ಲುಕೊರ್‌ ಕೊತಾ ನುಹುನಿಬಾ,
ಬತಾತ್‌ ನಾಂಗೊಲ್‌ ನಾಚಚಿಬಾ

[ಜನರ ಮಾತನ್ನು ಕೇಳಬೇಡಿ,
ಬೀದಿಯಲ್ಲಿ ಕುಳಿತು ನೇಗಿಲನ್ನು ಹರಿತಗೊಳಿಸಬೇಡಿ]

ಒಂದು ಕೆಲಸ ಮಾಡುವಾಗ ಅದರ ಮೇಲೆ ಪೂರ್ತಿಯಾಗಿ ಗಮನವಿರಬೇಕು ಎನ್ನುವುದನ್ನು ತಿಳಿಸಲು ಅಸ್ಸಾಮಿ ಭಾಷೆಯಲ್ಲಿ ಈ ಗಾದೆಯನ್ನು ಬಳಸಲಾಗುತ್ತದೆ.

ಊರಿನ ರೈತರಿಗೆ ನೇಗಿಲು ಮತ್ತು ಇತರ ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸಿ ಕೊಡುವ ಹನೀಫ್‌ ಅಲಿಯವರು ʼಈ ಮಾತು ನನ್ನ ಕೆಲಸಕ್ಕೆ ಸರಿಯಾಗಿ ಅನ್ವಯಿಸುತ್ತದೆʼ ಎನ್ನುತ್ತಾರೆ. ಮಧ್ಯ ಅಸ್ಸಾಂನ ದರ್ರಾಂಗ್‌ ಜಿಲ್ಲೆಯ ಸುಮಾರು ಮೂರನೇ ಎರಡು ಭಾಗದಷ್ಟು ಭೂಮಿಯಲ್ಲಿ ಕೃಷಿ ನಡೆಸಲಾಗುತ್ತದೆ. ಮತ್ತು ಈ ಕುಶಲಕರ್ಮಿಯ ಬಳಿ ಕೃಷಿಗೆ ಅಗತ್ಯವಿರುವ ಹಲವು ಉಪಕರಣಗಳು ಲಭ್ಯ.

“ನಾನು ನಂಗೋಲ್‌ [ನೇಗಿಲು], ಚೊಂಗೊ [ಬಿದಿರಿನ ರೆಂಟೆ ಹೊಡೆಯುವ ಉಪಕರಣ], ಜುವಾಲ್‌ [ನೊಗ], ಹಾತ್‌ ನೈಂಗೇಲ್‌ [ಕೈ-ಗೋರೆ]. ನೈಂಗೋಲ್‌ [ಕುಂಟೆ], ಢೇಕಿ [ಕಾಲು ಬಳಸಿ ಅಕ್ಕಿ ಪುಡಿ ಮಾಡುವ ಉಪಕರಣ], ಇಟಾಮಾಗೂರ್ [ಕೊಡತಿ], ಹಾರ್‌ಪಾಟ್‌ [ಒಣಗಿದ ನಂತರ ಭತ್ತವನ್ನು ರಾಶಿ ಮಾಡಲು ಬಳಸುವ ಬಿದಿರಿನ ಕಂಬಕ್ಕೆ ಜೋಡಿಸಲಾದ ಅರ್ಧ ವೃತ್ತಾಕಾರದ ಮರದ ಉಪಕರಣ] ಮತ್ತು ಇನ್ನೂ ಹಲವು ಉಪಕರಣಗಳನ್ನು ತಯಾರಿಸುತ್ತೇವೆ” ಎಂದು ಪಟ್ಟಿ ನೀಡಿದರು.

ಸ್ಥಳೀಯ ಬಂಗಾಳಿ ಉಪಭಾಷೆಯಲ್ಲಿ ಕಾಥೋಲ್ ಮತ್ತು ಅಸ್ಸಾಮಿ ಭಾಷೆಯಲ್ಲಿ ಕೊಥಾಲ್ ಎಂದು ಕರೆಯಲ್ಪಡುವ ಹಲಸಿನ ಮರದ ಮರವನ್ನು ಹೆಚ್ಚಾಗಿ ಅವರು ತನ್ನ ಕೆಲಸದಲ್ಲಿ ಬಳಸುತ್ತಾರೆ. ಬಾಗಿಲು, ಕಿಟಿಕಿ ಹಾಗೂ ಮಂಚದ ತಯಾರಿಕೆಗೂ ಈ ಮರವನ್ನು ಬಳಸಲಾಗುತ್ತದೆ. ಈ ದುಬಾರಿ ಯುಗದಲ್ಲಿ ಹನೀಫ್‌ ಅವರಿಗೆ ತಾನು ಖರೀದಿಸಿದ ಮರದ ಯಾವ ಭಾಗವನ್ನೂ ವ್ಯರ್ಥ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ಪ್ರತಿ ಮರದ ತುಂಡಿನಿಂದ ಸಾಧ್ಯವಿರುವಷ್ಟು ಉಪಕರಣಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ.

ನೇಗಿಲು ಬಹಳ ಕರಾರುವಕ್ಕಾಗಿ ತಯಾರಿಸಬೇಕಾದ ಉಪಕರಣ. “ಮರದ ಮೇಲಿನ ಗುರುತುಗಳಲ್ಲಿ ಒಂದನ್ನು ಸಹ ತಪ್ಪಿಸಬಾರದು. ಕೆತ್ತುವಾಗ ಒಂದು ಇಂಚು ಅತ್ತಿತ್ತ ಆದರೂ ಆ ಇಡೀ ಮರದ ತುಂಡನ್ನು ನಷ್ಟ ಮಾಡಿಕೊಳ್ಳಬೇಕಾಗುತ್ತದೆ” ಒಂದು ಮರದ ತುಂಡು ವ್ಯರ್ಥವಾಗುವುದೆಂದರೆ 250-300 ರೂಪಾಯಿಗಳ ಆರ್ಥಿಕ ನಷ್ಟ ಎಂದು ಅವರು ಹೇಳುತ್ತಾರೆ.

PHOTO • Mahibul Hoque
PHOTO • Mahibul Hoque

ನೇಗಿಲು ತಯಾರಕ ಹನೀಫ್‌ ಅಲಿ ನೊಗ ಹಿಡಿದು ನಿಂತಿದ್ದಾರೆ. ಈ ಉಪಕರಣವನ್ನು ಎತ್ತುಗಳ ಹೆಗಲ ಮೇಲಿಟ್ಟು ಕಟ್ಟಲಾಗುತ್ತದೆ. ಎರಡೂ ಎತ್ತುಗಳ ಜೋಡಿಯಲ್ಲಿನ ಸಮತೋಲನ ಕಾಯ್ದುಕೊಳ್ಳಲು ಇದನ್ನು ಬಳಸಲಾಗುತ್ತದೆ. ಬಲ: ನೇಗಿಲಿನ ಚಿತ್ರ ಮತ್ತು ಭಾಗಗಳ ವಿವರಣೆ

ಬಹುತೇಕ ಮನೆಯಲ್ಲಿ ಎತ್ತುಗಳನ್ನು ಹೊಂದಿರುವ ಸಣ್ಣ ರೈತರೇ ಅವರ ಗ್ರಾಹಕರು. ಈ ರೈತರು ತಮ್ಮ ಭೂಮಿಯಲ್ಲಿ ಹಲವು ಬೆಳೆಗಳನ್ನು - ಹೂಕೋಸು, ಎಲೆಕೋಸು, ಬದನೆಕಾಯಿ, ನಾಲ್-ಖೋಲ್, ಬಟಾಣಿ, ಮೆಣಸಿನಕಾಯಿ, ಸೋರೆಕಾಯಿ, ಕುಂಬಳ, ಕ್ಯಾರೆಟ್, ಹಾಗಲಕಾಯಿ, ಟೊಮೆಟೊ ಮತ್ತು ಸೌತೆಕಾಯಿ, ಜೊತೆಗೆ ಸಾಸಿವೆ ಮತ್ತು ಭತ್ತದ ಬೆಳೆಗಳನ್ನು ಬೆಳೆಯುತ್ತಾರೆ.

“ನೇಗಿಲಿನ ಅಗತ್ಯವಿರುವ ಯಾರೇ ಆದರೂ ನನ್ನ ಬಳಿ ಬರುತ್ತಾರೆ” ಎನ್ನುತ್ತಾರೆ ಈ 60 ವರ್ಷ ಪ್ರಾಯದ ಹಿರಿಯ ಕುಶಲಕರ್ಮಿ. "ಸುಮಾರು 15-10 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಕೇವಲ ಎರಡು ಟ್ರಾಕ್ಟರುಗಳಿದ್ದವು. ಆಗೆಲ್ಲ ಜನರು ತಮ್ಮ ಭೂಮಿಯನ್ನು ಉಳುಮೆ ಮಾಡಲು ನೇಗಿಲುಗಳನ್ನು ಅವಲಂಬಿಸಿದ್ದರು" ಎಂದು ಅವರು ಪರಿಗೆ ಹೇಳಿದರು.

ಅರವತ್ತರ ಪ್ರಾಯದ ಮುಕದ್ದಾಸ್‌ ಅಲಿ ಈಗಲೂ ಸಾಂದರ್ಭಿಕವಾಗಿ ಮರದ ನೇಗಿಲನ್ನು ಬಳಸುವ ಕೆಲವೇ ರೈತರಲ್ಲಿ ಒಬ್ಬರು. “ಅಗತ್ಯ ಬಿದ್ದಾಗಲೆಲ್ಲ ನಾನು ನನ್ನ ನೇಗಿಲನ್ನು ಹನೀಫ್‌ ಬಳಿ ತಂದು ಸರಿಪಡಿಸಿಕೊಂಡು ಹೋಗುತ್ತೇನೆ. ಸದ್ಯಕ್ಕೆ ನೇಗಿಲಿಗೆ ಆಗಿರುವ ಹಾನಿಯನ್ನು ನಿಖರವಾಗಿ ಸರಿಪಡಿಸಿಕೊಡಬಲ್ಲ ವ್ಯಕ್ತಿಯೆಂದರೆ ಅವರೊಬ್ಬರೇ. ಅವರು ತನ್ನ ತಂಧೆಯಂತೆಯೇ ಉತ್ತಮ ನೇಗಿಲು ತಯಾರಕ.”

ಹೊಸ ನೇಗಿಲು ಖರೀದಿಸುವ ಕುರಿತು ಅಲಿಯವರಿಗೂ ಸ್ಪಷ್ಟತೆಯಿಲ್ಲ. “ಈಗೀಗ ಎತ್ತುಗಳು ದುಬಾರಿ. ಕೃಷಿ ಕಾರ್ಮಿಕರು ಸುಲಭವಾಗಿ ಸಿಗುವುದಿಲ್ಲ, ಜೊತೆಗೆ ನೇಗಿಲಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ” ಎನ್ನುವ ಅವರು ಜನರು ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿಯೇ ಟ್ರ್ಯಾಕ್ಟರ್‌ ಹಾಗೂ ಟಿಲ್ಲರ್‌ ಮೊರೆ ಹೋಗಿರುವುದಾಗಿ ವಿವರಿಸುತ್ತಾರೆ.

PHOTO • Mahibul Hoque
PHOTO • Mahibul Hoque

ಎಡ: ತನ್ನ ಬಿದಿರಿನ ಮನೆಯ ಹೊರಗೆ ಕುಳಿತಿರುವ ಹನೀಫ್‌ ಅಲಿ. ಅವರ ಪಕ್ಕದಲ್ಲಿ ನೇಗಿಲಿನ ಬಿಡಿ ಭಾಗಗಳಿವೆ ಅದರಲ್ಲಿ ಒಂದು ತುಂಡು ಮರವೂ ಸೇರಿದ್ದು, ಅದನ್ನು ಅವರು ನಂತರ ಕೈ-ಕುಂಟೆಯನ್ನಾಗಿ ಪರಿವರ್ತಿಸುತ್ತಾರೆ. ಬಲ: ಹನೀಫ್‌ ಅಲಿ ಕುತ್ತಿ ಎಂದು ಕರೆಯಲ್ಪಡುವ ನೇಗಿಲಿನ ಹಿಡಿಯನ್ನು ತೋರಿಸುತ್ತಿದ್ದಾರೆ. ಉಳುಮೆ ಮಾಡುವ ವ್ಯಕ್ತಿ ಸಾಕಷ್ಟು ಉದ್ದವಿಲ್ಲದ ಸಂದರ್ಭದಲ್ಲಿ ಈ ಕುತ್ತಿಯನ್ನು ನೇಗಿಲಿಗೆ ಜೋಡಿಸಲಾಗುತ್ತದೆ

*****

ಹನೀಫ್‌ ಎರಡನೇ ತಲೆಮಾರಿನ ಕುಶಲಕರ್ಮಿ; ಅವರು ಈ ಕೆಲಸವನ್ನು ತನ್ನ ಬಾಲ್ಯದಲ್ಲೇ ಕಲಿತರು. "ನಾನು ಕೆಲವು ದಿನಗಳವರೆಗೆ ಮಾತ್ರ ಶಾಲೆಗೆ ಹೋಗಿದ್ದೆ. ನನ್ನ ತಾಯಿ ಅಥವಾ ನನ್ನ ತಂದೆಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ, ಮತ್ತು ನನಗೂ ಶಾಲೆಗೆ ಹೋಗುವುದು ಇಷ್ಟವಿರಲಿಲ್ಲ" ಎಂದು ಅವರು ಹೇಳುತ್ತಾರೆ.

ಹನೀಫ್‌ ಅಲಿ, ಹಿರಿಯ ಕುಶಲಕರ್ಮಿಯಾಗಿ ಸಾಕಷ್ಟು ಗೌರವ ಗಳಿಸಿದ್ದ ತಂದೆ ಹೋಲು ಶೇಖ್‌ ಅವರೊಂದಿಗೆ ಬಾಲ್ಯದಲ್ಲಿಯೇ ಸಹಾಯಕನಾಗಿ ದುಡಿಯತೊಡಗಿದರು. “ಬಾಬಾಯೇ ಶಾರಾ ಬೊಸ್ತಿರ್‌ ಜೊನ್ನೆ ನಂಗೋಲ್‌ ಬನಾಬಾರ್‌ ಬಾ ಟೀಕ್‌ ಕೊರ್ಬಾರ್‌ ಜೊನ್ನೆ ಆಂಗೋರ್‌ ಬರಿತ್‌ ಆಯಿತೋ ಶೋಬ್‌ ಖೇತಿಯೋಕ್‌ [ಅಪ್ಪ ಎಲ್ಲರಿಗೂ ನೇಗಿಲು ತಯಾರಿಸಿ ಕೊಡುತ್ತಿದ್ದರು. ಪ್ರತಿಯೊಬ್ಬರೂ ನೇಗಿಲು ಮಾಡಿಸಲು ಅಥವಾ ದುರಸ್ತಿ ಮಾಡಿಸಲು ನಮ್ಮ ಮನೆಗೆ ಬರುತ್ತಿದ್ದರು].”

ಅವರು ಸಹಾಯಕನಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ತಂದೆಯವರೇ ನೇಗಿಲಿಗೆ ಮಾರ್ಕಿಂಗ್‌ ಮಾಡುತ್ತಿದ್ದರು – ನೇಗಿಲು ಸರಿಯಾಗಿ ಉಳುಮೆ ಮಾಡುವುದಕ್ಕೆ ನಿಖರವಾಗಿ ಮಾರ್ಕಿಂಗ್‌ ಬಹಳ ಅಗತ್ಯ. “ಮರದ ಮೇಲೆ ಯಾವ ನಿಖರವಾದ ಸ್ಥಳದಲ್ಲಿ ರಂಧ್ರ ಕೊರೆಯಬೇಕು ಎನ್ನುವುದು ನಿಮಗೆ ತಿಳಿದಿರಬೇಕು. ತೊಲೆಯನ್ನು ಮುರಿಕಾತ್‌ ಎಂದು ಕರೆಯಲಾಗುವ ನೇಗಿಲಿನ ಮುಖ್ಯ ಭಾಗಕ್ಕೆ ಸರಿಯಾಗಿ ಜೋಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಹನೀಫ್‌ ತಾನು ಕೆಲಸ ಮಾಡುತ್ತಿದ್ದ ಮರದ ಮೇಲೆ ಕೈಯಾಡಿಸುತ್ತಾ ಹೇಳುತ್ತಾರೆ.

ನೇಗಿಲು ಓರೆಯಾಗಿದ್ದರೆ ಅದನ್ನು ಯಾರೂ ಖರೀದಿಸುವುದಿಲ್ಲ. ನೇಗಿಲು ಓರೆಯಾಗಿದ್ದರೆ ಅದರ ತುದಿಗೆ ಮಣ್ಣು ಸೇರಿಕೊಂಡು ಕೆಲಸವನ್ನು ನಿಧಾನವಾಗಿಸುತ್ತದೆ ಎಂದು ಅವರು ವಿವರಿಸುತ್ತಾರೆ.

“ಈಗ ನನಗೆ ಎಲ್ಲಿ ಗುರುತು ಮಾಡಬೇಕು ಎನ್ನುವುದು ತಿಳಿದಿದೆ, ಇನ್ನು ನೀವು ಆ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ” ಎಂದು ತನ್ನ ತಂದೆಗೆ ಭರವಸೆ ನೀಡಲು ಅವರಿಗೆ ಒಂಧು ವರ್ಷ ಸಮಯ ಬೇಖಾಯಿತು.

PHOTO • Mahibul Hoque
PHOTO • Mahibul Hoque

ಈ ಕುಶಲಕರ್ಮಿ ಹಲಸಿನ ಮರವನ್ನು ಹೆಚ್ಚಾಗಿ ತನ್ನ ಕೆಲಸದಲ್ಲಿ ಬಳಸುತ್ತಾರೆ. ಬಾಗಿಲು, ಕಿಟಿಕಿ ಹಾಗೂ ಮಂಚದ ತಯಾರಿಕೆಗೂ ಈ ಮರವನ್ನು ಬಳಸಲಾಗುತ್ತದೆ. ಈ ದುಬಾರಿ ಯುಗದಲ್ಲಿ ಹನೀಫ್‌ ಅವರಿಗೆ ತಾನು ಖರೀದಿಸಿದ ಮರದ ಯಾವ ಭಾಗವನ್ನೂ ವ್ಯರ್ಥ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ಪ್ರತಿ ಮರದ ತುಂಡಿನಿಂದ ಸಾಧ್ಯವಿರುವಷ್ಟು ಉಪಕರಣಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ. ಬಲ: ತಾನು ಗುರುತು ಮಾಡಿಕೊಳ್ಳಬೇಕಿರುವ ನಿಖರ ಸ್ಥಳಗಳನ್ನು ತೋರಿಸುತ್ತಿದ್ದಾರೆ

ಅವರು ನಂತರ ʼಹೋಲು ಮಿಸ್ತ್ರಿʼ ಎಂದು ಜನಪ್ರಿಯವಾಗಿ ಗುರುತಿಸಿಕೊಂಡಿದ್ದ ತನ್ನ ತಂದೆಯೊಂದಿಗೆ ಹೋಗತೊಡಗಿದರು. ಅವರ ಅಪ್ಪ ವ್ಯಾಪಾರಿ ಮತ್ತು ಹುಯಿಟರ್‌ (ವಿಶೇಷವಾಗಿ ನೇಗಿಲು ತಯಾರಿಕೆಯಲ್ಲಿ ಪಳಗಿರುವ ಬಡಗಿ) ಎರಡೂ ಆಗಿದ್ದರು. ಹನೀಫ್ ತನ್ನ ತಂದೆ ಹೆಗಲಿನ ಮೇಲೆ ನೇಗಿಲು ಮತ್ತು ಇತರ ಉಪಕರಣಗಳನ್ನು ಹೊತ್ತು ಸಾಗುತ್ತಿದ್ದ ರೀತಿಯನ್ನು ನೆನಪಿಸಿಕೊಂಡರು.‌

ಹನೀಫ್‌ ಅವರ ತಂದೆಗೆ ದಿನ ಕಳೆದಂತೆ ವಯಸ್ಸಾಗುತ್ತಿತ್ತು. ಅವರೊಂದಿಗೆ ಕೆಲಸ ಮಾಡಲಾರಂಭಿಸಿದ ನಂತರ ಆರು ಸದಸ್ಯರ ಕುಟುಂಬದಲ್ಲಿ ಒಬ್ಬರೇ ಗಂಡು ಮಗನಾಗಿದ್ದ ಹನೀಫ್‌ ಅವರ ಹೆಗಲ ಮನೆಯ ಜವಾಬ್ದಾರಿಗಳು ಬೀಳತೊಡಗಿದವು. ಮನೆಯಲ್ಲಿದ್ದ ಸಹೋದರಿಯರ ಮದುವೆ ಮಾಡಿಸಬೇಕಿತ್ತು ಎಂದು ಅವರು ಹೇಳುತ್ತಾರೆ. “ಜನರಿಗೆ ನಮ್ಮ ಮನೆಯ ಬಗ್ಗೆ ತಿಳಿದಿತ್ತು. ಅಪ್ಪ ಬರುವ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಸ್ಥಿತಿಯಲ್ಲಿ ಇಲ್ಲದಿದ್ದ ಕಾರಣ ನಾನೇ ನೇಗಿಲು ತಯಾರಿಸಲು ಆರಂಭಿಸಿದೆ.”

ಇದೆಲ್ಲ ಆಗಿ ಈಗ ನಾಲ್ಕು ದಶಕಗಳು ಕಳೆದಿವೆ. ಇಂದು ಹನೀಫ್‌ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ಅವರ ಒಂಟಿ ಕೋಣೆಯ ಮನೆಯಿರುವುದು ಸಂಖ್ಯೆ 3 ಬರುವಾಜಾರ್ ಗ್ರಾಮದಲ್ಲಿ. ಈ ಅವರಂತಹ ಅವರಂತಹ ಹತ್ತು ಹಲವು ಬಂಗಾಲಿ ಮುಸ್ಲಿಮರಿಗೆ ನೆಲೆ ಒದಗಿಸಿದೆ. ಈ ಪ್ರದೇಶವು ದಲ್ಗಾಂವ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅವರ ಒಂದು ಕೋಣೆಯ ಬಿದಿರಿನ ಹುಲ್ಲಿನ ಮನೆಯಲ್ಲಿ ಇರುವುದು ಸಣ್ಣ ಹಾಸಿಗೆ, ಕೆಲವು ಅಡುಗೆ ಪಾತ್ರೆಗಳು – ಅನ್ನ ಮಾಡಲು ಒಂದು ಪಾತ್ರೆ, ಇನ್ನೊಂದು ಪಾತ್ರೆ, ಒಂದೆರಡು ಸ್ಟೀಲ್ ತಟ್ಟೆಗಳು ಮತ್ತು ಒಂದು ಲೋಟ ಮಾತ್ರ.

“ಅಪ್ಪ ಮಾಡುತ್ತಿದ್ದ ಮತ್ತು ನಾನು ಈಗ ಮುಂದುವರೆಸಿರುವ ಈ ಕೆಲಸವು ಊರಿನ ಜನರಿಗೆ ಬಹಳ ಮುಖ್ಯವಾದದ್ದು” ಎಂದು ತನ್ನ ನೆರೆಹೊರೆಯ ರೈತರ ಕುರಿತು ಹೇಳುತ್ತಾರೆ. ಅವರು ಐದು ಕುಟುಂಬಗಳು ಹಂಚಿಕೊಂಡಿರುವ ಅಂಗಳದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಕುಟುಂಬಗಳೂ ಅವರಂತೆಯೇ ಒಂಟಿ ಕೋಣೆಯ ಮನೆಗಳಲ್ಲಿ ವಾಸಿಸುತ್ತಿವೆ. ಅಲ್ಲಿನ ಉಳಿದ ನಾಲ್ಕು ಮನೆಗಳು ಅವರ ಸಹೋದರಿ, ಕಿರಿಯ ಮಗ ಮತ್ತು ಸೋದರಳಿಯಂದಿರಿಗೆ ಸೇರಿವೆ. ಅವರ ಸಹೋದರಿ ಊರಿನ ಜನರ ಹೊಲಗಳಲ್ಲಿ ಕೆಲಸ ಮಾಡಿದರೆ; ಅಳಿಯಂದಿರು ದಕ್ಷಿಣದ ರಾಜ್ಯಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ.

ಹನೀಫ್‌ ಅವರಿಗೆ ಒಟ್ಟು ಒಂಬತ್ತು ಮಕ್ಕಳು, ಆದರೆ ಅವರಲ್ಲಿ ಯಾರೂ ಈ ಕರಕುಶಲ ಕಲೆಯಲ್ಲಿ ತೊಡಗಿಕೊಂಡಿಲ್ಲ. ಈ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ. “ಮುಂದಿನ ಪೀಳಿಗೆಗೆ ಸಾಂಪ್ರದಾಯಿಕ ನೇಗಿಲು ಹೇಗಿರುತ್ತದೆ ಎನ್ನುವುದನ್ನು ಗುರುತಿಸಲು ಸಹ ಸಾಧ್ಯವಾಗುವುದಿಲ್ಲ” ಎಂದು ಮುಕದ್ದಸ್ ಅಲಿಯವರ ಸೋದರಳಿಯ ಅಫಾಜ್ ಉದ್ದೀನ್ ಹೇಳುತ್ತಾರೆ. 48 ವರ್ಷದ ಈ ರೈತ 15 ವರ್ಷಗಳ ಹಿಂದೆ ನೇಗಿಲು ಬಳಸುವುದನ್ನು ನಿಲ್ಲಿಸಿದರು. ಅವರ ಬಳಿ ಆರು ಬಿಘಾ ನೀರಾವರಿ ಸೌಲಭ್ಯವಿಲ್ಲ ಭೂಮಿಯಿದೆ.

PHOTO • Mahibul Hoque
PHOTO • Mahibul Hoque

ದರ್ರಾಂಗ್ ಜಿಲ್ಲೆಯ ದಲ್ಗಾಂವ್ ವಿಧಾನಸಭಾ ಕ್ಷೇತ್ರದ ಸಂಖ್ಯೆ 3 ಬರುವಾಜಾರ್ ಗ್ರಾಮದಲ್ಲಿ ಹನೀಫ್ ಸಣ್ಣ ಗುಡಿಸಲೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ, ಅವರಂತಹ ಅನೇಕ ಬಂಗಾಳಿ ಮೂಲದ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದಾರೆ

*****

“ನಾನು ಸಕಲ್‌ ಹೊಡೆದುಕೊಂಡು ಬೀದಿಗಳ ಗುಂಟ ಸಾಗುವಾಗ ಎಲ್ಲಾದರೂ ಕವೆ ಹೊಂದಿರುವ ಹಲಸಿನ ಮರವನ್ನು ಕಂಡರೆ ಮರವನ್ನು ಕತ್ತರಿಸುವ ಸಮಯದಲ್ಲಿ ನನಗೆ ಹೇಳುವಂತೆ ವಿನಂತಿಸುತ್ತೇನೆ. ಕವೆ ಹೊಂದಿರುವವು ಮತ್ತು ಗನ ಮರಗಳಿಂದ ಒಳ್ಳೆಯ ನೇಗಿಲುಗಳನ್ನು ತಯಾರಿಸಬಹುದು” ಎಂದು ಹೇಳುತ್ತಾ, ಸ್ಥಳೀಯ ಜನರಿಗೆ ತನ್ನ ಪರಿಚಯ ಇರುವ ಕುರಿತಾಗಿಯೂ ತಿಳಿಸಿದರು.

ಬಾಗಿದ ಮರದ ತುಂಡುಗಳು ಲಭ್ಯವಿದ್ದಾಗ ಸ್ಥಳೀಯ ಮರಮಟ್ಟುಗಳ ವ್ಯಾಪಾರಿಗಳೂ ಅವರನ್ನು ಸಂಪರ್ಕಿಸುತ್ತಾರೆ. ಸಾಲ್ (ಶೋರಿಯಾ ರೊಬಸ್ಟಾ), ಶೀಶು (ಇಂಡಿಯನ್ ರೋಸ್ ವುಡ್), ಟಿಟಾಚಾಪ್ (ಮಿಚೆಲಿಯಾ ಚಂಪಾಕಾ), ಶಿರೀಶ್ (ಅಲ್ಬೆಜಿಯಾ ಲೆಬೆಕ್) ಅಥವಾ ಸ್ಥಳೀಯವಾಗಿ ಲಭ್ಯವಿರುವ ಇತರ ಮರಗಳ ತೊಲೆ ಮತ್ತು 3 x 2 ಇಂಚು ಅಗಲದ ಮರದ ಹಲಗೆಗಳು ಬೇಖಾಗುತ್ತವೆ.

"ಮರವು 25-30 ವರ್ಷಗಳಷ್ಟು ಹಳೆಯದಾಗಿರಬೇಕು, ಹಾಗಿದ್ದಾಗ ಮಾತ್ರ ನಂತರ ನೇಗಿಲು, ನೊಗಗಳು ಮತ್ತು ಕುಂಟೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಸಾಮಾನ್ಯವಾಗಿ ಬೆಳೆದ ಕೊಂಬೆಗಳು ಅಥವಾ ಮೂಲ ಕಾಂಡಗಳಿಂದ ತುಂಡುಗಳನ್ನು ಕತ್ತರಿಸಲಾಗುತ್ತದೆ” ಎಂದು ಅವರು ಎರಡು ಭಾಗಗಳಾಗಿ ಕತ್ತರಿಸಿದ ಕೊಂಬೆಯನ್ನು ಪರಿಗೆ ತೋರಿಸುತ್ತಾ ಹೇಳಿದರು.

ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪರಿ ಅವರ ಭೇಟಿಗೆಂದು ತರಳಿದ್ದಾಗ ಹನೀಫ್‌ ಮರವೊಂದನ್ನು ನೇಗಿಲಿನ ಮುಖ್ಯ ಭಾಗಕ್ಕಾಗಿ ಕತ್ತರಿಸುತ್ತಿದ್ದರು. “ಇದರಿಂದ ನೇಗಿಲಿನ ಮುಖ್ಯ ಭಾಗವಲ್ಲದೆ, ಎರಡು ಹಾತೆಂಗೀಲ್‌ [ಮರದ ಕೈಕುಂಟೆ] ಕೂಡಾ ತಯಾರಿಸಬಹುದು, ಆ ಮೂಲಕ ಈ ಮರದ ತುಂಡಿನಿಂದ ಹೆಚ್ಚುವರಿಯಾಗಿ 400-500 ರೂಪಾಯಿಗಳನ್ನು ನಾನು ಸಂಪಾದಿಸಬಹುದು” ಎನ್ನುತ್ತಾ ತಾನು 200 ರೂಪಾಯಿ ನೀಡಿ ಖರೀದಿಸಿ ತಂದಿದ್ದ ಬಾಗಿದ ಮರದ ತುಂಡನ್ನು ತೋರಿಸುತ್ತಾ ಹೇಳಿದರು.

ಪ್ರತಿಯೊಂದು ಮರದ ತುಂಡಿನಿಂದ ಸಾಧ್ಯವಾದಷ್ಟು ವಸ್ತುಗಳನ್ನು ತಯಾರಿಸುವುದು ನನಗೆ ಅತ್ಯಗತ್ಯ. ಇದಲ್ಲದೆ, ಮರದ ಆಕಾರವು ರೈತರ ಬೇಡಿಕೆಯನ್ನು ನಿಖರವಾಗಿ ಪೂರೈಸುವಂತಿರಬೇಕು ಎಂದು ಅವರು ಹೇಳುತ್ತಾರೆ. ನಾಲ್ಕು ದಶಕಗಳಿಂದ ಅವರು ಇದನ್ನು ಮಾಡುತ್ತಿದ್ದಾರೆ, ನೇಗಿಲಿನ ಅತ್ಯಂತ ಜನಪ್ರಿಯ ಗಾತ್ರವೆಂದರೆ 18-ಇಂಚಿನ ಅಲಗು (ನೇಗಿಲನ್ನು ಸ್ಥಿರಗೊಳಿಸಲು) ಮತ್ತು 33-ಇಂಚಿನ ಮೈಎನ್ನುವುದು ಅವರ ಅನುಭವದ ಮಾತು.

PHOTO • Mahibul Hoque
PHOTO • Mahibul Hoque

ಎಡ: ಬಾಗಿದ ಕೊಂಬೆಗಳನ್ನು ಹುಡುಕಿಕೊಂಡು ಹನೀಫ್ ಹತ್ತಿರದ ಹಳ್ಳಿಗಳನ್ನು ಸುತ್ತುತ್ತಾರೆ. ಕೆಲವೊಮ್ಮೆ, ಗ್ರಾಮಸ್ಥರು ಮತ್ತು ಮರದ ವ್ಯಾಪಾರಿಗಳು ಬಾಗಿದ ಕೊಂಬೆಗಳಿರುವ ಮರಗಳನ್ನು ಕತ್ತರಿಸಿದ ಸಂಸದರ್ಭದಲ್ಲಿ ಅವರಿಗೆ ಮಾಹಿತಿ ನೀಡುತ್ತಾರೆ. ಅವನು ನೇಗಿಲಿನ ಮುಖ್ಯ ಭಾಗವನ್ನು ತಯಾರಿಸಲು ಬಳಸುವ ಮರದ ದಿಮ್ಮಿಯನ್ನು ತೋರಿಸುತ್ತಿದ್ದಾರೆ. ಬಲ: ತನ್ನ ಅವರು ಉಪಕರಣಗಳನ್ನು ಮನೆಯೊಳಗಿನ ಎತ್ತರದ ಮರದ ವೇದಿಕೆಯ ಮೇಲೆ ಸಂಗ್ರಹಿಸುತ್ತಾರೆ

PHOTO • Mahibul Hoque
PHOTO • Mahibul Hoque

ಎಡ: ನೇಗಿಲು ಮತ್ತು ಇತರ ಕೃಷಿ ಉಪಕರಣಗಳು ಕರಾರುವಕ್ಕಾದ ಅಳತೆಯ ಸಾಧನಗಳಾಗಿವೆ. ನೇಗಿಲಿನ ಮೈಗೆ ತೊಲೆಯನ್ನು ಹೊಂದಿಸಲು ರಂಧ್ರವನ್ನು ಮಾಡಬೇಕಿರುವ ಬಾಗಿರುವ ಭಾಗವನ್ನು ಹನೀಫ್ ತೋರಿಸುತ್ತಿದ್ದಾರೆ. ರಂಧ್ರವು ನಿಖರವಾಗಿಲ್ಲದೆ ಹೋದರೆ ನೇಗಿಲು ಹೆಚ್ಚು ಓರೆಯಾಗುತ್ತದೆ. ಬಲ: ಅವರು ತನ್ನ 20 ವರ್ಷದ ಕೈ ಬಾಚಿ ಮತ್ತು 30 ವರ್ಷದ ಕೊಡಲಿಯನ್ನು ಬಳಸಿ ಮರದ ದಿಮ್ಮಿಯ ಮೇಲ್ಭಾಗ ಮತ್ತು ಬದಿಗಳನ್ನು ಸೀಳುತ್ತಿದ್ದಾರೆ

ಸರಿಯಾದ ಮರವನ್ನುಹುಡುಕಿದ ನಂತರ ಅವರು ಬೆಳಗಿನ ಸೂರ್ಯ ಹುಟ್ಟುವ ಮೊದಲೇ ಎದ್ದು ತನ್ನ ಕೆಲಸಕ್ಕೆ ಬೇಕಾಗುವ ಸಲಕರಣೆಗಳನ್ನು ಒಟ್ಟುಗೂಡಿಸಿ ಕೈಗೆಟುಕುವಂತೆ ಇರಿಸುತ್ತಾರೆ. ಅವರ ಮನೆಯಲ್ಲಿನ ಮರದ ಜಗುಲಿಯ ಮೇಲೆ ಕೆಲವು ಉಳಿಗಳು, ಒಂದು ಕೈ-ಬಾಚಿ, ಒಂದು ಜೋಡಿ ಗರಗಸ, ಒಂದು ಕೊಡಲಿ, ಒಂದು ಮರವನ್ನು ನಯಗೊಳಿಸುವ ಸಾಧನ ಮತ್ತು ಒಂದಷ್ಟು ತುಕ್ಕು ಹಿಡಿದ ಕಂಬಿಗಳನ್ನು ಜೋಡಿಸಿಡಲಾಗಿತ್ತು.

ಮೊದಲಿಗೆ ಅವರು ಗರಗಸದ ಹಲ್ಲಿಲ್ಲದ ಬದಿಯನ್ನು ಬಳಸಿ ಮರದ ಮೇಲೆ ಕತ್ತರಿಸಬೇಕಾದ ಅಳತೆಗೆ ಗೆರೆಗಳನ್ನು ಎಳೆಯುತ್ತಾರೆ. ಅವರು ಅಂತರಗಳನ್ನು ಕೈ ಬಳಸಿ ಅಳೆಯುತ್ತಾರೆ. ಮಾರ್ಕಿಂಗ್‌ ಕೆಲಸ ಮುಗಿದ ನಂತರ ಅವರು ತನ್ನ 30 ವರ್ಷದಷ್ಟು ಹಳೆಯ ಗರಗಸವನ್ನು ಕೈಗೆತ್ತಿಕೊಳ್ಳುತ್ತಾರೆ. “ನಂತರ ಮರದ ಮೇಲ್ಮೈಯನ್ನು ಸಮತಟ್ಟು ಮಾಡಲು ಟೆಶ್ಶಾ [ಕೈಬಾಚಿ] ಬಳಸುತ್ತೇನೆ” ಎಂದು ಈ ನಿಪುಣ ಕುಶಲಕರ್ಮಿ ಹೇಳುತ್ತಾರೆ. ನಂತರ ನಾಂಗೊಲ್‌ ಎನ್ನುವ ಮಣ್ಣನ್ನು ಎರಡು ಭಾಗವಾಗಿ ಸುಲಭದಲ್ಲಿ ವಿಭಜಿಸುವ ಭಾಗವನ್ನು ಕೆತ್ತುತ್ತಾರೆ.

“ಬದಿ ಭಾಗದ ಅಲಗಿನ ಆರಂಭ ಬಿಂದುವು ಸುಮಾರು ಆರು ಇಂಚುಗಳಷ್ಟಿರುತ್ತದೆ, ಅದು ಕ್ರಮೇಣ ಅಗಲದಲ್ಲಿ ಕೊನೆಯಲ್ಲಿ 1.5 ರಿಂದ 2 ಇಂಚುಗಳಿಗೆ ಇಳಿಯುತ್ತದೆ" ಎಂದು ಅವರು ಹೇಳುತ್ತಾರೆ. ಅಲಗಿನ ದಪ್ಪ 8 ಅಥವಾ 9 ಇಂಚುಗಳಷ್ಟಿರಬೇಕು. ಇದನ್ನು ಬಾಗಿಸಿ ನೇಗಿಲಿನ ಮುಖ್ಯ ಭಾಗಕ್ಕೆ ಜೋಡಿಸಿ ಮೊಳೆ ಹೊಡೆದು ಕೊನೆಯಲ್ಲಿ ಎರಡು ಇಂಚಿಗೆ ಕುಗ್ಗಿಸಬೇಕು.

ಅಲಗನ್ನು ಫಾಲ್‌ ಅಥವಾ ಪಾಲ್‌ ಎಂದು ಕರೆಯಲಾಗುತ್ತದೆ. ಇದನ್ನು ಸುಮಾರು 9-12 ಇಂಚು ಉದ್ದ ಮತ್ತು 1.5-2 ಇಂಚು ಅಗಲವಿರುವ ಕಬ್ಬಿಣದ ಪಟ್ಟಿಯಿಂದ ತಯಾರಿಸಲಾಗುತ್ತದೆ, ಎರಡೂ ತುದಿಗಳಲ್ಲಿ ಚೂಪಾದ ಅಂಚುಗಳಿರುತ್ತವೆ. “ಇದರ ಎರಡೂ ಅಂಚುಗಳು ಹರಿತವಾಗಿರುತ್ತವೆ. ಆಗ ರೈತ ಒಂದು ಬದಿ ಮೊಂಡಾದರೆ ಇನ್ನೊಂದು ಬದಿಯನ್ನು ಬಳಸಬಹುದು.” ಹನೀಫ್ ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಬೆಚಿಮರಿ ಮಾರುಕಟ್ಟೆಯಲ್ಲಿ ಸ್ಥಳೀಯ ಕಮ್ಮಾರರಿಂದ ಲೋಹದ ಕೆಲಸವನ್ನು ಮಾಡಿಸುತ್ತಾರೆ.

ಮರದ ತುಂಡನ್ನು ಒಂದು ಆಕಾರಕ್ಕೆ ತರಲು ಮತ್ತು ಅದರ ಮೇಲ್ಮೈಯನ್ನು ನಯಗೊಳಿಸಲು ಕನಿಷ್ಠ ಐದು ಗಂಟೆಗಳ ಕಾಲ ಕೊಡಲಿ ಮತ್ತು ಕೈಬಾಚಿಯನ್ನು ಬಳಸಬೇಕಾಗುತ್ತದೆ. ನಂತರ ಅದನ್ನು ಕೀಸು ಉಳಿ ಬಳಸಿ ಮತ್ತೆ ನಯಗೊಳಿಸಲಾಗುತ್ತದೆ.

ನೇಗಿಲಿನ ಮುಖ್ಯ ಭಾಗ (ಮೈ) ತಯರಾದ ನಂತರ ಹುಯಿಟರ್‌ ನೇಗಿಲಿಗೆ ತೊಲೆಯನ್ನು ಕೂರಿಸಬೇಕಾದ ಜಾಗವನ್ನು ಹುಡುಕಿ ರಂಧ್ರ ಕೊರೆಯಲು ನಿಖರವಾದ ಜಾಗವನ್ನು ನಿರ್ಧರಿಸುತ್ತಾರೆ. "ರಂಧ್ರವು ಈಶ್ [ಮರದ ಬೀಮ್] ಗಾತ್ರಕ್ಕೆ ಸಾಧ್ಯವಾದಷ್ಟು ಹತ್ತಿರದಲ್ಲಿರಬೇಕು, ಏಕೆಂದರೆ ಉಳುಮೆ ಮಾಡುವಾಗ ಅದು ಸಡಿಲವಾಗಬಾರದು. ಇದು ಸಾಮಾನ್ಯವಾಗಿ 1.5 ಅಥವಾ 2 ಇಂಚುಗಳಷ್ಟು ಅಗಲವಿರುತ್ತದೆ.”

PHOTO • Mahibul Hoque
PHOTO • Mahibul Hoque

ಎಡ: ಹನೀಫ್ ಆರು ತಿಂಗಳ ಮರದ ದಿಮ್ಮಿಯ ಒರಟಾದ ಹೊರಭಾಗವನ್ನು ಕೌಶಲದಿಂದ ಕತ್ತರಿಸುವುದನ್ನು ಗಮನಿಸಬಹುದು. ನೇಗಿಲಿನ ಮುಖ್ಯ ಭಾಗವನ್ನು ರೂಪಿಸಲು ಮರದ ದಿಮ್ಮಿಯ ಅಸಮ ಅಂಚುಗಳನ್ನು ಕತ್ತರಿಸಲು ಮತ್ತು ನಯಗೊಳಿಸುವ ಈ ಪ್ರಕ್ರಿಯೆಗೆ ಕನಿಷ್ಠ ಒಂದು ದಿನ ಬೇಕಾಗುತ್ತದೆ. ಬಲ: ಮಾಸ್ಟರ್ ಕುಶಲಕರ್ಮಿ ತನ್ನ ನಿವಾಸದ ಹೊರಗೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು

PHOTO • Mahibul Hoque
PHOTO • Mahibul Hoque

ಎಡ: ಹನೀಫ್ ಅವರ ಸೈಕಲ್ ನೇಗಿಲು ಮತ್ತು ಅದರ ಹಿಡಿಕೆಯೊಂದಿಗೆ ಸಜ್ಜುಗೊಂಡಿದೆ. ಈ ಸರಕುಗಳೊಂದಿಗೆ ನೊಗ ಮತ್ತು ಕೈ ಕುಂಟೆಗಳನ್ನು ಸಹ ಒಯ್ಯುತ್ತಾರೆ, ಮಾರುಕಟ್ಟೆಗೆ ಬರಲು ಐದರಿಂದ ಆರು ಕಿಲೋಮೀಟರ್‌ಗಳ ನಡಿಗೆಯ ಅಗತ್ಯವಿರುತ್ತದೆ. ಬಲ: ಸೋಮವಾರದಂದು ನಡೆಯುವ ವಾರದ ಹಾಟ್‌ (ಸಂತೆ) ಯ ದೃಶ್ಯ

ನೇಗಿಲಿನ ಎತ್ತರವನ್ನು ಮಾರ್ಪಡಿಸಲು, ಹನೀಫ್  ನೇಗಿಲಿನ ತೊಲೆಯ ಮೇಲಿನ ತುದಿಯಲ್ಲಿ ಐದರಿಂದ ಆರು ಕುಣಿಕೆಗಳನ್ನು ರಚಿಸುತ್ತಾರೆ. ಈ ಕುಣಿಕೆಗಳು ರೈತರಿಗೆ ತಮ್ಮ ಅಪೇಕ್ಷಿತ ಮಣ್ಣಿನ ಉಳುಮೆಯ ಆಳಕ್ಕೆ ಅನುಗುಣವಾಗಿ ನೇಗಿಲನ್ನು ಹೊಂದಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಮರವನ್ನು ಕತ್ತರಿಸಲು ಗರಗಸದ ಯಂತ್ರದ ಬಳಕೆ ದುಬಾರಿ ಮತ್ತು ಶ್ರಮದಾಯಕ ಎಂದು ಹನೀಫ್ ಹೇಳುತ್ತಾರೆ. "ನಾನು 200 ರೂಪಾಯಿಗಳಿಗೆ ದಿಮ್ಮಿಯನ್ನು ಖರೀದಿಸಿದರೆ ಅದನ್ನು ಕತ್ತರಿಸುವ ವ್ಯಕ್ತಿಗೆ 150 ರೂಪಾಯಿಗಳನ್ನು ಹೆಚ್ಚುವರಿಯಾಗಿ ಕೊಡಬೇಕು." ನೇಗಿಲನ್ನು ಪೂರ್ಣಗೊಳಿಸುವ ಪ್ರಕ್ರಿಯೆಗೆ ಸರಿಸುಮಾರು ಎರಡು ದಿನಗಳು ಬೇಕಾಗುತ್ತವೆ ಮತ್ತು ಹೆಚ್ಚೆಂದರೆ, ಅವರು ಒಂದು ನೇಗಿಲನ್ನು 1,200 ರೂಪಾಯಿಗಳಿಗೆ ಮಾರಾಟ ಮಾಡಬಹುದು.

ಕೆಲವು ವ್ಯಕ್ತಿಗಳು ಖರೀದಿಗಾಗಿ ನೇರವಾಗಿ ಅವರಲ್ಲಿಗೆ ಬರುತ್ತಾರೆ; ಆದರೂ, ಹನೀಫ್ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ದರ್ರಾಂಗ್ ಜಿಲ್ಲೆಯಲ್ಲಿನ ಎರಡು ವಾರದ ಸಂತೆಗಳಿಗೆ - ಲಾಲ್‌ಪೂಲ್ ಬಜಾರ್ ಮತ್ತು ಬೆಚಿಮರಿ ಬಜಾರ್‌ - ಭೇಟಿ ನೀಡುತ್ತಾರೆ. ಅವರು ಹೇಳುತ್ತಾರೆ, "ಒಬ್ಬ ರೈತ ನೇಗಿಲು ಮತ್ತು ಅದರ ಜೊತೆಗಿನ ಉಪಕರಣಗಳಿಗೆ ಸರಿಸುಮಾರು 3,500ರಿಂದ 3,700 ರೂಪಾಯಿಗಳನ್ನು ವ್ಯಯಿಸಬೇಕು" ಎನ್ನುತ್ತಾ ದುಬಾರಿ ವೆಚ್ಚಗಳಿಂದಾಗಿ ತನ್ನ ಗ್ರಾಹಕರು ಇತರ ರೈತರಿಂದ ಕೃಷಿ ಉಪಕರಣಗಳನ್ನು ಬಾಡಿಗೆ ಪಡೆಯುತ್ತಿರುವುದರ ಕುರಿತಾಗಿ ವಿವರಿಸುತ್ತಾರೆ. “ಟ್ರ್ಯಾಕ್ಟರುಗಳು ಈಗ ಸಾಂಪ್ರದಾಯಿಕ ಉಳುಮೆಯ ರೀತಿಯನ್ನು ಬದಲಾಯಿಸಿವೆ.”

ಹಾಗೆಂದು ಹನೀಫ್‌ ತನ್ನ ಕೆಲಸವನ್ನು ನಿಲ್ಲಿಸಿಲ್ಲ. ಅವರು ತನ್ನ ಸೈಕಲ್‌ ಮೇಲೆ ನೇಗಿಲು ಮತ್ತು ಖುಥಿ (ನೇಗಿಲಿನ ಹಿಡಿ) ಹೇರಿಕೊಂಡು ಮರದಿನ ಮತ್ತೆ ಹೊರಡುತ್ತಾರೆ. “ಟ್ರ್ಯಾಕ್ಟರ್‌ ತನ್ನ ಮಣ್ಣು ನಾಶಗೊಳಿಸುವ ಕೆಲಸವನ್ನು ಮುಗಿಸಿದ ದಿನ ಜನರು ಮತ್ತೆ ನೇಗಿಲು ಹುಡುಕಲು ಆರಂಭಿಸುತ್ತಾರೆ” ಎಂದು ಅವರು ಹೇಳಿದರು.

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ( ಎಂಎಂಎಫ್ ) ಫೆಲೋಶಿಪ್ ಬೆಂಬಲ ದೊರಕಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Mahibul Hoque

మహిబుల్ హక్ అస్సామ్‌కు చెందిన మల్టీ మీడియా జర్నలిస్టు, పరిశోధకుడు. ఈయన 2023 PARI-MMF ఫెలో

Other stories by Mahibul Hoque
Editor : Priti David

ప్రీతి డేవిడ్ పీపుల్స్ ఆర్కైవ్ ఆఫ్ రూరల్ ఇండియాలో జర్నలిస్ట్, PARI ఎడ్యుకేషన్ సంపాదకురాలు. ఆమె గ్రామీణ సమస్యలను తరగతి గదిలోకీ, పాఠ్యాంశాల్లోకీ తీసుకురావడానికి అధ్యాపకులతోనూ; మన కాలపు సమస్యలను డాక్యుమెంట్ చేయడానికి యువతతోనూ కలిసి పనిచేస్తున్నారు.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru