ಇತ್ತ ಚಳಿಗಾಲದ ಬೆಳೆಗಳು ಕಟಾವಿಗೆ ಬರುತ್ತಿದ್ದಂತೆ, ಅತ್ತ ಕೃಷ್ಣ ಅಂಬುಲ್ಕರ್ ಮನೆ ಮನೆಗೆ ತೆರಳಿ ಆಸ್ತಿ ಮತ್ತು ನೀರಿನ ತೆರಿಗೆ ವಸೂಲಿಗೆ ಹೊರಟು ನಿಲ್ಲುತ್ತಾರೆ. ಈ ಅಭಿಯಾನದ ಸಮಯದಲ್ಲಿ ಅವರು ಬೆಳಗಿನ 7 ಗಂಟೆಗೆಲ್ಲ ಕೆಲಸ ಶುರು ಮಾಡಿಬಿಡುತ್ತಾರೆ.
“ಇಲ್ಲಿನ ಕೃಷಿಕರು ಬಹಳ ಬಡವರು. ಒಟ್ಟಾರೆ 65 ಶೇಕಡಾದಷ್ಟು ತೆರಿಗೆ ವಸೂಲಿಯಾದರೂ ಅದು ದೊಡ್ಡ ವಿಷಯ” ಎನ್ನುತ್ತಾರೆ ಜಮ್ಕೋಲಿ ಪಂಚಾಯತಿಯ ಏಕೈಕ ಉದ್ಯೋಗಿಯಾದ ಕೃಷ್ಣ.
ಜಮ್ಕೋಲಿ ನಾಗ್ಪುರದಿಂದ 75 ಕಿಲೋಮೀಟರ್ ದೂರದಲ್ಲಿದೆ ಮತ್ತು ಇಲ್ಲಿ ಮಾನಾ ಮತ್ತು ಗೋವಾರಿ (ಪರಿಶಿಷ್ಟ ಪಂಗಡ) ಸಮುದಾಯಗಳು ವಾಸಿಸುತ್ತವೆ, ಅವರು ಹೆಚ್ಚಾಗಿ ಒಣಭೂಮಿಯನ್ನು ಕೃಷಿ ಮಾಡುವ ಅತಿಸಣ್ಣ ಮತ್ತು ಸಣ್ಣ ರೈತರು. ಬಾವಿ ಅಥವಾ ಬೋರ್ ವೆಲ್ ಇದ್ದರೆ ಇಲ್ಲಿನ ರೈತರು ಹತ್ತಿ, ಸೋಯಾಬೀನ್, ತೊಗರಿ ಮತ್ತು ಗೋಧಿಯನ್ನು ಸಹ ಬೆಳೆಯುತ್ತಾರೆ. ನಲವತ್ತು ವರ್ಷದ ಕೃಷ್ಣ ಹಳ್ಳಿಯ ಏಕೈಕ ಒಬಿಸಿ ವರ್ಗದಡಿ ಬರುವ ವ್ಯಕ್ತಿ - ಜಾತಿಯಿಂದ ನವಿ (ಕ್ಷೌರಿಕ).
ಈ ವರ್ಷದ ಬಜೆಟ್ಟಿನಲ್ಲಿ ಕೃಷಿಯೇ ಕೇಂದ್ರ ಬಿಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಜೊತೆಗೆ ಮಧ್ಯಮವರ್ಗಕ್ಕೆ ನೀಡಲಾಗಿರುವ ತೆರಿಗೆ ವಿನಾಯಿತಿಯ ಕುರಿತು ದೊಡ್ಡ ದೊಡ್ಡ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ನಡುವೆ ಅಂಬುಲ್ಕರ್ ಅವರು ಪಂಚಾಯತ್ ತೆರಿಗೆ ವಸೂಲಿಯ ತಲೆಬಿಸಿಯಲ್ಲಿದ್ದರೆ, ಹಳ್ಳಿಯ ರೈತರು ತಮ್ಮ ಫಸಲಿನ ಬೆಲೆ ನಿಂತಲ್ಲೇ ನಿಂತಿರುವ ಬಗ್ಗೆ ಚಿಂತಿತರಾಗಿದ್ದರು.
ಕೃಷ್ಣ ಅವರ ಚಿಂತೆ ಕೂಡಾ ಅರ್ಥ ಆಗುವಂತಹದ್ದೇ. ಅವರಿಗೆ ಅವರು ಒಟ್ಟು 5.5 ಲಕ್ಷ ರೂಪಾಯಿಗಳ ತೆರಿಗೆಯನ್ನು ವಸೂಲಿ ಮಾಡಲೇಬೇಕಿದೆ. ಇಲ್ಲದೆ ಹೋದರೆ ಅವರಿಗೆ ಅವರ . 11,500 ರೂಪಾಯಿಗಳ ಸಂಬಳ ಸಿಗುವುದಿಲ್ಲ. ಅವರ ಸಂಬಳಕ್ಕೂ ಈ ತೆರಿಗೆ ಹಣವನ್ನೇ ಬಳಸಲಾಗುತ್ತದೆ.
"ನಮ್ಮ ಉತ್ಪಾದನಾ ವೆಚ್ಚವು ದ್ವಿಗುಣಗೊಂಡಿದೆ ಅಥವಾ ಮೂರು ಪಟ್ಟು ಹೆಚ್ಚಾಗಿದೆ; ಮಹಾಂಗಾಯ್ [ಹಣದುಬ್ಬರ] ನಮ್ಮ ಉಳಿತಾಯವನ್ನು ತಿನ್ನುತ್ತಿದೆ" ಎಂದು ಗೋವಾರಿ ಸಮುದಾಯದ ಗ್ರಾಮದ ಸರಪಂಚ್ ಶಾರದಾ ರಾವತ್ ಹೇಳುತ್ತಾರೆ. 45 ವರ್ಷದ ಅವರು ಕುಟುಂಬದ ಎರಡು ಎಕರೆ ಭೂಮಿಯನ್ನು ಉಳುಮೆ ಮಾಡುವುದರ ಜೊತೆಗೆ ಸ್ವತಃ ಕೃಷಿ ಕಾರ್ಮಿಕರಾಗಿಯೂ ಕೆಲಸ ಮಾಡುತ್ತಾರೆ.
ಬೆಳೆಗಳ ಬೆಲೆಗಳು ನಿಂತಲ್ಲೇ ನಿಂತಿವೆ, ಅಥವಾ ಇನ್ನೂ ಕಡಿಮೆಯಾಗಿವೆ. ಸೋಯಾಬೀನ್ ವಿಷಯಕ್ಕೆ ಬಂದರೆ, ಅದರ ಕ್ವಿಂಟಲ್‌ಗೆ 4850 ರೂ. ಸರ್ಕಾರಿ ಬೆಲೆಗಿಂತ ಶೇ. 25ರಷ್ಟು ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಹತ್ತಿ ಬೆಲೆಗಳು ವರ್ಷಗಳಿಂದ ಕ್ವಿಂಟಲ್‌ಗೆ 7,000 ರೂ.ಗಳ ನಡುವೆ ಸಿಲುಕಿಕೊಂಡಿದೆ. ತೊಗರಿ ಬೆಲೆ ಕ್ವಿಂಟಲ್‌ಗೆ 7-7,500 ರೂ.ಗಳಲ್ಲಿದೆ, ಇದು ಈಗಾಗಲೇ ಕಡಿಮೆ ಇರುವ ಕನಿಷ್ಠ ಬೆಂಬಲ ಬೆಲೆಗೆ ಬಹುತೇಕ ಸಮಾನವಾಗಿದೆ.
ಈ ಸರಪಂಚ್ ಹೇಳುವ ಪ್ರಕಾರ, ಒಂದೇ ಒಂದು ಕುಟುಂಬವು ಎಲ್ಲಾ ಮೂಲಗಳಿಂದ ವರ್ಷಕ್ಕೆ 1 ಲಕ್ಷಕ್ಕಿಂತ ಹೆಚ್ಚು ಗಳಿಸುವುದಿಲ್ಲ. ಪ್ರಾಸಂಗಿಕವಾಗಿ, ಇತ್ತೀಚಿನ ಕೇಂದ್ರ ಬಜೆಟ್ ಅತ್ಯಂತ ಕಡಿಮೆ ತೆರಿಗೆ ಶ್ರೇಣಿಯಿಂದ ಬರುವ ವ್ಯಕ್ತಿಯು ಇಷ್ಟೊಂದು ಹಣವನ್ನು ಉಳಿಸುತ್ತಾನೆ ಎಂದು ಹೇಳಿದೆ.
"ಸರ್ಕಾರದ ಬಜೆಟ್ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಆದರೆ ನಮ್ಮ ಬಜೆಟ್ ಕುಸಿಯುತ್ತಿವೆ ಎನ್ನುವುದು ನಮಗೆ ತಿಳಿದಿದೆ" ಎಂದು ಶಾರದಾ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು