“ಮೊಬೈಲ್, ಟಿವಿ, ವಿಡಿಯೋ ಗೇಮ್ಸ್ ಬಂದ ಮೇಲೆ ಬೊಂಬೆಯಾಟ ಹಾಗೂ ಕಥೆ ಹೇಳುವಂತಹ ಐತಿಹಾಸಿಕ ಸಂಪ್ರದಾಯಗಳು ತೆರೆಮರೆಗೆ ಸರಿಯುತ್ತಿವೆ” ಎನ್ನುವ ಪೂರಣ್ ಭಟ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ದಂತಾ ರಾಮಗಢದ ಬೊಂಬೆಯಾಟ ಕಲಾವಿದ. ಮಕ್ಕಳ ಹುಟ್ಟು ಹಬ್ಬದ ಪಾರ್ಟಿಗಳು, ವಿವಾಹ ಸಮಾರಂಭಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ಅವರು ತಮ್ಮದೇ ಆದ ಬೊಂಬೆಗಳನ್ನು ತಯಾರಿಸಿ ನಾಟಕಗಳನ್ನು ಪ್ರದರ್ಶಿಸಿದ ಸಮಯವನ್ನು 30 ವರ್ಷದ ಅವರು ನೆನಪಿಸಿಕೊಳ್ಳುತ್ತಾರೆ.
“ಇಂದು ಜನರು ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಬಯಸುತ್ತಿದ್ದಾರೆ. ಮೊದಲು ಹೆಂಗಸರು ಧೋಲಕ್ ಬಾರಿಸುತ್ತಾ ಹಾಡುತ್ತಿದ್ದರು. ಈಗ ಹಾರ್ಮೋನಿಯಂನಲ್ಲಿ ಸಿನೆಮಾ ಹಾಡುಗಳನ್ನು ಕೇಳಲು ಬಯಸುತ್ತಿದ್ದಾರೆ. ನಮಗೆ ಪ್ರೋತ್ಸಾಹ ಸಿಕ್ಕರೆ ನಮಗೆ ಪರಂಪರೆಯಿಂದ ಬಂದ ಕಲಾ ಪ್ರಕಾರವನ್ನನು ಮುಂದುವರೆಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ.
ಪೂರಣ್ ಭಟ್ ಆಗಸ್ಟ್ (2023) ತಿಂಗಳಿನಲ್ಲಿ ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ನಮ್ಮನ್ನು ಭೇಟಿಯಾಗಿದ್ದರು. ಇದು ಮೂರು ದಶಕಗಳಷ್ಟು ಹಳೆಯದಾದ ವಿವಿಧ ಕಲಾ ಪ್ರದರ್ಶನ ಕೇಂದ್ರ. ಸರ್ಕಾರಿ ಪ್ರಾಯೋಜಿತ ಉತ್ಸವವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಲ್ಲಿ ರಾಜಸ್ಥಾನದ ಹಲವೆಡೆಯ ಜಾನಪದ ತಂಡಗಳು ಅಲ್ಲಿ ಸೇರಿದ್ದವು. ಅದೇ ಉತ್ಸವದಲ್ಲಿ ತಮ್ಮ ಕಲೆ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಕಲಾವಿದರಿಗೆ ನೆರವಾಗಲು ಹೊಸ ಯೋಜನೆಯೊಂದನ್ನು ಸಹ ಘೋಷಿಸಿತು.
ಮುಖ್ಯಮಂತ್ರಿ ಲೋಕ ಕಲಾಕರ್ ಪ್ರೋತ್ಸಾಹನ್ ಯೋಜನೆ ಎಂದು ಕರೆಯಲ್ಪಡುವ ಈ ಯೋಜನೆ ಪ್ರತಿ ಜಾನಪದ ಕಲಾವಿದ ಕುಟುಂಬಕ್ಕೆ ಅವರ ಸ್ಥಳದಲ್ಲಿ ದಿನಕ್ಕೆ 500 ರೂ.ಗಳಂತೆ 100 ದಿನಗಳ ವಾರ್ಷಿಕ ಕೆಲಸವನ್ನು ಖಾತರಿಪಡಿಸುತ್ತದೆ. ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗವನ್ನು ಖಾತ್ರಿಪಡಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಇದಕ್ಕೆ ಸ್ಫೂರ್ತಿ ಒದಗಿಸಿದೆ.
ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗಾಗಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯನ್ನು ಸೆಪ್ಟೆಂಬರ್ 2023ರಲ್ಲಿ ಘೋಷಿಸಲಾಗಿದೆ. ಆದರೆ ಇದು - ಕಲಾಕರ್ ಯೋಜನೆ - ಕಲ್ಬೆಲಿಯಾ, ತೇರಾ ತಾಲಿ, ಬಹ್ರುಪಿಯಾ ಮತ್ತು ಇತರ ಹಲವಾರು ಪ್ರದರ್ಶನ ಕಲಾ ಸಮುದಾಯಗಳಿಗೆ ಘೋಷಿಸಲಾಗಿರುವ ಮೊದಲ ಯೋಜನೆ. ರಾಜಸ್ಥಾನದಲ್ಲಿ ಸುಮಾರು 1-2 ಲಕ್ಷ ಜಾನಪದ ಕಲಾವಿದರಿದ್ದಾರೆ ಎಂದು ಕಾರ್ಯಕರ್ತರು ಅಂದಾಜಿಸಿದ್ದಾರೆ. ಆದರೆ ಇದುವರೆಗೆ ಯಾರೂ ಒಟ್ಟು ಎಣಿಕೆಯನ್ನು ಮಾಡಿಲ್ಲ. ಈ ಯೋಜನೆಯು ಗಿಗ್ ಕಾರ್ಮಿಕರು (ಸಾರಿಗೆ ಮತ್ತು ವಿತರಣೆ) ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಸಾಮಾಜಿಕ ಭದ್ರತಾ ಜಾಲದಡಿ ತರಲಿದೆ.
“ನಮಗೆ ಮದುವೆಗಳ ಸಮಯದಲ್ಲಿ ಮಾತ್ರವೇ ಕೆಲಸ ಸಿಗುತ್ತಿತ್ತು. ಉಳಿದಂತೆ ನಾವು ಖಾಲಿ ಕೂರುತ್ತಿದ್ದೆವು. ಇದರ ಮೂಲಕ [ಯೋಜನೆ] ನಮಗೆ ನಿಯಮಿತ ಸಂಪಾದನೆ ಸಿಗುವ ಭರವಸೆಯಿದೆ” ಎಂದು ಲಕ್ಷ್ಮಿ ಸಪೇರಾ ಹೇಳುತ್ತಾರೆ. ಜೈಪುರ ಬಳಿಯ ಮಹ್ಲಾನ್ ಗ್ರಾಮದ 28 ವರ್ಷದ ಕಲ್ಬೆಲಿಯಾ ಕಲಾ ಪ್ರದರ್ಶಕರಾದ ಅವರು, ಮುಂದಿನ ದಿನಗಳ ಕುರಿತು ಆಶಾ ಭಾವನೆ ಹೊಂದಿದ್ದಾರಾದರೂ, “ನನ್ನ ಮಕ್ಕಳು ಅವರಾಗಿಯೇ ಬಯಸದ ಹೊರತು, ನಾನು ಅವರನ್ನು ಈ ಕುಟುಂಬ ಕಲೆಯನ್ನು ಕಲಿಯುವಂತೆ ಒತ್ತಾಯಿಸುವುದಿಲ್ಲ. ಅವರು ಓದಿ ಉದ್ಯೋಗ ಪಡೆದರೆ ಒಳ್ಳೆಯದು" ಎನ್ನುತ್ತಾರೆ.
“ಜಾನಪದ ಕಲಾವಿದರು - ʼಜೀವಂತ ಕಲೆ ಮತ್ತು ಕರಕುಶಲ ಉದ್ಯಮʼ - ವಿಶೇಷವಾಗಿ 2021ರಲ್ಲಿ [ಸಾಂಕ್ರಾಮಿಕ ಪಿಡುಗಿನ ಸಮಯ] ಹೆಚ್ಚು ಹಾನಿಗೀಡಾಗಿವೆ. ಅವರಿಗೆ ಸಹಾಯ ಹಸ್ತವೊಂದರ ಅಗತ್ಯವಿತ್ತು. ಇಲ್ಲದೆ ಹೋಗಿದ್ದರೆ ಅವರು ತಮ್ಮ ಕಲೆಯನ್ನು ತೊರೆದು ನರೆಗಾ ಕೆಲಸಕ್ಕೆ ಸೀಮಿತಗೊಳ್ಳುತ್ತಿದ್ದರು." ಎಂದು ಜವಾಹರ್ ಕಲಾ ಕೇಂದ್ರದ ಮಹಾನಿರ್ದೇಶಕರಾದ ಗಾಯತ್ರಿ ಎ. ರಾಥೋಡ್ ಹೇಳುತ್ತಾರೆ. ಕೋವಿಡ್ -19 ಸಮಯದಲ್ಲಿ, ಎಲ್ಲಾ ಪ್ರದರ್ಶನಗಳು ರಾತ್ರೋರಾತ್ರಿ ನಿಂತುಹೋದವು. ಕಲಾವಿದರು ಇನ್ನೊಬ್ಬರು ನೀಡುವ ವಸ್ತುಗಳ ಹಂಗಿಗೆ ಬೀಳಬೇಕಾಯಿತು.
“ಕೊರೋನಾ ಸಮಯದಲ್ಲಿ ನಮ್ಮ ಗಳಿಕೆ ಪೂರ್ತಿಯಾಗಿ ಕುಸಿದಿತ್ತು. ಈ ಆರ್ಟಿಸ್ಟ್ ಕಾರ್ಡ್ ಮೂಲಕವಾದರೂ ಅದು ಉತ್ತಮಗೊಳ್ಳಬೇಕು” 26 ವರ್ಷದ ಪೂಜಾ ಕಾಮದ್ ಹೇಳುತ್ತಾರೆ. ಜೋಧಪುರದ ಪಾಲಿ ಜಿಲ್ಲೆಯ ಪದರ್ಲಾ ಗ್ರಾಮದವರಾದ ಅವರು ತೇರಾ ತಾಲಿ ಕಲಾವಿದರು.
"ಮಂಗನಿಯರ್ (ಪಶ್ಚಿಮ ರಾಜಸ್ಥಾನದ ಪುರಾತನ ಸಂಗೀತಗಾರ ಸಮುದಾಯಗಳು) ನಂತಹ ಜಾನಪದ ಸಂಗೀತದಲ್ಲಿ, ಕೇವಲ ಒಂದು ಪ್ರತಿಶತದಷ್ಟು ಕಲಾವಿದರು ಮಾತ್ರ ವಿದೇಶಕ್ಕೆ ಹೋಗಿ ಪ್ರದರ್ಶನ ನೀಡುತ್ತಾರೆ ಮತ್ತು ಸಂಪಾದಿಸುತ್ತಾರೆ; 99ರಷ್ಟು ಜನರಿಗೆ ಏನೂ ಸಿಗುವುದಿಲ್ಲ" ಎಂದು ಮುಖೇಶ್ ಗೋಸ್ವಾಮಿ ಹೇಳುತ್ತಾರೆ. ಕಲ್ಬೆಲಿಯಾಗಳಲ್ಲಿ (ಈ ಹಿಂದೆ ಹಾವಾಡಿಗರು ಮತ್ತು ನೃತ್ಯಗಾರರು ಎಂದು ಕರೆಯಲ್ಪಡುತ್ತಿದ್ದ ಅಲೆಮಾರಿ ಗುಂಪುಗಳು), ಕೆಲವು ಆಯ್ದ 50 ಜನರಿಗೆ ಕೆಲಸ ಸಿಗುತ್ತದೆ, ಉಳಿದವರಿಗೆ ಕೆಲಸ ಸಿಗುವುದಿಲ್ಲ.
ʼಕೊರೋನಾ ಸಮಯದಲ್ಲಿ ನಮ್ಮ ಗಳಿಕೆ ಪೂರ್ತಿಯಾಗಿ ಕುಸಿದಿತ್ತು. ಈ ಆರ್ಟಿಸ್ಟ್ ಕಾರ್ಡ್ ಮೂಲಕವಾದರೂ ಅದು ಉತ್ತಮಗೊಳ್ಳಬೇಕುʼ ತೇರಾ ತಾಲಿ ಕಲಾವಿದರಾದ ಪೂಜಾ ಕಾಮದ್ ಹೇಳುತ್ತಾರೆ
ಗೋಸ್ವಾಮಿಯವರು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ (ಎಂಕೆಎಸ್ಎಸ್) ಕಾರ್ಯಕರ್ತರಾಗಿದ್ದಾರೆ. ಅವರು ಹೇಳುತ್ತಾರೆ, "ಜಾನಪದ ಕಲಾವಿದರಿಗೆ ವರ್ಷವಿಡೀ ಉದ್ಯೋಗವಿರುವುದಿಲ್ಲ... ಅದು ಅವರ ಜೀವನೋಪಾಯ ಮತ್ತು ಘನತೆಯ ಪ್ರಜ್ಞೆಗೆ ಮುಖ್ಯವಾಗಿದೆ." ಎಂಕೆಎಸ್ಎಸ್ 1990ರಿಂದ ಮಧ್ಯ ರಾಜಸ್ಥಾನದಲ್ಲಿ ಕಾರ್ಮಿಕರು ಮತ್ತು ರೈತರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಜನರ ಸಂಸ್ಥೆಯಾಗಿದೆ.
ಅಂಚಿನಲ್ಲಿರುವ ಕಲಾವಿದರು ಸರ್ಕಾರದಿಂದ ಸಾಮಾಜಿಕ ಭದ್ರತೆ, ಮೂಲಭೂತ ಜೀವನೋಪಾಯ ಸಹಾಯವನ್ನು ಪಡೆಯಬೇಕು, ಆಗ ಅವರು ಇತರ ನಗರಗಳಿಗೆ ವಲಸೆ ಹೋಗಬೇಕಾಗಿ ಬರುವುದಿಲ್ಲ. "ಮಜ್ದೂರಿ ಭಿ ಕಲಾ ಹೈ [ಶ್ರಮವೂ ಒಂದು ಕಲೆ]" ಎಂದು ಗೋಸ್ವಾಮಿ ಹೇಳಿದರು.
ಈ ಹೊಸ ಯೋಜನೆಯಡಿ ಕಲಾವಿದರಿಗೆ ಅವರನ್ನು ಕಲಾವಿದರೆಂದು ಗುರುತಿಸಲಾಗುವ ಗುರುತಿನ ಚೀಟಿ ಸಿಗಲಿದೆ. ಈ ಚೀಟಿಯಡಿ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಅರ್ಹರಾಗಿರುತ್ತಾರೆ. ಕಾರ್ಯಕ್ರಮ ಮುಗಿದ ನಂತರ ಸ್ಥಳೀಯ ಸರಪಂಚರು ಅವರ ವಿವರಗಳನ್ನು ದೃಢೀಕರಿಸಿದ ನಂತರ ಹಣವನ್ನು ಕಲಾವಿದರ ಖಾತೆಗೆ ಜಮಾ ಮಾಡಲಾಗುತ್ತದೆ.
"ಹಮ್ ಬಹುರೂಪಿ ರೂಪ್ ಬದಲ್ತೆ ಹೈ" ಎಂದು ಅಕ್ರಮ್ ಖಾನ್ ತಮ್ಮ ಸಾಂಪ್ರದಾಯಿಕ ಪ್ರದರ್ಶನ ಕಲೆಯಾದ ಬಹುರೂಪಿಯನ್ನು ಉಲ್ಲೇಖಿಸಿ ಹೇಳುತ್ತಾರೆ, ಈ ಕಲಾ ಪ್ರಕಾರದಲ್ಲಿ ನಟರು ಅನೇಕ ಧಾರ್ಮಿಕ ಮತ್ತು ಪೌರಾಣಿಕ ಪಾತ್ರಗಳನ್ನು ನಿಭಾಯಿಸುತ್ತಾರೆ. ಈ ಕಲೆಯು ರಾಜಸ್ಥಾನದಲ್ಲಿ ಹುಟ್ಟಿ ನಂತರ ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಪ್ರಯಾಣಿಸಿತು ಎಂದು ಹೇಳಲಾಗುತ್ತದೆ. "ಐತಿಹಾಸಿಕವಾಗಿ, ನಮ್ಮ ಆಶ್ರಯದಾತರು ನಮಗೆ [ತಮ್ಮ ಮನರಂಜನೆಗಾಗಿ] ಬೇರೆ ಬೇರೆ ಪ್ರಾಣಿಗಳ ವೇಷ ತೊಟ್ಟು ಬರುವಂತೆ ಹೇಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವರು ನಮಗೆ ಆಹಾರ, ಭೂಮಿಯನ್ನು ನೀಡಿ, ನಮ್ಮನ್ನು ನೋಡಿಕೊಳ್ಳುತ್ತಿದ್ದರು” ಎಂದು ಅವರು ಹೇಳುತ್ತಾರೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಭಾಗವಹಿಸುವ ಈ ಕಲಾ ಪ್ರಕಾರದಲ್ಲಿ ಇಂದು ಕೇವಲ 10,000 ಪ್ರದರ್ಶಕರಷ್ಟೇ ಉಳಿದಿದ್ದಾರೆ ಎಂದು ಖಾನ್ ಅಂದಾಜಿಸುತ್ತಾರೆ.
"ಸರ್ಕಾರ ಬದಲಾದರೂ ಕೆಲಸವನ್ನು ಖಾತರಿಪಡಿಸಲು ಇದನ್ನು [ಯೋಜನೆಯನ್ನು] ಕಾನೂನನ್ನಾಗಿ ಮಾಡಬೇಕು" ಎಂದು ಎಂಕೆಎಸ್ಎಸ್ ಕಾರ್ಯಕರ್ತೆ ಶ್ವೇತಾ ರಾವ್ ಹೇಳುತ್ತಾರೆ, ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸದ ಖಾತರಿಯ ಬದಲು, ಪ್ರತಿ ಕಲಾವಿದನಿಗೆ 100 ದಿನಗಳ ಖಾತರಿ ಇರಬೇಕು. "ದೂರದ ಹಳ್ಳಿಯಲ್ಲಿ ಜಜ್ಮಾನಿ [ಯಜಮಾನ ] ವ್ಯವಸ್ಥೆಯಡಿ ಎಲ್ಲೋ ಪ್ರದರ್ಶನ ನೀಡುತ್ತಿರುವ ಕಲಾವಿದನು ಯೋಜನೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಪ್ರಯೋಜನ ಪಡೆಯಬೇಕು. ಆಗ ಈ ಯೋಜನೆಯ ನಿಜವಾದ ಅಗತ್ಯವಿರುವವರನ್ನು ತಲುಪಿದಂತಾಗುತ್ತದೆ."
ಮೇ ಮತ್ತು ಆಗಸ್ಟ್ 2023ರ ನಡುವೆ, ಸುಮಾರು 13,000-14,000 ಕಲಾವಿದರು ಹೊಸ ಯೋಜನೆಗೆ ಅರ್ಜಿ ಸಲ್ಲಿಸಿದರು. ಆಗಸ್ಟ್ ವೇಳೆಗೆ, 3,000 ಅರ್ಜಿಗಳನ್ನು ಅನುಮೋದಿಸಲಾಯಿತು ಮತ್ತು ಈ ಉತ್ಸವದ ನಂತರ, ಅರ್ಜಿದಾರರ ಸಂಖ್ಯೆ 20,000-25,000ಕ್ಕೆ ಏರಿತು.
ಪ್ರತಿ ಕಲಾವಿದರ ಕುಟುಂಬಕ್ಕೆ ಸಂಗೀತ ವಾದ್ಯವನ್ನು ಖರೀದಿಸಲು 5,000 ರೂ.ಗಳನ್ನು ನೀಡಲಾಗುತ್ತಿದೆ. "ಕಲಾವಿದರು ತಮ್ಮ ಜಿಲ್ಲೆಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಉಪಸ್ಥಿತಿಯನ್ನು ಹೊಂದಿಲ್ಲದ ಕಾರಣ ಮತ್ತು ಅವರ ಕಲಾ ಪ್ರಕಾರಗಳು ಮತ್ತು ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಸರ್ಕಾರದ ಸಂದೇಶಗಳನ್ನು ಹರಡಲು ಸಾಧ್ಯವಾಗುವುದರಿಂದ ನಾವು ಈಗ ಕಾರ್ಯಕ್ರಮಗಳ ಪಟ್ಟಿಯನ್ನು ರಚಿಸಬೇಕಾಗಿದೆ" ಎಂದು ರಾಥೋಡ್ ಹೇಳುತ್ತಾರೆ.
ಹಿರಿಯ ಕಲಾವಿದರು ಸಮುದಾಯದ ಒಳಗೆ ಮತ್ತು ಹೊರಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ ಜಾನಪದ ಕಲೆಗಳನ್ನು ಪ್ರದರ್ಶಿಸಲು ಒಂದು ಸಂಸ್ಥೆ ಬೇಕೆನ್ನುವ ಬೇಡಿಕೆಯೂ ಇದೆ. ಇದು ಕಲಾವಿದರ ಕೆಲಸವನ್ನು ಉಳಿಸಲು ಮತ್ತು ಸಂಗ್ರಹವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಮತ್ತು ಜ್ಞಾನ ಸಂಪತ್ತು ಕಣ್ಮರೆಯಾಗದಂತೆ ನೋಡಿಕೊಳ್ಳುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು