“ನನಗೆ ಓದುವಷ್ಟು ತಾಳ್ಮೆಯಿಲ್ಲ” ಎನ್ನುತ್ತಾನೆ ಪಾರ್ಥ ಪ್ರತಿಮ್ ಬರುವಾ. ನವೆಂಬರ್ ತಿಂಗಳ ಒಂದು ಆಹ್ಲಾದಕರ ಮಧ್ಯಾಹ್ನ ಅವನು ಮಜುಲಿಯ ಸಣ್ಣ ಪಟ್ಟಣವಾದ ಗರಮುರ್ ಎನ್ನುವಲ್ಲಿ ಓಡಾಡುತ್ತಾ ಮಾತನಾಡುತ್ತಿದ್ದನು. “ಓದಿ ಕೆಲಸ ಪಡೆಯುವುದು ನನ್ನಿಂದ ಸಾಧ್ಯವಿಲ್ಲವೆನ್ನುವುದು ನನಗೆ ತಿಳಿದಿದೆ” ಎಂದು ಅವನು ಹೇಳುತ್ತಾನೆ. 16 ವರ್ಷದ ಈ ಬಾಲಕ ಜಿಲ್ಲೆಯ ಗರಮೂರ್ ಸರು ಸತ್ರದ ಯುವ ಗಾಯನ್-ಬಯಾನ್ ಕಲಾವಿದರಲ್ಲಿ ಒಬ್ಬ.
ಸತ್ರಿಯಾ ಸಂಸ್ಕೃತಿಯ ಒಂದು ಪ್ರಮುಖ ಅಂಶವಾದ ಗಾಯನ್-ಬಯಾನ್ ಧಾರ್ಮಿಕ ಜಾನಪದ ಪ್ರದರ್ಶನವಾಗಿದ್ದು, ಇದನ್ನು ಮುಖ್ಯವಾಗಿ ಅಸ್ಸಾಂನ ಸತ್ರಗಳಲ್ಲಿ (ವೈಷ್ಣವ ಮಠಗಳು) ಆಚರಿಸಲಾಗುತ್ತದೆ. ಪ್ರದರ್ಶನ ನೀಡುವ ಗಾಯಕರನ್ನು ಗಾಯನ್ ಎಂದು ಕರೆಯಲಾಗುತ್ತದೆ, ಅವರು ತಾಳ್ (ತಾಳ) ನುಡಿಸುತ್ತಾರೆ, ಆದರೆ ಖೋಲ್ ಡ್ರಮ್ಸ್ ಮತ್ತು ಕೊಳಲು ನುಡಿಸುವ ವಾದ್ಯ ವಾದಕರನ್ನು ಬಯಾನ್ ಎಂದು ಕರೆಯಲಾಗುತ್ತದೆ. ಮಜುಲಿಯಲ್ಲಿ, ಗಾಯನ್ ಅಥವಾ ಬಯಾನ್ ಎನ್ನುವುದು ಒಂದು ವೃತ್ತಿಯಲ್ಲ ಆದರೆ ಜನರು ಈ ಕುರಿತು ಹೆಮ್ಮೆ ಪಡುತ್ತಾರೆ ಮತ್ತು ಅದನ್ನು ತಮ್ಮ ಗುರುತಿನ ಭಾಗವೆಂದು ಪರಿಗಣಿಸುತ್ತಾರೆ.
“ಓದು ಮುಗಿಸಿದ ಮೇಲೆ ಕೆಲಸ ಪಡೆಯುವುದು ನನ್ನ ಹಣೆಬರಹದಲ್ಲಿ ಇಲ್ಲದಿದ್ದರೆ ಏನು ಮಾಡುವುದು?” ಎಂದು ಕೇಳುತ್ತಾನೆ ಪಾರ್ಥ. ಅವನಿಗೆ ಈಗಾಗಲೇ ಬದುಕಿನ ವಾಸ್ತವ ಅರ್ಥವಾಗಿದೆ. ತನ್ನ 12ನೇ ತರಗತಿಯ ಪರೀಕ್ಷೆ ಮುಗಿದ ನಂತರ ಅವನು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದಾನೆ. ಅವನ ಅಕ್ಕ ಈಗಾಗಲೇ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
"ನನ್ನ ಪೋಷಕರು ಸಹ [ಗುವಾಹಟಿಯ ಸಂಗೀತ ಶಾಲೆಗೆ ಸೇರುವ] ಯೋಚನೆಯನ್ನು ಬೆಂಬಲಿಸಿದ್ದಾರೆ" ಎಂದು ಅವನು ಹೇಳುತ್ತಾನೆ. "ಆ ಬೆಂಬಲ ಮುಖ್ಯ. ಅದು ಇಲ್ಲದೆ, ನಾನು ಸಂಗೀತ ಪಾಠವನ್ನು ಮುಂದುವರಿಸಲು ಹೇಗೆ ಸಾಧ್ಯವಾಗುತ್ತದೆ? ಅಕ್ಕಿ ಮತ್ತು ಉರುವಲು ಮಾರಾಟ ಮಾಡುವ ಸಣ್ಣ ವ್ಯವಹಾರದ ಮಾಲೀಕರಾದ ಅವನ ತಂದೆ ಈ ಆಲೋಚನೆಯನ್ನು ಒಪ್ಪಿಕೊಂಡಿದ್ದಾರೆ ಆದರೆ ಅವನ ತಾಯಿಗೆ ಈ ಬಗ್ಗೆ ಅಷ್ಟೇನೂ ಖುಷಿಯಿಲ್ಲ. ಪಾರ್ಥ ತನ್ನ ಕಲಿಕೆಗಾಗಿ ಮನೆಯಿಂದ ದೂರ ಹೋಗುವುದು ಅವರಿಗೆ ಇಷ್ಟವಿಲ್ಲ.
ಪ್ರದರ್ಶನದ ಸಮಯ ಬಂದಾಗ, ಪಾರ್ಥ್ ಹಳೆಯ ಬಿಳಿ ಕುರ್ತಾ, ಧೋತಿ ಮತ್ತು ತಲೆಗೆ ಪಾಗ್ ಎಂಬ ಟೋಪಿಯನ್ನು ಧರಿಸುತ್ತಾನೆ ಮತ್ತು ಅವನ ದೇಹಕ್ಕೆ ಸಲೆಂಗ್ ಎಂಬ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾನೆ. ಕಲಾವಿದರು ಮೋಟಮೋನಿ ಮುತ್ತುಗಳ ಹಾರಗಳನ್ನು ಸಹ ಧರಿಸುತ್ತಾರೆ ಮತ್ತು ಅವರ ಹಣೆಗೆ ಶ್ರೀಗಂಧದ ತಿಲಕವನ್ನು ಹಚ್ಚಲಾಗುತ್ತದೆ.
ಪ್ರದರ್ಶನಕ್ಕೆ ಹೋಗುವ ಮೊದಲು ನನಗೆ ಸಂದರ್ಶನ ನೀಡಿದ ಅನೇಕ ಯುವ ಪ್ರದರ್ಶಕರಲ್ಲಿ ಪಾರ್ಥ್ ಒಬ್ಬ. ವೇದಿಕೆಯ ಹಿಂದೆ ಪೇಟಗಳನ್ನು ಕಟ್ಟುವಾಗ ಆತ್ಮವಿಶ್ವಾಸದಿಂದ ಕಾಣುತ್ತಿದ್ದ ಮತ್ತು ಪಿನ್ ಬಳಸಿ ಸಲಾಂಗ್ ಸರಿಯಾಗಿ ಹಚ್ಚಲು ಸಹಾಯ ಮಾಡುತ್ತಿದ್ದ.
