ಅಹೆಮಡೋಸ್ ಸಿತಾರ್‌ಮೇಕರ್ ಅವರು ಪ್ಯಾರಿಸ್‌ಗೆ ಹೋರಟಾಗ ಅವರ ತಂದೆ ಒಪ್ಪಲಿಲ್ಲ. "ನೀನು ಹೊರಗಿನ ಪ್ರಪಂಚವನ್ನು ಒಮ್ಮೆ ನೋಡಿದರೆ, ಮತ್ತೆ ಹಿಂತಿರುಗಿ ಬರುವುದಿಲ್ಲ," ಎಂದು ಅವರ ತಂದೆ ಹೇಳಿದ್ದರು. ಈಗ ಆ ಮಾತುಗಳನ್ನು ನೆನಪಿಸಿಕೊಳ್ಳುವಾಗ 99 ವರ್ಷ ಪ್ರಾಯದ ಅಹೆಮಾಡೋಸ್ ಅವರ ಮುಖದಲ್ಲಿ ಮುಗುಳ್ನಗು ಮೂಡುತ್ತದೆ.

ಐದನೇ ತಲೆಮಾರಿನ ಈ ಸಿತಾರ್‌ಮೇಕರ್ 30 ರ ಹರೆಯದವರಾಗಿದ್ದಾಗ ಪ್ಯಾರಿಸ್‌ನಿಂದ ಇಬ್ಬರು ಮಹಿಳೆಯರು ಶಾಸ್ತ್ರೀಯ ತಂತಿ ವಾದ್ಯವಾದ ಸಿತಾರ್‌ ತಯಾರಿಸುವ ಕಲೆಯನ್ನು ಕಲಿಯಲು ಅವರ ಮನೆಗೆ ಬಂದಿದ್ದರು. "ಸುತ್ತಮುತ್ತ ಕೇಳಿ ನೋಡಿದ ಮೇಲೆ, ಕೊನೆಗೆ ನನ್ನ ಬಳಿ ಸಹಾಯ ಕೇಳಿ ಬಂದರು. ನಾನು ಅವರಿಗೆ ಕಲಿಸಲು ಆರಂಭಿಸಿದೆ,” ಎಂದು ಅಹೆಮಡೋಸ್ ಹೇಳುತ್ತಾರೆ, ಮಿರಜ್‌ನ ಸಿತಾರ್‌ಮೇಕರ್ ಗಲ್ಲಿಯಲ್ಲಿರುವ ತಮ್ಮ ಎರಡು ಅಂತಸ್ತಿನ ಮನೆ ಮತ್ತು ವರ್ಕ್‌ಶಾಪ್‌ನ ನೆಲ ಮಹಡಿಯಲ್ಲಿ ಕುಳಿತು ಇದನ್ನು ಹೇಳುತ್ತಾರೆ. ಇವರ ಕುಟುಂಬ ಹಲವಾರು ತಲೆಮಾರುಗಳಿಂದ ಇಲ್ಲಿಯೇ ವಾಸಿಸುತ್ತಿದೆ, ಇಲ್ಲೇ ವೃತ್ತಿಯನ್ನು ಮಾಡುತ್ತಿದ್ದಾರೆ.

"ಆಗ ನಮ್ಮ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಆ ಸಂದರ್ಭದಲ್ಲಿ ಒಂದು ಶೌಚಾಲಯವನ್ನು ಕಟ್ಟಿದೆವು. ಏಕೆಂದರೆ ಇವರಲ್ಲಿ [ವಿದೇಶಿ ಅತಿಥಿಗಳು] ನಾವು ಹೊಲಗಳಿಗೆ ಹೋಗುವಂತೆ ಹೇಳಲು ಸಾಧ್ಯವಿರಲಿಲ್ಲ," ಎಂದು ಅಹೆಮಾಡೋಸ್ ಹೇಳುತ್ತಾರೆ. ಅವರು ಮಾತನಾಡುತ್ತಿರುವಂತೆ ಸಿತಾರ್‌ನ ಕೀರಳು ಸದ್ದು ಕೇಳಿಸುತ್ತಿತ್ತು. ಅವರ ಮಗ ಗೌಸ್ ಸಿತಾರಮೇಕರ್ ಕೆಲಸ ಮಾಡುತ್ತಿದ್ದರು.

ಆ ಇಬ್ಬರು ಯುವತಿಯರು ಅಹೆಮಾಡೋಸ್ ಅವರ ಮನೆಯಲ್ಲಿ ಒಂಬತ್ತು ತಿಂಗಳ ಕಾಲ ಇದ್ದರು. ಆದರೆ ಅವರು ಸಿತಾರ್‌ ತಯಾರಿಕೆಯ ಕೊನೆಯ ಹಂತಗಳನ್ನು ಕಲಿಯುವ ಮೊದಲೇ ಅವರ ವೀಸಾ ಅವಧಿ ಮುಗಿದಿತ್ತು. ಕೆಲವು ತಿಂಗಳ ನಂತರ ಈ ತರಗತಿಯನ್ನು ಪೂರ್ಣವಾಗಿ ಮುಗಿಸಲು ಪ್ಯಾರಿಸ್‌ಗೆ ಬರುವಂತೆ ಆಹ್ವಾನಿಸಿದ್ದರು.

ಆದರೆ ಇದಕ್ಕೆ ಅವರ ತಂದೆ ಒಪ್ಪದೇ ಇದ್ದರಿಂದ ಅಹೆಮಾಡೋಸ್ ತಮ್ಮ ಮನೆಯಲ್ಲಿಯೇ ಉಳಿದು, ಕರಕುಶಲತೆಗೆ ಹೆಸರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಓರ್ವ ಕುಶಲಕರ್ಮಿಯಾಗಿ ವೃತ್ತಿಯನ್ನು ಮುಂದುವರಿಸಿದರು. ಅಹೆಮಾಡೋಸ್‌ ಅವರ ಕುಟುಂಬವು 150 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ವ್ಯಾಪಾರ ಮಾಡುತ್ತಿದೆ. ಇದೀಗ ಏಳು ತಲೆಮಾರುಗಳವರೆಗೆ ಈ ವೃತ್ತಿ ಸಾಗಿ ಬಂದಿದೆ. 99 ನೇ ವಯಸ್ಸಿನಲ್ಲಿಯೂ ಇವರು ಈ ಕೆಲಸ ಮಾಡುತ್ತಿದ್ದಾರೆ.

Left: Bhoplas [gourds] are used to make the base of the sitar. They are hung from the roof to prevent them from catching moisture which will make them unusable.
PHOTO • Prakhar Dobhal
Right:  The gourd is cut into the desired shape and fitted with wooden sticks to maintain the structure
PHOTO • Prakhar Dobhal

ಎಡ: ಸಿತಾರ್‌ನ ಬೇಸ್ ತಯಾರಿಸಲು ಭೋಪ್ಲಾಗಳನ್ನು [ಸಿಹಿ ಕುಂಬಳಕಾಯಿ] ಬಳಸಲಾಗುತ್ತದೆ. ತೇವಾಂಶ ಹೀರದಂತೆ ತಡೆಯಲು ಅವುಗಳನ್ನು ಛಾವಣಿಗೆ ನೇತುಹಾಕಲಾಗುತ್ತದೆ, ತೇವಾಂಶ ಹಿಡಿದರೆ ಅವುಗಳನ್ನು ಬಳಸಲು ಸಾಧ್ಯವಿಲ್ಲ. ಬಲ: ಕುಂಬಳಕಾಯಿಯನ್ನು ಬೇಕಾದ ಆಕಾರಕ್ಕೆ ಕತ್ತರಿಸಿ, ಆಕಾರವನ್ನು ಕಾಯ್ದುಕೊಳ್ಳಲು ಮರದ ತುಂಡುಗಳನ್ನು ಅಳವಡಿಸಲಾಗುತ್ತದೆ

ಅಹೆಮಾಡೋಸ್ ಮನೆಯಲ್ಲಿರುವ ವರ್ಕ್‌ಶಾಪ್‌ನಲ್ಲಿ ಕಾಣಸಿಗುವಂತೆ, ನೆರೆಹೊರೆಯ ಪ್ರತಿಯೊಂದು ಮನೆಯ ಮೇಲ್ಛಾವಣಿಯಲ್ಲಿಯೂ ಭೋಪ್ಲಾಗಳು ಅಥವಾ ಸಿಹಿ ಕುಂಬಳಕಾಯಿಗಳು ನೇತಾಡುತ್ತಿರುವುದನ್ನು ನೋಡಬಹುದು.

ಸಿತಾರ್ ತಯಾರಕರು ಟುಂಬಾ ಅಥವಾ ಸಿತಾರ್‌ನ ಬೇಸನ್ನು ತಯಾರಿಸಲು ಭೋಪ್ಲಾವನ್ನು ಬಳಸುತ್ತಾರೆ. ಮೀರಜ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಪಂಢರಪುರದಲ್ಲಿ ಈ ತರಕಾರಿಯನ್ನು ಬೆಳೆಯುತ್ತಾರೆ. ಬಳಕೆಗೆ ಯೋಗ್ಯವಲ್ಲದ ಕಹಿಯಾದ ಕುಂಬಳಕಾಯಿಗಳನ್ನು ರೈತರು ಸ್ಟ್ರಿಂಗ್ ವಾದ್ಯಗಳನ್ನು ತಯಾರಿಸುವ ಸಿತಾರ್‌ಮೇಕರ್‌ಗಳಿಗೆ ಮಾರಾಟ ಮಾಡುತ್ತಾರೆ. ಈ ಕಹಿಯಾದ ಕುಂಬಳಕಾಯಿಯನ್ನು ಆ ಒಂದೇ ಉದ್ದೇಶಕ್ಕೆ ಬೆಳೆಸುತ್ತಾರೆ. ಕುಶಲಕರ್ಮಿಗಳು ಬೇಸಿಗೆಯಲ್ಲಿ ಕುಂಬಳಕಾಯಿಗಳನ್ನು ಮುಂಚಿತವಾಗಿ ಕಾಯ್ದಿರಿಸುತ್ತಾರೆ. ಇದರಿಂದ ಚಳಿಗಾಲದಲ್ಲಿ ಬೆಳೆ ಕೊಯ್ಲು ಮಾಡುವಾಗ ಹೆಚ್ಚು ಹಣ ಕೊಟ್ಟು ಖರೀದಿಸುವುದು ತಪ್ಪುತ್ತದೆ. ನೆಲದಿಂದ ತೇವಾಂಶವನ್ನು ಹೀರದಂತೆ ತಡೆಯಲು ಕುಂಬಳಕಾಯಿಗಳನ್ನು ಛಾವಣಿಗೆ ನೇತುಹಾಕಲಾಗುತ್ತದೆ. ನೆಲದ ಮೇಲೆ ಬಿಟ್ಟರೆ, ಇವುಗಳ ಮೇಲೆ ಶಿಲೀಂಧ್ರ ಬೆಳೆಯುತ್ತದೆ. ಇದು ವಾದ್ಯದ ಕಂಪನಗಳು ಮತ್ತು ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ.

