ಜಾರ್ಖಂಡ್‌ ರಾಜ್ಯದ ಬೊರೊಟಿಕಾದಲ್ಲಿನ ಸಂಕೀರ್ಣ ಗರ್ಭಧಾರಣೆ ಹೊಂದಿರುವ ಮಹಿಳೆಯೊಬ್ಬರು ಕೇವಲ ವೈದ್ಯರನ್ನು ನೋಡಲು ರಾಜ್ಯದ ಗಡಿ ದಾಟಬೇಕಾದ ಪರಿಸ್ಥಿತಿಯಿದೆ.

ಇದು ಅವರೊಬ್ಬರ ಕತೆಯಲ್ಲ – ನೀವು ಓರ್ವ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯಾಗಿದ್ದಲ್ಲಿ ಅಲ್ಲಿ ಸ್ತ್ರೀರೋಗ ತಜ್ಞರನ್ನು ಅಥವಾ ಶಸ್ತ್ರಚಿಕಿತ್ಸಕರನ್ನು ಹತ್ತಿರದಲ್ಲಿ ಹುಡುಕುವುದು ಸುಲಭದ ಕೆಲಸವಲ್ಲ. ಈ ಪ್ರದೇಶಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHCs) ಲಭ್ಯವಿರುವ ಮೂಲಸೌಕರ್ಯಗಳಲ್ಲಿ ಅಗತ್ಯವಿರುವ ಪ್ರಸೂತಿ ತಜ್ಞರ ಸಂಖ್ಯೆಯಲ್ಲಿ ಶೇಕಡಾ 74.2ರಷ್ಟು ಕೊರತೆಯಿದೆ.

ಒಂದು ವೇಳೆ ನೀವು ಯುವ ತಾಯಿಯಾಗಿದ್ದು, ನಿಮ್ಮ ಮಗುವು ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ CHCಯಲ್ಲಿ ಮಕ್ಕಳ ತಜ್ಞರನ್ನು ಕಾಣುವುದು ಕೂಡಾ ಸುಲಭ ಸಾಧ್ಯವಲ್ಲ. ಏಕೆಂದರೆ ಇಲ್ಲಿ ಫಿಸಿಷಿಯನ್ಸ್‌ ಮತ್ತು ಮಕ್ಕಳ ತಜ್ಞರ 80 ಪ್ರತಿಶತದಷ್ಟು ಹುದ್ದೆಗಳು ಭರ್ತಿಯಾಗಿಲ್ಲ.

2021-22ರ ಗ್ರಾಮೀಣ ಆರೋಗ್ಯ ಅಂಕಿಅಂಶಗಳ ವರದಿಯಿಂದ ನಾವು ಈ ಮಾಹಿತಿಗಳನ್ನು ತಿಳಿದುಕೊಂಡಿದ್ದೇವೆ. ಇವು ಮತ್ತು ಇತರ ಪ್ರಮುಖ ವರದಿಗಳು, ಸಂಶೋಧನಾ ಪ್ರಬಂಧಗಳು ಮತ್ತು ಹಾರ್ಡ್ ಡೇಟಾ, ಕಾನೂನುಗಳು ಮತ್ತು ಸಂಪ್ರದಾಯಗಳು ಪರಿ ಹೆಲ್ತ್ ಆರ್ಕೈವ್ ವಿಭಾಗದಲ್ಲಿ ಲಭ್ಯವಿವೆ ಮತ್ತು ಭಾರತದಲ್ಲಿ ಮಹಿಳೆಯರ ಆರೋಗ್ಯದ ಸ್ಥಿತಿಯನ್ನು ವಿವರಿಸಲು ಮತ್ತು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿರ್ಣಾಯಕ ಆಕರಗಳಾಗಿ ಕೆಲಸ ಮಾಡುತ್ತವೆ.

ಈ ವಿಭಾಗವು ವಿಶೇಷವಾಗಿ ಗ್ರಾಮೀಣ ಭಾರತದಲ್ಲಿನ ಮಹಿಳೆಯರ ಆರೋಗ್ಯದ ಅನಿಶ್ಚಿತ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಸಂತಾನೋತ್ಪತ್ತಿ ಆರೋಗ್ಯದಿಂದ ಹಿಡಿದು ಲೈಂಗಿಕ ಹಿಂಸಾಚಾರದವರೆಗೆ, ಮಾನಸಿಕ ಆರೋಗ್ಯದಿಂದ ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮದವರೆಗೆ, ಪರಿ ಹೆಲ್ತ್ ಆರ್ಕೈವ್ ಮಹಿಳೆಯರ ಆರೋಗ್ಯದ ಹಲವಾರು ಅಂಶಗಳನ್ನು ಒಳಗೊಂಡಿದ್ದು 'ಜನಸಾಮಾನ್ಯರ ದೈನಂದಿನ ಜೀವನವನ್ನು' PARIಯ ಉದ್ದೇಶವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ.

PHOTO • Courtesy: PARI Library
PHOTO • Courtesy: PARI Library

PARI ಲೈಬ್ರರಿಯ ಉಪವಿಭಾಗವಾದ ಪರಿ ಹೆಲ್ತ್ ಆರ್ಕೈವ್, ಸರ್ಕಾರ, ಸ್ವತಂತ್ರ ಸಂಸ್ಥೆಗಳು ಮತ್ತು ಯುಎನ್ ಏಜೆನ್ಸಿಗಳ ವರದಿಗಳು ಸೇರಿದಂತೆ 256 ದಾಖಲೆಗಳನ್ನು ಹೊಂದಿದೆ. ಇದರ ವಿಷಯ ವ್ಯಾಪ್ತಿಯು ಜಾಗತಿಕ ವಿಷಯಗಳಿಂದ ರಾಷ್ಟ್ರೀಯ ವಿಷಯಗಳವರೆಗೆ ಅಥವಾ ದೇಶದ ನಿರ್ದಿಷ್ಟ ಪ್ರದೇಶಗಳಿಂದ ವಿಷಯಗಳವರೆಗೆ ಇರುತ್ತದೆ.

"ನನಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶದ ಕೊರತೆಯ ಸಮಸ್ಯೆ ಇದೆ ಮತ್ತು ನಾನು ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳಬಾರದು ಎಂದು ಹೇಳಿದ್ದರು" ಎಂದು  ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೀಡಿ ಕಾರ್ಮಿಕರಾದ ತನುಜಾ ಹೇಳುತ್ತಾರೆ.

"ನಮ್ಮಲ್ಲಿ ಈಗಲೂ ಮೈಯಲ್ಲಿ ಒಂದಿಷ್ಟೂ ರಕ್ತವಿಲ್ಲದೆ ಬರುವ ಆದಿವಾಸಿ ಮಹಿಳೆಯರಿದ್ದಾರೆ  - ಅವರ ಹಿಮೋಗ್ಲೋಬಿನ್ ಲೆವೆಲ್ ಪ್ರತಿ ಡೆಸಿಲೀಟರಿಗೆ 2 ಗ್ರಾಂ! ಇದು ಇನ್ನೂ ಕಡಿಮೆ ಇರಬಹುದು, ಆದರೆ ನಾವು ಅದನ್ನು ಅಳೆಯಲು ಸಾಧ್ಯವಿಲ್ಲ" ಎಂದು ನೀಲಗಿರಿಯ ಆದಿವಾಸಿ ಆಸ್ಪತ್ರೆಯ ಡಾ. ಶೈಲಜಾ ಹೇಳುತ್ತಾರೆ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( NFHS-5 2019-21 ) ಪ್ರಕಾರ, ದೇಶಾದ್ಯಂತ, 2015-16ರಿಂದ ಮಹಿಳೆಯರಲ್ಲಿ ರಕ್ತಹೀನತೆಯ ಮಟ್ಟ ಹದಗೆಟ್ಟಿದೆ . ಈ ಸಮೀಕ್ಷೆಯು ಭಾರತದ 28 ರಾಜ್ಯಗಳು, ಎಂಟು ಕೇಂದ್ರಾಡಳಿತ ಪ್ರದೇಶಗಳು ಮತ್ತು 707 ಜಿಲ್ಲೆಗಳಲ್ಲಿನ ಜನಸಂಖ್ಯೆ, ಆರೋಗ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

PHOTO • Design Courtesy: Aashna Daga

"ಹೆರಿಗೆಯ ಸಮಯದಲ್ಲಿ ನನಗೆ ಅತಿಯಾದ ರಕ್ತ ಸ್ರಾವವಾಯಿತು. ಹೆರಿಗೆಗೂ ಮುನ್ನವೇ ನರ್ಸ್ ನನಗೆ ಕೆಟ್ಟ ಖೂನ್ ಕಿ ಕಮಿ (ತೀವ್ರ ರಕ್ತಹೀನತೆ) ಇದೆ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು ಎಂದು ಹೇಳಿದ್ದರು" ಎಂದು ಬಿಹಾರದ ಗಯಾ ಜಿಲ್ಲೆಯ ಅಂಜನಿ ಯಾದವ್ ಹೇಳುತ್ತಾರೆ.

2019-21ರಲ್ಲಿ 15-49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಶೇಕಡಾ 57ರಷ್ಟು ಜನರು ರಕ್ತಹೀನತೆಯಿಂದ ಬಳಲುತ್ತಿದ್ದರು. ಪ್ರಪಂಚದಾದ್ಯಂತ ಮೂರು ಮಹಿಳೆಯರಲ್ಲಿ ಒಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಬಿಡುಗಡೆ ಮಾಡಿದ ದಿ ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್ 2022 ರ ಪ್ರಕಾರ, "ರಕ್ತಹೀನತೆಯು ಗ್ರಾಮೀಣ ಪ್ರದೇಶಗಳಲ್ಲಿ, ಬಡ ಕುಟುಂಬಗಳಲ್ಲಿನ ಮಹಿಳೆಯರು ಮತ್ತು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದ ಹೆಚ್ಚಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ".

ಪೌಷ್ಟಿಕ ಆಹಾರದ ಅಲಭ್ಯತೆಯೊಂದಿಗೆ ಅಂತಹ ಕೊರತೆಗಳು ತೀವ್ರಗೊಳ್ಳುತ್ತವೆ. ಅಪೌಷ್ಟಿಕತೆಯನ್ನು ನಿಭಾಯಿಸುವಲ್ಲಿ ಹಲವಾರು ಪೋಷಕಾಂಶ-ಸಾಂದ್ರತೆಯುಳ್ಳ ಆಹಾರಗಳಿಗೆ (ಮೊಟ್ಟೆ ಮತ್ತು ಹಾಲಿನಂತಹ) ಬೇಕಾಗುವ ಹೆಚ್ಚಿನ ವೆಚ್ಚವು ಪ್ರಮುಖ ತಡೆಗೋಡೆಯಾಗಿದೆ ಎಂದು 2020ರ ಗ್ಲೋಬಲ್ ನ್ಯೂಟ್ರಿಷನ್ ರಿಪೋರ್ಟ್ ಹೇಳುತ್ತದೆ. 2020ರ ಹೊತ್ತಿಗೆ ಭಾರತದಲ್ಲಿ 2.97 ಯುಎಸ್ ಡಾಲರ್ ಅಥವಾ ಸುಮಾರು 243 ರೂ. ಬೆಲೆ ಬಾಳುವ ಆರೋಗ್ಯಕರ ಆಹಾರ ಖರೀದಿಯ ಸಾಮರ್ಥ್ಯ ಭಾರತದಲ್ಲಿನ 973.3 ಮಿಲಿಯನ್ ಜನರಿಗೆ ಇರಲಿಲ್ಲ. ಅಲ್ಲದೆ ಮಹಿಳೆಯರು ತಮ್ಮ ಮನೆಗಳಲ್ಲಿ ಮತ್ತು ಅದರಾಚೆಗೆ ಸಂಪನ್ಮೂಲ ಹಂಚಿಕೆಯ ಪ್ರಮಾಣದಲ್ಲಿ ಕೆಳ ಸ್ಥಾನದಲ್ಲಿದ್ದಾರೆ.

PHOTO • Design Courtesy: Aashna Daga

PARI ಲೈಬ್ರರಿ ಚಾಲ್ತಿಯಲ್ಲಿರುವ ಆರೋಗ್ಯ ಮೂಲಸೌಕರ್ಯದ ಬಗ್ಗೆ ಅಖಿಲ ಭಾರತ ಮಟ್ಟದ ಸಮೀಕ್ಷೆಗಳನ್ನು ಒಳಗೊಂಡಿದೆ. ಭಾರತದಾದ್ಯಂತ ಸುಮಾರು 20 ಪ್ರತಿಶತದಷ್ಟು ಕುಟುಂಬಗಳು ಯಾವುದೇ ನೈರ್ಮಲ್ಯ ಸೌಲಭ್ಯಗಳಿಗೆ ಪ್ರವೇಶವನ್ನು ಹೊಂದಿಲ್ಲ, "ರಾತ್ರಿಯಲ್ಲಿ, ಲಭ್ಯವಿರುವ ಏಕೈಕ ಶೌಚಾಲಯವೆಂದರೆ ರೈಲ್ವೆ ಹಳಿಗಳು" ಎಂದು ಪಾಟ್ನಾದ ಕೊಳೆಗೇರಿಗಳ ಹುಡುಗಿಯರು ಹೇಳುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (2019-2021) ಹೇಳುವಂತೆ  ನಗರ ಪ್ರದೇಶಗಳಲ್ಲಿ ವಾಸಿಸುವ 90 ಪ್ರತಿಶತ ಮಹಿಳೆಯರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ 73 ಪ್ರತಿಶತದಷ್ಟು ಮಹಿಳೆಯರು ನೈರ್ಮಲ್ಯದ ಮುಟ್ಟಿನ ಉತ್ಪನ್ನಗಳಿಗೆ ಪ್ರವೇಶವನ್ನು ಹೊಂದಿದ್ದಾರೆ. 'ಹೈಜಿನಿಕ್ ಮುಟ್ಟಿನ ಉತ್ಪನ್ನಗಳು' ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಮುಟ್ಟಿನ ಕಪ್‌ಗಳು, ಟ್ಯಾಂಪೂನ್‌ಗಳು - ಮತ್ತು ಬಟ್ಟೆಯ ತುಂಡು ಕೂಡ ಸೇರಿವೆ. ಅನೇಕ ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಿಷಕಾರಿ ರಾಸಾಯನಿಕಗಳು ಇರುವುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ.ಗ್ರಾಮೀಣ ಪ್ರದೇಶದ ಎಲ್ಲಾ ಮಹಿಳೆಯರಲ್ಲಿ 73 ಪ್ರತಿಶತದಷ್ಟು ಆರೋಗ್ಯಕರ ಮುಟ್ಟಿನ ಉತ್ಪನ್ನಗಳಿಗೆ ಪ್ರವೇಶವನ್ನು ಹೊಂದಿದ್ದಾರೆ ಎಂದು ಹೇಳುತ್ತದೆ, ನಗರ ಪ್ರದೇಶಗಳಲ್ಲಿ ವಾಸಿಸುವ ಎಲ್ಲಾ ಮಹಿಳೆಯರಲ್ಲಿ ಸುಮಾರು 90 ಪ್ರತಿಶತದಷ್ಟು. 'ಆರೋಗ್ಯಕರ ಮುಟ್ಟಿನ ಉತ್ಪನ್ನಗಳು' ಸ್ಯಾನಿಟರಿ ನ್ಯಾಪ್ಕಿನ್ಗಳು, ಮುಟ್ಟಿನ ಕಪ್ಗಳು, ಟ್ಯಾಂಪೂನ್ಗಳು ಮತ್ತು ಒಂದು ತುಂಡು ಬಟ್ಟೆಯನ್ನು ಸಹ ಒಳಗೊಂಡಿವೆ. ಅನೇಕ ಸ್ಯಾನಿಟರಿ ನ್ಯಾಪ್ಕಿನ್ಗಳಲ್ಲಿ ಹೆಚ್ಚಿನ ಮಟ್ಟದ ವಿಷಕಾರಿ ರಾಸಾಯನಿಕಗಳು ಇರುವುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ.

PHOTO • Design Courtesy: Aashna Daga

ಇಂಡಿಯನ್‌ ವುಮೆನ್ಸ್ ಹೆಲ್ತ್ ಚಾರ್ಟರ್ ತಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಹಿಳೆಯರ ಹಕ್ಕುಗಳು "ತಾರತಮ್ಯ, ಬಲಾತ್ಕಾರ ಮತ್ತು ಹಿಂಸಾಚಾರದಿಂದ ಮುಕ್ತವಾಗಿರಬೇಕು" ಎಂದು ಘೋಷಿಸುತ್ತದೆ. ಈ ಹಕ್ಕುಗಳ ಈಡೇರಿಕೆಗಾಗಿ ಕೈಗೆಟುಕುವ ಆರೋಗ್ಯ ಸೌಲಭ್ಯಗಳ ಲಭ್ಯತೆ ಅತ್ಯಗತ್ಯ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (2019-21) ಪ್ರಕಾರ, ಸ್ತ್ರೀ ಸಂತಾನಶಕ್ತಿ ಹರಣ ಕಾರ್ಯವಿಧಾನಕ್ಕೆ ಒಳಗಾದ ಸುಮಾರು 80 ಪ್ರತಿಶತದಷ್ಟು ಮಹಿಳೆಯರು ಸಾರ್ವಜನಿಕ ಆರೋಗ್ಯ ಸೌಲಭ್ಯದಲ್ಲಿ, ಸಾಮಾನ್ಯವಾಗಿ ಪುರಸಭೆಯ ಆಸ್ಪತ್ರೆ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಡಿಸಿಕೊಂಡಿದ್ದಾರೆ. ಆದರೂ, ದೇಶವು ಅಂತಹ ಸಂಸ್ಥೆಗಳ ಸ್ಪಷ್ಟ ಕೊರತೆಗೆ ಸಾಕ್ಷಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ವಜೀರಿಥಾಲ್ ಗ್ರಾಮದ ನಿವಾಸಿಗಳಿಗೆ ಲಭ್ಯವಿರುವ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಅವರ ಊರಿನಿಂದ ಐದು ಕಿಲೋಮೀಟರ್ ದೂರದಲ್ಲಿದೆ.

ಇದು ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಕಾಶ್ಮೀರದ ಬಂಡಿಪೋರ್ ಜಿಲ್ಲೆಯ ಬದುಗಾಂ ಪಿಎಚ್‌ಸಿಯಲ್ಲಿ ಇರುವುದು ಒಬ್ಬರೇ ನರ್ಸ್.ಅದು ತುರ್ತು ಸಂದರ್ಭವಿರಲಿ, ಗರ್ಭಪಾತವಿರಲಿ ಅಥವಾ ಗರ್ಭಸ್ರಾವವಿರಲಿ ಎಲ್ಲದಕ್ಕೂ ನೇರವಾಗಿ ಗುರೇಜ್‌ಗೆ ಹೋಗಬೇಕು" ಎಂದು ವಜೀರಿತಾಲ್‌ನ ಅಂಗನವಾಡಿ ಕಾರ್ಯಕರ್ತೆ ರಾಜಾ ಬೇಗಂ PARI ಗೆ ತಿಳಿಸಿದರು. "ಮತ್ತು ಆಪರೇಷನ್‌ ಆಗಬೇಕಿದ್ದಲ್ಲಿ, ಅವರು ಶ್ರೀನಗರದ ಲಾಲ್ ದೇಡ್ ಆಸ್ಪತ್ರೆಗೆ ಹೋಗಬೇಕು. ಅದು ಗುರೆಜ್‌ನಿಂದ ಸುಮಾರು 125 ಕಿಲೋಮೀಟರ್ ದೂರದಲ್ಲಿದೆ ಮತ್ತು ಪ್ರತಿಕೂಲ ಹವಾಮಾನದ ಸಮಯದಲ್ಲಿ ಅಲ್ಲಿಗೆ ತಲುಪಲು ಒಂಬತ್ತು ಗಂಟೆಗಳು ಹಿಡಿಯಬಹುದು ” ಎಂದು ಅವರು ಹೇಳಿದರು.

PHOTO • Design Courtesy: Aashna Daga

ಗ್ರಾಮೀಣ ಆರೋಗ್ಯ ಅಂಕಿಅಂಶಗಳು 2021-22 ರ  ಪ್ರಕಾರ, ಮಾರ್ಚ್ 31, 2022ರ ಹೊತ್ತಿಗೆ ಉಪ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 34,541 ಸಹಾಯಕ ಮಿಡ್‌ವೈಫ್‌ ನರ್ಸ್ ಹುದ್ದೆಗಳು ಖಾಲಿಯಿವೆ. ಮಹಿಳೆಯರು ತಮ್ಮ ಆರೋಗ್ಯ ಅಗತ್ಯಗಳಿಗಾಗಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ), ಸಹಾಯಕ ಮಿಡ್‌ವೈಫ್ ನರ್ಸ್ (ಎಎನ್ಎಂ) ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸಂಪರ್ಕಿಸುವ ಅನಿವಾರ್ಯತೆಯಿದೆ.

ಆಕ್ಸ್ಫಾಮ್ ಇಂಡಿಯಾದ ಇನ್‌ ಇಕ್ವಾಲಿಟಿ ರಿಪೋರ್ಟ್ 2021: ಭಾರತದ ಅಸಮಾನ ಆರೋಗ್ಯ ಕಥೆ ‌ಎನ್ನುವ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ 10,189 ಜನರಿಗೆ ಒಬ್ಬ ಸರ್ಕಾರಿ ಅಲೋಪತಿ ವೈದ್ಯರು ಮತ್ತು ಪ್ರತಿ 90,343 ಜನರಿಗೆ ಒಂದು ಸರ್ಕಾರಿ ಆಸ್ಪತ್ರೆ ಇದೆ.

PHOTO • Design Courtesy: Aashna Daga

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಆರೋಗ್ಯ ಸಂಬಂಧಿ ಮೂಲ ಸೌಕರ್ಯಗಳು ಜನರ ಅಗತ್ಯ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋಲುತ್ತಿವೆ. 2022ರ ಲಿಂಗಾಧರಿತ ಅಸಮಾನತೆಯ ಕುರಿತಾದ ವರದಿಯು ಭಾರತಕ್ಕೆ 146 ದೇಶಗಳಲ್ಲಿ 135 ನೇ ಸ್ಥಾನವನ್ನು ನೀಡಿದೆ. ದೇಶವು ʼಆರೋಗ್ಯ ಮತ್ತು ಪಾರಾಗುವಿಕೆʼ ಸೂಚಿಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಇಂತಹ ಅಂತರಗಳ  ರಚನಾತ್ಮಕ ಕೊರತೆಗಳಎದರು ದೇಶದ ಆರೋಗ್ಯ ರಕ್ಷಣೆಯ ಸ್ಥಿತಿ ಮತ್ತು ಮಹಿಳೆಯರ ಜೀವನದ ಮೇಲೆ ಅದರ ಪ್ರಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ.

ಪರಿ ಲೈಬ್ರರಿ ಈ ನಿಟ್ಟಿನಲ್ಲಿ ಒಂದು ಸಾಧನವಾಗಿದೆ.

ಗ್ರಾಫಿಕ್ಸ್ ವಿನ್ಯಾಸಗೊಳಿಸಿ ಕೊಟ್ಟಿ ದ್ದಕ್ಕಾಗಿ ಪರಿ ಲೈಬ್ರರಿಯ ಸ್ವಯಂಸೇವಕ ರಾದ ಆಶ್ನಾ ದಾ ಗಾ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಕವರ್ ಡಿಸೈನ್: ಸ್ವದೇಶ ಶರ್ಮಾ

ಅನುವಾದ: ಶಂಕರ. ಎನ್. ಕೆಂಚನೂರು

PARI Library Team

பாரி நூலகக் குழுவின் தீபாஞ்சலி சிங், ஸ்வதேஷ் ஷர்மா மற்றும் சிதித்தா சொனவனே ஆகியோர் மக்களின் அன்றாட வாழ்க்கைகள் குறித்த தகவல் பெட்டகத்தை உருவாக்கும் பாரியின் முயற்சிக்கு தேவையான ஆவணங்களை ஒழுங்கமைக்கின்றனர்.

Other stories by PARI Library Team
Editor : Priti David

ப்ரிதி டேவிட் பாரியின் நிர்வாக ஆசிரியர் ஆவார். பத்திரிகையாளரும் ஆசிரியருமான அவர் பாரியின் கல்விப் பகுதிக்கும் தலைமை வகிக்கிறார். கிராமப்புற பிரச்சினைகளை வகுப்பறைக்குள்ளும் பாடத்திட்டத்துக்குள்ளும் கொண்டு வர பள்ளிகள் மற்றும் கல்லூரிகளுடன் இயங்குகிறார். நம் காலத்தைய பிரச்சினைகளை ஆவணப்படுத்த இளையோருடனும் இயங்குகிறார்.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru