ಅನಂತಪುರದಲ್ಲಿನ ರೆಕ್ಸಿನ್ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ ಕೂಡಿದ ಬೀದಿಯು ಆಂಧ್ರ ಪ್ರದೇಶದ ರಾಜಕೀಯದ ಕುರಿತು ಹಲವಾರು ಸುದ್ದಿ ಕೋಣೆಗಳಲ್ಲಿ ಕುಳಿತುಕೊಳ್ಳುವ ಪಂಡಿತರಿಗಿಂತಲೂ ಹೆಚ್ಚು ನಿಖರವಾದ ಒಳನೋಟವನ್ನು ನೀಡುತ್ತದೆ. ಅನಂತಪುರದ ಅನೇಕ ಸಾರ್ವಜನಿಕ ಬುದ್ಧಿಜೀವಿಗಳು ಕಳೆದ ಚುನಾವಣೆಯಲ್ಲಿ ಜಗನ್ಮೋಹನ್ ರೆಡ್ಡಿ ಗೆದ್ದಿದ್ದನ್ನು ನೋಡಿ ಆಶ್ಚರ್ಯಚಕಿತರಾದರು, ಆದರೆ ರೆಕ್ಸಿನ್ ಅಂಗಡಿಗಳಿರುವ ಈ ಪ್ರದೇಶವು ಅದನ್ನು ಮೊದಲೇ ಊಹಿಸಿತ್ತು. "ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ನಾವು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುದ್ರೆಯನ್ನು ಹೊಂದಿರುವ ಹೆಚ್ಚು ಹೆಚ್ಚು ಬೈಕ್‌ನ ಬದಿ ಚೀಲಗಳನ್ನು ಹೊಲಿಯಲು ಆರಂಭಿಸಿದ್ದೆವು" ಎಂದು ರೆಕ್ಸಿನ್ ಅಂಗಡಿ ಮಾಲೀಕ ಡಿ. ನಾರಾಯಣಸ್ವಾಮಿ ಹೇಳುತ್ತಾರೆ.

ಈ ಬೈಕಿನ ಬದಿಚೀಲ (saddlebag) ಹೊಲಿದು ಕೊಡುವ ವ್ಯಾಪಾರಸ್ಥರ ಗುಂಪು ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ಲಬಹುದೆಂದು ಸರಿಯಾಗಿ ಊಹಿಸಿತ್ತು. ವೈಎಸ್‌ಆರ್‌ ಪಕ್ಷದ ಬ್ಯಾಗ್‌ಗಳಿಗೆ ಬಂದ ಭಾರೀ ಬೇಡಿಕೆ 2019ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಮುನ್ಸೂಚನೆಯನ್ನು ನೀಡಿತ್ತು.

1990 ರ ದಶಕದಲ್ಲಿ, ಈ ಅಂಗಡಿಗಳು ಅಗ್ಗದ ಮತ್ತು ಗಟ್ಟಿಮುಟ್ಟಾದ ಶಾಲಾ ಬ್ಯಾಗ್‌ಗಳನ್ನು ಪ್ರತ್ಯೇಕವಾಗಿ ಹೊಲಿದವು. ನಾನೇ ಅವರಿಂದ ಒಂದು ಬ್ಯಾಗ್ ಅಥವಾ ಎರಡು ಖರೀದಿಸಿದ್ದೆ. ಈ ದಶಕ ಕಳೆದಂತೆ, ಶೂ ಮಳಿಗೆಗಳು ಶಾಲಾ ಬ್ಯಾಗ್‌ಗಳನ್ನು ಖರೀದಿಸಲು ಹೆಚ್ಚು ಜನಪ್ರಿಯವಾದ ಸ್ಥಳವಾಯಿತು. ಮತ್ತು ರೆಕ್ಸಿನ್ ಅಂಗಡಿಗಳು ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳ ಫೋಟೊಗಳೊಂದಿಗೆ ಮೋಟಾರ್ ಬೈಕ್‌ಗಳಿಗಾಗಿ ತಡಿ ಚೀಲಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದವು; ಅಲ್ಲದೆ, ಮೋಟಾರ್ ಸೈಕಲ್-ಆಟೋರಿಕ್ಷಾ-ಸೋಫಾಗಳಿಗೆ ಸೀಟ್ ಕವರ್‌ಗಳು ಮತ್ತು ಕಾರ್ ಕವರ್‌ಗಳನ್ನು ಸಹ ಮಾರಾಟ ಮಾಡಲಾಗುತ್ತಿತ್ತು. ರಾಜಕೀಯ ಡಿಸೈನರ್ ಬ್ಯಾಗ್‌ಗಳ ಮಾರಾಟವು 2019ರ ಚುನಾವಣೆಯ ವೇಳೆಗೆ ವೇಗ ಪಡೆಯಲು ಪ್ರಾರಂಭಿಸಿತು. ಹಿಂದಿನ ಸರ್ಕಾರದ ಲಾಭವನ್ನು ಪಡೆದ ತೆಲುಗು ದೇಶಂ ಪಕ್ಷದ ಮತದಾರರೊಬ್ಬರು 2019ರಲ್ಲಿ ನನಗೆ ಹೇಳಿದ್ದರು: “ನಾವು  ಉಪವಾಸವಿರಬೇಕಾಗಿ ಬಂದರೂ ಸರಿಯೇ ನಾವು ನಮ್ಮ ಪಕ್ಷದ ಧ್ವಜದೊಂದಿಗೆ ಸುತ್ತಾಡುತ್ತೇವೆ. ನಮಗೆ ಬೇರೆ ಆಯ್ಕೆಯಿಲ್ಲ." ಅವರು ಓಡಾಡುತ್ತಿದ್ದ ಬೈಕಿನ ಬದಿಯಲ್ಲಿದ್ದ ತೂಗು ಚೀಲದಲ್ಲಿ ಟಿಡಿಪಿ ಪಕ್ಷದ ಚಿತ್ರಗಳಿದ್ದುದು ನನಗೆ ನೆನಪಿದೆ.

Outside a rexine shop, motorbike saddlebags with pictures of film stars and politicians
PHOTO • Rahul M.
Outside a rexine shop, motorbike saddlebags with pictures of film stars and politicians
PHOTO • Rahul M.

ರೆಕ್ಸಿನ್ ಅಂಗಡಿಯ ಹೊರಗೆ, ಚಲನಚಿತ್ರ ತಾರೆಯರು ಮತ್ತು ರಾಜಕಾರಣಿಗಳ ಚಿತ್ರಗಳನ್ನು ಹೊಂದಿರುವ ಮೋಟಾರ್ ಬೈಕ್ ಬದಿ ಚೀಲಗಳು

ಸಾಂಕ್ರಾಮಿಕ ಪಿಡುಗು ಉಲ್ಬಣಗೊಳ್ಳುತ್ತಿದ್ದಂತೆ, ಜನರು ತಮ್ಮ ರಾಜಕೀಯವನ್ನು (ಮತ್ತು ರಾಜಕಾರಣಿಗಳನ್ನು) ತಮ್ಮ ಬೈಕ್‌ಗಳಲ್ಲಿ ʼತಿರುಗಾಡಿಸುವʼ ಆಸಕ್ತಿಯನ್ನು ಕಳೆದುಕೊಂಡರು. ಮೊದಲು, ರೆಕ್ಸಿನ್ ಅಂಗಡಿ ಮುಂಗಟ್ಟುಗಳು ಸಾಮಾನ್ಯವಾಗಿ ರಾಜಕೀಯ ಸಂದೇಶಗಳು ಮತ್ತು ಮುಖಗಳೊಂದಿಗೆ ಬದಿ ಚೀಲಗಳನ್ನು ಪ್ರದರ್ಶಿಸುತ್ತಿದ್ದವು. ಈಗ ಅವರು ಸಾಮಾನ್ಯ ವಿನ್ಯಾಸಗಳಿಂದ ಅಲಂಕೃತವಾದ ಅಥವಾ ಪ್ರಸಿದ್ಧ ಕಂಪನಿಗಳ ಲೋಗೊಗಳು ಇರುವ ಚೀಲಗಳನ್ನು ಪ್ರದರ್ಶಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳಿಗೆ ನಿರಂತರವಾಗಿ ಕುಸಿಯುತ್ತಿರುವ ಬೇಡಿಕೆಯೂ ಇದಕ್ಕೆ ಕಾರಣವಾಗಿರಬಹುದು, ಏಕೆಂದರೆ ಜನರು ಪ್ರಸ್ತುತ ಉದ್ಯೋಗ ಬಿಕ್ಕಟ್ಟು ಮತ್ತು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ.

ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಪೊಲೀಸರ ಉಪಸ್ಥಿತಿಯಿಂದಾಗಿ ಜನರು ತಮ್ಮ ಆಯ್ಕೆಗಳನ್ನು ಹೊರಗೆ ತೋರಿಸಿಕೊಳ್ಳಲು ಹಿಂಜರಿಯುತ್ತಿರಬಹುದು. ನಾರಾಯಣಸ್ವಾಮಿ ಹೇಳುತ್ತಾರೆ, "ಯಾವುದೋ ಕಾರಣಕ್ಕಾಗಿ ಪೊಲೀಸರು ನಿಮ್ಮ ಬೈಕ್ ಅಡ್ಡಗಟ್ಟಿದಾಗ ಒಂದು ವೇಳೆ ನೀವು ಬೇರೆ ಪಕ್ಷದವರಾಗಿದ್ದರೆ [ಪೋಲಿಸರ ಪಕ್ಷಕ್ಕಿಂತ], ನೀವು ತೊಂದರೆಗೆ ಸಿಲುಕಬಹುದು."

ಅನುವಾದ: ಶಂಕರ ಎನ್. ಕೆಂಚನೂರು

Rahul M.

ఆంధ్రప్రదేశ్ రాష్ట్రంలో అనంతపూర్ నగరంలో ఉండే రాహుల్ ఎం. ఒక స్వచ్చంధ పాత్రికేయుడు. ఇతను 2017 PARI ఫెలో.

Other stories by Rahul M.
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

Other stories by Shankar N. Kenchanuru