ಮೊಹಲ್ಲಾದ ಮತ್ತೊಂದು ಭಾಗದಲ್ಲಿ, ಹಳೆಯ ಸ್ಪೀಕರ್‌ನಿಂದ ಹೊರಹೊಮ್ಮುತ್ತಿದ್ದ ಪಂಜಾಬಿ ತಾಳದ ಲಯವು ಚರಪರಗುಟ್ಟುವ ಬೆಂಕಿ ಹಾಗೂ ಕುಂಬಾರರ ಚಕ್ರದ ತಿರುಗುವ ಸದ್ದನ್ನು ಅಡಗಿಸುತ್ತಿತ್ತು.
ದೆಶ್‌ರಾಜ್, ನಗುತ್ತಾ, “ನಾವು ಕೆಲಸ ಮಾಡುವಾಗ ನನ್ನ ಪುತ್ರರು ಏನನ್ನಾದರೂ ಆಲಿಸುವುದನ್ನು ಇಷ್ಟಪಡುತ್ತಾರೆ” ಎಂದರು. ಕಳೆದ 40 ವರ್ಷಗಳಿಂದಲೂ, ಜೇಡಿಮಣ್ಣಿನ ಅತ್ಯುತ್ತಮ ಕಲಾಕೃತಿಗಳ ಸೃಜನೆಯು ದೆಶ್‌ರಾಜ್‌ರವರ ಕೆಲಸವಾಗಿದೆ. ಏಕತಾನತೆಯ ದಿನಗಳಲ್ಲಿ ಸಂಗೀತವು ಸ್ವಲ್ಪಮಟ್ಟಿನ ಉತ್ತೇಜನವನ್ನು ನೀಡುತ್ತದೆ ಎನ್ನುತ್ತಾರವರು.
ಒಂದರ ನಂತರ ಮತ್ತೊಂದರಂತೆ ಮಡಕೆಗಳನ್ನು ಮಾಡಲು ಜೇಡಿಮಣ್ಣಿಗೆ ಆಕಾರವನ್ನು ನೀಡುತ್ತ, ಈ ನುರಿತ ಕುಶಲಕರ್ಮಿಯು ತಮ್ಮ ಬಳಲಿದ, ನಿಪುಣ ಬೆರಳುಗಳನ್ನು ತಿರುಗುವ ಚಕ್ರದ ಮೇಲೆ ಕ್ರಮಬದ್ಧವಾಗಿ ಚಲಿಸುತ್ತಾರೆ. ಪ್ರತಿಯೊಂದು ಮಡಕೆಯು ಪೂರ್ಣಗೊಂಡ ನಂತರ, ಭಾಗಶಃ ನಿರ್ಮಿಸಲಾದ ತಮ್ಮ ಮನೆಯ ಮಾಳಿಗೆಯ ಮೇಲೆ ಅದನ್ನು ಅವರು ನಲವತ್ತು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸುತ್ತಾರೆ.
ಏತನ್ಮಧ್ಯೆ, ಹಿಂದಿನ ರಾತ್ರಿಯ ಮಡಕೆಗಳನ್ನು ಸುಡಲು ವ್ಯವಸ್ಥೆಗೊಳಿಸಿದ್ದ ಕುಲುಮೆಯಿಂದ ಹೊಗೆಯ ದೊಡ್ಡ ಅಲೆಯೆದ್ದಿತು. ಹೊಗೆಯ ಕಾರ್ಮೋಡವು ಅವರ ಮನೆಯ ತುಂಬ ಆವರಿಸಿತಾದರೂ ಆ ಮಧ್ಯಾಹ್ನ ಮನೆಯಲ್ಲಿದ್ದ ಕುಟುಂಬದ ಸದಸ್ಯರಿಗೆ (ಇಬ್ಬರು ಪುತ್ರರು, ಪುತ್ರರೊಬ್ಬರ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು) ಹೊಗೆಯ ಅತಿಕ್ರಮಣದಿಂದ ಅಡಚಣೆ ಮತ್ತು ತೊಂದರೆಯಾದಂತೆ ಕಾಣಲಿಲ್ಲ. ಅವರು ಎಂದಿನ ತಮ್ಮ ಮಾಮೂಲಿ ಕೆಲಸಗಳನ್ನು ಮುಂದುವರಿಸಿದರು.
“ಮಡಕೆ, ಲೋಟ, ದೀಪ, ತಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ನಾನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬಲ್ಲೆ. ಈ ದಿನಗಳಲ್ಲಿ ನಾನು ಪೂಜೆಯಲ್ಲಿ ಬಳಸುವ ಚಿಕ್ಕ ಕುಡಿಕೆಗಳನ್ನು ತಯಾರಿಸುತ್ತಿದ್ದೇನೆ. ಅವನ್ನು ಛತ್ ಪೂಜಾದಲ್ಲಿ ಉಪಯೋಗಿಸುತ್ತಾರೆ” ಎಂದರವರು. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಆಚರಿಸುವ ಹಿಂದೂಗಳ ಹಬ್ಬ, ಛತ್ ಪೂಜಾದಲ್ಲಿ ಸೂರ್ಯ ದೇವನನ್ನು ಆರಾಧಿಸಲಾಗುತ್ತದೆ.
“ನಾನು ದಿನವೊಂದಕ್ಕೆ ಸುಮಾರು ಒಂದು ಸಾವಿರದಿಂದ ಸಾವಿರದ ಇನ್ನೂರು ಸಾಮಗ್ರಿಗಳನ್ನು ತಯಾರಿಸಿ, ಅವನ್ನು ಒಂದು ಡಜ಼ನ್ನಿಗೆ ಹದಿನೈದು ರೂ.ಗಳಂತೆ ಮಾರುತ್ತೇನೆ. ಖರೀದಿದಾರರು ಚೌಕಾಸಿ ಮಾಡಿದರೆ ಡಜ಼ನ್ನಿಗೆ ಹತ್ತು ರೂ.ಗಳಂತೆ ಸಹ ಮಾರುತ್ತೇವೆ” ಎಂದು ಅವರು ತಿಳಿಸಿದರು.