"ಮೊದಲೆಲ್ಲಾ ನಾವು ಪ್ರತಿ ಒಂದು ಪೀಸನ್ನು 200-300 ರೂಪಾಯಿ ಕೊಟ್ಟು ಖರೀದಿಸುತ್ತಿದ್ದೆವು. ಆದರೆ ಈಗ 1,000 ಇಲ್ಲವೇ 1,500 ರೂಪಾಯಿಗಳಿಗೆ ಏರಿಕೆಯಾಗಿದೆ," ಎಂದು ಇಮ್ತಿಯಾಜ್ ಸಿತಾರ್‌ಮೇಕರ್ ಹೇಳುತ್ತಾರೆ. ಇದನ್ನು ಹೇಳುತ್ತಾ ಅವರು ತಮಗೆ ಬೇಕಾದ ಆಕಾರ ಮತ್ತು ಗಾತ್ರವನ್ನು ಪಡೆಯಲು ಕುಂಬಳಕಾಯಿಯನ್ನು ಸ್ವಚ್ಛಗೊಳಿಸಿ ಕತ್ತರಿಸುತ್ತಿದ್ದರು. ಸಾಗಣೆ ವೆಚ್ಚವೂ ಹೆಚ್ಚಾಗಿ ಇದರ ಬೆಲೆ ಏರಿಕೆಯಾಗಿದೆ. ಮತ್ತೊಂದು ಸಮಸ್ಯೆಯೆಂದರೆ, ಇಮ್ತಿಯಾಜ್ ಹೇಳುವಂತೆ, ಕೈಯಿಂದ ತಯಾರಿಸಿದ ಉಪಕರಣಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ರೈತರು ಕುಂಬಳಕಾಯಿಯನ್ನು ಕಮ್ಮಿ ಬೆಳೆಯುತ್ತಿದ್ದಾರೆ. ಹೀಗಾಗಿ ಇದರ ಬೆಲೆ ಹೆಚ್ಚು ದುಬಾರಿಯಾಗಿದೆ.

ಟುಂಬಾ ಸಿದ್ಧವಾದ ಮೇಲೆ ಅದಕ್ಕೆ ಮರದ ಹಿಡಿಕೆಯನ್ನು ಅಳವಡಿಸಲಾಗುತ್ತದೆ. ಕುಶಲಕರ್ಮಿಗಳು ನಂತರ ವಿನ್ಯಾಸದ ಕೆಲಸ ಆರಂಭಿಸುತ್ತಾರೆ. ಇದು ಪೂರ್ತಿಯಾಗಲು ಒಂದು ವಾರ ಬೇಕು. ಹ್ಯಾಂಡ್ ಡ್ರಿಲ್‌ಗಳು ಮತ್ತು ಪ್ಲಾಸ್ಟಿಕ್ ಕೊರೆಯಚ್ಚುಗಳನ್ನು ಬಳಸಿ ಇರ್ಫಾನ್ ಸಿತಾರ್‌ಮೇಕರ್‌ನಂತಹ ಅನುಭವಿ ವಿನ್ಯಾಸಕರು ಮರವನ್ನು ಕೆತ್ತುತ್ತಾರೆ. "ಬಾಗಿಕೊಂಡು ಸುಮಾರು ಗಂಟೆಗಳ ಕೆಲಸ ಮಾಡುವುದರಿಂದ ಬೆನ್ನು ನೋವು ಮತ್ತು ಇತರ ಸಮಸ್ಯೆಗಳು ಬರುತ್ತವೆ,” ಎಂದು 48 ವರ್ಷ ವಯಸ್ಸಿನ ಇವರು ಹೇಳುತ್ತಾರೆ. "ಹಲವಾರು ವರ್ಷ ಈ ಕೆಲಸ ಮಾಡುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ," ಎಂದು ಅವರ ಪತ್ನಿ ಶಾಹೀನ್ ಹೇಳುತ್ತಾರೆ.

ವೀಡಿಯೊ ನೋಡಿ: ಮೀರಜ್‌ನ ಸಿತಾರ್‌ ತಯಾರಕರು

"ಕಲೆ ಅಥವಾ ಸಂಪ್ರದಾಯದ ವಿರುದ್ಧ ಯಾವತ್ತೂ ನಾನು ನಡೆದುಕೊಳ್ಳುವುದಿಲ್ಲ," ಎಂದು ಶಾಹೀನ್ ಸಿತಾರ್‌ಮೇಕರ್ ಹೇಳುತ್ತಾರೆ. "ನನ್ನ ಪತಿ ಕಠಿಣ ಪರಿಶ್ರಮದಿಂದ ಗಳಿಸಿದ ಹೆಸರಿನ ಬಗ್ಗೆ ನನಗೆ ಹೆಮ್ಮೆಯಿದೆ," ಎನ್ನುತ್ತಾರೆ ಅವರು. ಗೃಹಿಣಿ ಮತ್ತು ಎರಡು ಮಕ್ಕಳ ತಾಯಿಯಾಗಿರುವ ಶಾಹೀನ್ ಅವರು ಈ ವೃತ್ತಿಯಿಂದ ಆದಾಯ ಬಂದರೂ, ಇದರಿಂದ ಉಂಟಾಗುವ ದೈಹಿಕ ಪರಿಣಾಮಗಳನ್ನು ಒಪ್ಪುವುದಿಲ್ಲ. “ನನ್ನ ಗಂಡನ ದಿನಾ ಗಳಿಸಿದರೆ ಮಾತ್ರ ನಾವು ಹೊಟ್ಟೆ ತುಂಬಿಸಿಕೊಳ್ಳಬಹುದು. ಬದುಕಿನಲ್ಲಿ ನಾನು ಸಂತೋಷವಾಗಿದ್ದೇನೆ, ಆದರೆ ನಮ್ಮ ಅವಶ್ಯಕತೆಗಳನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ,” ಎಂದು ತನ್ನ ಅಡುಗೆಮನೆಯಲ್ಲಿ ನಿಂತುಕೊಂಡು ಅವರು ಹೇಳುತ್ತಾರೆ.

ಅವರ ಇಬ್ಬರು ಗಂಡು ಮಕ್ಕಳು ತಮ್ಮ ಅಜ್ಜನ ಸಹೋದರನಿಂದ ಸಿತಾರ್ ನುಡಿಸುವುದನ್ನು ಕಲಿಯುತ್ತಿದ್ದಾರೆ. "ಅವರು ಚೆನ್ನಾಗಿ ನುಡಿಸುತ್ತಾರೆ. ಭವಿಷ್ಯದಲ್ಲಿ ಅವರಿಬ್ಬರೂ ಒಳ್ಳೆಯ ಹೆಸರನ್ನು ಮಾಡುತ್ತಾರೆ," ಎಂದು ಶಾಹೀನ್ ಹೇಳುತ್ತಾರೆ,

ಕೆಲವು ಸಿತಾರ್‌ಮೇಕರ್‌ಗಳು ಕುಂಬಳಕಾಯಿಯನ್ನು ಕತ್ತರಿಸುವ, ಇಲ್ಲವೇ ಅವುಗಳ ಮೇಲೆ ವಿನ್ಯಾಸವನ್ನು ಮಾಡುವ ಕೆಲಸವನ್ನು ಮಾತ್ರ ಮಾಡುತ್ತಾರೆ. ಆ ಕೆಲಸಕ್ಕೆ ಅವರಿಗೆ ಪ್ರತಿದಿನ ಸಂಬಳ ನೀಡಲಾಗುತ್ತದೆ. ಕೆಲಸದ ಪ್ರಮಾಣ ಮತ್ತು ಸ್ವರೂಪದ ಆಧಾರದ ಮೇಲೆ ವಿನ್ಯಾಸಕರು ಮತ್ತು ವರ್ಣಚಿತ್ರಕಾರರಿಗೆ 350-500 ರುಪಾಯಿ ನೀಡಲಾಗುತ್ತದೆ. ಹಾಗಿದ್ದೂ, ಮೊದಲ ಹಂತದಿಂದಲೇ, ಅಂದರೆ ಕುಂಬಳಕಾಯಿಯನ್ನು ತೊಳೆಯುವುದರಿಂದ ಹಿಡಿದು ಕೊನೆಯ ಕೋಟ್ ಪಾಲಿಷ್ ಮಾಡಿ, ವಾದ್ಯವನ್ನು ಟ್ಯೂನ್ ಮಾಡುವವರೆಗೆ ಇಡೀ ಸಿತಾರ್‌ ತಯಾರಿಸುವವರೂ ಇದ್ದಾರೆ. ಕೈಯಿಂದ ತಯಾರಿಸಿದ ಸಿತಾರ್‌ನ ಬೆಲೆ ಸುಮಾರು 30,000–35,000 ರುಪಾಯಿ.

ಮನೆಯಲ್ಲಿರುವ ಮಹಿಳೆಯರನ್ನು ಸಾಮಾನ್ಯವಾಗಿ ಈ ವೃತ್ತಿಯಿಂದ ಹೊರಗಿಡಲಾಗಿದೆ. "ನಾನು ನಿಮಗೆ ನಿಜ ಹೇಳುತ್ತೇನೆ, ನನ್ನ ಹೆಣ್ಣುಮಕ್ಕಳು ಈಗ ಇದನ್ನು ಕಲಿಯಲು ಪ್ರಾರಂಭಿಸಿದರೆ, ಕೆಲವೇ ದಿನಗಳಲ್ಲಿ ಈ ಕರಕುಶಲ ವೃತ್ತಿಯನ್ನು ಮಾಡಲು ಆರಂಭಿಸುತ್ತಾರೆ. ಇಬ್ಬರೂ ಶೈಕ್ಷಣಿಕವಾಗಿ ಒಳ್ಳೆಯ ಸಾಧನೆ ಮಾಡಿರುವುದು ನನಗೆ ಹೆಮ್ಮೆ ತಂದಿದೆ,” ಎನ್ನುತ್ತಾರೆ ಇಬ್ಬರು ಹೆಣ್ಣು ಮಕ್ಕಳ ತಂದೆ ಗೌಸ್.  55 ವರ್ಷ ಹರೆಯದ ಇವರು ತಮ್ಮ ಬಾಲ್ಯದಿಂದಲೂ ಸಿತಾರ್‌ಗಳಿಗೆ ಪಾಲಿಶ್ ಮತ್ತು ಫಿಟ್ಟಿಂಗ್ ಮಾಡುತ್ತಿದ್ದಾರೆ. "ಹುಡುಗಿಯರು ಕೊನೆಯಲ್ಲಿ ಮದುವೆಯಾಗುತ್ತಾರೆ. ಅನೇಕ ಬಾರಿ ಅವರು ಸಿತಾರ್ ತಯಾರಿಕೆ ಮಾಡದ ಕುಟುಂಬಕ್ಕೆ ಮದುವೆಯಾಗಿ ಹೋಗುತ್ತಾರೆ. ಅಲ್ಲಿ ಅವರ ಕೌಶಲ್ಯ ಉಪಯೋಗಕ್ಕೆ ಬರುವುದಿಲ್ಲ,” ಎಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಮಹಿಳೆಯರು ಗೂಟಗಳಿಗೆ ಪಾಲಿಶ್‌ ಹಾಕುವುದು ಅಥವಾ ತಯಾರಿಕೆಯಲ್ಲಿ ಕೆಲವು ಸಣ್ಣ ಕೆಲಸಗಳನ್ನು ಮಾಡುತ್ತಾರೆ. ಆದರೆ ಸಾಮಾನ್ಯವಾಗಿ ಪುರುಷರು ಮಾಡುವ ಕೆಲಸವನ್ನು ಮಹಿಳೆಯರು ಮಾಡಿದರೆ ಸಮುದಾಯ ಅಸಮಧಾನಗೊಳ್ಳುತ್ತದೆ ಮತ್ತು ವರನ ಮನೆಯವರು ಅದನ್ನು ಒಪ್ಪುವುದಿಲ್ಲ ಎಂದು ಅವರು ಚಿಂತೆಯಿಂದ ಹೇಳುತ್ತಾರೆ.

Left:  Irfan Sitarmaker carves patterns and roses on the sitar's handle using a hand drill.
PHOTO • Prakhar Dobhal
Right: Wood is stored and left to dry for months, and in some instances years, to season them
PHOTO • Prakhar Dobhal

ಎಡಕ್ಕೆ: ಇರ್ಫಾನ್ ಸಿತಾರ್‌ಮೇಕರ್ ಕೈಯಿಂದ ಬಳಸುವ ಡ್ರಿಲ್‌ನಿಂದ ಸಿತಾರ್‌ನ ಹ್ಯಾಂಡಲ್‌ನಲ್ಲಿ ವಿನ್ಯಾಸಗಳನ್ನು ಮತ್ತು ಗುಲಾಬಿಗಳ ಕೆತ್ತನೆಗಳನ್ನು ಮಾಡುತ್ತಾರೆ. ಬಲ: ಮರವನ್ನು ಸಂಗ್ರಹಿಸಿ ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳ ವರೆಗೆ ಒಣಗಿಸಲಾಗುತ್ತದೆ

Left: Fevicol, a hammer and saws are all the tools needed for the initial steps in the process.
PHOTO • Prakhar Dobhal
Right: Imtiaz Sitarmaker poses with the sitar structure he has made. He is responsible for the first steps of sitar- making
PHOTO • Prakhar Dobhal

ಎಡಕ್ಕೆ: ಫೆವಿಕಾಲ್, ಸುತ್ತಿಗೆ ಮತ್ತು ಗರಗಸಗಳು- ಇವು ತಯಾರಿಕೆಯ ಆರಂಭಿಕ ಹಂತಗಳಲ್ಲಿ ಅಗತ್ಯವಿರುವ  ಸಲಕರಣೆಗಳು. ಬಲ: ತಾವು ತಯಾರಿಸಿದ ಸಿತಾರ್ ರಚನೆಯೊಂದಿಗೆ ಇಮ್ತಿಯಾಜ್ ಸಿತಾರ್‌ಮೇಕರ್. ಸಿತಾರ್ ತಯಾರಿಕೆಯ ಮೊದಲ ಹಂತಗಳ ಜವಾಬ್ದಾರಿಗಳನ್ನು ಇವರು ನಿರ್ವಹಿಸುತ್ತಾರೆ

*****

ಹತ್ತೊಂಬತ್ತನೇ ಶತಮಾನದಲ್ಲಿ ಮೀರಜ್‌ನ ರಾಜ ಶ್ರೀಮಂತ್ ಬಾಳಾಸಾಹೇಬ್ ಪಟವರ್ಧನ್ II ರ ಆಳ್ವಿಕೆಯ ಕಾಲಘಟ್ಟದಲ್ಲಿ ಸಿತಾರ್‌ಮೇಕರ್‌ಗಳು ತಂತಿ ವಾದ್ಯಗಳ ವ್ಯಾಪಾರದಲ್ಲಿ ಹೆಸರುವಾಸಿಯಾಗಿದ್ದರು. ಸ್ವತಃ ಸಂಗೀತ ಪೋಷಕನೂ ಆಗಿದ್ದ ರಾಜ, ಆಗ್ರಾ- ಬನಾರಸ್‌ನಂತಹ ಅನೇಕ ಪ್ರದೇಶಗಳ ಸಂಗೀತಗಾರರನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದನು. ಆದರೆ ಅವರು ಬರುವಾಗ ದಾರಿಯಲ್ಲಿಯೇ ಅನೇಕ ವಾದ್ಯಗಳು ಹಾನಿಗೊಳಗಾಗುವುದನ್ನು ಕಂಡ ರಾಜ, ಈ ಸಮಸ್ಯೆಯನ್ನು ಪರಿಹರಿಸಲು ಇವುಗಳ ದುರಸ್ತಿ ಮಾಡುವವರನ್ನೂ ಹುಡುಕಬೇಕಾಗಿತ್ತು.

"ಈ ಹುಡುಕಾಟ ರಾಜನನ್ನು ಶಿಕಾಲ್‌ಗಾರ್‌ ಸಮುದಾಯದ ಇಬ್ಬರು ಸಹೋದರರಾದ ಮೊಹಿನುದ್ದೀನ್ ಮತ್ತು ಫರೀದ್ಸಾಹೇಬ್ ಅವರ ಬಳಿಗೆ ಕರೆದೊಯ್ಯಿತು," ಎಂದು ಆರನೇ ತಲೆಮಾರಿನ ಸಿತಾರ್‌ಮೇಕರ್ ಇಬ್ರಾಹಿಂ ಹೇಳುತ್ತಾರೆ. ಮಹಾರಾಷ್ಟ್ರದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಬರುವ ಕಮ್ಮಾರಿಕೆ ಕೆಲಸ ಮಾಡುವ ಶಿಕಾಲ್‌ಗಾರ್‌ಗಳು ಶಸ್ತ್ರಾಸ್ತ್ರಗಳು ಮತ್ತು ಇತರ ಉಪಕರಣಗಳನ್ನು ತಯಾರಿಸುತ್ತಿದ್ದರು. "ರಾಜನ ಕೋರಿಕೆಯ ಮೇರೆಗೆ ಅವರು ಸಂಗೀತ ವಾದ್ಯಗಳನ್ನು ಸರಿಪಡಿಸಲು ಪ್ರಯತ್ನಿಸಿದರು; ಕಾಲಾನಂತರದಲ್ಲಿ, ಇದೇ ಅವರ ಮುಖ್ಯ ಉದ್ಯೋಗವಾಯಿತು. ಅವರ ಹೆಸರು ಕೂಡ ಶಿಕಾಲ್‌ಗಾರ್‌ನಿಂದ ಸಿತಾರ್‌ಮೇಕರ್ ಎಂದು ಬದಲಾಯಿತು,” ಎಂದು ಇಬ್ರಾಹಿಂ ಹೇಳುತ್ತಾರೆ. ಇಂದಿಗೂ ಮೀರಜ್‌ನಲ್ಲಿರುವ ಇವರ ವಂಶಸ್ಥರು ಸಾಮಾನ್ಯವಾಗಿ ಈ ಎರಡೂ ಬಿರುದುಗಳನ್ನು ತಮ್ಮ ಕೊನೆಯ ಹೆಸರುಗಳಾಗಿ ಬಳಸುತ್ತಿದ್ದಾರೆ.

ಹೀಗಿದ್ದೂ, ಈ ವಂಶದ ಹೊಸ ಪೀಳಿಗೆಗೆ ಈ ವ್ಯಾಪಾರವನ್ನು ಮುಂದುವರಿಸಲು ಐತಿಹಾಸಿಕ ಪಾರಂಪರಿಕ ಮೌಲ್ಯಕ್ಕಿಂತ ಬೇರೆ ಹೆಚ್ಚಿನ ಅಗತ್ಯಗಳೂ ಇವೆ. ಶಾಹೀನ್ ಮತ್ತು ಇರ್ಫಾನ್ ಅವರ ಮಕ್ಕಳಂತೆ, ಇತರರ ಮಕ್ಕಳು ಸಹ ಸಿತಾರ್ ತಯಾರಿಕೆ ಕಲಿಯುವುದಕ್ಕಿಂತ ಹೆಚ್ಚಾಗಿ ಸಿತಾರ್ ನುಡಿಸಲು ಆರಂಭಿಸಿದ್ದಾರೆ.

ವಿವಿಧ ಸಂಗೀತ ವಾದ್ಯಗಳ ಧ್ವನಿಗಳನ್ನು ಹೊಮ್ಮಿಸುವ ಸಾಮರ್ಥ್ಯವಿರುವ ಸಾಫ್ಟ್‌ವೇರ್ ಮಾರುಕಟ್ಟೆಗೆ ಬಂದಿರುವುದರಿಂದ, ಕೈಯಿಂದ ತಯಾರಿಸಿದ ಸಿತಾರ್‌ಗಳು ಮತ್ತು ತಂಬೂರಿಗಳನ್ನು ಬಳಸುವುದು ಕಡಿಮೆಯಾಗಿ ವ್ಯಾಪಾರದ ಮೇಲೆ ಪೆಟ್ಟು ಬಿದ್ದಿದೆ. ಕೈಯಿಂದ ತಯಾರಿಸಿದ ಸಿತಾರ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಯಂತ್ರದಿಂದ ತಯಾರಿಸಿದ ಸಿತಾರ್‌ಗಳು ಸಿಗುತ್ತಿರುವುದು ಸಿತಾರ್‌ಮೇಕರ್‌ಗಳಿಗೆ ಸಮಸ್ಯೆಗಳನ್ನು ತಂದೊಡ್ಡಿದೆ.

Left: Gaus Sitarmaker is setting the metal pegs on the sitar, one of the last steps in the process. The pegs are used to tune the instrument.
PHOTO • Prakhar Dobhal
Right: Japanese steel strings sourced from Mumbai are set on a camel bone clog. These bones are acquired from factories in Uttar Pradesh
PHOTO • Prakhar Dobhal

ಎಡಕ್ಕೆ: ಸಿತಾರ್‌ಗೆ ಲೋಹದ ಗೂಟಗಳನ್ನು ಜೋಡಿಸುತ್ತಿರುವ ಗೌಸ್ ಸಿತಾರ್‌ಮೇಕರ್. ಇದು ತಯಾರಿಕೆಯ ಕೊನೆಯ ಹಂತದ ಕೆಲಸಗಳಲ್ಲಿ ಒಂದು. ವಾದ್ಯವನ್ನು ಟ್ಯೂನ್ ಮಾಡಲು ಗೂಟಗಳನ್ನು ಬಳಸಲಾಗುತ್ತದೆ. ಬಲ: ಮುಂಬೈನಿಂದ ತರಿಸಲಾದ ಒಂಟೆ ಮೂಳೆಯ ಕ್ಲಾಗ್‌ನಲ್ಲಿ ಜೋಡಿಸಲಾದ ಜಪಾನ್ ಉಕ್ಕಿನ ತಂತಿಗಳು. ಈ ಮೂಳೆಗಳನ್ನು ಉತ್ತರ ಪ್ರದೇಶದ ಕಾರ್ಖಾನೆಗಳಿಂದ ಖರೀದಿಸಲಾಗುತ್ತದೆ

Left: Every instrument is hand polished  multiple times using surgical spirit.
PHOTO • Prakhar Dobhal
Right: (from left to right) Irfan Abdul Gani Sitarmaker, Shaheen Irfan Sitarmaker, Hameeda Abdul Gani Sitaramker (Irfan’s mother) and Shaheen and Irfan's son Rehaan
PHOTO • Prakhar Dobhal

ಎಡ: ಸರ್ಜಿಕಲ್ ಸ್ಪಿರಿಟ್ ಬಳಸಿ ಪ್ರತಿಯೊಂದು ಉಪಕರಣವನ್ನೂ ಅನೇಕ ಬಾರಿ ಕೈಯಿಂದ ಪಾಲಿಶ್ ಮಾಡಲಾಗುತ್ತದೆ. ಬಲಕ್ಕೆ: (ಎಡದಿಂದ ಬಲಕ್ಕೆ) ಇರ್ಫಾನ್ ಅಬ್ದುಲ್ ಗನಿ ಸಿತಾರ್‌ಮೇಕರ್, ಶಾಹೀನ್ ಇರ್ಫಾನ್ ಸಿತಾರ್‌ಮೇಕರ್, ಹಮೀದಾ ಅಬ್ದುಲ್ ಗನಿ ಸಿತಾರ್‌ಮೇಕರ್ (ಇರ್ಫಾನ್ ಅವರ ತಾಯಿ) ಮತ್ತು ಶಾಹೀನ್ ಹಾಗೂ ಇರ್ಫಾನ್ ಅವರ ಮಗ ರೆಹಾನ್‌

ಸಂಪಾದನೆಗಾಗಿ ಸಿತಾರ್ ತಯಾರಕರು ಈಗ ಪ್ರವಾಸಿಗರಿಗಾಗಿ ಚಿಕಣಿ ಸಿತಾರ್‌ಗಳನ್ನು ತಯಾರಿಸುತ್ತಾರೆ. 3,000-5,000 ರುಪಾಯಿ ನಡುವಿನ ಬೆಲೆಗೆ ಮಾರಾಟವಾಗುವ ಇವುಗಳನ್ನು ಕುಂಬಳಕಾಯಿಯ ಬದಲಿಗೆ ಫೈಬರ್‌ನಿಂದ ತಯಾರಿಸಲಾಗುತ್ತದೆ.

ಸರ್ಕಾರದಿಂದ ಸಿಗಬೇಕಾದ ಮಾನ್ಯತೆ ಮತ್ತು ನೆರವು ಬರುವುದು ನಿಧಾನವಾಗುತ್ತಿದೆ. ಕಲಾವಿದರಿಗಾಗಿ ಹಲವಾರು ಯೋಜನೆ ಗಳಿದ್ದರೂ, ವಾದ್ಯಗಳನ್ನು ತಯಾರಿಸುವವರನ್ನು ಇನ್ನೂ ಗುರುತಿಸಲಾಗಿಲ್ಲ. “ಸರ್ಕಾರ ನಮ್ಮನ್ನು ಮತ್ತು ನಮ್ಮ ಪ್ರಯತ್ನಗಳನ್ನು ಗುರುತಿಸಿದರೆ, ನಾವು ಇನ್ನೂ ಒಳ್ಳೆಯ ಗುಣಮಟ್ಟದ ವಾದ್ಯಗಳನ್ನು ತಯಾರಿಸಬಹುದು. ಇದರಿಂದ ಕಲಾವಿದರಿಗೆ ಆರ್ಥಿಕವಾಗಿ ನೆರವಾಗುತ್ತದೆ ಮತ್ತು ಅವರ ಶ್ರಮಕ್ಕೆ ಒಂದು ಗೌರವ ಸಿಕ್ಕಿದೆ ಎಂಬ ಭಾವನೆಯೂ ಬರುತ್ತದೆ,” ಎಂದು ಇಬ್ರಾಹಿಂ ಹೇಳುತ್ತಾರೆ. ಅಹೆಮಾಡೋಸ್‌ನಂತಹ ಅನುಭವಿಗಳು ತಮ್ಮಇಡೀ ಜೀವನವನ್ನು ಕರಕುಶಲತೆಗೆ ಅರ್ಪಿಸಿದ್ದಕ್ಕಾಗಿ ಯಾವುದೇ ವಿಷಾದವನ್ನು ಹೊಂದಿಲ್ಲ. "ಇಂದಿಗೂ ನೀವು ಯಾವುದೇ ನೆರವು ಅಥವಾ ಹಣಕಾಸಿನ ನೆರವು ಬೇಕೇ ಎಂದು ನನ್ನನ್ನು ಕೇಳಿದರೆ... ನಾನು ಬೇಡ ಎಂದು ಹೇಳುತ್ತೇನೆ. ಎಂದೆಂದಿಗೂ ಬೇಡ,” ಎಂದು ಅವರು ಹೇಳುತ್ತಾರೆ.

ಗ್ರಾಹಕರು ಈಗ ನೇರವಾಗಿ ತಯಾರಕರ ವೆಬ್‌ಸೈಟ್‌ಗಳಲ್ಲಿ ಆರ್ಡರ್‌ ನೀಡುವುದರಿಂದ ಅಂಗಡಿ ಮಾಲೀಕರು ಮತ್ತು ಮಧ್ಯವರ್ತಿಗಳು ಕಮಿಷನ್ ತೆಗೆದುಕೊಳ್ಳುವುದು ನಿಲ್ಲುತ್ತಿದೆ. ಹೆಚ್ಚಿನ ಗ್ರಾಹಕರು ದೇಶದೊಳಗಿನವರೇ, ಅಂತರಾಷ್ಟ್ರೀಯ ಗ್ರಾಹಕರು ವೆಬ್‌ಸೈಟ್‌ಗಳ ಮೂಲಕ ತಯಾರಕರನ್ನು ನೇರವಾಗಿ ಸಂಪರ್ಕಿಸಲು ಆರಂಭಿಸಿದ್ದಾರೆ.

ಕೈಯಿಂದ ಸಿತಾರ್ ತಯಾರಿಸುವುದನ್ನು ನೋಡಲು ವೀಡಿಯೊವನ್ನು ವೀಕ್ಷಿಸಿ ಮತ್ತು ಸಿತಾರ್ ತಯಾರಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರ ಮಾತುಗಳನ್ನು ಕೇಳಿ.

ಅನುವಾದ: ಚರಣ್‌ ಐವರ್ನಾಡು

Student Reporter : Swara Garge

ஸ்வரா கார்கே 2023ம் ஆண்டின் பாரி பயிற்சி பணியாளர். புனேவின் SIMC கல்வி நிறுவன முதுகலை மாணவர். கிராமப்புற பிரச்சினைகளிலும் பண்பாட்டிலும் பொருளாதாரத்திலும் ஆர்வம் கொண்ட காட்சிக் கதைசொல்லி அவர்.

Other stories by Swara Garge
Student Reporter : Prakhar Dobhal

பிரகார் தோபல் 2023ம் ஆண்டின் பாரி பயிற்சி பணியாளர். புனேவின் SIMC கல்வி நிறுவனத்தில் முதுகலை கல்வி பயின்று வருபவர். புகைப்படக் கலைஞரும் ஆவணப்பட இயக்குநருமான அவர், கிராமப்புற பிரச்சினைகள், அரசியல் மற்றும் பண்பாடு ஆகியவற்றில் ஆர்வம் கொண்டவர்.

Other stories by Prakhar Dobhal
Editor : Sarbajaya Bhattacharya

சர்பாஜயா பட்டாச்சார்யா பாரியின் மூத்த உதவி ஆசிரியர் ஆவார். அனுபவம் வாய்ந்த வங்க மொழிபெயர்ப்பாளர். கொல்கத்தாவை சேர்ந்த அவர், அந்த நகரத்தின் வரலாற்றிலும் பயண இலக்கியத்திலும் ஆர்வம் கொண்டவர்.

Other stories by Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad