ಆಜಾದ್ ಮೈದಾನದಲ್ಲಿದ್ದ ದೊಡ್ಡ ಜನಸಂದಣಿಯನ್ನು ಕೈಲಾಶ್ ಖಂಡಗಲೆ ಕಣ್ಣಿನಲ್ಲೇ ಅಳತೆ ಮಾಡುತ್ತಿದರು. 38 ವರ್ಷದ ಭೂರಹಿತ ಕಾರ್ಮಿಕರಾದ ಅವರು "ಇಲ್ಲಿ ಸಾಕಷ್ಟು ಸಂಖ್ಯೆಯ ರೈತರಿದ್ದಾರೆ" ಎಂದು ಮೈದಾನದ ಸುತ್ತಲೂ ನೋಡುತ್ತಾ ಹೇಳಿದರು.
ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಲು ಮುಂಬೈನ ಆಜಾದ್ ಮೈದಾನದಲ್ಲಿ ಸಾವಿರಾರು ರೈತರು ಜಮಾಯಿಸಿದ್ದರು. ಜನವರಿ 24 ರಂದು ಕೈಲಾಶ್ ಕೂಡ ಅವರೊಂದಿಗೆ ಸೇರಿಕೊಂಡರು. "ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಕಾನೂನುಗಳು ನನ್ನ ಕುಟುಂಬಕ್ಕೆ ಪಡಿತರವನ್ನು ಪಡೆಯುವ ಸೌಲಭ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಕೇಳಿದ್ದೇನೆ,” ಎಂದು ಅವರು ಹೇಳುತ್ತಾರೆ. ಅವರ ಸಮುದಾಯದ ಸದಸ್ಯರು ಮುಖ್ಯವಾಗಿ ಟೊಮೆಟೊ, ಈರುಳ್ಳಿ, ಸಜ್ಜೆ ಮತ್ತು ಭತ್ತವನ್ನು ತಮ್ಮ ಒಂದರಿಂದ ಐದು ಎಕರೆಯವರೆಗಿನ ಹೊಲಗಳಲ್ಲಿ ಬೆಳೆಯುತ್ತಾರೆ.
ಜನವರಿ 24ರಿಂದ 26ರವರೆಗೆ ಸಂಯುಕ್ತ ಶೆತಕರಿ ಕಾಮಗಾರ್ ಮೋರ್ಚಾ ಆಯೋಜಿಸಿದ್ದ ಧರಣಿಯಲ್ಲಿ ಭಾಗವಹಿಸಿದ ಅಹ್ಮದ್‌ನಗರ ಜಿಲ್ಲೆಯ ಕೋಲಿ ಮಹಾದೇವ್ ಬುಡಕಟ್ಟು ಜನಾಂಗದ ಸುಮಾರು 500 ಜನರಲ್ಲಿ ಅವರೂ ಒಬ್ಬರಾಗಿದ್ದರು. ಅಕೋಲಾ, ಪಾರ್ನರ್ ಮತ್ತು ಸಂಗಮ್ನರ್ ತಾಲ್ಲೂಕಿನ ಬುಡಕಟ್ಟು ಸಮುದಾಯದ ರೈತರು ಮುಂಬೈಗೆ ಹೋಗಲು ಸುಮಾರು 300 ಕಿ.ಮೀ ದೂರದ ಪ್ರಯಾಣಕ್ಕಾಗಿ 35 ವ್ಯಾನ್‌ಗಳನ್ನು ಬಾಡಿಗೆಗೆ ಪಡೆದು, ತಲಾ 200 ರೂಪಾಯಿಗಳನ್ನು ನೀಡಿ ಅವುಗಳ ಬಾಡಿಗೆಯನ್ನು ಭರಿಸಿದ್ದಾರೆ.
ಸಂಗಮ್ನರ್ ತಾಲೂಕಿನ ಖಂಬೆ ಎನ್ನುವ ಊರಿನಲ್ಲಿ ತನ್ನ ವೃದ್ಧ ಪೋಷಕರು, ಮೂರು ಮಕ್ಕಳು ಮತ್ತು ಪತ್ನಿ ಭಾವನಾ ಜೊತೆ ವಾಸಿಸುವ ಕೈಲಾಶ್ ಅವರು ತನ್ನ ಕುಟುಂಬದ ಏಕೈಕ ಹಣ ಗಳಿಸುವ ಸದಸ್ಯ. "ನಾನು ಬೇರೆಯವರ ಹೊಲಗಳಲ್ಲಿ ಕೂಲಿ ಮಾಡುವ ಮೂಲಕ ದಿನಕ್ಕೆ 250 ರೂಪಾಯಿಗಳನ್ನು ಸಂಪಾದಿಸುತ್ತೇನೆ. ಆದರೆ ನನ್ನ ಕಾಲುಗಳಿಂದಾಗಿ ನನಗೆ ವರ್ಷಕ್ಕೆ 200 ದಿನಗಳಿಗಿಂತ ಹೆಚ್ಚು ಕಾಲ ದುಡಿಯಲು ಸಾಧ್ಯವಿಲ್ಲ." ಎಂದು ಅವರು ಹೇಳಿದರು. ಕೈಲಾಶ್ ಅವರ ಎಡಗಾಲಿಗೆ ಅವರ 13ನೇ ವಯಸ್ಸಿನಲ್ಲಿ ಗಾಯವಾಗಿದ್ದು, ಕಾಲಾನಂತರದಲ್ಲಿ ಸಾಕಷ್ಟು ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ಅದು ಕುಂಟಾಯಿತು. ಬಲಗೈಯಲ್ಲಿನ ದೋಷದಿಂದಾಗಿ ಭಾವನಾ ಅವರಿಗೂ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ.
ಅಲ್ಪ ಮತ್ತು ಅಸ್ಥಿರ ಆದಾಯದ ಕಾರಣ, ಖಂಡಗಲೆ ಕುಟುಂಬದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ - ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಪಡಿತರ ಪಡೆಯಲು ಅರ್ಹತೆ ಪಡೆದ 80 ಕೋಟಿ ಜನರಲ್ಲಿ ಖಂಡಗಲೆ ಕುಟುಂಬವೂ ಸೇರಿದೆ. ಈ ಕಾಯ್ದೆಯು ಅರ್ಹ ಕುಟುಂಬಗಳಿಗೆ ತಿಂಗಳಿಗೆ ಒಟ್ಟು ಐದು ಕಿಲೋಗ್ರಾಂಗಳಷ್ಟು ಧಾನ್ಯವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಅನುವು ಮಾಡಿಕೊಡುತ್ತದೆ - ಅಕ್ಕಿ ಕೆಜಿಗೆ 3 ರೂ., ಗೋಧಿ ಕೆಜಿಗೆ 2 ರೂ. ಮತ್ತು ಧಾನ್ಯಗಳು ಕೆಜಿಗೆ 1 ರೂ.
ಆದರೆ ಕೈಲಾಶ್‌ರ ಏಳು ಸದಸ್ಯರ ಕುಟುಂಬಕ್ಕೆ ಪ್ರತಿ ತಿಂಗಳು ಕೇವಲ 15 ಕೆಜಿ ಗೋಧಿ ಮತ್ತು 10 ಕೆಜಿ ಅಕ್ಕಿ ಸಿಗುತ್ತದೆ - ಇದು ಅವರಿಗೆ ಸಿಗಬೇಕಿರುವುದಕ್ಕಿಂತ 10 ಕೆಜಿ ಕಡಿಮೆ - ಅವರ ಇಬ್ಬರು ಚಿಕ್ಕ ಮಕ್ಕಳ ಹೆಸರುಗಳು ಅವರ ಬಿಪಿಎಲ್ (ಬಡತನದ ರೇಖೆಯ ಕೆಳಗೆ) ಪಡಿತರ ಚೀಟಿಯಿಂದ ಕಾಣೆಯಾಗಿದೆ.
“ಈ 25 ಕಿಲೋ ರೇಷನ್ 15 ದಿನಗಳಲ್ಲಿ ಮುಗಿದು ಹೋಗುತ್ತವೆ. ನಂತರ ನಾವು ನಮ್ಮ ಹಸಿವನ್ನು ನಿಗ್ರಹಿಸಬೇಕು ”ಎಂದು ಕೈಲಾಶ್ ಹೇಳುತ್ತಾರೆ, ಅವರು ಸ್ಥಳೀಯ ಪಿಡಿಎಸ್ ಅಂಗಡಿಗೆ ಒಟ್ಟು ನಾಲ್ಕು ಕಿಲೋಮೀಟರ್ ನಡೆದು ಪ್ರತಿ ತಿಂಗಳು ಕುಟುಂಬದ ಪಡಿತರವನ್ನು ಸಂಗ್ರಹಿಸುತ್ತಾರೆ. “ನಾವು ಎಣ್ಣೆ, ಉಪ್ಪು ಮತ್ತು ಮಕ್ಕಳ ಶಿಕ್ಷಣಕ್ಕೂ ಹಣ ಖರ್ಚು ಮಾಡಬೇಕಾಗುತ್ತದೆ. ಕಿರಾನಾ [ಕಿರಾಣಿ] ಅಂಗಡಿಯಿಂದ ದುಬಾರಿ ಧಾನ್ಯಗಳನ್ನು ಖರೀದಿಸಲು ಹಣ ಎಲ್ಲಿಂದ ತರುವದು? ”
ಇದು ಮತ್ತು ಕೃಷಿ ಕಾನೂನುಗಳ ಇತರ ಸಂಭಾವ್ಯ ಪರಿಣಾಮಗಳು ಕೈಲಾಶ್ ಖಂಡಗಲೆಯವರನ್ನು ಆತಂಕಕ್ಕೊಳಗಾಗಿಸಿವೆ: “ಮಸೂದೆಗಳು [ಕಾನೂನುಗಳು] ದೊಡ್ಡ ಪ್ರಮಾಣದ ಪರಿಣಾಮವನ್ನು ಬೀರುತ್ತವೆ. ಇದು ಕೇವಲ ರೈತರ ವಿಷಯ ಮಾತ್ರವಲ್ಲ. ಈ ಹೋರಾಟ ನಮ್ಮೆಲ್ಲರಿಗೂ ಆಗಿದೆ,” ಎಂದರು.
"ನಾನು ಸರ್ಕಾರವನ್ನು ಕೇಳಲು ಬಯಸುತ್ತೇನೆ - ನಮಗೆ ಸ್ಥಿರವಾದ ಕೆಲಸವಿಲ್ಲದಿದ್ದರೆ ಮತ್ತು ನೀವು ನಮಗೆ ಪಡಿತರ ನೀಡುವುದನ್ನು ನಿಲ್ಲಿಸಿದರೆ, ನಾವು ಏನನ್ನು ತಿನ್ನುವುದು?" ಎಂದು ಮುಂಬೈ ಪ್ರತಿಭಟನೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಕೈಲಾಶ್‌ಗೆ ಈ ಭಯವು ಹೊಸ ಕೃಷಿ ಕಾನೂನುಗಳಲ್ಲಿ ಒಂದಾದ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ರ ನಿಬಂಧನೆಗಳಿಂದ ಉದ್ಭವಿಸಿದೆ, ಇದು 'ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ' ಉಳಿದ ಸಮಯದಲ್ಲಿ 'ಆಹಾರ ಪದಾರ್ಥಗಳ' ಮೇಲಿನ (ಧಾನ್ಯಗಳು, ಬೇಳೆಕಾಳುಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಕಾಳುಗಳು ಮತ್ತು ತೈಲಗಳು) ಶೇಖರಣಾ ಮಿತಿಯನ್ನು ತೆಗೆದುಹಾಕುತ್ತದೆ.
"ಈ ತಿದ್ದುಪಡಿಯು ಕಂಪನಿಯು ತನ್ನ ಗೋದಾಮುಗಳಲ್ಲಿ ಎಷ್ಟು ಸಂಗ್ರಹಿಸಬಹುದೆನ್ನುವುದಕ್ಕೆ ಯಾವುದೇ ಮಿತಿಯಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಇದರ ಪರಿಣಾಮವಾಗಿ, ಅಕ್ಕಿ ಮತ್ತು ಗೋಧಿ - ನಮ್ಮ ದೇಶದ ಲಕ್ಷಾಂತರ ಬಡ ಜನರ ದೈನಂದಿನ ಆಹಾರ - ಅಗತ್ಯ ಆಹಾರವನ್ನು ಸಂಗ್ರಹಿಸಿ ಇಡಲಾಗುವುದರಿಂದ ಈ ವಸ್ತುಗಳ ವಸ್ತುಗಳು ಕಪ್ಪು ಮಾರುಕಟ್ಟೆ ಹೆಚ್ಚಾಗುತ್ತದೆ” ಎಂದು ಅಕೋಲಾ ತಾಲ್ಲೂಕಿನ ಖಡ್ಕಿ ಬುಡ್ರುಕ್ ಗ್ರಾಮದ ನಾಮದೇವ್ ಭಂಗ್ರೆ ಹೇಳಿದರು. ಅವರು ಕೋಲಿ ಮಹಾದೇವ್ ಸಮುದಾಯದವರು, ಮತ್ತು ಅವರು ಮತ್ತು ಅವರ ಪತ್ನಿ ಸುಧಾ ತಮ್ಮ ಆರು ಸದಸ್ಯರ ಕುಟುಂಬಕ್ಕಾಗಿ ಎರಡು ಎಕರೆ ಭೂಮಿಯಲ್ಲಿ ಮುಖ್ಯವಾಗಿ ಸಜ್ಜೆ ಬೆಳೆಯುತ್ತಾರೆ.
"ಲಾಕ್ ಡೌನ್ ಸಮಯದಲ್ಲಿ, ಅಗತ್ಯವಿರುವ ಮತ್ತು ಕೆಲಸವಿಲ್ಲದ ಜನರಿಗೆ ಉಚಿತ ಪಡಿತರವನ್ನು ವಿತರಿಸಲು ಸರ್ಕಾರಕ್ಕೆ ಸಾಧ್ಯವಾಯಿತು ಏಕೆಂದರೆ ಸರಕಾರದ ಬಳಿ ಸಾಕಷ್ಟು ಆಹಾರ ಧಾನ್ಯಗಳ ಸಂಗ್ರಹವಿತ್ತು. ಬಿಕ್ಕಟ್ಟಿನ ಸಂದರ್ಭದಲ್ಲಿ ಖಾಸಗಿ ಶೇಖರಣೆ ಈ ಆಹಾರ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು” ಎಂದು 35 ವರ್ಷದ ನಾಮದೇವ್ ಹೇಳಿದರು. ಅಂತಹ ಪರಿಸ್ಥಿತಿಯಲ್ಲಿ, ಆಹಾರ ಧಾನ್ಯಗಳನ್ನು ಮಾರುಕಟ್ಟೆಯಿಂದ ಖರೀದಿಸಲು ಸರ್ಕಾರ ಹೆಣಗಾಡಬೇಕಾಗುತ್ತದೆನ್ನುವುದು ಅವರ ಭಾವನೆ.
ದೇಶದಾದ್ಯಂತದ ರೈತರು ವಿರೋಧಿಸುತ್ತಿರುವ ಕಾನೂನುಗಳ ಬಗ್ಗೆ ಭಂಗ್ರೆ ಅವರಿಗೆ ಚೆನ್ನಾಗಿ ತಿಳಿದಿದೆ. ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ಕಾಯ್ದೆಯನ್ನು ಉಲ್ಲೇಖಿಸಿ, ಈ ಕಾಯಿದೆಯು ಕೃಷಿಯಲ್ಲಿ ಮುಕ್ತ ಮಾರುಕಟ್ಟೆ ವ್ಯಾಪಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಆದಾಗ್ಯೂ, ಸರ್ಕಾರವು ರೈತರಿಗೆ ಕನಿಷ್ಠ ಖಾತರಿ ಬೆಂಬಲ ಬೆಲೆಗಳು (ಎಮ್‌ಎಸ್‌ಪಿ), ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳು (ಎಪಿಎಮ್‌ಸಿ) ಮತ್ತು ಆಹಾರ ಧಾನ್ಯಗಳ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ.
"ರೈತರು ನಿಗಮದ ಬದಲು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ದರದಲ್ಲಿ ಧಾನ್ಯವನ್ನು ಮಾರಾಟ ಮಾಡಿದರೆ, ಬಡ ರೈತರು, ಕಾರ್ಮಿಕರು, ವೃದ್ಧರು ಅಥವಾ ಕೆಲವು ವಿಕಲಚೇತನರು ಎಲ್ಲಿ ಆಹಾರ ಧಾನ್ಯವನ್ನು ಖರೀದಿಸಬೇಕು?" ಎಂದು ನಾಮದೇವ್ ಕೇಳುತ್ತಾರೆ. ರಾಷ್ಟ್ರೀಯ ಆಹಾರ ನಿಗಮ (ಎನ್‌ಎಫ್‌ಸಿ) ಎಂಬುದು ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಗೆ ಆಹಾರ ಧಾನ್ಯಗಳನ್ನು ಖರೀದಿಸುವ ಮತ್ತು ವಿತರಿಸುವ ಶಾಸನಬದ್ಧ ಸಂಸ್ಥೆಯಾಗಿದೆ.) "ಕಾರ್ಪೊರೇಟ್‌ಗಳು ಅವುಗಳನ್ನು ಉಚಿತವಾಗಿ ನೀಡುತ್ತವೆಯೇ?"
ಅಕೋಲೆ ತಾಲ್ಲೂಕಿನ ದಿಗಂಬರ್ ಗ್ರಾಮದ ಭಾಗುಬಾಯಿ ಮೆಂಗಲ್ ಅವರಿಗೆ, ಕನಿಷ್ಠ ಖಾತರಿಯ ವಿಷಯವು ಹೆಚ್ಚು ಮುಖ್ಯವಾದುದಾಗಿದೆ - ಇದೇ ವಿಷಯವನ್ನು ದೇಶಾದ್ಯಂತ ಅಸಂಖ್ಯಾತ ರೈತರು ಸಹ ಇದೇ ವಿಷಯವನ್ನು ಆಗ್ರಹಿಸುತ್ತಿದ್ದಾರೆ ಮತ್ತು ರಾಷ್ಟ್ರೀಯ ರೈತ ಆಯೋಗ (ಸ್ವಾಮಿನಾಥನ್ ಆಯೋಗ) ಕೂಡ ಶಿಫಾರಸು ಮಾಡಿದೆ. “ನಾವು ನಮ್ಮ ಟೊಮೆಟೊ ಅಥವಾ ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡು ಹೋಗುತ್ತೇವೆ. ಅಲ್ಲಿ ವ್ಯಾಪಾರಿ 25 ಕೆಜಿ ಕ್ರೇಟ್‌ಗೆ 60 ರೂ. ಪಾವತಿಸುತ್ತಾನೆ” ಎಂದು 67 ವರ್ಷದ ಭಾಗುಬಾಯಿ ಹೇಳುತ್ತಾರೆ. ಅವರ ನಿರೀಕ್ಷೆಯಂತೆ ಅಂತಹ ಸರಕುಗಳಿಗೆ ಕನಿಷ್ಠ 500 ರೂ ಬರಬೇಕು. "ಸಾರಿಗೆ ವೆಚ್ಚವನ್ನು ಕಡಿತಗೊಳಿಸಿದ ನಂತರ, ನಮ್ಮ ಪಾಲಿಗೆ ಏನೂ ಉಳಿಯುವುದಿಲ್ಲ."
ಭಾಗುಬಾಯಿ ನಾಲ್ಕು ಎಕರೆ ಭೂಮಿಯಲ್ಲಿ ಟೊಮ್ಯಾಟೊ, ಸಜ್ಜೆ ಮತ್ತು ಭತ್ತವನ್ನು ಬೆಳೆಯುತ್ತಾರೆ. "ನಾವು ಬೇಸಾಯ ಮಾಡುವುದು ಅರಣ್ಯ ಭೂಮಿ, ಆದರೆ ನಾವು ಅದರಲ್ಲಿ ಬಹಳ ಸಮಯದಿಂದ ಕೃಷಿ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು. “ನಮ್ಮ ಭೂಮಿಯನ್ನು ಹೊಂದುವ ಹಕ್ಕನ್ನು ಸರ್ಕಾರ ನಮಗೆ ನೀಡುತ್ತಿಲ್ಲ. ಮತ್ತು ಅದರ ಮೇಲೆ ಅವರು ಇಂತಹ ಕೃಷಿ ವಿರೋಧಿ ಕಾನೂನುಗಳನ್ನು ಏಕೆ ತರುತ್ತಿದ್ದಾರೆ?" ಭಾಗುಬಾಯಿ ಬಹಳ ಆಕ್ರೋಶದಿಂದ ಕೇಳಿದರು.
ಕೃಷಿ ವ್ಯವಹಾರ ಮತ್ತು ಗುತ್ತಿಗೆ ಕೃಷಿಯ ದುಷ್ಪರಿಣಾಮಗಳ ಬಗ್ಗೆ ಅಹಮದಾಬಾದ್ ರೈತರಿಗೆ ತಿಳಿದಿದೆ, ಇದು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ಜಾರಿಯೊಂದಿಗೆ ವ್ಯಾಪಕವಾಗಿ ಎಲ್ಲೆಡೆಗೂ ಹರಡುತ್ತದೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಂತೆ, ಮಹಾರಾಷ್ಟ್ರದ ರೈತರು ಸಹ ಈ ಹೊಸ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ಹಾನಿಕಾರಕವೆನ್ನುವ ಅಭಿಪ್ರಾಯನ್ನು ಹೊಂದಿದ್ದಾರೆ ಏಕೆಂದರೆ ಅವು ದೊಡ್ಡ ಸಂಸ್ಥೆಗಳಿಗೆ ರೈತರು ಮತ್ತು ಕೃಷಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ.
ಏಕನಾಥ ಪೆಂಗಲ್ ಅಂತಹ ಕೃಷಿ ವ್ಯವಸ್ಥೆಯನ್ನು ಇದುವರೆಗೆ ಪರಿಗಣಿಸಿಲ್ಲವಾದರೂ, ಅವರ ತಾಲ್ಲೂಕು, ಅಕೋಲಾ ಮತ್ತು ನೆರೆಯ ಪ್ರದೇಶಗಳಲ್ಲಿ ರೈತರು ತೊಂದರೆಗೊಳಗಾದ ನಿದರ್ಶನಗಳನ್ನು ಅವರು ಕೇಳಿದ್ದಾರೆ. “ಕಾರ್ಪೊರೇಟ್ ಕಂಪನಿಗಳು ಈಗಾಗಲೇ ನಮ್ಮ ಗ್ರಾಮಗಳಿಗೆ ಪ್ರವೇಶಿಸಿವೆ. ಇವು ಹೆಚ್ಚಿನ ಬೆಲೆ ನೀಡುವುದಾಗಿ ಆಮಿಷವೊಡ್ಡಿ ಅವರನ್ನು [ರೈತರನ್ನು] ಆಕರ್ಷಿಸಿ, ನಂತರ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳುವ ಮೂಲಕ ಕೊನೆಯ ಕ್ಷಣದಲ್ಲಿ ಉತ್ಪನ್ನಗಳನ್ನು ತಿರಸ್ಕರಿಸುತ್ತಾರೆ."
ಸಮಷೆರ್‌ಪುರ ಗ್ರಾಮದ 45 ವರ್ಷದ ರೈತ ಏಕನಾಥ್ ಖಾರೀಫ್ ಋತುವಿನಲ್ಲಿ ಐದು ಎಕರೆ ಅರಣ್ಯ ಭೂಮಿಯಲ್ಲಿ ಸಜ್ಜೆ ಮತ್ತು ಭತ್ತವನ್ನು ಬೆಳೆಯುತ್ತಾರೆ ಮತ್ತು ನವೆಂಬರ್‌ನಿಂದ ಮೇ ತನಕ ಇತರರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. "ಲಾಕ್ ಡೌನ್ ಸಮಯದಲ್ಲಿ, ಕಂಪನಿಯು ನಮ್ಮ ಗ್ರಾಮದಲ್ಲಿ ತರಕಾರಿ ಬೀಜಗಳು ಮತ್ತು ಹೂಬಿಡುವ ಸಸ್ಯಗಳನ್ನು ವಿತರಿಸಿತ್ತು" ಎಂದು ಅವರು ಹೇಳಿದರು. “ಕಂಪನಿಯು ದೊಡ್ಡ ಮಟ್ಟದಲ್ಲಿ ಸಸಿಗಳನ್ನು ನೆಡಲು ರೈತರನ್ನು ಕೇಳಿತು. ಬೆಳೆ ಸಿದ್ಧವಾದಾಗ, ಕಂಪನಿಯು ನಿಮ್ಮ ಮೆಣಸಿನಕಾಯಿ ಮತ್ತು ಎಲೆಕೋಸು ಮತ್ತು ಹೂಕೋಸುಗಳನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ [ಪಾವತಿಸಲು] ಬಹಿರಂಗವಾಗಿ ನಿರಾಕರಿಸಿತು. ರೈತರು ತಮ್ಮ ಉತ್ಪನ್ನಗಳನ್ನು ಎಸೆಯಬೇಕಾಯಿತು."
ಅನುವಾದ - ಶಂಕರ ಎನ್. ಕೆಂಚನೂರು