam Sakib
PHOTO • Harsh Choudhary

ರಿಯಾಜ್ ಇಸ್ಲಾಂ (ಎಡ) ಮತ್ತು ಅವರ ಸಹೋದರ ನೂರ್ (ಬಲ) ಹರಿಯಾಣದ ಸೋನಿಪತ್‌ಗೆ ವಲಸೆ ಬಂದವರು. ಅಸ್ಸಾಂನ ತಮ್ಮ ಊರಿನಲ್ಲಿ ಆಗಾಗ ಪ್ರವಾಹ ಬರುವುದರಿಂದ ಕೃಷಿಯನ್ನು ಮುಂದುವರಿಸಲು ಇವರಿಗೆ ಸಾಧ್ಯವಾಗಲಿಲ್ಲ

ಸದ್ಯ ಬಹರುಲ್, ರಿಯಾಜ್ ಮತ್ತು ನೂರ್ ಅವರು ಇತರ 11 ವಲಸೆ ಬಂದಿರುವ ಕುಟುಂಬಗಳಂತೆ ಅಸ್ಸಾಂನ ತಮ್ಮ ಮನೆಗಳಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರೂ ಅಸ್ಸಾಂನ ಬಾರ್ಪೇಟಾ, ಬೊಂಗೈಗಾಂವ್ ಮತ್ತು ಗೋಲ್ಪಾರಾ ಜಿಲ್ಲೆಗಳಿಂದ ವಲಸೆ ಬಂದವರು. ಇವರೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಾ, ಒಟ್ಟಿಗೆ ವಾಸ ಮಾಡುತ್ತಿದ್ದಾರೆ. ಈ ತಮ್ಮದಲ್ಲದ ಪ್ರದೇಶದಲ್ಲಿ ಪರಸ್ಪರ ಬೆಂಬಲವನ್ನು ನೀಡುತ್ತಾ, ವಲಸಿಗರೆಂಬ ಕಾರಣಕ್ಕೆ ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಪರಸ್ಪರ ಹೆಗಲಿಗೆ ಹೆಗಲು ನೀಡುತ್ತಾರೆ.

“ಇಲ್ಲಿ ಯಾರಿಗಾದರೂ ಹಣದ ಅಗತ್ಯ ಬಿದ್ದರೆ, ನಾವು ಪರಸ್ಪರರು ಹಣವನ್ನು ಸಾಲವಾಗಿ ನೀಡುತ್ತೇವೆ. ಕೆಲವರಿಗೆ ಮಾತ್ರ ಹಬ್ಬಗಳ ಸಮಯದಲ್ಲಿ ಅಸ್ಸಾಂನಲ್ಲಿರುವ ತಮ್ಮ ಕುಟುಂಬಗಳ ಜೊತೆಗೆ ಆಚರಿಸಲು ಸಾಧ್ಯವಿರುವುದರಿಂದ, ನಾವು ಮೀಥಿ ಈದ್ ಮತ್ತು ಬಕ್ರೀದ್‌ನಂತಹ ಹಬ್ಬಗಳನ್ನು ಇಲ್ಲಿಯೇ ಒಟ್ಟಾಗಿ ಆಚರಿಸುತ್ತೇವೆ. ರಂಜಾನ್ ಸಮಯದಲ್ಲಿ ಆಗಾಗ ಸೆಹ್ರಿಯನ್ನು ಸಹ ಹಂಚಿಕೊಳ್ಳುತ್ತೇವೆ,” ಎಂದು ಬಹರುಲ್ ಹೇಳುತ್ತಾರೆ.

ಹೆಚ್ಚಿನ ಕುಟುಂಬಗಳು ಕೊರೋನ ಬರುವ ಮುಂಚೆ, ಅಂದರೆ  2017ರಲ್ಲಿ ವಲಸೆ ಬಂದವರು. ಉಳಿದವರು 2021 ರಲ್ಲಿ ಬಂದವರು. ಇವರೆಲ್ಲರೂ ಒಟ್ಟಾಗಿ ತಾವು ವಾಸಿಸುವ ಈ ಜಾಗಕ್ಕೆ ತಿಂಗಳಿಗೆ 17,000 ರುಪಾಯಿ ಬಾಡಿಗೆ ಕೊಡುತ್ತಾರೆ. ಇದಕ್ಕಾಗಿ ಪ್ರತಿ ಕುಟುಂಬ ಸಾವಿರ ರೂಪಾಯಿಗಿಂತ ಸ್ವಲ್ಪ ಹೆಚ್ಚು ನೀಡಬೇಕಾಗುತ್ತದೆ. ಬಹರುಲ್ ಅವರ ಪತ್ನಿ ಮೊಫಿದಾ ಅವರಂತಹ ಮಹಿಳೆಯರು ಕೂಡ ಸಹಾಯ ಮಾಡುತ್ತಾರೆ. ಬೊಂಗೈಗಾಂವ್‌ನ ಮೊಫಿದಾ ಅವರು 10 ನೇ ತರಗತಿ ವರೆಗೆ ಓದಿದ್ದಾರೆ. ಇವರಿಗೆ ಅಸ್ಸಾಮಿ ಹಾಗೂ ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ. ಪ್ರತಿ ಕುಟುಂಬ ಸಂಗ್ರಹಿಸಿದ ಕಸವನ್ನು ಅಳೆದು ಮತ್ತು ಗುರುತಿಸಿ ಒಂದು ಸಣ್ಣ ಪುಸ್ತಕದಲ್ಲಿ ಬರೆದು ಕೆಲಸಕ್ಕೆ ಸಹಾಯ ಮಾಡುತ್ತಾರೆ.

ಎಲ್ಲಾ ಕುಟುಂಬಗಳು ಕಸ ಎತ್ತುವ ಕೆಲಸ ಮಾಡುತ್ತವೆ. ಕೆಲವರು ವಸತಿ ಪ್ರದೇಶಗಳಿಂದ ಕಸವನ್ನು ಸಂಗ್ರಹಿಸಿದರೆ, ಬಹರುಲ್‌ನಂತಹ ಇತರರು ಪಕ್ಕದ ಕಾರ್ಖಾನೆಗಳು ಮತ್ತು ಕೈಗಾರಿಕಾ ಪ್ರದೇಶಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಚಿಕ್ಕ ಮಕ್ಕಳು ಕೂಡ ಕಸವನ್ನು ಬೇರ್ಪಡಿಸುವಂತಹ ಕೆಲಸದಲ್ಲಿ ನೆರವಾಗುತ್ತಾರೆ, ಕೆಲವೊಮ್ಮೆ ಅವರೂ ತ್ಯಾಜ್ಯವನ್ನು ಸಂಗ್ರಹಿಸಲು ಹಿರಿಯರೊಂದಿಗೆ ಹೋಗುತ್ತಾರೆ.

PHOTO • Harsh Choudhary
PHOTO • Harsh Choudhary

ಎಡ: ಬಹರುಲ್ ಮತ್ತು ಅವರ ಪತ್ನಿ ಮೊಫಿದಾ ಇಬ್ಬರೂ ಡೀಲರ್‌ಗಳಿಗೆ ಮಾರಾಟ ಮಾಡಲು ತ್ಯಾಜ್ಯವನ್ನು ಬೇರ್ಪಡಿಸುವ ಕೆಲಸ ಮಾಡುತ್ತಾರೆ. ಕಾಂಪೌಂಡ್‌ನಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬ ಸಂಗ್ರಹಿಸಿದ ಕಸವನ್ನು ಅಳೆಯಲು ಮತ್ತು ಗುರುತಿಸಲು ಮೊಫಿದಾ ನೆರವಾಗುತ್ತಾರೆ. ಬಲ: ಬಹರುಲ್‌ ಅವರ ತಾತ್ಕಾಲಿಕ ಮನೆಯನ್ನು ಬಿದಿರಿನ ಕಂಬಗಳ ಮೇಲೆ ಟಾರ್ಪೌಲಿನ್‌ ಮುಚ್ಚಿಗೆ ಹಾಕಿ ನಿರ್ಮಿಸಲಾಗಿದೆ

PHOTO • Harsh Choudhary
PHOTO • Najam Sakib

ಎಡ: ನೂರ್ ಅವರು ನಗರದ ಸುತ್ತಮುತ್ತ ಕಸ ಸಂಗ್ರಹಿಸುವ ಕೆಲಸವನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮಾಡುತ್ತಾರೆ. ಬಲ: ಈ ಪ್ರದೇಶದ ನಿವಾಸಿಗಳು ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ಡೀಲರ್‌ಗಳಿಗೆ ಮಾರಾಟ ಮಾಡುತ್ತಾರೆ

"ನಮ್ಮ ದಿನದ ಕೆಲಸ ಬೆಳಿಗ್ಗೆ 7 ಗಂಟೆಗೆ ಆರಂಭವಾಗುತ್ತದೆ. ಚಿಂದಿ ಆಯಲು ನಗರದೊಳಗೆ ಬೆಳಗ್ಗೆ ಹೋದರೆ, ಸುಮಾರು 3 ಗಂಟೆಗೆ ಹಿಂತಿರುಗಿ ಬರುತ್ತೇವೆ," ಎಂದು ನೂರ್ ಇಸ್ಲಾಂ ಹೇಳುತ್ತಾರೆ. ಕೆಲಸ ಹಚ್ಚಿದ್ದರೆ, ಅವರು 9 ಗಂಟೆಗೆ ವಾಪಾಸ್ ಬರುತ್ತಾರೆ ಎಂದು ಹೇಳುತ್ತಾರೆ. ತ್ಯಾಜ್ಯವನ್ನು ಸಂಗ್ರಹಿಸಿದ ನಂತರ, ಅದನ್ನು ಸುಮಾರು 30-35 ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಬಳಸಿ ಎಸೆದ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಚಪಾತಿಗಳು, ಥರ್ಮಾಕೋಲ್, ಗಾಜಿನ ವಸ್ತುಗಳು, ಹೀಗೆ ಕಸವನ್ನು ಬೇರ್ಪಡಿಸುತ್ತಾರೆ. "ನಂತರ ನಾವು ಅವನ್ನು ಸ್ಥಳೀಯ ಡೀಲರ್‌ಗೆ ಮಾರಾಟ ಮಾಡುತ್ತೇವೆ," ಎಂದು ಬಹರುಲ್ ಹೇಳುತ್ತಾರೆ. ಬೇಡಿಕೆಯ ಆಧಾರದ ಮೇಲೆ ಡೀಲರ್‌ಗಳು ತ್ಯಾಜ್ಯಕ್ಕೆ ಬೆಲೆಯನ್ನು ನಿಗದಿ ಮಾಡುತ್ತಾರೆ, ಮತ್ತು ತ್ಯಾಜ್ಯವನ್ನು ಸಂಗ್ರಹಿಸಿದವರು ಆ ಬೆಲೆಯನ್ನು ಒಪ್ಪಿಕೊಳ್ಳಬೇಕು. "ಒಂದು ಕಿಲೋ ಥರ್ಮಾಕೋಲ್‌ನ ಬೆಲೆ 15 ರಿಂದ 30 ರೂಪಾಯಿಗಳವರೆಗೆ ಇರುತ್ತದೆ," ಎಂದು ಬಹರುಲ್ ಹೇಳುತ್ತಾರೆ.

ಕುಟುಂಬದ ಸಂಪಾದನೆ ತಿಂಗಳಿಗೆ 7,000 ರಿಂದ 10,000 ಇರುತ್ತದೆ. ಬೇಸಿಗೆಯಲ್ಲಿ ಜನ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳ ನೀರನ್ನು ಕುಡಿದು ಎಸೆಯುವುದರಿಂದ, ಆ ಬಾಟಲಿಗಳು ಹೆಚ್ಚು ಮಾರಾಟವಾಗಿ ಒಳ್ಳೆಯ ಗಳಿಕೆಯಾಗುತ್ತದೆ.

“ನಮ್ಮ ಆದಾಯದ ಅರ್ಧದಷ್ಟು ಹಣ ಬಾಡಿಗೆ, ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗೆ ಖರ್ಚಾಗುತ್ತದೆ. ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಬೇರೆ ಬೇರೆ. ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1,000 ರೂಪಾಯಿಗಳಷ್ಟು ಬರುತ್ತದೆ,” ಎಂದು ಬಹರುಲ್ ಹೇಳುತ್ತಾರೆ. ಅವರು ಇರುವ ಪ್ರದೇಶದಲ್ಲಿ ಲಭ್ಯವಿರುವ ನಲ್ಲಿಯ ನೀರು ಬಳಕೆಗೆ ಯೋಗ್ಯವಲ್ಲದ ಕಾರಣ ಈ ಜನರು ಕುಡಿಯುವ ನೀರನ್ನು ಖರೀದಿಸುತ್ತಾರೆ.

ಬಹರುಲ್ ಅವರು ಆಹಾರಕ್ಕಾಗಿ ಖರ್ಚು ಮಾಡುವುದರಿಂದ ಅವರ ಖರ್ಚು ಹೆಚ್ಚಾಗುತ್ತದೆ. "ನಮಗೆ [ಅಸ್ಸಾಂನಲ್ಲಿ] ಮನೆಯಲ್ಲಿ ಪಡಿತರ ಸಿಗುತ್ತಿತ್ತು," ಎಂದು ಅವರು ಪಿಡಿಎಸ್ (ಸಾರ್ವಜನಿಕ ಪಡಿತರ ವ್ಯವಸ್ಥೆ) ಮೂಲಕ ವಿತರಿಸಲಾಗುವ ಆಹಾರ ಧಾನ್ಯಗಳ ಬಗ್ಗೆ ಹೇಳುತ್ತಾರೆ. "ಆದರೆ ಇಲ್ಲಿ [ಹರಿಯಾಣದಲ್ಲಿ], ಪಡಿತರಕ್ಕಾಗಿ ಹರಿಯಾಣದ ಐಡಿ ಕಾರ್ಡ್ ಬೇಕು, ಆದರೆ ಅದು ನಮ್ಮಲ್ಲಿ ಇಲ್ಲ,” ಎಂದು ಅವರು ಹೇಳುತ್ತಾರೆ.

ಬಹರುಲ್‌ ಅವರಿಗೆ ಒಎನ್ಒಆರ್‌ಸಿ (ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್) ಬಗ್ಗೆ ಅರಿವಿಲ್ಲ. 2019 ರಿಂದ ರಾಷ್ಟ್ರವ್ಯಾಪಿ ಜಾರಿಯಾಗಿರುವ ಪೋರ್ಟೆಬಿಲಿಟಿ ಯೋಜನೆಯಾಗಿರುವ ಇದು ಭಾರತದೊಳಗಿನ ಆಂತರಿಕ ವಲಸಿಗರು ಸೇರಿದಂತೆ ಎಲ್ಲರಿಗೂ ಆಹಾರ ಭದ್ರತೆಯನ್ನು ನೀಡುತ್ತದೆ. "ನನಗೆ ಅದರ ಬಗ್ಗೆ ತಿಳಿದಿಲ್ಲ," ಎಂದು ಅವರು ಈ ವರದಿಗಾರರಿಗೆ ಹೇಳಿದರು.

PHOTO • Harsh Choudhary
PHOTO • Harsh Choudhary

ಪ್ಲಾಸ್ಟಿಕ್ ಬಾಟಲಿಗಳಿಂದ (ಎಡ) ಒಳ್ಳೆಯ ಸಂಪಾದನೆಯಾಗುತ್ತದೆ. ಬಳಸಿ ಎಸೆದ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಚಪಾತಿಗಳು, ಥರ್ಮಾಕೋಲ್, ಗಾಜಿನ ವಸ್ತುಗಳು, ರಟ್ಟಿನ ತುಂಡುಗಳು, ಹೀಗೆ ಕಸವನ್ನು ಬೇರೆ ಬೇರೆ ವಿಧಗಳಾಗಿ ಬೇರ್ಪಡಿಸಲಾಗುತ್ತದೆ (ಬಲ)

PHOTO • Najam Sakib
PHOTO • Harsh Choudhary

ಮಕ್ಕಳು (ಎಡ) ಆಗಾಗ ಈ ಕೆಲಸದಲ್ಲಿ ನೆರವಾಗುತ್ತಾರೆ. ಪ್ರತಿಯೊಬ್ಬರಿಂದ ದಾಖಲೆಗಳನ್ನು ಕೇಳಲು ಅಧಿಕಾರಿಗಳು ತಮ್ಮ ಮನೆಗಳ ಸುತ್ತಮುತ್ತ ತಿರುಗಾಡುತ್ತಲೇ ಇರುತ್ತಾರೆ ಎಂದು ಈ ಕುಟುಂಬಗಳು ಹೇಳುತ್ತವೆ

ಅವರ ತಾತ್ಕಾಲಿಕ ಮನೆಗಳನ್ನು ಬಿದಿರಿನ ಕಂಬಗಳ ಮೇಲೆ ಟಾರ್ಪೌಲಿನ್‌ನ ಮುಚ್ಚಿಗೆ ಹಾಕಿ ನಿರ್ಮಿಸಲಾಗಿದೆ. ಅವರ ಮನೆಗಳ ತುಂಬಾ ಬೇರ್ಪಡಿಸಲಾದ ತ್ಯಾಜ್ಯದ ರಾಶಿಗಳು ಚೆಲ್ಲಿವೆ, ಮಕ್ಕಳು ಅಲ್ಲೆಲ್ಲಾ ಓಡುಡುತ್ತಿರುತ್ತಾರೆ. ಇಲ್ಲಿರುವ ವರದಿಯ ಪ್ರಕಾರ, ತಮ್ಮ ಹೆತ್ತವರೊಂದಿಗೆ ನಗರಗಳಿಗೆ ವಲಸೆ ಹೋಗುವ ಮಕ್ಕಳಲ್ಲಿ ಕೇವಲ ಶೇಕಡಾ 55ರಷ್ಟು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತವೆ. ಈ ಪ್ರದೇಶದಲ್ಲಿ ವಾಸಿಸುವ ಅನೇಕ ಮಕ್ಕಳು ತಮ್ಮ ಓದನ್ನು ಮುಂದುವರಿಸುವ ಬದಲು ಕೆಲಸ ಮಾಡಲು ಹೋಗುತ್ತಿದ್ದಾರೆ. ರಿಯಾಝ್‌ ಅವರ 12 ವರ್ಷ ಪ್ರಾಯದ ಮಗ ಅನ್ವರ್ 3 ನೇ ತರಗತಿಯನ್ನು ಮುಗಿಸಿದ ನಂತರ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ. ಈಗ ಅವನು ರಿಯಾಜ್‌ ಅವರಿಗೆ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಬೇರ್ಪಡಿಸಲು ನೆರವಾಗುತ್ತಾನೆ. “ಕಬಡಿವಾಲನ ಮಗನ ಹತ್ತಿರ ಬರಲು ಯಾರಿಗೂ ಇಷ್ಟವಿಲ್ಲ. ನನಗೆ ಸ್ನೇಹಿತರೇ ಇರಲಿಲ್ಲ. ನನ್ನ ತಂದೆಗೆ ಸಹಾಯ ಮಾಡಲು ನಾನು ಶಾಲೆಗೆ ಹೋಗುವುದನ್ನು ಬಿಟ್ಟುಬಿಟ್ಟೆ,” ಎಂದು ಅನ್ವರ್ ಹೇಳುತ್ತಾನೆ.

ಸೋನಿಪತ್‌ಗೆ ಬರುವ ಮೊದಲು, ಬಹರುಲ್ ಅವರು ಚೆನ್ನೈನಲ್ಲಿ ಮೂರು ವರ್ಷಗಳ ಕಾಲ ಕಾಲೇಜು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು. "ನಾನು ಸಹ ನಮ್ಮ ಹಳ್ಳಿಗರ ದಾರಿಯಲ್ಲಿಯೇ ಇಲ್ಲಿಗೆ ಬಂದೆ," ಎಂದು ಅವರು ಹೇಳುತ್ತಾರೆ.

"ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ನನ್ನ ಹೆತ್ತವರಿಗೆ ಮತ್ತು ಹಳ್ಳಿಯವರಿಗೆ ಹೇಳಲೂ ನಾಚಿಕೆಯಾಗುತ್ತದೆ," ಎಂದು ಬಹರುಲ್ ಹೇಳುತ್ತಾರೆ. "ನಾನು ಶಾಲೆಗಳಲ್ಲಿ ಸಣ್ಣ ನೌಕರಿ ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳುತ್ತೇನೆ," ಎನ್ನುವ ಇವರು ವಲಸಿಗರಾಗಿ ಕೂಡ ಬೇರೆಯದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. "ಅಸ್ಸಾಂನಲ್ಲಿ ಮೀನು ನಮ್ಮ ಆಹಾರದ ಪ್ರಮುಖ ಭಾಗ. ಆದರೆ, ಇಲ್ಲಿ ನಾವು ಮೀನು ತಿಂದರೆ ನೆರೆಹೊರೆಯ ಕೆಲವರು ನಮ್ಮನ್ನು ಕೀಳಾಗಿ ನೋಡುತ್ತಾರೆ, ನಾವು ಕದ್ದುಮುಚ್ಚಿ ಬೇಯಿಸಿ ತಿನ್ನಬೇಕು,” ಎಂದು ಅವರು ಹೇಳುತ್ತಾರೆ.

ಸಾಕಷ್ಟು ಹಣವನ್ನು ಸಂಪಾದಿಸಿ ಅಸ್ಸಾಂನಲ್ಲಿ ಒಂದು ಸಣ್ಣ ಭೂಮಿಯನ್ನು ಖರೀದಿಸಿ, ತಮ್ಮವರೊಂದಿಗೆ ಬದುಕುವುದು ಇವರ ಕನಸು. "ಯಾರಿಗೂ ತಮ್ಮ ಕುಟುಂಬದವರಿಗೆ ಸುಳ್ಳು ಹೇಳುವುದು ಇಷ್ಟವಿಲ್ಲ, ನಾವೆಲ್ಲರೂ ಘನತೆಯಿಂದ ಬಾಳಲು ಬಯಸುತ್ತೇವೆ," ಎನ್ನುತ್ತಾರೆ ಅವರು.

ಅನುವಾದ: ಚರಣ್‌ ಐವರ್ನಾಡು

Student Reporter : Harsh Choudhary

సోనీపత్‌లోని అశోకా విశ్వవిద్యాలయ విద్యార్థి అయిన హర్ష్ చౌధరి, మధ్యప్రదేశ్‌లోని కుక్దేశ్వర్‌లో పుట్టిపెరిగారు.

Other stories by Harsh Choudhary
Editor : PARI Desk

PARI డెస్క్ మా సంపాదకీయ కార్యక్రమానికి నాడీ కేంద్రం. ఈ బృందం దేశవ్యాప్తంగా ఉన్న రిపోర్టర్‌లు, పరిశోధకులు, ఫోటోగ్రాఫర్‌లు, చిత్రనిర్మాతలు, అనువాదకులతో కలిసి పని చేస్తుంది. PARI ద్వారా ప్రచురితమైన పాఠ్యం, వీడియో, ఆడియో, పరిశోధన నివేదికల ప్రచురణకు డెస్క్ మద్దతునిస్తుంది, నిర్వహిస్తుంది కూడా.

Other stories by PARI Desk
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad