ಕಳೆದ ನಲವತ್ತು ವರುಷಗಳಿಂದೀಚೆಗೆ ಕಿಲಾರಿ ನಾಗೇಶ್ವರ ರಾವ್, ತಮ್ಮ ಜಮೀನಿನಲ್ಲಿ ಹೊಗೆಸೊಪ್ಪು ಬೆಳೆಯುವುದನ್ನು 2017 ರಲ್ಲಿ ಮೊದಲ ಬಾರಿಗೆ ಕೈಬಿಟ್ಟರು. ಈ ಮೂರು ವರುಷದಲ್ಲಿ ಅವರಿಗೆ ರೂ. 15 ಲಕ್ಷ ಲುಕ್ಸಾನಾಗಿದೆ, ಇನ್ನು ಇದು ಸಾಕು ಎಂದು ನಿಲ್ಲಿಸಿಬಿಟ್ಟರು.
ಹೊಗೆಸೊಪ್ಪು ಬೆಳೆಯುವ ಖರ್ಚು ಹೆಚ್ಚುತ್ತಲೇ ಇದ್ದರೂ, ಅದಕ್ಕೆ ಸಿಗುತ್ತಿರುವ ಬೆಲೆ ಯಾತಕ್ಕೂ ಸಾಲದು. ನಾಗೇಶ್ವರ ರಾವ್, 60 ವರ್ಷ, ಅಂದಾಜಿಸುವಂತೆ ಪ್ರಕಾಶಂ ಜಿಲ್ಲೆಯ ಪೊಡಿಲಿ ಮಂಡಲದ ಅವರ ಮುಗಾ ಚಿಂತಾಲ ಹಳ್ಳಿಯ 2400 ಎಕರೆ ಕೃಷಿಭೂಮಿಯ ಅರ್ಧದಷ್ಟು ಈಗ ಪಾಳು ಬಿದ್ದಿದೆ. ರೈತರು ಯಾರೂ ಹೊಗೆಸೊಪ್ಪು ಬೆಳೆಯುತ್ತಿಲ್ಲ, ಏಕೆಂದರೆ “ಅದರಿಂದ ಬರೀ ಲುಕ್ಸಾನು ಮಾತ್ರ” ಎನ್ನುತ್ತಾರೆ.
ಆಂಧ್ರ ಪ್ರದೇಶದಾದ್ಯಂತ ಹೊಗೆಸೊಪ್ಪು ಬೆಳೆಯುವ ಪ್ರದೇಶವು 2015-16 ರಲ್ಲಿ 3.3 ಲಕ್ಷ ಎಕರೆ ಇದ್ದದ್ದು 2016-17 ರಲ್ಲಿ 2.24 ಲಕ್ಷ ಕರೆಗೆ ಇಳಿದಿದೆ. ಈ ಅವಧಿಯಲ್ಲಿ ರಾಜ್ಯದ ಹೊಗೆಸೊಪ್ಪಿನ ಉತ್ಪತ್ತಿಯು, ತಂಬಾಕು ಮಂಡಳಿಯ ಅಧಿಕಾರಿಗಳ ಪ್ರಕಾರ 167 ಮಿಲಿಯನ್ ಕಿಗ್ರಾಂನಿಂದ 110 ಮಿಲಿಯನ್ ಕಿಗ್ರಾಂಗೆ ಇಳಿದಿದೆ. ಮಂಡಳಿಯ ವಾರ್ಷಿಕ ಗುರಿ 130 ಮಿಲಿಯನ್ ಕಿಗ್ರಾಂಗಿಂತ ಇದು ತುಂಬಾ ಕಡಿಮೆ. ಗುಂಟೂರಿನಲ್ಲಿ ಕೇಂದ್ರಕಛೇರಿ ಹೊಂದಿರುವ ಮಂಡಳಿಯನ್ನು 1970 ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯವು ಸ್ಥಾಪಿಸಿತ್ತು; ರೈತರು ಮತ್ತು ಹೊಗೆಸೊಪ್ಪು ಕಂಪನಿಗಳ ನಡುವೆ ಮಾರುಕಟ್ಟೆಯ ಮಧ್ಯವರ್ತಿಯಂತೆ ಕೆಲಸ ಮಾಡುವ ಪಾತ್ರವನ್ನೂ ಇದು ಮಾಡುತ್ತದೆ.
ರೈತರು ಹೊಗೆಸೊಪ್ಪನ್ನು ಕೈಬಿಡುವಂತೆ ಮಾಡುವಲ್ಲಿ ಎರಡು ಕಾರಣಗಳು ಸೇರಿಕೊಂಡಿವೆ. ಅದರಲ್ಲಿ ಮೊದಲನೆಯದು ಮೊದಲೇ ಮಳೆಯಾಧಾರಿತ ಬೇಸಾಯದ ಒಣಭೂಮಿಯಲ್ಲಿ ಇತ್ತೀಚೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದು. ಪ್ರಕಾಶಂ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆ 808 ಮಿಮೀ ಇದ್ದದ್ದು, ಜೂನ್ 2017 ರಿಂದ ಆಗಿರುವ ನೈಜ ಮಳೆಯ ಪ್ರಮಾಣ ಸುಮಾರು 560 ಮಿಮೀಗೆ (ರಾಜ್ಯ ಸರಕಾರದ ಮಾಹಿತಿ) ಇಳಿದಿದೆ. ಇಲ್ಲಿ ಈಗ ಸಾಮಾನ್ಯವಾಗಿ ಮಳೆಯಿಲ್ಲದೆ ಬರವಾಗಿರುವ ಅನಂತಪುರದಲ್ಲಿ ಬೀಳುವ 580 ಮಿಮೀಗಿಂತಲೂ ಕಡಿಮೆ ಮತ್ತು ಇಡೀ ಆಂದ್ರಪ್ರದೇಶದ ಸರಾಸರಿ ಮಳೆ 880 ಮಿಮೀಗಿಂತಲೂ ಅತಿ ಕಡಿಮೆ ಮಳೆಯಾಗುತ್ತಿದೆ.
ಬಹುಕಾಲದ ಹಿಂದೆ – ಒಂದು ಶತಮಾನಕ್ಕಿಂತಲೂ ಹಿಂದೆ, ಮುಂಚೂಣಿಯ ರೈತರು –ಬೇರೆ ಬೆಳೆಗಳಿಗೆ ಹೋಲಿಸಿದರೆ ಕಡಿಮೆ ನೀರು ಸಾಕಾಗುವುದರಿಂದ, ಪ್ರಕಾಶಂನಲ್ಲಿ ತಂಬಾಕು ಚೆನ್ನಾಗಿ ಬೆಳೆಯಬಲ್ಲ ಪ್ರಮುಖ ಬೆಳೆ - ಎಂದು ಅಂದುಕೊಂಡಿದ್ದರು. ಆದರೀಗ ಅತಿಯಾದ ಬಳಕೆಯಿಂದ ಕುಗ್ಗಿದ್ದ ಅಂತರಜಲದ ಮಟ್ಟ, ಕೊರೆಯಾಗಿರುವ ಈಗಿನ ಮಳೆಯಿಂದ ಇನ್ನೂ ಪಾತಾಳಕ್ಕೆ ಕುಸಿದಿದೆ
2017ರ ಮೇನಲ್ಲಿ, ಹೊಗೆಸೊಪ್ಪು ಬಿತ್ತನೆ ಮಾಡುವ ಆಗಸ್ಟಗಿಂತ ಕೆಲವು ತಿಂಗಳು ಮೊದಲು, ಪ್ರಕಾಶಂ ಜಿಲ್ಲೆಯ ಅಂತರಜಲ ಮಟ್ಟ 23 ಮೀ ಆಳಕ್ಕಿಳಿದಿತ್ತು, ಆದರೆ ಆಂಧ್ರಪ್ರದೇಶದ ಉಳಿದ ಭಾಗದಲ್ಲಿ 14.73 ಮೀ ಆಳದಲ್ಲಿತ್ತು (ಅಧಿಕೃತ ಅಂಕಿಅಂಶಗಳ ಪ್ರಕಾರ). ಆಂಧ್ರಪ್ರದೇಶ ಜಲ, ನೆಲ ಮತ್ತು ಮರಗಳ ಕಾಯಿದೆ, 2002 ರ ಅನುಸಾರ ಅಂತರಜಲದ ಆಳಮಟ್ಟ 20 ಮೀಗಿಂತ ಹೆಚ್ಚಿದ್ದರೆ ಅಲ್ಲಿ ಬೋರವೆಲ್ ಕೊರೆಯುವಂತಿಲ್ಲ. ಆದ್ದರಿಂದ ಕಳೆದ ವರ್ಷ, ಅದನ್ನು ಪರೀಕ್ಷಿಸುವ ಮತ್ತು ಅಂತರಜಲವನ್ನು ಉಳಿಸುವ ಉದ್ದೇಶದಿಂದ, 1093 ಹಳ್ಳಗಳಿರುವ ಈ ಜಿಲ್ಲೆಯ 126 ಹಳ್ಳಿಗಳಲ್ಲಿ ಬೋರವೆಲ್ ಕೊರೆಯಿಸುವುದನ್ನು ನಿಷೇಧಿಸಲಾಗಿತ್ತು.
“ನಾನು 11 ಬೋರವೆಲ್ಲುಗಳನ್ನು ಹಾಕಿಸಿದೆ (2011 ರಿಂದ 2014 ರವರೆಗೆ), ಒಂದಕ್ಕೆ (ಸುಮಾರು) 2 ಲಕ್ಷ ತಗಲುತ್ತದೆ, ಆದರೆ ಈಗ ಅವುಗಳಲ್ಲಿ 10 ಕೆಲಸ ಮಾಡುತ್ತಿಲ್ಲ,” ಎನ್ನುತ್ತಾರೆ ಮುಗ ಚಿಂತಾಲದ ತಮ್ಮ 40 ಎಕರೆ ಜಮೀನಿನಲ್ಲಿ ಹೊಗೆಸೊಪ್ಪು, ಜೋಳ ಮತ್ತು ಸಜ್ಜೆ ಬೆಳೆಯುವ ಯೆನುಗಂಟಿ ಸುಬ್ಬರಾಯರು – ಅದರಲ್ಲಿ 20 ಸ್ವಂತದ್ದು, ಇನ್ನು 20 ಗುತ್ತಿಗೆಯದ್ದು. ಅನೇಕ ವರ್ಷಗಳ ಕಾಲ ಈ ಬೆಳೆಗಳಿಂದಾದ ನಷ್ಟಕ್ಕೆ ಹೋದ ವರ್ಷ, ಅದೂ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದರಿಂದ ಎಕರೆಗೆ ರೂ. 15 ಲಕ್ಷದ ಒಳ್ಳೆಯ ಬೆಲೆ ಸಿಕ್ಕಿ, ಅದರಲ್ಲಿ ಒಂದು ಎಕರೆ ಮಾರಿದ ಮೇಲೂ ಇನ್ನೂ ರೂ. 23 ಲಕ್ಷ ಸಾಲ ಉಳಿದುಕೊಂಡಿದೆ.
2009 ರಲ್ಲಿ ಗುಂಡಲಕ್ಕಮ್ಮ ಜಲಾಶಯದ ಕಾಮಗಾರಿ ಮುಗಿದು ನೀರಾವರಿ ಆರಂಭವಾಯಿತು, ಸಾಲದಲ್ಲಿ ಮುಳುಗಿದ್ದ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾರಂಭಿಸಿದರು, ತಂಬಾಕು ಬೆಳೆಯುವ ಪ್ರದೇಶ ಮತ್ತಷ್ಟು ಕುಗ್ಗಿತು. ಅನೇಕ ವರ್ಷಗಳ ಕಾಲ ನಾಗೇಶ್ವರರಾಯರೂ ಸಹ ಕಾಳುಗಳು, ಬಟಾಣಿ, ಧಾನ್ಯಗಳೊಂದಿಗೆ ಆಗಾಗ ಪ್ರಯೋಗ ಮಾಡಿ ನೋಡಿದರು – ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಿಂದಾಗಿ ಅದೂ ಕೂಡ ನಷ್ಟದಲ್ಲೇ ಕೊನೆಯಾಯಿತು. ಕೃಷ್ಣಾ ನದಿಗೆ ಜಲಾಶಯ ನಿರ್ಮಿಸುವ ವೆಲಿಗೊಂಡ ಯೋಜನೆ 2005 ರಲ್ಲಿ ಪ್ರಾರಂಭವಾದದ್ದು ಇನ್ನೂ ಕುಂಟುತ್ತಲೇ ಸಾಗಿದೆ.
ಬೇಸಾಯಗಾರರು ಹೊಗೆಸೊಪ್ಪಿನ ಬೇಸಾಯವನ್ನು ಕೈಬಿಡಲು ಇನ್ನೊಂದು ಕಾರಣ ತಂಬಾಕು ಕಂಪನಿಗಳು ನೀಡುವ ಕಡಿಮೆ ಬೆಲೆ. ವೇಮ ಕೊಂಡಯ್ಯ, 48 ವರುಷ ಪ್ರಾಯದ, ಮುಗ ಚಿಂತಾಲದಲ್ಲಿರುವ ತನ್ನ ಐದು ಎಕರೆಯಲ್ಲಿ ಮೂರು ಎಕರೆಗೆ ಹೊಗೆಸೊಪ್ಪು ಹಾಕಿರುವ ದಲಿತ ಬೇಸಾಯಗಾರ ಹೀಗೆ ವಿವರಿಸುತ್ತಾರೆ, “ಒಂದು ಕಿಗ್ರಾಂ ಹೊಗೆಸೊಪ್ಪು ಬೆಳೆಯಲು 120 ರೂಪಾಯಿ ಖರ್ಚಾಗುತ್ತದೆ, ಆದರೆ ಸಿಗರೇಟು ಕಂಪನಿಯವರು ನಮಗೆ ಕೇವಲ 90-100 ರೂಪಾಯಿ ಕೊಡುತ್ತಾರೆ. ಕಂಪನಿಗಳು ತಂಬಾಕು ಮಂಡಳಿಯಲ್ಲಿ ಲಾಬಿ ಮಾಡಿ ಕಡಿಮೆ ಬೆಲೆ ನಿಗದಿಯಾಗುವಂತೆ ಮಾಡುತ್ತಾರೆ.”
ಅಖಿಲ ಭಾರತ ಕಿಸಾನ್ ಸಭಾದ ವಿಜಯವಾಡ ಮೂಲದ ನಾಯಕರಾದ ನಾಗಬೊಯ್ನಾ ರಂಗರಾವ್ ಹೇಳುವುದೇನೆಂದರೆ “ಸಿಗರೇಟು ಕಂಪನಿಗಳು ಒಂದು ಕಿಗ್ರಾಂ ಹೊಗೆಸೊಪ್ಪಿನಿಂದ 1200- 1400 ಸಿಗರೇಟು ತಯಾರಿಸುತ್ತಾರೆ. ಅವರು ಒಂದು ಕಿಗ್ರಾಂ ಹೊಗೆಸೊಪ್ಪನ್ನು ರೂ. 250 ಕ್ಕಿಂತ ಕಡಿಮೆ ಬೆಲೆಗೆ ಕೊಂಡು, ರೂ. 20,000 ಗಳಿಸುತ್ತಾರೆ.” ಉದಾಹರಣೆಗೆ ತೆಗೆದುಕೊಂಡರೆ ಐಟಿಸಿ ಕಂಪನಿಯ 2017ರ ವಾರ್ಷಿಕ ವರದಿಯೇ ಹೇಳುವಂತೆ ಅವರ ಲಾಭ 10,000 ಕೋಟಿ ದಾಟಿದೆ.
ಹೊಗೆಸೊಪ್ಪು ಬೇಸಾಯ ಮಾಡುವುದು ದುಸ್ತರವಾಗಲು ಮತ್ತೊಂದು ಕಾರಣ ಮುಗ ಚಿಂತಾಲ ಮತ್ತು ಪ್ರಕಾಶಂ ಜಿಲ್ಲೆಯ ಪಶ್ಚಿಮದ ಇತರೆ ಭಾಗಗಳಲ್ಲಿ ತೆಂಕಣದ ಬಿಳಿಮಣ್ಣಿನ ಕಾರಣದಿಂದ ಇಳುವರಿ ತುಂಬಾ ಕಡಿಮೆ ಇರುವುದು. “ಒಂದು ಎಕರೆಗೆ ಮೂರು ಕ್ವಿಂಟಾಲು ಹೊಗೆಸೊಪ್ಪು ಬೆಳೆದಿರುವುದೇ ಇಲ್ಲಿನ ದಾಖಲೆ,” ಎನ್ನುತ್ತಾರೆ ಕೊಂಡಯ್ಯ. ಸರಾಸರಿ ಇಳುವರಿ ಎಕರೆಗೆ 2-2.5 ಕ್ವಿಂಟಾಲು ಬರುತ್ತದೆ.
ಪೂರ್ವ ತೀರಕ್ಕೆ ಹತ್ತಿರವಿರುವ ಪ್ರಕಾಶಂ ಜಿಲ್ಲೆಯ ಪೂರ್ವ ಭಾಗದ ತೆಂಕಣದ ಕಪ್ಪುಮಣ್ಣಿನಲ್ಲಿ ಎಕರೆಗೆ 6 ರಿಂದ 7 ಕ್ವಿಂಟಾಲಿನಷ್ಟು ಇದೆ. ಆದರೆ ಅಲ್ಲಿಯೂ ಸಹ ಬೆಲೆಗಳ ಏರುಪೇರಿನಿಂದ ರೈತರು ಹೊಗೆಸೊಪ್ಪಿನ ಬೆಳೆಯನ್ನು ಕೈಬಿಡುತ್ತಿದ್ದಾರೆ.
ಪೂರ್ವ ಪ್ರಕಾಶಂನ ನಾಗುಲುಪ್ಪಳ ಪಡು ಮಂಡಲದ ಅತಿ ಹೆಚ್ಚು ಹೊಗೆಸೊಪ್ಪು ಒಣಗಿಸುವ ಕೊಟ್ಟಿಗೆಗಳಿರುವ ಟಿ. ಅಗ್ರಹಾರಂ ಹಳ್ಳಿಯಲ್ಲಿ ಇದ್ದ 220 ಹೊಗೆಸೊಪ್ಪು ಒಣಗಿಸುವ ಕೊಟ್ಟಿಗೆಗಳಲ್ಲಿ ಈಗ ಕೇವಲ 60 ಮಾತ್ರ ಕೆಲಸ ಮಾಡುತ್ತಿವೆ. 2015 ರಲ್ಲಿ ಅಖಿಲ ಬಾರತ ಕೃಷಿ ಕಾರ್ಮಿಕರ ಸಂಘಟನೆಯು ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯಂತೆ ಇಡೀ ಆಂಧ್ರಪ್ರದೇಶದಲ್ಲಿ 42,000 ಹೊಗೆಸೊಪ್ಪು ಕೊಟ್ಟಿಗೆಗಳಲ್ಲಿ 15,000 ಕೊಟ್ಟಿಗೆಗಳು ಮುಚ್ಚಿಹೋಗಿವೆ. ವ್ಯಾಪಾರಿಗಳಿಗೆ ಮತ್ತು ಸಿಗರೇಟು ಕಂಪನಿಗಳಿಗೆ ಹೊಗೆಸೊಪ್ಪನ್ನು ಮಾರುವ ಮುನ್ನ ಅದನ್ನು ಒಣಗಿಸುವ ಮತ್ತು ಗಟ್ಟಿಯಾಗುವಂತೆ ಮಾಡಲು ಹೊಗೆಸೊಪ್ಪು ಕೊಟ್ಟಿಗೆಗಳಲ್ಲಿ ಬಿಸಿಶಾಖ ನೀಡಲಾಗುತ್ತದೆ, ಆದರೆ ಈ ಕೊಟ್ಟಿಗೆಗಳನ್ನು ಕಟ್ಟಿಕೊಳ್ಳಲು ರೈತರಿಗೆ ತುಸು ಬಂಡವಾಳವೂ ಬೇಕು.
ಹೊಗೆಸೊಪ್ಪು ಬೆಳೆಯುವ ನೆಲ ಮತ್ತು ಅದನ್ನು ಒಣಗಿಸುವ ಕೊಟ್ಟಿಗೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಒಪ್ಪಂದದ ಚೌಕಟ್ಟಿಗೂ (FCTC) ಒಂದಕ್ಕೊಂದು ಸಂಬಂಧವಿದೆ, ಇದರ ಉದ್ದೇಶ ಹೊಗೆಸೊಪ್ಪು ಬಳಕೆಯನ್ನು ಕಡಿಮೆ ಮಾಡುವುದಾಗಿದೆ. 2016 ರಲ್ಲಿ ಈ ಒಪ್ಪಂದಕ್ಕೆ (FCTC) ಭಾರತವೂ ಸಹಿ ಹಾಕಿದ್ದು, ಹಂತ ಹಂತವಾಗಿ ಹೊಗೆಸೊಪ್ಪಿನ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಹಾಗಾಗಿ ತಂಬಾಕು ಮಂಡಳಿಯು ಹೊಸ ಕೊಟ್ಟಿಗೆಗಳ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ನಿಲ್ಲಿಸಿದೆ – ಹೊಗೆಸೊಪ್ಪಿನಲ್ಲಿ ಲಾಭವೂ ಕಡಿಮೆಯಾಗಿರುವುದರಿಂದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ರೈತರು ಸಲ್ಲಿಸುವ ಮನವಿಗಳೂ ಕಡಿಮೆಯಾಗುತ್ತಿವೆ.
ಟಿ. ಅಗ್ರಹಾರಂನಲ್ಲಿ ಗುತ್ತಿಗೆ ಹೊಡೆಯುವ ಬೇಸಾಯಗಾರ ಶ್ರೀನಿವಾಸ ರಾವ್, 40 ವರ್ಷ, ಒಂಬತ್ತು ಎಕರೆ ಜಮೀನನ್ನು ಎಕರೆಗೆ ರೂ. 30,000ದಂತೆ ಗುತ್ತಿಗೆ ತೆಗೆದುಕೊಂಡು ಬೇಸಾಯ ಮಾಡುತ್ತಿದ್ದಾರೆ, ಹೋದ ವರುಷದ ಒಂದೇ ಸುಗ್ಗಿಗೆ 1.5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. “2012ರಲ್ಲಿ ರೂ. 6 ಲಕ್ಷ ಖರ್ಚು ಮಾಡಿ ಕೊಟ್ಟಿಗೆಯನ್ನು ಕಟ್ಟಿಸಿದ್ದೆ, ಹೋದ ವರ್ಷ ಅದನ್ನು ರೂ. 3 ಲಕ್ಷಕ್ಕೆ ಮಾರಿದೆ,” ಎಂದರು. “ಈಗ ಕೊಟ್ಟಿಗೆಗಳನ್ನು ಕೊಂಡುಕೊಳ್ಳುವವರೂ ಸಹ ಯಾರೂ ಸಿಗುವುದಿಲ್ಲ. ಕೊಟ್ಟಿಗೆಯೊಂದಕ್ಕೆ ರೂ. 10 ಲಕ್ಷ ಪರಿಹಾರ ಕೊಡಿ ಎಂದು ಸರಕಾರವನ್ನು ಕೇಳಿಕೊಂಡಿದ್ದೆವು, ಕೊಟ್ಟ ತಕ್ಷಣವೇ ಹೊಗೆಸೊಪ್ಪು ಬೆಳೆಯುವುದನ್ನು ನಿಲ್ಲಿಸಿಬಿಡುತ್ತೇವೆ. 2010ರಲ್ಲಿ ಕೊಟ್ಟಿಗೆಯಲ್ಲಿ ಕೆಲಸ ಮಾಡಲು ಹೊರಗಿನ ಹಳ್ಳಿಗಳಿಂದ ಸುಮಾರು ಕೂಲಿಯವರ 33 ತಂಡಗಳು ಬಂದಿದ್ದವು. ಈ ವರುಷ ಹೆಚ್ಚೆಂದರೆ 10 ತಂಡಗಳು ಬಂದಿದ್ದಾರೆ.”
ಇವೆಲ್ಲವೂ ಸೇರಿಕೊಂಡು ಪ್ರಕಾಶಂನ ಹೊಗೆಸೊಪ್ಪು ಬೆಳೆಗಾರರು ಕಡಿಮೆ ನೀರು ಸಾಕಾಗುವ, ಲಾಭದಾಯಕವಾದ ಬೇರೆ ಬೇರೆ ಬೆಳೆಗಳತ್ತ ನೋಡುವಂತೆ ಮಾಡಿದೆ. ನಾನು ಮುಗಾ ಚಿಂತಾಲ ಹಳ್ಳಿಗೆ ಹೋಗಿದ್ದಾಗ, ಸುಬ್ಬರಾವರು ತಮ್ಮ ಸ್ಮಾರ್ಟಫೋನಿನ ಮೂಲಕ ಯೂಟ್ಯೂಬಿನಲ್ಲಿ ಇತರ ರೈತರಿಗೆ ಮೆರುಗೆಣ್ಣೆಯ ಮರದ ಬೆಳೆಯ ಬಗ್ಗೆ ತೋರಿಸುತ್ತಿದ್ದರು. “ನಾವು ಇದನ್ನು ನಮ್ಮೂರಿನಲ್ಲಿ ಬೆಳೆಯಬೇಕು,” ಇವರೆಂದರು; ಅವರು ತಲೆಯಾಡಿಸುತ್ತಾ, ಹೆಚ್ಚಿನ ಮಾಹಿತಿಯನ್ನು ಕೇಳುತ್ತಿದ್ದರು. “ಶ್ರೀಕಾಕುಳಂ ಜಿಲ್ಲೆಯಲ್ಲಿ ಮತ್ತು ಒರಿಸ್ಸಾದ ಭಾಗಗಳಲ್ಲಿ ಬೆಳೆಯಲಾಗುವ ಇದೊಂದು ವಾಣಿಜ್ಯ ಬೆಳೆ, ಜೊತೆಗೆ ಇದಕ್ಕೆ ಅಷ್ಟು ನೀರು ಬೇಕಾಗುವುದಿಲ್ಲ,” ಎಂದು ವಿವರಿಸಿದರು.
ಈಮಧ್ಯೆ ದೆಹಲಿಯ ಆಟೋರಿಕ್ಷಾಗಳ ಮೇಲೆ ಮತ್ತು ಬಸ್ಸುನಿಲ್ದಾಣಗಳಲ್ಲಿ ರೈತರು “ನಮ್ಮ ಜೀವನವನ್ನು ರಕ್ಷಿಸಿ” ಎನ್ನುವ ಗೋಡೆಯೋಲೆಗಳು ಕಾಣುತ್ತಿವೆ. ಅದರಲ್ಲಿ ಹೊಗೆಸೊಪ್ಪು ಮಾರಾಟಗಾರರ ರಾಷ್ಟ್ರ ಮಟ್ಟದ ಸಂಘಟನೆ ಅಖಿಲ ಭಾರತ ಪಾನ್ ವಿಕ್ರೇತ ಸಂಘಟನೆಯ ಹೆಸರು ಮತ್ತು ಗುರುತುಗಳಿವೆ. ಅದರ ಜೊತೆಗೆ ಸುಬ್ಬರಾಯರು ಹೇಳಿದ್ದು, “ಒಂದು ವೇಳೆ ನಾವೇ ರೈತರೆಲ್ಲ ಸೇರಿಕೊಂಡು ನೀರಾವರಿ ಸೌಲಭ್ಯಕ್ಕಾಗಿಯೋ ಇಲ್ಲವೆ ಸಿಗರೇಟು ಕಂಪನಿಗಳ ವಿರುದ್ದವೋ ಹೋರಾಡಿದ್ದರೆ ಇಷ್ಟೊತ್ತಿಗೆ ಸಮಸ್ಯೆಯಾದರೂ ಬಗೆಹರಿಯುತ್ತಿತ್ತು.”
ಈ ಬರಹದ ಇನ್ನೊಂದು ಆವೃತ್ತಿಯು ಮತ್ತೊಬ್ಬ ಸಹಲೇಖಕರೊಂದಿಗೆ ‘ದಿ ಹಿಂದೂ ಬಿಸಿನೆಸಲೈನ್’ ಪತ್ರಿಕೆಯಲ್ಲಿ ಈ ಮೊದಲು ಫೆಬ್ರವರಿ 2, 2018 ರಲ್ಲಿ ಪ್ರಕಟವಾಗಿತ್ತು.
ಅನುವಾದ: ಬಿ.ಎಸ್. ಮಂಜಪ್ಪ