ಗುಜ್ಜರ್ ಪಶುಪಾಲಕ ಸಮುದಾಯಕ್ಕೆ ಸೇರಿದವರಾದ ಅಬ್ದುಲ್ ರಶೀದ್ ಶೇಖ್ ಅವರು ಪಡಿತರ ವಿತರಣೆಯಿಂದ ಹಿಡಿದು ಸರ್ಕಾರಿ ಯೋಜನೆಗಳಲ್ಲಿನ ಪಾರದರ್ಶಕತೆ ಕೊರತೆಯವರೆಗಿನ ಹಲವು ವಿಷಯಗಳ ಕುರಿತು ಆರ್‌ಟಿಐ (ಮಾಹಿತಿ ಹಕ್ಕು) ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಕಾಶ್ಮೀರದ ಹಿಮಾಲಯದ ತಪ್ಪಲುಗಳ ನಡುವೆ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಕುರಿಗಳು ಹಾಗೂ ಸುಮಾರು 20 ಮೇಕೆಗಳ ಹಿಂಡಿನೊಂದಿಗೆ ತಿರುಗಾಡುವ 50 ವರ್ಷದ ಈ ಹಿರಿಯ ಪಶುಪಾಲಕ ಕಳೆದೊಂದು ದಶಕದಲ್ಲಿ ಇಪ್ಪತ್ತನಾಲ್ಕಕ್ಕೂ ಹೆಚ್ಚು ಅರ್ಜಿಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಿದ್ದಾರೆ.
“ಈ ಹಿಂದೆ ಅಧಿಕಾರಿಗಳಿಗೆ ಜನರಿಗಾಗಿ ಪರಿಚಯಿಸಲಾಗಿರುವ ಯೋಜನೆಗಳ ಕುರಿತು ತಿಳಿದಿರುತ್ತಿರಲಿಲ್ಲ, ಜೊತೆಗೆ ನಮಗೂ ನಮ್ಮ ಹಕ್ಕುಗಳ ಕುರಿತು ತಿಳಿದಿರುತ್ತಿರಲಿಲ್ಲ” ಎನ್ನುತ್ತಾರೆ ಅಬ್ದುಲ್. ಅವರು ದೂಧ್ ಪಾತ್ರಿ ಎನ್ನುವಲ್ಲಿರುವ ತಮ್ಮ ಕೋಠಾ (ಮಣ್ಣು, ಕಲ್ಲು ಮತ್ತು ಮರದಿಂದ ಮಾಡಿದ ಸಾಂಪ್ರದಾಯಿಕ ಮನೆ) ಎದುರು ನಿಂತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಪ್ರತಿ ವರ್ಷದ ಬೇಸಗೆಯಲ್ಲಿ ಅವರ ಕುಟುಂಬ ಇಲ್ಲಿಗೆ ವಲಸೆ ಬರುತ್ತದೆ. ಅವರು ಮೂಲತಃ ಬದ್ಗಾಮ್ ಜಿಲ್ಲೆಯ ಖಾನ್ ಸಾಹಿಬ್ ವಿಭಾಗದ ಮುಜ್ಪತ್ರಿ ಗ್ರಾಮದವರು.
"ಕಾನೂನುಗಳು ಮತ್ತು ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಆರ್‌ಟಿಐ ದೊಡ್ಡ ಪಾತ್ರ ವಹಿಸಿದೆ; ಅಧಿಕಾರಿಗಳೊಂದಿಗೆ ಹೇಗೆ ವ್ಯವಹರಿಸಬೇಕೆನ್ನುವುದನ್ನು ನಾವು ಇದರ ಮೂಲಕ ಕಲಿತಿದ್ದೇವೆ" ಎಂದು ಅಬ್ದುಲ್ ಹೇಳುತ್ತಾರೆ. ಮೊದಮೊದಲು ಸ್ವತಃ ಅಧಿಕಾರಿಗಳಿಗೂ ಆರ್‌ಟಿಐ ಕಾಯ್ದೆಯ ಬಗ್ಗೆ ತಿಳಿದಿರಲಿಲ್ಲ ಜೊತೆಗೆ "ಸಂಬಂಧಿತ ಯೋಜನೆಗಳು ಮತ್ತು ನಿಧಿ ವಿತರಣೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದರೆ ಅವರು ಕಣ್ಣು ಕಣ್ಣು ಬಿಡುತ್ತಿದ್ದರು."
ಹೀಗೆ ಮಾಹಿತಿ ಕೇಳುವುದು ಊರಿನ ಜನರಿಗೆ ತೊಂದರೆ ಕೊಡುವುದಕ್ಕೆ ಕಾರಣವಾಯಿತು. ಬ್ಲಾಕ್ ಅಧಿಕಾರಿಗಳೊಡನೆ ಶಾಮೀಲಾಗಿ ಪೊಲೀಸರು ಸುಳ್ಳು ಎಫ್‌ಐಆರ್ ಪ್ರಥಮ ಮಾಹಿತಿ ವರದಿ) ಗಳನ್ನು ದಾಖಲಿಸಿದ್ದರು. ಅಬ್ದುಲ್ ಅವರಂತಹ ಆರ್‌ಟಿಐ ಚಳುವಳಿಯಲ್ಲಿ ಸಕ್ರಿಯವಾಗಿರುವ ನಾಗರಿಕರನ್ನು ಈ ವಿಷಯದಲ್ಲಿ ಗುರಿ ಮಾಡಲಾಗಿತ್ತು.
“ಅಧಿಕಾರಿಗಳು ಭ್ರಷ್ಟರಾಗಿದ್ದರು. ಅವರು ಮಾಡಿರುವ ಆಸ್ತಿಯನ್ನು ಒಮ್ಮೆ ನೋಡಿ” ಎನ್ನುತ್ತಾ ಅವರು ತಮ್ಮ ಮಾತಿಗೆ ಸಾಕ್ಷ್ಯ ಒದಗಿಸಲು ಪ್ರಯತ್ನಿಸಿದರು. ಅಬ್ದುಲ್ ಆರ್‌ಟಿಐ ಅರ್ಜಿ ಸಲ್ಲಿಸುವುದರ ಜೊತೆಜೊತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ (ಎಫ್‌ಸಿಎಸ್‌ಸಿಎ ಇಲಾಖೆ) ಮುಜ್ಪತ್ರಿ ಗ್ರಾಮದ ಸುಮಾರು 50 ಜನರಿಗೆ ಪಡಿತರ ಚೀಟಿಯನ್ನು ನೀಡಬೇಕೆನ್ನುವ ಬೇಡಿಕೆಯನ್ನೂ ಇಟ್ಟಿದ್ದರು.
ತಮ್ಮ ಜಾನುವಾರುಗಳಿಗಾಗಿ ಸಾಮಾನ್ಯ ಮೇವು ಮಾಳಗಳನ್ನು ಅವಲಂಬಿಸಿರುವ ಪಶುಪಾಲಕ ಅಬ್ದುಲ್ ವಿಶೇಷವಾಗಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ, 2006 ಎನ್ನುವ ಕಾಯ್ದೆಯ ಕುರಿತು ಹೆಚ್ಚು ಕೆಲಸ ಮಾಡುತ್ತಾರೆ. “ಒಂದು ವೇಳೆ ನಾವು ಈ ಕಾಡುಗಳನ್ನು ಅರಣ್ಯ ಇಲಾಖೆಯವರಿಗೆ ಬಿಟ್ಟುಕೊಟ್ಟರೆ ಮತ್ತೆ ಉಳಿಸಲು ಕಾಡೇ ಉಳಿದಿರುವುದಿಲ್ಲ” ಎಂದು ಅವರು ಹೇಳುತ್ತಾರೆ. ಎಫ್‌ಆರ್‌ಎ ಅಡಿಯಲ್ಲಿ ಸಮುದಾಯ ಅರಣ್ಯ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವ ಸ್ಥಳೀಯ ಗುಂಪಾದ ಜಮ್ಮು ಮತ್ತು ಕಾಶ್ಮೀರ ಅರಣ್ಯ ಹಕ್ಕುಗಳ ಒಕ್ಕೂಟದ ಬೆಂಬಲದೊಂದಿಗೆ ಅಬ್ದುಲ್ ಅರಣ್ಯ ಭೂಮಿಯ ಮೇಲೆ ಗುಜ್ಜರ್ ಮತ್ತು ಬಕರ್ವಾಲ್ ಪಶುಪಾಲಕ ಸಮುದಾಯಗಳಿಗೆ ಇರುವ ಹಕ್ಕುಗಳಿಗೆ ಸಂಬಂಧಿಸಿದಂತೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ ಸಲ್ಲಿಸಿದ್ದಾರೆ.
ಮುಜಪತ್ರಿ ಗ್ರಾಮಸಭೆಯು 2022ರಲ್ಲಿ ಅರಣ್ಯ ಸಂರಕ್ಷಣಾ ಸಮಿತಿಯನ್ನು (ಎಫ್ಆರ್‌ಸಿ) ರಚಿಸಿತು ಮತ್ತು ಇದು ಹುಲ್ಲುಗಾವಲು ಪ್ರದೇಶವನ್ನು ಗುರುತಿಸುವುದು ಮತ್ತು ಪ್ರತಿವರ್ಷ ಪರಿಶೀಲಿಸಬಹುದಾದ ಪ್ರತ್ಯೇಕ ಭೂಮಿಯನ್ನು ಗುರುತಿಸುವಂತಹ ನಿಯಮಗಳು ಮತ್ತು ನಿಬಂಧನೆಗಳ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಏಪ್ರಿಲ್ 28, 2023 ರಂದು, ಅರಣ್ಯ ಹಕ್ಕುಗಳ ಕಾಯ್ದೆ (2006) ಅಡಿಯಲ್ಲಿ 1,000 ಚದರ ಕಿಲೋಮೀಟರ್ ಅರಣ್ಯವನ್ನು ಸಮುದಾಯ ಅರಣ್ಯ ಸಂಪನ್ಮೂಲ (ಸಿಎಫ್ಆರ್) ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.
“ಕಾಡು ಎಲ್ಲರಿಗೂ ಸೇರಿದ್ದು. ನಾನು, ನನ್ನ ಮಕ್ಕಳು ಮತ್ತು ನೀವು ಹೀಗೆ ಎಲ್ಲರಿಗೂ ಇದರ ಮೇಲೆ ಹಕ್ಕಿದೆ. ಅರಣ್ಯ ಸಂರಕ್ಷಣೆಯನ್ನು ಜೀವನೋಪಾಯದೊಂದಿಗೆ ಸಂಯೋಜಿಸುವುದು ಬಹಳ ಮುಖ್ಯ. ಇದರಿಂದ ಮುಂದಿನ ಪೀಳಿಗೆಗಳಿಗೆ ಪ್ರಯೋಜನವಾಗುತ್ತದೆ. ಅದನ್ನು ಬಿಟ್ಟು ನಾವು ಅರಣ್ಯ ನಾಶ ಮಾಡುತ್ತಾ ಹೋದರೆ ಮುಂದಿನ ಪೀಳಿಗೆಗೆ ಏನನ್ನು ಬಿಟ್ಟು ಹೋಗಲು ಸಾಧ್ಯ?” ಎನ್ನುತ್ತಾ ಸಿಎಫ್‌ಆರ್ ಹಕ್ಕು ಸಿಗುವಲ್ಲಿ ಆಗುತ್ತಿರುವ ನಿಧಾನಗತಿಯ ಪ್ರಗತಿಯ ಕುರಿತು ಅಬ್ದುಲ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಎಫ್‌ಆರ್‌ಎ 2006 ಕಾಯ್ದೆಯನ್ನು ಕೇಂದ್ರ ಸರ್ಕಾರ 2020ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿತು.
ಅಲ್ಲಿಯವರೆಗೂ ಯಾರಿಗೂ ಎಫ್‌ಆರ್‌ಎ ಕುರಿತು ತಿಳಿದಿರಲಿಲ್ಲ” ಎನ್ನುತ್ತಾರೆ ಅಬ್ದುಲ್. ಈ ಕಣಿವೆ ಪ್ರದೇಶಗಳಲ್ಲಿ ಅಂತರ್ಜಾಲದ ಲಭ್ಯತೆ ವಿಸ್ತರಿಸುತ್ತಾ ಹೋದಂತೆ ಜನರಿಗೂ ವಿವಿಧ ಯೋಜನೆಗಳು ಮತ್ತು ಕಾನೂನುಗಳ ಕುರಿತಾದ ಜಾಗೃತಿಯೂ ಮೂಡತೊಡಗಿತು. "ದೆಹಲಿಯಲ್ಲಿ ಪ್ರಾರಂಭಿಸಲಾದ ವಿವಿಧ ಯೋಜನೆಗಳು ಮತ್ತು ನೀತಿಗಳ ಬಗ್ಗೆ ನಮಗೆ ಅರಿವು ಮೂಡಿಸುವಲ್ಲಿ ಇಂಟರ್ನೆಟ್ ನಿರ್ಣಾಯಕ ಪಾತ್ರ ವಹಿಸಿದೆ. ಅದಕ್ಕೂ ಮೊದಲು ನಮಗೆ ಯಾವ ಮಾಹಿತಿಯೂ ಲಭಿಸುತ್ತಿರಲಿಲ್ಲ" ಎಂದು ಇಂಟರ್ನೆಟ್ ಆ ಪ್ರದೇಶದಲ್ಲಿ ತಂದಿರುವ ಬದಲಾವಣೆಯ ಕುರಿತು ವಿವರಿಸುತ್ತಾರೆ.
2006ರಲ್ಲಿ, ಅಬ್ದುಲ್ ಮತ್ತು ಪ್ರಸ್ತುತ ಸರಪಂಚ್ ನಜೀರ್ ಅಹ್ಮದ್ ದಿಂಡಾ ಸೇರಿದಂತೆ ಮುಜ್ಪತ್ರಿಯ ಕೆಲವು ನಿವಾಸಿಗಳು ಜಮ್ಮು ಮತ್ತು ಕಾಶ್ಮೀರ ಅರಣ್ಯ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಮತ್ತು ಆ ಸಮಯದಲ್ಲಿ ಬದ್ಗಾಮ್ ಪ್ರದೇಶದ ಪ್ರದೇಶ ವೈದ್ಯಕೀಯ ಅಧಿಕಾರಿಯಾಗಿದ್ದ ಡಾ.ಶೇಖ್ ಗುಲಾಮ್ ರಸೂಲ್ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ಆಗಾಗ್ಗೆ ಕೆಲಸದ ಸಲುವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಅದೇ ಸಮಯದಲ್ಲಿ ಅವರು ಈ ಪ್ರದೇಶದಲ್ಲಿ ಆರ್‌ಟಿಐ ಆಂದೋಲನವನ್ನು ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. "ಡಾ. ಶೇಖ್ ಅವರು ಕಾನೂನುಗಳು ಮತ್ತು ನೀತಿಗಳ ಬಗ್ಗೆ ಚರ್ಚಿಸುತ್ತಿದ್ದರು ಮತ್ತು ನಾವು [ಅವುಗಳ ಬಗ್ಗೆ] ಇನ್ನಷ್ಟು ತಿಳಿದುಕೊಳ್ಳಬೇಕಿರುವ ಕುರಿತಾಗಿಯೂ ನಮಗೆ ಮನದಟ್ಟು ಮಾಡಿಸಿದ್ದರು" ಎಂದು ಅಬ್ದುಲ್ ಹೇಳುತ್ತಾರೆ.
ಇದು ಗ್ರಾಮಸ್ಥರು ಇತರ ಯೋಜನೆಗಳ ಕುರಿತು ಹೆಚ್ಚು ಹೆಚ್ಚು ವಿಚಾರಣೆ ನಡೆಸಲು ಕಾರಣವಾಯಿತು. “ದಿನಕಳೆದಂತೆ ನಾವು ಆರ್‌ಟಿಐ ಕಾಯ್ದೆ ಮತ್ತು ಅದರಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳತೊಡಗಿದೆವು. ಜೊತೆಗೆ ನಮ್ಮ ಊರಿನ ಹಲವು ಮಂದಿ ಆರ್‌ಟಿಐ ಕಾಯ್ದೆಯಡಿ ಅನೇಕ ಅರ್ಜಿ ಅರ್ಜಿಗಳನ್ನು ಸಲ್ಲಿಸತೊಡಗಿದರು. ಮುಂದೆ ಇದೊಂದು ಆಂದೋಲನವಾಗಿ ಮಾರ್ಪಟ್ಟಿತು” ಎಂದು ಅಬ್ದುಲ್ ವಿವರಿಸುತ್ತಾರೆ.
ಈ ಚಳವಳಿಯ ಆರಂಭಿಕ ದಿನಗಳ ಗ್ರಾಮಸ್ಥರೊಂದಿಗಿನ ಮಾತುಕತೆಗಳು ಮತ್ತು ಚರ್ಚೆಗಳು ಹೇಗಿದ್ದವು ಎನ್ನುವುದನ್ನು ಡಾ. ಶೇಖ್ ಮುಜ್ಪತ್ರಿಯಲ್ಲಿ ನಡೆದ ಅವರೊಂದಿಗಿನ ಮಾತುಕತೆಯಲ್ಲಿ ವಿವರಿಸಿದರು. “ಆಗ ಅಧಿಕಾರದಲ್ಲಿದ್ದ ಶಾಸಕ ಭ್ರಷ್ಟನಾಗಿದ್ದ. ಇದರಿಂದಾಗಿ ಯೋಜನೆಗಳು ಜನರನ್ನು ತಲುಪುತ್ತಿರಲಿಲ್ಲ. ಜೊತೆಗೆ ಗ್ರಾಮಸ್ಥರು ಪದೇ ಪದೇ ಪೊಲೀಸರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದರು. ಅವರಿಗೆ ತಮಗೆ ಇರುವ ಹಕ್ಕುಗಳ ಕುರಿತು ಒಂದಿಷ್ಟೂ ಮಾಹಿತಿಯಿರಲಿಲ್ಲ” ಎಂದು ಅವರು ಹೇಳುತ್ತಾರೆ.
2006ರಲ್ಲಿ ಮುಜ್ಪತ್ರಿ ನಿವಾಸಿ ಪೀರ್ ಜಿ. ಎಚ್. ಮೊಹಿದ್ದೀನ್ ಅವರು ಪ್ರಥಮ ಬಾರಿಗೆ ಇಲ್ಲಿಂದ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದರು. ಅವರು ಸಮಾಜದ ಅಂಚಿನಲ್ಲಿರುವ ಜನರಿಗೆ ವಸತಿ ನೀಡುವ ಉದ್ದೇಶವನ್ನು ಹೊಂದಿರುವ ಇಂದಿರಾ ಆವಾಸ್ ಯೋಜನೆ (ಐಎವೈ) ಯೋಜನೆಯ ಬಗ್ಗೆ ಮಾಹಿತಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಸರಪಂಚ್ ನಜೀರ್ ಅವರು 2013ರಲ್ಲಿ ಇಂದಿರಾ ಆವಾಸ್ ಯೋಜನೆ (ಐಎವೈ) ಫಲಾನುಭವಿಗಳ ಬಗ್ಗೆ ಮಾಹಿತಿ ಕೋರಿ ಮತ್ತೊಂದು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
ಹಳ್ಳಿಯಲ್ಲಿನ ಸಂವಾದಗಳು ಮತ್ತು ಚರ್ಚೆಗಳ ನಂತರ, ನಜೀರ್ ಅವರು ಕಾಡುಗಳನ್ನು ಸಂರಕ್ಷಿಸುವ ಮತ್ತು ಆಡಳಿತ ವಿಷಯದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದರ ಅಗತ್ಯವನ್ನು ಅರಿತುಕೊಂಡರು, ಇದು ಆರ್‌ಟಿಐ ಸಲ್ಲಿಸಲು ಕಾರಣವಾಯಿತು. "ನಾವು ನಮಗಾಗಿ ಇರುವ ಸರ್ಕಾರಿ ಯೋಜನೆಗಳ ಕುರಿತು ತಿಳಿದುಕೊಳ್ಳಬೇಕಿತ್ತು ಜೊತೆಗೆ ಅವುಗಳನ್ನು ಪಡೆಯುವುದು ಹೇಗೆನ್ನುವುದನ್ನು ಕೂಡಾ ತಿಳಿಯಬೇಕಿತ್ತು" ಎಂದು ಅವರು ಹೇಳುತ್ತಾರೆ. "2006ರವರೆಗೆ, ನಾವು ಮರ ಮತ್ತು ಮರಮಟ್ಟು ಅಲ್ಲದ ಅರಣ್ಯ ಉತ್ಪನ್ನಗಳನ್ನು (ಎನ್‌ಟಿಎಫ್‌ಪಿ) ಗುಚ್ಚಿ ಮತ್ತು ಧೂಪ್ ಜೊತೆಗೆ ಗಿಡಮೂಲಿಕೆಗಳು, ಬೇರುಗಳು ಮತ್ತು ಗೆಡ್ಡೆಗಳನ್ನು ಕಾಡುಗಳಿಂದ ಕದಿಯುತ್ತಿದ್ದೆವು, ಏಕೆಂದರೆ ಆಗ ನಮಗೆ ಬೇರೆ ಯಾವುದೇ ಜೀವನೋಪಾಯದ ಆಯ್ಕೆಗಳಿಲ್ಲ" ಎಂದು 45 ವರ್ಷದ ಗುಜ್ಜರ್ ಸಮುದಾಯದ ಈ ವ್ಯಕ್ತಿ ಹೇಳುತ್ತಾರೆ. "2009ರ ಸುಮಾರಿಗೆ, ನಾನು ದೂಧ್ ಪಾತ್ರಿಯಲ್ಲಿ ಅಂಗಡಿ ಇಟ್ಟುಕೊಂಡು ಕಾಡುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಚಹಾ ಮತ್ತು ಕುಲ್ಚಾಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ" ಎಂದು ಅವರು ಮಾತು ಮುಂದುವರಿಸುತ್ತಾರೆ. ನಾವು ಅವರೊಂದಿಗೆ ಶಾಲಿಗಂಗಾ ನದಿಯ ಉದ್ದಕ್ಕೂ ಎತ್ತರದ ಹುಲ್ಲುಗಾವಲುಗಳತ್ತ ಚಾರಣ ಮಾಡುವಾಗ, ಅವರು ವರ್ಷಗಳಿಂದ ಸಲ್ಲಿಸಿದ ವಿವಿಧ ಆರ್‌ಟಿಐ ಅರ್ಜಿಗಳ ಲೆಕ್ಕ ಕೊಡುತ್ತಾ ಸಾಗಿದರು.
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಅಕ್ಕಿಯ ಭೇದಾತ್ಮಕ ಹಂಚಿಕೆಯ ಬಗ್ಗೆ ನಜೀರ್ 2013ರಲ್ಲಿ ಎಫ್‌ಸಿಎಸ್‌ಸಿಎ ಇಲಾಖೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, 2018ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಸಮಗ್ರ ಶಿಕ್ಷಾ ಯೋಜನೆಯಡಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಬಗ್ಗೆ ತಿಳಿಯುವ ಸಲುವಾಗಿಯೂ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ನಾವು ನಜೀರ್ ಅವರೊಂದಿಗೆ ಶಾಲಿಗಂಗಾ ನದಿಗುಂಟ ಸಾಗುತ್ತಿರುವಾಗ, ನಮಗೆ ದೂರದಲ್ಲಿ ಕೆಲವು ಡೇರೆಗಳು ಕಾಣಿಸಿದವು. ಅಲ್ಲಿ ಅವರು ನಮ್ಮನ್ನು ಚಹಾ ಕುಡಿಯಲೆಂದು ಕರೆದರು. ಇಲ್ಲಿಯೇ ನಮಗೆ ಜಮ್ಮು ವಿಭಾಗದ ರಾಜೌರಿ ಜಿಲ್ಲೆಯವರಾದ ಬಕರ್ವಾಲ್ ಪಶುಪಾಲಕ ಮೊಹಮ್ಮದ್ ಯೂನಸ್ ಸಿಕ್ಕರು. ಅವರು ಎಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಿದ್ದರು. 40ಕ್ಕೂ ಹೆಚ್ಚು ಕುರಿಗಳು ಮತ್ತು ಸುಮಾರು 30 ಮೇಕೆಗಳ ಹಿಂಡನ್ನು ಹೊಂದಿರುವ ಅವರು ತಾನು ಇಲ್ಲಿ ಅಕ್ಟೋಬರ್ ತಿಂಗಳ ತನಕ ತಂಗುವುದಾಗಿ ತಿಳಿಸಿದರು.
“ಇವತ್ತು ನಾವು ಇಲ್ಲಿದ್ದೇವೆ, ಆದರೆ ಇನ್ನೊಂದು 10 ದಿನಗಳ ನಂತರ, ಮೇಲಿನ ಹಂತಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಹೊಸ ಹಸಿರು ಹುಲ್ಲುಗಾವಲಿದೆ” ಎಂದು ಅವರು ಹೇಳಿದರು. 50 ವರ್ಷ ಪ್ರಾಯದ ಅವರು ಬಕರ್ವಾಲ್ ಸಮುದಾಯಕ್ಕೆ ಸೇರಿದವರು ಮತ್ತು ಬಾಲ್ಯದಿಂದಲೂ ನಿಯಮಿತವಾಗಿ ಕಾಶ್ಮೀರಕ್ಕೆ ವಲಸೆ ಹೋಗುತ್ತಿದ್ದಾರೆ.
"ಒಂದು ಮೇಕೆ ಅಥವಾ ಕುರಿಯನ್ನು ಮಾರಿದರೆ ನಮಗೆ ಸರಾಸರಿ 8,000ರಿಂದ 10,000 ರೂಪಾಯಿಗಳಷ್ಟು ಸಿಗುತ್ತದೆ. ಇಷ್ಟು ಹಣದಿಂದ ನಾವು ಒಂದು ತಿಂಗಳನ್ನು ಹೇಗೆ ಕಳೆಯಲು ಸಾಧ್ಯ?" ಜಮ್ಮು ಮತ್ತು ಕಾಶ್ಮೀರದಲ್ಲಿ ಚಹಾ ಮತ್ತು ಎಣ್ಣೆಯ ಬೆಲೆಯನ್ನು ಉಲ್ಲೇಖಿಸಿ ಯೂನಸ್ ಕೇಳುತ್ತಾರೆ, ಇಲ್ಲಿ ಇವುಗಳ ಬೆಲೆ ಕ್ರಮವಾಗಿ ಕಿಲೋಗೆ 600-700 ಮತ್ತು ಲೀಟರಿಗೆ 125 ರೂ.
ಪಿಡಿಎಸ್ ಯೋಜನೆಯ ಕಳಪೆ ಅನುಷ್ಠಾನದ ಪರಿಣಾಮವಾಗಿ ಯೂನಸ್ ಮತ್ತು ಅವರ ಸಮುದಾಯದ ಇತರ ಸದಸ್ಯರಿಗೆ ಪಡಿತರ ದೊರೆಯುತ್ತಿಲ್ಲ. "ಪಿಡಿಎಸ್ ಅಡಿಯಲ್ಲಿ ಸರ್ಕಾರವು ನಮಗೆ ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ನೀಡಬೇಕು, ಆದರೆ ನಮಗೆ ಏನೂ ಸಿಗುವುದಿಲ್ಲ" ಎಂದು ಯೂನಸ್ ಹೇಳುತ್ತಾರೆ.
"ಇದೇ ಮೊದಲ ಬಾರಿಗೆ, ಈ ವರ್ಷ ನಮಗೆ ಟ್ಯಾಕ್ಸಿ ಸೇವೆ ಸಿಕ್ಕಿತು, ಅದು ನಮ್ಮನ್ನು ಯುಸ್ ಮಾರ್ಗ್ ಬಳಿ ಇಳಿಸಿತು. ನಮ್ಮ ಮಕ್ಕಳು ಜಾನುವಾರುಗಳೊಂದಿಗೆ ಬಂದರು" ಎಂದು ಯೂನಸ್ ಹೇಳುತ್ತಾರೆ. ಈ ಯೋಜನೆ 2019ರಿಂದ ಜಾರಿಯಲ್ಲಿದೆ, ಆದರೆ ಅದು ರಾಜೌರಿಯಿಂದ ಬಕರ್ವಾಲ್ ಸಮುದಾಯವನ್ನು ತಲುಪಲು ನಾಲ್ಕು ವರ್ಷಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳುತ್ತಾರೆ. ಸಂಚಾರಿ ಶಾಲೆಗಳಿಗೂ ಅವಕಾಶವಿದೆ ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲ. "ಅವರು ನಮಗೆ ಮೊಬೈಲ್ ಶಾಲೆಗಳನ್ನು ನೀಡುತ್ತಾರೆ, ಆದರೆ ಕನಿಷ್ಠ 10-15 ಚುಲ್ಹಾಗಳು [ಮನೆಗಳು] ಇದ್ದರೆ ಮಾತ್ರ [ಶಾಲಾ] ಶಿಕ್ಷಕರನ್ನು ಕೊಡುತ್ತಾರೆ" ಎಂದು ಯೂನಸ್ ಹೇಳುತ್ತಾರೆ.
"ಹೆಸರಿಗೆ ಕಾಗದದ ಮೇಲೆ ಪ್ರತಿಯೊಂದು ಯೋಜನೆಯೂ ಇವೆ, ಆದರೆ ಯಾವುದೂ ನಮ್ಮನ್ನು ತಲುಪುವುದಿಲ್ಲ" ಎಂದು ಅವರು ನಿರಾಶೆಯಿಂದ ಉದ್ಗರಿಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು