“ನಮ್ಮ ಇಡೀ ಮೈಗೆ ಬಣ್ಣ ಹಚ್ಚುವುದು ಕಷ್ಟದ ಕೆಲಸ. ರಾತ್ರಿಯಿಡೀ ಎಚ್ಚರವಾಗಿದ್ದು ಅದನ್ನು ಮಾಡಬೇಕು,” ಎಂದು ಆಯುಷ್ ನಾಯಕ್ ಹೇಳುತ್ತಾರೆ. ಅವರು ತಮ್ಮ ದೇಹಕ್ಕೆ ಮೊದಲ ಬಾರಿಗೆ ಆಯಿಲ್ ಪೈಂಟ್ ಹಚ್ಚುತ್ತಿದ್ದಾರೆ. “ನನ್ನ ಮೈ ಉರಿವಂತೆ ಫೀಲ್ ಆಗ್ತದೆ. ಆದ್ದರಿಂದ, ಆದಷ್ಟು ಬೇಗ ಬಣ್ಣವನ್ನು ಒಣಗಿಸಬೇಕು,” ಎಂದು 17 ವರ್ಷ ವಯಸ್ಸಿನ ಆಯುಷ್ ಹೇಳುತ್ತಾರೆ.
ದಸರಾ ಮತ್ತು ಕೃಷ್ಣ ಜನ್ಮಾಷ್ಟಮಿಯಲ್ಲಿ ಕುಣಿಯುವ ಜಾನಪದ ಕುಣಿತವಾದ ಪಿಲಿ ವೇಷ (ಹುಲಿ ವೇಷ ಎಂದೂ ಕರೆಯುತ್ತಾರೆ) ಕುಣಿಯಲು ತಮ್ಮ ಶರೀರದ ಮೇಲೆ ಗಾಢ ಬಣ್ಣದ ಪಟ್ಟೆಗಳನ್ನು ಬಿಡಿಸುವ ಕರಾವಳಿ ಕರ್ನಾಟಕದ ಅನೇಕ ಯುವಕ-ಯುವತಿಯರಲ್ಲಿ ಆಯುಷ್ ಕೂಡ ಒಬ್ಬರು. ಕುಣಿಯುವಾಗ ಅವರು ಹುಲಿಯ ಮುಖವಾಡಗಳನ್ನು ಧರಿಸಿ ಗೊಣಗುತ್ತಾ, ಸುತ್ತಲೂ ಜೋರಾಗಿ ಭಾರಿಸುವ ತಾಸೆಯ ಬಡಿತಕ್ಕೆ ಕುಣಿಯುತ್ತಾರೆ.
ಪಿಲಿ ಎಂದರೆ ಹುಲಿ. ಕರಾವಳಿ ಕರ್ನಾಟಕದ ಜನನುಡಿ ತುಳುವಿನಲ್ಲಿ ವೇಷ ಎಂದರೆ ಮೇಕಪ್. “ನೀವು ಯಾರಿಂದಲೂ ಇದನ್ನು ಕಲಿಯಬೇಕಾಗಿಲ್ಲ. ಇದು ನಮ್ಮ ಆತ್ಮದಲ್ಲಿಯೇ ಇದೆ,” ಎನ್ನುತ್ತಾರೆ ಕಳೆದ 22 ವರ್ಷಗಳಿಂದ ಪಿಲಿ ವೇಷ ಹಾಕುತ್ತಿರುವ ವೀರೇಂದ್ರ ಶೆಟ್ಟಿಗಾರ್. "ತಾಸೆಯ ಶಬ್ದ ಮತ್ತು ಸುತ್ತ ಇರುವ ಶಕ್ತಿ ನಿಮ್ಮನ್ನು ಬೀಟ್‌ಗೆ ಕುಣಿಯುವಂತೆ ಮಾಡುತ್ತದೆ," ಎಂದು ಅವರು ಹೇಳುತ್ತಾರೆ. ಅಮೆಜಾನ್‌ನಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುವ 30 ವರ್ಷ ವಯಸ್ಸಿನ ವೀರೇಂದ್ರ ಊರಿನ ಯುವಕರನ್ನು ಪಿಲಿ ಕುಣಿಯುವಂತೆ ಪ್ರೋತ್ಸಾಹಿಸುತ್ತಾರೆ.
ಹುಲಿಗಳು, ಚಿರತೆಗಳು ಮತ್ತು ಕರಿ ಚಿರತೆಗಳಂತೆ ಅಕ್ರಿಲಿಕ್ ಪೈಂಟ್‌ನಿಂದ ಹಳದಿ ಮತ್ತು ಕಂದು ಬಣ್ಣದ ಪಟ್ಟೆಗಳನ್ನು ಕುಣಿಯುವವರು ಶರೀರದ ತುಂಬಾ ಚಿತ್ರಿಸಿಕೊಳ್ಳುತ್ತಾರೆ. ಹಿಂದೆ ಪಿಲಿ ಕುಣಿಯುವವರು ಇದ್ದಿಲು, ಮಣ್ಣು, ಬೇರುಗಳು ಮತ್ತು ಫಂಗಸ್‌ಗಳನ್ನು ಬಳಸಿ ಆಕರ್ಷಕ ಬಣ್ಣಗಳನ್ನು ತಯಾರಿಸುತ್ತಿದ್ದರು.
ವರ್ಷಗಳು ಕಳೆದಂತೆ, ಈ ಕುಣಿತದ ಸಾಂಪ್ರದಾಯಿಕ ಹೆಜ್ಜೆಗಾರಿಕೆ ಅಕ್ರೋಬಾಟಿಕ್ ಆಗಿ ಬದಲಾಗಿದೆ, ಉದಾಹರಣೆಗೆ ಹಿಂದಕ್ಕೆ – ಮುಂದಕ್ಕೆ ಜಿಗಿಯುವುದು, ತಲೆಯಿಂದ ತೆಂಗಿನಕಾಯಿ ಒಡೆಯುವುದು, ಬಾಯಿಯಿಂದ ಬೆಂಕಿಯುಗುಳುವುದು ಮುಂತಾದ ಸಾಹಸಮಯ ಕಸರತ್ತುಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನೃತ್ಯ ಸಂಯೋಜನೆಗೂ ಹೆಚ್ಚು ದೈಹಿಕ ಶ್ರಮ ಅಗತ್ಯ. ವಯಸ್ಸಾದವರು ಈ ಸಾಂಪ್ರದಾಯಿಕ ಕುಣಿತವನ್ನು ಮುಂದುವರಿಸಿಕೊಂಡು ಹೋಗಲು ಯುವಕರನ್ನು ಬಿಟ್ಟು ಬಿಟ್ಟಿದ್ದಾರೆ.
ಈ ಕುಣಿತದ ತಯಾರಿ ಪ್ರದರ್ಶನಕ್ಕೆ ಒಂದು ದಿನ ಮೊದಲೇ ಆರಂಭವಾಗುತ್ತದೆ. ಮೈ ಮತ್ತು ಮುಖಕ್ಕೆ ಬಣ್ಣ ಹಚ್ಚಲು ಗಂಟೆಗಟ್ಟಲೆ ಕೆಲಸ ಮಾಡಬೇಕು. ಹಬ್ಬಗಳು ಮುಗಿಯುವವರೆಗೆ ಒಂದೆರಡು ದಿನಗಳ ವರೆಗೆ ಹಾಗೆಯೇ ಇರಬೇಕಾಗುತ್ತದೆ. "ಮೊದಮೊದಲು ಇದು ಕಷ್ಟವೆನಿಸುತ್ತದೆ. ಆದರೆ ತಾಸೆಯ ಶಬ್ದ ಕೇಳಿದ ನಂತರ, ನಿಮಗೆ ಬೀಟ್‌ಗೆ ಕುಣಿಯಬೇಕೆಂದು ಅನಿಸುತ್ತದೆ,” ಎಂದು 12 ನೇ ತರಗತಿಯನ್ನು ಮುಗಿಸಿರುವ ಆಯುಷ್ ಹೇಳುತ್ತಾರೆ.
ತಾಸೆಯ ಬೀಟ್‌ಗಳಿಗೆ ಸರಿಯಾಗಿ ಪಿಲಿಯಂತೆ ವೇಷ ಧರಿಸಿರುವ ಜನರು ಗೌರವಾರ್ಥವಾಗಿ ಹಾಗೂ ಜನರನ್ನು ರಂಜಿಸಲು ಕುಣಿಯುತ್ತಾರೆ. ಹುಲಿಯಂತೆ ಅಭಿನಯಿಸಲು ಹುಡುಗರು ತಮ್ಮ ಇಡೀ ಶರೀರಕ್ಕೆ ಬಣ್ಣ ಹಚ್ಚಿದರೆ, ಹುಡುಗಿಯರು ಮಾತ್ರ ತಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು, ಹತ್ತಿಯಿಂದ ಮಾಡಿದ ಹುಲಿ ವೇಷಭೂಷಣವನ್ನು ಧರಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳೂ ಪಿಲಿ ಕುಣಿಯುವುದು ಹೆಚ್ಚಾಗಿದೆ.
ಹಿಂದೆಲ್ಲಾ ಪ್ರದರ್ಶನವನ್ನು ಮೆಚ್ಚಿದವರು ಕುಣಿತದ ತಂಡಕ್ಕೆ ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬೆಳೆಯುವ ಅಕ್ಕಿ ಮತ್ತು ಭತ್ತವನ್ನು ನೀಡುತ್ತಿದ್ದರು. ಈಗ ಆಹಾರ ಧಾನ್ಯದ ಬದಲಿಗೆ ಹಣ ನೀಡುತ್ತಾರೆ. ಕುಣಿಯುವ ಪ್ರತಿಯೊಬ್ಬನೂ ಎರಡು ದಿನಕ್ಕೆ ಸುಮಾರು 2,500 ರುಪಾಯಿ ಪಡೆಯುತ್ತಾನೆ. ಕಸರತ್ತು ಮಾಡುವವನು ಹೆಚ್ಚುವರಿಯಾಗಿ ಎರಡೂ ದಿನಗಳಿಗೆ 6,000 ರುಪಾಯಿ ಸಂಪಾದಿಸುತ್ತಾನೆ. "ತುಂಬಾ ಜನ ಕುಣಿಯುವುದನ್ನು ನೋಡಿ ನಿಮಗೂ ಕೂಡ ನೀವು ಪಿಲಿ ವೇಷ ಕುಣಿಯುತ್ತಿರುವಂತೆ ಫೀಲ್ ಆಗುತ್ತದೆ," ಎಂದು ಆಯುಷ್ ಹೇಳುತ್ತಾರೆ.
ಪ್ರದರ್ಶನಗಳನ್ನು ಸಾಮಾನ್ಯವಾಗಿ ಕೇರಿಯ ಕಮಿಟಿಗಳು ಆಯೋಜಿಸುತ್ತವೆ. ಆಯುಷ್ ಮತ್ತು ಸಂಗಡಿಗರು ಯುವ ಟೈಗರ್ಸ್ ಮಂಚಿ ಎಂಬ ತಂಡಕ್ಕೆ ಸೇರಿದವರು. ಈ ಸಂಘ ಉಡುಪಿಯ ಮಣಿಪಾಲದಲ್ಲಿ ವರ್ಷಾವರ್ಷ ಪಿಲಿ ವೇಷ ಕುಣಿಯಲು ಫಂಡ್ ನೀಡುತ್ತದೆ. ಪ್ರದರ್ಶನಗಳನ್ನು ಆಯೋಜಿಸಲು ಎರಡು ಲಕ್ಷ ರೂಪಾಯಿಗಳು ಬೇಕಾಗುತ್ತವೆ. ಇದರಲ್ಲಿ ಬಣ್ಣ ಹಚ್ಚುವವರಿಗೆ ಮತ್ತು ಕುಣಿಯುವವರಿಗೆ ಕೊಡಬೇಕು. ಪ್ರಯಾಣ, ಊಟ, ಪೈಂಟ್ ಮತ್ತು ವೇಷಭೂಷಣಗಳ ವೆಚ್ಚವನ್ನು ಕೂಡ ಇದೇ ಫಂಡ್‌ನಿಂದ ಭರಿಸಬೇಕು.
ಕುಣಿಯುವವರಿಗೆ ಸಾರ್ವಜನಿಕರನ್ನು ರಂಜಿಸುವುದು ಮುಖ್ಯವಾದರೂ, ಈ ಪ್ರದರ್ಶನದಲ್ಲಿ ಶತಮಾನದಷ್ಟು-ಹಳೆಯ ಸಾಂಪ್ರದಾಯಿಕ ಶಿಸ್ತನ್ನು ಉಳಿಸಿಕೊಳ್ಳಲು ಹಲವಾರು ಕಟ್ಟುಕಟ್ಟಳೆಯನ್ನು ಅನುಸರಿಸಬೇಕಾಗುತ್ತದೆ. ದಿನದ ಕೊನೆಯಲ್ಲಿ, "ನಮ್ಮ ಇಡೀ ಮೈ ತುಂಬಾ ನೋಯುತ್ತದೆ, ಆದರೆ ಜನರನ್ನು ರಂಜಿಸಲು ಮತ್ತು ಈ ಸಂಪ್ರದಾಯವನ್ನು ಕಾಪಾಡಲು ನಾವು ಇದನ್ನು ಮಾಡುತ್ತೇವೆ," ಎಂದು ಆಯುಷ್ ಹೇಳುತ್ತಾರೆ.
ಅನುವಾದ: ಚರಣ್ ಐವರ್ನಾಡು