ಮಹಾರಾಷ್ಟ್ರದ ಮರಾಠಾವಾಡಾ ಪ್ರದೇಶದಲ್ಲಿ ಕೆಲವು ತಿಂಗಳುಗಳ ಸೆಖೆಯ ನಂತರ ಆಗಷ್ಟೇ ಚಳಿಗಾಲ ಕಾಲಿಡುತ್ತಿತ್ತು. ದಾಮಿನಿ (ಹೆಸರು ಬದಲಾಯಿಸಲಾಗಿದೆ) ರಾತ್ರಿ ಪಾಳಿಯ ಕೆಲಸಕ್ಕೆ ತಯಾರಾಗುತ್ತ ಆ ದಿನದ ಕುಳಿರ್ಗಾಳಿಯನ್ನು ಆನಂದಿಸುತ್ತಿದ್ದರು. “ಆ ದಿನ ನಾನು ನಾನು ಪಿಎಸ್ಒ [ಪೊಲೀಸ್ ಸ್ಟೇಷನ್ ಆಫೀಸರ್] ಕರ್ತವ್ಯದಲ್ಲಿದ್ದೆ ಮತ್ತು ಶಸ್ತ್ರಾಸ್ತ್ರಗಳು ಮತ್ತು ವಾಕಿ-ಟಾಕಿಗಳನ್ನು ವಿತರಿಸುವ ಉಸ್ತುವಾರಿಯನ್ನು ನನಗೆ ವಹಿಸಲಾಗಿತ್ತು” ಎಂದು ಅವರು ಹೇಳುತ್ತಾರೆ.
ಕೆಲಸಕ್ಕೆ ಹೋದ ನಂತರ ಸ್ಟೇಷನ್ ಹೌಸ್ ಆಫೀಸರ್ ಅಲಿಯಾಸ್ ಪೊಲೀಸ್ ಇನ್ಸ್ಪೆಕ್ಟರ್ (ಎಸ್ಎಚ್ಒ / ಪಿಐ) ತನ್ನ ವಾಕಿ-ಟಾಕಿಗಾಗಿ ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಪೊಲೀಸ್ ಠಾಣೆಯಿಂದ ನಿಲ್ದಾಣದ ಆವರಣದಲ್ಲಿರುವ ತನ್ನ ಅಧಿಕೃತ ಮನೆಗೆ ತರಲು ಹೇಳಿದರು. ಅದು ಮಧ್ಯರಾತ್ರಿಯ ನಂತರ, ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದರೂ ಅಂತಹ ಕೆಲಸಗಳಿಗೆ ದಾಮಿನಿಯವರನ್ನು ಮನೆಯ ಬಳಿಗೆ ಕರೆಯುವುದು ಮಾಮೂಲಿಯಾಗಿತ್ತು. “ಅಧಿಕಾರಿಗಳು ಆಗಾಗ ಉಪಕರಣಗಳನ್ನು ಮನೆಗೆ ಕೊಂಡೊಯ್ಯುವುದು ಇರುತ್ತದೆ… ನಮಗೂ ಮೇಲಧಿಕಾರಿಗಳ ಆದೇಶಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿರುತ್ತದೆ” ಎಂದು ದಾಮಿನಿ ವಿವರಿಸುತ್ತಾರೆ.
ಹೀಗೆ ರಾತ್ರಿ ಸುಮಾರು 1:30ರ ಹೊತ್ತಿಗೆ ದಾಮಿನಿ ಪಿಎಸ್‌ಐ ಮನೆಯತ್ತ ನಡೆದರು.
ಅಲ್ಲಿ ಮೂವರು ಪುರುಷರು ಒಳಗೆ ಕುಳಿತಿದ್ದರು: ಪಿಐ, ಸಾಮಾಜಿಕ ಕಾರ್ಯಕರ್ತ ಮತ್ತು ಠಾಣೆ ಕರಮ್‌ಚಾರಿ (ಸಣ್ಣ ಅರೆ-ಅಧಿಕೃತ ಕಾರ್ಯಗಳಿಗಾಗಿ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡ ನಾಗರಿಕ ಸ್ವಯಂಸೇವಕ). "ನಾನು ಅವರುಗಳನ್ನು ನಿರ್ಲಕ್ಷಿಸಿ ವಾಕಿ ಟಾಕಿಯ ಬ್ಯಾಟರಿಗಳನ್ನು ಬದಲಾಯಿಸಲು ಕೋಣೆಯ ಮೇಜಿನ ಕಡೆಗೆ ತಿರುಗಿದೆ" ಎಂದು ಅವರು ನವೆಂಬರ್ 2017ರ ಆ ರಾತ್ರಿಯನ್ನು ನೆನಪಿಸಿಕೊಂಡು ಆತಂಕದಿಂದ ಹೇಳುತ್ತಾರೆ. ತಿರುಗಿ ನೋಡುವಾಗ ಬಾಗಿಲು ಚಿಲಕ ಹಾಕಿದ ಸದ್ದು ಕೇಳಿತು. ”ನಾನು ಕೋಣೆಯಿಂದ ಹೊರಗೆ ಹೋಗಲು ಬಯಸಿದ್ದೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದ್ದೆ. ಆದರೆ ಇಬ್ಬರು ಗಂಡಸರು ನನ್ನ ಕೈಗಳನ್ನು ಬಿಗಿಯಾಗಿ ಹಿಡಿದು ಹಾಸಿಗೆಯ ಮೇಲೆ ಎಸೆದರು. ನಂತರ… ಒಬ್ಬೊಬ್ಬರಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದರು.”
ಮುಂಜಾನೆ 2:30ರ ಸುಮಾರಿಗೆ, ದಾಮಿನಿ ಕಣ್ಣೀರು ತುಂಬಿಕೊಂಡು ಮನೆಯಿಂದ ಹೊರಬಂದು, ತನ್ನ ಬೈಕ್ ಹತ್ತಿ ಮನೆಗೆ ಹೊರಟರು. "ನನ್ನ ಮನಸ್ಸು ಸ್ತಬ್ಧವಾಗಿತ್ತು. ನಾನು ಯೋಚಿಸುತ್ತಲೇ ಇದ್ದೆ... ನನ್ನ ವೃತ್ತಿಜೀವನ ಮತ್ತು ಸಾಧಿಸಲು ಬಯಸಿದ್ದರ ಕುರಿತು. ಆದರೆ ಈಗ…?" ಎಂದು ಅವರು ಹೇಳುತ್ತಾರೆ.
*****
ದಾಮಿನಿ ಬಾಲ್ಯದಲ್ಲಿ ತನಗೆ ನೆನಪಿರುವ ಕಾಲದಿಂದಲೂ ಹಿರಿಯ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಅವರ ಮೂರು ಪದವಿಗಳು – ಇಂಗ್ಲಿಷ್ ವಿಷಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಎಜುಕೇಶನ್ ಮತ್ತು ಬ್ಯಾಚುಲರ್ ಆಫ್ ಲಾ - ಅವರ ಮಹತ್ವಾಕಾಂಕ್ಷೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. “ನಾನು ಸದಾ ಟಾಪ್ ವಿದ್ಯಾರ್ಥಿಯಾಗಿದ್ದೆ… ನಾನು ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಕಾನ್ಸ್ಟೇಬಲ್ ಆಗಿ ಸೇರಲು ಮತ್ತು ನಂತರ ಪೊಲೀಸ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಲು ಯೋಚಿಸಿದ್ದೆ" ಎಂದು ಅವರು ಹೇಳುತ್ತಾರೆ.
ದಾಮಿನಿ 2007ರಲ್ಲಿ ಪೊಲೀಸ್ ಇಲಾಖೆಗೆ ಸೇರಿದರು. ಮೊದಲ ಕೆಲವು ವರ್ಷಗಳ ಕಾಲ, ಅವರು ಸಂಚಾರ ಇಲಾಖೆಯಲ್ಲಿ ಮತ್ತು ಮರಾಠಾವಾಡಾದ ಪೊಲೀಸ್ ಠಾಣೆಗಳಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡಿದರು. "ನಾನು ಉನ್ನತ ಸ್ಥಾನವನ್ನು ಪಡೆಯಲು, ಪ್ರತಿ ಪ್ರಕರಣದಲ್ಲೂ ನನ್ನ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದ್ದೆ" ಎಂದು ದಾಮಿನಿ ನೆನಪಿಸಿಕೊಳ್ಳುತ್ತಾರೆ. ಆದರೂ, ಅವರ ಕಠಿಣ ಪರಿಶ್ರಮದ ಹೊರತಾಗಿಯೂ, ಪುರುಷ ಪ್ರಾಬಲ್ಯದ ಪೊಲೀಸ್ ಠಾಣೆಗಳಲ್ಲಿ ಆಗುತ್ತಿದ್ದ ಅನುಭವಗಳು ನೈತಿಕ ಸ್ಥೈರ್ಯವನ್ನು ಕುಂದಿಸುತ್ತಿದ್ದವು.
"ಪುರುಷ ಸಹೋದ್ಯೋಗಿಗಳು ಆಗಾಗ್ಗೆ ಪರೋಕ್ಷವಾಗಿ ನಿಂದಿಸುತ್ತಿದ್ದರು. ವಿಶೇಷವಾಗಿ ಜಾತಿ ಮತ್ತು ಲಿಂಗದ ಆಧಾರದ ಮೇಲೆ" ಎಂದು ದಲಿತ ಸಮುದಾಯಕ್ಕೆ ಸೇರಿದ ದಾಮಿನಿ ಹೇಳುತ್ತಾರೆ. "ಒಮ್ಮೆ ಉದ್ಯೋಗಿಯೊಬ್ಬರು ನನಗೆ ಹೇಳಿದರು, 'ತುಮ್ಹಿ ಜಾರ್ ಸಾಹೇಬ್ ಬಂಚಾ ಮರ್ಜಿಪ್ರಮನೆ ರಹಲ್ಯಾತ್ ತರ್ ತುಮ್ಹಾಲಾ ಕರ್ತವ್ಯ ವಗರೆ ಕಮಿ ಲಾಗೆಲ್. ಪೈಸೆ ಪಾನ್ ದಿಯು ತುಮ್ಹಾಲಾ' (ನೀನು ಸರ್ ಹೇಳಿದಂತೆ ಕೇಳಿದರೆ ನಿನಗೆ ಕಡಿಮೆ ಕೆಲಸ ಕೊಡುತ್ತಾರೆ ಜೊತೆಗೆ ಒಳ್ಳೆಯ ಸಂಬಳವೂ ಸಿಗುತ್ತದೆ). ಆ ಉದ್ಯೋಗಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಠಾಣೆ ಕರಮ್ಚಾರಿ. ಅವನು ಠಾಣೆಯಲ್ಲಿ ಅರೆ-ಅಧಿಕೃತ ಕಾರ್ಯಗಳನ್ನು ಮಾಡುವುದರ ಜೊತೆಗೆ, ಪೊಲೀಸರ ಪರವಾಗಿ ವ್ಯವಹಾರಗಳಿಂದ 'ವಸೂಲಿ' (ಕಾನೂನು ಕ್ರಮ ಅಥವಾ ಕಿರುಕುಳದ ಬೆದರಿಕೆ ಹಾಕಿ ಅಕ್ರಮವಾಗಿ ಹಣ ಪಡೆಯುವುದು) ಸಂಗ್ರಹಿಸುವುದು ಮತ್ತು ಲೈಂಗಿಕ ಕಾರ್ಯಕರ್ತೆಯರು ಮತ್ತು ಮಹಿಳಾ ಕಾನ್ಸ್ಟೇಬಲ್ಲುಗಳನ್ನು ಪಿಐ ಯ ಮನೆಗೆ, ಅಥವಾ ಲಾಡ್ಜಿಗೆ ಕರೆ ತರುವ ಕೆಲಸವನ್ನು ಮಾಡುತ್ತಿದ್ದ” ಎಂದು ದಾಮಿನಿ ಹೇಳುತ್ತಾರೆ.
“ನಾವು "ನಾವು ದೂರು ನೀಡಲು ಬಯಸಿದರೂ, ನಮ್ಮ ಮೇಲಧಿಕಾರಿಗಳು ಸಾಮಾನ್ಯವಾಗಿ ಪುರುಷರಾಗಿರುತ್ತಾರೆ. ಅವರು ನಮ್ಮನ್ನು ನಿರ್ಲಕ್ಷಿಸುತ್ತಾರೆ" ಎಂದು ದಾಮಿನಿ ಹೇಳುತ್ತಾರೆ. ಮಹಿಳಾ ಪೊಲೀಸ್ ಮೇಲಧಿಕಾರಿಗಳು ಸಹ ಸ್ತ್ರೀದ್ವೇಷ ಮತ್ತು ಕಿರುಕುಳದಂತಹ ವಿಷಯಗಳಿಗೆ ಅಪರಿಚಿತರಲ್ಲ. ಮಹಾರಾಷ್ಟ್ರದ ಮೊದಲ ಮಹಿಳಾ ಆಯುಕ್ತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಮೀರಾನ್ ಚಡ್ಡಾ ಬೋರ್ವಾಂಕರ್, ಭಾರತದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕೆಲಸದ ವಾತಾವರಣವು ಯಾವಾಗಲೂ ಸುರಕ್ಷಿತವಾಗಿರಲಿಲ್ಲ ಎಂದು ಹೇಳುತ್ತಾರೆ. "ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎನ್ನುವುದು ವಾಸ್ತವ. ಪೊಲೀಸ್ ಕಾನ್ಸ್ಟೇಬಲ್ ಮಟ್ಟದಲ್ಲಿ ಮಹಿಳೆಯರು ಇದನ್ನು ಹೆಚ್ಚು ಎದುರಿಸುತ್ತಾರೆ, ಆದರೆ ಹಿರಿಯ ಮಹಿಳಾ ಅಧಿಕಾರಿಗಳನ್ನು ಸಹ ಬಿಡುವುದಿಲ್ಲ. ನಾನು ಕೂಡ ಅದನ್ನು ಎದುರಿಸಿದ್ದೇನೆ" ಎಂದು ಅವರು ಹೇಳುತ್ತಾರೆ.
2013ರಲ್ಲಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆಯನ್ನು ಜಾರಿಗೆ ತರಲಾಯಿತು, ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಉದ್ಯೋಗದಾತರ ಕರ್ತವ್ಯ. "ಪೊಲೀಸ್ ಠಾಣೆಗಳು ಈ ಕಾಯ್ದೆಯಡಿ ಬರುತ್ತವೆ ಮತ್ತು ಅವು ಅದರ ನಿಬಂಧನೆಗಳಿಗೆ ಬದ್ಧವಾಗಿರಬೇಕು. ಎಸ್ಎಚ್ಒ ಅಥವಾ ಪಿಐ ಇಲ್ಲಿ 'ಉದ್ಯೋಗದಾತ' ಎನ್ನಿಸಿಕೊಳ್ಳುತ್ತಾರೆ ಮತ್ತು ಕಾಯ್ದೆಯ ಅನುಪಾಲನೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನೂ ಅವರು ಹೊಂದಿರುತ್ತಾರೆ "ಎಂದು ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯ ವಕೀಲರಾದ ಪೂರ್ಣ ರವಿಶಂಕರ್ ಒತ್ತಿ ಹೇಳುತ್ತಾರೆ. ದಾಮಿನಿಯ ಪ್ರಕರಣದಂತೆ ಪಿಐ ವಿರುದ್ಧವೂ ಸೇರಿದಂತೆ ಕೆಲಸದ ಸ್ಥಳದಲ್ಲಿನ ಕಿರುಕುಳ ದೂರುಗಳನ್ನು ನಿರ್ವಹಿಸಲು ಆಂತರಿಕ ದೂರು ಸಮಿತಿಗಳನ್ನು (ಐಸಿಸಿ) ರಚಿಸುವುದನ್ನು ಕಾಯ್ದೆ ಕಡ್ಡಾಯಗೊಳಿಸುತ್ತದೆ. ಆದರೆ ಡಾ. ಬೋರ್ವಾಂಕರ್ ವಾಸ್ತವ ಬೇರೆಯದೇ ಇದೆ ಎನ್ನುತ್ತಾರೆ: "ಐಸಿಸಿಗಳು ಸಾಮಾನ್ಯವಾಗಿ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿವೆ."
ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ನ ಲೋಕನೀತಿ-ಪ್ರೋಗ್ರಾಂ ಫಾರ್ ಕಂಪೇರೇಟಿವ್ ಡೆಮಾಕ್ರಸಿ ನಡೆಸಿದ 2019ರ ʼ ಸ್ಟೇಟಸ್ ಆಫ್ ಪೊಲೀಸಿಂಗ್ ಇನ್ ಇಂಡಿಯಾ ʼ ಸಮೀಕ್ಷೆಯಲ್ಲಿ ಮಹಾರಾಷ್ಟ್ರ ಸೇರಿದಂತೆ 21 ರಾಜ್ಯಗಳ 105 ಸ್ಥಳಗಳಲ್ಲಿ 11,834 ಪೊಲೀಸ್ ಸಿಬ್ಬಂದಿಯನ್ನು ಸಂದರ್ಶಿಸಲಾಗಿದೆ. ಸುಮಾರು ನಾಲ್ಕನೇ ಒಂದು ಭಾಗದಷ್ಟು (24 ಶೇಕಡಾ) ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಕೆಲಸದ ಸ್ಥಳ ಅಥವಾ ನ್ಯಾಯವ್ಯಾಪ್ತಿಯಲ್ಲಿ ಈ ಸಮಿತಿಗಳ ಅನುಪಸ್ಥಿತಿಯನ್ನು ವರದಿ ಮಾಡಿದ್ದಾರೆ ಎಂದು ಅದು ಬಹಿರಂಗಪಡಿಸಿದೆ. ಇದೇ ಕಾರಣದಿಂದಾಗಿ, ಮಹಿಳಾ ಪೊಲೀಸ್ ಸಿಬ್ಬಂದಿ ಎದುರಿಸುತ್ತಿರುವ ಕಿರುಕುಳದ ಪ್ರಮಾಣವನ್ನು ಪ್ರಮಾಣೀಕರಿಸುವುದು ಸವಾಲಾಗಿ ಉಳಿದಿದೆ.
"ಈ ಕಾಯ್ದೆಯ ಬಗ್ಗೆ ನಮಗೆ ಎಂದೂ ಮಾಹಿತಿ ನೀಡಿಲ್ಲ. ಯಾವುದೇ ಸಮಿತಿಯೂ ಇರಲಿಲ್ಲ" ಎಂದು ದಾಮಿನಿ ಸ್ಪಷ್ಟಪಡಿಸುತ್ತಾರೆ.
2014ರಿಂದ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಕೆಲಸದ ಸ್ಥಳಗಳು ಅಥವಾ ಕಚೇರಿ ಪರಿಸರದಲ್ಲಿ ಸಂಭವಿಸುವ ಲೈಂಗಿಕ ಕಿರುಕುಳದ ಘಟನೆಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸುತ್ತಿದೆ, ಇದನ್ನು 'ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ' (ಇದೀಗ ನಿಷ್ಕ್ರಿಯಗೊಂಡಿರುವ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 354 , ಹೊಸ ಭಾರತೀಯ ನ್ಯಾಯ ಸಂಹಿತಾ ಅಥವಾ ಬಿಎನ್ಎಸ್ ಸೆಕ್ಷನ್ 74 ಕ್ಕೆ ಅನುಗುಣವಾಗಿ) ವಿಭಾಗದಲ್ಲಿ ವರ್ಗೀಕರಿಸಲಾಗಿದೆ. 2022ರಲ್ಲಿ, ಎನ್‌ಸಿಆರ್‌ಬಿ ಭಾರತದಾದ್ಯಂತ ಈ ವಿಭಾಗದಲ್ಲಿ ಕನಿಷ್ಠ 422 ಸಂತ್ರಸ್ತರನ್ನು ದಾಖಲಿಸಿದೆ, ಇದರಲ್ಲಿ ಮಹಾರಾಷ್ಟ್ರದ 46 ಮಂದಿ ಸೇರಿದ್ದಾರೆ. ಇದು ಕೂಡಾ ಪರಿಪೂರ್ಣ ಅಂಕಿ-ಅಂಶವಲ್ಲ.
*****
ನವೆಂಬರ್ 2017ರ ರಾತ್ರಿ ದಾಮಿನಿ ಮನೆಗೆ ತಲುಪಿದಾಗ, ಅವರ ಮನಸ್ಸು ಪ್ರಶ್ನೆಗಳು, ಈ ಕುರಿತಾಗಿ ಮಾತನಾಡುವುದರಿಂದ ಉಂಟಾಗಬಹುದಾದ ಪರಿಣಾಮಗಳು ಮತ್ತು ಪ್ರತಿದಿನ ಕೆಲಸದಲ್ಲಿ ತನ್ನ ಅತ್ಯಾಚಾರಿಗಳ ಮುಖಗಳನ್ನು ನೋಡುವ ಭಯದಿಂದ ಗಿಜಿಗುಡುತ್ತಿತ್ತು. "[ಅತ್ಯಾಚಾರ] ನನ್ನ ಹಿರಿಯರ ಕೆಟ್ಟ ನಡವಳಿಕೆಗಳನ್ನು ಪರಿಪಾಲಿಸದೆ ಇದ್ದುದರ ಪರಿಣಾಮವೇ ಎಂದು ಯೋಚಿಸುತ್ತಲೇ ಇದ್ದೆ... ನಾನು ಮುಂದೆ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತಿತ್ತು" ಎಂದು ದಾಮಿನಿ ನೆನಪಿಸಿಕೊಳ್ಳುತ್ತಾರೆ. ನಾಲ್ಕೈದು ದಿನಗಳ ನಂತರ, ದಾಮಿನಿ ಕೆಲಸಕ್ಕೆ ಹೋಗಲು ಧೈರ್ಯ ಮಾಡಿದರು, ಆದರೆ ಅವರು ಘಟನೆಯ ಕುರಿತಾಗಿ ಏನನ್ನೂ ಹೇಳದಿರಲು ಅಥವಾ ಮಾಡದಿರಲು ನಿರ್ಧರಿಸಿದರು. "ನಾನು ತುಂಬಾ ನೋವು ಮತ್ತು ಗೊಂದಲದಲ್ಲಿದ್ದೆ. ಈ ಕುರಿತಾಗಿ ತೆಗೆದುಕೊಳ್ಳಬೇಕಾದ [ಸಮಯ-ಸೂಕ್ಷ್ಮ ವೈದ್ಯಕೀಯ ಪರೀಕ್ಷೆಯಂತಹ] ಕ್ರಮಗಳೆಲ್ಲವೂ ನನಗೆ ತಿಳಿದಿತ್ತು ಆದರೆ... ನನಗೆ ಗೊತ್ತಿಲ್ಲ," ದಾಮಿನಿ ಮುಂದೆ ಮಾತನಾಡಲು ಹಿಂಜರಿದರು.
ಆದರೆ ಒಂದು ವಾರದ ನಂತರ, ಅವರು ಮರಾಠಾವಾಡಾದ ಒಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್ಪಿ) ಭೇಟಿಯಾಗಿ ಲಿಖಿತ ದೂರನ್ನು ನೀಡಿದರು. ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಎಸ್ಪಿ ದಾಮಿನಿಯವರಿಗೆ ಸೂಚಿಸಲಿಲ್ಲ. ಬದಲಿಗೆ ಅವರು ಯಾವುದು ನಡೆಯಬಹುದೆಂದು ಹೆದರುತ್ತಿದ್ದರೋ ಅದೇ ನಡೆಯಿತು. "ಎಸ್ಪಿ ದಾಮಿನಿ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಯಿಂದ ಸೇವಾ ದಾಖಲೆಯನ್ನು ತರುವಂತೆ ಹೇಳಿದರು. ಆರೋಪಿ ಪಿಐ ಅದರಲ್ಲಿ ನನ್ನ ನಡವಳಿಕೆ ಉತ್ತಮವಾಗಿಲ್ಲ ಮತ್ತು ಕೆಲಸದಲ್ಲಿ ಅಸಭ್ಯ ವರ್ತನೆ ತೋರಿಸುತ್ತಿದ್ದೆ ಎಂದು ಉಲ್ಲೇಖಿಸಿದ್ದರು" ಎಂದು ದಾಮಿನಿ ಹೇಳುತ್ತಾರೆ.
ಕೆಲವು ದಿನಗಳ ನಂತರ ದಾಮಿನಿ ಎಸ್ಪಿಗೆ ಎರಡನೇ ದೂರು ಪತ್ರವನ್ನು ಬರೆದರು ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. "ನಾನು ಉನ್ನತ ಅಧಿಕಾರಿಗಳನ್ನು ಭೇಟಿಯಾಗಲು ಪ್ರಯತ್ನಿಸದ ದಿನವೇ ಇರಲಿಲ್ಲ. ಅದೇ ಸಮಯದಲ್ಲಿ, ನಾನು ನನಗೆ ನಿಗದಿಪಡಿಸಿದ ಕರ್ತವ್ಯವನ್ನು ಸಹ ನಿರ್ವಹಿಸುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಈ ನಡುವೆ ಅತ್ಯಾಚಾರದಿಂದ ನಾನು ಗರ್ಭಿಣಿಯಾಗಿರುವುದು ನನಗೆ ತಿಳಿದುಬಂತು."
ಮುಂದಿನ ತಿಂಗಳು, ಅವರು ಮತ್ತೊಂದು ನಾಲ್ಕು ಪುಟಗಳ ದೂರು ಪತ್ರವನ್ನು ಬರೆದರು, ಅದನ್ನು ಅವರು ಪೋಸ್ಟ್ ಮತ್ತು ವಾಟ್ಸಾಪ್ ಮೂಲಕ ಎಸ್ಪಿಗೆ ಕಳುಹಿಸಿದರು. ಅತ್ಯಾಚಾರ ನಡೆದ ಎರಡು ತಿಂಗಳ ನಂತರ 2018ರ ಜನವರಿಯಲ್ಲಿ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿತ್ತು. "ಮಹಿಳಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಚಾರಣೆಯ ಉಸ್ತುವಾರಿ ವಹಿಸಿದ್ದರು. ನಾನು ನನ್ನ ಗರ್ಭಧಾರಣೆಯ ರಿಪೋರ್ಟುಗಳನ್ನು ಅವರಿಗೆ ಸಲ್ಲಿಸಿದರೂ, ಅವರು ಅದನ್ನು ತನ್ನ ತನಿಖಾ ವರದಿಯೊಂದಿಗೆ ಸೇರಿಸಿರಲಿಲ್ಲ. ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಎಎಸ್ಪಿ ತೀರ್ಮಾನಿಸಿದರು ಮತ್ತು ಹೆಚ್ಚಿನ ವಿಚಾರಣೆ ಬಾಕಿ ಇರುವಾಗ ಜೂನ್ 2019ರಲ್ಲಿ ನನ್ನನ್ನು ಅಮಾನತುಗೊಳಿಸಲಾಯಿತು" ಎಂದು ದಾಮಿನಿ ಹೇಳುತ್ತಾರೆ.
'ನಾವು ದೂರು ನೀಡಲು ಮುಂದಾದರೂ, ನಮ್ಮ ಮೇಲಧಿಕಾರಿಗಳು ಸಾಮಾನ್ಯವಾಗಿ ಗಂಡಸರಾಗಿರುತ್ತಾರೆ. ಅವರು ನಮ್ಮನ್ನು ನಿರ್ಲಕ್ಷಿಸುತ್ತಾರೆ' ಎಂದು ದಾಮಿನಿ ಹೇಳುತ್ತಾರೆ. ಮಹಿಳಾ ಪೊಲೀಸ್ ಮೇಲಧಿಕಾರಿಗಳು ಸಹ ಸ್ತ್ರೀದ್ವೇಷ ಮತ್ತು ಕಿರುಕುಳದಂತಹ ವಿಷಯಗಳಿಗೆ ಅಪರಿಚಿತರಲ್ಲ
ಇದೆಲ್ಲ ನಡೆಯುತ್ತಿರುವಾಗಲೂ ದಾಮಿನಿಯವರಿಗೆ ಕುಟುಂಬದ ಬೆಂಬಲ ದೊರಕಿರಲಿಲ್ಲ. ಅವರು ತಮ್ಮ ಗಂಡನಿಂದ 2016ರಲ್ಲಿ ಬೇರೆಯಾಗಿದ್ದರು. ನಾಲ್ಕು ಹೆಣ್ಣು ಮತ್ತು ಒಂದು ಗಂಡಿರುವ ಕುಟುಂಬದಲ್ಲಿ ಹಿರಿಯರಾಗಿ, ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ತನ್ನ ತಂದೆ ಮತ್ತು ಗೃಹಿಣಿ ತಾಯಿ ತನ್ನೊಂದಿಗೆ ನಿಲ್ಲುತ್ತಾರೆ ಎಂದು ಅವರು ಭಾವಿಸಿದ್ದರು. "ಆದರೆ ಆರೋಪಿಗಳಲ್ಲಿ ಒಬ್ಬ ನನ್ನ ತಂದೆಯನ್ನು ಪ್ರಚೋದಿಸಿದ... ನಾನು ನಿಲ್ದಾಣದಲ್ಲಿ ಲೈಂಗಿಕ ಚಟುವಟಿಕೆಗಳನ್ನು ಮಾಡುತ್ತೇನೆ ಎಂದು ಅವರಿಗೆ ಹೇಳಿದರು... ನಾನು 'ಫಾಲ್ತು' (ನಿಷ್ಪ್ರಯೋಜಕ)... ನಾನು ಅವರ ವಿರುದ್ಧ ದೂರುಗಳನ್ನು ದಾಖಲಿಸಬಾರದು ಮತ್ತು ಈ ಗೊಂದಲದಲ್ಲಿ ಸಿಲುಕದಂತೆ ನೋಡಿಕೊಳ್ಳಿ ಎಂದು ಹೇಳಿಕೊಟ್ಟಿದ್ದರು" ಎಂದು ಅವರು ಹೇಳುತ್ತಾರೆ. ಇದರ ನಂತರ ದಾಮಿನಿಯ ತಂದೆ ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಇದರಿಂದಾಗಿ ಅವರಿಗೆ ಮತ್ತಷ್ಟು ಆಘಾತವಾಯಿತು. “ನನಗೆ ಅದನ್ನು ಅರಗಿಸಿಕೊಳ್ಳಲು ಕಷ್ಟವಾಯಿತು. ಆದರೆ ನಾನು ಅದನ್ನು ನಿರ್ಲಕ್ಷಿಸಲು ನಿರ್ಧರಿಸಿದೆ. ಮತ್ತೇನು ಮಾಡಲು ಸಾಧ್ಯ?”
ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೆಂಬಂತೆ, ದಾಮಿನಿಗೆ ತಾನು ನಿರಂತರ ಕಣ್ಗಾವಲಿನಲ್ಲಿದ್ದೇನೆ ಎನ್ನುವ ಭಾವನೆ ಮೂಡತೊಡಗಿತು. "ಆರೋಪಿಗಳು, ವಿಶೇಷವಾಗಿ ಕರ್ಮಚಾರಿಗಳು ನನ್ನನ್ನು ಎಲ್ಲೆಡೆ ಹಿಂಬಾಲಿಸುತ್ತಿದ್ದರು. ನಾನು ಯಾವಾಗಲೂ ಜಾಗರೂಕಳಾಗಿರುತ್ತಿದ್ದೆ. ನಿದ್ರೆ ಮಾಡುತ್ತಿರಲಿಲ್ಲ, ಸರಿಯಾಗಿ ತಿನ್ನುತ್ತಿರಲಿಲ್ಲ. ನನ್ನ ಮನಸ್ಸು ಮತ್ತು ದೇಹ ದಣಿದಿತ್ತು."
ಅದೇನೇ ಇದ್ದರೂ, ಅವರು ಹಿಡಿದ ಪಟ್ಟು ಬಿಡಲಿಲ್ಲ. ಫೆಬ್ರವರಿ 2018ರಲ್ಲಿ, ಅವರು ಜಿಲ್ಲೆಯ ಒಂದು ತಾಲ್ಲೂಕಿನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ (ಜೆಎಂಎಫ್‌ಸಿ) ನ್ಯಾಯಾಲಯವನ್ನು ಸಂಪರ್ಕಿಸಿದರು. ಸಾರ್ವಜನಿಕ ಸೇವಕನ ವಿರುದ್ಧ ಕಾನೂನು ನೆರವು ಪಡೆಯಲು ಮೇಲಧಿಕಾರಿಗಳ ಅನುಮತಿಯ ಕೊರತೆಯಿಂದಾಗಿ ಅವರ ಪ್ರಕರಣವನ್ನು ವಜಾಗೊಳಿಸಲಾಯಿತು (ಇದೀಗ ನಿಷ್ಕ್ರಿಯಗೊಂಡಿರುವ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 197 ರ ಅಡಿಯಲ್ಲಿ, ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಥವಾ ಬಿಎನ್ಎಸ್ಎಸ್ ಅಡಿಯಲ್ಲಿ ಸೆಕ್ಷನ್ 218ರ ಅಡಿ). ಒಂದು ವಾರದ ನಂತರ ದಾಮಿನಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ ನಂತರ, ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಕೊನೆಗೂ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಠಾಣೆಗೆ ಆದೇಶಿಸಿತು.
"ಮೂರು ತಿಂಗಳ ಹತಾಶೆ ಮತ್ತು ನಿರಾಶೆಯ ನಂತರ, ನ್ಯಾಯಾಲಯದ ಆದೇಶವು ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು" ಎಂದು ದಾಮಿನಿ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಅದು ಅಲ್ಪಾವಧಿಯದ್ದಾಗಿತ್ತು. ಎಫ್ಐಆರ್ ದಾಖಲಾದ ಎರಡು ದಿನಗಳ ನಂತರ, ಅಪರಾಧದ ಸ್ಥಳವಾದ ಪಿಐ ನಿವಾಸವನ್ನು ಪರಿಶೀಲಿಸಲಾಯಿತು. ದಾಮಿನಿ ಪಿಐ ಮನೆಗೆ ಹೋದ ರಾತ್ರಿಯಿಂದ ಮೂರು ತಿಂಗಳು ಕಳೆದಿದ್ದರಿಂದ ಸಹಜವಾಗಿಯೇ ಯಾವುದೇ ಪುರಾವೆಗಳು ಕಂಡುಬರಲಿಲ್ಲ. ಹೀಗಾಗಿ ಯಾರನ್ನೂ ಬಂಧಿಸಲಾಗಿರಲಿಲ್ಲ.
ಅದೇ ತಿಂಗಳು, ದಾಮಿನಿಗೆ ಗರ್ಭಪಾತವಾಯಿತು ಮತ್ತು ಮಗುವನ್ನು ಕಳೆದುಕೊಂಡರು.
*****
ಜುಲೈ 2019ರಲ್ಲಿ ದಾಮಿನಿ ಪ್ರಕರಣದ ಕೊನೆಯ ವಿಚಾರಣೆ ನಡೆದಿದ್ದು, ಈಗ ಐದು ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ. ಅಮಾನತಿನಲ್ಲಿದ್ದಾಗ, ಅವರು ತಮ್ಮ ಪ್ರಕರಣವನ್ನು ಇನ್ಸ್ಪೆಕ್ಟರ್ ಜನರಲ್ (ಐಜಿ) ಬಳಿಗೆ ಕೊಂಡೊಯ್ಯಲು ಪದೇ ಪದೇ ಪ್ರಯತ್ನಿಸಿದರು, ಆದರೆ ಅವರಿಗೆ ಭೇಟಿಗೆ ಸಮಯ ನೀಡದೆ ನಿರಾಕರಿಸಲಾಯಿತು. ಒಂದು ದಿನ ಅವರು ಐಜಿ ಮನೆಯ ಗೇಟಿಗೆ ಅಡ್ಡಲಾಗಿ ನಿಂತು ತನ್ನ ಕತೆಯನ್ನು ಹೇಳಿದರು. “ನನ್ನ ವಿರುದ್ಧ ತೆಗೆದುಕೊಳ್ಳಲಾದ ಎಲ್ಲಾ ಅನ್ಯಾಯದ ಕ್ರಮಗಳನ್ನು ಅವರಿಗೆ ವಿವರಿಸಿ ಮನವಿ ಮಾಡಿಕೊಂಡೆ. ನಂತರ ಅವರು ನನ್ನನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆದೇಶ ನೀಡಿದರು” ಎಂದು ದಾಮಿನಿ ನೆನಪಿಸಿಕೊಳ್ಳುತ್ತಾರೆ. ಅವರು 2022ರ ಆಗಸ್ಟ್ ತಿಂಗಳಿನಲ್ಲಿ ಮತ್ತೆ ಪೊಲೀಸ್ ಪಡೆಗೆ ಸೇರಿದರು.
ಇಂದು, ಅವರು ಮರಾಠಾವಾಡಾದ ದೂರದ ಊರೊಂದರಲ್ಲಿ ವಾಸಿಸುತ್ತಿದ್ದಾರೆ. ಮನುಷ್ಯರ ಸಂಖ್ಯೆ ಬಹಳ ವಿರಳವಿರುವ ಅಲ್ಲಿ ಸುತ್ತ ಹೊಲಗಳ ನಡುವೆ ಇವರ ಒಂಟಿ ಮನೆಯಿದೆ.
"ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ. ಕೆಲವು ರೈತರನ್ನು ಹೊರತುಪಡಿಸಿ ಯಾರೂ ಈ ಕಡೆಗೆ ಬರುವುದಿಲ್ಲ." ಅವರು ಎರಡನೇ ಮದುವೆಯಾಗಿದ್ದು ಈಗ ಆರು ತಿಂಗಳ ಮಗಳಿದ್ದಾಳೆ. ಬದುಕಿನಲ್ಲಿ ಒಂದಷ್ಟು ನಿರಾಳರಾಗಿದ್ದಾರೆ. "ನಾನು ಯಾವಾಗಲೂ ಆತಂಕದಲ್ಲಿರುತ್ತಿದ್ದೆ, ಆದರೆ ಅವಳು ಹುಟ್ಟಿದಾಗಿನಿಂದ ಹೆಚ್ಚು ಆರಾಮವಾಗಿದ್ದೇನೆ." ಅವರ ಗಂಡನೂ ಅವರನ್ನು ಬೆಂಬಲಿಸುತ್ತಾರೆ. ಈಗ ಮಗುವಿನ ಜನನದ ನಂತರ ದಾಮಿನಿಯ ತಂದೆಯೊಂದಿಗೂ ಸಂಬಂಧ ಸುಧಾರಿಸುತ್ತಿದೆ.
ಅತ್ಯಾಚಾರಕ್ಕೊಳಗಾದ ಪೊಲೀಸ್ ಠಾಣೆಯಲ್ಲಿ ಅವರು ಈಗ ಕೆಲಸ ಮಾಡುತ್ತಿಲ್ಲ. ಈಗ ಅವರು ಅದೇ ಜಿಲ್ಲೆಯ ಮತ್ತೊಂದು ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಯನ್ನು ಹೊಂದಿದ್ದಾರೆ. ಅವರು ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಎನ್ನುವುದು ಅಲ್ಲಿನ ಇಬ್ಬರು ಸಹೋದ್ಯೋಗಿಗಳು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ತಿಳಿದಿದೆ. ಅವರ ಕೆಲಸದ ಸ್ಥಳದಲ್ಲಿ - ಪ್ರಸ್ತುತ ಅಥವಾ ಹಿಂದಿನ- ಈಗ ಎಲ್ಲಿ ವಾಸಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಆದರೂ ಅವರನ್ನು ಅಸುರಕ್ಷಿತ ಭಾವನೆ ಕಾಡುತ್ತಿದೆ.
“ಸಮವಸ್ತ್ರದಲ್ಲಿ ಇಲ್ಲದಿರುವಾಗ ನನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತೇನೆ. ಒಬ್ಬಳೇ ಎಲ್ಲೂ ಹೊರಗೆ ಹೋಗುವುದಿಲ್ಲ. ಸದಾ ಎಚ್ಚರಿಕೆಯಿಂದ ಇರುತ್ತೇನೆ. ಅವರು ನನ್ನ ಮನೆಗೆ ಬರಬಾರದು ಅಷ್ಟೇ” ಎಂದು ದಾಮಿನಿ ಹೇಳುತ್ತಾರೆ.
ಇದೊಂದು ನಿರೀಕ್ಷಿತ ಬೆದರಿಕೆಯಲ್ಲ.
ಆರೋಪಿ ಕರ್ಮಾಚಾರಿ ಆಗಾಗ್ಗೆ ತನ್ನ ಹೊಸ ಕೆಲಸದ ಸ್ಥಳಕ್ಕೆ ಅಥವಾ ತನ್ನನ್ನು ನಿಯೋಜಿಸಿರುವ ಪೊಲೀಸ್ ಚೆಕ್ ಪಾಯಿಂಟುಗಳಿಗೆ ಬಂದು ತನ್ನನ್ನು ಥಳಿಸುತ್ತಾನೆ ಎಂದು ದಾಮಿನಿ ಆರೋಪಿಸುತ್ತಾರೆ. "ಒಮ್ಮೆ, ಜಿಲ್ಲಾ ನ್ಯಾಯಾಲಯದಲ್ಲಿ ನನ್ನ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ದಿನ ಅವನು ನನ್ನನ್ನು ಬಸ್ ನಿಲ್ದಾಣದಲ್ಲಿ ಥಳಿಸಿದ." ಹಸುಳೆಯ ತಾಯಿಯಾಗಿ, ತನ್ನ ಮುಖ್ಯ ಕಾಳಜಿಯೆಂದರೆ ಮಗುವಿನ ಸುರಕ್ಷತೆ ಎಂದು ಅವರು ಹೇಳುತ್ತಾರೆ. "ಅವರು ಅವಳಿಗೆ ಏನಾದರೂ ಮಾಡಿದರೆ ಏನು ಮಾಡುವುದು?" ಮಗುವನ್ನು ಬಿಗಿಯಾಗಿ ಹಿಡಿಕೊಂಡು ಆತಂಕದಿಂದ ಕೇಳುತ್ತಾರೆ.
ಈ ವರದಿಗಾರರು ಮೇ 2024 ರಲ್ಲಿ ದಾಮಿನಿಯವರಯನ್ನು ಭೇಟಿಯಾದರು. ಮರಾಠಾವಾಡಾದ ಸುಡುವ ಬಿಸಿಲು, ನ್ಯಾಯಕ್ಕಾಗಿ ಸುಮಾರು ಏಳು ವರ್ಷಗಳ ಸುದೀರ್ಘ ಹೋರಾಟ ಮತ್ತು ಮಾತನಾಡಿದ್ದಕ್ಕಾಗಿ ದಾಳಿಗೊಳಗಾಗುವ ದೀರ್ಘಕಾಲದ ಬೆದರಿಕೆಯ ಹೊರತಾಗಿಯೂ - ಅವರ ಉತ್ಸಾಹವು ಉತ್ತುಂಗದಲ್ಲಿತ್ತು; ಅವರ ಸಂಕಲ್ಪ ಬಲವಾಗಿತ್ತು. "ನಾನು ಎಲ್ಲಾ ಆರೋಪಿಗಳನ್ನು ಜೈಲಿನಲ್ಲಿ ನೋಡಲು ಬಯಸುತ್ತೇನೆ. ಮಾಲಾ ಲಢಾಯಾಚ್ ಆಹೆ (ನಾನು ಹೋರಾಡಲು ಬಯಸುತ್ತೇನೆ).
ಈ ಕ ಥಾನಕವು ಭಾರತದಲ್ಲಿ ಲೈಂಗಿಕ ಮತ್ತು ಲಿಂ ಗಾ ಧಾರಿತ ಹಿಂಸಾಚಾರ (ಎ ಸ್‌ಜಿ ಬಿವಿ) ಸಂತೃಸ್ತರ ಆರೈಕೆಗೆ ಎದುರಾಗುವ ಸಾಮಾಜಿಕ , ಸಾಂಸ್ಥಿಕ ಮತ್ತು ರಚನಾತ್ಮಕ ಅಡೆತಡೆಗಳನ್ನು ಕೇಂದ್ರ ವಾಗಿಟ್ಟುಕೊಂಡು ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯ ಭಾಗ. ಇದು ಡಾಕ್ಟರ್ಸ್ ವಿ ದೌ ಟ್ ಬಾರ್ಡರ್ಸ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗ.
ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಅವರ ಗುರುತನ್ನು ರಕ್ಷಿಸುವ ಸಲುವಾಗಿ ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು