"ನಾನು 108 [ಆಂಬ್ಯುಲೆನ್ಸ್ ಸೇವೆ] ಗೆ ಅನೇಕ ಬಾರಿ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಅದರ ಲೈನ್‌ ಬ್ಯುಸಿ ಇರುತ್ತಿತ್ತು ಅಥವಾ ನಾಟ್‌ ರೀಚಬಲ್‌ ಆಗಿರುತ್ತಿತ್ತು.” ಅವರ ಪತ್ನಿ ಗರ್ಭಾಶಯದ ಸೋಂಕಿನಿಂದ ಬಳಲುತ್ತಿದ್ದರು. ಔಷಧಿಗಳನ್ನು ತೆಗೆದುಕೊಂಡಿದ್ದರೂ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ರಾತ್ರಿಯ ಹೊತ್ತಿಗೆ ಅವರಿಗೆ ನೋವು ವಿಪರೀತವಾಗಿತ್ತು.  ಗಣೇಶ್‌ ಪಹಾಡಿಯಾ ವೈದ್ಯಕೀಯ ಸಹಾಯ ಪಡೆಯಲು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದರು.

“ಕೊನೆಗೆ ನಾನು ಸಹಾಯ ಸಿಗಬಹುದೆನ್ನುವ ನಿರೀಕ್ಷೆಯೊಂದಿಗೆ ಸ್ಥಳೀಯ ಸಚಿವರ ಸಹಾಯಕರೊಬ್ಬರನ್ನು ಸಂಪರ್ಕಿಸಿದೆ. “ಅವರು ತಮ್ಮ [ಚುನಾವಣಾ] ಪ್ರಚಾರದ ಸಮಯದಲ್ಲಿ ನಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು" ಎಂದು ಗಣೇಶ್ ನೆನಪಿಸಿಕೊಳ್ಳುತ್ತಾರೆ. ಆದರೆ ಆ ಸಹಾಯಕ ತಾನು ಊರಿನಲ್ಲಿಲ್ಲ ಎಂದು ಹೇಳಿದ. “ಅವರು ನನಗೆ ಸಹಾಯ ಮಾಡದೆ ತಪ್ಪಿಸಿಕೊಳ್ಳಲು ನೋಡುತ್ತಿದ್ದರು.”

“ಅಂದು ಆಂಬುಲೆನ್ಸ್‌ ಸಿಕ್ಕಿದ್ದರೆ ಅವಳನ್ನು ಬೊಕಾರೊ ಅಥವಾ ರಾಂಚಿಯಂತಹ [ದೊಡ್ಡ ನಗರಗಳ] ತ್ತಮ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು" ಎಂದು ಗಣೇಶ್ ಹೇಳುತ್ತಾರೆ. ಕೊನೆಗೆ ಅವರು ತನ್ನ ಹೆಂಡತಿಯನ್ನು ಸಂಬಂಧಿಕರೊಬ್ಬರ ಬಳಿ 60,000 ಸಾಲ ಪಡೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು.

“ಚುನಾವಣೆಯ ಸಮಯದಲ್ಲಿ ಅವರು ಏನೆಲ್ಲಾ ಭರವಸೆಗಳನ್ನು ನೀಡುತ್ತಾರೆ. ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ನಮ್ಮನ್ನು ಗೆಲ್ಲಿಸಿ ಎನ್ನುತ್ತಾರೆ. ಆದರೆ ಗೆದ್ದ ನಂತರ ಅವರನ್ನು ಬೇಟಿಯಾಗಲು ಹೋದರೆ ಅವರ ಬಳಿ ನಿಮ್ಮನ್ನು ಭೇಟಿಯಾಗುವಷ್ಟು ಸಮಯವಿರುವುದಿಲ್ಲ” ಎಂದು ಗ್ರಾಮದ ಮುಖ್ಯಸ್ಥರೂ ಆಗಿರುವ 42 ವರ್ಷದ ಅವರು ಹೇಳುತ್ತಾರೆ. ತನ್ನ ಪಹಾಡಿಯಾ ಸಮುದಾಯದ ಜನರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅವರು ಹೇಳುತ್ತಾರೆ.

ಧನಗಢಾ ಎನ್ನುವುದು ಪಾಕುರ್‌ ಜಿಲ್ಲೆಯ ಹಿರಣ್‌ ಪುರ್‌ ವಿಭಾಗದ ಸಣ್ಣ ಊರು. ಇಲ್ಲಿ ಪಹಾಡಿಯಾ ಸಮುದಾಯಕ್ಕೆ ಸೇರಿದ 50 ಕುಟುಂಬಗಳು ನೆಲೆಸಿವೆ. ಈ ಹಳ್ಳಿಯನ್ನು ತಲುಪಲು, ರಾಜಮಹಲ್ ಶ್ರೇಣಿಯ ಬೆಟ್ಟದ ಬದಿಯಲ್ಲಿರುವ ಈ ದುರ್ಗಮ ನೆಲೆಯನ್ನು ತಲುಪಲು ಕಳಪೆ ನಿರ್ವಹಣೆ ಹೊಂದಿರುವ ರಸ್ತೆಯಲ್ಲಿ ಎಂಟು ಕಿಲೋಮೀಟರ್ ಪ್ರಯಾಣ ಮಾಡಬೇಕು.

“ನಮ್ಮ ಊರಿನ ಸರ್ಕಾರಿ ಶಾಲೆ ದುರ್ಬಲಗೊಂಡಿದೆ. ನಾವು ಹೊಸ ಶಾಲೆ ಕೇಳಿದ್ದೆವು, ಅದು ಎಲ್ಲಿದೆ? ಎಂದು ಗಣೇಶ ಕೇಳುತ್ತಾರೆ. ಸಮುದಾಯದ ಹೆಚ್ಚಿನ ಮಕ್ಕಳು ಶಾಲೆಗೆ ದಾಖಲಾಗಿಲ್ಲದ ಕಾರಣ ಸರ್ಕಾರವು ಕಡ್ಡಾಯಗೊಳಿಸಿರುವ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಲಾಭ ಅವರಿಗೆ ಸಿಗುತ್ತಿಲ್ಲ.

PHOTO • Ashwini Kumar Shukla
PHOTO • Ashwini Kumar Shukla

ಎಡ : ಗಣೇಶ್ ಪಹಾ ಡಿ ಯಾ ಧನಗಢಾ ಗ್ರಾಮದ ಮುಖ್ಯಸ್ಥ . ಅವರು ರಾಜಕಾರಣಿಗಳು ಮತ ಕೇಳಲು ಬಂದಾಗ ಅನೇಕ ಭರವಸೆಗಳನ್ನು ನೀಡುತ್ತಾರೆ , ಆದರೆ ನಂತರ ಅವುಗಳನ್ನು ಈಡೇರಿಸಲು ವಿಫಲರಾಗುತ್ತಾರೆ ಎಂದು ಹೇಳುತ್ತಾರೆ . ಬಲ : 2024 ಲೋಕಸಭಾ ಚುನಾವಣೆಯಲ್ಲಿ , ಗ್ರಾಮದ ಜನರಿಗೆ ರಸ್ತೆ ನಿರ್ಮಾಣದ ಭರವಸೆ ನೀಡಲಾಯಿತು ಆದರೆ ತಿಂಗಳುಗಳು ಕಳೆದಿವೆ ಮತ್ತು ಏನೂ ಮಾಡಲಾಗಿಲ್ಲ

ಸಮುದಾಯವು ತಮ್ಮ ಊರು ಮತ್ತು ಪಕ್ಕದ ಊರಿನ ನಡುವೆ ರಸ್ತೆ ನಿರ್ಮಿಸಿಕೊಡುವಂತೆ ಕೇಳಿತ್ತು. ಸಣ್ಣ ಕಲ್ಲುಗಳಿಂದ ಕೂಡಿದ ಕಚ್ಚಾ ರಸ್ತೆಯನ್ನು ತೋರಿಸುತ್ತಾ “ನೀವೇ ನೋಡಿ ಒಮ್ಮೆ” ಎಂದು ಗಣೇಶ ದೂರಿದರು. ಇಡೀ ಊರಿಗೆ ಒಂದು ಹ್ಯಾಂಡ್‌ ಪಂಪ್‌ ಸೌಲಭ್ಯವಿದೆ. ಇದರಿಂದಾಗಿ ಮಹಿಳೆಯರು ನೀರು ಹಿಡಿಯಲು ತಮ್ಮ ಸರದಿಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ ಎಂದು ಅವರು ಹೇಳಿದರು. “ನಮ್ಮ ಬೇಡಿಕೆಗಳೆಲ್ಲವನ್ನೂ ಈಡೇರಿಸಲಾಗುವುದು ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಲಾಗಿತ್ತು. ಆದರೆ ಮತದಾನದ ನಂತರ ಅದನ್ನೆಲ್ಲ ಮರೆತುಬಿಡುತ್ತಾರೆ” ಎಂದು ಗಣೇಶ್ ಹೇಳುತ್ತಾರೆ.

42 ವರ್ಷದ ಅವರು ಹಿರನ್‌ಪುರ ಬ್ಲಾಕಿನ ಧನಗಢಾ ಗ್ರಾಮದ ಮುಖ್ಯಸ್ಥರಾಗಿ ಪ್ರಧಾನ್‌ ಪದವಿಯನ್ನು ಹೊಂದಿದ್ದಾರೆ. ಇತ್ತೀಚಿನ 2024ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನೇತಾರರು ಜಾರ್ಖಂಡ್‌ ರಾಜ್ಯದ ಸಂತಾಲ್ ಪರಗಣ ಪ್ರದೇಶದ ಪಾಕೂರ್ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದರು, ಆದರೆ ಅದರಿಂದ ಸಮುದಾಯಕ್ಕೆ ಏನೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳುತ್ತಾರೆ.

81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತ ನವೆಂಬರ್ 13ರಂದು ನಡೆಯಲಿದೆ. ಎರಡನೇ ಹಂತದಲ್ಲಿ ಪಾಕೂರಿನಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಇಂಡಿಯಾ ಬಣ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಬಣಗಳ ನಡುವೆ ಚುನಾವಣಾ ಸ್ಪರ್ಧೆಯಿದೆ.

ಈ ಗ್ರಾಮವು ಲಿಟ್ಟಿಪಾರಾ ಕ್ಷೇತ್ರದ ಭಾಗ, 2019ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ದಿನೇಶ್ ವಿಲಿಯಂ ಮರಾಂಡಿ 66,675 ಮತಗಳನ್ನು ಪಡೆದರೆ, ಬಿಜೆಪಿಯ ಡೇನಿಯಲ್ ಕಿಸ್ಕು 52,772 ಮತಗಳನ್ನು ಪಡೆದರು. ಈ ಬಾರಿ ಜೆಎಂಎಂ ಅಭ್ಯರ್ಥಿ ಹೇಮಲಾಲ್ ಮುರ್ಮು ಅವರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಬಾಬುಧನ್ ಮುರ್ಮು ಅವರನ್ನು ಕಣಕ್ಕಿಳಿಸಿದೆ.

ಈ ಹಿಂದೆಯೂ ಸಾಕಷ್ಟು ಭರವಸೆಗಳನ್ನು ನೀಡಲಾಗಿತ್ತು. “2022ರಲ್ಲಿ ನಡೆದ ವಿಲೇಜ್‌ ಕೌನ್ಸಿಲ್‌ ಸಭೆಯಲ್ಲಿ ಗ್ರಾಮದಲ್ಲಿ ಮದುವೆಗೆ ಅಡುಗೆ ಪಾತ್ರೆಗಳನ್ನು ಒದಗಿಸುವುದಾಗಿ ಅಭ್ಯರ್ಥಿಗಳು ಭರವಸೆ ನೀಡಿದರು" ಎಂದು ನಿವಾಸಿ ಮೀನಾ ಪಹಾಡಿನ್ ಹೇಳುತ್ತಾರೆ. ಅಂದಿನಿಂದ ಇಂದಿನ ತನಕ ಆ ಭರವಸೆ ಒಮ್ಮೆಯಷ್ಟೇ ಈಡೇರಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ “ಅವರು ನಮಗೆ ಕೇವಲ ಸಾವಿರ ರೂಪಾಯಿಗಳನ್ನು ನೀಡಿ ಕಣ್ಮರೆಯಾದರು. ಹೇಮಂತ್‌ ಬಂದು [ಜೆಎಮ್‌ಎಮ್‌ ಪಕ್ಷದ ಕಾರ್ಯಕರ್ತ] ಬಂದು ಗಂಡಸರು ಮತ್ತು ಹೆಂಗಸರಿಗೆ 1,000 ರೂಪಾಯಿಗಳನ್ನು ನೀಡಿದರು. ನಂತರ ಚುನಾವಣೆ ಗೆದ್ದ ಅವರು ಈಗ ಅಧಿಕಾರದ ರುಚಿ ಸವಿಯುತ್ತಿದ್ದಾರೆ.”

PHOTO • Ashwini Kumar Shukla
PHOTO • Ashwini Kumar Shukla

ಎಡಕ್ಕೆ : ಸೌದೆ ಮತ್ತು ಚಿರೋಟಾ ಸಂಗ್ರಹಿ ಸಿ ಮಾರಾಟ ಮಾಡು ಮೀನಾ ಪಹಾಡಿನ್ ಅವುಗಳನ್ನು ಸಂಗ್ರಹಿಸಲು ಪ್ರತಿದಿನ 10-12 ಕಿಲೋಮೀಟರ್ ಡೆಯುತ್ತಾರೆ . ಬಲ : ಊರಿನ ಏಕೈಕ ಸೌರಶಕ್ತಿ ಚಾಲಿತ ಹ್ಯಾಂಡ್‌ ಪಂಪಿನಿಂದ ಮಹಿಳೆಯರು ನೀರನ್ನು ತುಂಬಿಸಿಕೊಳ್ಳುತ್ತಿದ್ದಾರೆ

ಜಾರ್ಖಂಡ್‌ ಒಟ್ಟು 32 ಬುಡಕಟ್ಟು ಜನಾಂಗಗಳ ನೆಲೆ. ಇದರಲ್ಲಿ ಹೆಚ್ಚಿನವು ದುರ್ಬಲ ಬುಡಕಟ್ಟು ಗುಂಪುಗಳು - ಅಸುರ್, ಬಿರ್ಹೋರ್, ಬಿರ್ಜಿಯಾ, ಕೊರ್ವಾ, ಮಲ್ ಪಹಾಡಿಯಾ, ಪರ್ಹೈಯಾ, ಸೌರಿಯಾ ಪಹಾರಿಯಾ ಮತ್ತು ಸಾವರ್. 2013ರ ವರದಿಯೊಂದರ ಪ್ರಕಾರ, ಜಾರ್ಖಂಡ್‌ ರಾಜ್ಯದ ಒಟ್ಟು ಪಿವಿಟಿಜಿ ಜನಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚು.

ಅವರ ಸಣ್ಣ ಸಂಖ್ಯೆ ಮತ್ತು ಅವರಿರುವ ದುರ್ಗಮ ಹಳ್ಳಿಗಳು ಕಡಿಮೆ ಸಾಕ್ಷರತೆ, ಆರ್ಥಿಕ ಸವಾಲುಗಳು ಮತ್ತು ಹಳೆಯ ಕೃಷಿ ತಂತ್ರಜ್ಞಾನದ ಮೇಲಿನ ಅವಲಂಬನೆಗಳಿಗೆ ಕಾರಣವಾಗಿವೆ. ಕಳೆದ ಕೆಲವು ದಶಕಗಳಿಂದ ಇಲ್ಲಿನ ಪರಿಸ್ಥಿತಿಯಲ್ಲಿ ಅಂತಹ ಬದಲಾವಣೆಗಳೇನೂ ಕಂಡುಬಂದಿಲ್ಲ. ಓದಿ: ದಿ ಹಿಲ್ಸ್‌ ಆಫ್‌ ಹಾರ್ಡ್‌ಶಿಪ್‌ , ಇದು ಪಿ ಸಾಯಿನಾಥ್‌ ಅವರ ಬರ ಅಂದ್ರೆ ಎಲ್ರಿಗೂ ಇಷ್ಟ ಎನ್ನುವ ಪುಸ್ತಕದ ಆಯ್ದ ಭಾಗ.

"ಗಾಂವ್ ಮೇ ಜ್ಯಾದತರ್ ಲೋಗ್ ಮಜ್ದೂರಿ ಹೀ ಕರ್ತಾ ಹೈ, ಸರ್ವಿಸ್‌ ಮೇ ತೋ ನಹೀ ಹೈ ಕೋಯಿ. ಔರ್ ಯಹಾಂ ಧಾನ್ ಕಾ ಖೇತ್ ಭಿ ನಹೀ ಹೈ. ಖಾಲಿ ಪಹಾಡ್ ಪಹಾಡ್ ಹೈ. [ಹಳ್ಳಿಯ ಹೆಚ್ಚಿನ ಜನರು ಕೂಲಿ ಕೆಲಸ ಮಾಡುತ್ತಾರೆ; ಇಲ್ಲಿ ಯಾರೂ ಸೇವೆಯಲ್ಲಿಲ್ಲ [ಸರ್ಕಾರಿ ಉದ್ಯೋಗ]. ಮತ್ತೆ ಇಲ್ಲಿ ಭತ್ತದ ಗದ್ದೆಗಳು ಸಹ ಇಲ್ಲ, ಎಲ್ಲೆಡೆ ಬೆಟ್ಟಗಳು ಮಾತ್ರವೇ ಇವೆ]" ಎಂದು ಗಣೇಶ್ ಪರಿಗೆ ತಿಳಿಸಿದರು. ಮಹಿಳೆಯರು ಕಟ್ಟಿಗೆ ಮತ್ತು ಚಿರೋಟಾ [ಸ್ವೆರ್ಟಿಯಾ/ನೆಲಬೇವು] ಸಂಗ್ರಹಿಸಲು ಕಾಡಿಗೆ ಹೋಗುತ್ತಾರೆ, ನಂತರ ಅದನ್ನು ಅವರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಜಾರ್ಖಂಡ್‌ ರಾಜ್ಯದ ಸಂತಾಲ್‌ ಪರಗಣ ಪ್ರದೇಶದ ಆರಭಿಕ ಮೂಲ ನಿವಾಸಿಗಳಲ್ಲಿ ಪಹಾಡಿಯಾ ಬುಡಕಟ್ಟು ಸಹ ಒಂದು. ಈ ಸಮುದಾಯವನ್ನು ಮೂರು ಶಾಖೆಗಳಾಗಿ ವಿಂಗಡಿಸಲಾಗಿದೆ: ಸೌರಿಯಾ ಪಹಾಡಿಯಾ, ಮಾಲ್‌ ಪಹಾಡಿಯಾ ಮತ್ತು ಕುಮಾರ್‌ಭಾಗ್‌ ಪಹಾಡಿಯಾ. ಈ ಮೂರೂ ಸಮುದಾಯಗಳು ರಾಜಮಹಲ್‌ ಬೆಟ್ಟಗಳ ಶ್ರೇಣಿಯಲ್ಲಿ ಶತಮಾನಗಳಿಂದ ವಾಸಿಸುತ್ತಿದ್ದಾರೆ.

ಕ್ರಿ.ಪೂ. 302ರಲ್ಲಿ ಚಂದ್ರಗುಪ್ತ ಮೌರ್ಯನ ಆಳ್ವಿಕೆಯ ಸಮಯದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ರಾಜತಾಂತ್ರಿಕ ಮತ್ತು ಇತಿಹಾಸಕಾರ ಮೆಗಾಸ್ತನೀಸ್ ಎನ್ನುವವನು ಇವರು ಮಲ್ಲಿ ಬುಡಕಟ್ಟಿಗೆ ಸೇರಿದವರು ಎಂದು ಉಲ್ಲೇಖಿಸಿರುವುದನ್ನು ಐತಿಹಾಸಿಕ ದಾಖಲೆಗಳು ಹೇಳುತ್ತವೆ ಎಂದು ಈ ಜರ್ನಲ್ ಹೇಳುತ್ತದೆ. ಅವರ ಇತಿಹಾಸವು ಸಂತಾಲರು ಮತ್ತು ಬ್ರಿಟಿಷ್ ವಸಾಹತುಶಾಹಿ ಆಡಳಿತದೊಂದಿಗಿನ ಸಂಘರ್ಷಗಳು ಸೇರಿದಂತೆ ಹೋರಾಟಗಳಿಂದ ಗುರುತಿಸಲ್ಪಟ್ಟಿದೆ, ಈ ಹೋರಾಟಗಳು ಅವರನ್ನು ಅವರ ಪೂರ್ವಜರು ವಾಸವಿದ್ದ ಬಯಲು ಪ್ರದೇಶಗಳಿಂದ ಬಲವಂತವಾಗಿ ಬೆಟ್ಟಗಳೆಡೆಗೆ ತಳ್ಳಿತು. ಅವರಿಗೆ ದರೋಡೆಕೋರರು ಮತ್ತು ಜಾನುವಾರು ಕಳ್ಳರು ಎಂದು ಹಣೆಪಟ್ಟಿಯನ್ನೂ ಕಟ್ಟಲಾಯಿತು.

“ಒಂದು ಸಮುದಾಯವಾಗಿ ಪಹಾಡಿಯಾ ಜನರು ಮೂಲೆಗುಂಪಾಗಿದ್ದಾರೆ. ಅವರು ಸಂತಾಲರು ಮತ್ತು ಬ್ರಿಟಿಷರೊಂದಿಗಿನ ಹೋರಾಟದಲ್ಲಿ ಭಾರಿ ನಷ್ಟವನ್ನು ಅನುಭವಿಸಿದರು. ಆ ಆಘಾತದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ” ಎಂದು ಜಾರ್ಖಂಡ್‌ ರಾಜ್ಯದ ದುಮ್ಕಾದ ಸಿಡೋ-ಕಾನೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರ್ ರಾಕೇಶ್ ಈ ವರದಿಯಲ್ಲಿ ಬರೆದಿದ್ದಾರೆ.

PHOTO • Ashwini Kumar Shukla
PHOTO • Ashwini Kumar Shukla

ಎಡಕ್ಕೆ : ಮೀನಾ ಅವರ ಮನೆಯ ಹೊರಗೆ ಇರಿಸಲಾ ಗಿರುವ ಸೌದೆಯ ರಾಶಿಯನ್ನು ಅಡುಗೆಗೆ ಬಳಸಲಾಗುತ್ತದೆ ಮತ್ತು ಒಂದಷ್ಟನ್ನು ಮಾರಾಟ ಮಾಡಲಾಗುತ್ತದೆ . ಬಲ : ಚಿರೋಟಾವನ್ನು ಕಾಡಿನಿಂದ ಸಂಗ್ರಹಿಸಿ , ಒಣಗಿಸಿ ನಂತರ ಹತ್ತಿರದ ಮಾರುಕಟ್ಟೆಗಳಲ್ಲಿ ಕಿಲೋಗ್ರಾಂ ಒಂದಕ್ಕೆ 20 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ

*****

ಚಳಿಗಾಲದ ಸೌಮ್ಯ ಬಿಸಿಲಿನಲ್ಲಿ, ಮಕ್ಕಳು ಆಟವಾಡುವ ಸದ್ದು, ಆಡುಗಳು ಕಿರುಚುವುದು ಮತ್ತು ಆಗಾಗ ಹುಂಜ, ಕಾಗೆಗಳ ಸದ್ದು ಧನಗಢಾ ಗ್ರಾಮದಲ್ಲಿ ಕೇಳಿಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ಮೀನಾ ಪಹಾಡಿನ್ ತನ್ನ ಮನೆಯ ಹೊರಗೆ ಇತರ ಮಹಿಳೆಯರೊಂದಿಗೆ ತಮ್ಮ ಸ್ಥಳೀಯ ಮಾಲ್ಟೋ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ.  "ನಾವು ಜುಗಬಾಸಿ. ಅದರ ಅರ್ಥವೇನೆಂದು ನಿಮಗೆ ಗೊತ್ತೇ?" ಎಂದು ಅವರು ಈ ವರದಿಗಾರನನ್ನು ಕೇಳಿದರು. "ಇದರರ್ಥ ಈ ಪರ್ವತ ಮತ್ತು ಕಾಡು ನಮ್ಮ ಮನೆ" ಎಂದು ಅವರು ವಿವರಿಸಿದರು.

ಅವರು ಪ್ರತಿದಿನ, ಇತರ ಮಹಿಳೆಯರೊಂದಿಗೆ ಬೆಳಿಗ್ಗೆ 8 ಅಥವಾ 9 ಗಂಟೆಗೆ ಕಾಡಿಗೆ ಹೋಗಿ, ಮಧ್ಯಾಹ್ನದ ವೇಳೆಗೆ ಹಿಂತಿರುಗುತ್ತಾರೆ. "ಕಾಡಿನಲ್ಲಿ ಚಿರೋಟಾ ಇದೆ; ನಾವು ಅದನ್ನು ಇಡೀ ದಿನ ಸಂಗ್ರಹಿಸುತ್ತೇವೆ, ನಂತರ ಅದನ್ನು ಒಣಗಿಸಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತೇವೆ" ಎಂದು ಅವರು ತಮ್ಮ ಮಣ್ಣಿನ ಮನೆಯ ಛಾವಣಿಯ ಮೇಲೆ ಒಣಗುತ್ತಿರುವ ಕೊಂಬೆಗಳನ್ನು ತೋರಿಸುತ್ತಾ ಹೇಳಿದರು.

“ಕೆಲವೊಮ್ಮೆ ದಿನಕ್ಕೆ ಎರಡು ಕೇಜಿಯಷ್ಟು ಸಿಗುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿದ್ದರೆ ಮೂರು, ಇನ್ನೂ ಕೆಲವೊಮ್ಮೆ ಐದು ಕಿಲೋ ಸಿಗುತ್ತದೆ” ಎಂದು ಅವರು ಹೇಳುತ್ತಾರೆ. ಒಂದು ಕಿಲೋ ಚಿರೋಟಾ ಕೇಜಿಗೆ 20ರಂತೆ ಮಾರಾಟವಾಗುತ್ತದೆ. ಚಿರೋಟಾ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ, ಮತ್ತು ಜನರು ಅದರ ಕಷಾಯವನ್ನು ಕುಡಿಯುತ್ತಾರೆ. "ಮಕ್ಕಳು, ಹಿರಿಯರು ಎಲ್ಲರೂ ಇದನ್ನು ಕುಡಿಯಬಹುದು- ಇದು ಹೊಟ್ಟೆಗೆ ಒಳ್ಳೆಯದು" ಎಂದು ಮೀನಾ ಹೇಳಿದರು.

ಚಿರೋಟಾ ಜೊತೆಗೆ, ಮೀನಾ ಕಾಡಿನಿಂದ ಉರುವಲು ಸಂಗ್ರಹಿಸುತ್ತಾರೆ, ಪ್ರತಿದಿನ 10-12 ಕಿಲೋಮೀಟರ್ ಪ್ರಯಾಣಿಸುತ್ತಾರೆ. "ಹೊರೆಗಳು ಭಾರವಾಗಿರುತ್ತವೆ ಮತ್ತು ಒಂದು ಹೊರೆಗೆ ಕೇವಲ 100 ರೂಪಾಯಿ ಸಿಗುತ್ತದೆ" ಎಂದು ಅವರು ಹೇಳುತ್ತಾರೆ. ಒಣ ಸೌದೆ ಹೊರೆಗಳು ಸುಮಾರು 15-20 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ, ಆದರೆ ಕಟ್ಟಿಗೆ ಒದ್ದೆಯಿದ್ದರೆ ಅದು  25-30 ಕಿಲೋಗ್ರಾಂ ತನಕ ಇರುತ್ತದೆ.

ಸರ್ಕಾರವು ಭರವಸೆಗಳನ್ನು ನೀಡುತ್ತದೆ ಆದರೆ ಅವುಗಳನ್ನು ಎಂದಿಗೂ ಈಡೇರಿಸುವುದಿಲ್ಲ ಎನ್ನುವ ಗಣೇಶ್ ಅವರ ಮಾತನ್ನು ಮೀನಾ ಸಹ ಒಪ್ಪುತ್ತಾರೆ. "ಈ ಹಿಂದೆ, ಯಾರೂ ನಮ್ಮ ಬಳಿಗೆ ಬರುತ್ತಿರಲಿಲ್ಲ, ಆದರೆ ಈಗ ಕಳೆದ ಎರಡು ವರ್ಷಗಳಿಂದ, ಜನರು ಬರಲು ಪ್ರಾರಂಭಿಸಿದ್ದಾರೆ" ಎಂದು ಅವರು ಹೇಳಿದರು. "ಹಲವಾರು ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳು ಬದಲಾಗಿದ್ದಾರೆ, ಆದರೆ ನಮ್ಮ ಪರಿಸ್ಥಿತಿ ಹಾಗೆಯೇ ಇದೆ. ನಮಗೆ ಸಿಕ್ಕಿದ್ದು ವಿದ್ಯುತ್ ಮತ್ತು ಪಡಿತರ ಮಾತ್ರ" ಎಂದು ಅವರು ಹೇಳುತ್ತಾರೆ.

"ಜಾರ್ಖಂಡ್ ರಾಜ್ಯದಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿ ಸ್ಥಳಾಂತರ ಮತ್ತು ಸ್ಥಾನಪಲ್ಲಟ ಮುಂದುವರೆದಿದೆ. ಮುಖ್ಯವಾಹಿನಿಯ ಅಭಿವೃದ್ಧಿ ಕಾರ್ಯಕ್ರಮಗಳು ಈ ಗುಂಪಿನ ಸಾಮಾಜಿಕ-ಸಾಂಸ್ಕೃತಿಕ ವಿಶಿಷ್ಟತೆಯನ್ನು ಗುರುತಿಸಲು ವಿಫಲವಾಗಿವೆ ಮತ್ತು 'ಎಲ್ಲರಿಗೂ ಹೊಂದುವ ಒಂದು ಮಾದರಿ' ವಿಧಾನವನ್ನು ಅನುಸರಿಸಿದೆ" ಎಂದು ರಾಜ್ಯದ ಆದಿವಾಸಿ ಜೀವನೋಪಾಯದ ಕರಿತಾದ  2021ರ ವರದಿ ಹೇಳುತ್ತದೆ.

PHOTO • Ashwini Kumar Shukla
PHOTO • Ashwini Kumar Shukla

ಪಹಾಡಿಯಾ ಆದಿವಾಸಿಗಳ ಸಣ್ಣ ಸಂಖ್ಯೆಯೂ ಅವರ ಪ್ರತ್ಯೇಕತೆಗೆ ಕಾರಣವಾಗಿದೆ ಮತ್ತು ಇದರಿಂದಾಗಿ ಅವರು ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಅವರ ಪರಿಸ್ಥಿತಿಯಲ್ಲಿ ಅಂತಹ ಬದಲಾವಣೆಗಳೇನೂ ಕಂಡುಬಂದಿಲ್ಲ. ಬಲ: ಧನಗಢಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ. ರಾಜಕಾರಣಿಗಳು ಹೊಸ ಶಾಲೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ, ಆದರೆ ಅದನ್ನು ಈಡೇರಿಸಿಲ್ಲ ಎಂದು ಊರಿನ ಜನರು ಹೇಳುತ್ತಾರೆ

“ಕೆಲಸಗಳೇ ಇಲ್ಲ! ಕೆಲಸಗಳೇ ಸಿಗುತ್ತಿಲ್ಲ. ಹೀಗಾಗಿ ನಾವು ಹೊರಗೆ ಹೋಗಬೇಕಾಗಿದೆ” ಎಂದು ವಲಸೆ ಹೋಗುವ 250-300 ಜನರ ಪರವಾಗಿ ಮಾತನಾಡುತ್ತಾ ಮೀನಾ ಹೇಳುತ್ತಾರೆ. “ಹೊರಗೆ ಹೋಗುವುದು ಕಷ್ಟ; ಅಲ್ಲಿಗೆ ತಲುಪಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ. ಏನಾದರೂ ಅವಸರದ ಕೆಲಸ ಬಂದರೆ ನಮಗೆ ಬರಲು ಕಷ್ಟವಾಗುತ್ತದೆ.”

ಪಹಾಡಿಯಾ ಸಮುದಾಯವು ' ದಾಕಿಯಾ ಯೋಜನೆ ' ಮೂಲಕ ಪ್ರತಿ ಕುಟುಂಬಕ್ಕೆ 35 ಕಿಲೋಗ್ರಾಂಗಳಷ್ಟು ಪಡಿತರವನ್ನು ಅವರ ಮನೆ ಬಾಗಿಲಿನಲ್ಲಿ ಪಡೆಯಲು ಅರ್ಹವಾಗಿದೆ. ಆದರೆ, 12 ಸದಸ್ಯರ ತನ್ನ ಕುಟುಂಬಕ್ಕೆ ಇದು ಸಾಕಾಗುವುದಿಲ್ಲ ಎಂದು ಮೀನಾ ಹೇಳುತ್ತಾರೆ. "ಈ ಪಡಿತರದಿಂದ ಒಂದು ಸಣ್ಣ ಕುಟುಂಬವನ್ನು ನಿಭಾಯಿಸಬಹುದು, ಆದರೆ ನಮಗೆ ಇದು 10 ದಿನಗಳಿಗೆ ಸಹ ಬರುವುದಿಲ್ಲ" ಎಂದು ಅವರು ಹೇಳುತ್ತಾರೆ.

ತನ್ನ ಹಳ್ಳಿಯ ಸ್ಥಿತಿಯನ್ನು ಪ್ರತಿಬಿಂಬಿಸಿದ ಅವರು, ಬಡವರ ದುಃಸ್ಥಿತಿಯ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಹೇಳಿದರು. "ನಮಗೆ ಇಲ್ಲಿ ಅಂಗನವಾಡಿಯೂ ಇಲ್ಲ" ಎಂದು ಮೀನಾ ಹೇಳಿದರು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ಆರು ತಿಂಗಳಿನಿಂದ ಆರು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಅಂಗನವಾಡಿಯಿಂದ ಪೂರಕ ಪೌಷ್ಠಿಕಾಂಶವನ್ನು ಪಡೆಯಲು ಅರ್ಹರು.

ಮೀನಾ ತನ್ನ ಕೈಯನ್ನು ಸೊಂಟದ ಎತ್ತರಕ್ಕೆ ಎತ್ತಿ ತೋರಿಸುತ್ತಾ ಹೇಳುತ್ತಾರೆ, "ಅಕ್ಕಪಕ್ಕದ ಹಳ್ಳಿಗಳಲ್ಲಿ, ಇಷ್ಟು ಎತ್ತರದ ಮಕ್ಕಳು ಪೌಷ್ಟಿಕ ಆಹಾರವನ್ನು ಪಡೆಯುತ್ತಾರೆ - ಸತ್ತು, ಕಡಲೆ, ಅಕ್ಕಿ, ಬೇಳೆಕಾಳುಗಳು... ಆದರೆ ನಮಗೆ ಅದ್ಯಾವುದೂ ಸಿಗುವುದಿಲ್ಲ." "ಸಿಗುವುದು ಪೋಲಿಯೊ ಹನಿಗಳು ಮಾತ್ರ" ಎಂದು ಅವರು ಹೇಳಿದರು. "ಎರಡು ಹಳ್ಳಿಗಳಿಗೆ ಸೇರಿ ಒಂದು ಅಂಗನವಾಡಿ ಇದೆ, ಆದರೆ ಅವರು ನಮಗೆ ಏನನ್ನೂ ನೀಡುವುದಿಲ್ಲ."

ಈ ನಡುವೆ ಗಣೇಶ್‌ ಅವರು ತನ್ನ ಪತ್ನಿಯ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ತೀರಿಸಬೇಕಿದೆ. ಒಟ್ಟು 60,000 ರೂಪಾಯಿ ಸಾಲ ಮತ್ತು ಒಂದಷ್ಟು ಬಡ್ಡಿ ಕಟ್ಟಬೇಕಿದೆ ಅವರು. “ಕಾ ಕಹೆ ಕೈಸೆ, ದೇಂಗೆ, ಅಬ್‌ ಕಿಸಿ ಸೇಲಿಯೇ ಹೈ ತೋ ದೇಂಗೇ ಹೈ… ತೋಡಾ ತೋಡಾ ಕರ್‌ ಕೇ ಚುಕಾಯೇಂಗೆ, ಕಿಸೀ ತರಹ್‌ [ನನಗೆ ಗೊತ್ತಿಲ್ಲ, ಹೇಗೆ ತೀರಿಸುತ್ತೇನೆ ಎಂದು. ಯಾರಿಂದಲೋ ಸಾಲ ಪಡೆದಿದ್ದೇನೆ, ಹಾಗಾಗಿ ಏನಾದರೂ ಮಾಡಿ ತೀರಿಸಲೇಬೇಕು]” ಎಂದು ಅವರು ಈ ವರದಿಗಾರರ ಬಳಿ ಹೇಳಿದರು.

ಈ ಚುನಾವಣೆಯಲ್ಲಿ ಮೀನಾ ದೃಢವಾಗಿ ನಿರ್ಧರಿಸಿದ್ದಾರೆ, "ನಾವು ಯಾರಿಂದಲೂ ಏನನ್ನೂ ತೆಗೆದುಕೊಳ್ಳುವುದಿಲ್ಲ. ನಾವು ಸಾಮಾನ್ಯವಾಗಿ ಯಾರಿಗೆ ಮತ ಹಾಕುತ್ತೇವೆಯೋ ಅವರಿಗೆ ಮತ ಹಾಕುವುದಿಲ್ಲ; ನಮಗೆ ನಿಜವಾಗಿಯೂ ಪ್ರಯೋಜನವಾಗಬಲ್ಲ ಯಾರಿಗಾದರೂ ನಾವು ಮತ ಹಾಕುತ್ತೇವೆ.”

ಅನುವಾದ: ಶಂಕರ. ಎನ್. ಕೆಂಚನೂರು

Ashwini Kumar Shukla

అశ్విని కుమార్ శుక్లా ఝార్కండ్ రాష్ట్రం, పలామూలోని మహుగావాన్ గ్రామానికి చెందినవారు. ఆయన దిల్లీలోని ఇండియన్ ఇన్స్టిట్యూట్ ఆఫ్ మాస్ కమ్యూనికేషన్ నుంచి పట్టభద్రులయ్యారు (2018-2019). ఆయన 2023 PARI-MMF ఫెలో.

Other stories by Ashwini Kumar Shukla
Editor : Priti David

ప్రీతి డేవిడ్ పీపుల్స్ ఆర్కైవ్ ఆఫ్ రూరల్ ఇండియాలో జర్నలిస్ట్, PARI ఎడ్యుకేషన్ సంపాదకురాలు. ఆమె గ్రామీణ సమస్యలను తరగతి గదిలోకీ, పాఠ్యాంశాల్లోకీ తీసుకురావడానికి అధ్యాపకులతోనూ; మన కాలపు సమస్యలను డాక్యుమెంట్ చేయడానికి యువతతోనూ కలిసి పనిచేస్తున్నారు.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru