ನಾನು ಬೆಳೆದ ಮುಂಬೈನ ಕೊಳೆಗೇರಿಯಲ್ಲಿನ ನಮ್ಮ ನೆರೆಯ ಕಿರಾಣಿ ಅಂಗಡಿಯು ಪ್ರತಿ ಸಂಜೆ, ಸುಮಾರು 6ರ ಹೊತ್ತಿಗೆ ಜನರಿಂದ ತುಂಬಿರುತ್ತಿತ್ತು. ಆಗ 2000ದ ಇಸವಿ. ಒಂದು ಕೆ.ಜಿ. ಅಕ್ಕಿ, ಒಂದು ರೂ. ಬೆಲೆಯ ಮೆಣಸಿನ ಪುಡಿ ಹಾಗೂ ಉಪ್ಪು, ಒಂದು ಅಥವಾ ಎರಡು ರೂ.ಗಳ ಅಡಿಗೆ ಎಣ್ಣೆ, 25-50 ಪೈಸೆಯ ಕಪ್ಪು ಸಾಸಿವೆ ಮತ್ತು ಅರಿಶಿಣದ ಪುಡಿ, ಒಂದು ಅಥವಾ ಎರಡು ಈರುಳ್ಳಿ, ಕಾಲು ಕೆ.ಜಿ. ತೊಗರಿ ಬೇಳೆ ಮತ್ತು ಗೋಧಿ ಹಿಟ್ಟು ಹಾಗೂ ಸ್ಟೋವ್‌ ಅನ್ನು ಉರಿಸಲು ಕೊಂಚ ಸೀಮೆಎಣ್ಣೆಗಾಗಿ ದೊಡ್ಡ ಅಂಗಡಿಯಲ್ಲಿ ಚಿಕ್ಕ ಖರೀದಿದಾರರು ಕಿಕ್ಕಿರಿದಿದ್ದರು.

ಜನರು ತಮ್ಮ 150 ರೂ.ಗಳ ದಿನಗೂಲಿಯಿಂದ, ಪ್ರತಿದಿನ ಅಲ್ಪಸ್ವಲ್ಪ ಸಾಮಾನುಗಳನ್ನಷ್ಟೇ ಕೊಳ್ಳುತ್ತಿದ್ದರು. ಆ ದಿನಗಳಲ್ಲಿ, 25 ಹಾಗೂ 50 ಪೈಸೆಯ ನಾಣ್ಯಗಳಿನ್ನೂ ಚಾಲ್ತಿಯಲ್ಲಿದ್ದವು. ಕಿರಾಣಿ ಅಂಗಡಿಯಲ್ಲಿ ಕೆಳದರ್ಜೆಯ ಒಂದು ಕೆ.ಜಿ. ಅಕ್ಕಿ ಹಾಗೂ ತೊಗರಿ ಬೇಳೆಯ ಬೆಲೆ ಕ್ರಮವಾಗಿ, 20 ಹಾಗೂ 24 ರೂ.ಗಳು. ಬಹುತೇಕ ಖರೀದಿದಾರರು ಇವೆರಡರ ಅರ್ಧ ಅಥವಾ ಕಾಲು ಕೆ.ಜಿ.ಯಷ್ಟನ್ನು ಮಾತ್ರವೇ ಖರೀದಿಸುತ್ತಿದ್ದರು. ಏಕೆ ಹೀಗೆಂದು ನನಗೆ ತಿಳಿದಿಲ್ಲ, ಆದರೆ ನಮ್ಮ ಪಡಿತರ ಅಂಗಡಿಯಲ್ಲಿ ಕೇವಲ ಸಕ್ಕರೆ, ತಾಳೆ ಎಣ್ಣೆ ಮತ್ತು ಸೀಮೆಎಣ್ಣೆಯಷ್ಟೇ ದೊರೆಯುತ್ತಿದ್ದು, ಉಳಿದುದನ್ನು ನಾವು ಖಾಸಗಿ ಕಿರಾಣಿ ಅಂಗಡಿಯಿಂದ ಕೊಳ್ಳುತ್ತಿದ್ದೆವು.

ಮುಂಜಾನೆ 8ರಿಂದ ಪ್ರಾರಂಭಗೊಂಡ ಬಿಡುವಿಲ್ಲದ ದುಡಿಮೆಯಿಂದ ಹೈರಾಣಾಗಿದ್ದ ಗ್ರಾಹಕರು, 3-4 ಜನರ ಅಂದಿನ ಹಸಿವನ್ನು ನೀಗಿಸಲು 70-80ರ ಬೆಲೆಯ ದಿನಸಿಯನ್ನು ಕೊಳ್ಳುತ್ತಿದ್ದರು. ತಿಂಗಳ ಕೊನೆಗೆ ಮನೆಯ ಮಾಸಿಕ ಬಾಡಿಗೆ, ವಿದ್ಯುತ್‌ ಬಿಲ್ಲು ಮತ್ತು ನೀರಿನ ವೆಚ್ಚವನ್ನು ಲೆಕ್ಕಹಾಕಿದ ಬಳಿಕ ಉಳಿದ ಕೂಲಿಯ ಹಣವನ್ನು ಹಳ್ಳಿಯಲ್ಲಿನ ತಮ್ಮ ಪರಿವಾರಗಳಿಗೆ, ಅಂಚೆ ಅಥವಾ ಅಲ್ಲಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಮೂಲಕ ಕಳುಹಿಸುತ್ತಿದ್ದರು – ಇದು 2,000 ರೂ.ಗಳನ್ನು ಮೀರುತ್ತಿದ್ದುದು ಅಪರೂಪ.

ಅಂದಿನ ದುಡಿಮೆ, ಅಂದೇ ಖರ್ಚಾಗುತ್ತಿತ್ತು – ಇದೇ ಅವರ ಬುದುಕು. ಹಸಿರು ಮೆಣಸಿನ ಕಾಯಿ ಮತ್ತು ನಿಂಬೆ ಹಣ್ಣುಗಳ ಮಾರಾಟದ ದೈನಂದಿನ ಸಂಪಾದನೆಯಿಂದ ನಮ್ಮ ಮನೆಯೂ ನಡೆಯುತ್ತಿತ್ತು. ನನ್ನ ಅಮ್ಮ, ಸ್ವಲ್ಪ ಪ್ರಮಾಣದ ಮೆಣಸಿನ ಪುಡಿ, ಉಪ್ಪು ಮತ್ತು ಅಕ್ಕಿಯನ್ನು ತರಲು ಪ್ರತಿ ಸಂಜೆ ನನ್ನನ್ನು ಕಳುಹಿಸುತ್ತಿದ್ದಳು. ಅಂಗಡಿಯ ಅಜ್ಜಿಯು, ಒಂಭತ್ತು ವರ್ಷದ ನನ್ನೆಡೆಗೆ ತಿರುಗಿ, “ನಿನಗೇನು ಬೇಕು” ಎಂದು ಕೇಳುವವರೆಗೂ ನಾನು ಆಕೆಯನ್ನೇ ದಿಟ್ಟಿಸುತ್ತಿದ್ದೆ.

ಪಡಿತರ ಅಂಗಡಿಯ ಅನೇಕ ಮುಖಗಳು ನನಗೆ ಪರಿಚಿತವಾದವು. ಹೀಗಾಗಿ, ನಾವು ಪರಸ್ಪರ ದೃಷ್ಟಿ ಬೀರಿ,  ಮುಗುಳ್ನಗುತ್ತಿದ್ದೆವು. ಅವರಲ್ಲಿನ ಅನೇಕರು ನನಗೆ ತಿಳಿದಿದ್ದ ಏಕೈಕ ಭಾಷೆಯಾದ ಮರಾಠಿಯಲ್ಲಿ ಮಾತನಾಡುತ್ತಿರಲಿಲ್ಲ. ಸಿನಿಮಾಗಳಲ್ಲಿ ಕಂಡುಬರುವಂತೆ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರು ಮಹಾರಾಷ್ಟ್ರದವರಲ್ಲ, ಬೇರೆ ರಾಜ್ಯದವರೆಂಬುದು ನನಗೆ ತಿಳಿದಿರಲಿಲ್ಲ.

ನಾವು 10x10 ಅಡಿಯ ಖೋಲಿ(ಒಂದು ಕೊಠಡಿಯ ಮನೆ)ಯಲ್ಲಿ ವಾಸಿಸುತ್ತಿದ್ದೆವು. ಪರಸ್ಪರ ಅಂಟಿಕೊಂಡಂತಿರುವ, ಕೊಳವೆಯಂತಹ ಕಿರಿದಾದ ಇಂತಹ ಅನೇಕ ವಸತಿಗಳು ಇಂದಿಗೂ ಈ ನಗರದಲ್ಲಿವೆ. ಈ ಕೆಲವು ಬಾಡಿಗೆ ಕೊಠಡಿಗಳಲ್ಲಿ, 10-12 ಜನರು ಒಟ್ಟಾಗಿ ವಾಸಿಸುತ್ತಾರೆ. ಈ ನಿವಾಸಿಗಳಲ್ಲಿನ ಎಲ್ಲರೂ ಗಂಡಸರು ಎಂಬ ಅಂಶವು ಆಗಾಗ ಕಂಡುಬರುತ್ತದೆ.

ಚಿತ್ರಕಾರರು: ಅಂತರ ರಮಣ್‌

ನಮ್ಮ ಮನೆಯ ಕಡೆಯಿಂದ ಸಾಗುವಾಗಲೆಲ್ಲ, ಅವರು “ಭಾಭಿ, ಊಟ ಆಯ್ತಾ?” ಎಂಬುದಾಗಿ ನನ್ನ ಅಮ್ಮನನ್ನು ವಿಚಾರಿಸುತ್ತಿದ್ದರು. “ಹೋಂವರ್ಕ್‌ ಆಯ್ತಾ?” ಎಂದು ಆಗಾಗ ನನ್ನನ್ನು ಕೇಳುತ್ತಿದ್ದರು. ಕೆಲವೊಮ್ಮೆ, ಬಿಡುವಿನ ದಿನಗಳಲ್ಲಿ, ಬಾಗಿಲ ಬಳಿ ಕುಳಿತು, “ಈಗ ಏನು ಹೇಳೋದು ಭಾಭಿ? ಹೊಲದಲ್ಲಿ ಸಾಕಷ್ಟು ಫಸಲೇ ಇಲ್ಲ. ಕುಡಿಯಲು ಸಹ ನೀರಿಲ್ಲ. ಹಳ್ಳಿಯಲ್ಲಿ ಉದ್ಯೋಗವೂ ಇಲ್ಲ. ಹೀಗಾಗಿ, ನನ್ನ ಗೆಳೆಯರೊಂದಿಗೆ ನಾನು ಬಂಬೈಗೆ ಬಂದೆ. ಈಗ, ನನ್ನ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಬೇಕಿದೆ” ಎನ್ನುತ್ತಾ ಮಾತಿಗೆ ತೊಡಗುತ್ತಿದ್ದರು.

ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದ ಕಾರಣ, ಅವರು ಹೇಳುತ್ತಿರುವುದನ್ನು ಅರ್ಥೈಸಿಕೊಳ್ಳುವುದು ನಮಗೆ ಸಾಧ್ಯವಾಗುತ್ತಿತ್ತು. ನಂತರ ನನ್ನ ತಾಯಿ ತಮ್ಮ ಹರುಕುಮುರುಕು ಹಿಂದಿಯಲ್ಲಿ, ಉತ್ತರಿಸುತ್ತಿದ್ದರು. ಪರಸ್ಪರರ ಬಗ್ಗೆ ವಿಚಾರಿಸುವ ಸಂಭಾಷಣೆಗಳು ಎಂದಿಗೂ ನಿಲ್ಲುತ್ತಿರಲಿಲ್ಲ. ಅವರ ಮಕ್ಕಳು ನಮ್ಮೊಂದಿಗೆ ಮರಾಠಿ ಶಾಲೆಗಳಲ್ಲಿ ಓದುತ್ತಿದ್ದರು. ನಾವು ಒಟ್ಟಿಗೆ ಆಟವಾಡುತ್ತಾ, ಪರಸ್ಪರರ ಭಾಷೆಯನ್ನು ಅರ್ಥೈಸಿಕೊಳ್ಳುವುದನ್ನು ಕಲಿಯುತ್ತಿದ್ದೆವು.

ಆದರೆ ಒಂದು ವರ್ಷದ ಬಳಿಕ ಅವರು ಹೊರಟುಹೋಗುತ್ತಿದ್ದರು.

ನಮ್ಮ ಈ ನೆರೆಹೊರೆಯವರೆಲ್ಲರೂ ದುಡಿಮೆಗಾರರು, ಕೂಲಿಗಾರರ ಪರಿವಾರಗಳು. ಮುಗಿಲೆತ್ತರದ ಕಟ್ಟಡಗಳು, ಆಕರ್ಷಕ ಭವನಗಳು, ಫ್ಲೈಓವರ್‌ಗಳು, ರಸ್ತೆಗಳು ಹಾಗೂ ಹಲವು ಕಾರ್ಖಾನೆಗಳಲ್ಲಿ ತಯಾರಾಗುವ ಉತ್ಪನ್ನಗಳೆಲ್ಲವೂ ಇವರ ಪರಿಶ್ರಮದ ಫಲ. ಈ ದೇಶದ ಆರ್ಥಿಕತೆಯು ದೊಡ್ಡ ಪ್ರಮಾಣದಲ್ಲಿ ಇವರ ಸಾಮರ್ಥ್ಯದ ಮೇಲೆ ರೂಪುಗೊಂಡಿದೆ. ಇವರ ವಲಸೆಯು ನಿರಂತರ. ಇಂದು ಒಂದು ಸ್ಥಳವಾದರೆ, ನಾಳೆ ಮತ್ತೊಂದು. ಅದು ಮುಂಬೈ ಆಗಿರಬಹುದು ಅಥವಾ ಮತ್ತಾವುದೇ ನಗರವಾಗಿರಬಹುದು – ಇವರಿಗೆಂದಿಗೂ ಸ್ಥಿರತೆಯೆಂಬುದಿಲ್ಲ.

ವಾಸಸ್ಥಾನದಿಂದ ಊಟದವರೆಗೆ ಎಲ್ಲವೂ ತಾತ್ಕಾಲಿಕ.

ಎರಡು ದಶಕಗಳ ಹಿಂದಿನ ಕೆಲವೇ ರೂಪಾಯಿಗಳ ಅವರ ಖರ್ಚು, ಈಗ ನೂರಾರು ರೂಪಾಯಿಗಳು.  2020ರ ಕೊರೊನ ಸರ್ವವ್ಯಾಪಿ ವ್ಯಾಧಿ ಮತ್ತು ಲಾಕ್‌ಡೌನ್‌ನ ಈ ಅವಧಿಯು ಈಗಲೂ 2000ದ ಇಸವಿಯಲ್ಲೇ ಸಿಲುಕಿದೆಯೆಂದು ನನಗೆ ಭಾಸವಾಗುತ್ತದೆ.

ನನ್ನ ನೆರೆಹೊರೆಯ ಶ್ರಮಿಕನ ಚಹರೆಯು ಬದಲಾಗಿದೆಯಾದರೂ, ಆತನ ವ್ಯಥೆ, 20 ವರ್ಷಗಳ ಹಿಂದಿನಂತೆಯೇ ಇದೆ. ಇಂದು ಆತ ಇಲ್ಲಿಂದ ತೆರಳಿದನಾದರೂ, ಹಿಂದಿನಂತೆ ಉದ್ಯೋಗದ ತಲಾಶಿಯಲ್ಲಲ್ಲ. ಯಾವುದೇ ಆಯ್ಕೆಯಿಲ್ಲದ ಕಾರಣ, ಆಪತ್ತು, ಅಸಹಾಯಕತೆಯಿಂದ ತುಂಬಿದ ತನ್ನ ಹಳ್ಳಿಯ ದಾರಿಯನ್ನು ಆತ ಮರಳಿ ಹಿಡಿದಿದ್ದಾನೆ.

ಸರ್ಕಾರ, ಆಡಳಿತ, ವ್ಯವಸ್ಥೆ ಹಾಗೂ ತಮ್ಮ ಕಛೇರಿಗಳ ನಾಲ್ಕು ಗೋಡೆಗಳ ನಡುವೆ ಅದನ್ನು ಚಾಲಿತಗೊಳಿಸುವ ಜನಗಳಿಗೆ, ಹಸಿದ ಹೊಟ್ಟೆಯಲ್ಲಿ ನೂರಾರು ಕಿ.ಮೀ.ಗಳ ಹಾದಿಯನ್ನು ಸವೆಸುವಾಗಿನ ಮನುಷ್ಯನ ಅಸಹನೀಯ ದಣಿವಿನ ಬಗ್ಗೆ ಯಾವುದೇ ಸುಳಿವಾಗಲಿ, ಸೂಕ್ಷ್ಮ ತಿಳುವಳಿಕೆಯಾಗಲಿ ಇಲ್ಲ. ಬಳಲಿ, ನಿತ್ರಾಣಗೊಂಡ ದೇಹಗಳಿಗೆ ತಾವು ವಿಶ್ರಮಿಸುವ ಅಥವ ನಿದ್ರಿಸಬಹುದಾದ ರಸ್ತೆ ಅಥವಾ ಕಲ್ಲಿನ ಮೇಲ್ಮೈ ಸಹ ಮೆತ್ತನೆಯ ಹಾಸಿಗೆಯೆನಿಸುತ್ತದೆ. ನಂತರ ಅದೇ ಕಠೋರ ಸ್ಥಿತಿಯಲ್ಲಿ ಸಿಲುಕಿದ ಅವರ ಮುಂದಣ ಪಯಣವೂ ಸಹ ಆಗಾಗ್ಗೆ ಸ್ಥಗಿತಗೊಳ್ಳುತ್ತದೆ. ನಿಷ್ಠುರ ವ್ಯವಸ್ಥೆ ಮತ್ತು ಅದರ ದಿಗ್ಭ್ರಮೆಗೊಳಿಸುವ ನಿರ್ಣಯಗಳಡಿ ವಸ್ತುತಃ ನುಚ್ಚುನೂರಾದವನೇ ‘ವಲಸೆ ಬಂದ ಕಾರ್ಮಿಕ.’

ಚಿತ್ರಕಾರರು: ಅಂತರ ರಮಣ್‌ ಅವರು ಬೆಂಗಳೂರಿನ ಸೃಷ್ಟಿ ಇನ್ಸ್‌ಟಿಟ್ಯೂಟ್‌ ಆಫ್‌ ಆರ್ಟ್‌ನಲ್ಲಿನ ಡಿಸೈನ್‌ ಅಂಡ್‌ ಟೆಕ್ನಾಲಜಿಯ ವಿಶುವಲ್‌ ಕಮ್ಯುನಿಕೇಷನ್‌ನ ಇತ್ತೀಚಿನ ಸ್ನಾತಕರು. ಅವರ ಚಿತ್ರಣ ಹಾಗೂ ವಿನ್ಯಾಸದ ಕಾರ್ಯ ಪ್ರಣಾಲಿಯಲ್ಲಿ ಎಲ್ಲ ಪ್ರಕಾರಗಳ ಪರಿಕಲ್ಪನಾತ್ಮಕ ಕಲೆ ಮತ್ತು ಕಥನಗಳು ಮಹತ್ತರ ಪ್ರಭಾವವನ್ನು ಬೀರಿವೆ.

ಅನುವಾದ: ಶೈಲಜಾ ಜಿ.ಪಿ.

జ్యోతి పీపుల్స్ ఆర్కైవ్ ఆఫ్ రూరల్ ఇండియా లో సీనియర్ రిపోర్టర్. ‘మి మరాఠీ’, ‘మహారాష్ట్ర 1’ వంటి వార్తా చానెళ్లలో ఆమె గతంలో పనిచేశారు.

Other stories by Jyoti
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.