ಹತ್ತು ವರ್ಷ ದೊಡ್ಡವರಾದ ಮಾನಶ್ ದತ್ತಾ ಈ ಗುಂಪಿನಲ್ಲಿ ಬಯಾನ್ ಆಗಿದ್ದು, ಇತ್ತೀಚೆಗೆ ಗುವಾಹಟಿಯ ದೂರದರ್ಶನ ನೆಟ್ವರ್ಕ್ನಲ್ಲಿ ಕಿರಿಯ ಸಂಪಾದಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ಒಂಬತ್ತನೇ ವಯಸ್ಸಿನಲ್ಲಿ, ಅವರು ತಮ್ಮ ಚಿಕ್ಕಪ್ಪ ಮತ್ತು ಇತರ ಹಿರಿಯರೊಂದಿಗೆ ಇದನ್ನು ಕಲಿಯಲು ಪ್ರಾರಂಭಿಸಿದರು. "ನಾವು ಸತ್ರಿಯಾ ಪರಿಸರದಲ್ಲಿ ಜನಿಸಿರುವುದರಿಂದ, ಚಿಕ್ಕ ವಯಸ್ಸಿನಿಂದಲೇ ಕಲೆಯನ್ನು ನೋಡುವ ಮೂಲಕ ಕಲಿಯುತ್ತೇವೆ" ಎಂದು ಅವರು ಹೇಳುತ್ತಾರೆ, ಹೀಗಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಹಾಜರಾಗುವ ಮೊದಲೇ ಖೋಲ್ ಬಾರಿಸುವುದರಲ್ಲಿ ಸಂಗೀತ ತಜ್ಞರ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.
ಗಾಯನ್-ಬಯಾನ್ ಅವರ ಕುಟುಂಬದಲ್ಲಿ ರಕ್ತದಲ್ಲಿದೆ ಮತ್ತು ಅವರ ಮಾಮ ಇಂದ್ರನೀಲ್ ದತ್ತಾ ಗರಮೂರ್ ಸರು ಸತ್ರದ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. "ಅವರಿಗೆ ಈಗ ಸುಮಾರು 85 ವರ್ಷ. ಈಗಲೂ, ಯಾರಾದರೂ ಖೋಲ್ ನುಡಿಸಿದಾಗ, ನೃತ್ಯ ಮಾಡಲು ಆರಂಭಿಸಿಬಿಡುತ್ತಾರೆ."
ಗಯಾನ್-ಬಯಾನ್ ಪ್ರದರ್ಶನದ ಶೈಲಿಯು ತಾಳ, ಮಾನ್, ರಾಗ ಮತ್ತು ಮುದ್ರೆಗಳ ಸಂಖ್ಯೆ ಮತ್ತು ಪ್ರಕಾರಗಳ ಆಧಾರದ ಮೇಲೆ ಸತ್ರದಿಂದ ಸತ್ರಕ್ಕೆ ಭಿನ್ನವಾಗಿರುತ್ತದೆ. ಅಂತಹ ಒಂದು ರೂಪಾಂತರ - ಧುರಾ - ಗರಮೂರ್ ಸಾರು ಸತ್ರಾ ಮತ್ತು ಗರಮೂರ್ ಬೋರ್ ಸತ್ರದ ವಿಶಿಷ್ಟ ಪ್ರಕಾರವಾಗಿದೆ, ಅಲ್ಲಿ ಇದನ್ನು ವರ್ಷಕ್ಕೆ ಒಮ್ಮೆ ಮಾತ್ರ ಅಸ್ಸಾಮಿ ತಿಂಗಳ ಅಹಾರ್ ಮಾಸದಲ್ಲಿ ನಡೆಯುವ ವಾರ್ಷಿಕ ಸಮುದಾಯ ಉತ್ಸವವಾದ ಬೊರ್ಕ್ಸೊಬಾಹ್ ದಿನದಂದು ನಡೆಸಲಾಗುತ್ತದೆ, ಇದು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳುಗಳೊಂದಿಗೆ ಹೊಂದಿಕೆಯಾಗುತ್ತದೆ. ಇತರ ಎರಡು ಸಾಮಾನ್ಯ ರೂಪಾಂತರಗಳೆಂದರೆ ಬಾರ್ಪೇಟಾ ಸತ್ರದ ಬಾರ್ಪೆಟಿಯಾ ಮತ್ತು ಮಜುಲಿಯ ಕಮಲಾಬರಿ ಸತ್ರದ ಕಮಲಾಬರಿಯಾ. ಮಜುಲಿಯಲ್ಲಿರುವ ಹೆಚ್ಚಿನ ಸತ್ರಗಳು ಕಮಲಾಬರಿಯಾ ಶೈಲಿಯನ್ನು ಅನುಸರಿಸುತ್ತವೆ. ಪ್ರದರ್ಶಕರು ಜೀವನದ ಎಲ್ಲಾ ಹಂತಗಳಿಂದ ಬರುತ್ತಾರೆ.
ಗಾಯನ್ - ಬಯಾನ್ ನಂತರ ಸೂತ್ರಧಾರಿ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ಭಾವೊನಾ (ಸಾಂಪ್ರದಾಯಿಕ ಜಾನಪದ ನಾಟಕ) ಪ್ರಾರಂಭಿಸುವ ಮೊದಲು ಇದನ್ನು ಮಾಡಲಾಗುತ್ತದೆ. ಮಾನಸ್ ನನಗೆ ಹೇಳುತ್ತಾನೆ “ಅವರಿಲ್ಲದೆ ಯಾವುದೇ ಭಾವೊನಾ ಈಡೇರುವುದಿಲ್ಲ. ನಿರೂಪಕನು ಭಾವೊನಾ ಘಟನೆಯನ್ನು ವಿವರಿಸುತ್ತಾ ಕಥೆಯ ಸಾರವನ್ನು ಹೇಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಸೂತ್ರಧಾರಿಯನ್ನು ನಮ್ಮ ಮಾತೃಭಾಷೆ ಅಸ್ಸಾಮಿಯಲ್ಲಿ ನಿರೂಪಿಸಲಾಗುತ್ತದೆ, ಆದರೆ ಮೂಲತಃ ಭಾಷೆ ಬ್ರಜಾವಲಿ ಭಾಷೆಯಲ್ಲಿದೆ.
ʼಹೊರಗಿನ ಕೆಲವರು ಕಲಿಯಬೇಕಾದರೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ನಾವು ಈ ಪರಿಸರದಲ್ಲಿ ಜನಿಸಿರುವುದರಿಂದ ಮತ್ತು ಚಿಕ್ಕ ವಯಸ್ಸಿನಿಂದಲೂ [ಕಲೆ] ಗಮನಿಸಿರುವುದರಿಂದ, ಬೇಗ ಕಲಿಯುತ್ತೇವೆʼ
*****
ಮಕ್ಕಳು ಸುಮಾರು ಮೂರು ವರ್ಷ ವಯಸ್ಸಿನಿಂದಲೇ ಈ ಕಲೆಗೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾರೆ. ಮಜುಲಿಯ ಪ್ರಮುಖ ಹಬ್ಬವಾದ ರಾಸ್ ಸಮಯದಲ್ಲಿ ಒಂದು ದೀಕ್ಷೆಯ ಕಾರ್ಯಕ್ರಮ ನಡೆಯುತ್ತದೆ. ನಂತರ ಅಭ್ಯಾಸದ ಸಮಯದಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ಸಭಾಂಗಣಕ್ಕೆ ಹೋಗುತ್ತಾರೆ. ಓದಿ: ರಾಸ್ ಮಹೋತ್ಸವ ಮತ್ತು ಮಜುಲಿಯ ಸತ್ರಗಳು
ಗುಂಪಿನ ಇನ್ನೊಬ್ಬ ಸದಸ್ಯ ಮತ್ತು ಬಯಾನ್ 19 ವರ್ಷದ ಸುಭಾಶಿಶ್ ಬೋರಾ ಅವರ ಪ್ರಯಾಣವು 4ನೇ ತರಗತಿಯಲ್ಲಿದ್ದಾಗ ಪ್ರಾರಂಭವಾಯಿತು. ಮಾನಸ್ ಅವರ ಸಂಬಂಧಿಯಾದ ಸುಭಾಶಿಶ್ ಕೂಡ ತಮ್ಮ ಚಿಕ್ಕಪ್ಪಂದಿರನ್ನು ನೋಡಿ ಕಲಿತರು, ಅವರಲ್ಲಿ ಒಬ್ಬರು ಖಿರೋಡ್ ದತ್ತಾ ಬೋಡ್ ಬಯಾನ್. ಈ ಶೀರ್ಷಿಕೆಯನ್ನು ಪ್ರದರ್ಶನ ಪರವಾಗಿ ಪರಿಣಿತ ಬಯಾನ್‌ಗಳಿಗೆ ನೀಡಲಾಗುತ್ತದೆ.
ಆದಾಗ್ಯೂ, ಅವರು ರಾಸ್ ಉತ್ಸವದಲ್ಲಿ ನೃತ್ಯ ಮಾಡಿದ್ದರು ಮತ್ತು ಬಾಲ್ಯದಲ್ಲಿ ಬಾಲ ಕೃಷ್ಣನ ಪಾತ್ರವನ್ನು ಸಹ ನಿರ್ವಹಿಸಿದ್ದರು. ಸುಭಾಶಿಶ್ ಸುಮಾರು 10 ಇತರ ಹುಡುಗರು ಮತ್ತು ಹುಡುಗಿಯರೊಂದಿಗೆ ಶಾಲೆಯಲ್ಲಿ ಸಂಗೀತವನ್ನು ಕಲಿತಿದ್ದರು. 1979ರಲ್ಲಿ ಸ್ಥಾಪನೆಯಾದ ಶ್ರೀ ಶ್ರೀ ಪೀತಾಂಬರದೇವ್ ಸಾಂಸ್ಕೃತಿಕ ಕಾಲೇಜು ಕಾಲಕಾಲಕ್ಕೆ ಮುಚ್ಚಲ್ಪಡುತ್ತದೆ. 2015ರಲ್ಲಿ, ಶಿಕ್ಷಕರ ಕೊರತೆಯಿಂದಾಗಿ ಅದನ್ನು ಮತ್ತೆ ಮುಚ್ಚಲಾಯಿತು.
ಸುಭಾಶಿಶ್, 19 ವರ್ಷದ ಪ್ರಿಯಬ್ರತಾ ಹಜಾರಿಕಾ ಮತ್ತು ಇತರ 27 ವಿದ್ಯಾರ್ಥಿಗಳೊಂದಿಗೆ 2021ರಲ್ಲಿ ಪ್ರಾರಂಭವಾದ ಮಾನಸ್ ಮತ್ತು ಖಿರೋಡ್ ದತ್ತಾ ಅವರ ಗಾಯನ್ ಮತ್ತು ಬಯಾನ್ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಕಾಲೇಜು ಮುಚ್ಚುವವರೆಗೂ ಪ್ರಿಯಬ್ರತಾ ಮೂರು ವರ್ಷಗಳ ಕಾಲ ಖೋಲ್ ಅಧ್ಯಯನ ಮಾಡಿದರು.
ಅವರು ಹೇಳುತ್ತಾರೆ, "ನನಗೆ ಇನ್ನೊಂದು ವರ್ಷ ಕಲಿಯುವ ಅವಕಾಶ ಸಿಕ್ಕಿದ್ದರೆ, ನಾನು ವಿಶಾರದದ ಕೊನೆಯ ಹಂತವನ್ನು ತಲುಪುತ್ತಿದ್ದೆ. ಶಾಲೆ ಮುಂದುವರಿಯುತ್ತದೆ ಎಂದು ನಾನು ಭಾವಿಸಿದ್ದೆ."
ಗಾಯನ್ ಅಥವಾ ಬಯಾನ್ ಸಾಂಪ್ರದಾಯಿಕ ಕೋರ್ಸ್ ಏನನ್ನು ಒಳಗೊಂಡಿದೆ ಎಂಬುದರ ಕುರಿತು ಅವರು ಮತ್ತಷ್ಟು ವಿವರಿಸುತ್ತಾರೆ. ವಿದ್ಯಾರ್ಥಿಗಳಿಗೆ ಮೊದಲು ವಿಭಿನ್ನ ಲಯಗಳನ್ನು ಕಲಿಸಲಾಗುತ್ತದೆ, ಅದನ್ನು ಅವರು ತಮ್ಮ ಅಂಗೈಗಳಲ್ಲಿ ನುಡಿಸಲು ಕಲಿಯುತ್ತಾರೆ. ಈ ಆರಂಭಿಕ ಹಂತದಲ್ಲಿ, ನೃತ್ಯ ಮತ್ತು ಖೋಲ್ ಆಟದ ಮೂಲಭೂತ ಅಂಶಗಳನ್ನು ಸಹ ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಮತಿ ಅಖೋರಾವನ್ನು ಸಹ ಕಲಿಯುತ್ತಾರೆ.
ಮಾನಸ್ ವಿವರಿಸುತ್ತಾರೆ, "ಮತಿ ಅಖೋರಾ ನಮ್ಮ ಭೌತಿಕ ಸಂಸ್ಕೃತಿಯ ಮಾರ್ಗವಾಗಿದೆ. ಇದು ವ್ಯಾಯಾಮದಂತೆ. ಪಕ್ಷಿಗಳು ಮತ್ತು ಪ್ರಾಣಿಗಳ ಸನ್ನೆಗಳ ಹೆಸರಿನಿಂದ ಕರೆಯಲ್ಪಡುವ ಅನೇಕ ರೀತಿಯ ಅಖೋರಾಗಳಿವೆ - ಮೊರೈ ಪಾನಿಖೋವಾ, ಕಸಾಯಿ ಪಾನಿಖೋವಾ, ತೇಲ್ಟುಪಿ ಅವುಗಳಲ್ಲಿ ಕೆಲವು.
ಮುಂದಿನ ಹಂತದಲ್ಲಿ, ವಿದ್ಯಾರ್ಥಿಗಳನ್ನು ಅವರು ಕಲಿಯಲು ಬಯಸುವ ವಿಷಯಗಳಿಗೆ ಅನುಗುಣವಾಗಿ ಗುಂಪುಗಳಲ್ಲಿ ಇರಿಸಲಾಗುತ್ತದೆ. ಕೆಲವರು ನೃತ್ಯವನ್ನು ಕಲಿಯುತ್ತಾರೆ, ಕೆಲವರು ಖೋಲ್ ಆಯ್ದುಕೊಳ್ಳುತ್ತಾರೆ ಮತ್ತು ಕೆಲವರು ಬೋರ್‌ಗೀತ್ ಕಲಿಯುತ್ತಾರೆ. ಗಾಯನ್ ಆಗಲು ಬಯಸುವವರು ಈ ಹಂತದಲ್ಲಿ ತಾಳವನ್ನು ನುಡಿಸಲು ಕಲಿಯುತ್ತಾರೆ.
"ಹೊರಗಿನವರು ಇವುಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ನಾವು ಈ ಪರಿಸರದಲ್ಲಿ ಜನಿಸಿರುವುದರಿಂದ, ಇಲ್ಲಿ ಬೆಳೆದಿರುವುದರಿಂದ ಮತ್ತು ಚಿಕ್ಕ ವಯಸ್ಸಿನಿಂದಲೇ ಕಲೆಯನ್ನು ನೋಡಿರುವುದರಿಂದ ನಮಗೆ ಅದು ಸುಲಭ, ಆದರೆ ಈ ಪರಿಸರದಿಂದ ಹೊರತಾದವರಿಗೆ, ಸರಿಯಾಗಿ ಕಲಿಯಲು ಅನೇಕ ವರ್ಷಗಳು ಬೇಕಾಗುತ್ತವೆ.
ಇತ್ತೀಚಿನ ವರ್ಷಗಳಲ್ಲಿ, ಗಾಯನದ - ಬಯಾನ್ ಜನಪ್ರಿಯತೆ ಹೆಚ್ಚಾಗಿದೆ. ಈ ಕಲೆಯನ್ನು ಮೊದಲು ಸತ್ರಗಳಲ್ಲಿ ಮಾತ್ರ ಅಭ್ಯಾಸ ಮಾಡಲಾಗುತ್ತಿತ್ತು. ಇಂದು ಇದನ್ನು ಅಸ್ಸಾಂನ ಹಳ್ಳಿಗಳಲ್ಲಿಯೂ ಪ್ರದರ್ಶಿಸಲಾಗುತ್ತಿದೆ. ಆದರೂ ಗಾಯನ್ - ಬಯಾನ್ ಕಲಿಯುವವರ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯು ಉತ್ತಮ ಜೀವನೋಪಾಯವನ್ನು ಹುಡುಕಿಕೊಂಡು ಮಜುಲಿಯಿಂದ ವಲಸೆ ಹೋಗುತ್ತಿದೆ.
"ಒಂದು ದಿನ ಇದೆಲ್ಲವೂ ಮುಗಿದುಹೋಗುತ್ತದೆ ಎಂಬ ಭಯ ಮನಸ್ಸಿಗೆ ಬರುತ್ತದೆ" ಎಂದು ಪ್ರಿಯಬ್ರತಾ ನನಗೆ ಹೇಳುತ್ತಾರೆ.
ಹೆಚ್ಚಿನ ಸಂಗೀತ ಸಂಯೋಜನೆಗಳು ಶಂಕರದೇವ್ ಅವರ ಜೀವಿತಾವಧಿಯಲ್ಲಿಯೇ ನಾಶವಾದವು. ಆನುವಂಶಿಕವಾಗಿ ಬಂದದ್ದು ಮುಂದಿನ ಪೀಳಿಗೆಗೆ ಒಂದು ಸಣ್ಣ ಭಾಗ ಮಾತ್ರ. ಮಾನಸ್ ಈ ಪರಂಪರೆಯ ಕುರಿತು ಬಹಳ ಗಾಢವಾದ ಭಾವನೆಗಳನ್ನು ಹೊಂದಿದ್ದಾರೆ.
ಅವರು ಹೇಳುತ್ತಾರೆ, “ಪೀಳಿಗೆಯಿಂದ ಪೀಳಿಗೆಗೆ ನಾಶವಾಗುತ್ತವೆ, ಆದರೆ ಶಂಕರದೇವರ ಸೃಷ್ಟಿಗಳು ಅಮರವಾಗಿ ಉಳಿಯುತ್ತವೆ. ಈ ರೀತಿಯಾಗಿ ಅವರು ನಮ್ಮೊಳಗೆ ಬದುಕುತ್ತಾರೆ. ನಾನು ಮಜುಲಿಯಲ್ಲಿ ಹುಟ್ಟಿದ್ದೇನೆ ಎಂಬುದು ನನಗೆ ಮುಖ್ಯ. [ಈ ಸಂಪ್ರದಾಯ] ಜೀವಂತವಾಗಿದೆ ಮತ್ತು ಮಜುಲಿಯಲ್ಲಿ ಜೀವಂತವಾಗಿ ಉಳಿಯುತ್ತದೆ. ನಾನು ಇದನ್ನು ಖಚಿತವಾಗಿ ಹೇಳಬಲ್ಲೆ.”
ಈ ಕಥೆ ಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ಪಡೆಯಲಾಗಿ ದೆ.
ಅನುವಾದ : ಶಂಕರ . ಎನ್ . ಕೆಂಚನೂರು