“ಚಟ್ನಿ, ಚಟ್ನಿ ಫ್ರೈ”
ಅಅರುಣಾಚಲ ಪ್ರದೇಶದ ಪಟ್‌ಕಯ್ ಪರ್ವತಗಳ ತಪ್ಪಲಿನಲ್ಲಿರುವ ಕನುಬರಿಯಲ್ಲಿನ ಕೆಂಪು ಇರುವೆಗಳಿಂದ ಉತ್ತಮ ಚಟ್ನಿಯನ್ನು ತಯಾರಿಸಬಹುದು. ಜುಲೈ ಮಾಸದ ಮಳೆಗಾಲದ ತೇವದಿಂದ ಕೂಡಿದ ಮುಂಜಾನೆಯ ವಾರದ ಸಂತೆಯಲ್ಲಿ ಎಲೆಗಳ ಹಾಸಿನ ಮೇಲಿಟ್ಟ ಮಿರುಗುವ ಹಿಡಿಯಷ್ಟು ಕೆಂಪು ಇರುವೆಗಳನ್ನು 20 ರೂ.ಗಳಿಗೆ ಮಾರಲಾಗುತ್ತದೆ.
ಕನುಬರಿಯ ನಿವಾಸಿಯಾದ ಪೊಬಿನ್ ಕುರ್ಮಿ, “ನಾನಾ ಬಗೆಯ ಇರುವೆಗಳಿವೆ. ಕಪ್ಪು ಇರುವೆಗಳಿಗಳಿಗಿಂತ (ಕೆಂಪು ಇರುವೆಗಳನ್ನು ಹಿಡಿಯುವುದು ಹೆಚ್ಚು ಸುಲಭವಾದ ಕಾರಣ, ಅವಕ್ಕೆ ಹೆಚ್ಚಿನ ಆದ್ಯತೆಯಿದೆ. ಅವು ಕಚ್ಚಿದರೆ ಹೆಚ್ಚು ತೊಂದರೆಯಾಗುವುದಿಲ್ಲ. ಮಾವು ಹಾಗೂ ಹಲಸಿನ ಮರದಲ್ಲಿ ಅವು ದೊರೆಯುತ್ತವೆ” ಎಂದು ತಿಳಿಸಿದರು. ಏಷಿಯನ್ ನೇಕಾರ ಇರುವೆಗಳು ಎಂದು ಸಹ ಕರೆಯಲಾಗುವ Oecophylla smaragdinaಗಳು ಅರುಣಾಚಲ ಪ್ರದೇಶದಲ್ಲಿ ಕಂಡುಬರುತ್ತವೆ.
ಕೆಲವು ವಾರಗಳವರೆಗೆ ನಾನು ಉಪಾಧ್ಯಾಯನಾಗಿದ್ದ ಮಹಾಬೋಧಿ ಶಾಲೆಯ ವಿದ್ಯಾರ್ಥಿಗಳಾದ ಹತ್ತು ವರ್ಷದ ನಯನ್‌ಶಿಲ ಮತ್ತು ಒಂಬತ್ತು ವರ್ಷದ ಸ್ಯಾಮ್, ನನಗೆ ಇರುವೆಗಳನ್ನು ಹಿಡಿಯುವ ಪ್ರಕ್ರಿಯೆಗಳನ್ನು ಹೀಗೆ ವಿವರಿಸಿದರು: “ಮರದ ಕೊಂಬೆಯ ಮೇಲೆ ಇರುವೆಗಳ ಗೂಡುಗಳನ್ನು ಗುರುತಿಸಿದ ನಂತರ ಅದನ್ನು ಕತ್ತರಿಸಿ ಕುದಿಯುವ ನೀರಿನಲ್ಲಿಡಬೇಕು. ಆ ಸತ್ತ ಇರುವೆಗಳನ್ನು ಎಲೆಗಳು ಮತ್ತು ಮಣ್ಣಿನಿಂದ ಬೇರ್ಪಡಿಸಿ, ಒಣಗಿಸಲಾಗುತ್ತದೆ.” ನಂತರ ಚಟ್ನಿಯನ್ನು ತಯಾರಿಸಲು ಅವನ್ನು ಹುರಿಯಬಹುದು. ಚಟ್ನಿಯ ರುಚಿ ಸ್ವಲ್ಪ ಹುಳಿ.
ಇದು, ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯ ಕನುಬರಿ ವಲಯದಲ್ಲಿನ ಗುರುವಾರದ ವಾರದ ಸಂತೆ. ಕನುಬರಿ ನಿವಾಸಿಗಳಿಗೆ ಲಭ್ಯವಿರುವ ಮತ್ತೊಂದು ದೊಡ್ಡ ಮಾರುಕಟ್ಟೆಯು ೭೦ ಕಿ.ಮೀ. ದೂರದಲ್ಲಿರುವ ಕಾರಣ, ಸ್ಥಳೀಯರು ತಮ್ಮ ದಿನನಿತ್ಯದ ಅವಶ್ಯಕತೆಗಳ ಖರೀದಿಗೆ ಇದಕ್ಕೇ ಆದ್ಯತೆ ನೀಡುತ್ತಾರೆ. ಅಸ್ಸಾಂನ ಗಡಿಯು ಸಹ ಒಂದು ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿದ್ದು, ಪಕ್ಕದ ರಾಜ್ಯದ ಜನರು ಸಹ ತನ್ನ ಉತ್ಪನ್ನಗಳ ಮಾರಾಟಕ್ಕೆ ಮತ್ತು ಖರೀದಿಗಾಗಿ ಈ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ.











