ಟೆಂಪು ಮಾಂಝಿ ಕುಟುಂಬವು ಹೇಳುವಂತೆ, ಅವರು ತಾವು ಮಾಡದ ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಜೆಹಾನಾಬಾದ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಪೊಲೀಸರು ಅವರ ಮನೆಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ, ಆದರೆ ಅವರ ಮನೆಯಿಂದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆಗಳನ್ನು ನೀಡಿಲ್ಲ ಎಂದು ಕುಟುಂಬ ಹೇಳಿದೆ.
"ಅವರನ್ನು ಒಂದು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ" ಎಂದು ಅವರ 35 ವರ್ಷದ ಪತ್ನಿ ಗುಣಾ ದೇವಿ ಹೇಳುತ್ತಾರೆ.
ಟೆಂಪು ಮಾಂಝಿಯ ಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಐವರು ಪ್ರತ್ಯಕ್ಷದರ್ಶಿಗಳೆಲ್ಲರೂ ಪೊಲೀಸರಾಗಿದ್ದರು ಎಂಬ ಅಂಶವು ಅವರ ಹೇಳಿಕೆಯನ್ನು ಬಲಪಡಿಸುತ್ತದೆ. ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆ, 2016ರ ಅಡಿಯಲ್ಲಿ ಟೆಂಪು ವಿರುದ್ಧ ದಾಖಲಾದ ಪ್ರಕರಣದಲ್ಲಿ, ವಿಚಾರಣೆಯ ಸಮಯದಲ್ಲಿ ಒಬ್ಬನೇ ಒಬ್ಬ ಸ್ವತಂತ್ರ ಸಾಕ್ಷಿಯನ್ನು ಸಹ ಹಾಜರುಪಡಿಸಲಾಗಿಲ್ಲ.
ಗುಣಾ ದೇವಿ ಹೇಳುತ್ತಾರೆ, "ಮನೆಯ ಹಿಂಭಾಗದ ಹೊಲದಲ್ಲಿ ಮದ್ಯ ಪತ್ತೆಯಾಗಿದೆ. ಆ ಜಮೀನು ಯಾರಿಗೆ ಸೇರಿದ್ದೆಂದು ನಮಗೆ ತಿಳಿದಿಲ್ಲ. ವಶಪಡಿಸಿಕೊಂಡ ಮದ್ಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ಪೊಲೀಸರಿಗೆ ತಿಳಿಸಿದ್ದೇವೆ. ಆಗ ಪೊಲೀಸರು, "ತೋರಾ ಘರ್ ಕೇ ಪೀಚೆ [ಮದ್ಯ] ಹೈ, ತಾ ತೋರೇ ನಾ ಹೋತಾವು [ನಿಮ್ಮ ಮನೆಯ ಹಿಂದೆ ಮದ್ಯ ಸಿಕ್ಕಿದೆ, ಹೀಗಾಗಿ ಅದು ನಿಮ್ಮದೇ]." ಎಂದು ಅವರಿಗೆ ಹೇಳಿದರು.
ಟೆಂಪು ಮಾಂಝಿಯವರನ್ನು 2019ರಲ್ಲಿ ಬಂಧಿಸಲಾಯಿತು. ಮೂರು ವರ್ಷಗಳ ನಂತರ, ಮಾರ್ಚ್ 25, 2022ರಂದು, ಮನೆಯಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿದ್ದಕ್ಕಾಗಿ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಯಿತು.
ಟೆಂಪು ಮಾಂಝಿ ಮತ್ತು ಗುಣಾ ದೇವಿ ತಮ್ಮ ನಾಲ್ಕು ಮಕ್ಕಳೊಂದಿಗೆ ಜೆಹಾನಾಬಾದ್ ಜಿಲ್ಲೆಯ ಕೆನಾರಿ ಗ್ರಾಮದಲ್ಲಿ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬವು ಮುಸಹರ್ ಸಮುದಾಯಕ್ಕೆ ಸೇರಿದ್ದು, ಗ್ರಾಮದ ಮುಸಹರ್ ಟೋಲಿಯಲ್ಲಿ ವಾಸಿಸುತ್ತಿದೆ. 2019ರಲ್ಲಿ, ಮಾರ್ಚ್ 20ರ ಬೆಳಿಗ್ಗೆ ಅವರ ಮನೆಯ ಮೇಲೆ ದಾಳಿ ನಡೆದಾಗ ಟೆಂಪು ಮಾಂಝಿ ಮನೆಯಲ್ಲಿ ಇರಲಿಲ್ಲ. ಅಂದು ಬೆಳೆಗ್ಗೆ ಅವರು ಊರಿನ ಭೂಮಾಲಕರೊಬ್ಬರ ಮನೆಯಲ್ಲಿ ಕೊಯ್ಲು ಮಾಡಿದ ಧಾನ್ಯದ ಹೊರೆಯನ್ನು ಹೊರುವ ಖಲಾಸಿ (ಸಹಾಯಕ) ಕೆಲಸಕ್ಕೆ ಹೋಗಿದ್ದರು.












