ಮೂವರು ಯುವಕರು ನಿರ್ಮಾಣ ಸ್ಥಳದಲ್ಲಿನ ಕೆಲಸ ಮುಗಿಸಿಕೊಂಡು ತಮ್ಮ ಊರಾದ ಮಾರಿಗೆ ಮರಳುತ್ತಿದ್ದರು. “ಇದು ಸುಮಾರು 15 ವರ್ಷಗಳ ಹಿಂದಿನ ಕತೆ” ಎಂದು ಅಜಯ್ ಪಾಸ್ವಾನ್ ನೆನಪಿಸಿಕೊಳ್ಳುತ್ತಾರೆ. “ನಾವು ಊರಿನ ಪಾಳುಬಿದ್ದ ಮಸೀದಿಯೊಂದರ ಮುಂದೆ ನಡೆದು ಹೋಗುತ್ತಿದ್ದೆವು. ಆಗ ನಮಗೆ ಅದರ ಒಳಗೆ ಏನಿದೆ ಎಂದು ನೋಡುವ ಕುತೂಹಲವಾಯಿತು.”
ನೆಲದ ಮೇಲೆ ಪಾಚಿ ಬೆಳೆದಿತ್ತು. ಕಟ್ಟಡವನ್ನು ಪೂರ್ತಿಯಾಗಿ ಪೊದೆಗಳು ಆವರಿಸಿದ್ದವು.
“ಅಂದರ್ ಗಯೇ ತೋ ಹಮ್ ಲೋಗೋಂ ಕಾ ಮನ್ ಬದಲ್ ಗಯಾ [ಒಳಗೆ ಹೋಗುತ್ತಿದ್ದಂತೆ ನಮ್ಮ ಮನಸ್ಸು ಬದಲಾಯಿತು]” ಎನ್ನುವ 33 ವರ್ಷದ ದಿನಗೂಲಿ ಕಾರ್ಮಿಕ “ಬಹುಶಃ ಅಲ್ಲಾಹನೇ ನಮ್ಮನ್ನು ಒಳಗೆ ಕರೆಸಿಕೊಂಡಿರಬಹುದು” ಎನ್ನುತ್ತಾರೆ.
ಅಜಯ್ ಪಾಸ್ವಾನ್, ಬಖೋರಿ ಬಿಂಡ್ ಮತ್ತು ಗೌತಮ್ ಪ್ರಸಾದ್ ಈ ಮೂವರು ಸೇರಿ ಆ ಮಸೀದಿಯನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದರು. “ನಾವು ಅಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಕತ್ತರಿಸಿ ಮಸೀದಿಗೆ ಬಣ್ಣ ಬಳಿದೆವು. ಮಸೀದಿಯ ಮುಂದೆ ಒಂದು ದೊಡ್ಡ ವೇದಿಕೆಯನ್ನೂ ನಿರ್ಮಿಸಿದೆವು” ಎಂದು ಅಜಯ್ ಹೇಳಿದರು. ಅಂದಿನಿಂದ ದಿನಾಲೂ ಸಂಜೆ ಅವರು ಅಲ್ಲಿ ದೀಪವನ್ನೂ ಹಚ್ಚತೊಡಗಿದರು.
ಆ ಮೂವರು ಸೇರಿ ಮಸೀದಿಗೆ ಧ್ವನಿ ವ್ಯವಸ್ಥೆಯನ್ನು ಮಾಡಿಸಿ ಮಸೀದಿಯ ಗುಮ್ಮಟಕ್ಕೆ ಲೌಡ್ ಸ್ಪೀಕರ್ ನೇತು ಹಾಕಿದರು. “ನಾವು ಸೌಂಡ್ ಸಿಸ್ಟಮ್ ಮೂಲಕ ಆಜಾನ್ ಮೊಳಗಿಸಲು ನಿರ್ಧರಿಸಿದೆವು” ಎಂದು ಅಜಯ್ ಹೇಳುತ್ತಾರೆ. ಮತ್ತು ಇದರೊಂದಿಗೆ ಬಿಹಾರದ ನಳಂದ ಜಿಲ್ಲೆಯ ಮಾರಿ ಎಂಬ ಹಳ್ಳಿಯಲ್ಲಿ ಎಲ್ಲಾ ಮುಸ್ಲಿಮರ ಪಾಲಿಗೂ ದಿನಕ್ಕೆ ಐದು ಬಾರಿ ಆಜಾನ್ (ಪ್ರಾರ್ಥನೆಯ ಕರೆ) ಮೊಳಗತೊಡಿಗತು.
![](/media/images/02a-PXL_20240222_083612304.PORTRAIT-UKR_an.max-1400x1120.jpg)
![](/media/images/02b-DSC01364-UKR_and_SK-The_mosque_at_Mari.max-1400x1120.jpg)
ಅಜಯ್ ಪಾಸ್ವಾನ್ (ಎಡ) ಮತ್ತು ಇತರ ಇಬ್ಬರು ಸ್ನೇಹಿತರು ಬಿಹಾರದ ನಳಂದ ಜಿಲ್ಲೆಯ ತಮ್ಮ ಗ್ರಾಮ ಮಾರಿಯಲ್ಲಿ ಮಸೀದಿಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಹಳ್ಳಿಯ ಹಿರಿಯರು (ಬಲ) ಹೇಳುವಂತೆ, ಶತಮಾನಗಳಿಂದ, ಹಳ್ಳಿಯಲ್ಲಿ ಯಾವುದೇ ಆಚರಣೆ, ಹಿಂದೂಗಳ ಆಚರಣೆಯೂ ಸಹ, ಯಾವಾಗಲೂ ಮಸೀದಿ ಮತ್ತು ಸಮಾಧಿಯ ಬಳಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಗುತ್ತದೆ
ಆದರೆ ಮಾರಿ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲ. ಆದರೆ ಇಲ್ಲಿನ ಮಸೀದಿ (ಮಸೀದಿ) ಮತ್ತು ಮಜಾರ್ (ಸಮಾಧಿ) ಆರೈಕೆ ಮತ್ತು ನಿರ್ವಹಣೆ ಅಜಯ್, ಬಖೋರಿ ಮತ್ತು ಗೌತಮ್ ಎಂಬ ಮೂವರು ಹಿಂದೂಗಳ ಕೈಯಲ್ಲಿದೆ.
"ನಮ್ಮ ನಂಬಿಕೆ ಈ ಮಸೀದಿ ಮತ್ತು ಮಜಾರಿಗೆ ಅಂಟಿಕೊಂಡಿದೆ, ಮತ್ತು ನಾವು ಅದನ್ನು ರಕ್ಷಿಸುತ್ತೇವೆ" ಎಂದು ಜಾನಕಿ ಪಂಡಿತ್ ಹೇಳುತ್ತಾರೆ. "65 ವರ್ಷಗಳ ಹಿಂದೆ ಮದುವೆಯಾಗಿ ಬಂದಾಗ, ನಾನು ಕೂಡ ಮೊದಲು ಮಸೀದಿಯಲ್ಲಿ ತಲೆ ಬಾಗಿಸಿ ನಂತರ ನಮ್ಮ [ಹಿಂದೂ] ದೇವತೆಗಳನ್ನು ಪೂಜಿಸಿದೆ" ಎಂದು 82 ವರ್ಷದ ಈ ಊರಿನ ನಿವಾಸಿ ಹೇಳುತ್ತಾರೆ.
ಬಿಳಿ ಮತ್ತು ಹಸಿರು ಬಣ್ಣದ ಈ ಮಸೀದಿ ಮುಖ್ಯ ರಸ್ತೆಯಿಂದ ಗೋಚರಿಸುತ್ತದೆ; ಪ್ರತಿ ಮಳೆಗಾಲದೊಂದಿಗೆ ಅದರ ಬಣ್ಣವು ಮಸುಕಾಗುತ್ತದೆ. ಮಸೀದಿ ಮತ್ತು ಸಮಾಧಿಯ ಕಾಂಪೌಂಡ್ ಸುತ್ತಲೂ ನಾಲ್ಕು ಅಡಿ ಎತ್ತರದ ಗಡಿ ಗೋಡೆಗಳಿವೆ. ದೊಡ್ಡ, ಹಳೆಯ ಮರದ ಬಾಗಿಲಿನ ಮೂಲಕ ಹಾದುಹೋದ ನಂತರ ಮಸೀದಿಯ ಅಂಗಳ ಸಿಗುತ್ತದೆ, ಅಲ್ಲಿ ಕುರಾನಿನ ಹಿಂದಿ ಅನುವಾದ ಮತ್ತು ಪ್ರಾರ್ಥನೆಯ ವಿಧಾನಗಳನ್ನು ವಿವರಿಸುವ ಸಚ್ಚಿ ನಮಾಜ್ ಪುಸ್ತಕವಿದೆ.
"ಊರಿನ ಮದುವೆ ಗಂಡು ಮೊದಲು ಮಸೀದಿ ಮತ್ತು ಮಜಾರ್ ಬಳಿ ತಲೆ ಬಾಗಿಸಿ ನಂತರವೇ ನಮ್ಮ ಹಿಂದೂ ದೇವತೆಗಳಿಗೆ ನಮಸ್ಕರಿಸಬೇಕು" ಎಂದು ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕರಾದ ಪಂಡಿತ್ ಹೇಳುತ್ತಾರೆ. ಮದುವೆಯ ಮೆರವಣಿಗೆ ಹೊರಗಿನಿಂದ ಹಳ್ಳಿಗೆ ಬಂದಾಗಲೂ, "ವರನನ್ನು ಮೊದಲು ಮಸೀದಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ನಮಸ್ಕರಿಸಿದ ನಂತರ, ನಾವು ಅವನನ್ನು ದೇವಾಲಯಗಳಿಗೆ ಕರೆದೊಯ್ಯುತ್ತೇವೆ. ಇದು ಕಡ್ಡಾಯ ಆಚರಣೆಯಾಗಿದೆ. ಸ್ಥಳೀಯರು ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ, ಮತ್ತು ಆಸೆ ಈಡೇರಿದರೆ, ಅವನು/ಅವಳು ಅದರ ಮೇಲೆ ಚಾದರ್ ಹೊದೆಸುತ್ತಾರೆ.
![](/media/images/03a-DSC01375-Crop-UKR_and_SK-The_mosque_at.max-1400x1120.jpg)
![](/media/images/03b-PXL_20230911_084252351-UKR_and_SK-The_.max-1400x1120.jpg)
ಅಜಯ್ ಪಾಸ್ವಾನ್, ಬಖೋರಿ ಬಿಂಡ್ ಮತ್ತು ಗೌತಮ್ ಪ್ರಸಾದ್ ಎಂಬ ಮೂವರು ಯುವಕರು 15 ವರ್ಷಗಳ ಹಿಂದೆ ಮಾರಿಯ ಮಸೀದಿಯನ್ನು ಪುನಃಸ್ಥಾಪಿಸಿದರು – ಅವರು ಅಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಕತ್ತರಿಸಿ, ಮಸೀದಿಗೆ ಬಣ್ಣ ಹಚ್ಚಿ, ದೊಡ್ಡ ವೇದಿಕೆಯನ್ನು ನಿರ್ಮಿಸಿದರು ಮತ್ತು ಸಂಜೆ ದೀಪವನ್ನು ಬೆಳಗಿಸಲು ಪ್ರಾರಂಭಿಸಿದರು. ಮಸೀದಿಯ ಒಳಗೆ ಕುರಾನ್ ಗ್ರಂಥದ ಹಿಂದಿ ಅನುವಾದ (ಬಲ) ಮತ್ತು ನಮಾಜ್ (ದೈನಂದಿನ ಪ್ರಾರ್ಥನೆ) ಹೇಗೆ ಸಲ್ಲಿಸಬೇಕೆನ್ನುವುದನ್ನು ವಿವರಿಸುವ ಕಿರುಪುಸ್ತಕವಿದೆ
![](/media/images/04a-DSC01372-UKR_and_SK-The_mosque_at_Mari.max-1400x1120.jpg)
![](/media/images/04b-DSC01359-UKR_and_SK-The_mosque_at_Mari.max-1400x1120.jpg)
ಈ ಸಮಾಧಿ (ಎಡ) ಕನಿಷ್ಠ ಮೂರು ಶತಮಾನಗಳ ಹಿಂದೆ ಅರೇಬಿಯಾದಿಂದ ಆಗಮಿಸಿದ ಸೂಫಿ ಸಂತ ಹಜರತ್ ಇಸ್ಮಾಯಿಲ್ ಅವರದು ಎಂದು ಹೇಳಲಾಗುತ್ತದೆ. ನಿವೃತ್ತ ಶಾಲಾ ಶಿಕ್ಷಕರಾದ ಜಾನಕಿ ಪಂಡಿತ್ (ಬಲ) ಹೇಳುತ್ತಾರೆ, 'ನಮ್ಮ ನಂಬಿಕೆ ಈ ಮಸೀದಿ ಮತ್ತು ಮಜಾರ್ [ಸಮಾಧಿ]ಗೆ ಅಂಟಿಕೊಂಡಿದೆ ಮತ್ತು ನಾವು ಅದನ್ನು ರಕ್ಷಿಸುತ್ತೇವೆ'
ಐವತ್ತು ವರ್ಷಗಳ ಹಿಂದೆ, ಮಾರಿಯಲ್ಲಿ ಮುಸ್ಲಿಂ ಸಮುದಾಯದ ಜನರ ಸಣ್ಣ ಜನಸಂಖ್ಯೆ ಇತ್ತು. 1981ರಲ್ಲಿ ಬಿಹಾರದಲ್ಲಿ ನಡೆದ ಕುಖ್ಯಾತ ಕೋಮು ಹಿಂಸಾಚಾರದ ನಂತರ ಅವರು ಆತುರಾತುರವಾಗಿ ಊರನ್ನು ತೊರೆದರು. ಆ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ತಾಡಿ (ಶೇಂದಿ) ಅಂಗಡಿಯಲ್ಲಿ ನಡೆದ ವಿವಾದದೊಂದಿಗೆ ಗಲಭೆಗಳು ಪ್ರಾರಂಭವಾದವು ಮತ್ತು 80 ಜನರು ಪ್ರಾಣ ಕಳೆದುಕೊಂಡರು.
ಈ ಗಲಭೆ ಮಾರಿಯನ್ನು ಮುಟ್ಟದಿದ್ದರೂ, ಈ ಪ್ರದೇಶದಲ್ಲಿನ ಉದ್ವಿಗ್ನ ವಾತಾವರಣವು ಇಲ್ಲಿನ ಮುಸ್ಲಿಮರನ್ನು ಬೆಚ್ಚಿಬೀಳಿಸಿತು ಮತ್ತು ಅವರ ಬದುಕನ್ನು ಅನಿಶ್ಚಿತಗೊಳಿಸಿತು. ನಿಧಾನವಾಗಿ ಅವರು ಇಲ್ಲಿಂದ ದೂರ ಸರಿದು, ಹತ್ತಿರದ ಮುಸ್ಲಿಂ ಪ್ರಾಬಲ್ಯದ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ವಾಸಿಸಲು ನಿರ್ಧರಿಸಿದರು.
ಗಲಭೆಯ ಸಮಯದಲ್ಲಿ ಅಜಯ್ ಇನ್ನೂ ಜನಿಸಿರಲಿಲ್ಲ "ಆಗ ಮುಸ್ಲಿಮರು ಊರು ಬಿಟ್ಟು ಹೋದರು ಎಂದು ಜನರು ಹೇಳುತ್ತಾರೆ. ಆದರೆ ಅವರು ಊರನ್ನು ಏಕೆ ತೊರೆದರು ಮತ್ತು ಇಲ್ಲಿ ಏನು ನಡೆಯಿತು ಎನ್ನುವುದನ್ನು ಅವರು ಹೇಳಲಿಲ್ಲ. ಆದರೆ ಅಂದು ನಡೆದಿದ್ದು ಒಳ್ಳೆಯದಂತೂ ಅಲ್ಲ" ಎಂದು ಅವರು ಮುಸ್ಲಿಮರ ಸಂಪೂರ್ಣ ನಿರ್ಗಮನವನ್ನು ಉಲ್ಲೇಖಿಸಿ ಒಪ್ಪಿಕೊಳ್ಳುತ್ತಾರೆ.
ಈ ಊರಿನ ಹಿಂದಿನ ನಿವಾಸಿ ಶಹಾಬುದ್ದೀನ್ ಅನ್ಸಾರಿ ಈ ಮಾತನ್ನು ಒಪ್ಪುತ್ತಾರೆ: "ವೋ ಏಕ್ ಅಂಧಡ್ ಥಾ, ಜಿಸ್ನೇ ಹಮೇಶಾ ಕೇಲಿಯೇ ಸಬ್ ಕುಚ್ ಬದಲ್ ದಿಯಾ [ಅದೊಂದು ಎಲ್ಲವನ್ನೂ ಶಾಶ್ವತವಾಗಿ ಬದಲಾಯಿಸಿದ ಚಂಡಮಾರುತವಾಗಿತ್ತು]."
1981ರಲ್ಲಿ ಮಾರಿಯಿಂದ ಪಲಾಯನ ಮಾಡಿದ ಸುಮಾರು 20 ಮುಸ್ಲಿಂ ಕುಟುಂಬಗಳಲ್ಲಿ ಅನ್ಸಾರಿ ಕುಟುಂಬವೂ ಸೇರಿದೆ. "ನನ್ನ ತಂದೆ ಮುಸ್ಲಿಂ ಅನ್ಸಾರಿ ಆ ಸಮಯದಲ್ಲಿ ಬೀಡಿ ತಯಾರಕರಾಗಿದ್ದರು. ಗಲಭೆ ಭುಗಿಲೆದ್ದ ದಿನ ಅವರು ಬೀಡಿ ಸಾಮಗ್ರಿಗಳನ್ನು ತರಲು ಬಿಹಾರ್ ಶರೀಫ್ ಎನ್ನುವಲ್ಲಿಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿದ ಅವರು, ಮಾರಿಯ ಮುಸ್ಲಿಂ ಕುಟುಂಬಗಳಿಗೆ ಮಾಹಿತಿ ನೀಡಿದರು" ಎಂದು ಶಹಾಬುದ್ದೀನ್ ಹೇಳುತ್ತಾರೆ.
![](/media/images/05a-PXL_20240222_094106220-UKR_and_SK-The_.max-1400x1120.jpg)
![](/media/images/05b-PXL_20240222_094428575-UKR_and_SK-The_.max-1400x1120.jpg)
ಮಾರಿಯಲ್ಲಿ ಅಜಯ್ (ಎಡ) ಮತ್ತು ಶಹಾಬುದ್ದೀನ್ ಅನ್ಸಾರಿ (ಬಲ). ಪೋಸ್ಟ್ ಮ್ಯಾನ್ ಕೆಲಸ ಪಡೆಯಲು ಒಬ್ಬ ಹಿಂದೂ ಹೇಗೆ ಸಹಾಯ ಮಾಡಿದನೆಂದು ಎರಡನೆಯವರು ನೆನಪಿಸಿಕೊಳ್ಳುತ್ತಾರೆ. ಮುಸ್ಲಿಮರು ಅವಸರದಲ್ಲಿ ಹೊರಹೋಗಲು ಕಾರಣವಾದ 1981ರ ಗಲಭೆಗಳನ್ನು ಶಹಾಬುದ್ದೀನ್ ನೆನಪಿಸಿಕೊಳ್ಳುತ್ತಾರೆ, 'ನಾನು ಮಾರಿ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವುದರಿಂದ, ನಾನು ಅಲ್ಲಿನ ಹಿಂದೂ ಕುಟುಂಬವೊಂದರ ಮನೆಯಲ್ಲಿ ಇರಲು ಪ್ರಾರಂಭಿಸಿದೆ, ಆದರೆ ನಾನು ನನ್ನ ತಂದೆ ಮತ್ತು ತಾಯಿಯನ್ನು ಬಿಹಾರ ಶರೀಫ್ ಎನ್ನುವಲ್ಲಿಗೆ ಸ್ಥಳಾಂತರಿಸಿದೆ. ಆ ಘಟನೆ ಎಲ್ಲವನ್ನೂ ಶಾಶ್ವತವಾಗಿ ಬದಲಾಯಿಸಿದ ಚಂಡಮಾರುತವಾಗಿತ್ತುʼ
ಆಗ ತನ್ನ ಇಪ್ಪತ್ತರ ಹರೆಯದಲ್ಲಿದ್ದ ಶಹಾಬುದ್ದೀನ್ ಹಳ್ಳಿಯ ಪೋಸ್ಟ್ ಮ್ಯಾನ್ ಆಗಿದ್ದರು. ಅವರ ಕುಟುಂಬವು ಸ್ಥಳಾಂತರಗೊಂಡ ನಂತರ, ಬಿಹಾರ್ ಶರೀಫ್ ಪಟ್ಟಣದಲ್ಲಿ ಕಿರಾಣಿ ಅಂಗಡಿಯನ್ನು ನಡೆಸಲು ಪ್ರಾರಂಭಿಸಿತು. ಅವರ ಹಠಾತ್ ನಿರ್ಗಮನದ ಹೊರತಾಗಿಯೂ, "ಗ್ರಾಮದಲ್ಲಿ ಯಾವುದೇ ತಾರತಮ್ಯವಿರಲಿಲ್ಲ. ನಾವೆಲ್ಲರೂ ಅಲ್ಲಿ ಇದ್ದಷ್ಟು ದಿನ ಸಾಮರಸ್ಯದಿಂದ ಒಟ್ಟಿಗೆ ಬದುಕುತ್ತಿದ್ದೆವು. ಯಾರಿಗೂ ಯಾರೊಂದಿಗೂ ಯಾವುದೇ ಸಮಸ್ಯೆ ಇರಲಿಲ್ಲ.”
ಮಾರಿಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ದ್ವೇಷವಿರಲಿಲ್ಲ ಮತ್ತು ಇಂದಿಗೂ ಇಲ್ಲ ಎಂದು ಅವರು ಪುನರುಚ್ಚರಿಸುತ್ತಾರೆ. "ನಾನು ಮಾರಿ ಗ್ರಾಮಕ್ಕೆ ಹೋದಾಗಲೆಲ್ಲ ಅನೇಕ ಹಿಂದೂ ಕುಟುಂಬಗಳು ತಮ್ಮ ಮನೆಗಳಲ್ಲಿ ಊಟ ಮಾಡುವಂತೆ ಒತ್ತಾಯಿಸುತ್ತವೆ. ಇಲ್ಲಿ ನನ್ನನ್ನು ಊಟಕ್ಕೆ ಕರೆಯದ ಒಂದೇ ಒಂದು ಮನೆಯೂ ಇಲ್ಲ" ಎನ್ನುವ 62 ವರ್ಷದ ಅವರಿಗೆ ಊರಿನ ಜನರು ಮಸೀದಿ ಮತ್ತು ಮಜಾರ್ ಎರಡನ್ನು ನೋಡಿಕೊಳ್ಳುತ್ತಿರುವ ಕುರಿತು ಸಂತೋಷವಿದೆ.
ಬೆನ್ ಬ್ಲಾಕ್ಗೆ ಸೇರಿದ ಮಾರಿ ಗ್ರಾಮವು ಸುಮಾರು 3,307 ಜನಸಂಖ್ಯೆಯನ್ನು ಹೊಂದಿದೆ (ಜನಗಣತಿ 2011 ), ಮತ್ತು ಇಲ್ಲಿನ ಹೆಚ್ಚಿನವರು ಹಿಂದುಳಿದ ವರ್ಗ ಮತ್ತು ದಲಿತರು. ಮಸೀದಿಯನ್ನು ನೋಡಿಕೊಳ್ಳುತ್ತಿರುವ ಯುವಕರು: ಅಜಯ್ ದಲಿತ, ಬಖೋರಿ ಬಿಂಡ್ ಇಬಿಸಿ (ಅತ್ಯಂತ ಹಿಂದುಳಿದ ವರ್ಗ) ಮತ್ತು ಗೌತಮ್ ಪ್ರಸಾದ್ ಒಬಿಸಿ (ಇತರ ಹಿಂದುಳಿದ ವರ್ಗ)ಕ್ಕೆ ಸೇರಿದವರು.
"ಇದು ಗಂಗಾ-ಜಮುನಿ ತೆಹ್ಜೀಬ್ [ಸಂಯೋಜಿತ ಸಂಸ್ಕೃತಿ]ಯ ಅತ್ಯುತ್ತಮ ಉದಾಹರಣೆಯಾಗಿದೆ" ಎಂದು ಮೊಹಮ್ಮದ್ ಖಾಲಿದ್ ಆಲಂ ಭುಟ್ಟೋ ಹೇಳುತ್ತಾರೆ. ಗ್ರಾಮದ ಹಿಂದಿನ ನಿವಾಸಿಯಾದ 60 ವರ್ಷದ ಅವರು ಹತ್ತಿರದ ಬಿಹಾರ್ ಶರೀಫ್ ಪಟ್ಟಣಕ್ಕೆ ಸ್ಥಳಾಂತರಗೊಂಡವರಲ್ಲಿ ಒಬ್ಬರು. "ಈ ಮಸೀದಿಯು 200 ವರ್ಷಗಳಿಗಿಂತಲೂ ಹಳೆಯದು, ಮತ್ತು ಅಲ್ಲಿರುವ ಸಮಾಧಿ ಇನ್ನೂ ಹಳೆಯದಾಗಿರುತ್ತದೆ" ಎಂದು ಅವರು ಹೇಳಿದರು.
"ಈ ಸಮಾಧಿಯು ಅರೇಬಿಯಾದಿಂದ ಮಾರಿ ಗ್ರಾಮಕ್ಕೆ ಬಂದ ಸೂಫಿ ಸಂತ ಹಜರತ್ ಇಸ್ಮಾಯಿಲ್ ಅವರದು. ಅವರ ಆಗಮನದ ಮೊದಲು ಪ್ರವಾಹ ಮತ್ತು ಬೆಂಕಿಯಂತಹ ನೈಸರ್ಗಿಕ ವಿಪತ್ತುಗಳಿಂದಾಗಿ ಗ್ರಾಮವು ಅನೇಕ ಬಾರಿ ನಾಶವಾಗಿತ್ತು ಎಂದು ನಂಬಲಾಗಿದೆ. ಆದರೆ ಅವರು ಇಲ್ಲಿ ವಾಸಿಸಲು ಪ್ರಾರಂಭಿಸಿದ ನಂತರ ಊರಿನಲ್ಲಿ ಯಾವುದೇ ವಿಪತ್ತು ಸಂಭವಿಸಲಿಲ್ಲ. ಅವರ ಮರಣದ ನಂತರ, ಅವರ ಸಮಾಧಿಯನ್ನು ನಿರ್ಮಿಸಲಾಯಿತು ಮತ್ತು ಗ್ರಾಮದ ಹಿಂದೂಗಳು ಅದನ್ನು ಪೂಜಿಸಲು ಪ್ರಾರಂಭಿಸಿದರು" ಎಂದು ಅವರು ಹೇಳುತ್ತಾರೆ. "ಆ ಸಂಪ್ರದಾಯ ಇಂದಿಗೂ ಮುಂದುವರೆದಿದೆ."
![](/media/images/06a-PXL_20240222_083529604-UKR_and_SK-The_.max-1400x1120.jpg)
![](/media/images/06b-DSC01377-UKR_and_SK-The_mosque_at_Mari.max-1400x1120.jpg)
ಅಜಯ್ (ಎಡ) ಮತ್ತು ಅವರ ಸ್ನೇಹಿತರು ಅಜಾನ್ ಕರೆ ಕೊಡಲು ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದಾರೆ, ಮತ್ತು ಅವರು ಒಟ್ಟಾಗಿ ತಮ್ಮ ದಿನಗೂಲಿಯಿಂದ ಬರುವ ಹಣದಲ್ಲಿ ತಿಂಗಳಿಗೆ 8,000 ರೂ.ಗಳನ್ನು ಸಂಬಳವಾಗಿ ಆ ವ್ಯಕ್ತಿಗೆ ನೀಡುತ್ತಾರೆ. ಬಲ: 'ಇದು ಗಂಗಾ-ಜಮುನಿ ತೆಹ್ಜೀಬ್ [ಸಂಯೋಜಿತ ಸಂಸ್ಕೃತಿ]ಯ ಅತ್ಯುತ್ತಮ ಉದಾಹರಣೆಯಾಗಿದೆ' ಎಂದು ಮಾರಿಯ ಈ ಹಿಂದಿನ ನಿವಾಸಿ ಮೊಹಮ್ಮದ್ ಖಾಲಿದ್ ಆಲಂ ಭುಟ್ಟೋ ಹೇಳುತ್ತಾರೆ
ಮೂರು ವರ್ಷಗಳ ಹಿಂದೆ ಕೋವಿಡ್ -19 ಸಾಂಕ್ರಾಮಿಕ ಪಿಡುಗು ಮತ್ತು ನಂತರದ ಲಾಕ್ಡೌನ್ ನಂತರ, ಅಜಯ್, ಬಖೋರಿ ಮತ್ತು ಗೌತಮ್ ಅವರಿಗೆ ಮಾರಿ ಗ್ರಾಮದಲ್ಲಿ ಕೆಲಸ ಹುಡುಕುವುದು ಕಷ್ಟವಾಯಿತು, ಹೀಗಾಗಿ ಅವರು ವಿವಿಧ ಸ್ಥಳಗಳಿಗೆ ತೆರಳಿದರು - ಗೌತಮ್ ಇಸ್ಲಾಂಪುರದಲ್ಲಿ (35 ಕಿ.ಮೀ ದೂರ) ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ ಮತ್ತು ಬಖೋರಿ ಚೆನ್ನೈಯಲ್ಲಿ ಮೇಸ್ತ್ರಿಯಾಗಿದ್ದಾರೆ; ಅಜಯ್ ಬಿಹಾರ್ ಶರೀಫ್ ಪಟ್ಟಣಕ್ಕೆ ತೆರಳಿದರು.
ಮೂವರ ನಿರ್ಗಮನವು ಮಸೀದಿಯ ನಿರ್ವಹಣೆಯ ಮೇಲೆ ಪರಿಣಾಮ ಬೀರಿತು. ಫೆಬ್ರವರಿ 2024ರಲ್ಲಿ, ಮಸೀದಿಯಲ್ಲಿ ಅಜಾನ್ ನಿಂತಿತ್ತು. ಇದೇ ಕಾರಣಕ್ಕಾಗಿ ಅಜಾನ್ ಕೂಗಲು ಒಬ್ಬರನ್ನು ನೇಮಿಸಿಕೊಳ್ಳಲಾಯಿತು ಎಂದು ಅಜಯ್ ಹೇಳುತ್ತಾರೆ. "ದಿನಕ್ಕೆ ಐದು ಬಾರಿ ಆಜಾನ್ ಮಾಡುವುದು ಮುಯಿಝಿನ್ ನ ಕೆಲಸ. ನಾವು [ಮೂವರು] ಅವರಿಗೆ ಮಾಸಿಕ ಸಂಬಳವಾಗಿ 8,000 ರೂಪಾಯಿಗಳನ್ನು ನೀಡುತ್ತೇವೆ ಮತ್ತು ಅವರಿಗೆ ಉಳಿಯಲು ಹಳ್ಳಿಯಲ್ಲಿ ಒಂದು ಕೋಣೆಯನ್ನು ನೀಡಿದ್ದೇವೆ" ಎಂದು ಅವರು ಹೇಳುತ್ತಾರೆ.
ಅಜಯ್ ಅವರು ತಾನು ಬದುಕಿರುವವರೆಗೂ ಮಸೀದಿ ಮತ್ತು ಸಮಾಧಿಯನ್ನು ರಕ್ಷಿಸಲು ನಿರ್ಧರಿಸಿದ್ದಾರೆ. "ಮಾರ್ಲಾ ಕೆ ಬಾದೆ ಕೋಯಿ ಕುಚ್ ಕರ್ ಸಕ್ತಾ ಹೈ. ಜಬ್ ತಕ್ ಹಮ್ ಜಿಂದಾ ಹೈ, ಮಸ್ಜೀದ್ದ್ ಕೋ ಕಿಸಿ ಕೋ ಕುಚ್ ಕರ್ನೆ ನಹೀ ದೇಂಗೆ [ನನ್ನ ಮರಣದ ನಂತರ ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು. ನಾನು ಬದುಕಿರುವವರೆಗೂ ಮಸೀದಿಗೆ ಹಾನಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ]" ಎಂದು ಅವರು ಹೇಳುತ್ತಾರೆ.
ಈ ವರದಿಯನ್ನು ಬಿಹಾರದಲ್ಲಿ ಅಂಚಿನಲ್ಲಿರುವ ಜನರಿಗಾಗಿ ಹೋರಾಡುವ ಟ್ರೇಡ್ ಯೂನಿಯನಿಸ್ಟ್ ನೆನಪಿಗಾಗಿ ನೀಡುವ ಫೆಲೋಶಿಪ್ನ ಬೆಂಬಲದಿಂದ ತಯಾರಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು