ಸರಸ್ವತಿ ಬಾವ್ರಿಗೆ ಭಾರೀ ನಷ್ಟವಾಗಿದೆ.
ಇವಳ ಸಬೂಜ್ ಸಾಥಿ ಸೈಕಲ್ ಕಳವಾದ ಮೇಲೆ ಶಾಲೆಗೆ ಹೋಗುವುದೇ ದೊಡ್ಡ ಸವಾಲಾಗಿ ಹೋಗಿದೆ. ಸರ್ಕಾರಿ ಶಾಲೆಗಳ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಈ ಸುಂದರವಾದ ಯಂತ್ರವನ್ನು ಪಡೆದುಕೊಂಡ ದಿನವನ್ನು ಸರಸ್ವತಿ ನೆನಪಿಸಿಕೊಳ್ಳುತ್ತಾಳೆ. ಓಹ್! ಸೂರ್ಯನ ಬೆಳಕಿನಡಿ ಅದು ಹೊಳೆಯುತ್ತಿತ್ತು!
ಇಂದು ಒಂದು ನಂಬಿಕೆಯನ್ನು ಇಟ್ಟುಕೊಂಡು ಹೊಸ ಸೈಕಲ್‌ಗಾಗಿ ಮನವಿ ಸಲ್ಲಿಸಲು ಗ್ರಾಮಪ್ರಧಾನರ ಬಳಿಗೆ ಬಂದಿದ್ದಾಳೆ. "ಸೈಕಲ್ ತೋ ಪೇ ಜಬಿ ರೆ ಚುರಿ, ಕಿಂತು ತೋರ್ ಇಸ್ಕುಲ್-ತಾ ಅರ್ ಕೊಡಿನ್ ಥಕ್ಬೆ ಸೇಟಾ ದ್ಯಾಖ್ ಅಗೇ [ಮಗೂ, ನಿಂಗೆ ಸೈಕಲ್ ಏನೋ ಸಿಗಬಹುದು, ಆದರೆ ನಿನ್ನ ಶಾಲೆ ಹೆಚ್ಚು ಕಾಲ ಇಲ್ಲಿ ಇರುವುದಿಲ್ಲ]," ಎಂದು ಸರಪಂಚರು ಭುಜ ತಟ್ಟುತ್ತಾ, ಮುಗುಳು ನಗುತ್ತಾ ಹೇಳಿದರು. ಇದನ್ನು ಕೇಳಿ ಸರಸ್ವತಿಯ ಪಾದದ ಕೆಳಗಿನ ನೆಲ ಅದುರಿ ಹೋದಂತೆ ಅನ್ನಿಸಿತು. ಗ್ರಾಮಪ್ರಧಾನರ ಮಾತಿನ ಅರ್ಥವಾದರೂ ಏನು? ಶಾಲೆಗೆ ಹೋಗಲು ಪ್ರತಿದಿನ ಅವಳು 5 ಕಿಲೋಮೀಟರ್ ಸೈಕಲ್ ತುಳಿಯಬೇಕು. ಈಗ ಇಲ್ಲಿ ಶಾಲೆ ಇಲ್ಲವಾದರೆ, ಮುಂದೆ ಹತ್ತಿಪ್ಪತ್ತು ಕಿಲೋ ಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚು ದೂರ ಸೈಕಲ್ ತುಳಿದು ಹೋಗಬೇಕಾಗುತ್ತದೆ, ಅಲ್ಲಿಗೆ ಎಲ್ಲವೂ ಮುಗಿದಂತೆ. ಕನ್ಯಾಶ್ರೀ ಯೋಜನೆಯಲ್ಲಿ ವರ್ಷಕ್ಕೆ ಒಂದು ಸಾವಿರ ರೂಪಾಯಿ ಬರುತ್ತದೆ. ಆದರೆ ತನಗೆ ಮದುವೆಯಾಗಲು ಒತ್ತಾಯಿಸುತ್ತಿರುವ ತನ್ನ ತಂದೆಯೊಂದಿಗೆ ಹೋರಾಡಲು ಆ ಹಣ ಸಾಕಾಗುವುದಿಲ್ಲ.
ಸೈಕಲ್
ಶಾಲೆಗೆ ಹೊರಟಳು ಪುಟ್ಟಿ ಶಾಲೆಗೆ ಹೊರಟಳು
ಸರ್ಕಾರಿ ಸೈಕಲ್ಲನ್ನೇರಿ ʼಮೊಹುಲ್ ದಾಟುತ್ತಾ..
ಬಲಶಾಲಿ ಉಕ್ಕಿನ ನೇಗಿಲಿನ ಹಾಗೆ
ಈಗ ಬಾಬೂಗಳಿಗೆ ಬೇಕಂತೆ ಈ ಭೂಮಿ
ಹಾಗಿದ್ದರೆ ಈ ಶಾಲೆ ಮುಚ್ಚಿ ಹೋಗಲಿದೆಯೇ?
ಯಾಕೆ ಪುಟ್ಟಿ ನೀನು ಇಷ್ಟು ಬೇಸರದಲ್ಲಿರುವೆ?
*****
ಫುಲ್ಕಿ ತುಡುರವರ ಮಗ ಬುಲ್ಡೋಜರ್ ಬಿಟ್ಟುಹೋಗಿರುವ ಟ್ರ್ಯಾಕ್‌ನ ಮಾರ್ಕ್‌ಗಳ ಮೇಲೆ ಆಟ ಆಡುತ್ತಿದ್ದಾನೆ.
ಫುಲ್ಕಿಯವರಿಗಿರುವ ಒಂದೇ ಒಂದು ಬರವಸೆಯೆಂದರೆ ನೆಮ್ಮದಿಯಿಂದ ಬದುಕುವುದು, ಆದರೆ ಅದನ್ನು ಸುಲಭವಾಗಿ ದಕ್ಕಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಕೋವಿಡ್ ನಂತರವಂತೂ ಸಾಧ್ಯವೇ ಆಗಲಿಲ್ಲ. ಅದರಲ್ಲೂ ಇವರು ಚಾಪ್-ಘುಗ್ನಿ (ಮಸಾಲೆ ಹಾಕಿ ಮಾಡಿದ ಕಡಲೆ ಅಥವಾ ಬಟಾಣಿಯ ಬಜ್ಜಿ) ಮಾರುವ ಇವರ ಚಿಕ್ಕ ಗುಮ್ಟಿಯ (ಗೂಡಂಗಡಿ) ಮೇಲೆ ಸರ್ಕಾರ ಬುಲ್ಡೋಜರ್ ಹತ್ತಿಸಿದ ಮೇಲಂತೂ ಇದು ಸಾಧ್ಯವೇ ಆಗಲಿಲ್ಲ. ಅದೇ ಜನ ಫಾಸ್ಟ್ ಫುಡ್ ಮತ್ತು ಪಕೋಡಾ ಮಾರಾಟವನ್ನು ತಮ್ಮ ಕೈಗಾರಿಕಾ ಶಕ್ತಿಯ ಮೂಲಾಧಾರ ಎಂದು ಹೊಗಳುತ್ತಾರೆ. ಫುಲ್ಕಿ ಗೂಡಂಗಡಿ ಹಾಕಲು ಮುಂದಾದಾಗ ಇವರ ಉಳಿತಾಯದ ಹಣವನ್ನೆಲ್ಲ ದೋಚಿದ ಅದೇ ಜನ ಈಗ ಅತಿಕ್ರಮಣವನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ಸಾಲವನ್ನು ತೀರಿಸಲು ಇವರ ಪತಿ ಮುಂಬೈಗೆ ಹೋಗಿ ದಿನನಿತ್ಯ ಕಟ್ಟಡದ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಾರೆ. "ಈ ಪಕ್ಷ ‘ನಿಮಗೆ ತಿಂಗಳಿಗೆ 1200 ರೂಪಾಯಿಗಳನ್ನು ಕೊಡುತ್ತೇವೆ’ ಎಂದು ಹೇಳುತ್ತದೆ. ಇನ್ನೊಂದು ಪಕ್ಷ ‘ನಾವು ನಿಮಗೆ ದೇವರನ್ನು ಕೊಡುತ್ತೇವೆʼ ಎಂದು ಹೇಳುತ್ತದೆ. ಹಾಳಾದ ಲೊಖ್ಖಿರ್ ಬಂಡಾರ್, ಹಾಳಾದ ಮಂದಿರ-ಮಸೀದಿ, ನನಗೆ ಇವೆಲ್ಲಾ ಯಾಕೆ ಬೇಕು?” ಎಂದು ಕೋಪದಿಂದ ಹೇಳುತ್ತಾರೆ. "ಹೋತೋಭಾಗರ್ ದೋಲ್, ಏಗೇ ಅಮರ್ 50 ಹಾಜರ್ ತಕರ್ ಕಟ್-ಮನಿ ಫೆರೋಟ್ ಡೆ [ಹಾಳಾದವರೇ! ಮೊದಲು ನಾನು ಕೊಟ್ಟ ಐವತ್ತು ಸಾವಿರ ರುಪಾಯಿ ಲಂಚದ ಹಣವನ್ನು ವಾಪಾಸ್ ಕೊಡಿ]!”ಎಂದು ಸಿಟ್ಟಿನಿಂದ ಗೊಣಗುತ್ತಾ ತನ್ನ ನೋವನ್ನು ಹೊರಹಾಕುತ್ತಾರೆ.
ಬುಲ್ಡೋಜರ್
ಸಾಲ ನಮ್ಮ ಜನ್ಮಸಿದ್ಧ ಹಕ್ಕು, ಭರವಸೆ ನಮ್ಮ ಪಾಲಿನ ನರಕ,
ಹಿಟ್ಟಿನಲ್ಲಿ ಅದ್ದಿದ ಬಜ್ಜಿಗಳನ್ನು ನಾವು ಮಾರುತ್ತೇವೆ.
ಲೊಖ್ಖಿರ್ ಭಂಡಾರ್,
ಕೆಳಗೆ, ಅಡಿಯಲ್ಲಿ,
ದೇಶಗಳನ್ನು ನಾವು ಬೆವೆತಿರುವ ಬೆನ್ನಿನ ಮೇಲೆ ಹೊತ್ತು ಸಾಗಿಸುತ್ತೇವೆ -
ಕೆಲವರು ನಮ್ಮನ್ನು ಹದಿನೈದು ಲಕ್ಷಕ್ಕೆ ಒತ್ತೆ ಇಟ್ಟಿಲ್ಲವೇ?
*****
ಉಳಿದವರಿಗಿಂತ ಇವರು ಮನರೇಗಾದ ಅಡಿಯಲ್ಲಿ 100 ರಲ್ಲಿ 100 ಅಂಕಗಳನ್ನು ಪಡೆದಿದ್ದಾರೆ; ನಿಜವಾಗಿಯೂ ಇದೊಂದು ಸಂಭ್ರಮಿಸುವ ವಿಷಯವಾಗಿತ್ತು. ಇಲ್ಲ! ಲಾಲು ಬಗ್ದಿಯವರು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಅಥವಾ ರಾಜ್ಯ ಸರ್ಕಾರದ ಮಿಷನ್ ನಿರ್ಮಲ್ ಬಾಂಗ್ಲಾ ಅಡಿಯಲ್ಲಿ ಇವರು ಕೆಲಸದ ದಿನಗಳನ್ನು ಪೂರ್ಣಗೊಳಿಸಿದ್ದಾರೆಯೇ ಎಂಬುದು ಸರ್ಕಾರಿ ಬಾಬುಗಳಿಗೆ (ಸರ್ಕಾರಿ ಅಧಿಕಾರಿಗಳಿಗೆ) ಕೂಡ ತಿಳಿದಿಲ್ಲ. ಹೀಗಾಗಿ ಅದರಲ್ಲಿ ಸಿಗುವ ಹಣವೂ ಅಧಿಕಾರಶಾಹಿಗಳ ಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡಿದೆ.
"ಸೊಬ್ ಶಾಲಾ ಮಕಲ್ ಫೋಲ್ [ಹಾಳಾದವರು, ಯಾವುದಕ್ಕೂ ಉಪಯೋಗಕ್ಕೆ ಬಾರದವರು, ಎಲ್ಲರೂ ಕೂಡ]," ಎಂದು ಲಾಲು ಬಗ್ದಿಯವರು ಹಿಡಿಶಾಪ ಹಾಕುತ್ತಿದ್ದಾರೆ. ಗುಡಿಸುವುದೆಂದರೆ ಗುಡಿಸುವುದು, ಕಸವೆಂದರೆ ಬರೀ ಕಸವಷ್ಟೇ, ಅಲ್ಲವೇ? ಯೋಜನೆಯ ಹೆಸರಿನಲ್ಲಿ ಏನಿದೆ? ಕೇಂದ್ರ, ರಾಜ್ಯ, ಇದೆಲ್ಲಾ ಮುಖ್ಯವೇ? ಸರಿ, ಅದಾಯ್ತು. ದೇಶದ ಮೇಲೆ ದುರಭಿಮಾನ ಇರುವ ಮೂರ್ಖನಿಗೆ ಕಸವೂ ಒಂದು ರಾಜಕೀಯದ ವಸ್ತು.
ಕಸದ ಡಬ್ಬಿ
ನಮಸ್ಕಾರ ನಿರ್ಮಲ್, ಹೇಗಿದ್ದೀಯಾ?
"ಇನ್ನೂ ಸಂಬಳ ಸಿಗದ ಪೌರ ಕಾರ್ಮಿಕರು ಸರದಿಯಲ್ಲಿ ನಿಂತಿದ್ದಾರೆ."
ಇಲ್ಲಿನ ನದಿಗಳಲ್ಲಿ ಶವಗಳು ತೇಲುವುದಿಲ್ಲ...
ಕಾರ್ಮಿಕ ಹಕ್ಕುಗಳು? ಅವು ಕಾಣೆಯಾಗಿವೆ...
ಹೇ ಹೋ ಸ್ವಚ್ಛ್ ಭಾಯ್, ಹೇಗಿದ್ದೀಯಾ?
"ನನ್ನ ಬೆವರು ಕೇಸರಿ, ನನ್ನ ರಕ್ತ ಹಸಿರು."
*****
ಫಾರೂಕ್ ಮೊಂಡಲ್ ಅವರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲೂ ಸಾಧ್ಯವಿಲ್ಲ! ಬರಗಾಲದ ದಿನಗಳು ಕಳೆದ ನಂತರ ಮಳೆ ಬಂತು, ನಂತರ ಅವರು ಕೊಯ್ಲು ಮಾಡುತ್ತಿದ್ದಂತೆ, ಹಠಾತ್ ಬಂದ ಪ್ರವಾಹಕ್ಕೆ ಅವರ ತೋಟವೇ ಕೊಚ್ಚಿಹೋಯಿತು. "ಹಾಯ್ ಅಲ್ಲಾ, ಹೇ ಮಾ ಗೊಂಡೇಶ್ವರಿ, ಇತೋ ನೀತುರ್ ಕ್ಯಾನೆ ತೋಮ್ರಾ? [ಓ ಅಲ್ಲಾ, ಓ ಗೊಂಡೇಶ್ವರಿ ತಾಯಿ, ನೀನ್ಯಾಕೆ ಇಷ್ಟು ಕ್ರೂರಿ?]" ಎಂದು ಅವರು ಕೇಳುತ್ತಾರೆ.
ಜಂಗಲ್‌ಮಹಲ್‌ಗಳು - ನೀರಿನ ಸಮಸ್ಯೆ ಯಾವಾಗಲೂ ಇರುತ್ತದೆ, ಆದರೆ ಭರವಸೆಗಳು, ಪಾಲಿಸಿಗಳು, ಯೋಜನೆಗಳು ಮಾತ್ರ ಬೇಕಾದಷ್ಟು ಇವೆ. ಸಜಲ್ ಧಾರಾ, ಅಮೃತ್ ಜಲ. ಈ ಹೆಸರೇ ಕೋಮು ವಿವಾದದ ಮೂಲವಾಗಿದೆ, ಇದು ಜೋಲ್ (ಜಲ) ಅಥವಾ ಪಾನಿಯೋ (ನೀರೋ)? ಪೈಪ್‌ಗಳನ್ನು ಹಾಕಲಾಗಿದೆ, ಇದರಲ್ಲಿ ಹಣ ಹರಿದುಬರುತ್ತದೆ, ಆದರೆ ಕುಡಿಯಲು ಯೋಗ್ಯವಾದ ಒಂದೇ ಒಂದು ಹನಿ ನೀರಿಲ್ಲ. ಹತಾಶೆಗೊಂಡ ಫಾರೂಕ್ ಮತ್ತು ಅವರ ಬೀಬಿಜಾನ್ ಬಾವಿಯೊಂದನ್ನು ತೋಡಲು ಆರಂಭಿಸಿದರು, ಕೆಂಪು ಮಣ್ಣನ್ನು ಅಗೆದು ಇನ್ನೂ ಆಳದ ಕೆಂಪು ತಳಕ್ಕೆ ಹೋದರೇ ಹೊರತು, ನೀರು ಸಿಗುವ ಯಾವುದೇ ಲಕ್ಷಣ ಕಾಣಲಿಲ್ಲ. "ಹಾಯ್ ಅಲ್ಲಾ, ಹೇ ಮಾ ಗೊಂಡೇಶ್ವರಿ, ಇತೋ ಪಾಶನ್ ಕ್ಯಾನೆ ತೋಮ್ರಾ? [ಓ ಅಲ್ಲಾ, ಓ ಗಾಂಡೇಶ್ವರಿ ತಾಯೇ, ನಿನ್ನದು ಯಾಕಿಷ್ಟು ಕಲ್ಲು ಹೃದಯ?]" ಎಂದು ದೀನನಾಗಿ ಕೇಳುತ್ತಾರೆ ಅವರು.
ಬತ್ತಿ ಹೋಗಿದೆ
ಅಮೃತ? ಅಮ್ರತ? ನೀವು ಹೇಗೆ ಉಚ್ಚರಿಸುತ್ತೀರಿ?
ನಾವು ನಮ್ಮ ತಾಯ್ನುಡಿಯ ಕುಡಿಗೆ ನೀರುಣಿಸಬಹುದೆ?
ಅಥವಾ ಎಲ್ಲಾ ತೊರೆದು ಹೋಗಬೇಕೇ?
ಕೇಸರಿ...ಜಾಫ್ರಾನ್... ಎಲ್ಲಿ ನೋವಾಗುತ್ತದೆ?
ನಾವು ನಮ್ಮ ಕನಸಿನ ನೆಲಕ್ಕಾಗಿ ಮತ ಹಾಕುತ್ತೇವೆಯೇ,
ಅಥವಾ ಅದರಿಂದ ನಮ್ಮನ್ನು ಬೇರ್ಪಡಿಸಲೆಂದೆ?
*****
ಸೋನಾಲಿ ಮಹತೋ ಮತ್ತು ಪುಟ್ಟ ರಾಮು ಆಸ್ಪತ್ರೆಯ ಗೇಟ್ ಬಳಿ ಆಘಾತಗೊಂಡು ನಿಂತಿದ್ದರು. ಹಿಂದೆ ಅವರ ಅಪ್ಪ, ಈಗ ಅಮ್ಮ. ಒಂದೇ ವರ್ಷದಲ್ಲಿ ಇಬ್ಬರೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ.
ಸರ್ಕಾರಿ ಆರೋಗ್ಯ ವಿಮಾ ಕಾರ್ಡ್ ಹಿಡಿದುಕೊಂಡು ಒಂದು ಸರ್ಕಾರಿ ಕಚೇರಿಯಿಂದ ಇನ್ನೊಂದಕ್ಕೆ ಓಡಿದರು, ಭಿಕ್ಷೆ ಬೇಡಿದರು, ಪ್ರತಿಭಟಿಸಿದರು. ಸ್ವಾಸ್ಥ್ಯ ಸಾಥಿ ಯೋಜನೆಯಲ್ಲಿ ಖಾತರಿಪಡಿಸಲಾದ 5 ಲಕ್ಷಗಳ ಸಹಾಯಧನವೂ ಸರಿಯಾಗಿ ಸಿಕ್ಕಿಲ್ಲ. ಭೂರಹಿತರಾಗಿರುವ ಇವರು ಸ್ವಲ್ಪ ದಿನದಲ್ಲಿ ತಮ್ಮ ಮನೆಯನ್ನೂ ಕಳೆದುಕೊಳ್ಳಲಿದ್ದಾರೆ. ಆಯುಷ್ಮಾನ್ ಭಾರತ್‌ಗೂ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವೇ ಅಥವಾ ಅದರಿಂದ ಏನಾದರೂ ಉಪಯೋಗ ಇದೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಈ ಯೋಜನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ ಎಂದರು. ಇನ್ನೂ ಕೆಲವರು ಇದರ ಅಡಿಯಲ್ಲಿ ಅಂಗಾಗ ಕಸಿ ಶಸ್ತ್ರಚಿಕಿತ್ಸೆಗಳು ಸೇರಿಲ್ಲ ಎಂದು ಹೇಳಿದರು. ಇನ್ನೂ ಕೆಲವರು ಇದರಲ್ಲಿ ಸಿಗುವ ಹಣ ಸಾಕಾಗುವುದಿಲ್ಲ ಎಂದು ಹೇಳಿದರು. ಮಾಹಿತಿಯ ಹೆಸರಿನಲ್ಲಿ ಬರೀ ಗೊಂದಲವನ್ನೇ ತುಂಬಿಕೊಂಡಿದ್ದಾರೆ.
"ದ್-ದ್-ದೀದಿ ರೆ, ತೋಬೆ ಜೆ ಇಸ್ಕುಲೆ ಬ್-ಬ್-ಬೋಲೆ ಸೊರ್ಕರ್ ಅಮದರ್ ಪ್-ಪ್-ಪಾಶೆ ಅಚ್ಚೆ [ಆದರೆ ದೀದಿ, ಸರ್ಕಾರ ನಮ್ಮೊಂದಿಗಿದೆ ಎಂದು ನಾವು ಶಾಲೆಯಲ್ಲಿ ಕಲಿತಿಲ್ಲವೇ]?" ಎಂದು ತನ್ನ ವಯಸ್ಸಿಗಿಂತ ಹೆಚ್ಚಿನ ನೋವನ್ನು ಅನುಭವಿಸಿರುವ ರಾಮು ತೊದಲುತ್ತಾ ಹೇಳುತ್ತಾನೆ. ಸೋನಾಲಿ ಗಾಢ ಮೌನದಿಂದ ದಿಟ್ಟಿಸಿ ನೋಡುತ್ತಿದ್ದಳು..
ಭರವಸೆಗಳು
ಆಶಾ ದೀದಿ! ಆಶಾ ದೀದಿ, ದಯವಿಟ್ಟು ನಮಗೆ ಸಹಾಯ ಮಾಡಿ!
ನಮ್ಮ ಬಾಬಾನಿಗೆ ಹೊಸ ಹೃದಯ ಮತ್ತು ಅಮ್ಮನಿಗೆ ಕಿಡ್ನಿಗಳು ಬೇಕಿವೆ.
ಅದು ಸತ್ಯ ಸ್ವಾಸ್ಥ್ಯ, ಸಾಥಿ ಅಂದ್ರೆ ಸ್ನೇಹಿತ,
ಕೊನೆಯಲ್ಲಿ ನಮ್ಮ ಜಿಸ್ಮ್-ಒ-ಜಮೀನ್ ಅನ್ನೂ ಮಾರಿದ್ದೇವೆ.
ಆಯುಷ್, ನೀನು ನಮ್ಮ ಕಷ್ಟಗಳನ್ನು ಕಮ್ಮಿ ಮಾಡುತ್ತೀಯಾ?
ಇಲ್ಲವೇ, ಕಚ್ಚಲು ಬಾರದ ನೀನು ಬರೀ ಬೊಗಳುತ್ತಿರುವೆಯಾ?
*****
ಪದಕೋಶ:
ಚಾಪ್ - ಮಸಾಲೆ ಹಾಕಿದ ಬಜ್ಜಿ
ಘುಗ್ನಿ - ಬಟಾಣಿ ಅಥವಾ ಕಡಲೆಯಿಂದ ತಯಾರಸಿದ ಖಾರದ ತಿಂಡಿ
ಗುಮ್ಟಿ - ಸ್ಟಾಲ್ ಅಥವಾ ಗೂಡಂಗಡಿ
ಗೊಂಡೇಶ್ವರಿ - ನದಿ ಮತ್ತು ದೇವತೆ
ದಫ್ತಾರ್ - ಕಛೇರಿ
ತತ್ ಸತ್ — ಅದು ಸತ್ಯ
ಮಾನೆ - ಅಂದರೆ
ಜಿಸ್ಮ್-ಒ-ಜಮೀನ್ - ದೇಹ ಮತ್ತು ಭೂಮಿ
ಕವಿಯು ಸ್ಮಿತಾ ಖಾತರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ, ಅವರ ಆಲೋಚನೆಗಳೇ ಈ ಪ್ರಯತ್ನಕ್ಕೆ ಕಾರಣವಾಗಿವೆ.
ಅನುವಾದ: ಶಂಕರ. ಎನ್. ಕೆಂಚನೂರು