“ಕೊರೋನಾದಿಂದಾಗಿ ನಾನು ಇಲ್ಲಿಯವರೆಗೆ ದುರ್ಗಾ ವಿಗ್ರಹದ ಯಾವುದೇ ಆರ್ಡರ್ ಗಳನ್ನು ಸ್ವೀಕರಿಸಿಲ್ಲ. ಆದರೆ ಕೆಲವನ್ನು ನಾನೇ ಸ್ವಂತವಾಗಿ ಮಾಡಿದ್ದೇನೆ. ಅವು ಮಾರಾಟವಾಗಬಹುದು ಎಂದುಕೊಂಡಿದ್ದೇನೆ” ಎಂದು ಉತ್ತರ ಕೋಲ್ಕತ್ತಾದ ಕುಂಬಾರರು ಮತ್ತು ವಿಗ್ರಹ ತಯಾರಕರ ಐತಿಹಾಸಿಕ ನೆರೆಹೊರೆಯಾದ ಕುಮಾರ್ತುಲಿಯದಲ್ಲಿರುವ ಕೃಷ್ಣ ಸ್ಟುಡಿಯೊದ ತಪಸ್ ಪಾಲ್ ಹೇಳಿದರು. ”ನೀವು ನನಗೆ ಎಂಟು ವರ್ಷಗಳಿಂದ ಗೊತ್ತು, ನೀವು ಎಂದಾದರೂ ಜೂನ್ ಮಧ್ಯದಲ್ಲಿ ವಿಗ್ರಹಗಳಿಲ್ಲದ ನನ್ನ ಸ್ಟುಡಿಯೋವನ್ನು ನೋಡಿದ್ದೀರಾ?" ಎಂದು ಅವರು ಕೇಳುತ್ತಿದ್ದರು.
ಆಗಲೇ ಕುಮಾರ್ತುಲಿಯಲ್ಲಿನ ಸುಮಾರು 450 ಸ್ಟುಡಿಯೋಗಳು (ಸ್ಥಳೀಯ ಕುಶಲಕರ್ಮಿಗಳ ಸಂಘದಲ್ಲಿ ನೋಂದಾಯಿಸಲ್ಪಟ್ಟಿವೆ) ಬಿದಿರು ಮತ್ತು ಒಣಹುಲ್ಲಿನ ಚೌಕಟ್ಟುಗಳಿಂದ ತುಂಬಿ, ಅದರ ಮೇಲೆ ಜೇಡಿಮಣ್ಣನ್ನು ಹಾಕಿ ಪ್ರತಿಮೆಗೆ ರೂಪ ನೀಡಿವೆ. ಅಕ್ಟೋಬರ್‌ನಲ್ಲಿ ದುರ್ಗಾ ಪೂಜೆ ಆಚರಣೆಗಳು ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು ವಿಗ್ರಹಗಳಿಗೆ ಬಣ್ಣ ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ.(ನೋಡಿ: Journey through Kumartuli )
ಪ್ರತಿ ವರ್ಷವೂ ಈ ಎಲ್ಲ ಸಿದ್ಧತೆಗಳು ಮಾರ್ಚ್/ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತವೆ. ಆದರೆ ಈ ವರ್ಷ ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಕುಮಾರ್ತುಲಿಯಲ್ಲಿನ ಪೂರ್ವ ನಿರ್ಧರಿತ ವೇಳಾಪಟ್ಟಿಗೆ ಅಡ್ಡಿಯಾಗಿದೆ. "ಇದು ನಮಗೆ ಭೀಕರ ವರ್ಷವಾಗಿದೆ. ಏಪ್ರಿಲ್‌ನಿಂದ ನಮ್ಮ ನಷ್ಟಗಳು ಹೆಚ್ಚಾಗತೊಡಗಿದವು. ಮೊದಲನೆಯದಾಗಿ, ಅನ್ನಪೂರ್ಣ ದೇವಿಯಂತಹ ಮನೆಯ ದೇವತೆಗಳ ವಿಗ್ರಹಗಳು ಬಂಗಾಳಿ ಹೊಸ ವರ್ಷದಲ್ಲಿ [ಪೊಯಿಲಾ ಬೈಸಾಖ್, ಈ ವರ್ಷ ಏಪ್ರಿಲ್ 15ರಂದು] ಮಾರಾಟವಾಗದೆ ಹಾಗೆಯೇ ಉಳಿದಿವೆ. ಇಡೀ ಕಾಲೊನಿ ಸುಮಾರು 100 ವಿಗ್ರಹಗಳನ್ನು ತಯಾರಿಸಿತ್ತು, ಆದರೆ ಅವುಗಳಲ್ಲಿ ಕೇವಲ 8-10 ವಿಗ್ರಹಗಳು ಮಾತ್ರ ಮಾರಾಟವಾಗಿವೆ. ಇದರಿಂದಾಗಿ ಇದರ ಮೇಲಿನ ಹೂಡಿಕೆಯೆಲ್ಲ ಈಗ ನಷ್ಟವಾಗಿದೆ. ಇನ್ನೊಂದೆಡೆಗೆ ದುರ್ಗಾಮೂರ್ತಿಗಳಿಗೆ ಇನ್ನೂ ಯಾವುದೇ ಆರ್ಡರ್ ಕೂಡ ಬಂದಿಲ್ಲ' ಎಂದು ಕಳೆದ 20 ವರ್ಷಗಳಿಂದ ಪ್ರತಿಮೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮೃತ್ಯುಂಜಯ್ ಮಿತ್ರ ಅವರು ಹೇಳುತ್ತಿದ್ದರು.
ಮೃತ್ಯುಂಜಯ್ ಮಿತ್ರರಂತೆ, ಇಲ್ಲಿನ ಕುಂಬಾರರು 18ನೇ ಶತಮಾನದಿಂದಲೂ ದುರ್ಗಾ ದೇವಿಯ ಜೇಡಿಮಣ್ಣಿನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ, ಕೋಲ್ಕತ್ತಾದ ಶ್ರೀಮಂತ ಭೂಮಾಲೀಕರು ಮತ್ತು ವ್ಯಾಪಾರಿಗಳು ತಮ್ಮ ಮನೆಗಳಲ್ಲಿ ದುರ್ಗಾ ಪೂಜೆ ಆಚರಣೆಗಳಿಗಾಗಿ ಕುಂಬಾರರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದರು. ಈ ಕುಶಲಕರ್ಮಿಗಳಲ್ಲಿ ಹೆಚ್ಚಿನವರು ನಾಡಿಯಾ ಜಿಲ್ಲೆಯ ಕೃಷ್ಣನಗರ ಪಟ್ಟಣದವರು. ನಗರದಲ್ಲಿ ಅವರ ಕಲೆಗೆ ಬೇಡಿಕೆ ಹೆಚ್ಚಾದಾಗ, ಈ ಕುಶಲಕರ್ಮಿಗಳು ಉತ್ತರ ಕೋಲ್ಕತ್ತಾದ ಕಡೆಗೆ ಹೂಗ್ಲಿ ನದಿಯ ಸಮೀಪವಿರುವ ಕುಮಾರ್ತುಲಿಯಲ್ಲಿ ವಲಸೆ ಬಂದು ನೆಲೆಸಿದರು.
ಜೂನ್ 18ರಂದು ನಾನು ಈ ಹೆಗ್ಗುರುತಾಗಿರುವ ಕುಂಬಾರರ ಪ್ರದೇಶಕ್ಕೆ ತಲುಪಿದಾಗ, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮೇ 20ರಂದು ಅಂಫಾನ್ ಚಂಡಮಾರುತವು ನಗರಕ್ಕೆ ಅಪ್ಪಳಿಸಿದ್ದರ ಪರಿಣಾಮವಾಗಿ ಬಿದ್ದಿರುವ ಮರವನ್ನು ತೆರವುಗೊಳಿಸುತ್ತಿತ್ತು. ಇಲ್ಲದಿದ್ದರೆ ಜನ ಜಂಗುಳಿ ಪ್ರದೇಶದಲ್ಲಿ ನೀರವ ಮೌನ ಮತ್ತು ಬಹುತೇಕ ಕುಶಲಕರ್ಮಿಗಳ ಸ್ಟುಡಿಯೋಗಳು ಹಾಗೆಯೇ ಮುಚ್ಚಲ್ಪಟ್ಟಿರುತ್ತಿದ್ದವು. ತೆರೆದಿದ್ದ ಕೆಲವು ಸ್ಟುಡಿಯೋಗಳಲ್ಲಿ ಈಗ ವಿಗ್ರಹ ತಯಾರಿಸುವ ಯಾವುದೇ ಕೆಲಸ ನಡೆಯುತ್ತಿಲ್ಲ. ಚೂರಾದ ಮತ್ತು ಅಪೂರ್ಣಗೊಂಡಿರುವ ದೇವತೆಗಳ ಪ್ರತಿಮೆಗಳು ಬೀದಿಗಳಲ್ಲಿ ಹಾಗೆಯೇ ಬಿದ್ದಿವೆ. ಇದು ಕಳೆದ ವರ್ಷಗಳ ಯಾವುದೇ ಜೂನ್‌ಗಿಂತ ಭಿನ್ನವಾಗಿತ್ತು. ಇನ್ನೊಂದೆಡೆಗೆ ವಿಗ್ರಹಗಳಿಗೆ ಆಭರಣಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿದ್ದರೂ ಅಲ್ಲಿ ಗ್ರಾಹಕರಿಲ್ಲ.
ಕುಮಾರ್ತುಲಿಯಲ್ಲಿ ನಾನು ಭೇಟಿಯಾದ ಕುಶಲಕರ್ಮಿಗಳು ತಮ್ಮ ಸಾಮೂಹಿಕ ವ್ಯವಹಾರವು 2019 ರಲ್ಲಿ 40 ಕೋಟಿ ರೂ.ಗಳಷ್ಟಿತ್ತು ಎಂದು ಹೇಳುತ್ತಿದ್ದರು. ಇದರಲ್ಲಿ ಪ್ರಮುಖ ಭಾಗವು ದುರ್ಗಾ ವಿಗ್ರಹಗಳ ಮಾರಾಟದಿಂದ ಬರುತ್ತದೆ. ಇದಲ್ಲದೆ ಅವರು ಇತರ ದೇವತೆಗಳ ಪ್ರತಿಮೆಗಳನ್ನು ಸಹ ತಯಾರಿಸುತ್ತಾರೆ ಮತ್ತು ಕೆಲವೊಮ್ಮೆ ಚಲನಚಿತ್ರಗಳಿಗೆ ಮಣ್ಣಿನ ಆಕೃತಿಗಳನ್ನು ಮಾಡಲು ಅವರನ್ನು ನಿಯೋಜಿಸಲಾಗುತ್ತದೆ. ಇನ್ನೂ ಅವರಲ್ಲಿ ಕೆಲವರು ಮಣ್ಣಿನ ಪಾತ್ರೆಗಳು ಮತ್ತು ಗೃಹೋಪಕರಣಗಳನ್ನು ಸಹ ತಯಾರಿಸುತ್ತಾರೆ.ಕೋವಿಡ್ -19 ಸಾಂಕ್ರಾಮಿಕದಿಂದಾದ ಲಾಕ್ ಡೌನ್ ಗೂ ಮೊದಲು ಅವರು ಈ ವರ್ಷ ಮಾರಾಟದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಿದ್ದರು, ಆದರೆ ಈಗ ಎಲ್ಲವೂ ಕೊರೊನಾದಿಂದಾಗಿ ಸ್ಥಗಿತಗೊಂಡಿದೆ.
ಜಗನ್ನಾಥ ರಥ ಯಾತ್ರೆಯ ದಿನದಂದು (ಈ ವರ್ಷ ಜೂನ್ 23ರಂದು ನಡೆಯುತ್ತದೆ) ಅನೇಕ ಕುಶಲಕರ್ಮಿಗಳು ಜಗನ್ನಾಥ ರಥಯಾತ್ರೆಯ ದಿನವನ್ನು ದುರ್ಗಾ ವಿಗ್ರಹಗಳ ಕೆಲಸವನ್ನು ಪ್ರಾರಂಭಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ಬೀಡಿ ಸೇದುತ್ತಾ ನಮ್ಮೊಡನೆ ಮಾತನಾಡಿದ ಮೃತ್ಯುಂಜಯ್ ಹೇಳಿದರು. ಅವರು ಹೇಳುತ್ತಾರೆ, "ಈಗ ಬ್ಯಾಂಕ್‌ಗಳು ಸಹ ನಮ್ಮ ವ್ಯವಹಾರವು ಲಾಭದಾಯಕವಾಗಿಲ್ಲ ಎಂದು ಭಾವಿಸುತ್ತಿವೆ, ಯಾರೂ ನಮಗೆ ಅಲ್ಪಾವಧಿಯ ಸಾಲವನ್ನು ನೀಡಲು ಸಿದ್ಧರಿಲ್ಲ, ನಾವು ಪ್ರತಿ ವರ್ಷ ಹಣವಿಲ್ಲದ ನಮ್ಮ ಜೇಬಿನಿಂದ ಸುಮಾರು 7 ಲಕ್ಷ ರೂಪಾಯಿಗಳನ್ನು ವ್ಯವಹಾರದಲ್ಲಿ ತೊಡಗಿಸಬೇಕಾಗಿದೆ, ನಮ್ಮ ಬಳಿ ಸಂಪಾದನೆಗೆಂದು ಉಳಿಯುವುದೇ ನಾಲ್ಕು ತಿಂಗಳು. ಈ ಆದಾಯದಲ್ಲಿ ಇಡೀ ವರ್ಷವನ್ನು ಕಳೆಯಬೇಕು. ಅದು ಹೇಗೆ ಸಾಧ್ಯ?"
ದುರ್ಗೆಯ ವಿಗ್ರಹಗಳು ವಿವಿಧ ಗಾತ್ರಗಳು ಮತ್ತು ಬೆಲೆಗಳಲ್ಲಿ ಲಭ್ಯವಿದೆ. ಮನೆಗಳಲ್ಲಿ ಪೂಜೆಗೆಂದು 6 ಅಡಿ ಎತ್ತರದ ದುರ್ಗೆಯ ವಿಗ್ರಹವನ್ನು ಸುಮಾರು 30,000 ರೂ.ಗೆ ಮಾರಾಟ ಮಾಡಲಾಗುತ್ತದೆ. ಕೋಲ್ಕತ್ತಾದಾದ್ಯಂತ, ಸಮುದಾಯದ ಆರಾಧನೆಗಾಗಿ ಎತ್ತರದ ಮತ್ತು ಹೆಚ್ಚು ಅಲಂಕರಿಸಿದ ವಿಗ್ರಹಗಳನ್ನು ಚಪ್ಪರಗಳಲ್ಲಿ (ಪೆಂಡಾಲ್) ಇರಿಸಲಾಗುತ್ತದೆ. ಸರಾಸರಿ 10 ಅಡಿ ಉದ್ದದ ಈ ವಿಗ್ರಹಗಳ ಬೆಲೆ ರೂ. 1 ಲಕ್ಷದಿಂದ 2 ಲಕ್ಷದವರೆಗೆ ಇರುತ್ತದೆ.
ಹಿರಿಯ ಶಿಲ್ಪಿ ಕಾರ್ತಿಕ್ ಪಾಲ್ ಅವರು ರಥಯಾತ್ರೆಗೆ ಕೆಲವು ಮೂರ್ತಿಗಳ ಆರ್ಡರ್ ಪಡೆದಿದ್ದಾರೆ. "ಈ ವಿಗ್ರಹಗಳು ಮನೆ ಪೂಜೆಗೆ. ಆದರೆ ದೊಡ್ಡ [ಚಪ್ಪರದ ಮೂರ್ತಿಗಳಿಗೆ] ಯಾವುದೇ ಆದೇಶ ಬಂದಿಲ್ಲ. ಇಂದಿನಿಂದ ಪರಿಸ್ಥಿತಿ ಬದಲಾಗಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಇದು ಖಂಡಿತವಾಗಿ ಇದು ಹಿಂದಿನ ವರ್ಷಗಳಂತೆ ಇರುವುದಿಲ್ಲ," ಎಂದು ಹೇಳಿದರು.
ಪಾಲ್ ಅವರ ಅಭಿಪ್ರಾಯ ಸರಿ ಇರಬಹುದು. ಪ್ರತಿ ವರ್ಷ ಕುಮಾರತುಲಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜನೆಯೊಂದರ ಸಮಿತಿಯ ಮುಖ್ಯಸ್ಥ ನಿಮಾಯ್ ಚಂದ್ರಪಾಲ್, ಅವರು ಈ ಋತುವಿನಲ್ಲಿ ಕುಂಬಾರರು ನಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ”ನಾವು ಈ ಮೊದಲು ಸುಮಾರು 30-40 ಲಕ್ಷ ರೂ.ಬಜೆಟ್ ಹೊಂದಿರುತ್ತಿದ್ದೆವು. ಆದರೆ ಇದು ಹೆಚ್ಚಾಗಿ ಕಾರ್ಪೋರೆಟ್ ಪ್ರಾಯೋಜಕರಿಂದ ಬಂದಿರುತ್ತಿತ್ತು. ಆದರೆ ಈ ವರ್ಷ ಯಾರು ಕೂಡ ಇದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ನಾವು ಕುಶಲಕರ್ಮಿಗಳಿಗೆ ಸ್ವಲ್ಪ ಹಣವನ್ನು ಮುಂಗಡವಾಗಿ ನೀಡಿದ್ದೇವೆ, ಆದರೆ ನಂತರ ಆರ್ಡರ್ ರದ್ದುಗೊಳಿಸಿದ್ದೇವೆ,“ ಎಂದು ಅವರು ಹೇಳಿದರು. ಪಾಲ್ ಸಮಿತಿಯು ಈ ವರ್ಷ ಕಡಿಮೆ ಬಜೆಟ್‌ನಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದೆ. "ಇತರ ದೊಡ್ಡ ಬಜೆಟ್-ಸಮಿತಿಗಳು ಸಹ ಅದನ್ನೇ ಮಾಡುತ್ತವೆ ಎನ್ನುವುದು ನನಗೆ ಖಾತ್ರಿಯಿದೆ." ಎಂದು ಅವರು ಹೇಳುತ್ತಾರೆ.
ಆರ್ಡರ್‌ಗಳ ಕೊರತೆಯ ಜೊತೆಗೆ ಕುಶಲಕರ್ಮಿಗಳಿಗೆ ಇತರ ಸಮಸ್ಯೆಗಳಿವೆ. “ರೈಲುಗಳ ಸಂಚಾರ ಸ್ಥಗಿತಗೊಂಡಿರುವ ಕಾರಣ ದೂರದ ಜಿಲ್ಲೆಗಳಿಂದ ಬರುವ ದಿನಗೂಲಿದಾರರಿಗೆ [ವಿಗ್ರಹ ತಯಾರಕರಿಗೆ ಸಹಾಯ ಮಾಡುವವರು] ಕೆಲಸಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಜೊತೆಗೆ, ಲಾಕ್‌ಡೌನ್ ಮತ್ತು ಅಂಫಾನ್‌ನಿಂದಾಗಿ ಕಚ್ಚಾ ವಸ್ತುಗಳ ಬೆಲೆಗಳು ಸುಮಾರು ಶೇ 30-40ರಷ್ಟು ಹೆಚ್ಚಾಗಿದೆ. ಈ ನಷ್ಟವನ್ನು ನಾವು ಸರಿದೂಗಿಸಲು ಅವಕಾಶವಾದರೂ ಎಲ್ಲಿದೆ ಹೇಳಿ? ಎಂದು ಕಾರ್ತಿಕ್ ಅಚ್ಚರಿ ವ್ಯಕ್ತಪಡಿಸುತ್ತಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ಮಿಂಟು ಪಾಲ್ ಅವರು ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಮತ್ತು ಅಂಫಾನ್ ಚಂಡಮಾರುತದ ನಂತರ ಕುಮಾರ್ತುಲಿಯಲ್ಲಿನ ಕುಶಲಕರ್ಮಿಗಳಿಗೆ ಪೂಜಾ ಸಮಿತಿಗಳು ರೇಷನ್ ವಿತರಿಸುವ ಮೂಲಕ ನೆರವಾಗಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತಾರೆ.
“ದೇವತೆಗಳ ಮೇಲೆ ನೀವು ನೋಡುವ ಸುಂದರವಾದ ಆಭರಣಗಳನ್ನು ನಾಡಿಯಾ ಮತ್ತು ಹೂಗ್ಲಿ ಜಿಲ್ಲೆಗಳ ಹಳ್ಳಿಗಳಲ್ಲಿ ತಯಾರಿಸಲಾಗುತ್ತದೆ.”ಎಂದು ಮಾಹೀನ್ ಪಾಲ್ ಹೇಳಿದರು. "ಅವುಗಳ ತಯಾರಕರು ಸಹ ಈಗ ನಿರುದ್ಯೋಗಿಗಳಾಗಿದ್ದಾರೆ.ಸುಮಾರು 60-70 ಕುಟುಂಬಗಳು ವಿಗ್ರಹಗಳಿಗಾಗಿ ಸಿದ್ಧಪಡಿಸುವ ಕೃತಕ ಕೂದಲು ತಯಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿವೆ.ಅವರಿಗೂ ಈಗ ಸಾಕಷ್ಟು ಹೊಡೆತ ಬಿದ್ದಿದೆ. ಪ್ರತಿಮೆಗಳ ನಿರ್ಮಾಣಕ್ಕಾಗಿ ಜೇಡಿಮಣ್ಣನ್ನು ದಕ್ಷಿಣ 24 ಪರಗಣ, ಉತ್ತರ 24 ಪರಗಣ ಮತ್ತು ಮಾಲ್ಡಾ ಜಿಲ್ಲೆಗಳಿಂದ ದೋಣಿ ಮೂಲಕ ತರಲಾಗುತ್ತದೆ.ಅದನ್ನು ಸಾಗಿಸುವ ಕೂಲಿ ಕಾರ್ಮಿಕರಿಗೂ ಈಗ ಆದಾಯವಿಲ್ಲದಂತಾಗಿದೆ.
ಅನುವಾದ: ಎನ್ . ಮಂಜುನಾಥ್