“ಬಜೆಟ್ಟಿನಲ್ಲಿ ದೊಡ್ಡ ದೊಡ್ಡ ಮೊತ್ತದ ಕುರಿತು ಮಾತನಾಡಲಾಗುತ್ತದೆ. ಆದರೆ ಸರ್ಕಾರದ ಪ್ರಕಾರ ಒಬ್ಬ ನಾಗರಿಕನಾಗಿ ನನ್ನ ಮೌಲ್ಯ ಶೂನ್ಯ!”
ಚಾಂದ್ ರತನ್ ಹಲ್ದಾರ್ ಅವರ ಬಳಿ 'ಸರ್ಕಾರದ ಬಜೆಟ್' ಕುರಿತು ಪ್ರಶ್ನೆಯನ್ನು ಕೇಳಿದಾಗ, ಅವರು ತಮ್ಮ ಆಂತರಿಕ ಕಹಿಯನ್ನು ಮರೆಮಾಚಲು ಪ್ರಯತ್ನಿಸಲಿಲ್ಲ. "ಯಾವ ಬಜೆಟ್? ಯಾರ ಬಜೆಟ್? ಇದೆಲ್ಲವೂ ನಿಮ್ಮನ್ನು ಮೂರ್ಖರನ್ನಾಗಿಸುವ ಯತ್ನ ಮಾತ್ರ!" ಎಂದು ಕೋಲ್ಕತ್ತಾದ ಜಾದವಪುರದಲ್ಲಿ ಸೈಕಲ್ ರಿಕ್ಷಾ ಚಾಲಕನಾಗಿ ಕೆಲಸ ಮಾಡುವ 53 ವರ್ಷದ ಚಂದು ದಾ ಹೇಳುತ್ತಾರೆ.
"ಇಷ್ಟೊಂದು ಬಜೆಟ್‌ಗಳು ಬಂದವು, ಹಲವು ಯೋಜನೆಗಳನ್ನು ತರಲಾಯಿತು, ಆದರೆ ನಮಗೆ ದೀದಿ [ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ] ಅಥವಾ [ಪ್ರಧಾನಿ] ಮೋದಿ ಅವರಿಂದ ಒಂದು ಮನೆ ಸಿಗಲಿಲ್ಲ. ನಾನು ಈಗಲೂ ಟಾರ್ಪಾಲಿನ್ ಮತ್ತು ಬಿದಿರಿನ ಕೋಲು ಬಳಸಿ ಕಟ್ಟಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ, ಅದು ಸಹ ಸುಮಾರು ಒಂದು ಅಡಿ ನೆಲದಡಿ ಮುಳುಗಿದೆ" ಎಂದು ಚಂದು ದಾ ಹೇಳುತ್ತಾರೆ. ಸರ್ಕಾರಿ ಬಜೆಟ್ ಬಗ್ಗೆ ಅವರ ನಿರೀಕ್ಷೆಗಳು ಮತ್ತಷ್ಟು ಕುಸಿದಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಚಂದು ದಾ ಪಶ್ಚಿಮ ಬಂಗಾಳದ ಸುಭಾಷ್ ಗ್ರಾಮ್ ಪ್ರದೇಶದ ನಿವಾಸಿಯಾಗಿದ್ದು, ಭೂರಹಿತ ಕಾರ್ಮಿಕ. ಅವರು ಮುಂಜಾನೆ ಸೀಲ್ಡಾದಿಂದ ಜಾದವಪುರಕ್ಕೆ ಬರಲು ಸ್ಥಳೀಯ ರೈಲನ್ನು ಹತ್ತುತ್ತಾರೆ ಮತ್ತು ಸಂಜೆಯವರೆಗೂ ಕೆಲಸ ಮಾಡುತ್ತಾರೆ. ಅದರ ನಂತರವೇ ಅವರು ಮನೆಗೆ ಮರಳುವುದು. "ನಮ್ಮ ಸ್ಥಳೀಯ ರೈಲುಗಳಂತೆ ಬಜೆಟ್ಟುಗಳು ಬರುತ್ತವೆ ಮತ್ತು ಕಣ್ಮರೆಯಾಗುತ್ತವೆ. ನಗರಕ್ಕೆ ಪ್ರಯಾಣಿಸುವುದು ಈಗ ತುಂಬಾ ಕಷ್ಟ. ನಮ್ಮ ಖಾಲಿ ಹೊಟ್ಟೆಯನ್ನು ಒದೆಯುವ ಬಜೆಟ್ಟಿಗೆ ಯಾವ ಅರ್ಥವಿದೆ?" ಎಂದು ಅವರು ಕೇಳುತ್ತಾರೆ.
![](/media/images/02-IMG154534-SK-Whose_budget_is_it_anyway.max-1400x1120.jpg)
![](/media/images/03-IMG155936-SK-Whose_budget_is_it_anyway.max-1400x1120.jpg)
ಎಡ : ಪಶ್ಚಿಮ ಬಂಗಾಳದ ಸುಭಾಷ್ ಗ್ರಾಮ್ ಪಟ್ಟಣದ ನಿವಾಸಿ ಚಾಂದ್ ರತನ್ ಹಲ್ದಾರ್, ಸೈಕಲ್ ರಿಕ್ಷಾ ಓಡಿಸುವ ಕೆಲಸಕ್ಕಾಗಿ ಪ್ರತಿದಿನ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಾರೆ. ಅವರು ಹೇಳುತ್ತಾರೆ, 'ನಮ್ಮ ಸ್ಥಳೀಯ ರೈಲುಗಳಂತೆ ಜೊತೆಗೆ ಬಜೆಟ್ಟುಗಳು ಬರುತ್ತವೆ ಮತ್ತು ಹೋಗುತ್ತವೆ. ನಗರಕ್ಕೆ ಬರುವುದು ಈಗ ತುಂಬಾ ಕಷ್ಟ'. ಬಲ: ಗೆಡ್ಡೆ ಬೆಳೆದಿರುವ ತನ್ನ ಕಾಲನ್ನು ಅವರು ತೋರಿಸುತ್ತಾರೆ
ಜಾದವ್ಪುರ ವಿಶ್ವವಿದ್ಯಾಲಯದ ಗೇಟ್ ಸಂಖ್ಯೆ 4ರ ಬಳಿ ಸೈಕಲ್ ರಿಕ್ಷಾ ಓಡಿಸುವ ಅವರನ್ನು ಸುತ್ತಮುತ್ತಲಿನ ಜನರು ಚಂದು ದಾ ಎಂಬ ಹೆಸರಿನಿಂದ ಕರೆಯುತ್ತಾರೆ, ಅಲ್ಲಿ ಅವರು ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಒಂದು ಕಾಲದಲ್ಲಿ ಈ ನಿಲ್ದಾಣದಲ್ಲಿ 20 ರಿಕ್ಷಾಗಳು ಸಾಲುಗಟ್ಟಿ ನಿಂತು ಗ್ರಾಹಕರಿಗಾಗಿ ಕಾಯುತ್ತಿದ್ದವು. ಈಗ ಅವುಗಳ ಸಂಖ್ಯೆ ಮೂರಕ್ಕೆ ಇಳಿದಿದೆ. ಪ್ರಸ್ತುತ ಅವರ ದೈನಂದಿನ ಸಂಪಾದನೆ 300ರಿಂದ 500 ರೂಪಾಯಿಗಳ ನಡುವೆ ಇರುತ್ತದೆ.
“ನಾನು ಕಳೆದ ನಾಲ್ಕು ದಶಕಗಳಿಂದ ದುಡಿಯುತ್ತಿದ್ದೇನೆ. ನನ್ನ ಹೆಂಡತಿ ಯಾರದೋ ಮನೆಯಲ್ಲಿ ದುಡಿಯುತ್ತಾಳೆ. ನಾವು ನಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಹಳ ಕಷ್ಟಪಟ್ಟು ಮದುವೆ ಮಾಡಿ ಕೊಟ್ಟಿದ್ದೇವೆ. ಇಂದಿಗೂ ಯಾವುದೇ ತಪ್ಪು ಮಾಡಿಲ್ಲ. ಒಂದು ಪೈಸೆಯನ್ನೂ ಕದ್ದಿಲ್ಲ ಅಥವಾ ಯಾವುದೇ ವಂಚನೆ ಮಾಡಿಲ್ಲ. ಈಗಲೂ ನಮಗೆ ಎರಡು ಹೊತ್ತಿನ ಊಟವನ್ನು ಸಂಪಾದಿಸಿಕೊಳ್ಳಲು ಕಷ್ಟವಾಗುತ್ತದೆ. 7,10 ಅಥವಾ 12 ಲಕ್ಷ ರೂಪಾಯಿಗಳ ಈ ಮಾತುಗಳಿಗೆ ನಮ್ಮ ಬದುಕಿನಲ್ಲಿ ಏನಾದರೂ ಅರ್ಥವಿದೆ ಎಂದು ನಿಮಗೆ ಅನ್ನಿಸುತ್ತದೆಯೇ? ಎಂದು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಉಲ್ಲೇಖಿಸಿ ಅವರು ಕೇಳುತ್ತಾರೆ.
"ದೊಡ್ಡ ಮೊತ್ತದ ಹಣವನ್ನು ಗಳಿಸುವ ಜನರಿಗೆ ಬಜೆಟ್ಟಿನಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ವ್ಯವಹಾರದ ಹೆಸರಿನಲ್ಲಿ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆದು ವಿದೇಶಕ್ಕೆ ಪಲಾಯನ ಮಾಡುವವರನ್ನು ಸರ್ಕಾರ ಏನೂ ಮಾಡುವುದಿಲ್ಲ. ಆದರೆ, ನನ್ನಂತಹ ಬಡ ರಿಕ್ಷಾ ಚಾಲಕರು ಅಪ್ಪಿ ತಪ್ಪಿ ನೋ ಎಂಟ್ರಿ ಇರುವ ರಸ್ತೆಯಲ್ಲಿ ಸಿಕ್ಕಿಬಿದ್ದರೆ, ಅವರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪೊಲೀಸರಿಗೆ ಲಂಚ ನೀಡದಿದ್ದರೆ ನಮಗೆ ಕಿರುಕುಳ ನೀಡಲಾಗುತ್ತದೆ" ಎಂದು ಅವರು ಪರಿಗೆ ತಿಳಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಕೊಡುಗೆಗಳ ಬಗ್ಗೆ ಕೇಳಿದಾಗ ಚಂದು ದಾ, ತಮ್ಮಂತಹ ಜನರು ಸಣ್ಣ ಚಿಕಿತ್ಸೆಗಳಿಗೆ ಸಹ ದಿನವಿಡೀ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳುತ್ತಾರೆ. “ನಾನು ಆಸ್ಪತ್ರೆಗೆ ಹೋಗಲು ಒಂದು ದಿನದ ದುಡಿಮೆಯನ್ನು ಬಿಡಬೇಕಾಗಿ ಬರುತ್ತದೆ. ಹೀಗಿರುವಾಗ ಅಗ್ಗದ ಔಷಧಿಗಳಿಂದ ನಮಗೆ ಏನು ಪ್ರಯೋಜನವಾಗುತ್ತದೆ ಹೇಳಿ?” ಎಂದು ಕೇಳಿದ ಅವರು, ತನ್ನ ಕಾಲಿನಲ್ಲಿನ ಗಡ್ಡೆಯೊಂದನ್ನು ತೋರಿಸುತ್ತಾ, “ಇದರಿಂದಾಗಿ ನಾನು ಇನ್ನೂ ಎಷ್ಟು ಕಷ್ಟಗಳನ್ನು ಅನುಭವಿಸಬೇಕಿದೆಯೋ ಗೊತ್ತಿಲ್ಲ” ಎಂದು ನೋವಿನ ಭಾವದಲ್ಲಿ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು