ಕೊಲ್ಹಾಪುರ ಜಿಲ್ಲೆಯ ಉಚ್ಗಾಂವ್ ಗ್ರಾಮದ ರೈತ ಸಂಜಯ್ ಚವಾಣ್ ಹೇಳುತ್ತಾರೆ, "ಸಿಮೆಂಟ್ ಚಾ ಜಂಗಲ್ ಆ ಚ್ ಝಲೇಲಾ ಆಹೆ [ಊರು ಬಹುತೇಕ ಸಿಮೆಂಟ್ ಕಾಡಾಗಿ ಮಾರ್ಪಟ್ಟಿದೆ].” ಕಳೆದ ಒಂದು ದಶಕದಲ್ಲಿ, ಉಚ್ಗಾಂವ್ ಕಾರ್ಖಾನೆಗಳು ಮತ್ತು ಕೈಗಾರಿಕೆಗಳಲ್ಲಿ ಹೆಚ್ಚಳ ಮತ್ತು ಅಂತರ್ಜಲ ಮಟ್ಟದಲ್ಲಿ ಕುಸಿತವನ್ನು ಏಕಕಾಲದಲ್ಲಿ ಕಂಡಿದೆ.
"ನಮ್ಮ ಬಾವಿಗಳೆಲ್ಲ ಬತ್ತಿ ಹೋಗಿವೆ" ಎಂದು 48 ವರ್ಷದ ರೈತ ಹೇಳುತ್ತಾರೆ.
ಮಹಾರಾಷ್ಟ್ರದ ಅಂತರ್ಜಲ ವರ್ಷ ಪುಸ್ತಕ (2019) ರ ಪ್ರಕಾರ ಕೊಲ್ಹಾಪುರ, ಸಾಂಗ್ಲಿ, ಸತಾರಾ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿನ ಸುಮಾರು 14 ಪ್ರತಿಶತದಷ್ಟು ಬಾವಿಗಳಲ್ಲಿ ನೀರಿನ ಮಟ್ಟವು ಕುಗ್ಗುತ್ತಿರುವುದನ್ನು ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಸರಾಸರಿ ಬಾವಿಯ ಆಳವು 30 ಅಡಿಗಳಿಂದ 60 ಅಡಿಗಳಿಗೆ ಏರಿದೆ ಎಂದು ಕೊರೆಯುವ ಗುತ್ತಿಗೆದಾರ ರತನ್ ರಾಥೋಡ್ ಹೇಳುತ್ತಾರೆ.
ಈಗ ಉಚ್ಗಾಂವ್‌ನ ಪ್ರತಿಯೊಂದು ಮನೆಯಲ್ಲೂ ಈಗ ಬೋರ್ವೆಲ್ ಇದೆಯೆಂದು ಸಂಜಯ್ ಹೇಳುತ್ತಾರೆ. ಇದು ಹೆಚ್ಚಿನ ಪ್ರಮಾಣದ ಅಂತರ್ಜಲವನ್ನು ಹೊರಹಾಕುತ್ತದೆ. "ಇಪ್ಪತ್ತು ವರ್ಷಗಳ ಹಿಂದೆ ಉಚ್ಗಾಂವ್ ಗ್ರಾಮದಲ್ಲಿ 15-20 ಕೊಳವೆಬಾವಿಗಳಿದ್ದವು. ಇಂದು 700-800 ಕೊಳವೆಬಾವಿಗಳಿವೆ" ಎಂದು ಉಚಗಾಂವ್‌ನ ಮಾಜಿ ಉಪ ಸರಪಂಚ್ ಮಧುಕರ್ ಚವಾಣ್ ಹೇಳುತ್ತಾರೆ.
“ಉಚ್ಗಾಂವ್ ಗ್ರಾಮದ ದೈನಂದಿನ ನೀರಿನ ಬೇಡಿಕೆ 25ರಿಂದ 30 ಲಕ್ಷ ಲೀಟರ್. ಆದರೆ "[...] ಹಳ್ಳಿಯಲ್ಲಿ ದಿನ ಬಿಟ್ಟು ದಿನ 10-12 ಲಕ್ಷ ಲೀಟರಿನಷ್ಟು ಮಾತ್ರವೇ ನೀರು ಲಭ್ಯವಿರಬಹದು” ಈ ಪರಿಸ್ಥಿತಿಯು ಗ್ರಾಮದಲ್ಲಿ ಭಾರಿ ನೀರಿನ ಬಿಕ್ಕಟ್ಟನ್ನು ಉಂಟುಮಾಡಲು ಸಜ್ಜಾಗಿದೆ ಎಂದು ಅವರು ಹೇಳುತ್ತಾರೆ.
ಈ ಕಿರುಚಿತ್ರವು ಕೊಲ್ಹಾಪುರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡುತ್ತದೆ.
ಅನುವಾದಕರು: ಶಂಕರ ಎನ್ ಕೆಂಚನೂರು